ಶುಕ್ರವಾರ, ಸೆಪ್ಟೆಂಬರ್ 24, 2021
27 °C

ಖೇಲ್‌ರತ್ನ ಪ್ರಶಸ್ತಿ ಹೆಸರು: ತಪ್ಪೊಂದನ್ನು ಸರಿಪಡಿಸಿರುವುದು ಸ್ವಾಗತಾರ್ಹ

ಪ್ರವೀಣ್ ಕುಮಾರ್, ಮಾವಿನಕಾಡು Updated:

ಅಕ್ಷರ ಗಾತ್ರ : | |

Prajavani

ಕ್ರೀಡಾ ಕ್ಷೇತ್ರದಲ್ಲಿನ ಸಾಧನೆಗಾಗಿ ಕೊಡುವ ಅತ್ಯುನ್ನತ ಗೌರವ ‘ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ’ಯ ಹೆಸರು ಇದೀಗ ಬದಲಾಗಿದೆ. ಆ ಪ್ರಶಸ್ತಿಯು ಇನ್ನು ಮುಂದೆ ಹಾಕಿ ಮಾಂತ್ರಿಕ ‘ಮೇಜರ್ ಧ್ಯಾನ್ ಚಂದ್’ ಅವರ ಹೆಸರಿನೊಂದಿಗೆ ಗುರುತಿಸಿಕೊಳ್ಳಲಿದೆ. ಈ ಮರುನಾಮಕರಣಕ್ಕೆ ದೇಶದ ನಾಗರಿಕರಿಂದ ಮನವಿಗಳು ಬಂದಿರುವ ಕಾರಣ ಅವರ ಭಾವನೆಗಳನ್ನು ಗೌರವಿಸಿ, ಅದು ಈ ದೇಶದ ಕೋಟಿಗಟ್ಟಲೆ ಯುವಕರಿಗೆ ಸ್ಫೂರ್ತಿ ನೀಡುತ್ತದೆ ಎನ್ನುವ ವಿಶ್ವಾಸದೊಂದಿಗೆ ಕ್ರೀಡಾಕ್ಷೇತ್ರದ ಅತ್ಯುನ್ನತ ಪ್ರಶಸ್ತಿಗೆ ಅದೇ ಕ್ಷೇತ್ರದ ಒಬ್ಬ ಮಹೋನ್ನತ ಸಾಧಕನ ಹೆಸರನ್ನಿಟ್ಟಿರುವ ಬಗ್ಗೆ ಪ್ರಧಾನಿಯವರು ಟ್ವೀಟ್ ಕೂಡಾ ಮಾಡಿದ್ದಾರೆ.

ಇದರೊಂದಿಗೆ, ಮರುನಾಮಕರಣದ ವಿಚಾರವಾಗಿ ಚರ್ಚೆಗಳೂ ಪ್ರಾರಂಭವಾಗಿವೆ. ಕರ್ನಾಟಕದಲ್ಲೂ, ರಿಯಾಯಿತಿ ದರದಲ್ಲಿ ಆಹಾರ ಒದಗಿಸುವ ಕ್ಯಾಂಟೀನ್‌ಗಳಿಗೆ ಇಂದಿರಾ ಫಿರೋಜ್ ಗಾಂಧಿಯವರ ಸ್ಮರಣಾರ್ಥ ಇರಿಸಿರುವ ‘ಇಂದಿರಾ ಕ್ಯಾಂಟೀನ್‌’ ಎಂಬ ಹೆಸರು, ನಾಗರಹೊಳೆ ರಾಷ್ಟ್ರೀಯ ಉದ್ಯಾನಕ್ಕೆ ಇರಿಸಲಾಗಿರುವ ರಾಜೀವ್ ಗಾಂಧಿ ನ್ಯಾಷನಲ್ ಪಾರ್ಕ್ ಎಂಬ ಹೆಸರನ್ನೂ ಬದಲಿಸಬೇಕೆನ್ನುವ ಮನವಿಗಳು ಹರಿದುಬರುತ್ತಿವೆ.

ವ್ಯಕ್ತವಾಗುತ್ತಿರುವ ಮುಕ್ತ ಅಭಿಪ್ರಾಯಗಳು, ಮನವಿಗಳಿಗೆ ಸ್ಪಂದಿಸಬಲ್ಲ ಸರ್ಕಾರ, ಇವುಗಳೇ ಪ್ರಜಾಪ್ರಭುತ್ವದ ಸೌಂದರ್ಯವೆಂದರೆ ತಪ್ಪಾಗಲಾರದು. ಇಂತಹ ಚರ್ಚೆಗಳು ವಿಪರೀತಕ್ಕೆ ಹೋಗದಂತೆ, ನಾಮಕರಣ ಪ್ರಕ್ರಿಯೆಗಳು ಪೈಪೋಟಿಗೆ ಕಾರಣವಾಗದಂತೆ ಎಚ್ಚರ ವಹಿಸಿದರೆ ಖಂಡಿತವಾಗಿಯೂ ಇದನ್ನೊಂದು ಸಕಾರಾತ್ಮಕ ಬೆಳವಣಿಗೆ ಎಂದೇ ಭಾವಿಸಬಹುದು.

ರಾಜಕೀಯ ನಾಯಕರೊಬ್ಬರ ಹೆಸರಲ್ಲಿದ್ದ ಖೇಲ್ ರತ್ನ ಪ್ರಶಸ್ತಿಗೆ ಕ್ರೀಡಾ ಸಾಧಕರೊಬ್ಬರ ಹೆಸರು ಇರಿಸಿರುವುದು ಖಂಡಿತವಾಗಿಯೂ ಸ್ವಾಗತಾರ್ಹ ವಿಚಾರ. ಏಕೆಂದರೆ, ಕ್ರೀಡಾ ಕ್ಷೇತ್ರದ ಅತ್ಯುನ್ನತ ಗೌರವಕ್ಕೆ ರಾಜಕಾರಣಿಯೊಬ್ಬರ ಹೆಸರಿಟ್ಟಿದ್ದೇ ಮೊದಲ ತಪ್ಪು. ಸರ್ಕಾರ ನೀಡುವ ಪ್ರಶಸ್ತಿಗಳ ಹೆಸರಿನ ಗೌರವಕ್ಕೆ ಪಾತ್ರರಾಗಬಲ್ಲ ಸಾಕಷ್ಟು ಅರ್ಹರು ಖಂಡಿತವಾಗಿಯೂ ಈ ದೇಶದಲ್ಲಿ ಇದ್ದಾರೆ. ಅಂತಹ ಪ್ರಶಸ್ತಿಗಳಿಗೂ ರಾಜಕೀಯ ನಾಯಕರ ಹೆಸರನ್ನೇ ಇಡುವುದರಿಂದ ಆ ಅರ್ಹರೆಲ್ಲರೂ ತಮಗೆ ಸಿಗಬಹುದಾಗಿದ್ದ ಗೌರವಗಳಿಂದ ವಂಚಿತರಾಗುತ್ತಾರೆ.

ಮೊನ್ನೆ ನನಗೊಬ್ಬರು ನೆಹರೂ ಹಾಗೂ ಗಾಂಧಿ ಕುಟುಂಬದವರ ಹೆಸರಿನಲ್ಲಿರುವ ಸರ್ಕಾರಿ ಯೋಜನೆಗಳು, ಪ್ರಶಸ್ತಿಗಳು, ಸಂಸ್ಥೆಗಳು ಮತ್ತು ಕಟ್ಟಡಗಳ ಪಟ್ಟಿಯೊಂದನ್ನು ಕಳುಹಿಸಿ, ಒಂದನ್ನೂ ತಪ್ಪಿಸದೇ ಆ ಎಲ್ಲ ಹೆಸರುಗಳನ್ನೂ ಪೂರ್ತಿಯಾಗಿ ಓದುವಂತೆ ಸವಾಲು ಹಾಕಿದ್ದರು. ನೂರು-ನೂರಿಪ್ಪತ್ತು ಹೆಸರುಗಳನ್ನು ಕಷ್ಟಪಟ್ಟು ಓದಿದೆನಾದರೂ, ಅದೆಷ್ಟೇ ಬಾರಿ ಪ್ರಯತ್ನಪಟ್ಟರೂ ಆ ಪಟ್ಟಿಯನ್ನು ಪೂರ್ತಿಯಾಗಿ ಓದಿ ಲೆಕ್ಕ ಹಾಕಲು ಸಾಧ್ಯವೇ ಆಗಲಿಲ್ಲ. ಇದು ಹೆಮ್ಮೆಯೋ, ದುರಂತವೋ?

ನಾಯಕರೊಬ್ಬರ ಅನುಭವ, ಆಸಕ್ತಿ ಅಥವಾ ಅವರ ಗಣನೀಯ ಕೊಡುಗೆಯನ್ನು ಸ್ಮರಿಸುವ ಸಲುವಾಗಿ ಬೆರಳೆಣಿಕೆಯಷ್ಟು ಯೋಜನೆಗಳಿಗೆ ಅವರ ಹೆಸರಿಡುವುದನ್ನು ಒಪ್ಪಬಹುದಾದರೂ, ಎಲ್ಲ ಯೋಜನೆಗಳೂ ಅವರ ಹೆಸರಿನದ್ದೇ ಇರಬೇಕು, ಎಲ್ಲ ಕಟ್ಟಡಗಳ ಮೇಲೂ ಅವರ ಹೆಸರೇ ರಾರಾಜಿಸಬೇಕು ಎನ್ನುವ ಮನೋಭಾವ ತೀರಾ ಅಸಹನೀಯ ಎಂದೆನ್ನಿಸುವುದಿಲ್ಲವೇ?

ಒಂದು ಪಕ್ಷದ ಅಧಿಕಾರವಿದ್ದಾಗ ಸರ್ಕಾರದ ಯೋಜನೆಗಳಿಗೆ ಆ ಪಕ್ಷದ ನಾಯಕರ ಹೆಸರನ್ನಿರಿಸುವುದು ಆ ಕ್ಷಣಕ್ಕೆ ಹಬ್ಬದ ವಾತಾವರಣ ನಿರ್ಮಿಸಿಬಿಡಬಹುದಾದರೂ, ಹಲವು ವರ್ಷಗಳ ನಂತರ ರಾಜಕೀಯ ಕಾರಣಗಳಿಂದಾಗಿ ಆ ಹೆಸರೇ ಆ ಯೋಜನೆಗಳಿಗೆ ಮುಳುವಾಗಿಬಿಡುವ ಸಾಧ್ಯತೆಯೂ ಇದೆ. ಹಾಗೆಯೇ ಆ ಪಕ್ಷದ ಪ್ರಮುಖ ನಾಯಕರು ಒಂದೊಮ್ಮೆ ಭ್ರಷ್ಟಾಚಾರ ಅಥವಾ ಇನ್ನಿತರ ಪ್ರಕರಣಗಳಲ್ಲಿ ಸಿಲುಕಿಕೊಂಡಾಗ ನಾಯಕನ ಹೆಸರಿನ ಆ ಪ್ರಶಸ್ತಿಯ ಮೌಲ್ಯಕ್ಕೂ ಕುಂದುಂಟಾಗಬಹುದು. ಜೊತೆಗೆ ಎಷ್ಟೋ ಬಾರಿ ಆ ಪಕ್ಷಕ್ಕೆ ಮತ ಹಾಕದ ವ್ಯಕ್ತಿಗಳು ಆ ಯೋಜನೆಯನ್ನು ಬಳಸಿಕೊಳ್ಳುವಲ್ಲಿ ಹಿಂಜರಿಯಬಹುದು ಅಥವಾ ಅದನ್ನು ಸ್ವೀಕರಿಸಲು ಮುಜುಗರಪಟ್ಟುಕೊಳ್ಳುವ ಸಾಧ್ಯತೆಯೂ ಇರಬಹುದು. ಹೀಗೆ ಸರ್ಕಾರಿ ಯೋಜನೆಗಳಿಗೆ ರಾಜಕೀಯ ನಾಯಕರ ಹೆಸರಿಡುವುದರಿಂದ ಹಲವಾರು ಅಡ್ಡಪರಿಣಾಮಗಳ ಸಾಧ್ಯತೆಗಳಿವೆ.

ಇದಕ್ಕೆ ಇತ್ತೀಚಿನ ಒಂದು ಉದಾಹರಣೆ ಕೊಡುವುದಾದರೆ; ಪ್ರಧಾನಿ ಮೋದಿಯವರು ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ತಮ್ಮ ಟ್ವಿಟರ್ ಖಾತೆಯ ಮೂಲಕ ಅವರಿಗೆ ಅಭಿನಂದನೆ ಸಲ್ಲಿಸಿದ್ದರೆನ್ನುವ ಕಾರಣಕ್ಕಾಗಿ, ಇದೀಗ ತಾನೇ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಪಡೆದು ಇತಿಹಾಸ ಸೃಷ್ಟಿಸಿರುವ ನೀರಜ್ ಚೋಪ್ರಾ ಅವರನ್ನು ಕೆಲವು ಖ್ಯಾತನಾಮರುಗಳೇ ಅಭಿನಂದಿಸಲು ನಿರಾಕರಿಸಿದರು. ಅಷ್ಟೇ ಅಲ್ಲದೆ ಅದೇ ವಿಚಾರವಾಗಿ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಕಟುವಾಗಿ ನಿಂದಿಸಿದವರೂ ಇದ್ದಾರೆ. ಹೀಗಿರುವಾಗ ಮುಂದೊಮ್ಮೆ ಅದೇ ಪ್ರಶಸ್ತಿಯನ್ನು ಅದೇ ರಾಜೀವ್ ಗಾಂಧಿಯವರ ಹೆಸರಿನೊಂದಿಗೆ ನೀರಜ್ ಜೋಪ್ರಾ ಅವರಿಗೆ ಕೊಡಮಾಡಲ್ಪಟ್ಟರೆ ಅವರು ಇನ್ನೂ ಏನೆಲ್ಲಾ ಕೇಳಬೇಕಾಗಿ ಬರಬಹುದು?

ಹೆಸರು ನೆನಪಿನಲ್ಲಿ ಉಳಿಯಬೇಕಾದರೆ ಎಲ್ಲ ಯೋಜನೆಗಳಿಗೂ ಅವರ ಹೆಸರನ್ನಿಡುವುದೇ ಮಾರ್ಗವಲ್ಲ. ಮೊದಲ ಪ್ರಧಾನಿ ಎನ್ನುವ ಕಾರಣಕ್ಕಿರಬಹುದು, ತುರ್ತುಪರಿಸ್ಥಿತಿ ಹೇರಿದ್ದ ಕಾರಣಕ್ಕಿರಬಹುದು, ಕಂಪ್ಯೂಟರ್ ತಂದರೆನ್ನುವಕಾರಣಕ್ಕಿರಬಹುದು, ಮಣ್ಣಿನ ಮಗ ಎನ್ನುವುದಕ್ಕಿರಬಹುದು, 370ನೇ ವಿಧಿ ರದ್ದು ಮಾಡಿದರೆನ್ನುವುದಕ್ಕಿರಬಹುದು, ಒಟ್ಟಿನಲ್ಲಿ ಇದುವರೆಗಿನ ಮತ್ತು ಮುಂಬರುವ ಎಲ್ಲ ಪ್ರಧಾನಿಗಳನ್ನೂ ಹಲವಾರು ಕಾರಣಗಳಿಗಾಗಿ ಈ ದೇಶ ನೂರಾರು ವರ್ಷಗಳ ಕಾಲ ನೆನಪಿಟ್ಟುಕೊಂಡೇ ಇರುತ್ತದೆ.

ಆದ್ದರಿಂದ ಖೇಲ್ ರತ್ನ ಪ್ರಶಸ್ತಿಯ ಮರುನಾಮಕರಣ ಖಂಡಿತವಾಗಿಯೂ ಸರಿಯಾದ ಕ್ರಮವೇ ಆಗಿದೆ. ಆದರೆ ಸರ್ಕಾರ ಹೀಗೆ ಒಂದೊಂದೇ ಹೆಸರುಗಳನ್ನು ಬದಲಿಸುತ್ತಾ ಪದೇ ಪದೇ ವಿವಾದಗಳನ್ನೆದುರಿಸುವ ಬದಲು, ಯಾವುದೇ ಸರ್ಕಾರಿ ಯೋಜನೆಯಲ್ಲೂ ಮಾಜಿ ಪ್ರಧಾನಿಗಳ ಹೆಸರಿರಬಾರದೆನ್ನುವ ಶಿಷ್ಟಾಚಾರವೊಂದನ್ನು ಅನುಮೋದಿಸಿ, ಒಂದೇ ಬಾರಿಗೆ ಅಂತಹ ಎಲ್ಲ ಹೆಸರುಗಳನ್ನೂ ಮರುನಾಮಕರಣಗೊಳಿಸಿ, ಮುಂದೆಂದೂ ಅಂತಹ ಪ್ರಮಾದಗಳಾಗದಂತೆ, ವಿವಾದಗಳೇಳದಂತೆ ನೋಡಿಕೊಳ್ಳುವುದು ದೇಶದ ಹಿತದೃಷ್ಟಿಯಿಂದ ಸೂಕ್ತ ಕ್ರಮವಾಗಬಲ್ಲದು.

ಲೇಖಕ: ನವೋದ್ಯಮಿ, ಹವ್ಯಾಸಿ ಬರಹಗಾರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು