ಶನಿವಾರ, ಮೇ 15, 2021
24 °C

PV Web Exclusive: ಇಳಿವಯಸ್ಸಿನಲ್ಲಿ ಸಾಂಗತ್ಯಕ್ಕೆ ಮನ ತುಡಿಯಬಾರದೆ?

ರಶ್ಮಿ ಎಸ್‌ Updated:

ಅಕ್ಷರ ಗಾತ್ರ : | |

Prajavani

73ರ ಹಿರಿಯರೊಬ್ಬರು ಮದುವೆಗೆ ಸಂಗಾತಿ ಬೇಕಾಗಿದ್ದಾರೆ ಎಂದು ಜಾಹೀರಾತು ನೀಡಿದ್ದು ಕಳೆದ ವಾರವೆಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತು. 

ಜಾಹೀರಾತು, ಅನುರೂಪದ ವರ ಸಿಗಲಿ ಎಂದಲ್ಲ, ಓಡಾಡಿದ್ದು, ನಗೆಯ ಸರಕಾಗಿ. ಒಂದು ಹಿರಿಯ ಜೀವ, ತನ್ನ ಇಳಿಗಾಲದಲ್ಲಿ ಒಬ್ಬಂಟಿಯಾಗಿರುವ ಬದಲು, ತಮ್ಮದೇ ವಯಸ್ಸಿನ ಸಾಂಗತ್ಯ ಬಯಸುವುದರಲ್ಲಿ ತಪ್ಪೇನಿದೆ?

ಮದುವೆಯೆಂಬುದು ಕೇವಲ ಸಂತಾನೋತ್ಪತ್ತಿಯ ಉದ್ದೇಶದಿಂದಲೇ ನೆರವೇರುವ ಕ್ರಿಯೆಯೇ? ಅಥವಾ ಒಂದು ಸಾಂಗತ್ಯಕ್ಕೆ ಬದ್ಧತೆ ಬರಲಿ ಎಂಬ ಕಾರಣಕ್ಕೆ ಮದುವೆ ಮಾಡ್ತಾರಾ?

ಇಷ್ಟಕ್ಕೂ ಆ ವಯಸ್ಸಿನಲ್ಲಿ ಸಾಂಗತ್ಯ ಬೇಕು ಅಂತನಿಸುವುದು ಯಾವ ಕಾರಣಕ್ಕೆ? ಒಂಟಿಯಾಗಿ ಬದುಕುವುದು ಅಸಹನೀಯ. ಒಬ್ಬಂಟಿಯಾಗಿದ್ದಾಗ, ಏನಾದರೂ ಹೆಚ್ಚು ಕಡಿಮೆಯಾದರೆ...? ಹುಷಾರು ತಪ್ಪಿದರೆ..? ಸಾವನ್ನಪ್ಪಿದರೆ..? ಹೊರ ಜಗತ್ತಿಗೆ ತಿಳಿಯುವುದಾದರೂ ಹೇಗೆ? ಇಂಥ ಪ್ರಶ್ನೆಗಳಿಗೆ ಒಂದು ಸಾಂಗತ್ಯ ಉತ್ತರವಾಗಿ ಕಂಡಿರಬಹುದು.

73 ವಸಂತಗಳನ್ನು ಕಂಡಿರುವಾಗ, ಖಂಡಿತವಾಗಿಯೂ ಹತ್ತಾರು ತಪ್ಪು ಸರಿಗಳು ಬದುಕಿನ ಬುತ್ತಿಯಲ್ಲಿರುತ್ತವೆ. ಅವುಗಳನ್ನು ನೆನಪಿಸಿಕೊಂಡಾಗ, ಕೆಲವೊಂದಕ್ಕೆ ಸಮರ್ಥನೆ, ಕೆಲವೊಂದಕ್ಕೆ ನೀನು ಮಾಡಿದ್ದು ತಪ್ಪು ಅಂತ ಬೇರೆ ಜೀವದಿಂದ ಕೇಳುವ ಅಗತ್ಯ ಇರುತ್ತದೆ. ನಮ್ಮೊಳಗಿನ ಅಪರಾಧ ಭಾವವನ್ನೂ, ನಮ್ಮೊಳಗಿನ ಅಹಂಕಾರವನ್ನೂ ಎರಡನ್ನೂ ಮೀರಿ, ಆಗಿದ್ದು ಆಗಿ ಹೋಯಿತು ಅಂತ್ಹೇಳಿ ಸಮಾಧಾನಿಸುವ ಜೀವವೊಂದಿರಬೇಕು ಅಂತನಿಸುವುದು ತೀರ ಸಹಜ.

ಒಂದು ಬಾಂಧವ್ಯದಲ್ಲಿ ಬಿರುಕುಂಟಾದಾಗ, ಮತ್ತೆ ಇನ್ನೊಂದು ಬಾಂಧವ್ಯಕ್ಕೆ ಮನ ಹಾತೊರೆಯುವುದು ಕಷ್ಟ. ಕಡು ಕಷ್ಟ. ಆ ಮನೋಸ್ಥೈರ್ಯವೇ ಬರುವುದಿಲ್ಲ. ಆದರೆ ಅದಕ್ಕೂ ಮೀರಿದ ಆತಂಕ ಈ ಒಬ್ಬಂಟಿತನದ್ದು. ಉಳಿದಿರುವ ಬದುಕನ್ನು ಮಾತಾಡಿಕೊಂಡು, ನಗಾಡಿಕೊಂಡು, ಆರೋಗ್ಯದ ಬಗ್ಗೆ ಕಾಳಜಿ ಮಾಡ್ಕೊಂಡು, ಜೀವನಾನುಭವವನ್ನು ಸಂಪೂರ್ಣವಾಗಿ ಅನುಭವಿಸಬೇಕೆನ್ನುವ ಈ ಜೀವದ ಆಸೆ ನ್ಯಾಯಯುತವಾಗಿಯೇ ಇದೆ.

ಇದನ್ನೂ ಓದಿ: ಅವರು ಇಷ್ಟವಾದರು, ಗೆಳತಿಯಾಗುವೆ: 73ರ ಮಹಿಳೆ, 69ರ ಪುರುಷ ನಡುವೆ ವಿವಾಹ ಚರ್ಚೆ

ಮತ್ತೀಗ ವೃದ್ಧಾಶ್ರಮದಲ್ಲಿ ಮತ್ತೆ ಸಂಗಾತಿಯನ್ನು ಹುಡುಕಿಕೊಂಡು ಒಟ್ಟಿಗೆ ಬದುಕುವ ಜೀವಗಳಿಗೆ ಬೇಕಿರುವುದು ಕಾಳಜಿಯೆಂಬ ಪರದೆಹೊದ್ದು ಬರುವ ಪ್ರೀತಿ. ಪ್ರೀತಿ ಮಾತ್ರ. ಈ ನಿಟ್ಟಿನಲ್ಲಿ ಕಾನೂನಾತ್ಮಕವಾಗಿ ಮದುವೆಯಾಗ್ತೀನಿ ಅನ್ನುವವರು ಸಾಮಾಜಿಕ ಚೌಕಟ್ಟಿನಲ್ಲಿ ಸುರಕ್ಷಿತವಾಗಿರಲು ಬಯಸಿಯೇ ಇಂಥ ಜಾಹೀರಾತು ನೀಡಿದ್ದು.

ಇದು ಬಾಂಧವ್ಯವೊಂದು ಕೇವಲ ಮೇಲ್ನೋಟಕ್ಕೆ ಅನುಕೂಲಸಿಂಧುವೆನಿಸಬಹುದು. ಆದರೆ ಶಿಥಿಲಗೊಳ್ಳುತ್ತಿರುವ ಬಾಂಧವ್ಯಗಳು ಹೀಗೆ ವೃದ್ಧಾಪ್ಯದಲ್ಲಿ ಪರಸ್ಪರಾವಲಂಬನೆಯ ಅಗತ್ಯವನ್ನು ಹುಟ್ಟು ಹಾಕುತ್ತವೆ. ಎಷ್ಟೊ ಕಡೆ ಮಕ್ಕಳೇ ಅಮ್ಮನ ಮದುವೆ ಮಾಡಿಸಿದ ಉದಾಹರಣೆಗಳಿವೆ. 

ಮದುವೆಯೆಂಬುದರ ಉದ್ದೇಶವೇನೇ ಇರಲಿ, ಒಂದು ಸಾಹಚರ್ಯ ಹಾಗೂ ತಮ್ಮನ್ನು ಒಪ್ಪುವ, ಅಪ್ಪುವ ಕಾಳಜಿ ಮಾಡುವ ಜೀವವೊಂದಿರಬೇಕು ಎಂಬ ಅದಮ್ಯ ಬಯಕೆಯ ಪರಿಹಾರವೂ ಆಗಿರುತ್ತದೆ. 

ಹೀಗಿರುವಾಗ, ಅದಕ್ಕೆ ವಯಸ್ಸಿನ ಹಂಗ್ಯಾಕಿರಬೇಕು? ಹಿಂಗ ಕೇಳಿದ ಕೂಡಲೆ ಭಾಳ ಮಂದಿ, ಜಾತಿಯ ಹಂಗಾದರೂ ಯಾಕಿರಬೇಕು? ಧರ್ಮದ ಹಂಗಾದರೂ ಯಾಕಿರಬೇಕು ಅಂತ? 

ಒಂದು ವಯಸ್ಸಂತ ಆದ್ಮೇಲೆ ಮನುಷ್ಯನಿಗೆ ಹೊಂದಾಣಿಕೆಯ ಶಕ್ತಿ ಕುಂದ್ತದ. ಅರ್ಧ ಬದುಕು ಹೊಂದಾಣಿಕೆಯೊಳಗೆ ಕಳದಿರುವಾಗ ಉಳಿದ ಬದುಕನ್ನೂ ಅದರಲ್ಲೇ ಕಳೀಬೇಕಾ? ಒಂದೇ ವಯಸ್ಸಿನ, ಒಂದೇ ಆಹಾರ ಪದ್ಧತಿಯ ಹಾಗೂ ಒಂದೇ ಸಾಂಸ್ಕೃತಿಕ ಹಿನ್ನೆಲೆಯುಳ್ಳವರಾಗಿದ್ದರೆ ಹೆಚ್ಚು ಹೊಂದಾಣಿಕೆಯ ಅಗತ್ಯಗಳಿರುವುದಿಲ್ಲ ಎಂಬ ಅನುಭವದ ಲೆಕ್ಕಾಚಾರವೂ ಇರಬಹುದು. 

 ಖುಷಿ ಪಡಬೇಕಾದ ವಿಷಯವೆಂದರೆ ಹೆಣ್ಣುಮಗಳೊಬ್ಬಳು ಈ ಲೆಕ್ಕಾಚಾರಗಳನ್ನೆಲ್ಲ ಬದಿಗಿರಿಸಿ, ತನ್ನ ಆತಂಕವನ್ನು ಮೀರಲು ಸಿದ್ಧ ಚೌಕಟ್ಟಿನಿಂದಾಚೆ ಬಂದು, ಜಾಹೀರಾತು ನೀಡಿದ್ದು. ಅದಕ್ಕೆ ಸ್ಪಂದನೆಯೂ ಸಿಕ್ಕಿದ್ದು. 

ಇನ್ನು ಆ ಬಾಂಧವ್ಯದಲ್ಲಿ ಪರಸ್ಪರ ಅವಲಂಬನೆ, ಪ್ರೀತಿ, ಕಾಳಜಿ ಎಲ್ಲವೂ ಒಡಮೂಡಿರುತ್ತದೆ. ಮಾಗಿದ ಬದುಕು, ಮಾಗಿದ ಪ್ರೀತಿ.. ಕವಿ ಕೆ.ಎಸ್‌.ಎನ್‌ ನೆನಪಾಗುವುದೇ ಈ ಸಂದರ್ಭದಲ್ಲಿ...

ಒಂದು ಹೆಣ್ಣಿಗೊಂದು ಗಂಡು

ಹೇಗೋ ಸೇರಿ ಹೊಂದಿಕೊಂಡು

ಕಾಣದೊಂದು ಕನಸ ಕಂಡು

ಮಾತಿಗೊಲಿಯದಮೃತವುಂಡು  ದುಃಖ ಹಗುರವೆನುತಿರೆ

ಪ್ರೇಮವೆನಲು ಹಾಸ್ಯವೆ? 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು