ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web exclusive| ಬೆಣ್ಣಿಹಳ್ಳ ಎಂಬ ಮಳೆಗಾಲದ ದುಃಸ್ವಪ್ನ: ಬೇಸಿಗೆಯ ಶಾಂತಮೂರ್ತಿ

Last Updated 4 ಅಕ್ಟೋಬರ್ 2020, 6:44 IST
ಅಕ್ಷರ ಗಾತ್ರ

ಬೆಣ್ಣಿಹಳ್ಳ ಧಾರವಾಡ ಜಿಲ್ಲೆಯಲ್ಲಿ ಹರಿಯುವ ಪ್ರಮುಖ ಹಳ್ಳ. ಮಳೆಗಾಲದಲ್ಲಿ ಯಾವ ನದಿಗೂ ಕಡಿಮೆ ಇಲ್ಲದಂತೆ ಉಕ್ಕಿ ಹರಿಯುವ ಈ ಹಳ್ಳದ ಪ್ರವಾಹಕ್ಕೆ, ಪ್ರತಿ ವರ್ಷ ಜನ–ಜಾನುವಾರುಗಳು ಬಲಿಯಾಗುವುದು ಸಾಮಾನ್ಯ. ಸಾವಿರಾರು ಎಕರೆ ಕೃಷಿ ಭೂಮಿ ಜಲಾವೃತಗೊಳ್ಳುವುದರಿಂದ, ರೈತರಿಗೆ ಬೆಳೆ ನಷ್ಟದ ಬಳುವಳಿ ಪ್ರತಿ ವರ್ಷ ಕಾಯಂ. ಹಳ್ಳದ ಅಬ್ಬರದಿಂದಾಗಿ, ಅದಕ್ಕೆ ಹೊಂದಿಕೊಂಡಿರುವ ಜನ ತಾತ್ಕಾಲಿಕವಾಗಿ ತಮ್ಮ ವಾಸ್ತವ್ಯ ಬದಲಿಸದೆ ಬೇರೆ ದಾರಿಯೇ ಇರುವುದಿಲ್ಲ. ಇದು ಬೆಣ್ಣಿಹಳ್ಳದ ಮಳೆಗಾಲದ ನಿಯಮ.

ಬೇಸಿಗೆಯಲ್ಲಿ ಈ ಹಳ್ಳ ಶಾಂತಮೂರ್ತಿ. ನೀರಿನ ಹರಿವು ಎಷ್ಟರ ಮಟ್ಟಿಗೆ ತಗ್ಗಿರುತ್ತದೆಯೆಂದರೆ, ಎಲ್ಲೋ ಸಣ್ಣ ತೊರೆಯಂತೆ ತಣ್ಣಗೆ ಹರಿಯುತ್ತಿರುತ್ತದೆ. ಮನುಷ್ಯನ ಸೊಂಟದೆತ್ತರಕ್ಕೂ ನೀರು ಮುಟ್ಟುವುದಿಲ್ಲ. ಮಳೆಗಾಲದಲ್ಲಿ ರೌದ್ರಾವತಾರ ತಾಳಿ ಜನರಿಗೆದುಃಸ್ವಪ್ನವಾಗುವ ಹಳ್ಳ, ಉಳಿದೆಲ್ಲಾ ಋತುವಿನಲ್ಲೂ ಇದೇನಾ ಆ ಹಳ್ಳ! ಎಂದು ಬೆರಗು ಮೂಡಿಸುತ್ತದೆ.

ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲ್ಲೂಕಿನ ದುಂಡಸಿ ಬೆಣ್ಣಿಹಳ್ಳದ ಉಗಮಸ್ಥಳ. ಅಲ್ಲಿಂದ ಆರಂಭಗೊಂಡು ಧಾರವಾಡ ಜಿಲ್ಲೆಯ ಕುಂದಗೋಳ, ಹುಬ್ಬಳ್ಳಿ, ನವಲಗುಂದ ಹಾಗೂ ಗದಗ ಜಿಲ್ಲೆಯ ನರಗುಂದ ತಾಲ್ಲೂಕಿನಲ್ಲಿ ಹರಿಯುವ ಹಳ್ಳ, ಅಂತಿಮವಾಗಿ ಮಲಪ್ರಭಾ ನದಿಯ ಒಡಲನ್ನು ಸೇರುತ್ತದೆ. ಆರು ತಾಲ್ಲೂಕುಗಳಲ್ಲಿ ಹಾದು ಹೋಗುವ ಹಳ್ಳದ ಹರಿವಿನ ಉದ್ದ ಸುಮಾರು 130 ಕಿಲೋಮೀಟರ್. ಈ ಪೈಕಿ, ನವಲಗುಂದ ತಾಲ್ಲೂಕಿನಲ್ಲೇ ಸುಮಾರು 78 ಕಿ.ಮೀ. ಉದ್ದ ಚಾಚಿಕೊಂಡಿದೆ. ತುಪ್ಪರಿಹಳ್ಳ ಒಳಗೊಂಡಂತೆ ಬೆಣ್ಣಿಹಳ್ಳದ ಒಟ್ಟಾರೆ ನೀರಿನ ಸಾಮರ್ಥ್ಯ 14 ಟಿಎಂಸಿ ಅಡಿ ಎಂದು ಅಂದಾಜು ಮಾಡಲಾಗಿದೆ. ಹಳ್ಳದ ಪ್ರವಾಹದಿಂದ ಸಂಕಷ್ಟಕ್ಕೊಳಗಾಗುವ ಪಟ್ಟಿಯಲ್ಲಿ 83 ಗ್ರಾಮಗಳಿವೆ.

ಸ್ಥಳಾಂತರದ ಕೂಗು

ಬೆಣ್ಣಿಹಳ್ಳದ ಪ್ರವಾಹದ ಅಬ್ಬರಕ್ಕೆ ಹಳ್ಳದಂಚಿನ 83 ಗ್ರಾಮಗಳ ಪೈಕಿ, 10ಕ್ಕೂ ಹೆಚ್ಚು ಹಳ್ಳಿಗಳು ಹೆಚ್ಚಿನ ಬಾಧೆಗೊಳಗಾಗುತ್ತಿವೆ. ಆ ಗ್ರಾಮಗಳನ್ನು ಶಾಶ್ವತವಾಗಿ ಬೇರೆ ಕಡೆಗೆ ಸ್ಥಳಾಂತರಿಬೇಕೆಂಬ ಕೂಗು ಹಿಂದಿನಿಂದಲೂ ಕೇಳಿ ಬರುತ್ತಿದೆ. ಕಳೆದ ಬಾರಿಯ ನೆರೆಯ ಸಂದರ್ಭದಲ್ಲಿ ನವಲಗುಂದ ತಾಲ್ಲೂಕಿನ ಆರು ಗ್ರಾಮಗಳನ್ನು ಸ್ಥಳಾಂತರ ಮತ್ತು ಪುನರ್ವಸತಿಗೆ ಚಾಲನೆ ನೀಡಲಾಗಿತ್ತು. ಪ್ರವಾಹ ಬಂದಾಗ ಸ್ಥಳಾಂತರದ ಜಪ ಮಾಡುವ ಜನಪ್ರತಿನಿಧಿಗಳು, ಉಳಿದ ಸಮಯದಲ್ಲಿ ಮರೆತು ಬಿಡುತ್ತಾರೆ. ಹಾಗಾಗಿಯೇ, ಹಳ್ಳದ ಪ್ರವಾಹದಿಂದ ಸಂಪರ್ಕ ಕಡಿತಗೊಳ್ಳುವ ಗ್ರಾಮಗಳ ರಸ್ತೆಗಳಿಗೆ ಇಂದಿಗೂ ಸಂಪರ್ಕ ಸೇತುವೆ ನಿರ್ಮಾಣವಾಗಿಲ್ಲ.

ಈ ವರ್ಷಾರಂಭದಲ್ಲಿ ಮಳೆ ಅಬ್ಬರ ಹೆಚ್ಚಾಗುವ ಮುನ್ಸೂಚನೆ ಸಿಗುತ್ತಿದ್ದಂತೆ, ಜಿಲ್ಲಾಧಿಕಾರಿ ಪ್ರವಾಹಪೀಡಿತಗ್ರಾಮಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಿಸಿದ್ದರು.ಪ್ರವಾಹ ಪರಿಸ್ಥಿತಿ ನಿರ್ವಹಣೆಗಾಗಿ, ಸ್ಥಳೀಯವಾಗಿ ಈಜು ಬಲ್ಲವರು ಹಾಗೂ ಸ್ವಯಂ ಸೇವಕರ ತಂಡ ರಚಿಸಿದ್ದರು. ಹಾಗಾಗಿ, ಈ ಬಾರಿ ಪ್ರವಾಹದಲ್ಲಿ ಸಿಲುಕಿದವರ ರಕ್ಷಣಾ ಕಾರ್ಯಾಚರಣೆ ಸವಾಲೆನಿಸಲಿಲ್ಲ.

ಶಾಶ್ವತ ಯೋಜನೆಯ ಕನಸು

ಹಳ್ಳದ ಪ್ರವಾಹ ನಿಯಂತ್ರಿಸಲು 2014ರಲ್ಲೇ ಸರ್ಕಾರ ಪ್ರವಾಹ ನಿಯಂತ್ರಣ ಯೋಜನೆಯುಡಿ, ಕರ್ನಾಟಕ ನೀರಾವರಿ ನಿಗಮಕ್ಕೆ ₹13 ಕೋಟಿ ನೀಡಿತ್ತು. ಹಳ್ಳದ ಒತ್ತುವರಿ, ಅಕ್ಕಪಕ್ಕ ಬೆಳೆದಿರುವ ಗಿಡಗಂಟಿಗಳನ್ನು ತೆರವುಗೊಳಿಸಿ ಹರಿಯುವ ಹಾದಿಯನ್ನು ಸುಗಮಗೊಳಿಸುವ ಉದ್ದೇಶದ ಜತೆಗೆ, ಹಳ್ಳದ ಬದಿ ಚಕ್ಕಡಿ ಮಾರ್ಗ ನಿರ್ಮಾಣ ಹಾಗೂ ಯಮನೂರಿನ ಜಾತ್ರೆ ಸ್ಥಳದಲ್ಲಿ ಸ್ನಾನಘಟ್ಟ ಹಾಗೂ ಚೆಕ್ ಡ್ಯಾಂ ನಿರ್ಮಾಣ ಯೋಜನೆಯ ಉದ್ದೇಶವಾಗಿತ್ತು. ಈಗ ಅದು ಏನಾಯಿತು ಎಂಬುದು ಯಾರಲ್ಳೂ ಸ್ಪಷ್ಟ ಮಾಹಿತಿ ಇಲ್ಲ.

ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಸೇರಿದಂತೆ, ಪ್ರವಾಹ ಪೀಡಿತ ತಾಲ್ಲೂಕುಗಳ ಶಾಸಕರು ಬೆಣ್ಣೆಹಳ್ಳ ಹಾಗೂ ತುಪ್ಪರಿಹಳ್ಳ ಪ್ರವಾಹ ತಡೆಗೆ ಶಾಶ್ವತ ಯೋಜನೆ ರೂಪಿಸುವ ಕುರಿತು ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ನೀರನ್ನು ನೀರಾವರಿಗೆ ಬಳಕೆ ಮಾಡಲು ಶಾಶ್ವತ ಯೋಜನೆ ರೂಪಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಅದರ ಫಲವಾಗಿ, ಪ್ರವಾಹ ನಿಯಂತ್ರಣ ಸೇರಿದಂತೆ ನೀರಿನ ಸದ್ಭಳಕೆಗಾಗಿ ₹1,536 ಕೋಟಿ ಮೊತ್ತದ ಯೋಜನಾ ವರದಿಯನ್ನು ಕರ್ನಾಟಕ ನೀರಾವರಿ ನಿಗಮವು ಸಿದ್ಧಪಡಿಸಿದೆ.

ಇದಕ್ಕೆ ಪೂರಕವಾಗಿ, ಕೆಲ ತಿಂಗಳುಗಳ ಹಿಂದೆ ಬೆಣ್ಣಿ ಹಳ್ಳ ಮತ್ತು ತುಪ್ಪರಿ ಹಳ್ಳಗಳನ್ನು ಡ್ರೋಣ್ ಕ್ಯಾಮೆರಾ ಮೂಲಕ ಸಮೀಕ್ಷೆ ನಡೆಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಸಮೀಕ್ಷೆಯ ಅಂತಿಮ ವರದಿ ಇನ್ನು ಸಿದ್ಧಗೊಳ್ಳುತ್ತಲೇ ಇದೆ. ಜಿಲ್ಲೆಯವರಾದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕೂಡ ಇತ್ತೀಚೆಗೆ ಈ ಭಾಗದ ಜನಪ್ರತಿನಿಧಿಗಳ ಜತೆ ಸಭೆ, ನಡೆಸಿ ಪ್ರವಾಹ ತಡೆ ಹಾಗೂ ನೀರಿನ ಸದ್ಬಳಕೆ ಕುರಿತು ಚರ್ಚಿಸಿದ್ದಾರೆ. ಶಾಶ್ವತ ಯೋಜನೆ ರೂಪಿಸುವ ಯೋಜನೆಯ ಪ್ರಗತಿಯನ್ನು ತ್ವರಿತಗೊಳಿಸುವಂತೆ ಸೂಚಿಸಿದ್ದಾರೆ.

ಏತ ನೀರಾವರಿ ಯೋಜನೆ

ನವಲಗುಂದ ತಾಲ್ಲೂಕಿನ ಅಮರಗೋಳದಲ್ಲಿಬೆಣ್ಣೆಹಳ್ಳಕ್ಕೆ₹22 ಕೋಟಿ ವೆಚ್ಚದ ಏತ ನೀರಾವರಿ ಯೋಜನೆಯೊಂದು ಪೂರ್ಣಗೊಂಡಿದೆ. ಈ ಯೋಜನೆಯಿಂದ 4,653 ಎಕರೆ ಪ್ರದೇಶ ನೀರಾವರಿ ವ್ಯಾಪ್ತಿಗೆ ಒಳಪಡಲಿದ್ದು ಅಮರಗೋಳ, ಅಳಗವಾಡಿ ಹಾಗೂ ನರಗುಂದ ತಾಲೂಕಿನ ಹುಣಸಿಕಟ್ಟಿ ಗ್ರಾಮಗಳಿಗೆ ಅನುಕೂಲವಾಗಲಿದೆ. 2012ರಲ್ಲಿ ಆರಂಭಗೊಂಡಿದ್ದ ಈ ಯೋಜನೆ ಪೂರ್ಣಗೊಂಡಿದ್ದು 2019ರಲ್ಲಿ. ಅಂದಹಾಗೆ, ಏತ ನೀರಾವರಿ ಯೋಜನೆಗಳು ಮತ್ತು ಚೆಕ್‌ ಡ್ಯಾಂಗಳು ಹಳ್ಳದಿಂದಾಗುವ ಬಾಧೆಯನ್ನು ನಿಯಂತ್ರಿಸಲು ಇರುವ ಆಧುನಿಕ ಮಾರ್ಗಗಳು. ಆದರೆ, ನೀರಿನ ಮೂಲಕ್ಕೆ ಧಕ್ಕೆಯಾಗದಂತೆ ಅಂತಹ ಯೋಜನೆಗಳನ್ನು ಜಾರಿಗೆ ತರುವ ಜಾಣ್ಮೆ ಹಾಗೂ ಇಚ್ಛಾಶಕ್ತಿ ಇರಬೇಕಷ್ಟೆ.

ಭರಪೂರ ನೀರಿನ ಮೂಲವಾದ ಜಿಲ್ಲೆಯ ಬೆಣ್ಣಿಹಳ್ಳ ದಶಕಗಳ ಹಿಂದೆ ತನ್ನ ಪಾಡಿಗೆ ಹರಿದು ಹೋಗುತ್ತಿತ್ತು. ಈಗ ಯಾಕೆ ಮನುಷ್ಯನ ಪಾಲಿಗೆ ಖಳನಾಯಕನಾಗಿದೆ ಎಂಬುದಕ್ಕೆ ಉತ್ತರ ತುಂಬಾ ಸರಳ. ಬರಗಾಲದಲ್ಲಿ ಬತ್ತುವ ಹಳ್ಳದ ದಂಡೆಯ ಒತ್ತುವರಿ, ಕೃಷಿ ಚಟುವಟಿಕೆ, ಅಪಾಯದ ಅರಿವಿದ್ದರೂ ಪ್ರವಾಹ ಪ್ರದೇಶದಲ್ಲಿ ತಲೆ ಎತ್ತಿದ ಮನೆಗಳಿಂದಾಗಿ ಹಳ್ಳ ಈಗ ವಿಲನ್ ಆಗಿದೆ. ಮನುಷ್ಯನ ಸ್ವಾರ್ಥಕ್ಕೆ ಬಲಿಯಾಗಿರುವ ಹಳ್ಳ, ಕೆಲವೊಮ್ಮೆ ತನ್ನ ಕೋಪವನ್ನು ಪ್ರವಾಹ ರೀತಿಯಲ್ಲಿ ತೀರಿಸಿಕೊಳ್ಳುತ್ತಿದೆ. ಇದಕ್ಕೆ ಪರಿಹಾರವಿಲ್ಲವೆ? ಎಂಬ ಪ್ರಶ್ನೆಗೆ ಉತ್ತರವೂ ಸ್ಪಷ್ಟ. ಹಳ್ಳದ ಮೂಲ ಹಾಗೂ ಹಾದಿಗೆ ಧಕ್ಕೆಯಾಗದ ಅಭಿವೃದ್ಧಿ ಚಟುವಟಿಕೆಗಳೇ ಇದಕ್ಕೆ ಶಾಶ್ವತ ಪರಿಹಾರ. ಇದಕ್ಕೆ ವಿರುದ್ಧವಾಗಿ ಮಾಡುವ ಎಲ್ಲಾ ಕೆಲಸಗಳು ಎಂದಾದರೂ ಒಮ್ಮೆ ಹಳ್ಳದ ಪಾಲಾಗುವುದು ಖಚಿತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT