ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಬದಲಾಗಬೇಕಿದೆ ಬಾಹ್ಯಾಕಾಶ ಒಪ್ಪಂದ

ಇಂದಿನ ಅಗತ್ಯ ಮತ್ತು ಸವಾಲುಗಳನ್ನು ಪರಿಗಣಿಸಿ ಕೊರತೆ ನಿವಾರಿಸುವ ಕೆಲಸ ಆಗಬೇಕಾಗಿದೆ
ಅಕ್ಷರ ಗಾತ್ರ

ನಿಯಂತ್ರಣ ಕಳೆದುಕೊಂಡ ಚೀನಾದ ಲಾಂಗ್ ಮಾರ್ಚ್ 5ಬಿ ರಾಕೆಟ್‍ನ ಬೃಹದಾಕಾರದ ಭಗ್ನಾವಶೇಷ ಮೇ 9ರಂದು ಮಾಲ್ಡೀವ್ಸ್‌ ಸಮೀಪ ಹಿಂದೂ ಮಹಾಸಾಗರದಲ್ಲಿ ಬಿದ್ದದ್ದು ಈಗ ಹಳೆಯ ಸುದ್ದಿ. 32 ಮೀಟರ್ ಎತ್ತರ, 5 ಮೀಟರ್‌ ವ್ಯಾಸ, 22 ಟನ್‍ಗಳಷ್ಟು ಭಾರದ, ನಿಯಂತ್ರಣ ಕಳೆದುಕೊಂಡು ಗಂಟೆಯೊಂದಕ್ಕೆ 28,000 ಕಿ.ಮೀ. ವೇಗದಲ್ಲಿ ಭೂಮಿಯತ್ತ ನುಗ್ಗಿದ ಈ ಭಗ್ನಾವಶೇಷ ಎಲ್ಲಿ ಬೀಳಬಹುದೆಂಬ ಮುನ್ಸೂಚನೆಯೇ ಇಲ್ಲದೆ ಆತಂಕವನ್ನು ಸೃಷ್ಟಿಸಿದ್ದು ನಿಜ. ಈ ಆತಂಕ ದೂರವಾದಂತೆ, ಅಂತಹ ಘಟನೆಗಳು ಮರುಕಳಿಸದಂತೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಕಾನೂನುಗಳನ್ನು ರೂಪಿಸುವುದು ಸಾಧ್ಯವೇ ಎಂಬ ಚಿಂತನೆಗೆ ಈಗ ಮತ್ತಷ್ಟು ತುರ್ತು ಮಹತ್ವ ಬಂದಿದೆ.

ಬಾಹ್ಯಾಕಾಶ ಚಟುವಟಿಕೆಗಳಿಗೆ ಸಂಬಂಧಿಸಿದ ಎಲ್ಲ ಅಂತರರಾಷ್ಟ್ರೀಯ ಕಾನೂನುಗಳಿಗೆ ಆಧಾರವೆಂದರೆ, 1967-79ರ ನಡುವೆ ರೂಪುಗೊಂಡು, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅನುಮೋದನೆ ಪಡೆದಿರುವ 5 ಪ್ರಮುಖ ಒಪ್ಪಂದಗಳು. ಅವುಗಳೆಂದರೆ, 1967ರ ಬಾಹ್ಯಾಕಾಶ ಒಪ್ಪಂದ, ಗಗನಯಾತ್ರಿಗಳು, ಉಪಗ್ರಹ ಮುಂತಾದವುಗಳನ್ನು ರಕ್ಷಿಸಿ ಭೂಮಿಗೆ ಹಿಂತಿರುಗಿ ತರುವ 1968ರ ಒಪ್ಪಂದ, ಬಾಹ್ಯಾಕಾಶದ ಭಗ್ನಾವಶೇಷಗಳಿಂದ ಭೂಮಿಯ ಮೇಲೆ ಸಂಭವಿಸುವ ಹಾನಿಯ ಹೊಣೆಗಾರಿಕೆಯನ್ನು ನಿರ್ಧರಿಸುವ 1972ರ ಒಪ್ಪಂದ, ವಿವಿಧ ದೇಶಗಳು ಬಾಹ್ಯಾಕಾಶಕ್ಕೆ ಕಳುಹಿಸುವ ಎಲ್ಲ ಉಪಗ್ರಹ, ಮತ್ತಿತರ ವ್ಯವಸ್ಥೆಗಳ ಸರ್ವ ಸಮಸ್ತ ವಿವರಗಳನ್ನೂ ವಿಶ್ವಸಂಸ್ಥೆಯಲ್ಲಿ ದಾಖಲಿಸಬೇಕಾದ 1975ರ ಒಪ್ಪಂದ, ಚಂದ್ರ ಮತ್ತು ಸೌರಮಂಡಲದ ಇತರ ಆಕಾಶಕಾಯಗಳ ಅನ್ವೇಷಣೆಗೆ ಸಂಬಂಧಿಸಿದ 1979ರ ಒಪ್ಪಂದ.

ಬಾಹ್ಯಾಕಾಶದ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಕಾನೂನುಗಳ ಜೊತೆಗೆ ವಿಶ್ವಸಂಸ್ಥೆ ಅನೇಕ ಮಾರ್ಗದರ್ಶಿ ಸಲಹೆ, ಸೂತ್ರಗಳನ್ನು ನೀಡಿದೆ. ಇವುಗಳಲ್ಲಿ ಬಾಹ್ಯಾಕಾಶ ಭಗ್ನಾವಶೇಷಗಳು ಮತ್ತು ಅವುಗಳಿಂದಾಗುವ ಅಪಾಯಗಳನ್ನು ಮಿತಗೊಳಿಸುವ 2007 ಮತ್ತು 2010ರ ಮಾರ್ಗದರ್ಶಿ ಸೂತ್ರಗಳು, ಬಾಹ್ಯಾಕಾಶ ಚಟುವಟಿಕೆಗಳನ್ನು ದೀರ್ಘಕಾಲದವರೆಗೆ ಸುರಕ್ಷಿತವಾಗಿ ನಡೆಸುವ 2019ರ ಮಾರ್ಗದರ್ಶಿ ಸೂತ್ರಗಳು ಮುಖ್ಯವಾದವು. ಈ ಸಲಹೆಗಳಂತೆ ಬಾಹ್ಯಾಕಾಶದಲ್ಲಿ ಅತ್ಯಂತ ಕಡಿಮೆಯ ಪ್ರಮಾಣದಲ್ಲಿ ಅವಶೇಷಗಳನ್ನು ಉತ್ಪಾದಿಸುವ, ಸ್ಫೋಟಗೊಂಡು ಚೂರುಚೂರಾಗದ, ವಾಯುಮಂಡಲವನ್ನು ಮರುಪ್ರವೇಶ ಮಾಡಿದಾಗ ಭೂಮಿಗೆ ಅಪ್ಪಳಿಸದಂತೆ ಸಂಪೂರ್ಣವಾಗಿ ಉರಿದುಹೋಗುವ ವಸ್ತು, ವಿನ್ಯಾಸಗಳಿಗೆ ಆದ್ಯತೆ ನೀಡಬೇಕು. ರಾಕೆಟ್‍ನ ವಸ್ತು, ವಿನ್ಯಾಸಗಳ ಅತ್ಯುತ್ಕೃಷ್ಟ ಮಟ್ಟದ ಪರೀಕ್ಷೆ ನಡೆಸಬೇಕು. ಭಗ್ನಾವಶೇಷಗಳನ್ನು ಭೂಸಮೀಪ ಕಕ್ಷೆಯಿಂದ ಹೊರತೆಗೆಯುವ ವಿಧಾನಗಳನ್ನು ರೂಪಿಸಬೇಕು ಮುಂತಾದ ಅಂಶಗಳಿವೆ.

ಆದರೆ ಈ ಎಲ್ಲವೂ ಮಾರ್ಗದರ್ಶಿ ಸೂತ್ರಗಳೇ ಹೊರತು ಕಡ್ಡಾಯವಾಗಿ ಪಾಲಿಸಲೇಬೇಕಾದ ಕಾನೂನುಗಳಲ್ಲ. ಈ ಸಲಹೆಗಳನ್ನು ಪಾಲಿಸಿದರೆ ಯೋಜನೆಯ ವೆಚ್ಚ ಸಾಕಷ್ಟು ಏರುತ್ತದೆ. ಹೀಗಾಗಿ ಈ ಸೂಚನೆಗಳಿಗೆ ಯಾವ ದೇಶವೂ ಹೆಚ್ಚಿನ ಗಮನ ನೀಡುವುದಿಲ್ಲ. ಇದರ ಫಲವಾಗಿಯೇ ಇಂದು ಬಾಹ್ಯಾಕಾಶದಲ್ಲಿ 3,000ಕ್ಕೂ ಹೆಚ್ಚು ನಿರುಪಯುಕ್ತ ಉಪಗ್ರಹಗಳು, 28,000ಕ್ಕೂ ಹೆಚ್ಚು ಉಪಗ್ರಹ, ರಾಕೆಟ್‍ಗಳ ಬಿಡಿಭಾಗಗಳು, ಒಂದು ಸೆಂ.ಮೀ.ಗೂ ಸಣ್ಣ ಗಾತ್ರದ ಸುಮಾರು 17 ಕೋಟಿ ವ್ಯರ್ಥವಸ್ತುಗಳು ಕಿಕ್ಕಿರಿದು ವಿವಿಧ ಕಕ್ಷೆಗಳಲ್ಲಿ ಭೂಮಿಯನ್ನು ಪರಿಭ್ರಮಿಸುತ್ತಿವೆ. ಈ ವಸ್ತುಗಳು ಕಾರ್ಯನಿರತ ಉಪಗ್ರಹಗಳಿಗೆ ಡಿಕ್ಕಿ ಹೊಡೆದು ಅವುಗಳನ್ನು ನಿಷ್ಕ್ರಿಯ ಮಾಡಬಲ್ಲವು. ಈ ದಟ್ಟಣೆಯಿಂದ ಉಪಗ್ರಹಗಳೇ ಡಿಕ್ಕಿ ಹೊಡೆದು ನಾಶವಾದ ನಿದರ್ಶನಗಳಿವೆ. ಇದರ ಜೊತೆಗೆ ರಾಕೆಟ್, ಉಪಗ್ರಹ, ಸ್ಕೈಲ್ಯಾಬ್ ಮುಂತಾದವುಗಳ ಭಾಗಗಳು ವಾಯುಮಂಡಲವನ್ನು ದಾಟಿ ಬಂದು, ಸಾಗರದಲ್ಲಿ ಬೀಳದೇ ನೆಲಕ್ಕೆ ಅಪ್ಪಳಿಸಿರುವ ಉದಾಹರಣೆಗಳಿವೆ.

ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ಕಂಪನಿಗಳೂ ಪ್ರವೇಶ ಮಾಡಿದ ನಂತರ, ಸ್ಪರ್ಧೆ ಹೆಚ್ಚಾಗಿ ಬಾಹ್ಯಾಕಾಶಕ್ಕೆ ಉಡಾಯಿಸುವ ಉಪಗ್ರಹಗಳ ಸಂಖ್ಯೆ ಏರುತ್ತಿದೆ. ಯುರೋಪಿಯನ್ ಸ್ಪೇಸ್ ಏಜೆನ್ಸಿಯ ಮೂಲದಂತೆ ಇಲ್ಲಿಯವರೆಗೂ 11,370 ಉಪಗ್ರಹಗಳನ್ನು ಬಾಹ್ಯಾಕಾಶದಲ್ಲಿ ನಿಯೋಜಿಸಲಾಗಿದೆ. 2030ರ ಅಂತ್ಯದ ಒಳಗಾಗಿ 45,000 ಉಪಗ್ರಹಗಳ ಉಡಾವಣೆ ನಡೆಯಲಿದೆ.

ಬಾಹ್ಯಾಕಾಶದಿಂದ ಭೂಮಿಯತ್ತ ಬರುವ ಭಗ್ನಾವಶೇಷಗಳು ಬಹುತೇಕ ವಾಯುಮಂಡಲದಲ್ಲಿನ ಘರ್ಷಣೆಯಿಂದ ಉರಿದುಹೋಗುತ್ತವೆ. ಒಂದು ವೇಳೆ ವಾಯುಮಂಡಲವನ್ನು ದಾಟಿ ಬಂದರೂ ಸಾಗರಗಳಲ್ಲಿ ಬೀಳುವ ಸಂಭವವೇ ಹೆಚ್ಚು. ಜನವಸತಿಯಿರುವ ಪ್ರದೇಶಕ್ಕೆ ಅಪ್ಪಳಿಸುವ ಸಂಭಾವ್ಯತೆ ತೀರಾ ಕಡಿಮೆ, 100 ಕೋಟಿಯಲ್ಲಿ ಒಂದು.

ಒಂದು ವೇಳೆ ಹೀಗೆ ಅಪ್ಪಳಿಸಿ ಪ್ರಾಣ, ಆಸ್ತಿ ಹಾನಿಯಾದರೆ 1972ರ ಒಪ್ಪಂದದಡಿಯಲ್ಲಿ ಹೊಣೆಗಾರಿಕೆಯನ್ನು ನಿರ್ಧರಿಸಿ, ರಾಕೆಟ್ಟನ್ನು ಉಡಾವಣೆ ಮಾಡಿದ ದೇಶದಿಂದ ಪರಿಹಾರವನ್ನು ಪಡೆಯುವ ಅವಕಾಶವಿದೆ. ಆದರೆ ಇದು ಕಾನೂನಾತ್ಮಕವಾಗಿ ಸಾಧ್ಯವಾದರೂ ವ್ಯಾವಹಾರಿಕವಾಗಿ ಬಹು ಕಷ್ಟ. ಉದಾಹರಣೆಗೆ, 2020ರ ಮೇ 12ರಂದು, ಚೀನಾದ ಲಾಂಗ್‍ಮಾರ್ಚ್ ರಾಕೆಟ್‍ನ ಕೇಂದ್ರಭಾಗ ಅನಿಯಂತ್ರಿತವಾಗಿ ಭೂಮಿಗೆ ಬಂದು ಪಶ್ಚಿಮ ಆಫ್ರಿಕಾದ ಐವರಿಕೋಸ್ಟ್ ದೇಶದ ಬುವಾಕೆ ಪ್ರದೇಶದಲ್ಲಿ ನೆಲಕ್ಕೆ ಅಪ್ಪಳಿಸಿ ಅನೇಕ ಕಟ್ಟಡಗಳಿಗೆ ಹಾನಿಯಾಯಿತು. ಬಾಹ್ಯಾಕಾಶ ಕಾನೂನಿನಂತೆ ಐವರಿಕೋಸ್ಟ್, ಚೀನಾದಿಂದ ಪರಿಹಾರವನ್ನು ಕೇಳಬಹುದಿತ್ತು. ಆದರೆ ಹಾಗೆ ಕೇಳಿದ್ದರೆ ಚೀನಾ ಜೊತೆಗಿನ ಆರ್ಥಿಕ ಸಂಬಂಧ, ಸಹಕಾರಗಳಿಗೆ ತೊಂದರೆಯಾಗಬಹುದೆಂಬ ಅಂಜಿಕೆಯಿಂದ ಐವರಿಕೋಸ್ಟ್ ಆ ವಿಷಯವನ್ನು ಪ್ರಸ್ತಾಪಿಸಲಿಲ್ಲ.

1979ರಲ್ಲಿ ಅಮೆರಿಕದ ಸ್ಕೈಲ್ಯಾಬ್‍ನ ಅವಶೇಷಗಳು ಆಸ್ಟ್ರೇಲಿಯಾದ ಎಸ್ಪೆರಾನ್ಸ್ ಪಟ್ಟಣದ ಬಳಿ ಬಿದ್ದು ಹಾನಿಯಾದಾಗ, ಆಸ್ಟ್ರೇಲಿಯಾ ಕೂಡ ರಾಜಕೀಯ ಕಾರಣಗಳಿಂದ ಪರಿಹಾರ ಕೇಳಲಿಲ್ಲ. ಆದರೆ 1978ರಲ್ಲಿ ರಷ್ಯಾದ ಬೈಜಿಕ ಶಕ್ತಿಚಾಲಿತ ಕೋಸ್ಮಾಸ್– 954 ಉಪಗ್ರಹ ಕೆನಡಾದ ಉತ್ತರ ಭಾಗದಲ್ಲಿ ಬಿದ್ದು ವಿಕಿರಣಪಟುತ್ವ ಗುಣದ ಬೈಜಿಕ ತ್ಯಾಜ್ಯ ನೆಲಕ್ಕೆ ಸೇರಿದಾಗ, ರಷ್ಯಾ ಪರಿಹಾರವಾಗಿ 6 ಮಿಲಿಯನ್ ಡಾಲರ್‌ಗಳನ್ನು ಕೆನಡಾಕ್ಕೆ ನೀಡಬೇಕಾಯಿತು.

ನಾಲ್ಕೈದು ದಶಕಗಳ ಹಿಂದೆ ರೂಪುಗೊಂಡ ಬಾಹ್ಯಾಕಾಶ ಒಪ್ಪಂದಗಳು ಮತ್ತು ಅದರಡಿಯ ಕಾನೂನುಗಳಲ್ಲಿ ಇಂದಿನ ಅಗತ್ಯಗಳು ಹಾಗೂ ಸವಾಲುಗಳ ದೃಷ್ಟಿಯಿಂದ ಅನೇಕ ಕೊರತೆಗಳಿವೆ. ಹೀಗಾಗಿ ಕಾನೂನುಗಳಿಗೆ ತಿದ್ದುಪಡಿ ಅಗತ್ಯ. 2010 ಮತ್ತು 2019ರ ವಿಶ್ವಸಂಸ್ಥೆಯ ಮಾರ್ಗದರ್ಶಿ ಸೂತ್ರಗಳನ್ನು ಶಕ್ತಿಯುತವಾದ ಕಾನೂನುಗಳನ್ನಾಗಿ ಪರಿವರ್ತಿಸುವ ಪ್ರಯತ್ನಗಳು ನಡೆಯುತ್ತಿದ್ದರೂ ಬಲಿಷ್ಠ ದೇಶಗಳಿಗೆ ಅದರಲ್ಲಿ ಯಾವ ಆಸಕ್ತಿಯೂ ಇಲ್ಲ. ಜಾಗತಿಕ ಶಾಂತಿ, ಪರಸ್ಪರ ನಂಬಿಕೆ, ಮಾನವೀಯ ಮೌಲ್ಯದಂಥ ಉದಾತ್ತ ತತ್ವಗಳ ಮೇಲೆ ರೂಪುಗೊಂಡಿರುವ ಒಪ್ಪಂದಗಳು ಕಳೆದ ಐದು ದಶಕಗಳಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಯಾವುದೇ ರೀತಿಯ ಅವಘಡಗಳಾಗದಂತೆ ನೋಡಿಕೊಂಡಿರುವುದರಿಂದ ಯಾವ ಹೊಸ ಒಪ್ಪಂದ, ಕಾನೂನುಗಳ ಅಗತ್ಯವೂ ಇಲ್ಲವೆಂಬುದು ಅವುಗಳ ವಾದ.

ಇದು ಕೇವಲ ಕಣ್ಣೊರೆಸುವ ತಂತ್ರಗಾರಿಕೆ. ಇಂದಿನ ಪರಿಸ್ಥಿತಿ ಭಿನ್ನವಾಗಿದೆ. ಬಾಹ್ಯಾಕಾಶ ಕಾಯಗಳು ಇಂದು ಅಪಾರ ಸಂಪನ್ಮೂಲಗಳ ಆಗರ. ಅದರಲ್ಲಿರುವ ವಾಣಿಜ್ಯೋದ್ದೇಶದ ಅವಕಾಶಗಳೂ ಅಪಾರ. ಪ್ಲಾನೆಟರಿ ರಿಸೋರ್ಸಸ್ ಸಂಸ್ಥೆಯ ಅಧ್ಯಕ್ಷ ಕ್ರಿಸ್ ಲ್ಯೂವಿಕಿ ಅವರು 2026ರ ಅಂತ್ಯದ ವೇಳೆಗೆ ಬಾಹ್ಯಾಕಾಶ ಕಾಯಗಳಲ್ಲಿ ಗಣಿಗಾರಿಕೆ ಪ್ರಾರಂಭವಾಗಲಿದೆ ಎನ್ನುತ್ತಾರೆ. ಅದಕ್ಕಾಗಿ ಎಲ್ಲ ಸಿದ್ಧತೆಗಳೂ ನಡೆದಿವೆ. ಆದರೆ ಈಗಿರುವ ಬಾಹ್ಯಾಕಾಶ ಒಪ್ಪಂದಗಳಿಂದ ಆಕಾಶಕಾಯಗಳಲ್ಲಿನ ಗಣಿಗಾರಿಕೆಯ ಬಗ್ಗೆ ಸ್ಪಷ್ಟವಾದ ಕಾನೂನಾತ್ಮಕ ನಿಲುವು ತಳೆಯುವುದು ಸಾಧ್ಯವಿಲ್ಲವೆಂಬುದು ‘ಸ್ಪೇಸ್ ಲಾ’ ಪರಿಣತರ ಅಭಿಪ್ರಾಯ. ಇಂತಹ ಪರಿಸ್ಥಿತಿಯಲ್ಲಿ ಅತ್ಯಂತ ಕಟ್ಟುನಿಟ್ಟಾದ, ಅತಿ ಸೂಕ್ಷ್ಮ ವಿವರಗಳಿಗೂ ಸ್ಥಾನವಿರುವ, ಎಲ್ಲ ದೇಶಗಳಿಗೂ ಒಪ್ಪಿಗೆಯಾಗುವಂತಹ ಕರಾರಿನ ಕಲಂಗಳನ್ನು ಹೊಸದಾಗಿ ಐದೂ ಒಪ್ಪಂದಗಳಲ್ಲಿ ಸೇರಿಸಬೇಕು.

ಈ ವರ್ಷದ ಅಕ್ಟೋಬರ್‌ನಲ್ಲಿ ದುಬೈನಲ್ಲಿ ನಡೆಯಲಿರುವ ‘ಸ್ಪೇಸ್ ಜನರೇಶನ್ ಕಾಂಗ್ರೆಸ್’ ಅಧಿವೇಶನದಲ್ಲಿ ಚರ್ಚೆ, ಚಿಂತನೆ, ಸಮಾಲೋಚನೆಗಳಿಂದ ಬಾಹ್ಯಾಕಾಶ ಒಪ್ಪಂದಗಳಲ್ಲಿ ಅಗತ್ಯವಾದ ತಿದ್ದುಪಡಿಗಳು ಬರಲಿವೆಯೆಂಬ ವಿಶ್ವಾಸವನ್ನು ವಿಶ್ವಸಂಸ್ಥೆ ವ್ಯಕ್ತಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT