ಮಂಗಳವಾರ, ಮಾರ್ಚ್ 28, 2023
32 °C
ಸೆಚುವಾನ್‌ನಲ್ಲಿ ಜಾರಿಗೆ ತಂದಿರುವ ಹೊಸ ನೀತಿಯು ಎಲ್ಲರ ಗಮನ ಸೆಳೆದಿದೆ

ವಿಶ್ಲೇಷಣೆ | ಚೀನಾ; ಮಕ್ಕಳನ್ನು ಹೆರಲು ಇಲ್ಲ ನಿರ್ಬಂಧ

ನಿಕೋಲ್ ಹಾಂಗ್, ಜಿಕ್ಸು ವಾಂಗ್ Updated:

ಅಕ್ಷರ ಗಾತ್ರ : | |

ಚೀನಾ ದೇಶದಲ್ಲಿ ಬಹುತೇಕ ದಂಪತಿ ಮೂವರು ಮಕ್ಕಳನ್ನು ಮಾತ್ರ ಹೊಂದಬಹುದು. ಆದರೆ ದೇಶದ ಒಂದು ಪ್ರಾಂತ್ಯವು (ಸೆಚುವಾನ್), ಎಷ್ಟಾದರೂ ಮಕ್ಕಳಿಗೆ ಜನ್ಮ ಕೊಡಬಹುದು ಎನ್ನುತ್ತಿದೆ. ಅಷ್ಟೇ ಅಲ್ಲ, ಮದುವೆ ಆಗದಿದ್ದವರೂ ಮಕ್ಕಳಿಗೆ ಜನ್ಮ ಕೊಡಲು ಅಡ್ಡಿಯಿಲ್ಲ ಎಂದು ಆ ಪ್ರಾಂತ್ಯವು ಹೇಳಿದೆ. ಈ ನಿಯಮವು ಫೆಬ್ರುವರಿಯಲ್ಲಿ ಜಾರಿಗೆ ಬಂದಿದೆ. 1960ರ ದಶಕದ ನಂತರದಲ್ಲಿ ಮೊದಲ ಬಾರಿಗೆ ಚೀನಾದ ಜನಸಂಖ್ಯೆಯು ಕುಸಿದಿದ್ದು; ಅದರ ನಂತರದಲ್ಲಿ ಆ ದೇಶವು ಜನಸಂಖ್ಯೆ ಯನ್ನು ಹೆಚ್ಚಿಸಲು ಎಷ್ಟು ತರಾತುರಿಯಲ್ಲಿ ಆದ್ಯತೆ ನೀಡುತ್ತಿದೆ ಎಂಬುದನ್ನು ಇದು ತೋರಿಸುತ್ತಿದೆ.

ಚೀನಾದಲ್ಲಿ ಇನ್ನೂ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೆಲವು ನಗರಗಳಲ್ಲಿ ಅಧಿಕಾರಿಗಳು, ಜನಸಂಖ್ಯೆಯನ್ನು ಹೆಚ್ಚಿಸಲು ವೀರ್ಯ ದಾನ ಮಾಡುವಂತೆ ಕಾಲೇಜು ವಿದ್ಯಾರ್ಥಿಗಳಿಗೆ ಮನವಿ ಮಾಡುತ್ತಿದ್ದಾರೆ! ಆದರೆ ಈ ಕ್ರಮಗಳ ಬಗ್ಗೆ ಟೀಕೆಗಳು, ಪ್ರಶ್ನೆಗಳು, ಚರ್ಚೆಗಳು ಹುಟ್ಟಿಕೊಂಡಿವೆ.

ಚೀನಾದಲ್ಲಿ ‘ಒಂದೇ ಮಗು’ ನೀತಿ ಜಾರಿಯಲ್ಲಿ ಇದ್ದ ಅವಧಿಯಲ್ಲಿ ಜನಿಸಿದವರು ಈಗ ಹೆಚ್ಚು ಮಕ್ಕಳನ್ನು ಹೆರಲು ಸರ್ಕಾರ ನೀಡುತ್ತಿರುವ ಆಮಿಷಗಳಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಮಕ್ಕಳನ್ನು ಬೆಳೆಸಿ ದೊಡ್ಡವರನ್ನಾಗಿ ಮಾಡುವುದು ಚೀನಾದಲ್ಲಿ ಬಹಳ ದುಬಾರಿಯ ಕೆಲಸ. ಹೀಗಾಗಿ, ವಯಸ್ಸಾದ ತಂದೆ–ತಾಯಿಯನ್ನು ನೋಡಿಕೊಳ್ಳುವ ಖರ್ಚು, ಹೆಚ್ಚುತ್ತಿರುವ ಶಿಕ್ಷಣದ ವೆಚ್ಚ, ಮನೆ ಹಾಗೂ ಆರೋಗ್ಯದ ವೆಚ್ಚಗಳ ವಿಚಾರವಾಗಿ ಈ ದಂಪತಿಗಳು ಹೊಂದಿರುವ ಆತಂಕಗಳನ್ನು ಶಮನಗೊಳಿಸುವ ಮಟ್ಟಕ್ಕೆ ಸರ್ಕಾರವು ಒಡ್ಡುತ್ತಿರುವ ಪ್ರಲೋಭನೆಗಳು ಇಲ್ಲ.

‘ಮಕ್ಕಳನ್ನು ಹೆರುವುದು ಬೇಡ ಎಂದೇನೂ ಜನರಿಗೆ ಅನ್ನಿಸಿಲ್ಲ. ಆದರೆ ಇಲ್ಲಿ ಮೂಲಭೂತ ಸಮಸ್ಯೆ ಎಂದರೆ ಅವರಿಗೆ ಮಕ್ಕಳನ್ನು ಹೆತ್ತು, ಅವರನ್ನು ನೋಡಿಕೊಳ್ಳು ವುದರ ವೆಚ್ಚಗಳನ್ನು ನಿಭಾಯಿಸುವುದು ಕಷ್ಟವಾಗು ತ್ತಿದೆ’ ಎಂದು ಸೆಚುವಾನ್‌ ಪ್ರಾಂತ್ಯದಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿರುವ 26 ವರ್ಷ ವಯಸ್ಸಿನ ಲು ಯಿ ಹೇಳುತ್ತಾರೆ. ಮಕ್ಕಳನ್ನು ಹೊಂದುವ ಬಗ್ಗೆ ಆಲೋಚಿಸಬೇಕು ಎಂದಾದರೆ ತಾನು ಈಗ ಸಂಪಾದಿಸುತ್ತಿ‌ರುವುದರ ಎರಡು ಪಟ್ಟು ಹೆಚ್ಚು ಸಂಪಾದಿಸಲು ಶುರು ಮಾಡಬೇಕು ಎಂದು ಅವರು ತಿಳಿಸಿದರು.

ಜಪಾನ್, ರಷ್ಯಾ, ಸ್ವೀಡನ್ ಸೇರಿದಂತೆ ಜಗತ್ತಿನ ಹಲವು ದೇಶಗಳು ಜನಸಂಖ್ಯೆ ಕುಸಿತದ ಸಮಸ್ಯೆಯನ್ನು ಎದುರಿಸುತ್ತಿವೆ. ಮಕ್ಕಳನ್ನು ಹೆರುವುದಕ್ಕೆ ಪ್ರೋತ್ಸಾಹ ನೀಡುವ ಅವರ ತಂತ್ರಗಳು ಸೀಮಿತ ಫಲ ನೀಡಿವೆ. ಆದರೆ ಚೀನಾದಲ್ಲಿ ವೃದ್ಧರ ಪ್ರಮಾಣವು ಹೆಚ್ಚು ವೇಗದಲ್ಲಿ ಜಾಸ್ತಿಯಾಗುತ್ತಿದೆ. ಅಲ್ಲದೆ, ಜನಸಂಖ್ಯೆಯ ಏರಿಕೆಯನ್ನು ನಿಯಂತ್ರಿಸುವ ಉದ್ದೇಶದ ‘ಒಂದೇ ಮಗು’ ನೀತಿಯು ಜನ ತಮ್ಮ ಕುಟುಂಬದಲ್ಲಿ ಎಷ್ಟು ಜನರಿರಬೇಕು ಎಂಬುದನ್ನು ತೀರ್ಮಾನಿಸುವ ವಿಚಾರದಲ್ಲಿ ಬಹಳ ದೊಡ್ಡ ಪರಿವರ್ತನೆಯನ್ನು ತಂದಿದೆ.

ಫಲವಂತಿಕೆ ಪ್ರಮಾಣವನ್ನು ಹೆಚ್ಚಿಸಲು (ಇಬ್ಬರು ಮಕ್ಕಳನ್ನು ಹೆರಲು 2016ರಲ್ಲಿ ಅವಕಾಶ, 2021ರಲ್ಲಿ ಮೂವರು ಮಕ್ಕಳನ್ನು ಹೆರಲು ಅವಕಾಶ) ಚೀನಾದ ಕಮ್ಯುನಿಸ್ಟ್‌ ಪಕ್ಷವು ನಡೆಸಿದ ಯತ್ನಗಳು ದೊಡ್ಡ ಫಲ ಕೊಟ್ಟಿಲ್ಲ. ಈಗ ಸೆಚುವಾನ್‌ನಲ್ಲಿ ಜಾರಿಗೆ ತಂದಿರುವ ಹೊಸ ನೀತಿಯು ಮಕ್ಕಳನ್ನು ಹೊಂದಲು ಇದ್ದ ಮಿತಿಯನ್ನು ಸಂಪೂರ್ಣವಾಗಿ ಪಕ್ಕಕ್ಕೆ ಸರಿಸಿದೆ. ಹೀಗಾಗಿ ಈ ನೀತಿಯು ಎಲ್ಲರ ಗಮನ ಸೆಳೆದಿದೆ. ಅಲ್ಲದೆ, ಜನಸಂಖ್ಯೆಗೆ ಸಂಬಂಧಿಸಿದ ಬಿಕ್ಕಟ್ಟುಗಳು ಕಮ್ಯುನಿಸ್ಟ್‌ ಪಕ್ಷಕ್ಕೆ ತನ್ನ ಬಲಿಷ್ಠ ಹಿಡಿತವನ್ನು ಸಡಿಲಗೊಳಿಸಲು ಹೇಗೆ ಕಾರಣವಾಗುತ್ತಿವೆ ಎಂಬುದನ್ನೂ ಇದು ತೋರಿಸುತ್ತಿದೆ. ‘ಇಬ್ಬರು ಮಕ್ಕಳು ಎಂಬ ನೀತಿಯು ವಿಫಲವಾಗಿದೆ. ಮೂವರು ಮಕ್ಕಳು ಮಾತ್ರ ಸಾಕು ಎಂಬ ನೀತಿಯೂ ವಿಫಲವಾಗಿದೆ’ ಎಂದು ವಿಸ್ಕಾನ್ಸಿನ್‌ ಮ್ಯಾಡಿಸನ್‌ ವಿಶ್ವ ವಿದ್ಯಾಲಯದ ಸಂಶೋಧಕಿ ಯಿ ಫುಕ್ಸಿಯಾನ್ ಹೇಳಿದರು.

ಚೀನಾದ ಬಹುತೇಕ ಕಡೆಗಳಲ್ಲಿ ಮದುವೆ ಆಗದ ಮಹಿಳೆಯರು ಶಿಶುವಿಗೆ ಜನ್ಮ ನೀಡಿದಾಗ, ದಂಪತಿಗೆ ಸರ್ಕಾರದ ಕಡೆಯಿಂದ ಸಿಗುವಂತಹ ಪ್ರಯೋಜನ ಗಳಾವುವೂ ಸಿಗುವುದಿಲ್ಲ. ಕೆಲವು ಪ್ರಾಂತ್ಯಗಳಲ್ಲಿ ಮದುವೆಯಾಗದ ಮಹಿಳೆ ಮಕ್ಕಳನ್ನು ಹೆತ್ತರೆ, ಆಕೆಗೆ ದಂಡ ವಿಧಿಸುವ ಕ್ರಮವೂ ಈಚಿನವರೆಗೆ ಇತ್ತು. ಆದರೆ, ಚೀನಾದಲ್ಲಿ ಸೃಷ್ಟಿಯಾಗಿರುವ ಮಕ್ಕಳ ಕೊರತೆಯು ಈಗ ಸೆಚುವಾನ್‌ನಂತಹ ಪ್ರಾಂತ್ಯಗಳಲ್ಲಿ ಮದುವೆಯಾಗದ ಮಹಿಳೆಯರು ಮಕ್ಕಳನ್ನು ಹೆತ್ತಾಗ, ಅದಕ್ಕೆ ಕಾನೂನಿನ ಮಾನ್ಯತೆ ನೀಡುವಂತೆ ಮಾಡಿದೆ. ಇದನ್ನು ಮಹಿಳೆಯರ ಹಕ್ಕುಗಳ ಪರ ಕಾರ್ಯಕರ್ತರು ಸ್ವಾಗತಿಸಿದ್ದಾರೆ.

‘ಬಹುತೇಕ ತಾಯಂದಿರು, ಅದರಲ್ಲೂ ಮುಖ್ಯವಾಗಿ ಮದುವೆ ಆಗದ ತಾಯಂದಿರು ಅನುಭವಿಸುವ ಕೊರತೆಯು ಹಣಕ್ಕೆ ಸಂಬಂಧಿಸಿದ್ದಲ್ಲ. ಬದಲಿಗೆ, ಅವರ ಹಕ್ಕುಗಳಿಗೆ ರಕ್ಷಣೆ ಸಿಗುವುದಿಲ್ಲ. ಸಮಾಜದಲ್ಲಿ ಗೌರವವೂ ಸಿಗುವುದಿಲ್ಲ’ ಎಂದು ಝಾಂಗ್‌ ಮೆಂಗ್ ಹೇಳುತ್ತಾರೆ. ಆದರೆ, ಮಹಿಳೆಯರ ಹಕ್ಕುಗಳ ಪರವಾಗಿ ಹೋರಾಟ ನಡೆಸುವ ಕೆಲವು ಕಾರ್ಯಕರ್ತರು ಇನ್ನೊಂದು ಆಯಾಮವನ್ನೂ ವಿವರಿಸುತ್ತಾರೆ. ಫಲವಂತಿಕೆಯನ್ನು ಹೆಚ್ಚಿಸುವ ಯತ್ನವು ಮಹಿಳೆಯರು ಎದುರಿಸುವ ತಾರತಮ್ಯವನ್ನು ಇನ್ನಷ್ಟು ಹೆಚ್ಚಿಸುವ ಸಾಧ್ಯತೆಯೂ ಇದೆ ಎಂದು ಅವರು ಹೇಳುತ್ತಾರೆ.

ಯುನ್ನಾನ್‌ನ ರಾಜಧಾನಿಯಾಗಿರುವ ಕುನ್ಮಿಂಗ್‌ನಲ್ಲಿ ಆಸ್ಪತ್ರೆಯೊಂದು, ಐದು ಅಡಿ ಐದು ಇಂಚುಗಳಿಗಿಂತ ಹೆಚ್ಚು ಎತ್ತರ ಇರುವ ಕಾಲೇಜು ವಿದ್ಯಾರ್ಥಿಗಳು ವೀರ್ಯ ದಾನ ಮಾಡಿದರೆ ಅವರಿಗೆ 4,500 ಯುವಾನ್‌ ಹಣ ನೀಡಲಾಗುವುದು ಎಂದು ಹೇಳಿದೆ. ಈ ಪ್ರಕಟಣೆಯ ಜೊತೆಯಲ್ಲಿ ‘ನಾನು ವೀರ್ಯ ದಾನ ಮಾಡಿದ್ದೇನೆ. ನಾನು ಅತಿವಿಶಿಷ್ಟ ವ್ಯಕ್ತಿ. ನನಗೆ ಹೆಮ್ಮೆಯಿದೆ’ ಎಂಬ ಘೋಷ ವಾಕ್ಯವನ್ನು ಪ್ರಕಟಿಸಲಾಗಿದೆ!

ವೀರ್ಯ ಬ್ಯಾಂಕ್ ಆರಂಭಿಸುವುದಷ್ಟೇ ಅಲ್ಲದೆ, ಚೀನಾದ ಅಧಿಕಾರಿಗಳು ಅಲ್ಲಿ ಪ್ರನಾಳ ಶಿಶು ಸೌಲಭ್ಯವನ್ನು ಹೆಚ್ಚು ಜನರಿಗೆ ತಲುಪಿಸುವ ಕೆಲಸವನ್ನೂ ಮಾಡುತ್ತಿದ್ದಾರೆ. ಆದರೆ, ಜನನ ಪ್ರಮಾಣ ಕಡಿಮೆ ಆಗುತ್ತಿರುವುದಕ್ಕೆ ಮುಖ್ಯ ಕಾರಣ ಬಂಜೆತನ ಅಲ್ಲ; ಬದಲಿಗೆ, ಆರ್ಥಿಕತೆ ಹಾಗೂ ಸಾಂಸ್ಕೃತಿಕ ಬದಲಾವಣೆಗಳು ಎಂದು ತಜ್ಞರು ಗುರುತಿಸಿದ್ದಾರೆ. ದೇಶದಲ್ಲಿ ಕೋವಿಡ್‌ ಸಂಬಂಧಿತ ಲಾಕ್‌ಡೌನ್‌ ಕ್ರಮಗಳು ಜಾರಿಯಾದ ನಂತರದಲ್ಲಿ ಪ್ರತೀ ಐವರಲ್ಲಿ ಒಬ್ಬ (16ರಿಂದ 24 ವರ್ಷ ವಯಸ್ಸಿನವರಲ್ಲಿ) ನಿರುದ್ಯೋಗಿ ಆಗಿದ್ದಾನೆ. ಇದು ಒಂದು ತಲೆಮಾರಿನ ಭ್ರಮನಿರಸನವನ್ನು ಇನ್ನಷ್ಟು ಹೆಚ್ಚು ಮಾಡಿದೆ. ಮಕ್ಕಳನ್ನು ಹೊಂದದೇ ಇರುವುದು ರಾಜಕೀಯ ಪ್ರತಿರೋಧದ ಒಂದು ರೂಪ ಎಂದು ಕೆಲವರು ಗುರುತಿಸಿದ್ದಾರೆ.

ಕಳೆದ ವರ್ಷ ನಡೆದ, 20 ಸಾವಿರ ಚೀನಿ ಯುವಕರನ್ನು ಒಳಗೊಂಡಿದ್ದ ಒಂದು ಸಮೀಕ್ಷೆಯಲ್ಲಿ, ಮೂರನೆಯ ಎರಡರಷ್ಟು ಮಂದಿ ಮಕ್ಕಳನ್ನು ಹೊಂದಲು ತಾವು ಬಯಸುವುದಿಲ್ಲ ಎಂದು ಹೇಳಿದ್ದಾರೆ. ವೆಚ್ಚಗಳು ಹಾಗೂ ಚೀನಾದ ಶಿಕ್ಷಣ ವ್ಯವಸ್ಥೆಯು ಸೃಷ್ಟಿಸುವ ಒತ್ತಡಗಳು ಈ ಬಗೆಯ ತೀರ್ಮಾನಗಳ ಹಿಂದಿನ ಮುಖ್ಯ ಕಾರಣ ಎಂದು ತಜ್ಞರು ಹೇಳಿದ್ದಾರೆ. ಶಾಲಾ ಶಿಕ್ಷಣದ ಅವಧಿಯನ್ನು ಎರಡು ವರ್ಷದಷ್ಟು ತಗ್ಗಿಸಬೇಕು, ಪ್ರೌಢಶಾಲೆ ಪ್ರವೇಶಕ್ಕೆ ಪರೀಕ್ಷೆಯನ್ನು ನಡೆಸುವ ಕ್ರಮವನ್ನು ಕೈಬಿಡಬೇಕು ಎಂದು ಅವರು ಶಿಫಾರಸು ಮಾಡಿದ್ದಾರೆ.

ಈಗ ಚೀನಾದ ಹಲವು ನಗರಗಳು ಪೋಷಕರ ಹಣಕಾಸು ಸಮಸ್ಯೆಯನ್ನು ಪರಿಹರಿಸುವ ಉದ್ದೇಶದಿಂದ ನೇರವಾಗಿ ನಗದು ವರ್ಗಾವಣೆ ಮಾಡುವ ತಂತ್ರದ ಮೊರೆ ಹೋಗಿವೆ. ಶೆಂಜೆನ್‌ ನಗರವು ಈಚೆಗೆ, ಒಂದು ಮಗು ಇರುವ ಕುಟುಂಬಕ್ಕೆ 7,500 ಯುವಾನ್ ಹಣ ಕೊಡುವ ಪ್ರಸ್ತಾವ ಪ್ರಕಟಿಸಿದೆ. ಒಂದಕ್ಕಿಂತ ಹೆಚ್ಚು ಮಗು ಇದ್ದವರಿಗೆ ಹೆಚ್ಚು ಹಣ ಕೊಡಲಾಗುತ್ತದೆ. ಆದರೆ ಸಬ್ಸಿಡಿಯಾಗಿ ಕೊಡುವ ಈ ಮೊತ್ತವು ಮಕ್ಕಳನ್ನು ನೋಡಿಕೊಳ್ಳುವವರಿಗೆ ಕೊಡಬೇಕಿರುವ ಒಂದು ತಿಂಗಳ ವೆಚ್ಚಕ್ಕೂ ಸಾಕಾಗದು ಎಂದು ವಕೀಲೆ ಟ್ರಾಸಿ ಚೆನ್ ಹೇಳುತ್ತಾರೆ.

ತಮಗೆ ಮೂವರು ಮಕ್ಕಳನ್ನು ಹೊಂದುವ ಬಯಕೆ ಇತ್ತು. ಆದರೆ ತಮ್ಮ ಅಕ್ಕಂದಿರು ಹಾಗೂ ಕೆಲವು ಸ್ನೇಹಿತರು ಒಂದು ಮಗುವಿಗೆ ಮಾಡಬೇಕಿರುವ ವೆಚ್ಚವನ್ನು ಕಂಡೇ ತಮ್ಮ ಕಣ್ಣು ತೆರೆಯಿತು ಎಂದು ಚೆನ್ ಅವರು ಹೇಳುತ್ತಾರೆ. ಈಗ ಅವರು ಒಂದು ಮಗು ಸಾಕು ಎನ್ನುತ್ತಿದ್ದಾರೆ. ಸಬ್ಸಿಡಿ ಕೊಡುವುದು ಒಳ್ಳೆಯದೇ ಆದರೂ, ‘ಮಕ್ಕಳು ಬೇಕೇ ಬೇಡವೇ’ ಎಂಬ ತೀರ್ಮಾನದ ಮೇಲೆ ಪ್ರಭಾವ ಬೀರುವಷ್ಟು ಅದು ಚೆನ್ನಾಗಿಲ್ಲ ಎಂದು ಅವರು ಹೇಳುತ್ತಾರೆ.

____________________________________________________________________________________

–ದಿ ನ್ಯೂಯಾರ್ಕ್‌ ಟೈಮ್ಸ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು