ಭಾನುವಾರ, ಏಪ್ರಿಲ್ 2, 2023
31 °C
ಸಂವಿಧಾನದ ಆಶಯಗಳ ಸಾಕಾರಕ್ಕೆ ಕೈಜೋಡಿಸುವುದು ಇಂದಿನ ಅಗತ್ಯ

ಡಾ. ಶಿವಮೂರ್ತಿ ಮುರುಘಾ ಶರಣರ ಲೇಖನ: ಧಾರ್ಮಿಕ ಕಟ್ಟುಪಾಡುಗಳ ಬಿಗಿಹಿಡಿತ

ಡಾ. ಶಿವಮೂರ್ತಿ ಮುರುಘಾ ಶರಣರು Updated:

ಅಕ್ಷರ ಗಾತ್ರ : | |

ಮಾನವ ತನ್ನ ಅನುಕೂಲಕ್ಕೆಂದು ಜಾತಿ, ದೇವರು ಮತ್ತು ಧರ್ಮವನ್ನು ಸೃಷ್ಟಿಸಿದ. ಜಾತಿಯ ಮೂಲಕ ಮಾನವ ಜನಾಂಗವನ್ನು ಶ್ರೇಣೀಕೃತಗೊಳಿಸುತ್ತ ಒಡೆದು ಆಳುವ ನೀತಿಯನ್ನು ಅನುಸರಿಸಿದ. ಕುಲಕಸುಬುಗಳ ಆಧಾರದ ಮೇಲೆ ಜಾತಿ ನಿರ್ಮಾಣವಾಯಿತೇ ವಿನಾ ಜಾತಿಯ ಮೇಲೆ ಕುಲಕಸುಬುಗಳಲ್ಲ.

ದೈವೀ ಆರಾಧನೆಯಲ್ಲಿ ಪೂಜೆಯು ಪ್ರಮುಖ ಪಾತ್ರ ವಹಿಸುತ್ತದೆ. ಅದರಂತೆಯೇ ಪ್ರಾರ್ಥನೆ. ಪೂಜೆ- ಪ್ರಾರ್ಥನೆಯು ಎಲ್ಲ ಕಸುಬುಗಳಿಗಿಂತ ಶ್ರೇಷ್ಠವೆಂದು ಪರಿಗಣಿಸಿ, ಉಳಿದ ಕಸುಬುಗಳು ಅದರ ಕೆಳಗಡೆ ಬರುವಂತೆ ನೋಡಿಕೊಳ್ಳಲಾಯಿತು. ಈ ಶ್ರೇಣಿ ಮತ್ತು ಏಣಿಯನ್ನು ತೆಗೆಯಲು ಪ್ರಯತ್ನಿಸಿತು 12ನೇ ಶತಮಾನದ ಶರಣ ಸಮಾಜ-

ದೇವಸಹಿತ ಭಕ್ತ ಮನೆಗೆ ಬಂದಡೆ
ಕಾಯಕವಾವುದೆಂದು ಬೆಸಗೊಂಡೆನಾದಡೆ
ನಿಮ್ಮಾಣೆ! ನಿಮ್ಮ ಪುರಾತರಾಣೆ! ತಲೆದಂಡ! ತಲೆದಂಡ!
ಕೂಡಲಸಂಗಮದೇವಾ,
ಭಕ್ತರಲ್ಲಿ ಕುಲವನರಸಿದಡೆ
ನಿಮ್ಮ ರಾಣಿವಾಸದಾಣೆ

ಎಂಬುದು ವಚನಕಾರರ ನಿರ್ಣಯ. ಸ್ವತಃ ದೇವರು ತನ್ನ ಭಕ್ತನೊಂದಿಗೆ ಬಂದರೆ ಇಬ್ಬರ ಕಾಯಕವನ್ನು ವಿಭಜಿಸಲಾರೆ; ಯಾವ ಕಾಯಕವೆಂದು ಪ್ರಶ್ನಿಸಲಾರೆ, ಭಕ್ತನನ್ನು ದೈವೀ ಸ್ಥಾನಕ್ಕೇರಿಸಿ, ಅವನು ನಿರ್ವಹಿಸುವ ಕಾಯಕವು ಕೈಲಾಸಕ್ಕೆ ಸಮಾನ ಎಂಬುದನ್ನು
ಪ್ರಮಾಣೀಕರಿಸಿತು. ಕಾರಣ ಶರಣಧರ್ಮ ಅಥವಾ ಬಸವತತ್ವದಲ್ಲಿ ಕಾಯಕದಲ್ಲಿ ಮೇಲು- ಕೀಳು ಎಂಬುದು ಇರುವುದಿಲ್ಲ.

ಮೇಲರಿಮೆ ಮತ್ತು ಕೀಳರಿಮೆ ಎಂಬುದನ್ನು ಕಿತ್ತುಹಾಕಲು ವಚನಕಾರರು ಕಾಯಕ ಪರಿಕಲ್ಪನೆಯನ್ನು ಪರಿಚಯಿಸಿದರು. ಎಲ್ಲ ಕಾಯಕಗಳು ಶ್ರೇಷ್ಠವೆಂದು ಸಾರಿದರು. ಪೂಜೆ ಕಾಯಕವಲ್ಲ, ಕಾಯಕವೆ ಪೂಜೆ ಎಂಬ ವಿನೂತನ ಸಿದ್ಧಾಂತವನ್ನು ಬಸವಾದಿ ಶರಣರು ಜಗತ್ತಿಗೆ ನೀಡುವುದರ ಮುಖಾಂತರ ಸಮಸಮಾಜದ ಸ್ಥಾಪನೆ.

 ಇಷ್ಟಾದರೂ ಜಾತಿಯ ಜ್ಯೇಷ್ಠತೆ ತಗ್ಗಲಿಲ್ಲ. ಅದನ್ನು ಮುತುವರ್ಜಿಯಿಂದ ಮುಂದುವರಿಸಿಕೊಂಡು ಬರ ಲಾಯಿತು. ವರ್ಣಾಶ್ರಮ ವ್ಯವಸ್ಥೆ ಮುಖಾಂತರ ಜಾತಿಯ ಮೇಲು- ಕೀಳು ಜೀವಂತ. ಜಾತಿ ವ್ಯವಸ್ಥೆಯ ಹೃದಯವೇ ಅಸಮಾನತೆ ಮತ್ತು ಅಸ್ಪೃಶ್ಯತೆ. ಇಂದಿಗೂ ಇದು ಜೀವಂತವಾಗಿದೆ. ಜಾತಿ ವ್ಯವಸ್ಥೆ ಸೃಷ್ಟಿಸಿದ ಅಸಮಾನತೆಯನ್ನು ತೊಡೆದುಹಾಕಲು ಇನ್ನೂವರೆಗೆ ಸಾಧ್ಯವಾಗಿಲ್ಲ. ಅದಕ್ಕಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಸಂವಿಧಾನಬದ್ಧವಾದ ಮೀಸಲಾತಿ. ಸಾಲದೆಂಬಂತೆ ಮುಂದುವರಿದವರು ಸಹ ಮೀಸಲಾತಿ ಸೌಲಭ್ಯ ಪಡೆಯಲು ಹೋರಾಟ ನಡೆಸಿದ್ದಾರೆ.

ಸದ್ಯಕ್ಕೆ ಜಾತೀಯತೆಯಾಗಲೀ ಮೀಸಲಾತಿಗೆ ಸಂಬಂಧಿಸಿದ ಬೇಡಿಕೆಯಾಗಲೀ ಕಡಿಮೆ ಆಗುವ ಲಕ್ಷಣ ಕಂಡುಬರುತ್ತಿಲ್ಲ. ಜಾತಿ ವ್ಯವಸ್ಥೆ ಇರುವವರೆಗೂ ಮೀಸಲಾತಿ ವ್ಯವಸ್ಥೆ ಮಾತ್ರವಲ್ಲ, ಅಸ್ಪೃಶ್ಯತೆ ಮತ್ತು ಅಸಮಾನತೆ ಮುಂದುವರಿಯುವ ಮುನ್ಸೂಚನೆಗಳು ಕಂಡುಬರುತ್ತವೆ.

ದೇವರು ಎಂಬುದು ಭಾವನಾತ್ಮಕವಾದುದು. ಅದರ ಹೆಸರಿನಲ್ಲಿ ಸೃಷ್ಟಿಯಾಗಿರುವ ಸಂಕುಚಿತ ಭಾವನೆಗಳು ಸವರ್ಣೀಯರು ಮತ್ತು ಅವರ್ಣೀಯರೆಂಬ ಭಿನ್ನ ಭಾವನೆಗೆ ಅವಕಾಶ ಮಾಡಿಕೊಟ್ಟಿವೆ. ಸವರ್ಣೀಯರು ಶ್ರೇಷ್ಠರು, ಅವರ್ಣೀಯರು ಕನಿಷ್ಠರು ಎಂಬ ತರತಮ ಭಾವ. ದೈವತ್ವ ಮತ್ತು ದೇವರು ದೊಡ್ಡದಿರಬಹುದು; ವಿಶಾಲವೂ ಆಗಿರಬಹುದು. ದೇವೀ ಆರಾಧನೆ ಮಾಡುವ ಮಾನವ ದೊಡ್ಡವನಲ್ಲವಲ್ಲ? ದೇವರನ್ನು ಆರಾಧಿಸಿ ಅವನು ದೇವರಾಗುವುದಿಲ್ಲ. ಆರಾಧನೆ ಅಥವಾ ಅರ್ಚನೆ ವೇಳೆಯಲ್ಲಿ ದೈವೀಭಾವನೆ ಜಾಗೃತ. ಅದರಿಂದ ಹೊರಬಂದಾಗ ಎಂದಿನಂತೆ ಅವನಲ್ಲಿ ಮಾನವಗುಣಗಳು.

ಪೂಜೆ- ಪ್ರಾರ್ಥನೆಗಳು ಒಂದು ಅವಧಿಗೆ ಸೀಮಿತ. ಕಾಯಕವು ಪೂರ್ಣಾವಧಿ. ಪೂಜೆ-ಪ್ರಾರ್ಥನೆ ಅಲ್ಪಾವಧಿ. ಮಾನವ ತಾನು ಮಾಡುವ ಕರ್ತವ್ಯ, ಕಾರ್ಯ, ಕ್ರಿಯೆ, ಕಾಯಕ ಪ್ರತೀ ಹಂತದಲ್ಲೂ ದೈವೀಭಾವನೆ (ದೇವರು, ಸಂತ, ಶರಣ, ಸತ್ಪುರುಷರ ಸ್ಮರಣೆ) ನಿರಂತರವಾದರೆ ತಾ ಮಾಡುವ ಕಾಯಕವು ಪೂಜೆ ಅನಿಸಿಕೊಳ್ಳುತ್ತದೆ. ವಾಸ್ತವದಲ್ಲಿ ಹಾಗೆ ಆಗುವುದಿಲ್ಲ. ದೇವರ ಸುತ್ತ ಕೆಲವೊಂದು ಕಟ್ಟುಪಾಡುಗಳನ್ನು ವಿಧಿಸಿಕೊಂಡಿರುವುದರಿಂದ ಅಲ್ಲಿಯೂ ಸ್ಪೃಶ್ಯ- ಅಸ್ಪೃಶ್ಯ ಭಾವನೆ.

ರಾಷ್ಟ್ರದ ಪ್ರಥಮ ಪ್ರಜೆಯಾದ ರಾಮನಾಥ ಕೋವಿಂದ ಅವರು ಪುರಿ ಜಗನ್ನಾಥ ದೇವಾಲಯಕ್ಕೆ ಭೇಟಿ ಕೊಡುತ್ತಾರೆ. ಅವರು ಹೊಂದಿರುವ ಹುದ್ದೆಯನ್ನು ನೋಡಿಯಾದರೂ ದೇವರ ದರ್ಶನದ ವೇಳೆ ಅಡ್ಡಿ ಉಂಟುಮಾಡದಿರಬಹುದಿತ್ತು. ಅಲ್ಲಿನ ಪುರೋಹಿತ ವರ್ಗದ ಕೆಲವರು ರಾಷ್ಟ್ರದ ದೊಡ್ಡ ಹುದ್ದೆಯನ್ನು ನೋಡಲಿಲ್ಲ. ದೊಡ್ಡ ಹುದ್ದೆಯನ್ನು ಹೊಂದಿರುವ ವ್ಯಕ್ತಿಯು ಯಾವ ಜಾತಿಗೆ ಸೇರಿದವರು ಎಂಬುದನ್ನು ನೋಡಿದರು. ಅಸ್ಪ‍ೃಶ್ಯ ಎನ್ನಲಾಗುವ ಜಾತಿಗೆ ಸೇರಿದ ರಾಷ್ಟ್ರಪತಿ ಕೋವಿಂದ ಅವರಿಗೆ ದೇವರ ದರ್ಶನದ ವೇಳೆ ಕಿರಿಕಿರಿ ಉಂಟುಮಾಡಲಾಯಿತು.

ರಾಷ್ಟ್ರಕವಿ ಹಾಗೂ ನೊಬೆಲ್‌ ಪ್ರಶಸ್ತಿ ಪುರಸ್ಕೃತರಾದ ರವೀಂದ್ರನಾಥ ಟ್ಯಾಗೋರರು ಪರಲಿ ಬ್ರಾಹ್ಮಣ ಜಾತಿಗೆ ಸೇರಿದವರೆಂಬ ಕಾರಣಕ್ಕಾಗಿ ಜಗನ್ನಾಥ ದರ್ಶನವನ್ನು ನಿರಾಕರಿಸಲಾಗುತ್ತದೆ. ರಾಷ್ಟ್ರಪಿತ ಗಾಂಧಿಯವರು ಮುಸ್ಲಿಮರು, ಕ್ರಿಶ್ಚಿಯನ್ನರು, ದಲಿತರು ಮತ್ತು ಎಲ್ಲರನ್ನೂ ಕೂಡಿಕೊಂಡು ಸ್ವಾತಂತ್ರ್ಯ ಸಂಗ್ರಾಮ ನಡೆಸಿದರು. ಆಗ ಇಡೀ ಭಾರತವೇ ಒಂದಾಗಿತ್ತು. ಒಂದಾಗಿ ಹೋರಾಡಿತು. ಸ್ವಾತಂತ್ರ್ಯವನ್ನು ತಂದುಕೊಟ್ಟಂತಹ ಗಾಂಧೀಜಿ ಅವರಿಗೂ ದೇವಸ್ಥಾನದ ಪ್ರವೇಶ ನಿರಾಕರಿಸಲಾಯಿತು.

ಇಂದಿರಾ ಗಾಂಧಿ ಅವರು ರಾಷ್ಟ್ರ ಕಂಡಂತಹ ಶ್ರೇಷ್ಠ ಮಹಿಳೆ. ಪ್ರಧಾನಿ ಆಗಿದ್ದಂಥವರು. ಇಂದಿರಾ ಗಾಂಧಿಯವರು ಪಾರ್ಸಿ ವ್ಯಕ್ತಿಯನ್ನು ಮದುವೆ ಆಗಿದ್ದಾರೆಂದು ಅವರಿಗೂ ಪ್ರವೇಶ ನಿರಾಕರಣೆ.

ಇಂತಹ ನಿರಾಕರಣೆ, ನಿಷೇಧವು 12ನೇ ಶತಮಾನ ದಲ್ಲಿಯೂ ಇತ್ತು. ಇದನ್ನೆಲ್ಲ ಗಮನಿಸಿದ ಶರಣ ಸಮಾಜವು ದೇವಾಲಯ ಸಂಸ್ಕೃತಿಯನ್ನು ನಿರಾಕರಿಸಿತು. ಅಂದಿನ ದಿನಗಳಲ್ಲಿ ದೇವಾಲಯ ದರ್ಶನವು ಕೆಲವರಿಗೆ ಮಾತ್ರ ಸೀಮಿತವಾಗಿತ್ತು. ಗರ್ಭಗುಡಿ ಸಂಸ್ಕೃತಿ.

ಅಲಕ್ಷಿತರನ್ನು ಸಂಘಟಿಸಿದ ಬಸವಣ್ಣನವರು, ದೇವಾ ಲಯದಲ್ಲಿ ಅವರಿಗೆ ಪ್ರವೇಶ ನಿಷೇಧಿಸಿರುವುದನ್ನು ಗಮ ನಿಸುತ್ತಾರೆ: ಇಂಥ ಅಸಮಾನತೆಯು ನಿರ್ಲಕ್ಷಿತರಲ್ಲಿ ಕೀಳ ರಿಮೆಗೆ ಕಾರಣವಾಗುತ್ತದೆಂದು, ಅದಕ್ಕಾಗಿ ಒಂದು ತತ್ವವನ್ನು ಅನುಸರಿಸಲು ಮುಂದಾಗುತ್ತಾರೆ. ಅದು ತಾಂತ್ರಿಕವೂ ಅಹುದು, ತಾತ್ವಿಕವೂ ಅಹುದು. ಅದುವೇ ಇಷ್ಟಲಿಂಗ ಧಾರಣೆ.

ಜನಿವಾರದ ಜತೆಯಲ್ಲಿ ಉಪನಯನ ಪದ್ಧತಿ ಇರು ವಂತೆ ಇಷ್ಟಲಿಂಗ ಧಾರಣೆಯೊಟ್ಟಿಗೆ ದೀಕ್ಷಾ ಪದ್ಧತಿಯನ್ನು ಪರಿಚಯಿಸಲಾಯಿತು. ಬಸವಣ್ಣನವರ ವಚನ-

ಉಳ್ಳವರು ಶಿವಾಲಯವ ಮಾಡಿಹರು
ನಾನೇನ ಮಾಡುವೆ ಬಡವನಯ್ಯಾ
ಎನ್ನ ಕಾಲೇ ಕಂಬ

ದೇಹವೇ ದೇಗುಲ
ಶಿರ ಹೊನ್ನ ಕಲಶವಯ್ಯಾ
ಕೂಡಲಸಂಗಮದೇವಾ, ಕೇಳಯ್ಯಾ
ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ.

ದೇವಾಲಯ ಸಂಸ್ಕೃತಿಗೆ ಬದಲಾಗಿ ಜೀವಾಲಯ ಸಂಸ್ಕೃತಿಯನ್ನು ಪ್ರಚುರಪಡಿಸಿದರು. ಅಂಗದ ಮೇಲೆ ಇಷ್ಟಲಿಂಗ ಧರಿಸುವ ಪದ್ಧತಿಯನ್ನು ಜಾರಿಗೊಳಿಸಿದ್ದು, ಶರೀರವು ನಡೆದಾಡುವ ದೇವಾಲಯ; ಶರಣನು ಮಾತನಾಡುವ ದೇವರು ಆಗುತ್ತಾನೆಂಬ ಪರಿಕಲ್ಪನೆ. ತನ್ಮೂಲಕ ದೇಹವೆ ದೇವಾಲಯ.

ಬಾಬಾ ಸಾಹೇಬರು ರಚಿಸಿದಂತಹ ಭಾರತ ಸಂವಿಧಾನವು ಸರ್ವರಿಗೂ ಸಮನಾದ ಅವಕಾಶ ಕಲ್ಪಿಸಿದೆ. ಸರ್ವರಿಗೂ ಸಮಪಾಲು, ಸರ್ವರಿಗೂ ಸಮ ಬಾಳು ಎಂಬ ತತ್ವ. ಧಾರ್ಮಿಕ ಕಟ್ಟುಪಾಡುಗಳು ವ್ಯವಸ್ಥೆ ಯನ್ನು ಆಳುತ್ತಿವೆ. ಉಚ್ಚ- ನೀಚ ಭಾವನೆಗೆ ಅವಕಾಶ ಮಾಡಿಕೊಟ್ಟಿವೆ. ಸಂವಿಧಾನವನ್ನು ರಾಷ್ಟ್ರಗ್ರಂಥವೆಂದು ಒಪ್ಪಿಕೊಂಡು, ಅದರಂತೆ ನಡೆದಾಗ ಸಮ ಸಮಾಜ.

ಸಂವಿಧಾನ ನೀಡುವಂತಹ ಸೌಲಭ್ಯಗಳು ಬೇಕು, ಅದು ಬಯಸುವ ಸಮಾನತೆ ಬೇಡವೆಂದರೆ ಹೇಗೆ?

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು