ಶುಕ್ರವಾರ, ಸೆಪ್ಟೆಂಬರ್ 24, 2021
26 °C

ಮಕ್ಕಳಾಗಿ ಆಡೀದ್ವಿ, ಹಕ್ಕ್ಯಾಗಿ ಹಾಡೀದ್ವಿ: ಶಿಕ್ಷಕ ವೃತ್ತಿ ಅನುಭವಗಳು...

ಪ್ರಜಾವಾಣಿ ವಿಶೇಷ Updated:

ಅಕ್ಷರ ಗಾತ್ರ : | |

ಗುರು ಸಮ್ಮುಖದಲ್ಲಿ ನಡೆಯುವ ಶಿಕ್ಷಣದ ಶಕ್ತಿಯೇ ಬೇರೆ. ಆದರೆ, ಕಳೆದ ಒಂದೂವರೆ ವರ್ಷದಲ್ಲಿ ಗುರು–ಶಿಷ್ಯರ ಸಮಾಗಮವೇ ಆಗಿಲ್ಲ. ಕೋವಿಡ್‌ ದುರಿತ ಕಾಲದ ಶಿಕ್ಷಕರ ಅನುಭವಗಳು ಹೇಗಿದ್ದವು? ಶಿಕ್ಷಕರ ದಿನಾಚರಣೆ ನೆಪದಲ್ಲಿ ಹೀಗೊಂದು ಹೊರಳು ನೋಟ...

***

ಕೊರೊನಾ ಕಾಲದಲ್ಲೂ ಕಂಡ ಕಾಮನಬಿಲ್ಲು
‘ನಮ್ಮ ಚೇತನದ ಆಳವನ್ನು ದುಃಖ ಕೊರೆದಷ್ಟೂ ಸುಖವನ್ನು ಅದು ತುಂಬಿಕೊಳ್ಳಬಲ್ಲದು’ ಎನ್ನುತ್ತಾನೆ ಖಲೀಲ್ ಗಿಬ್ರಾನ್. ಕೊರೊನಾ ತಂದೊಡ್ಡಿರುವ ಸಂಕಟ ಇಡೀ ಜಗದ ಮನಸ್ಸಿನ ಆಳವನ್ನ ಇನ್ನಿಲ್ಲದಂತೆ ಕೊರೆದಿದೆ. ಮುಖ್ಯವಾಗಿ ಶಾಲೆಯಿಂದ ಮಕ್ಕಳನ್ನ ದೂರವಿಟ್ಟು, ಎಳೆಯ ಜೀವಗಳನ್ನ ಇನ್ನಿಲ್ಲದ ಇಕ್ಕಟ್ಟಿಗೆ ಸಿಕ್ಕಿಸಿದೆ. ಇನ್ನೂ ಈ ದುರ್ದಿನಗಳು ಎಷ್ಟು ಕಾಲವೋ ತಿಳಿಯದು. ಸತತ ಒಂದೂವರೆ ವರ್ಷದಿಂದ ಮಕ್ಕಳು ಶಾಲೆಯ ಮುಖ ಕಂಡಿಲ್ಲ. ಜೊತೆ ಕೂತು ನಲಿದಿಲ್ಲ, ಆಡಿಲ್ಲ, ಹಾಡಿಲ್ಲ. ಕೊರೊನಾ ಕಾಲವೇ ಇನ್ನೂ ಮುಗಿದಿಲ್ಲ.

ಕೋಟಿಗಾನಹಳ್ಳಿ ರಾಮಯ್ಯನವರು ಹೇಳುವಂತೆ, ‘ಮಾತು, ಶಬ್ದ, ನಾವು ಕಾಣುತ್ತಿರುವ ದೃಶ್ಯ ಎಲ್ಲವೂ ಇಂದು ಮಲಿನಗೊಂಡಿವೆ’. ಇಂಥ ಮಲಿನಗೊಂಡ ವಾತಾವರಣದಲ್ಲಿ ಬದಲಾವಣೆ ತರುವುದು ತುಂಬಾ ತುಂಬಾ ಕಷ್ಟದ್ದು ಮತ್ತು ಕಷ್ಟದ್ದು ಎನ್ನುವ ಕಾರಣಕ್ಕೇ ನಾವೂ ನಮ್ಮ ಶಾಲೆಯ ಬದಲಾವಣೆಯ ಬೆನ್ನು ಬಿದ್ದದ್ದು. ಕೊರೊನಾ ಕಾಲದಲ್ಲಿ ಓರಗೆಯ ಕೆಲವರು, ‘ಹೊಸ ತಲೆಮಾರಿನ ಅಗ್ರಗಣ್ಯ’ ಪಟ್ಟಕ್ಕಾಗಿ ಮೇಲಿಂದ ಮೇಲೆ ಪುಸ್ತಕಗಳನ್ನ ಬರೆದರು, ನಾವು ಶಿಕ್ಷಣ ಪ್ರೇಮಿಗಳ ಸಹಾಯದಿಂದ ಶಾಲೆಗಾಗಿ ಜಮೀನು ಖರೀದಿಸಿದೆವು, ಶಿವರಾಮ ಕಾರಂತರ ಹೆಸರಿನಲ್ಲಿ ರಾಜ್ಯದ ಮೊದಲ ಬಹುಭಾಷಾ ಪ್ರಯೋಗಾಲಯ ಕಟ್ಟಿದೆವು. ಶಾಲೆಯನ್ನ ಸಂಪೂರ್ಣವಾಗಿ ಬದಲಾಯಿಸಿದೆವು.

ನನ್ನ ಗುರುಗಳು, ನನ್ನ ಆಪ್ತರು, ಬಂಧು ಮಿತ್ರರು, ಅಷ್ಟೇ ಅಲ್ಲದೆ, ನನ್ನ ಅಣ್ಣ ಕೂಡ ಕೊರೊನಾಕ್ಕೆ ಬಲಿಯಾದರು. ಲೆಕ್ಕ ಹಾಕಿದರೆ ನನ್ನ ಹುಟ್ಟೂರಿನ ಬರೋಬ್ಬರಿ ಐವತ್ತೊಂದು ಜನ ತೀರಿಹೋದರು. ಈ ಸಂಕಟದಲ್ಲೇ ನಾನು ಶಾಲೆ, ತರಗತಿ ಕೋಣೆ, ಬಹುಭಾಷಾ ಪ್ರಯೋಗಾಲಯ ಅಂತ ಧ್ಯಾನಿಸಿದೆ.

ಬೆಂಗಳೂರಿನ ರಾಮಮೋಹನ್ ಕೆ.ಎನ್. ಎಂಬ ಶಿಕ್ಷಣ ಪ್ರೇಮಿಯೊಬ್ಬರು ಹೆಗ್ಗೋಡಿನ ಶಿಬಿರದಲ್ಲಿ ಸಿಕ್ಕವರು ನಮ್ಮ ಉತ್ಸಾಹ ಕಂಡು ಶಾಲೆಯವರೆಗೂ ಬಂದರು. ನಮ್ಮ ಅಗತ್ಯ ಮನಗಂಡರು. ಅಂದಾಜು ಹದಿನೆಂಟು ಲಕ್ಷ ರೂಪಾಯಿ ವೆಚ್ಚದಲ್ಲಿ ಬಹುಭಾಷಾ ಪ್ರಯೋಗಾಲಯ ನಿರ್ಮಿಸಿಕೊಟ್ಟರು, ಶಾಲೆಯ ಸಂಪೂರ್ಣ ಪೇಂಟಿಂಗ್ ಮಾಡಿಸಿಕೊಟ್ಟರು. ಗುರುಲಿಂಗ ಅಮ್ಮಣಗಿ ಎಂಬ ಮತ್ತೊಬ್ಬ ಸಹೃದಯಿ ಅವರ ಟ್ರಸ್ಟ್, ಅವರ ಮಡದಿ, ಮಕ್ಕಳು, ಸ್ನೇಹಿತರಿಂದ ಒಂದು ಲಕ್ಷ ರೂಪಾಯಿ ಸಂಗ್ರಹಿಸಿ ನೀಡಿದರು. ಇದರಿಂದ ಬಹುಭಾಷಾ ಪ್ರಯೋಗಾಲಯಕ್ಕೆ ಬೇಕಾದ ಫರ್ನಿಚರ್, ತರಗತಿ ಕೋಣೆಗಳ ನವೀಕರಣ ಮಾಡಿದೆವು. ವಿಮರ್ಶಕರಾದ ಟಿ.ಪಿ.ಅಶೋಕರಂಥ ಸಹೃದಯರೂ ಸಾಥ್‌ ನೀಡಿದರು.

ಸರ್ಕಾರದ ಜಮೀನನ್ನ ಹೇಗಾದರೂ ಸರಿ ತಮ್ಮ ಹೆಸರಿಗೆ ಮಾಡಿಕೊಳ್ಳುವ ಅನೇಕ ಉದಾಹರಣೆಗಳನ್ನು ನಾವು ಕಂಡಿದ್ದೇವೆ. ಆದರೆ ನಿಡಗುಂದಿಯ ನಮ್ಮ ಅಂಬೇಡ್ಕರ್ ನಗರ ಸರ್ಕಾರಕ್ಕೆ, ಇಲಾಖೆಗೆ ಜಮೀನು ಖರೀದಿಸಿಕೊಟ್ಟು ಒಂದು ಹೊಸ ಮೈಲುಗಲ್ಲು ಸ್ಥಾಪಿಸಿತು. ಹೌದು, ನಮ್ಮ ಶಾಲೆಗೆ ಹೊಂದಿಕೊಂಡಂತೆ ಇದ್ದ ಶಿವರಾಯಜ್ಜ ಎಂಬುವವರ ಜಮೀನನ್ನ ಊರಿನ ಎಲ್ಲ ಶಿಕ್ಷಣ ಪ್ರೇಮಿಗಳ ಸಹಾಯದಿಂದ ನಾವು ನಾಲ್ಕು ಲಕ್ಷ ರೂಪಾಯಿ ವೆಚ್ಚದಲ್ಲಿ ಖರೀದಿಸಿದೆವು. ಒಂದು ಹಂತಕ್ಕೆ ನನ್ನಿಂದ ದುಡ್ಡು ಹೊಂದಿಸುವುದು ಸಾಧ್ಯವೇ ಇಲ್ಲ ಎಂದು ಮುದುಡಿ ಕೂತಿದ್ದಾಗ ನಮ್ಮ ಶಾಸಕ ಪಿ.ರಾಜೀವ್ ಕೈಹಿಡಿದು ಭರವಸೆ ತುಂಬಿದರು. ‘ಮೇಷ್ಟ್ರೇ, ನಾನಿದ್ದೀನಿ’ ಅಂತ ಹೇಳಿ ಎರಡೂವರೆ ಲಕ್ಷ ರೂಪಾಯಿ ಶಿವರಾಯಜ್ಜನಿಗೆ ನೀಡಿದರು. ಜಮೀನು ನಮ್ಮ ಶಾಲೆಯದಾಯಿತು.

ಸದ್ಯ ನಮ್ಮ ನಿಡಗುಂದಿಯ ಅಂಬೇಡ್ಕರ್ ನಗರದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹೊಸ ಜೀವಕಳೆಯೊಂದಿಗೆ ನಳನಳಿಸುತ್ತಿದೆ. ಅಂಬೇಡ್ಕರ್ ನಗರದ ಶಾಲೆಗೆ ಜಮೀನು, ಭಾಷಾ ಪ್ರಯೋಗಾಲಯ, ಸ್ಮಾರ್ಟ್ ಪ್ಲಸ್ ತರಗತಿ ಕೋಣೆಗಳು, ಸುರಕ್ಷತೆಗಾಗಿ ಸಿ.ಸಿ. ಟಿ.ವಿ, ಹೈಟೆಕ್ ಶೌಚಾಲಯ ಇನ್ನೂ ಏನೆಲ್ಲ ಸೌಲಭ್ಯಗಳೊಂದಿಗೆ ಮಳೆಬಿಲ್ಲಿನಂತೆ ಕಂಗೊಳಿಸುತಿದೆ. ಹೀಗೆ ಏನೆಲ್ಲ ಸಾಧ್ಯತೆಗಳನ್ನ ನಾವು ಮಕ್ಕಳಿಗಾಗಿ ಹುಡುಕುತ್ತಿದ್ದೇವೆ, ರೂಪಿಸುತ್ತಿದ್ದೇವೆ.

ಏನು ಮಾಡುವುದು, ನಮ್ಮ ನಾಡಪ್ರಭುಗಳು ಮಕ್ಕಳನ್ನು ಇನ್ನೂ ಶಾಲೆಗೆ ಬರಲು ಬಿಡುತಿಲ್ಲ. ಕೊರೊನಾಕ್ಕೂ ಕರುಣೆ ಬರುತ್ತಿಲ್ಲ.

-ವೀರಣ್ಣ ಮಡಿವಾಳರ
ಶಿಕ್ಷಕ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಅಂಬೇಡ್ಕರನಗರ, ನಿಡಗುಂದಿ (ಬೆಳಗಾವಿ ಜಿಲ್ಲೆ)

***

ತಂತ್ರಜ್ಞಾನದೊಂದಿಗೆ ಸಾಗುವ ಸವಾಲು
ಕೋವಿಡ್‌ ಕಾಲದ ಶಿಕ್ಷಣವು ವಿದ್ಯಾರ್ಥಿಗಳಿಗೆ ಮಾತ್ರವಲ್ಲ; ಬೋಧನೆಗೂ ಒಂದು ಹೊಸ ಆಯಾಮವನ್ನೇ ನೀಡಿದೆ. ಅನಿರೀಕ್ಷಿತವಾಗಿ ಶಾಲೆಗಳು ಮುಚ್ಚಿದ್ದರಿಂದ ಮಕ್ಕಳ ನಿರಂತರ ಮತ್ತು ವಿಸ್ತಾರವಾದ ಕಲಿಕೆಗೆ ಹಿನ್ನಡೆಯಾದಂತೆ, ಶಿಕ್ಷಕರಿಗೂ ಹೊಸ ಸನ್ನಿವೇಶಕ್ಕೆ ಹೊಂದಿಕೊಳ್ಳಬೇಕಾದ ಅನಿವಾರ್ಯ ಸೃಷ್ಟಿಸಿತು. ತರಗತಿ ಪಾಠದ ಬದಲಾಗಿ, ವಿದ್ಯಾಗಮ, ಸಂವೇದಾ ಶೈಕ್ಷಣಿಕ ಚಟುವಟಿಕೆಗಳು ಮುನ್ನೆಲೆಗೆ ಬಂದವು. ಶಾಲೆಗಳ ಬದಲಿಗೆ ಶಿಕ್ಷಕರು ಊರು, ಕೇರಿ, ಸಮುದಾಯ ಭವನಗಳಿಗೆ ತೆರಳಿ ಮಕ್ಕಳಿಗೆ ಪಾಠ ಮಾಡಬೇಕಾಯಿತು. 

ಶಾಲಾ ತರಗತಿಗಳಿಗೆ ನಿರ್ದಿಷ್ಟವಾದ ಚೌಕಟ್ಟು ಇರುತ್ತದೆ. ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಅದಕ್ಕೆ ಹೊಂದಿಕೊಂಡಿದ್ದರು. ಆದರೆ ಕೋವಿಡ್ ಸಮಯದಲ್ಲಿ ಗ್ರಾಮೀಣ ಭಾಗಗಳಲ್ಲಿ ನಡೆದ ವಿದ್ಯಾಗಮ ಕಾರ್ಯಕ್ರಮದಲ್ಲಿ ಮಕ್ಕಳನ್ನು ನಿಗದಿತ ಸ್ಥಳದಲ್ಲಿ ಸೇರಿಸಿ ತರಗತಿಯ ಮನೋಭೂಮಿಕೆಯನ್ನು ಕಟ್ಟಿಕೊಡುವ ಸವಾಲು ನಮಗೆ ಎದುರಾಯಿತು. ಗ್ರಾಮೀಣ ಭಾಗಗಳಿಗೆ ತೆರಳಿ ಮಾರ್ಗದರ್ಶನ ಮಾಡುವ ಶಿಕ್ಷಕರನ್ನು ಅನುಮಾನದಿಂದ ನೋಡುವ, ಅವರಿಂದ ಅಂತರ ಕಾಯ್ದುಕೊಳ್ಳುವ ಮನಃಸ್ಥಿತಿಯೂ ಜನರಲ್ಲಿ ಕಂಡುಬಂತು. 

ಭೌತಿಕ ತರಗತಿಗಳು ನಡೆಯದೇ ಇದ್ದ ಸಂದರ್ಭದಲ್ಲಿ ಆರಂಭಗೊಂಡ ಆನ್‌ಲೈನ್‌, ಟಿ.ವಿ ತರಗತಿಗಳು ಮಕ್ಕಳ ಕಲಿಕೆಯ ಆಶಾಕಿರಣವಾಗಿ ಗೋಚರಿಸಿದವು. ಆದರೆ, ಈ ತರಗತಿಗಳು ಭೌತಿಕ ತರಗತಿಗಳಷ್ಟು ಪರಿಣಾಮಕಾರಿಯಾಗಲಿಲ್ಲ. ಮಕ್ಕಳಿಗೆ ಪಠ್ಯ ವಿಷಯವನ್ನು ವರ್ಗಾಯಿಸಲು ಮಾತ್ರ ಶಿಕ್ಷಕರಿಗೆ ಸಾಧ್ಯವಾಯಿತು. ಶಾಲಾ ಅವಧಿಯಲ್ಲಿ ಸದಾ ಕ್ರಿಯಾಶೀಲವಾಗಿ ಆಯೋಜಿಸುತ್ತಿದ್ದ ವಿಷಯಾಧಾರಿತ ಚರ್ಚೆ, ಪ್ರಾಯೋಗಿಕ ಅಭ್ಯಾಸ, ಚಟುವಟಿಕೆಗಳ ಅನ್ವಯ, ಮೌಲ್ಯಗಳ ಆಳ ಹಾಗೂ ಅರಿವಿನ ಬಗೆಗಿನ ಮೌಖಿಕ ಸಂವಾದ, ಸಾಮಾಜಿಕ, ವೈಯಕ್ತಿಕ ಮತ್ತು ಗುಣಾತ್ಮಕ ಕೌಶಲಗಳಲ್ಲಿ ವಿದ್ಯಾರ್ಥಿಗಳ ಭಾಗವಹಿಸುವಿಕೆಗೆ ಇಲ್ಲಿ ಅವಕಾಶ ಇರಲಿಲ್ಲ.  

ಕೋವಿಡ್ 2ನೇ ಅಲೆಯು ಕಲಿಕೆಯ ಪರಿಕಲ್ಪನೆಯನ್ನು ಮತ್ತಷ್ಟು ಕಿರಿದು ಮಾಡಿದೆ. ಪರೀಕ್ಷೆಯನ್ನು ಸರಳಗೊಳಿಸುವ ಇಲ್ಲವೇ ಪಠ್ಯಕ್ರಮವನ್ನು ಕಡಿತಗೊಳಿಸಿ ಬೋಧಿಸುವ ವ್ಯವಸ್ಥೆಗೆ ಶಿಕ್ಷಕರು ಹೊಂದಿಕೊಳ್ಳಬೇಕಾಯಿತು. ಆನ್‌ಲೈನ್‌ ಶಿಕ್ಷಣವೇ ಪ್ರವರ್ಧಮಾನಕ್ಕೆ ಬಂದು, ಇ-ಕಲಿಕೆಯ ಭಾಗವಾಗಿ ಪಠ್ಯವನ್ನು ಪರಿಗಣಿಸಲಾಯಿತು. ಶಾಲಾ ಕಾಲೇಜುಗಳಲ್ಲಿ ಮೊಬೈಲ್ ಬಳಕೆ ಅಪರಾಧ ಎನ್ನುತ್ತಿದ್ದ ತಜ್ಞರು ಹಾಗೂ ಶಿಕ್ಷಕರೇ ಲ್ಯಾಪ್‌ಟಾಪ್‌, ಟ್ಯಾಬ್‌ ಹಾಗೂ ಸ್ಮಾರ್ಟ್‌ಫೋನ್‌ಗಳು ಕಲಿಕೆಗೆ ಅತ್ಯಗತ್ಯವಾಗಿ ಬೇಕಾದ ಸಾಧನಗಳು ಎಂದು ಹೇಳಬೇಕಾಯಿತು. ಬೋಧನೆಗೆ ಅದನ್ನೇ ಬಳಸಬೇಕಾಯಿತು. 

ಶಿಕ್ಷಣ ಎನ್ನುವುದು ಮಾಹಿತಿ, ಸಂವಹನ ಮತ್ತು ತಂತ್ರಜ್ಞಾನ ಆಧಾರಿತವಾಗಿ ಮಾರ್ಪಾಡಾಗಿದ್ದು ಕೋವಿಡ್‌ ವರ್ಷಗಳಲ್ಲಿ ಸಂಭವಿಸಿದ ದೊಡ್ಡ ಬೆಳವಣಿಗೆ. ಶಿಕ್ಷಕರು ಕೂಡ ಈಗ ಇದಕ್ಕೆ ಹೊಂದಿಕೊಳ್ಳುತ್ತಿದ್ದಾರೆ. ಆಧುನಿಕ ತಂತ್ರಜ್ಞಾನದಲ್ಲಿನ ಅವಕಾಶಗಳನ್ನು ಬಳಸಿಕೊಳ್ಳುತ್ತಲೇ ಭೌತಿಕ ತರಗತಿಗಳ ಚೌಕಟ್ಟಿಗೆ ಆನ್‌ಲೈನ್‌ ತರಗತಿಗಳನ್ನು ಹೊಂದಿಸಿಕೊಂಡು, ಶಾಲೆಯಷ್ಟೇ ಪರಿಣಾಮಕಾರಿಯಾಗಿ ಮಕ್ಕಳಿಗೆ ಬೋಧನೆ ಮಾಡುವ ಸವಾಲು ನನ್ನನ್ನೂ ಸೇರಿದಂತೆ ಎಲ್ಲ ಶಿಕ್ಷಕರ ಮುಂದಿದೆ. ಟೆಲಿಗ್ರಾಂ, ವ್ಯಾಟ್ಸ್‌ಆ್ಯಪ್, ಗೂಗಲ್‌ ಮೀಟ್‌, ಝೂಮ್‌ ಮುಂತಾದ ಆ್ಯಪ್‌ಗಳ ಮೂಲಕ ಪಾಠವನ್ನು ನವನವೀನವಾಗಿ ಬೋಧಿಸುವ ಅವಕಾಶವನ್ನು ಈ ದುರಿತಕಾಲ ನಮ್ಮ ಮುಂದೆ ತೆರೆದಿಟ್ಟಿದೆ.

-ಕಾವ್ಯ ಡಿ.ಎಂ.
ಶಿಕ್ಷಕಿ, ಸರ್ಕಾರಿ ಪ್ರೌಢಶಾಲೆ, ಇರಸನವಾಡಿ (ಚಾಮರಾಜನಗರ ಜಿಲ್ಲೆ)

***

ನಮ್ಮ ಶ್ರಮ ಇನ್ನೂ ಹೆಚ್ಚಬೇಕು
‘ನಿಮ್ಮ ಮಕ್ಕಳು ನಿಮ್ಮನ್ನು ಮುಪ್ಪಿನಲ್ಲಿ ನೋಡಿಕೊಳ್ಳುತ್ತಾರೋ ಇಲ್ಲವೋ, ಆದರೆ ಈಗ ನಿಮ್ಮ ಮುಂದೆ ಕುಳಿತು ನಿಮ್ಮ ಪ್ರತಿಯೊಂದು ಮಾತನ್ನು ಆಲಿಸುತ್ತಿರುವ ಮಕ್ಕಳು (ವಿದ್ಯಾರ್ಥಿಗಳು) ಮಾತ್ರ ನಿಮ್ಮನ್ನು ಈಗಲೂ ಮುಂದೆಯೂ ಖಂಡಿತ ನೋಡಿಕೊಳ್ಳುತ್ತಾರೆ’

–ಎಂಥ ಮಾತುಗಳಿವು! ಈ ಮಾತುಗಳನ್ನು ಯಾವ ಮಹಾಶಯ ಗೀಚಿದನೋ ತಿಳಿಯದು. ಇವು ನನ್ನಂತಹ ಪ್ರತಿಯೊಬ್ಬ ಶಿಕ್ಷಕನ ಕಣ್ಣು ತೆರೆಸಿ ಹೊಣೆಯನ್ನು ಜಾಗೃತಗೊಳಿಸಬಲ್ಲವು ಎಂಬುದು ಮಾತ್ರ ಸತ್ಯ.

ಒಂದೂವರೆ ವರ್ಷದಿಂದ ನಾನು ಶಾಲೆಗೆ ನಿರಂತರವಾಗಿ ಹೋಗಲು ಆಗಲಿಲ್ಲ. ಶಾಲೆಗಳಲ್ಲಿ ಮಕ್ಕಳಿಲ್ಲದೆ, ದೇವರ ಮೂರ್ತಿ ಇಲ್ಲದ ಗುಡಿಯ ಹಾಗೆ ನಮ್ಮ ಮನಸ್ಸಿನಲ್ಲಿ ಶೂನ್ಯ ಆವರಿಸುವಂತೆ ಮಾಡಿದ್ದವು. ಕೊರೊನಾ ಮಹಾಮಾರಿ ಇಡೀ ಜಗತ್ತನ್ನು ಬಾಧಿಸಿದೆ. ಇನ್ನೂ ಬಾಧಿಸುತ್ತಲೇ ಇದೆ. ನನ್ನ ಇಪ್ಪತ್ತು ವರ್ಷಗಳ ಸೇವೆಯಲ್ಲಿ ಇಂತಹ ಮಕ್ಕಳ ಬರವನ್ನು ಯಾವತ್ತೂ ಅನುಭವಿಸಿರಲಿಲ್ಲ. ಇದೇ ಮೊದಲು ಮತ್ತು ಇದೇ ಕೊನೆಯಾಗಲಿ ಕೂಡಾ.

ಒಂದು ತಲೆಮಾರು ಕಲಿಕೆಯ ಶಾಶ್ವತ ನಷ್ಟ ಅನುಭವಿಸುವಂತಾಯಿತು. ಅದನ್ನು ಯಾರಿಂದಲೂ ಭರಿಸಲು ಸಾಧ್ಯವಿಲ್ಲ. ಹಾಗಾಗಿ ಇದರ ತೀವ್ರತೆ ಕೊಂಚ ಕಡಿಮೆಗೊಳಿಸಲು ವಿದ್ಯಾಗಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ನಾವುಗಳೆಲ್ಲ ಮಕ್ಕಳನ್ನು ಹುಡುಕಿಕೊಂಡು ಮನೆ ಮನೆಗೆ ಭೇಟಿ ನೀಡಿ ಒಂದು ಗೊತ್ತಾದ ಸುರಕ್ಷಿತ ಸ್ಥಳದಲ್ಲಿ ಮಕ್ಕಳನ್ನು ಕೂರಿಸಿ ಪಾಠ ಹೇಳಿದೆವು. ಹೀಗೆ ಅವರ ಕಲಿಕೆಯ ನಿರಂತರತೆಯನ್ನು ಸ್ವಲ್ಪ ಮಟ್ಟಿಗಾದರೂ ಕಾಪಾಡುವ ನಿಟ್ಟಿನಲ್ಲಿ ನಮ್ಮ ನಮ್ಮ ಪ್ರಯಾಣ ಸಫಲವಾಯಿತು.

ಕೆಲವು ಮಕ್ಕಳು ಕಲಿಕೆಯಲ್ಲಿ ತೊಡಗಿದರಾದರೂ ಇನ್ನೂ ಅನೇಕ ಮಕ್ಕಳು ವಂಚಿತರಾದರು. ಆನ್‌ಲೈನ್‌ ತರಗತಿ ತೆಗೆದುಕೊಳ್ಳಲು ನಡೆದ ಪ್ರಯತ್ನ ದೊಡ್ಡ ಮಟ್ಟದಲ್ಲಿ ಸಫಲವಾಗಲಿಲ್ಲ. ಎಲ್ಲ ಮಕ್ಕಳಿಗೆ ಫೋನ್ ದೊರೆಯುತ್ತಿರಲಿಲ್ಲ. ಟಿ.ವಿ ಇನ್ನೂ ಅನೇಕ ಮನೆಗಳಲ್ಲಿ ಇಲ್ಲ. ಇದ್ದರೂ ಅವು ಶಾಲೆಯ ಸ್ಥಾನ ತುಂಬಲು ಸಾಧ್ಯವಾಗಲಿಲ್ಲ. ಹೀಗೆ ಮಕ್ಕಳಿಗೆ ವಿದ್ಯಾಭ್ಯಾಸವನ್ನು ವಂಚಿಸಿದ ಆ ಕೊರೊನಾಕ್ಕೆ ಒಂದು ಧಿಕ್ಕಾರವಿರಲಿ. ಈಗ ಮತ್ತೆ ನಿಧಾನವಾಗಿ ಶಾಲೆ ಶುರುವಾಗುತ್ತಿದೆ. ಮಕ್ಕಳು ಸಹ ಶಾಲೆಗೆ ಬರುತ್ತಿದ್ದಾರೆ. ಅವರಲ್ಲಿ ಕಲಿಕೆಯ ಕೊರತೆ ಎದ್ದು ಕಾಣುತ್ತಿದೆ. ಅವರು ಮೊದಲಿನಂತಾಗಲು ಸಾಕಷ್ಟು ಸಮಯ ಬೇಕು. ನಾವು ಸಹ ಮೊದಲಿಗಿಂತಲೂ ಹೆಚ್ಚು ಶ್ರಮಿಸಬೇಕು.

-ಜಗನ್ನಾಥ ಬಿಸರಳ್ಳಿ
ಶಿಕ್ಷಕ, ಬಾಲಕಿಯರ ಸರ್ಕಾರಿ ಸಂಯುಕ್ತ ಪದವಿಪೂರ್ವ ಕಾಲೇಜು, ಕೊಪ್ಪಳ

***

ನೃತ್ಯ, ಅಭಿನಯದ ಮೂಲಕ ಕಲಿಕೆ
ಪಾಠಗಳನ್ನು ಮಕ್ಕಳು ತುಂಬಾ ಉತ್ಸಾಹದಿಂದಲೂ ಕಲಿಯಬಹುದು ಅಥವಾ ಕ್ಲಾಸ್‌ ಮುಗಿದರೆ ಸಾಕು ಎನ್ನುವ ಭಾವನೆಯಿಂದಲೂ ಕಲಿಯಬಹುದು. ಅವರು ಹೇಗೆ ತರಗತಿಯಲ್ಲಿ ತಲ್ಲೀನರಾಗುತ್ತಾರೆ ಎಂಬುದು ಶಿಕ್ಷಕರ ಕೈಯಲ್ಲಿ ಇರುತ್ತದೆ.

ಆನ್‌ಲೈನ್‌ ಕ್ಲಾಸ್‌ ಎಂದ ಕೂಡಲೇ ಈ ಕೊರೊನಾ ಪರಿಸ್ಥಿತಿಯಲ್ಲಿ ಹೇಗಪ್ಪಾ ಕ್ಲಾಸ್‌ ಮಾಡುವುದು ಎಂದು ಚಿಂತೆಗೆ ಒಳಪಟ್ಟೆ. ಆಗ ನನಗೆ ಹೊಳೆದಿದ್ದು ಪಾಠದ ಜೊತೆಗೆ ನೃತ್ಯ, ಸಂಗೀತ, ಅಭಿನಯವನ್ನು ಬೆರೆಸಿ ಮಕ್ಕಳಿಗೆ ಪಾಠ ಮಾಡಬಹುದೇ ಎನ್ನುವ ಪ್ರಶ್ನೆ. ಯಾವುದಕ್ಕೂ ಪ್ರಯೋಗ ಮಾಡುವ ಅಂದುಕೊಂಡು ನಮ್ಮ ಜೇಸೀಸ್‌ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕರನ್ನು ಸೇರಿಸಿ ABCD ಅಕ್ಷರಕ್ಕೆ ಸಂಬಂಧಪ‍ಟ್ಟ ಒಂದು ವಿಡಿಯೊ ಮಾಡಿದೆ. ಇದಕ್ಕೆ ಒಳ್ಳೆಯ ಪ್ರತಿಕ್ರಿಯೆ ಬರಲು ಆರಂಭವಾಯಿತು. ಇದೇ ರೀತಿ ಬೇರೆ ಬೇರೆ ವಿಡಿಯೊಗಳನ್ನು ಮಾಡಿದೆವು. ‘ಇದೇ ರೀತಿಯ ವಿಡಿಯೊಗಳನ್ನು ಮಾಡಿ ನಮಗೆಲ್ಲ ಹಾಕಿ’ ಎನ್ನುವ ರಾಜ್ಯದ ಎಲ್ಲ ಪೋಷಕರ ಒತ್ತಾಯಕ್ಕೆ ಕಟ್ಟುಬೀಳದಿರಲು ಸಾಧ್ಯವಾಗಲಿಲ್ಲ. 

ಮಕ್ಕಳ ಪಾಠಕ್ಕೆ ಸಂಬಂಧಪಟ್ಟಂತೆ ಅದೆಷ್ಟೋ ವಿಡಿಯೊಗಳನ್ನು ಮಾಡಿದೆ. ಅದನ್ನು ಅಷ್ಟೇ ಚೆನ್ನಾಗಿ ಎಲ್ಲಾ ಊರಿನ ಮಕ್ಕಳೂ ಕಲಿಯಲು ಆರಂಭಿಸಿದರು. ಈ ಕೆಲಸ ಫಲ ನೀಡಿತು. ಈಗಿನ ಕೊರೊನಾ ಪರಿಸ್ಥಿತಿಯಲ್ಲಿ ಮನೆಯಲ್ಲಿ ಇರುವ ಮಕ್ಕಳಿಗೆ ಈ ರೀತಿ ಕ್ರಿಯಾತ್ಮಕವಾಗಿ ವಿಡಿಯೊಗಳನ್ನು ಮಾಡಿದರೆ ಖಂಡಿತವಾಗಿಯೂ ಮಕ್ಕಳ ಮನಸ್ಸನ್ನು ಸುಲಭವಾಗಿ ಮುಟ್ಟಬಹುದು ಎಂಬುದು ಮನದಟ್ಟಾಯಿತು.

ಕೊರೊನಾ ಮುಗಿದು ಶಾಲೆ ಆರಂಭವಾಗುವ ತನಕ, ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ಯಾವುದೇ ಕೊರತೆ ಆಗಬಾರದು ಎಂಬುದು ನಮ್ಮ ಉದ್ದೇಶ. ಇನ್ನಷ್ಟು ವಿಡಿಯೊಗಳು ಮಕ್ಕಳ ಮುಂದೆ ಬರಲಿವೆ. ಕೊರೊನಾದಿಂದ ನಾನು ಬೇಕಾದಷ್ಟು ಪಾಠ ಕಲಿತೆ. ನನ್ನನ್ನು ಬದಲಾಯಿಸಿಕೊಂಡೆ. ಪರಿಸ್ಥಿತಿಗೆ ತಕ್ಕಂತೆ ನಾವೆಲ್ಲರೂ ಬದಲಾಗಬೇಕು. ಹಾಗಿದ್ದಲ್ಲಿ ಮಾತ್ರ ಮಕ್ಕಳನ್ನು ಸದೃಢ ದೇಶದ ಬಲಿಷ್ಠ ಪ್ರಜೆಗಳನ್ನಾಗಿ ನಾವು ಮಾಡಬಹುದು. ಹೊಸ ಹೊಸ ವಿಭಿನ್ನ ಪ್ರಯತ್ನಗಳು ಶಿಕ್ಷಕರ ಕಡೆಯಿಂದ ಆಗಲಿ. ಕಲಿಯಲು ತುಂಬಾ ಬಾಕಿ ಇದೆ. ಹಾಗೆಯೇ ಆ ಕಲಿಕೆಯ ರೆಕ್ಕೆಗಳನ್ನು ಮೂಡಿಸಿಕೊಂಡು ನಾವು ಸಾಗಬೇಕಿದೆ ದೂರ, ದೂರ...

-ವಂದನಾ ರೈ
ಶಿಕ್ಷಕಿ, ಜೇಸೀಸ್‌ ಶಾಲೆ, ಕಾರ್ಕಳ (ಉಡುಪಿ ಜಿಲ್ಲೆ)

***

ಫಲ ನೀಡಿದ ಗುಂಪುಗಳು
ಕಳೆದ ಎರಡು ವರ್ಷಗಳಲ್ಲಿ ವಿದ್ಯಾರ್ಥಿಗಳ ಕಲಿಕಾ ಪ್ರಕ್ರಿಯೆಯನ್ನು ಸಕ್ರಿಯಗೊಳಿಸಲು ಶಿಕ್ಷಕರು ಎದುರಿಸಿದ ಸವಾಲುಗಳು ಅಷ್ಟಿಷ್ಟಲ್ಲ. ಇಲ್ಲಿ ಕೇವಲ ಬೋಧನೆಯಷ್ಟೇ ಅಲ್ಲ, ಮಕ್ಕಳ ಆರೋಗ್ಯದ ಕುರಿತಾಗಿಯೂ ಕಾಳಜಿ ವಹಿಸುವುದು ಅಗತ್ಯವಾಗಿದೆ. ಶಿಕ್ಷಣದ ತಳಪಾಯದಂತಿರುವ ಪ್ರಾಥಮಿಕ ಶಾಲಾ ಶಿಕ್ಷಣದಲ್ಲಿ ವಿದ್ಯಾರ್ಥಿಗಳ ಕಲಿಕೆಯ ನಿರಂತರತೆಯನ್ನು ಕಾಯ್ದುಕೊಳ್ಳಲು ಒಬ್ಬ ಶಿಕ್ಷಕಿಯಾಗಿ ನಾನು ಕಂಡುಕೊಂಡ ನೂತನ ಬೋಧನಾ ಉಪಕ್ರಮಗಳು ಹಲವು.

ಎಳವೆಯ ಮಕ್ಕಳೊಂದಿಗೆ ಸದಾ ನಿಕಟತೆಯಿಂದ ಸಂವಹಿಸುವ ಶಿಕ್ಷಕರಿಗೆ ಅಂತರವನ್ನು ಕಾಯ್ದುಕೊಂಡು, ಮುನ್ನೆಚ್ಚರಿಕೆಯ ಕ್ರಮಗಳೊಂದಿಗೆ ಕಲಿಕೆಯನ್ನು ಸಾಧಿಸುವುದು ಎಂದರೆ ಕಡಿವಾಣ ಹಾಕಿದಂತೆಯೇ ಸರಿ! ಕೊರೊನಾ ಕಾಲದಲ್ಲಿ ಶಿಕ್ಷಕರು ವಿದ್ಯಾಗಮ ಯೋಜನೆಯ ಮೂಲಕ, ಮಕ್ಕಳನ್ನು ತಲುಪಲು ಅನುಕೂಲಕರ ಎನಿಸಿತಾದರೂ ಕೆಲವೇ ದಿನಗಳ ಈ ಬಯಲು ಆವರಣದ ತರಗತಿಗಳು ಸ್ಥಗಿತಗೊಂಡು ಪರ್ಯಾಯ ಮಾರ್ಗಗಳ ಮೊರೆ ಹೋಗುವಂತಾಯಿತು. 

ಸರ್ಕಾರಿ ಶಾಲೆಯ ಬಡ ಮಕ್ಕಳನ್ನು ತಂತ್ರಜ್ಞಾನ ಆಧಾರಿತ ಶಿಕ್ಷಣದ ಮೂಲಕ ತಲುಪುವುದು ಕಷ್ಟಕರ ಸವಾಲು. ಇದಕ್ಕೊಂದು ಪೂರಕವಾದ ವ್ಯವಸ್ಥೆ ಕಲ್ಪಿಸದೇ ಇದ್ದಲ್ಲಿ ಮಕ್ಕಳು ಕಲಿಕೆಯಲ್ಲಿ ಹಿಂದೆ ಉಳಿಯುವರು ಎಂಬ ಕಾರಣಕ್ಕೆ ಕ್ರಿಯಾಯೋಜನೆಯನ್ನು ಹಾಕಿಕೊಳ್ಳಲಾಯಿತು. ಇದನ್ನು ಕಾರ್ಯರೂಪಕ್ಕೆ ತರಲು ನಾನು ಸೇವೆ ಸಲ್ಲಿಸುತ್ತಿರುವ ಹಳ್ಳಿಯಲ್ಲಿ ಪದವೀಧರ ಸ್ವಯಂ ಸೇವಕರ ನೆರವಿನಿಂದ ಚಿಕ್ಕ ಗುಂಪುಗಳನ್ನು ರಚಿಸಿದೆವು. ಅವರು ವಾಸವಿರುವ ಜನವಸತಿಗಳ ಅಕ್ಕಪಕ್ಕದ ಮನೆಗಳ ವಿದ್ಯಾರ್ಥಿಗಳನ್ನು ಹೊಲ-ಗದ್ದೆಗಳಲ್ಲಿ, ದೇವಸ್ಥಾನಗಳ ಆವರಣಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ, ಓದು-ಬರಹ-ಸುಲಭ ಲೆಕ್ಕಾಚಾರದ ಪರಿಕಲ್ಪನೆಗಳನ್ನು ಆಧಾರವಾಗಿ ಇಟ್ಟುಕೊಂಡು ಪಾಠ ಮಾಡುವಂತೆ ಸಲಹೆ ನೀಡಿದೆವು. 

ತದನಂತರ ಮನೆ ಭೇಟಿಯ ಮೂಲಕ ಪ್ರತಿಯೊಂದು ಮಗುವಿನ ಪ್ರಗತಿಯನ್ನು ಪರಿಶೀಲಿಸಿ, ಸೂಕ್ತ ಮಾರ್ಗದರ್ಶನ ನೀಡಿದೆವು. ಹೀಗೆ ಯುವ ಸಮುದಾಯದ ಸಹಕಾರದಿಂದ ಕಲಿಕೆಯ ನಿರಂತರತೆಯೊಂದಿಗೆ, ಗುಣಾತ್ಮಕ ಶಿಕ್ಷಣದ ಗುರಿಯನ್ನು ಸಾಧಿಸಲು ಇದೊಂದು ಸಣ್ಣ ಪ್ರಯತ್ನವಾಯಿತು. ಈ ಯೋಜನೆ ತಕ್ಕ ಫಲವನ್ನೂ ನೀಡಿತು. ಈಗ ಭೌತಿಕ ತರಗತಿಗಳು ಮತ್ತೆ ಆರಂಭವಾಗುವ ಕಾಲಘಟ್ಟದಲ್ಲಿ ನಾವು ಬಂದು ನಿಂತಿರುವುದು ಸಂತಸ ಕೊಟ್ಟಿದೆ.

-ದೀಪಾ ದೇವಕತೆ
ಶಿಕ್ಷಕಿ, ಸರ್ಕಾರಿ ಪ್ರಾಥಮಿಕ ಶಾಲೆ, ಶಿರಗುಪ್ಪಿ (ಬಾಗಲಕೋಟೆ)

***

ಕಳೆದದ್ದು ಸಿಗುವುದು ಯಾವಾಗ...?
ಕಲಿಸುವವರು ಮತ್ತು ಕಲಿಯುವವರ ನಡುವೆ ನಡೆಯುವ ನೇರ ಸಂವಹನವೇ ಶಿಕ್ಷಣದ ಮುಖ್ಯವಾದ ಭಾಗ. ಇಂತಹ ಅತಿಮುಖ್ಯ ಅವಕಾಶವೇ ಇಲ್ಲವಾಗಿದ್ದು ಕಲಿಯುವ ಅವಕಾಶಕ್ಕೆ ಬಿದ್ದ ದೊಡ್ಡ ಪೆಟ್ಟು.

ಇದೊಂದು ಸಣ್ಣ ಉದಾಹರಣೆ ಮಾತ್ರ. ಗಣಿತದಲ್ಲಿ ಮಕ್ಕಳು ಸ್ಥಾನ, ಸ್ಥಾನಬೆಲೆಯನ್ನು ಅರಿತುಕೊಳ್ಳಲು ಯಾವುದಾದರೂ ವಸ್ತುಗಳನ್ನು ಮೊದಲು ಬಿಡಿ ಬಿಡಿಯಾಗಿ ಎಣಿಸಬೇಕಾಗುತ್ತದೆ. ನಂತರ ಅವುಗಳನ್ನು ಹತ್ತರ ಗುಂಪುಗಳಲ್ಲಿ ಜೋಡಿಸಬೇಕಾಗುತ್ತದೆ. ಆ ನಂತರ ಹತ್ತು ಹತ್ತರ ಗುಂಪುಗಳನ್ನು ಜೋಡಿಸಬೇಕಾಗುತ್ತದೆ. ಇವೆಲ್ಲವನ್ನೂ ಮಕ್ಕಳು ಸ್ನೇಹಿತರ ಜೊತೆಗೂಡಿ ಆಡುತ್ತಾ, ತಮ್ಮ ತಮ್ಮಲ್ಲೇ ಮಾತಾಡುತ್ತಾ ಮಾಡುವುದರಿಂದ ಕಲಿಕೆಯ ಮಟ್ಟ ಸುಲಭವಾಗಿ ಸಾಧಿತವಾಗುತ್ತದೆ. ಭಾಷಾ ಕಲಿಕೆಯಲ್ಲೂ ಸ್ವರ, ವ್ಯಂಜನ, ಸಂಯುಕ್ತಾಕ್ಷರಗಳನ್ನು ಕಲಿಯುವಾಗ ಅವುಗಳ ಉಚ್ಚಾರವನ್ನು ಆಲಿಸುವ, ಪುನರುಚ್ಚರಿಸುವ, ತಪ್ಪಾದರೆ ಅಲ್ಲಿಯೇ ಸರಿಪಡಿಸಿಕೊಳ್ಳುವ ಅನುಕೂಲಗಳಿವೆ.

ಕಲಿಸುವ ಸಮಯದಲ್ಲೇ ವಿಷಯ ಅರ್ಥವಾಗಿರುವುದು, ಆಗದಿರುವುದು ಆ ಮಕ್ಕಳ ಕಣ್ಣುಗಳಲ್ಲೇ ಪ್ರತಿಫಲಿತವಾಗುತ್ತಿರುತ್ತದೆ. ಇದರಿಂದ ಶಿಕ್ಷಕರೂ ತಕ್ಷಣವೇ ಕಲಿಕಾ ದೋಷಗಳನ್ನು ಸರಿಪಡಿಸುವ ಅಥವಾ ಇನ್ನಿತರ ಮಾರ್ಗಗಳನ್ನು ಹುಡುಕಿಕೊಳ್ಳುವ ಸಂಭವವಿರುತ್ತದೆ. ಆದರೆ ಮಕ್ಕಳನ್ನು ಒಂದೆಡೆ ಸೇರಿಸಿ ಇಂತಹ ವಿಪುಲ ಅವಕಾಶಗಳನ್ನು ಒದಗಿಸುತ್ತಿದ್ದ ಶಾಲೆಗಳನ್ನೇ ಮುಚ್ಚಿದ್ದು ತೊಂದರೆಯಾಗಿದೆ. ವಿದ್ಯಾಗಮವು ನಾನಾ ಕಾರಣಗಳಿಂದ ಎಲ್ಲಾ ಮಕ್ಕಳನ್ನು ತಲುಪಲಿಲ್ಲ. 1ರಿಂದ 3ನೇ ತರಗತಿ ಮಕ್ಕಳಿಗೆ ಅಭ್ಯಾಸದ ಹಾಳೆಗಳನ್ನು ಕೊಟ್ಟು ನಡೆಸುತ್ತಿರುವ ಸೇತುಬಂಧವೂ ಎಲ್ಲಾ ಮಕ್ಕಳನ್ನು ಒಳಗೊಳ್ಳುತ್ತಿಲ್ಲ. ಬಹಳಷ್ಟು ಕಡೆ ಶಿಕ್ಷಕರ ಸೂಚನೆಗಳನ್ನು ಮಕ್ಕಳಿಗೆ ದಾಟಿಸಬೇಕಾದ ಸುಗಮಕಾರರೇ ಇಲ್ಲ!

ಆನ್‌ಲೈನ್‌ ಕಲಿಕೆ ಎನ್ನುವುದು ದೊಡ್ಡ ಭ್ರಮೆ ಎಂಬುದು ಈಗಾಗಲೇ ಎಲ್ಲರ ಅರಿವಿಗೆ ಬಂದಿದೆ. ಈ ಕಲಿಕೆಗೆ ಮುಖ್ಯವಾಗಿ ಬೇಕಿರುವುದು ಒಂದು ಆ್ಯಂಡ್ರಾಯ್ಡ್ ಫೋನ್, ದುಡ್ಡುಕೊಟ್ಟು ಕೊಳ್ಳಬೇಕಿರುವ ಡೇಟಾ, ಜೊತೆಗೆ ಅದನ್ನು ಬಳಸುವ ವಿವೇಚನೆ. ಈ ಹೊಸ ತಲೆಮಾರಿನ ಸರಕು ಕೊಳ್ಳುವ ಸಾಮರ್ಥ್ಯ ಕೋವಿಡ್ ಬರುವ ಕಾಲಕ್ಕೆ ಬಹಳಷ್ಟು ಗ್ರಾಮಾಂತರ ಜನರಿಗೆ ಇರಲೇ ಇಲ್ಲ.

ನಾಡಿನ ಅತಿಹೆಚ್ಚು ವಿದ್ಯಾರ್ಥಿಗಳಿರುವುದು ಗ್ರಾಮಾಂತರದಲ್ಲೇ ಎಂಬುದು ನೆನಪಿರಲಿ. ಆ್ಯಂಡ್ರಾಯ್ಡ್ ಫೋನ್ ಇರುವ ಪೋಷಕರು ಹೊಲದಲ್ಲೋ, ಕೂಲಿ ಕೆಲಸದಲ್ಲೋ ಇದ್ದಾಗಲೇ ಆನ್‌ಲೈನ್‌ ಪಾಠಗಳು ನಡೆಯುವ ಸಂದರ್ಭಗಳು ಹೆಚ್ಚು. ಇಂತಹ ಆನ್‌ಲೈನ್‌ ಬೋಧನೆ-ಕಲಿಕೆ ನಡೆಸಬಹುದಾದಷ್ಟು ಪ್ರಬುದ್ಧತೆಯ ಹಂತಕ್ಕೆ ನಾವಿನ್ನೂ ವಿಕಾಸವಾಗಿಲ್ಲ ಎನಿಸುತ್ತದೆ. ನಿಯಂತ್ರಿಸಲು ಕಷ್ಟವಾಗುವ ಸಂತೆ, ಜಾತ್ರೆ ಮುಂತಾದವುಗಳಿಂದ ರೋಗ ಸುಲಭವಾಗಿ ಹರಡಬಹುದು ಎಂಬ ಕಾರಣಕ್ಕೆ ಅವುಗಳ ಮೇಲೆ ನಿಷೇಧ ಹೇರುವುದು ಸರಿ. ಸುಲಭವಾಗಿ ನಿಯಂತ್ರಿಸಬಹುದಾದ ಶಾಲೆಗಳನ್ನು ಮುಚ್ಚಿದ್ದು ಒಪ್ಪಲು ಕಷ್ಟ. ಇದರಿಂದ, ಹೊಸ ಆಲೋಚನೆ, ಜ್ಞಾನ ಪಡೆಯಬೇಕಿದ್ದ ನಾಳಿನ ಜನಾಂಗದ ಅವಕಾಶಗಳನ್ನು ಮೊಟಕುಗೊಳಿಸಿದಂತಾಯಿತು ಅಷ್ಟೆ.

-ಎಂ.ಜೆ.ರಾಜೀವಗೌಡ ಮೇಲೂರು
ಶಿಕ್ಷಕ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಚೀಮಂಗಲ (ಚಿಕ್ಕಬಳ್ಳಾಪುರ ಜಿಲ್ಲೆ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು