ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರವಿಂದ ಚೊಕ್ಕಾಡಿ ಲೇಖನ: ಶ್ರಮಸಂಸ್ಕೃತಿ ಮತ್ತು ಶೈಕ್ಷಣಿಕ ಪ್ರಜ್ಞೆ

ಮಕ್ಕಳು ಸ್ವ ಶ್ರಮದಿಂದ ಆದಾಯ ಗಳಿಸಿದರೆ ತಪ್ಪಲ್ಲ. ಆದರೆ ಅದು ಬಾಲಕಾರ್ಮಿಕತನ ಆಗಬಾರದು
Last Updated 14 ಮೇ 2021, 19:31 IST
ಅಕ್ಷರ ಗಾತ್ರ

ಎರಡು ತಿಂಗಳ ಹಿಂದೆ ಒಬ್ಬ ವಿದ್ಯಾರ್ಥಿಯನ್ನು ಮಾತನಾಡಿಸಿದಾಗ, ಕಳೆದ ಕೊರೊನಾ ಅವಧಿಯನ್ನು ಅವನು ಸದುಪಯೋಗಪಡಿಸಿಕೊಂಡದ್ದು ಗೊತ್ತಾಯಿತು. ಖಾಲಿ ಬಿದ್ದಿದ್ದ ತನ್ನ ಭೂಮಿಯಲ್ಲಿ ಒಂದಷ್ಟು ಕಾಯಿಪಲ್ಲೆ-ಹಣ್ಣುಗಳನ್ನೆಲ್ಲ ಬೆಳೆದು ಸುಮಾರು ಒಂದು ಲಕ್ಷ ರೂಪಾಯಿಯವರೆಗೆ ಸಂಪಾದಿಸಿದ್ದ. ಶ್ರಮ ಸಂಸ್ಕೃತಿಯ ಅರಿವನ್ನು ಬೆಳೆಸುವ ದಿಸೆಯಲ್ಲಿ ಇದು ಅಭಿನಂದನೀಯ ವಿಚಾರವಾಗಿದೆ.

ಆದರೆ ಇದು ಗಾಂಧೀಜಿಯವರ ಆರ್ಥಿಕ ಚಿಂತನೆಗಳ ಅನುಷ್ಠಾನವಾಗಿಯಷ್ಟೆ ಉಳಿಯುವುದಿಲ್ಲ. ಬದಲು ಮಕ್ಕಳು ಶಿಕ್ಷಣದ ಕುರಿತ ಆಸಕ್ತಿಯನ್ನು ಕಳೆದುಕೊಳ್ಳುವುದಕ್ಕೂ ಕಾರಣವಾಗುತ್ತದೆ. ಒಂದಷ್ಟು ಅಧ್ಯಯನ ನಡೆಸಿದಾಗ, ಹಣ ಸಂಪಾದಿಸಿದ ಅದೇ ವಿದ್ಯಾರ್ಥಿ ಶಾಲಾ ಕಲಿಕೆಯಲ್ಲಿ ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಹೊಂದಿದ್ದ ಆಸಕ್ತಿಯನ್ನು, ಮೊದಲ ಕೊರೊನಾ ನಿರ್ಬಂಧದ ನಂತರದ ದಿನಗಳಲ್ಲಿ ಹೊಂದಿಲ್ಲದಿರುವುದೂ ಕಂಡುಬಂದಿತು. ಮತ್ತು ಈ ವಿದ್ಯಾರ್ಥಿ ಶ್ರಮ ಸಂಸ್ಕೃತಿಯ ಅರಿವಿದ್ದ ಕುಟುಂಬದಿಂದಲೇ ಬಂದಿದ್ದು, ಹೊಸದಾಗಿ ಶ್ರಮ ಸಂಸ್ಕೃತಿಯನ್ನು ಕಲಿಯುವಂತಹದ್ದೇನೂ ಇರಲಿಲ್ಲ. ಆದರೆ ಹಣ ಗಳಿಕೆಯು ಆ ವಿದ್ಯಾರ್ಥಿಯಲ್ಲೂ ವಿದ್ಯಾರ್ಥಿಯ ಕುಟುಂಬದಲ್ಲೂ ಬೇರೆಯದೇ ರೀತಿಯ ಆಲೋಚನಾ ಕ್ರಮವನ್ನು ರೂಪಿಸಿತ್ತು.

ಶಿಕ್ಷಣವನ್ನು ಪಡೆಯುವುದೇಕೆ? ಉದ್ಯೋಗಕ್ಕೆ. ಉದ್ಯೋಗದ ಉದ್ದೇಶ? ಆದಾಯ ಗಳಿಕೆ. ಈಗಲೇ ಆದಾಯ ಗಳಿಕೆಯ ಸಾಮರ್ಥ್ಯ ಇದೆಯಲ್ಲ, ಮತ್ತೇಕೆ ಶಿಕ್ಷಣ? ಈ ರೀತಿಯ ಸರಳ ತರ್ಕವನ್ನು ರೂಪಿಸಿಕೊಳ್ಳುವುದಕ್ಕೂ ಇದು ಪ್ರಚೋದಕವೇ ಆಯಿತು.

ಭಾರತದಲ್ಲಿ ಕೃಷಿರಂಗ ಮತ್ತು ಇತರ ದೈಹಿಕ ಶ್ರಮದ ಕ್ಷೇತ್ರದ ಉದ್ಯೋಗಗಳಿಗೆ ಆರ್ಥಿಕ ಆಯಾಮ ಮಾತ್ರವೇ ಇಲ್ಲ. ‌ಸಾಮಾಜಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಆಯಾಮಗಳೂ ಇವೆ. ಇಲ್ಲಿ ಉದ್ಯೋಗವು ವ್ಯಕ್ತಿಗೌರವದ ನಿರ್ಧಾರಕ ಅಂಶವಾಗಿ ಕೆಲಸ ಮಾಡುತ್ತದೆ. ಬೌದ್ಧಿಕ ಶ್ರಮದ ಕ್ಷೇತ್ರದ ಕೆಲಸಗಾರರಿಗೆ ಸಾಮಾಜಿಕ ಗೌರವ ಜಾಸ್ತಿ ಇರುತ್ತದೆ. ಭಾರತದ ಸಾಮಾಜಿಕ ರಚನೆಯ ಜಟಿಲ ಸ್ವರೂಪಗಳು ನಿರ್ಮಿಸುವ ಸಾಮಾಜಿಕ ಸ್ಥಾನಮಾನಗಳಲ್ಲಿ ಕೆಳಸ್ತರದ ಸ್ಥಾನಮಾನವನ್ನು ಹೊಂದಿದವರಿಗೆ ಕುಟುಂಬದ ಗೌರವವನ್ನು ಹೆಚ್ಚಿಸಿ
ಕೊಳ್ಳಲು ಇರುವ ಏಕೈಕ ಅವಕಾಶವೆಂದರೆ, ಉದ್ಯೋಗ ವನ್ನು ದೈಹಿಕ ಶ್ರಮದ ಕ್ಷೇತ್ರದಿಂದ ಬೌದ್ಧಿಕ ಶ್ರಮದ ಕ್ಷೇತ್ರಕ್ಕೆ ಬದಲಾಯಿಸುವುದಾಗಿದೆ. ಈ ಬದಲಾವಣೆಯ ಪ್ರಮುಖ ನಿಯೋಗಿಗಳು ಎರಡು: ಶಿಕ್ಷಣ ಮತ್ತು ಆಧುನಿಕ ನಗರ ಸಂಸ್ಕೃತಿ.

ಹಲವು ರೀತಿಯಲ್ಲಿ‌ ನಗರ ಸಂಸ್ಕೃತಿಯು ಕೆಡುಕು ಗಳನ್ನು ಸೃಷ್ಟಿಸುತ್ತದೆ. ಆದರೆ ಹಳ್ಳಿಯ ಸಂಸ್ಕೃತಿಯು ಹುಟ್ಟುಹಾಕಿದ ಕೆಡುಕುಗಳು ಆಧುನಿಕ ನಗರ ಸಂಸ್ಕೃತಿಯಲ್ಲಿ ಇಲ್ಲ. ಉದಾಹರಣೆಗೆ, ಮತಧರ್ಮಗಳ ನಿರ್ಬಂಧಗಳಿಂದ ಹೊರಬಂದು ಸ್ವತಂತ್ರವಾಗಿ ಬದುಕಲು ಬಯಸಿದ ಮಹಿಳೆಯರಿಗೆ ಉದ್ಯೋಗ ಮಾಡಲು ನಗರವೇ ಅನುಕೂಲಕರ ಸನ್ನಿವೇಶವನ್ನು ಒದಗಿಸುತ್ತದೆ. ಏಕೆಂದರೆ ನಗರದಲ್ಲಿ ಸಾಮಾಜಿಕ ಜೀವನವಿಲ್ಲ. ವೈಯಕ್ತಿಕ ಜೀವನವಿರುವುದು. ಯಾರು ಯಾವ ಕಟ್ಟಲೆಗಳನ್ನು ಪಾಲಿಸದಿದ್ದರೂ ಯಾರಿಗೆ ಏನೂ ಆಗಬೇಕಾಗಿಲ್ಲ. ನಗರದಲ್ಲಿರುವ ಈ ಸ್ವಾತಂತ್ರ್ಯ ಹಳ್ಳಿಗಳಲ್ಲಿ ಇಲ್ಲ. ಆದರೆ ಇದಕ್ಕೆ ಅಂತಿಮ ಪರಿಹಾರ ನಗರೀಕರಣ ಅಲ್ಲ.
ಬದಲು, ನಗರದಲ್ಲಿರುವ ಆಯ್ಕೆಯ ಸ್ವಾತಂತ್ರ್ಯದ ಸನ್ನಿವೇಶವನ್ನು ಹಳ್ಳಿಗಳಿಗೆ ಕೊಂಡೊಯ್ಯುವುದು. ಇದನ್ನು ಕೂಡ ಸಾಧಿಸಲು ಸಾಧ್ಯವಾಗುವುದು ಶಿಕ್ಷಣದ ಮೂಲಕ ವಾಗಿದೆ. ಆದ್ದರಿಂದ ಭಾರತದಲ್ಲಿ ಶಿಕ್ಷಣವು ಕೇವಲ ವ್ಯಕ್ತಿತ್ವ ವಿಕಾಸದ ಸಾಧನವಲ್ಲ. ಸಾಮಾಜಿಕ ವಿಕಾಸದ ಸಾಧನವೂ ಹೌದು.

ಹಾಗಿದ್ದರೆ ಶಿಕ್ಷಣದ ಉದ್ದೇಶ ಉದ್ಯೋಗ ಗಳಿಕೆ ಮಾತ್ರವೇ ಎಂದರೆ, ಖಂಡಿತವಾಗಿಯೂ ಅಲ್ಲ. ಆದರೆ ಮೂರು ಕಾರಣಗಳಿಗಾಗಿ ಉದ್ಯೋಗದೊಂದಿಗೆ ಶಿಕ್ಷಣಕ್ಕೆ ಇರುವ ಸಂಬಂಧವನ್ನು ಸ್ವೀಕರಿಸಬೇಕಾಗುತ್ತದೆ. ಯಾವುದೇ ದೇಶದಲ್ಲಿ ಅನ್ನ ಗಳಿಕೆಯ ಸಾಮರ್ಥ್ಯವನ್ನು ನೀಡುವುದು ಶಿಕ್ಷಣದ ಮುಖ್ಯ ಉದ್ದೇಶಗಳಲ್ಲಿ ಒಂದು ಎನ್ನುವುದು ಸಾರ್ವತ್ರಿಕ ಒಪ್ಪಿತ ವಿಚಾರವಾಗಿದೆ. ಆದರೆ ಅದೊಂದೇ ಅಲ್ಲ ಎನ್ನುವುದು ಶೈಕ್ಷಣಿಕ ತತ್ವಜ್ಞಾನದ ನಿಲುವಾಗಿದೆ. ಭಾರತದಲ್ಲಿ ಆರ್ಥಿಕ ಒತ್ತಡ ಜಾಸ್ತಿ ಯಾದಾಗ ಸಹಜವಾಗಿಯೇ ಶಿಕ್ಷಣ ಮತ್ತು ಉದ್ಯೋಗದ ಸಂಬಂಧಗಳು ಬಿಗಿಯಾಗಿ, ಮಾರುಕಟ್ಟೆಯ ಪರಿಭಾಷೆ ಯಲ್ಲಿ, ಒಳ್ಳೆಯ ಶಾಲೆಗಳ ಹುಡುಕಾಟ ನಡೆಯುತ್ತದೆ. ಉಪದೇಶ ಮಾಡುವುದರಿಂದ ಜನರ ಈ ಮನೋಧರ್ಮವನ್ನು ಬದಲಿಸಲು ಆಗುವುದಿಲ್ಲ. ಏಕೆಂದರೆ ಉದ್ಯೋಗವು ಅನೇಕರು ತಮ್ಮದಲ್ಲದ ತಪ್ಪುಗಳಿಗೆ ಕಂಡು ಕೊಳ್ಳಲು ಇರುವ ಪರಿಹಾರವಾಗಿದೆ. ಆದ್ದರಿಂದ ಶಿಕ್ಷಣಕ್ಕೆ ಶೈಕ್ಷಣಿಕ ವ್ಯಾಪ್ತಿಯನ್ನು ಮೀರಿದ ಮಹತ್ವ ಭಾರತದಲ್ಲಿದೆ.

ಹಾಗಿದ್ದರೆ ಕೊಡುತ್ತಿರುವ ಶಿಕ್ಷಣವು ಇದೆಲ್ಲವನ್ನೂ ಸಾಧಿಸುತ್ತಿದೆಯೇ ಎಂದು ಕೇಳಿದರೆ ಬಹಳಷ್ಟು ಟೀಕೆಗಳೇ ಕೇಳಿಬರುತ್ತವೆ. ಆದರೆ ಟೀಕೆಯ ಉದ್ದೇಶ ಶಿಕ್ಷಣದ ಉತ್ತಮೀಕರಣವೇ ಹೊರತು, ಇರುವ ಶಿಕ್ಷಣವೂ ಬೇಡ ಎಂದಲ್ಲ. ವರ್ತಮಾನದ ಶೈಕ್ಷಣಿಕ ಸನ್ನಿವೇಶವನ್ನು ಸಮರ್ಪಕವಾಗಿ ನಿರ್ವಹಿಸದಿದ್ದರೆ, ಶಿಕ್ಷಣದ ಅವಶ್ಯಕತೆ ಇದೆಯೇ ಎಂದು ನಿಧಾನವಾಗಿ ಮಕ್ಕಳಿಗೆ ಅನಿಸಲು ಅವಕಾಶ ಸೃಷ್ಟಿಯಾಗುವ ಸಮಸ್ಯೆ ಇದೆ.

ಒಂದು ತರಗತಿ ಎಂದರೆ ಪಾಠ ಪುಸ್ತಕದ, ವಿಚಾರದ ವರ್ಗಾವಣೆಯಷ್ಟೇ ಅಲ್ಲ ಅಥವಾ ಪರೀಕ್ಷೆಗೆ ಸಿದ್ಧಪಡಿಸುವುದಷ್ಟೆಯೂ ಅಲ್ಲ. ಶಿಕ್ಷಕರು ಮಕ್ಕಳನ್ನು ಪರೀಕ್ಷೆಗಾಗಿಯಷ್ಟೆ ಸಿದ್ಧಪಡಿಸಿದಾಗಲೂ ತಾನೇ ತಾನಾಗಿ ತರಗತಿಯು ಒಂದು ಶೈಕ್ಷಣಿಕ ಸನ್ನಿವೇಶವನ್ನು ರೂಪಿಸುತ್ತದೆ. ಮಕ್ಕಳಲ್ಲಿ ಶೈಕ್ಷಣಿಕ ಪ್ರಜ್ಞೆ ಉಳಿಯಲು ಈ ಸನ್ನಿವೇಶ ಅತ್ಯಂತ ಪ್ರಧಾನವಾದುದಾಗಿದೆ. ಆನ್‌ಲೈನ್‌ ತರಗತಿಯಲ್ಲಾಗಲಿ, ನೋಟ್ಸ್‌ ಒದಗಿಸುವುದರಿಂದಾಗಲಿ, ಶಿಕ್ಷಕರು ದೂರವಾಣಿ ಕರೆ ಮಾಡುವುದರಿಂದಾಗಲಿ ಈ ಸನ್ನಿವೇಶ ವನ್ನು ನಿರ್ಮಿಸಲು ಆಗುವುದಿಲ್ಲ.

ಆದರೆ, ಪರಿಸ್ಥಿತಿ ಹದಗೆಟ್ಟಿದೆ. ತರಗತಿಗೆ ಸರಿ ಸಮನಾದ ಬದಲಿ ಇಲ್ಲ. ಆದರೂ ಬದಲಿಯನ್ನು ರೂಪಿಸಿಕೊಳ್ಳಬೇಕಾಗಿದೆ. ಹೀಗೆ ಬದಲಿಯನ್ನು ರೂಪಿಸಿಕೊಳ್ಳುವಾಗ ಕಲಿಕಾ ಪರಿಸರದಿಂದ ಬಂದ ಮಕ್ಕಳ ವಿಚಾರ ಸವಾಲಿನದ್ದಾಗುವುದಿಲ್ಲ. ಆದರೆ ಇಂಥ ಹಿನ್ನೆಲೆ ಯಿಲ್ಲದ ಕುಟುಂಬಗಳಿಂದ ಬಂದ ಮಕ್ಕಳಲ್ಲಿ ಶೈಕ್ಷಣಿಕ ಪ್ರಜ್ಞೆಯನ್ನು ಉಳಿಸುವುದು ಸವಾಲಿನ ಕೆಲಸ.

ತಂದೆ-ತಾಯಿಗೆ ಸಹಾಯಕವಾಗಿ ಅವರ ಮಾರ್ಗದರ್ಶನದಲ್ಲಿ ಸ್ವ ಶ್ರಮದಿಂದ ಆದಾಯ ಗಳಿಸಿದರೆ ತಪ್ಪಲ್ಲ. ಆದರದು ಬಾಲಕಾರ್ಮಿಕತನ ಆಗಬಾರದು. ಶ್ರಮ ಸಂಸ್ಕೃತಿಯಲ್ಲಿ ತೊಡಗಿಕೊಳ್ಳುವುದು ಕಲಿಕೆಯ ಒಂದು ಅಂಗವಾಗಿ ಒಳ್ಳೆಯದೇ. ಆದರೆ ಅದು ಶೈಕ್ಷಣಿಕ ಪ್ರಜ್ಞೆಯನ್ನು ಹಾಳುಗೆಡಹಬಾರದು. ಕೋವಿಡ್‌ನ ಸನ್ನಿವೇಶ ಇಷ್ಟೇ ಸಮಯದಲ್ಲಿ ಮುಗಿಯುತ್ತದೆ ಎನ್ನಲು ಸಾಧ್ಯವಿಲ್ಲ. ಆದರೆ ಶೈಕ್ಷಣಿಕ ಪ್ರಜ್ಞೆ ಮಕ್ಕಳಿಂದ ಹೊರಟು ಹೋದರೆ ಅದು ಮರುಗಳಿಕೆಯಾಗುವುದಿಲ್ಲ.

–ಅರವಿಂದ ಚೊಕ್ಕಾಡಿ
–ಅರವಿಂದ ಚೊಕ್ಕಾಡಿ

ಮಕ್ಕಳಲ್ಲಿ ಶೈಕ್ಷಣಿಕ ಪ್ರಜ್ಞೆಯನ್ನು ಉಳಿಸಲು ಶಿಕ್ಷಕರ ಪಾಲುದಾರಿಕೆ ಬೇಕೇ ಬೇಕು. ಸದ್ಯದ ಸ್ಥಿತಿಯಲ್ಲಿ ದೂರವಾಣಿಯ ಸಂಪರ್ಕ ಅನಿವಾರ್ಯವಾಗಿದೆ. ಆದರೆ ದೂರವಾಣಿಯಲ್ಲಿ‌ ಮಕ್ಕಳೊಂದಿಗೆ ಮಾತ್ರ ಸಂಪರ್ಕವಾಗಬಾರದು. ಶಿಕ್ಷಕರು ಪೋಷಕರೊಂದಿಗೆ ಮಾತನಾಡಿ ದಿನದಲ್ಲಿ ಒಂದು ಗಂಟೆಯಾದರೂ ಪೋಷಕರು ಮಕ್ಕಳೊಂದಿಗೆ ಶೈಕ್ಷಣಿಕ ವಿಚಾರಗಳನ್ನು ಮಾತನಾಡುವಂತೆ ಮಾಡಬೇಕು.

ಪೋಷಕರನ್ನು ಇದಕ್ಕೆ ಸಿದ್ಧಪಡಿಸುವುದು ಬಹು ಸವಾಲಿನ ಕೆಲಸ. ಕೆಲವು ಪೋಷಕರು ಮುಗ್ಧವಾಗಿ ಶಿಕ್ಷಕರಿಗೆ, ‘ನಿಮ್ಮ‌ ಮಗು ಎಂದು ತಿಳಿದುಕೊಂಡು ಏನು ಬೇಕಾದರೂ ಮಾಡಿ’ ಎಂದು ಮಕ್ಕಳ ಕೈಗೆ ಫೋನ್ ಕೊಟ್ಟುಬಿಡುತ್ತಾರೆ. ನಿರ್ವಹಣೆ ಮಾಡಬೇಕಾದದ್ದು ತಾವೇ ಎಂದು ಪೋಷಕರಿಗೆ ಗೊತ್ತಾಗುವ ಹಾಗೆ ಶಿಕ್ಷಕರು ಮಾಡಬೇಕು. ಶೈಕ್ಷಣಿಕ ವಾಟ್ಸ್‌ಆ್ಯಪ್ ಗುಂಪುಗಳಲ್ಲಿನ ಚರ್ಚೆಗಳು ಕೇವಲ ಪ್ರಶ್ನೋತ್ತರಗಳ ಅಭ್ಯಾಸಕ್ಕೆ ಸೀಮಿತ ವಾಗಬಾರದು. ಮಕ್ಕಳ ಶೈಕ್ಷಣಿಕ ಆಕಾಂಕ್ಷೆಯ ಬಗ್ಗೆ, ಪಠ್ಯದ ವಿಶೇಷತೆಗಳ ಬಗ್ಗೆಯೆಲ್ಲ ಮುಕ್ತ ಚರ್ಚೆ ಇರಬೇಕು. ಆಗ ಮಕ್ಕಳಲ್ಲಿ ಕಲಿಕಾ ಒತ್ತಡ ಇರದೆ ನಿರಾಳವಾಗಿ ಭಾಗವಹಿಸುತ್ತಾರೆ. ಆ ಭಾಗವಹಿಸುವಿಕೆಯ ಮೂಲಕ ಶೈಕ್ಷಣಿಕ ಪ್ರಜ್ಞೆ ಮಕ್ಕಳಲ್ಲಿ ಉಳಿಯುತ್ತದೆ.

ಅಲ್ಲದೆ ವಿವಿಧ ಮಾಧ್ಯಮಗಳು ಕೊಡುವ ಶೈಕ್ಷಣಿಕ ಸಾಮಗ್ರಿಗಳು ಪರೀಕ್ಷೆಗಳ ಆಚೆಗೆ ಬೇರೆ ಬೇರೆ ಪಠ್ಯಗಳ ಆಸಕ್ತಿದಾಯಕ ವಿಷಯಗಳ ಕಡೆಗೆ ಇದ್ದು, ವಿದ್ಯಾರ್ಥಿ ಗಳೂ ಅದರಲ್ಲಿ ತೊಡಗಿಕೊಳ್ಳುವಂತೆ ಇರಬೇಕು. ಒಟ್ಟಾರೆಯಾಗಿ ಕಲಿಕಾ ಪರಿಸರದ ಹಿನ್ನೆಲೆ ಇಲ್ಲದ ಮಕ್ಕಳಲ್ಲಿ ಔಪಚಾರಿಕ ಶಿಕ್ಷಣದ ಎಚ್ಚರ ಉಳಿಯುವ ಹಾಗೆ ನೋಡಿಕೊಳ್ಳುವುದು ಸದ್ಯದ ಅಗತ್ಯವಾಗಿದೆ ಎಂಬ ಅರಿವು ಸಾರ್ವತ್ರಿಕವಾಗಿ ಇರಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT