ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಜಾತಿಗೊಂದು ನಿಗಮ ಬೇಕೆ? ಬೇಕಿದ್ದರೆ ಯಾವ ಜಾತಿಗೆ ಬೇಕು?

Last Updated 22 ನವೆಂಬರ್ 2020, 15:36 IST
ಅಕ್ಷರ ಗಾತ್ರ

‘ಜಾತಿ ಪದ್ಧತಿಯಿಂದ ದೇಶದಲ್ಲಿ ಅವಕಾಶಗಳು ಮತ್ತು ಯೋಗ್ಯತೆಗಳು ನಿರಂತರವಾಗಿ ಕುಗ್ಗುತ್ತ ಹೋಗುತ್ತವೆ. ಯೋಗ್ಯರು ಕಡಿಮೆಯಾಗುತ್ತಾ ಹೋಗುತ್ತಾರೆ’ ಎಂದು ಹೇಳುತ್ತಾರೆ ರಾಮ್‌ ಮನೋಹರ ಲೋಹಿಯಾ. ಅವರು ಕಂಡ ಜಾತಿ ವಿನಾಶದ ಕನಸು ನನಸು ಮಾಡಲು ಅಸಾಧ್ಯ ಆಗಿರುವುದರಿಂದಲೇ ಜಾತಿ ಸರ್ಕಾರಿಕರಣವಾಗುತ್ತಿದೆ.

ದೇಶ ಬಿಟ್ಟು ಜಾತಿ ಕಟ್ಟು ಎನ್ನುವ ಜಾತಿವಾದ ಅದನ್ನು ಮಠೀಕರಣ ಮಾಡುವಲ್ಲಿ ಯಶಸ್ವಿಯಾಗಿದೆ. ಅದರ ಮುಂದುವರಿದ ಭಾಗವಾಗಿ ಸಾಂವಿಧಾನಿಕ ಸಂಸ್ಥೆಗೆ ಬುನಾದಿಯನ್ನು ಹಾಕುತ್ತಿದೆ. ಹಾಗಾಗಿ ಲೋಹಿಯಾ ಅವರ ಕನಸಿನ ಭಾರತ ಕನಸಾಗಿಯೇ ಉಳಿಯುತ್ತದೆ. ಅದಕ್ಕೆ ಪರ್ಯಾಯವಾಗಿ ಶೋಷಕ ಜಾತಿಗಳು ಬೆಳೆಯುತ್ತಾ ಸಮಾಜವನ್ನು ಮತ್ತಷ್ಟು ಅಮಾನವೀಯ ಮಾಡುತ್ತವೆ. ಜಾತಿ ರಾಜಕಾರಣ ಎಂಬ ವಿಷ ವೃಕ್ಷದ ಬುಡಕ್ಕೆ ಗೊಬ್ಬರವನ್ನು ಎರೆದು ಪೋಷಿಸಲು ಸರ್ಕಾರವೇ ಮುಂದಾದರೆ ಮುಂದಿನ ದುರಂತ ಇನ್ನೂ ಘೋರ ಎನ್ನುವುದು ಕಲ್ಪನೆಗೆ ನಿಲುಕದ ಸಂಗತಿ ಅಲ್ಲ. ಸಾಮಾಜಿಕ ಆಯಾಮದಿಂದ ಮಠೀಕರಣದ ಸಾಂಸ್ಥಿಕ ರೂಪ ಪಡೆದ ಜಾತಿ ಈಗ ನಿಗಮ– ಮಂಡಳಿ– ಪ್ರಾಧಿಕಾರಗಳ ಮೂಲಕ ಸರ್ಕಾರದ ಭಾಗವಾಗಿ ರೂಪಾಂತರಗೊಂಡು ಅದರ ರಕ್ಷಣಾ ಕವಚವನ್ನು ಧರಿಸಲು ಹವಣಿಸುತ್ತಿದೆ.

ಸಾಮಾಜಿಕ ಬದುಕಿನಲ್ಲಿ ಶ್ರೇಷ್ಠತೆಯ ಅಹಮ್ಮಿನಲ್ಲಿ ತಮ್ಮ ತಮ್ಮ ಜಾತಿಗಳ ಅನನ್ಯತೆಯನ್ನು ಗುರುತಿಸಿಕೊಳ್ಳುವ ಜನಾಂಗಗಳೇ ಮೀಸಲು ಅಥವಾ ಸರ್ಕಾರಿ ಸವಲತ್ತಿನ ವಿಷಯದಲ್ಲಿ ತಾವು ಹಿಂದುಳಿದ ಅತಿ ಹಿಂದುಳಿದ ಸಮುದಾಯ ಎಂದು ಚಾರಿತ್ರಿಕ– ಪೌರಾಣಿಕ ದಾಖಲೆಗಳನ್ನು ತೆರೆದಿಡುತ್ತವೆ. ಇಂತಹ ವೈರುಧ್ಯ ವ್ಯವಸ್ಥೆಯಲ್ಲಿ ಜಾತಿಯ ಕಾರಣಕ್ಕಾಗಿಯೇ ಮರ್ಯಾದೆಗೇಡು ಹತ್ಯೆಗಳು, ಜಾತಿ ದೌರ್ಜನ್ಯಗಳು ಎಗ್ಗಿಲ್ಲದೆ ನಡೆಯುತ್ತಿರುತ್ತವೆ. ಕಳೆದ ವಾರ ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಹಲ್ಲರೆ ಎಂಬ ಗ್ರಾಮದಲ್ಲಿ ಕ್ಷೌರಿಕ ವೃತ್ತಿಯ ಮಲ್ಲಿಕಾರ್ಜುನ ಎಂಬುವವರಿಗೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ. ‘ದಲಿತ’ ಸಮುದಾಯದವರಿಗೆ ಅವರು ಕ್ಷೌರ ಮಾಡಿದ್ದು ಅಪರಾಧ ಎಂದು ಗ್ರಾಮದ ಮುಖಂಡರ ನೇತೃತ್ವದಲ್ಲಿ ನ್ಯಾಯ ಪಂಚಾಯಿತಿ ಮಾಡಿ ದಂಡವನ್ನೂ ವಿಧಿಸಿದ್ದಾರೆ. ಕ್ಷೌರದ ಅಂಗಡಿಯ ವ್ಯಾಪಾರಿಗೆ ಇಂತಹ ಜಾತಿಯವರಿಗೆ ಮಾತ್ರ ಕ್ಷೌರ ಮಾಡಬೇಕು ಎಂದು ನಿರ್ಬಂಧ ವಿಧಿಸುವುದು ಸಾಮಾಜಿಕ ಬಹಿಷ್ಕಾರದ ಬೆದರಿಕೆ ಹಾಕುವುದು ನಾಗರಿಕತೆ ಹೇಗಾದೀತು?

ಜಾತಿ ದೌರ್ಜನ್ಯವನ್ನು ನಿಯಂತ್ರಿಸಬೇಕಾದ ಸರ್ಕಾರ ಇತ್ತಿಚೆಗೆ ‘ದಲಿತ’ ಎಂಬ ಪದ ಬಳಕೆಗೆ ನಿಷೇಧ ಹೇರಿದೆ. ದಲಿತ ಎನ್ನುವುದು ಜಾತಿ ಸೂಚಕ ಅಲ್ಲ. ಅದು ಸಮುದಾಯ ಸೂಚಕ ನಾಮಪದ. ಅದೇ ಹೆಸರಿನಲ್ಲಿ ‘ದಲಿತ ಪ್ಯಾಂಥರ್ಸ್‌’ನಂತಹ ರಾಜಕೀಯ ಪಕ್ಷವೂ ಸೇರಿದಂತೆ ಸಾವಿರಾರು ಸಂಘ ಸಂಸ್ಥೆಗಳು ಇವೆ. ದಲಿತ ಎಂದರೆ ದಲ > ದಳ> ಇಬ್ಭಾಗ ಎಂದು ಅರ್ಥ. ಅಂದರೆ ವ್ಯವಸ್ಥೆಯಿಂದ ಒಡೆಯಲ್ಪಟ್ಟವನು ಅಥವಾ ಶೋಷಣೆಗೆ ತುತ್ತಾದವನು ಎನ್ನುವ ಭಾವವನ್ನು ಅದು ಬಿಂಬಿಸುತ್ತದೆ. ಅದನ್ನು ಹೊರತಾಗಿ ಬೇರೆ ಹೀನಾರ್ಥ ಅಥವಾ ಕೀಳಾರ್ಥವನ್ನು ಅದು ಸೂಚಿಸುವುದಿಲ್ಲ. ಕರ್ನಾಟಕದಲ್ಲಿ ದಲಿತ ಸಂಘಟನೆ ಹುಟ್ಟಿಗೆ ಮೂಲ ಕಾರಣ ‘ಬೂಸಾ ಸಾಹಿತ್ಯ’ ಆಗಿದ್ದರೂ ಅದಕ್ಕೆ ಚಳವಳಿಯ ರೂಪ ನೀಡಿದ್ದು ಇಂತಹ ದೌರ್ಜನ್ಯಗಳೆ. ಅದರಲ್ಲಿ ಬಹುಮುಖ್ಯ ಘಟನೆಗಳಲ್ಲಿ ಒಂದು ಎಂದರೆ, ಕೋಲಾರ ಜಿಲ್ಲೆಯ ಕುಂಬಾರ ಸಮುದಾಯದ ಕಂದಮ್ಮಳ ಮೇಲಿನ ಅತ್ಯಾಚಾರ ಮತ್ತು ಅವರ ತಂದೆಯ ಹತ್ಯೆ. ಈ ಪ್ರಕರಣವನ್ನು ಖಂಡಿಸಿ, ಕೃತ್ಯವನ್ನು ಎಸಗಿದವರಿಗೆ ಶಿಕ್ಷೆಯನ್ನು ನೀಡಬೇಕು ಎಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಕಾಲ್ನಡಿಗೆ ಜಾಥಾವನ್ನು ಬೆಂಗಳೂರಿಗೆ ಮಾಡುತ್ತದೆ. ದಲಿತ ಹೋರಾಟದಲ್ಲಿ ಆ ಕಂದಮ್ಮಳ ಕರುಣಾಜನಕ ಕಥೆಯೇ ಕ್ರಾಂತಿಗೀತೆಯಾಗಿ ಮೊಳಗಿ ಕಣ್ಣೀರು ಹರಿಸಿದ್ದು ಇತಿಹಾಸ. (ಕೋಟಿ ಕೋಟಿ ಕಷ್ಟಗಳಲ್ಲಿ/ ಲಕ್ಷಾಂತರ ನೋವುಗಳಲ್ಲಿ/ ನೀ ಹುಟ್ಟಿ ಬೆಳೆದೆಯಮ್ಮ/ ನನ ತಂಗಿ ಅನಸೂಯ.) ಇದುವೆ ದಲಿತ ಸಂಘರ್ಷ ಸಮಿತಿಯ ಮೊಟ್ಟಮೊದಲ ಜಾಥಾ. ಆ ಕಂದಮ್ಮ ಪರಿಶಿಷ್ಟ ಜಾತಿಗೆ ಸೇರಿದವಳಲ್ಲ. ದಲಿತ ಪ್ರಜ್ಞೆ ಅನ್ಯಾಯದ ಕತ್ತಿಯಲ್ಲಿ ವಿಭಜನೆಯಾದವರನ್ನು ಐಕ್ಯಗೊಳಿಸಿ ಸಮುದಾಯದೊಳಗೆ ಬೆಸೆದುಕೊಳ್ಳುತ್ತದೆ. ಮಹಿಳಾ ಚಳವಳಿ ಸೇರಿದಂತೆ ಲೈಗಿಂಕ ಅಲ್ಪಸಂಖ್ಯಾತರು ಹಾಗೂ ತೃತೀಯ ಲಿಂಗಿಗಳ ಹೋರಾಟಕ್ಕೂ ದಲಿತ ಸಂಘಟನೆಗಳು ಬೆಂಬಲಿಸುತ್ತವೆ. ದಲಿತ ಸಂಘರ್ಷ ಸಮಿತಿ ಸವೆಸಿದ ಹಾದಿ ಪಯಣಿಸಿ ದಿಕ್ಕು ದೆಸೆ ಬದಲಾಗಿದ್ದು ಬೇರೆಯ ವಿಷಯ.

ಸಾಂವಿಧಾನಿಕ ಸವಲತ್ತು ಮತ್ತು ಸಾಮಾಜಿಕ ಹೋರಾಟದ ದೀರ್ಘ ಇತಿಹಾಸ ಇದ್ದರೂ ದಲಿತರ ಹಟ್ಟಿಗಳಲ್ಲಿ ಗಣನೀಯ ಬದಲಾವಣೆ ಸಾಧಿಸಲಾಗಿಲ್ಲ. ಜಾತಿಗಳ ನಡುವಿನ ಅಂತರ– ಅಸಮಾನತೆ– ಅಸ್ಪೃಷ್ಯತೆಯನ್ನು ಹೋಗಲಾಡಿಸಲು ಸಾಧ್ಯವಾಗಿಲ್ಲ. ಪರಿಶಿಷ್ಟರೇ ವಾಸಿಸುವ ಲಂಬಾಣಿ ತಾಂಡಾಗಳನ್ನು ಸಂಪೂರ್ಣವಾಗಿ ಕಂದಾಯ ಗ್ರಾಮಗಳನ್ನಾಗಿ ರೂಪಿಸಲೂ ಸಾಧ್ಯವಾಗಿಲ್ಲ. ಇಂತಹ ಇಲ್ಲಗಳ ಸಮಾಜದಿಂದಲೇ ‘ಮಹಾನಾಯಕ’ ಬೇಡ ಎನ್ನುವ ಸೊಲ್ಲು ಎದ್ದಿತ್ತು. ಅಂಬೇಡ್ಕರ್‌ ಬದುಕಿನ ಚರಿತ್ರೆ ದೃಶ್ಯ ಕಥೆಯಾಗಿ ಝೀ ಕನ್ನಡ ಟಿ.ವಿಯಲ್ಲಿ ಅನಾವರಣವಾಗುತ್ತಿದೆ. ಹಿಂದಿ ಮೂಲದ ಮಹಾನಾಯಕ ಧಾರಾವಾಹಿ ಜಾತಿಮೀರಿ ಎಳೆಯರ ಮನವನ್ನು ಮಿಡಿದಿದೆ. ಅನೇಕ ಮಕ್ಕಳಿಗೆ ತಮ್ಮ ಜಾತಿಯೇ ಗೊತ್ತಿಲ್ಲ, ಆದರೂ ಧಾರಾವಾಹಿಯಲ್ಲಿ ಕಾಣುವ ಜಾತಿ ವ್ಯವಸ್ಥೆಗೆ ಅವರು ಮಮ್ಮಲ ಮರುಗುತ್ತಾರೆ. ಇದು ಎಳೆಯ ಮನಸ್ಸುಗಳಲ್ಲಿ ಪರಿವರ್ತನೆಯ ದೀಪವೊಂದನ್ನು ಹತ್ತಿಸಿದೆ. ವಾಣಿಜ್ಯ ಲೆಕ್ಕಾಚಾರದ ಕಾರ್ಯಕ್ರಮ ಇದಾಗಿದ್ದರೂ ಸಾಮಾಜಿಕ ಬದಲಾವಣೆಗೆ ನಾಂದಿಯಾದೀತು ಎಂಬ ಆತಂಕದಲ್ಲಿ ಅಸಮಾನತೆಯ ಸಂಪ್ರದಾಯಸ್ಥ ಮನಸ್ಸುಗಳು ಅದನ್ನು ವಿರೋಧಿಸಿದ್ದವು. ಸಹಿಷ್ಣುತೆಯನ್ನು ಸಾರುವ ಒಂದು ಕಥನವನ್ನೂ ಸಹಿಸದಷ್ಟು ದುಷ್ಟತನ ನಮ್ಮ ನಡುವೆ ಉಸಿರಾಡುತ್ತಿದೆ ಎನ್ನುವುದಕ್ಕೆ ಇದು ನಿದರ್ಶನ ಆಗಬಲ್ಲದು. ಹೀಗಿರುವಾಗ ಜಾತಿಗೊಂದು ಆಯೋಗ ಬೇಕೆ?

ಜಾತಿಯನ್ನು ರಾಜಕಾರಣದ ಜೊತೆ ಬೆಸೆದ ಪರಿಣಾಮ ಬಹುಸಂಖ್ಯಾತರಿಗೆ ಹೆಚ್ಚಿನ ಮನ್ನಣೆ ಸಿಗುತ್ತಿದೆ. ಬಹುಮತಗಳಿರುವ ಜಾತಿಯ ಓಲೈಕೆ ತಮ್ಮ ಬಹುಮತಕ್ಕೆ ಅನುಕೂಲ ಎನ್ನುವ ಲೆಕ್ಕಾಚಾರ ಮೀಸಲಿನ ಉದ್ದೇಶವನ್ನೇ ಅಣಕಿಸುತ್ತಿದೆ. ಅದರ ಪರಿಣಾಮ ನೆಲೆ ಇಲ್ಲದ ನೂರಾರು ಸಮುದಾಯಗಳನ್ನು ಸರ್ಕಾರ ಕಣ್ಣು ಬಿಟ್ಟು ನೋಡುವ ಪ್ರಯತ್ನವನ್ನೇ ಮಾಡುವುದಿಲ್ಲ. ಆ ಸಮುದಾಯಗಳಲ್ಲಿ ಶೇ 90ಕ್ಕೂ ಅಧಿಕ ಪ್ರಮಾಣದಷ್ಟು ಅನಕ್ಷರಸ್ಥರಿದ್ದಾರೆ. ಶೇ 100 ರಷ್ಟೂ ಬಡವರೇ ಆಗಿ ಬದುಕುತ್ತಿದ್ದಾರೆ. ಅನೇಕ ಜಾತಿಯ ಜನರಿಗೆ ಬೊಗಸೆಯಷ್ಟೂ ಭೂ ಒಡೆತನ ಇಲ್ಲ. ಅದರಲ್ಲಿ ಬಹುತೇಕರು ಅಲೆಮಾರಿ, ಅರೆ ಅಲೆಮಾರಿ, ಬುಡಕಟ್ಟು ಸಮುದಾಯದವರೇ ಆಗಿದ್ದಾರೆ.

ದಕ್ಕಲಿಗರು, ಹಕ್ಕಿಪಿಕ್ಕಿಗಳು, ಕುಂಚಿಕೊರವರು, ಕೊರಗರು, ದೊಂಬರು, ದಾಸರು, ಸಿಳ್ಳೆಕ್ಯಾತರು, ಬುಡಬಡಿಕೆಯವರು, ಸುಡುಗಾಡು ಸಿದ್ದರು ಸೇರಿದಂತೆ ಕೆಲವು ಸಮುದಾಯದಲ್ಲಿ ಈಗಷ್ಟೇ ಅಕ್ಷರ ಜ್ಯೋತಿ ಬೆಳಗುತ್ತಿದೆ. ಪರಿಶಿಷ್ಟ ಜಾತಿಯ ನೂರಕ್ಕೂ ಅಧಿಕ ಜಾತಿಯ ಪಟ್ಟಿಯಲ್ಲಿ ಕೇವಲ ಬೆರಳೆಣಿಕೆಯ ಜಾತಿಗಳು ಮಾತ್ರ ಮೀಸಲಿನ ಲಾಭವನ್ನು ಪಡೆಯುತ್ತಿವೆ. ಅಂತೆಯೇ ಪರಿಶಿಷ್ಟ ಪಂಗಡದಲ್ಲಿಯೂ ಕೂಡ ಅಷ್ಟೇ. ಸರ್ಕಾರಿ ಸೌಲಭ್ಯವನ್ನು ಪಡೆಯಲು ಸಾಧ್ಯವೇ ಆಗದ ಅಥವಾ ಈ ತನಕ ಸರ್ಕಾರ ಆ ಜನರನ್ನು ತಲುಪಲು ಸಾಧ್ಯವಾಗಿಲ್ಲ, ಅಂದ ಮೇಲೆ ವ್ಯವಸ್ಥೆ ಆ ವರ್ಗದ ಮೇಲೆ ಹೆಚ್ಚಿನ ಮುತುವರ್ಜಿ ತೆಗೆದುಕೊಳ್ಳಬೇಕು. ಆ ದೃಷ್ಟಿಯಿಂದ ನಿಗಮ– ಪ್ರಾಧಿಕಾರ ರೂಪಿಸಬಹುದು. ಅದು ಬಿಟ್ಟು ರಾಜಕಾರಣದ ನೆಲೆಯಲ್ಲಿ ಬಹುಸಂಖ್ಯಾತ ಜಾತಿಗಳಲ್ಲಿ ಬಡವರಿದ್ದಾರೆ ಎಂದು ಅವರಿಗೊಂದು ಇವರಿಗೊಂದು ನಿಗಮ– ಮಂಡಳಿ– ಪ್ರಾಧಿಕಾರ ಹಂಚುವುದು ಜಾತಿ ಸಂಘರ್ಷವನ್ನು ಮತ್ತಷ್ಟು ಹೆಚ್ಚಿಸಬಹುದೇ ವಿನಃ ಅಸಮಾನತೆಗೆ ತುತ್ತಾದ ಸಮುದಾಯವೂ ನಮ್ಮ ಸಮಾಜದಲ್ಲಿ ಸಮಾನರು ಎಂದು ನಿರೂಪಿಸಲು ಸಾಧ್ಯವೇ ಇಲ್ಲ. ನಿಜವಾದ ಪ್ರಾಧಿಕಾರ ಬೇಕಿರುವುದು ಶತಮಾನಗಳ ಕಾಲದಿಂದಲೂ ವ್ಯವಸ್ಥೆಯ ಪೋಷಣೆ ಇಲ್ಲದೆ ತಬ್ಬಲಿತನವನ್ನು ಅನುಭವಿಸುತ್ತಿರುವ ಸಮುದಾಯಗಳಿಗೆ ಮಾತ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT