ಬುಧವಾರ, ಮೇ 25, 2022
29 °C
ಅಸಮರ್ಪಕ ದಾಸ್ತಾನು ವ್ಯವಸ್ಥೆಯಿಂದಲೇ ನಷ್ಟ – ಇದರಿಂದ ಗ್ರಾಹಕನಿಗೂ ಹೊರೆ; ರೈತನಿಗೂ ಬರೆ

ಈರುಳ್ಳಿ ಬೆಲೆ ನಿಯಂತ್ರಣ: ಬೇಕಿರುವುದು ಉಗ್ರಾಣ; ತೊಡಿಸಿದ್ದು ನಿಷೇಧದ ಮೂಗುದಾಣ!

ಎಂ.ನಾಗರಾಜ Updated:

ಅಕ್ಷರ ಗಾತ್ರ : | |

onion

ಈರುಳ್ಳಿ ಬೆಲೆ ಏರಿಕೆ ಮತ್ತೆ ಸದ್ದು ಮಾಡುತ್ತಿದೆ. ಅತಿವೃಷ್ಟಿಯೇ ಇರಲಿ, ಅನಾವೃಷ್ಟಿಯೇ ಆಗಿರಲಿ, ಅತ್ತ ರೈತರಿಗೂ ಇತ್ತ ಗ್ರಾಹಕರಿಗೂ ಅದು ಕಣ್ಣೀರು ತರಿಸದೇ ಬಿಟ್ಟಿಲ್ಲ. ಈ ವರ್ಷದ ಆರಂಭದಲ್ಲಿ ಚಿಲ್ಲರೆ ಮಾರುಕಟ್ಟೆಯಲ್ಲಿ ಈರುಳ್ಳಿ ಧಾರಣೆ ಕೆ.ಜಿಗೆ ₹ 200 ಮುಟ್ಟಿ ದಾಖಲೆಯನ್ನು ನಿರ್ಮಿಸಿತ್ತು. ಈ ವರ್ಷವೂ ನಿಧಾನವಾಗಿ ಧಾರಣೆ ಏರುಗತಿಯತ್ತ ಮುಖಮಾಡಿದೆ. ಬೆಲೆ ಏರಲು ಆರಂಭವಾಗುತ್ತಿದ್ದಂತೆಯೇ ಸರ್ಕಾರ ಮಾಡುವ ಮೊದಲ ಕೆಲಸವೆಂದರೆ ರಫ್ತಿನಮೇಲೆ ನಿಷೇಧ ಹೇರುವುದು. ಈಗಲೂ ಅದನ್ನೇ ಮಾಡಿದೆ. ಗ್ರಾಹಕರು ಖರೀದಿಸುವ ಈರುಳ್ಳಿ ಕೈಗೆಟಕದಷ್ಟು ತುಟ್ಟಿ ಆಗಬಾರದು ಎಂಬ ಸರ್ಕಾರದ ಕಾಳಜಿ ಸಕಾರಣದಿಂದ ಕೂಡಿದೆ ಎನ್ನುವುದೇನೋ ನಿಜ. ಆದರೆ, ರೈತರಿಗೂ ನಾಲ್ಕು ಕಾಸು ಸಿಗಲಿ ಎಂದು ಯೋಚಿಸದೇ ಹೋಗುವುದರಿಂದ ರಫ್ತು ನಿಷೇಧದಂತಹ ಆತುರದ ಕ್ರಮಗಳನ್ನು ತೆಗೆದುಕೊಳ್ಳುತ್ತದೆ.

ದೇಶದಾದ್ಯಂತ ವರ್ಷವಿಡೀ ಈರುಳ್ಳಿ ಬಳಕೆಯ ಪ್ರಮಾಣ ಬಹಳ ಹೆಚ್ಚು. ಕಳೆದ ವರ್ಷದಂತೆಯೇ ಈಗಲೂ ಅಧಿಕ ಮಳೆಯಿಂದಾಗಿ ಆವಕ ಕಡಿಮೆಯಾಗಿದೆ. ಹಾಗಾಗಿ ಧಾರಣೆ ಏರುತ್ತಿದೆ ಎಂಬುದು ಮೇಲ್ನೋಟಕ್ಕೆ ಗೋಚರಿಸುವ ಸತ್ಯ. ಇದನ್ನು ಅಲ್ಲಗಳೆಯಲೂ ಆಗದು. ಆದರೆ, ಸಮರ್ಪಕ ದಾಸ್ತಾನು ವ್ಯವಸ್ಥೆ ಇಲ್ಲದಿರುವುದರಿಂದ ರೈತ–ಗ್ರಾಹಕ ಇಬ್ಬರೂ ತೊಂದರೆ ಅನುಭವಿಸುತ್ತಿದ್ದಾರೆ. ಕೈತುಂಬ ಕಾಸು ಗಿಟ್ಟಿಸುವ ಮಧ್ಯವರ್ತಿಗಳ ಮುಖದಲ್ಲಿ ಸಂತಸ ಚಿಮ್ಮುತ್ತಿರುತ್ತದೆ. ನೋವಿನಿಂದ ಆಕ್ರೋಶಗೊಂಡಿರುವ ರೈತರು, ರಫ್ತು ಮೇಲಿನ ನಿಷೇಧವನ್ನು ಹಿಂತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿ ವಿವಿಧ ರಾಜ್ಯಗಳಲ್ಲಿ ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ.

ಮುಂಗಾರು, ಹಿಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾದರೆ ಹೊಲವನ್ನು ಉತ್ತು, ಬಿತ್ತನೆ ಮಾಡಿ, ಮೂಡಿದ ಬೆಳೆಯನ್ನು ನೋಡಿ ಸಂಭ್ರಮಿಸುವ ರೈತ, ನಂತರದ ದಿನಗಳಲ್ಲಿ ಮಳೆ ಕೊರತೆಯಾಗಿ, ಅದು ಬಾಡಿದರೆ ತಾನೂ ಬಾಡಿ ಹೋಗುತ್ತಾನೆ. ಆ ಬೆಳೆ ಉಳಿಸಿಕೊಳ್ಳಲು ಎಲ್ಲಿಂದಲೋ ಟ್ಯಾಂಕರ್‌ನಲ್ಲಿ ನೀರು ತರಿಸಿ ಉಣಿಸುತ್ತಾನೆ. ಅದಕ್ಕೊಂದಷ್ಟು ಹೆಚ್ಚುವರಿ ಹೂಡಿಕೆಯ ಹೊರೆ ಬೇರೆ. ನಂತರ ಇನ್ನೇನು ಬೆಳೆ ಕೈಗೆ ಬಂತು ಎನ್ನುವಷ್ಟರಲ್ಲಿ ಸುರಿದ ಅಕಾಲಿಕ ಅಥವಾ ಭಾರಿ ಮಳೆ ಎಲ್ಲವನ್ನೂ ಕೊಳೆಯುವಂತೆ ಮಾಡಿ, ಆತನನ್ನು ಚಿಂತೆಗೆ ದೂಡಿಬಿಡುತ್ತದೆ. ಆದರೂ ಛಲಬಿಡದೆ ರೈತ ಮತ್ತೆ ಆಶಾವಾದದಿಂದಲೇ ಮತ್ತೊಂದು ಬೆಳೆ ಮಾಡುತ್ತಾನೆ. ಬೆಳೆ ಹಾಳಾಗಿ ಕೈ ಸುಟ್ಟುಕೊಂಡಾಗ ಆತ ಆ ನಷ್ಟವನ್ನು ಭರಿಸಿಕೊಳ್ಳುವುದು ಹೇಗೆ? ಸರ್ಕಾರ ಕೊಡುವ ಪರಿಹಾರ, ಬೆಳೆ ವಿಮೆಯ ಹಣದಿಂದ ಆ ನಷ್ಟವನ್ನು ತುಂಬಿಕೊಡುವುದು ಸಾಧ್ಯವಿಲ್ಲ. ಬೆಳೆದ ಬೆಳೆಗೆ ಒಳ್ಳೆಯ ಬೆಲೆ ಸಿಕ್ಕಾಗ ಮಾತ್ರ ನಷ್ಟದ ಸಂಕೋಲೆಯಿಂದ ಬಿಡಿಸಿಕೊಳ್ಳಲು ಸಾಧ್ಯ. ಆದರೆ, ಹಾಗೆ ಉತ್ತಮ ಬೆಲೆ ಗಿಟ್ಟಿಸುವ ರೈತನ ಅವಕಾಶವನ್ನು ಸರ್ಕಾರ ರಫ್ತು ನಿಷೇಧದ ಮೂಲಕ ಹೊಸಕಿ ಹಾಕಿಬಿಡುತ್ತದೆ. ಲಕ್ಷ ರೂಪಾಯಿ ಲೆಕ್ಕದಲ್ಲಿ ಹಣ ನೋಡಬಹುದು ಎಂಬ ಆತನ ಆಸೆಗೆ ತಣ್ಣೀರು ಎರಚಿಬಿಡುತ್ತದೆ.  ಗ್ರಾಹಕರ ಹಿತ ಕಾಪಾಡಬಾರದು ಎಂದು ಯಾರೂ ಹೇಳುವುದಿಲ್ಲ. ಕೃಷಿ ಉತ್ಪನ್ನಗಳ ಖರೀದಿದಾರರೇ ರೈತರ ಹೊಟ್ಟೆ–ಬಟ್ಟೆಗೆ ಆಧಾರ. ಆದರೆ, ಇಲ್ಲಿ ಈ ಇಬ್ಬರಿಗೂ ಲಾಭವಾಗದೆ ಮಧ್ಯವರ್ತಿಗಳಿಗೆ ದಂಡಿಯಾಗಿ ಲಾಭವಾಗುತ್ತಿರುವುದು ಸರ್ಕಾರದ ಕಣ್ಣಿಗೆ ಬಿದ್ದಿಲ್ಲ ಎಂದೇನೂ ಇಲ್ಲ. ಆದರೆ, ಅದಕ್ಕೆ ಒಂದು ರೀತಿ ಜಾಣ ಕುರುಡು. ಮಧ್ಯವರ್ತಿಗಳ ಮೇಲಿರುವ ಮಮಕಾರ ರೈತರ ಮೇಲಾಗಲಿ, ಗ್ರಾಹಕರ ಮೇಲಾಗಲಿ ಇಲ್ಲ. ರೈತನಿಗೆ ಹೊಟ್ಟೆಗೆ ಸಿಕ್ಕರೆ ಸಾಕು ಎಂಬ ಭಾವನೆ ಆಡಳಿತ ನಡೆಸುವವರಲ್ಲಿ ಇದೆ. ಅನ್ನದಾತನಿಗೂ ಘನತೆಯ ಜೀವನ ಸಿಗಬೇಕು ಎಂಬ ಮನೋಭಾವ ಇದ್ದರೆ ಸಮಸ್ಯೆಗೆ ಅವರು ರೂಪಿಸುತ್ತಿದ್ದ ಪರಿಹಾರವೂ ಭಿನ್ನವಾಗಿರುತ್ತಿತ್ತು.

ಚಿಲ್ಲರೆ ಮಾರುಕಟ್ಟೆಯಲ್ಲಿ ₹15 ಕೆ.ಜಿ ಈರುಳ್ಳಿ ಸಿಗುತ್ತದೆ ಎಂದಾಗ ಯಾರೂ ರೈತನ ಸಂಕಷ್ಟದ ಬಗ್ಗೆ ಯೋಚಿಸುವುದಿಲ್ಲ. ಅದೇ ಧಾರಣೆ ಕೆ.ಜಿಗೆ ₹ 30 ದಾಟಿದರೆ ಅಲ್ಲೋಲ ಕಲ್ಲೋಲವಾಯಿತು ಎಂಬಂತೆ ಹುಯಿಲೆಬ್ಬಿಸುತ್ತಾರೆ. ಗ್ರಾಹಕರಿಗೆ ಕೆ.ಜಿಗೆ ₹ 15 ಈರುಳ್ಳಿ ಮಾರಾಟವಾದರೆ ರೈತನಿಗೆ ₹ 5–6 ಸಹ ಸಿಗುವುದಿಲ್ಲ. ಇಷ್ಟೊಂದು ಕಡಿಮೆ ಬೆಲೆಗೆ ರೈತರು ತಮ್ಮ ಉತ್ಪನ್ನವನ್ನು ಮಾರಾಟ ಮಾಡಿದರೆ ಅವರು ಜೀವನ ನಡೆಸುವುದು ಹೇಗೆ ಎಂದು ಯಾರೂ ಯೋಚಿಸುವುದಿಲ್ಲ. ಬೆಲೆ ಏರಿಕೆಯ ಲಾಭ ರೈತನಿಗೆ ದೊರೆಯುವುದು ಬಹಳ ಕಡಿಮೆ. ಏಕೆಂದರೆ ಆ ವೇಳೆಗೆ ಹೆಚ್ಚಿನ ರೈತರ ಬಳಿ ಮಾಲು ಇರುವುದಿಲ್ಲ. ಇದ್ದ ಕೆಲವರಿಗೆ ಮಾತ್ರ ಸ್ವಲ್ಪ ಲಾಭವಾಗುತ್ತದೆ. ಆದರೆ, ರೈತರಿಂದ ಖರೀದಿಸಿ, ಇಟ್ಟುಕೊಂಡಿರುವ ಮಧ್ಯವರ್ತಿಗಳಿಗೆ ಮಾತ್ರ ಭರಪೂರ ಲಾಭ. ನೀತಿ ನಿರೂಪಕರು ಇಂತಹ ವಿಷಯಗಳತ್ತ ಗಮನಹರಿಸಬೇಕು.

ಮಾತೆತ್ತಿದರೆ ಅನ್ನದಾತನ ಸ್ಮರಿಸುವ ಸರ್ಕಾರ, ಆತ ಬೆಳೆದ ಬೆಳೆಗೆ ಸಮರ್ಪಕವಾದ ದರ ದೊರೆಯುವಂತೆ ಮಾಡಲು ಯಾವುದೇ ಕ್ರಮವನ್ನು ಈ 73 ವರ್ಷದ ಅವಧಿಯಲ್ಲಿ ತೆಗೆದುಕೊಂಡಿಲ್ಲ. ಉತ್ಪಾದನಾ ವೆಚ್ಚ, ರೈತನ ಕುಟುಂಬ ನಿರ್ವಹಣೆಗೆ ಬೇಕಾದ ಹಣವನ್ನು ಸೇರಿಸಿ ರೈತ ಮಾರುಕಟ್ಟೆಗೆ ತರುವ ಉತ್ಪನ್ನಕ್ಕೆ ಬೆಲೆ ನಿಗದಿಪಡಿಸುವ ವ್ಯವಸ್ಥೆ ಇನ್ನೂ ಆಗಿಲ್ಲ. ಇದುವರೆಗೆ ಆಡಳಿತ ನಡೆಸಿರುವ ಎಲ್ಲ ರಾಜಕೀಯ ಪಕ್ಷಗಳು ರೈತರ ಹೆಸರು ಹೇಳಿಕೊಂಡೇ ಅಧಿಕಾರಕ್ಕೆ ಬಂದಿವೆ. ಆದರೆ, ಅವರ ಜೀವನವನ್ನು ಉತ್ತಮಪಡಿಸಲು ಅಗತ್ಯವಾದ ಕ್ರಮವನ್ನು ತೆಗೆದುಕೊಂಡಿಲ್ಲ.

ಈರುಳ್ಳಿ, ಆಲೂಗಡ್ಡೆ, ಟೊಮೆಟೊ ಬೆಳೆಯುವ ರೈತರಿಗೆ ಯಾವಾಗಲೂ ಸಂಕಷ್ಟವೇ. ಕೊಯ್ಲಿನ ನಂತರ ಈ ಬೆಳೆಗಳನ್ನು ಸಂರಕ್ಷಿಸುವುದೂ ಅವರಿಗೆ ಕಷ್ಟವೇ. ಈ ಸಂಗತಿ ಸರ್ಕಾರಕ್ಕೆ ಗೊತ್ತಿಲ್ಲ ಎಂದೇನಲ್ಲ. ಆದರೆ, ದಾಸ್ತಾನು ಮಾಡಲು ಬೇಕಾದ ಅಗತ್ಯವಾದ ಸೌಕರ್ಯವನ್ನು ಇನ್ನೂ ಕಲ್ಪಿಸಿಲ್ಲ. ಉಷ್ಣಾಂಶ ನಿಯಂತ್ರಣವಿರುವ ಹಾಗೂ ಗಾಳಿ–ಬೆಳಕು ವ್ಯವಸ್ಥೆ ಉತ್ತಮವಾಗಿರುವ ತಾಣಗಳಲ್ಲಿ ಈರುಳ್ಳಿಯನ್ನು ದಾಸ್ತಾನು ಮಾಡಬೇಕು. ಆದರೆ, ಇಷ್ಟು ಕನಿಷ್ಠ ಸೌಕರ್ಯವೂ ಇಲ್ಲದ ಕಡೆ ಸಂಗ್ರಹಿಸಿ ಇಡಲಾಗುತ್ತಿದೆ. ಹೀಗಾಗಿ ಶೇಕಡ 30 ರಿಂದ 40ರವರೆಗೆ ಈರುಳ್ಳಿ ಹಾಳಾಗುತ್ತಿದೆ. ನೈಸರ್ಗಿಕ ವಿಕೋಪ ಎದುರಾದರೆ ಇದರ ಪ್ರಮಾಣ ಶೇಕಡ 40ಕ್ಕೂ ಹೆಚ್ಚು. ಇಂತಹ ಸಂದರ್ಭದಲ್ಲಿ ಬೇಡಿಕೆ ಮತ್ತು ಪೂರೈಕೆ ಮೇಲೆ ತೀವ್ರ ಒತ್ತಡ ಉಂಟಾಗಿ, ಬೆಲೆ ಏರಿಕೆ ಹಾದಿ ಹಿಡಿಯುತ್ತದೆ. ಈರುಳ್ಳಿ ಬೆಲೆ ಏರುಗತಿಯತ್ತ ಮುಖ ಮಾಡಿದ ಕೂಡಲೇ ತಕ್ಷಣದ ಕ್ರಮವಾಗಿ ರಫ್ತು ನಿಷೇಧಿಸುವುದನ್ನು ಕೈಬಿಟ್ಟು ಶಾಶ್ವತವಾಗಿ ಬದಲಿ ಮಾರ್ಗಗಳನ್ನು ಸರ್ಕಾರ ಕಂಡುಕೊಳ್ಳಲು ಮುಂದಾಗಬೇಕು.

ಈಗಾಗಲೇ ಕೃಷಿ ಸಂಶೋಧನಾ ಮಂಡಳಿ, ಕೃಷಿ ವಿಶ್ವವಿದ್ಯಾಲಯಗಳು, ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ ಸೇರಿದಂತೆ ಹತ್ತು ಹಲವು ಸಂಸ್ಥೆಗಳು ನಮ್ಮಲ್ಲಿನ ದಾಸ್ತಾನು ವ್ಯವಸ್ಥೆಯ ಲೋಪದೋಷಗಳನ್ನು ಎತ್ತಿ ತೋರಿ, ವಿದೇಶಿ ತಂತ್ರಜ್ಞಾನ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿವೆ. ಇದನ್ನು ಆಧರಿಸಿ ಸರ್ಕಾರವು, ಕೊಯ್ಲು ಮಾಡಿದ ಈರುಳ್ಳಿಯನ್ನು ಸಮರ್ಪಕವಾಗಿ ದಾಸ್ತಾನು ಮಾಡಲು ತೇವಾಂಶ ನಿಯಂತ್ರಣ, ಗಾಳಿ–ಬೆಳಕು ಚೆನ್ನಾಗಿರುವ ಸೌಲಭ್ಯವನ್ನು ಒಳಗೊಂಡ ಉಗ್ರಾಣಗಳ ವ್ಯವಸ್ಥೆಯನ್ನು ಹೆಚ್ಚಾಗಿ ಈ ಬೆಳೆ ಬೆಳೆಯುವ ಪ್ರದೇಶಗಳಲ್ಲಿ ಕಲ್ಪಿಸಬೇಕು. ಇದು ಅತೀ ಜರೂರಾಗಿ ಆಗಬೇಕಾದ ಕಾರ್ಯ. ಕೇಂದ್ರ ಮತ್ತು ರಾಜ್ಯಗಳು ಇತ್ತ ಗಮನಹರಿಸಿ ರೈತರ ಹಿತ ಕಾಪಾಡಲು ಮುಂದಾಗಬೇಕು. ದೇಶದಲ್ಲಿ ಉಗ್ರಾಣ ವ್ಯವಸ್ಥೆ ಸುಧಾರಿಸಿದರೆ, ಈರುಳ್ಳಿ ಕೆಡುವುದನ್ನು ತಪ್ಪಿಸಿ ಅದು ಮಾರುಕಟ್ಟೆಗೆ ಲಭ್ಯವಾಗುವಂತೆ ಮಾಡಿದರೆ ಬೆಲೆ ಏರಿಕೆ ನಿಯಂತ್ರಿಸಲು ಸಾಧ್ಯ. ಜತೆಗೆ ಸಾಗಣೆ ವೆಚ್ಚವನ್ನು ಕಡಿಮೆ ಮಾಡಲು ರೈಲುಗಳನ್ನು ಬಳಸಿಕೊಳ್ಳಬಹುದು. ಈ ಮೂಲಕ ರೈತರಿಗೂ ಸ್ವಲ್ಪ ಲಾಭವಾಗುವಂತೆ ಮಾಡಲು ಪ್ರಯತ್ನಿಸಬಹುದು. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು