ಗುರುವಾರ , ಅಕ್ಟೋಬರ್ 21, 2021
27 °C
ಸಂರಕ್ಷಿತ ಪ್ರದೇಶಗಳಿಂದ ಹೊರಬರುವ ವನ್ಯಜೀವಿಗಳ ಸಂರಕ್ಷಣೆ ಬಹು ದೊಡ್ಡ ಸವಾಲು

ಡಾ. ಎಚ್.ಆರ್.ಕೃಷ್ಣಮೂರ್ತಿ ಬರಹ: ಸುರಕ್ಷಿತ ಕವಚದಾಚೆಗೆ ವನ್ಯಜೀವಿ ಸಂರಕ್ಷಣೆ

ಡಾ. ಎಚ್.ಆರ್.ಕೃಷ್ಣಮೂರ್ತಿ Updated:

ಅಕ್ಷರ ಗಾತ್ರ : | |

ವನ್ಯಜೀವಿಗಳ ಸಂರಕ್ಷಣೆಯಲ್ಲಿ, ಕಾನೂನಾತ್ಮಕವಾಗಿ ಸ್ಥಾಪಿಸಲಾಗಿರುವ ‘ಸಂರಕ್ಷಿತ ಪ್ರದೇಶ’ಗಳು (ಪ್ರೊಟೆಕ್ಟೆಡ್ ಏರಿಯಾಸ್) ಮುಖ್ಯಪಾತ್ರ ವಹಿಸುತ್ತವೆ. ನಮ್ಮ ದೇಶದಲ್ಲಿರುವ ಸಂರಕ್ಷಿತ ಪ್ರದೇಶಗಳ ವ್ಯಾಪಕವಾದ ಜಾಲದಡಿಯಲ್ಲಿ 101 ರಾಷ್ಟ್ರೀಯ ಉದ್ಯಾನಗಳು, 553 ವನ್ಯಜೀವಿ ಅಭಯಾರಣ್ಯಗಳು, 86 ಕಾಯ್ದಿಟ್ಟ ಸಂರಕ್ಷಣಾ ಪ್ರದೇಶಗಳು ಮತ್ತು 163 ಸಮುದಾಯ ಸಂರಕ್ಷಣಾ ಪ್ರದೇಶಗಳಿವೆ. ದೇಶದ ಒಟ್ಟು ಭೂಭಾಗದ ಶೇ 4.9ರಷ್ಟು ಪ್ರದೇಶದಲ್ಲಿ ಈ 903 ಸಂರಕ್ಷಣಾ ಪ್ರದೇಶಗಳು ಹರಡಿವೆ.

ರಾಷ್ಟ್ರೀಯ ಉದ್ಯಾನ, ಅಭಯಾರಣ್ಯ ಮುಂತಾದ ಸಂರಕ್ಷಿತ ಪ್ರದೇಶಗಳಲ್ಲಿ ವನ್ಯಜೀವಿಗಳ ಸಂರಕ್ಷಣೆಗೆ ಗರಿಷ್ಠ ಆದ್ಯತೆ. ಜನ, ಜಾನುವಾರುಗಳೊಡನೆ ವನ್ಯಜೀವಿಗಳು ಸಂಪರ್ಕಕ್ಕೆ ಬರುವ ಸಾಧ್ಯತೆ ಬಹಳ ಕಡಿಮೆಯಾದ್ದರಿಂದ ಅವು ಬಹುಮಟ್ಟಿಗೆ ಸುರಕ್ಷಿತ. ಆದರೆ ವನ್ಯಜೀವಿಗಳ ಆವಾಸ ಈ ಸಂರಕ್ಷಿತ ಪ್ರದೇಶಗಳ ಭೌಗೋಳಿಕ ಗಡಿಯ ಆಚೆಗೂ ವಿಸ್ತರಿಸುವುದರಿಂದ ಅವು ಸಂರಕ್ಷಿತ ಪ್ರದೇಶವನ್ನು ಬಿಟ್ಟು ಹೊರಗೂ ಸಂಚರಿಸುತ್ತವೆ. ಹೀಗೆ ಹೊರಗಿರುವ ಅರಣ್ಯ, ಕುರುಚಲು ಕಾಡು, ಬಯಲು ಭೂಮಿಯ ಹುಲ್ಲುಗಾವಲುಗಳಲ್ಲಿ ಹುಲಿ, ಚಿರತೆ, ಸೀಳು ನಾಯಿ, ಕರಡಿ, ತೋಳ, ಗುಳ್ಳೆನರಿ, ಜಿಂಕೆ, ಕೃಷ್ಣಮೃಗ ಮುಂತಾದ ಜೀವಿಗಳಿವೆ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಮಾಹಿತಿಯ ಅನುಸಾರ, ದೇಶದ ಒಟ್ಟು ಹುಲಿಗಳಲ್ಲಿ ಶೇ 30ರಷ್ಟು ಸಂರಕ್ಷಿತ ಪ್ರದೇಶಗಳ ಹೊರಗಡೆ ಇವೆ.

ಗಂಗಾ ನದಿಯ ಡಾಲ್ಫಿನ್ ನಮ್ಮ ದೇಶದ ರಾಷ್ಟ್ರೀಯ ಜಲಜೀವಿ. ಬಿಹಾರದ ಸುಲ್ತಾನ್‍ಗಂಜ್- ಕಹಲಗಾವ್ ನಡುವೆ, ಗಂಗಾ ನದಿಯ 50 ಕಿ.ಮೀ. ಉದ್ದವನ್ನು ವಿಕ್ರಮ್‍ಶಿಲಾ ಡಾಲ್ಫಿನ್ ಅಭಯಾರಣ್ಯ ಎಂದು ಘೋಷಿಸಲಾಗಿದೆ. ಆದರೆ ಈ ಅಭಯಾರಣ್ಯದ ಹೊರಗೆ ನದಿಯಲ್ಲಿರುವ ಡಾಲ್ಫಿನ್‍ಗಳು ಕಳ್ಳಬೇಟೆಗೆ ಒಳಗಾಗುತ್ತಿವೆ. ಹದಿನೈದು ಕಿಲೊ ಗ್ರಾಮ್‍ಗಳಷ್ಟು ತೂಕದ ಗ್ರೇಟ್ ಇಂಡಿಯನ್ ಬಸ್ಟರ್ಡ್ ಅಥವಾ ಎರ್ಲಡ್ಡು ಹಕ್ಕಿಗೆ ನಮ್ಮ ದೇಶದಲ್ಲಿ 12 ಅಭಯಾರಣ್ಯಗಳಿದ್ದರೂ ಇಂದು ಅವುಗಳ ಸಂಖ್ಯೆ 150ಕ್ಕಿಂತ ಹೆಚ್ಚಿಲ್ಲ. ಅಭಯಾರಣ್ಯಗಳ ಹೊರಗೆ ಅವು ಬೇಟೆಗೀಡಾಗಿ ಸಾಯುತ್ತಿವೆ.

ದೇಶದ ಸಂರಕ್ಷಿತ ಪ್ರದೇಶಗಳ ವಿಸ್ತೀರ್ಣ ಬಹಳ ಹೆಚ್ಚೇನಿಲ್ಲ. ಸರಾಸರಿ ವಿಸ್ತೀರ್ಣ ಸುಮಾರು 270 ಚದರ ಕಿ.ಮೀ.ಗಳು. ಶೇ 31 ಸಂರಕ್ಷಣಾ ಪ್ರದೇಶಗಳ ವಿಸ್ತೀರ್ಣ 10 ಚದರ ಕಿ.ಮೀ.ಗಳಿಗಿಂತ ಕಡಿಮೆ. ಮಹಾರಾಷ್ಟ್ರದ ವಾರ್ಧಾ ಜಿಲ್ಲೆಯಲ್ಲಿರುವ ಬೋರ್ ಹುಲಿ ಸಂರಕ್ಷಣಾ ಪ್ರದೇಶದ ವಿಸ್ತೀರ್ಣ 138.12 ಚದರ ಕಿ.ಮೀ.ಗಳು. ತನ್ನದೇ ಆದ ಸರಹದ್ದನ್ನು ಸ್ಥಾಪಿಸಿ, ಕಾಯ್ದುಕೊಳ್ಳುವ ಗಂಡು ಹುಲಿಗೆ 60ರಿಂದ 100 ಚದರ ಕಿ.ಮೀ ಪ್ರದೇಶ ಬೇಕು. ಹೀಗಾಗಿ ಒಂದು ಹುಲಿ ಸಂರಕ್ಷಣಾ ಪ್ರದೇಶ ಎರಡೇ ಹುಲಿಗಳಿಗೆ ಸಾಕಾಗಬಹುದು. ಇದೇ ರೀತಿ ದಿನವೊಂದಕ್ಕೆ 10-12 ಕಿ.ಮೀ. ಸಂಚರಿಸುವ ಆನೆಗಳನ್ನು ನೂರಿನ್ನೂರು ಚದರ ಕಿ.ಮೀ.ಗಳ ವ್ಯಾಪ್ತಿಯಲ್ಲಿ ಹಿಡಿದಿಡುವುದು ಬಹು ಕಷ್ಟ.

ಕಟ್ಟುನಿಟ್ಟಿನ ಕಾನೂನು ಕ್ರಮಗಳು ಜಾರಿಯಲ್ಲಿರುವ ಸಂರಕ್ಷಿತ ಪ್ರದೇಶಗಳಲ್ಲಿ ವನ್ಯಜೀವಿಗಳ ಸಂಖ್ಯೆ, ದಟ್ಟಣೆ ಹೆಚ್ಚುವುದು ಸ್ವಾಭಾವಿಕ. ವನ್ಯಜೀವಿಗಳ ಸಂಖ್ಯೆ, ಆ ಆವಾಸ ಪೋಷಿಸಬಹುದಾದ ಗರಿಷ್ಠ ಸಂಖ್ಯೆಯನ್ನು ಮೀರಿದಾಗ ವನ್ಯಜೀವಿಗಳು ಅಲ್ಲಿಂದ ಚದುರಿ ಹೊರಬರುತ್ತವೆ. ಇತ್ತೀಚಿನ ಹುಲಿ ಗಣತಿಯ ವರದಿಯಂತೆ, ದೇಶದ 50 ಹುಲಿ ಸಂರಕ್ಷಣಾ ಯೋಜನಾ ಪ್ರದೇಶಗಳ ಪೈಕಿ 17ರಲ್ಲಿ ಹುಲಿಗಳ ಸಂಖ್ಯೆ, ಆ ಪ್ರದೇಶದ ಧಾರಣಾ ಸಾಮರ್ಥ್ಯವನ್ನು ಮೀರಿರುವುದು ಗೋಚರಿಸುತ್ತದೆ. ನಮ್ಮ ಬಹುತೇಕ ಸಂರಕ್ಷಿತ ಪ್ರದೇಶಗಳು ಜನವಸತಿ, ರೈಲು, ರಸ್ತೆ, ಕೃಷಿಭೂಮಿ, ಕೈಗಾರಿಕೆ, ಗಣಿಗಾರಿಕೆ ಮುಂತಾದವುಗಳಿಂದ ಆವೃತವಾಗಿರುವ ಸಣ್ಣ ಸಣ್ಣ, ಪ್ರತ್ಯೇಕ ದ್ವೀಪಗಳಂತಾಗಿವೆ. ಇಂತಹ ಪರಿಸ್ಥಿತಿಯಲ್ಲಿ ಸಂರಕ್ಷಿತ ಪ್ರದೇಶಗಳಿಂದ ಹೊರಗೆ ಬರುವ ಜೀವಿಗಳನ್ನು ವಿಶೇಷ ಕಾಳಜಿಯಿಂದ ರಕ್ಷಿಸದಿದ್ದರೆ, ಮಾನವ ಪ್ರಾಬಲ್ಯವಿರುವ ಪರಿಸರದಲ್ಲಿ ಅವುತ್ವರಿತಗತಿಯಲ್ಲಿ ಅಳಿವಿನಂಚಿನತ್ತ ಸಾಗಲಿವೆ ಎಂಬುದು ತಜ್ಞರ ಅಭಿಪ್ರಾಯ.

ಸಂರಕ್ಷಿತ ಪ್ರದೇಶಗಳ ಹೊರಗಿರುವ ವನ್ಯಜೀವಿಗಳ ಸಂರಕ್ಷಣೆಯ ದೃಷ್ಟಿಯಿಂದ ಸರ್ಕಾರ ಕೈಗೊಂಡ ಅತಿ ಮಹತ್ವದ ಮೊದಲ ನಿರ್ಧಾರವೆಂದರೆ ‘ಇಕೊ ಸೆನ್ಸಿಟಿವ್ ಜೋನ್’ಗಳ ಸ್ಥಾಪನೆ. ರಾಷ್ಟ್ರೀಯ ಉದ್ಯಾನಗಳು ಮತ್ತು ಅಭಯಾರಣ್ಯಗಳ ಸುತ್ತಲಿನ 10 ಕಿ.ಮೀ. ವ್ಯಾಪ್ತಿಯ ಪ್ರದೇಶವನ್ನು ಜೀವಿ ಪರಿಸ್ಥಿತಿ ಸೂಕ್ಷ್ಮವಲಯವ
ನ್ನಾಗಿ ಘೋಷಿಸುವ ನಿರ್ಧಾರವನ್ನು 2002ರ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸಭೆಯಲ್ಲಿ ಕೈಗೊಳ್ಳಲಾಯಿತು. ಈ ವಲಯ, ಸಂರಕ್ಷಿತ ಪ್ರದೇಶ ಮತ್ತು ಅಭಿವೃದ್ಧಿ ಚಟುವಟಿಕೆಗಳನ್ನು ಬೇರ್ಪಡಿಸಿ, ಆ ಎರಡರ ನಡುವೆ ಕಾಪು ವಲಯ ಅಥವಾ ಬಫರ್ ವಲಯವಾಗಿ ವನ್ಯಜೀವಿಗಳನ್ನು ರಕ್ಷಿಸುವ ಕೆಲಸ ಮಾಡುತ್ತದೆ.

ವನ್ಯಜೀವಿಗಳು ವಲಸೆ ಹೋಗುವ, ಪ್ರತ್ಯೇಕಗೊಂಡ ಆವಾಸಗಳ ನಡುವೆ ಸಂಚರಿಸುವ ಹಾದಿ ಅಥವಾ ಕಾರಿಡಾರ್‌ಗಳನ್ನು ಈ ಸೂಕ್ಷ್ಮವಲಯ ಒಳಗೊಂಡಿರುವುದು ಸಾಮಾನ್ಯ. ಈ ಕಾನೂನು ಜಾರಿಗೆ ಬರುವ ಮುಂಚೆ, ಈ ವಲಯದಲ್ಲಿ ಅಭಿವೃದ್ಧಿ ಯೋಜನೆಗಳಿಗೆ ದೊರೆತಿದ್ದ ಎಲ್ಲ ಅನುಮೋದನೆಗಳನ್ನೂ ಮತ್ತೊಮ್ಮೆ ಪರಿಶೀಲಿಸುವಂತೆ ರಾಷ್ಟ್ರೀಯ ವನ್ಯಜೀವಿ ಮಂಡಳಿಗೆ ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿತು. ಇಲ್ಲಿಯವರೆಗೆ 303 ಸಂರಕ್ಷಿತ ಪ್ರದೇಶಗಳ ಸುತ್ತ ಈ ರೀತಿಯ ಸೂಕ್ಷ್ಮ ವಲಯಗಳನ್ನು ಕಾನೂನು ರೀತ್ಯಾ ಸ್ಥಾಪಿಸಲಾಗಿದೆ.

‘ವನ್ಯಜೀವಿ ಆವಾಸಗಳ ಸಮಗ್ರ ಅಭಿವೃದ್ಧಿ’ (ಇಂಟಿಗ್ರೇಟೆಡ್ ಡೆವಲಪ್‍ಮೆಂಟ್ ಆಫ್ ವೈಲ್ಡ್‌ಲೈಫ್ ಹ್ಯಾಬಿಟಾಟ್) ಕೇಂದ್ರ ಪರಿಸರ, ಅರಣ್ಯ ಮತ್ತು ವಾಯುಗುಣ ಬದಲಾವಣೆ ಸಚಿವಾಲಯ ಪ್ರಾಯೋಜಿತ ಯೋಜನೆ. ಸಂರಕ್ಷಿತ ಪ್ರದೇಶಗಳ ಹೊರಗಿರುವ ವನ್ಯಜೀವಿ ಆವಾಸಗಳು, ವನ್ಯಜೀವಿಗಳು ಸಂಚರಿಸುವ ಕಾರಿಡಾರ್‌ಗಳು, ಜೈವಿಕ ವೈವಿಧ್ಯದ ಮಹತ್ವದ ತಾಣಗಳು ಮುಂತಾದವುಗಳನ್ನು ಸಂರಕ್ಷಿಸಿ, ವನ್ಯಜೀವಿ ಗಳಿಗೆ ನೆರವಾಗಲು ಅವುಗಳನ್ನು ಅಭಿವೃದ್ಧಿಪಡಿಸುವ, ಭೂಬಳಕೆಯ ಪದ್ಧತಿಗಳಲ್ಲಿ ಬದಲಾವಣೆಗಳನ್ನು ತರುವ ಕೆಲಸಗಳಿಗೆ ಈ ಯೋಜನೆಯಡಿಯಲ್ಲಿ ಧನಸಹಾಯ ಹಾಗೂ ಮಾರ್ಗದರ್ಶನಗಳು ದೊರೆಯುತ್ತಿವೆ.

ಹಿಮಾಲಯ, ಪಶ್ಚಿಮ ಘಟ್ಟಗಳು, ಕರಾವಳಿ, ದೇಶದ ಮಧ್ಯಭಾಗದಲ್ಲಿನ ಬಯಲುಭೂಮಿ ಮುಂತಾದ ವಿವಿಧ ಆವಾಸಗಳಲ್ಲಿರುವ ಸುಮಾರು 1.5 ಲಕ್ಷ ಪವಿತ್ರವನಗಳೂ ಸಂರಕ್ಷಿತ ಪ್ರದೇಶಗಳ ಹೊರಗಿರುವ ವನ್ಯಜೀವಿಗಳನ್ನು ಸಂರಕ್ಷಿಸುವಲ್ಲಿ ಮಹತ್ವದ ಪಾತ್ರ ವಹಿಸಬಹುದೆಂಬುದು ತಜ್ಞರ ಅಭಿಪ್ರಾಯ. ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ ಮತ್ತು ಬರ್ಡ್ ಲೈಫ್ ಇಂಟರ್‌ನ್ಯಾಷನಲ್ ಸಂಸ್ಥೆಯು ಜೊತೆಗೂಡಿ, ಸಂರಕ್ಷಿತ ಪಕ್ಷಿಧಾಮಗಳ ಹೊರಗೆ, 1,212 ಪ್ರಭೇದಗಳಿಗೆ ಸೇರಿದ ಸಾವಿರಾರು ಹಕ್ಕಿಗಳಿಗೆ ಆಶ್ರಯ ನೀಡಿರುವ 544 ತಾಣಗಳನ್ನು ದೇಶದ ವಿವಿಧ ಭಾಗಗಳಲ್ಲಿ ಗುರುತಿಸಿವೆ. ಸಂರಕ್ಷಿತ ಪ್ರದೇಶಗಳಿಂದ ಹೊರಗಿರುವ ವನ್ಯಜೀವಿಗಳ ಸಂರಕ್ಷಣೆಗೆ ಸ್ಥಳೀಯ ರೈತರು, ಅರಣ್ಯ ಉತ್ಪನ್ನಗಳ ಸಂಗ್ರಹಕಾರರು, ಭೂಮಾಲೀಕರು ಮುಂತಾದವರ ಸಹಭಾಗಿತ್ವ ಮತ್ತು ಸಹಕಾರ ತೀರಾ ಅಗತ್ಯ.

ಈ ಪ್ರದೇಶಗಳಲ್ಲಿ ವನ್ಯಜೀವಿಗಳ ಹಿತದೃಷ್ಟಿಯಿಂದ ಭೂಬಳಕೆಯಲ್ಲಿ ತರುವ ಯಾವುದೇ ಬದಲಾವಣೆ, ಸುಧಾರಣೆಗಳಿಂದ ಸ್ಥಳೀಯರಿಗೆ ಉಪಯೋಗವಾಗಿ, ಆರ್ಥಿಕ ಪ್ರಯೋಜನ ದೊರೆತರೆ ಮಾತ್ರ ಅವರ ಸಹಕಾರ ದೊರೆಯುತ್ತದೆ. ಸತ್ತ ವನ್ಯಜೀವಿಗಳಿಗಿಂತ ಬದುಕಿರುವ ಜೀವಿಗಳಿಂದಲೇ ನಮಗೆ ಹೆಚ್ಚು ಪ್ರಯೋಜನ ಎಂಬ ಸತ್ಯವನ್ನು ಮನಗಾಣಿಸುವಂತಹ ಯೋಜನೆಗಳು ಕಾರ್ಯ ಗತಗೊಂಡು ಯಶಸ್ವಿಯಾದರೆ ಆ ಮಟ್ಟಿಗೆ ಸಂರಕ್ಷಣೆ ಸುಲಭವಾಗುತ್ತದೆ. ನಾಗರಹೊಳೆ, ಬಂಡೀಪುರ ರಾಷ್ಟ್ರೀಯ ಉದ್ಯಾನಗಳ ಸುತ್ತಲಿನ 287 ಹಳ್ಳಿಗಳಲ್ಲಿ ಬೆಂಗಳೂರಿನ ವೈಲ್ಡ್‌ಲೈಫ್ ಕನ್ಸರ್ವೇಶನ್ ಸೊಸೈಟಿಯ ವಿಜ್ಞಾನಿಗಳು ನಡೆಸಿರುವ ಅಧ್ಯಯನ ಈ ಅಭಿಪ್ರಾಯ
ವನ್ನೇ ಪುರಸ್ಕರಿಸಿದೆ.

ಸಂರಕ್ಷಿತ ಪ್ರದೇಶಗಳ ಹೊರಗಿರುವ ವನ್ಯಜೀವಿ ಗಳನ್ನು ಉಳಿಸುವ ಪ್ರಯತ್ನಗಳು ನಡೆಯುತ್ತಿರುವ ಸಮಯದಲ್ಲೇ, ಅಂತಹ ಪ್ರದೇಶಗಳ ಸ್ವಲ್ಪ ಭಾಗವನ್ನು ಅಭಿವೃದ್ಧಿಯ ಹೆಸರಿನಲ್ಲಿ ಕೈಬಿಡುವ ಪ್ರಕರಣಗಳೂ ನಡೆದಿವೆ. ಡೆಹ್ರಾಡೂನ್ ವಿಮಾನ ನಿಲ್ದಾಣದ ವಿಸ್ತರಣೆಗಾಗಿ, ತಾಂತ್ರಿಕ ತೊಡಕುಗಳು ಇಲ್ಲದೇ ಭೂಮಿಯನ್ನು ನೀಡುವ ಸಲುವಾಗಿ, ಇಡೀ ಶಿವಾಲಿಕ್‌ ಆನೆ ಸಂರಕ್ಷಣಾ ಯೋಜನೆಯ ಪ್ರದೇಶವನ್ನೇ ಡಿನೋಟಿಫೈ ಮಾಡುವ ನಿರ್ಧಾರವನ್ನು ಉತ್ತರಾಖಂಡ ರಾಜ್ಯದ ವನ್ಯಜೀವಿ ಸಲಹಾ ಮಂಡಳಿ ಕೈಗೊಂಡಿತ್ತು. ಈ ನಿರ್ಧಾರವನ್ನು ಉತ್ತರಾಖಂಡ ಹೈಕೋರ್ಟ್‌ ಈ ವರ್ಷದ ಜನವರಿಯಲ್ಲಿ ತಡೆಹಿಡಿಯಿತು. ದೇಶದ ವಿವಿಧ ಭಾಗಗಳಲ್ಲಿ ವನ್ಯಜೀವಿ ಆಸಕ್ತ ನಾಗರಿಕ ಸಂಘಟನೆಗಳು ಈ ದಿಕ್ಕಿನಲ್ಲಿ ಮಾಡುತ್ತಿರುವ ಕೆಲಸ ಶ್ಲಾಘನೀಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು