ಗುರುವಾರ , ನವೆಂಬರ್ 26, 2020
21 °C
ನವೆಂಬರ್‌ 14: ವಿಶ್ವ ಮಧುಮೇಹ ದಿನ

PV Web Exclusive | ಶುಶ್ರೂಷಕರು ಬದಲಾವಣೆ ತರಬಲ್ಲರು!

ಕೆ.ನರಸಿಂಹಮೂರ್ತಿ Updated:

ಅಕ್ಷರ ಗಾತ್ರ : | |

Prajavani

ಜಗತ್ತಿನಲ್ಲಿ ವೈದ್ಯರಿಗಿರುವಷ್ಟು ಮಹತ್ವ ಶುಶ್ರೂಷಕರಿಗೆ ಇಲ್ಲ. ಆದರೆ ಮಧುಮೇಹದ ವಿಷಯದಲ್ಲಿ ಈ ಸನ್ನಿವೇಶವನ್ನು ಬದಲಾಯಿಸಲು ಅಂತರರಾಷ್ಟ್ರೀಯ ಮಧುಮೇಹ ಫೆಡರೇಶನ್‌ ಮುಂದಾಗಿರುವುದು ಮಹತ್ವದ ಬೆಳವಣಿಗೆ.

ನವೆಂಬರ್ 14. ವಿಶ್ವ ಮಧುಮೇಹ ದಿನ. ಜಗತ್ತಿನಲ್ಲಿ ಪ್ರತಿ ಹತ್ತು ಮಂದಿಯ ಪೈಕಿ ಒಬ್ಬರಿಗೆ ಮಧುಮೇಹವಿರುತ್ತದೆ. ಪ್ರತಿ 8 ಸೆಕೆಂಡ್‌ಗೆ ಒಬ್ಬರು ಮಧುಮೇಹದಿಂದ ಮೃತಪಡುತ್ತಾರೆ ಎಂಬುದು ಅಂತರರಾಷ್ಟ್ರೀಯ ಮಧುಮೇಹ ಫೆಡರೇಶನ್‌ ಪ್ರತಿಪಾದನೆ.

ಹಾಗೆಂದು ಆತಂಕ ಪಡಬೇಕಿಲ್ಲ. ನಿರ್ಲಕ್ಷ್ಯ ಮಾಡುವಂತೆಯೂ ಇಲ್ಲ. ಸರಳ, ಸುಲಭವಾದ ಏಕೈಕ ಉಪಾಯ ಎಂದರೆ ಅದರೊಂದಿಗೇ ಜೀವಿಸುವ ಆರೋಗ್ಯಕರ ಜೀವನಶೈಲಿಯ ಕಡೆಗೆ ನಡೆಯಬೇಕಷ್ಟೇ.

ಈ ವರ್ಷದ ಧ್ಯೇಯ ವಾಕ್ಯ: ‘ಶುಶ್ರೂಷಕರು ಬದಲಾವಣೆ ತರಬಲ್ಲರು’ (Nurses make the difference). ಮಧುಮೇಹವುಳ್ಳವರು ಮತ್ತು ಮಧುಮೇಹ ಬರುವ ಸಾಧ್ಯತೆ ಇರುವವರಿಬ್ಬರಿಗೂ ಅವರ ನೆರವು ಬೇಕೇಬೇಕು. ಅವರು ಮಹತ್ತರ ಬದಲಾವಣೆಯನ್ನು ತರಬಲ್ಲರು ಎಂಬ ಆಶಯ ಪ್ರತಿಪಾದನೆಗಾಗಿಯೇ ಈ ಧ್ಯೇಯವಾಕ್ಯ.

ಜಗತ್ತಿನಲ್ಲಿ ವೈದ್ಯರಿಗಿರುವಷ್ಟು ಮಹತ್ವ ಶುಶ್ರೂಷಕರಿಗೆ ಇಲ್ಲ. ಆದರೆ ಫೆಡರೇಶನ್‌ ಮಧುಮೇಹದ ವಿಷಯದಲ್ಲಿ ಈ ಸನ್ನಿವೇಶವನ್ನು ಬದಲಾಯಿಸಲು ಹೊರಟಿರುವುದು ಮಹತ್ವದ ಬೆಳವಣಿಗೆ.

ಬದಲಾವಣೆ ಹೇಗೆ?

ಶುಶ್ರೂಷಕರು ಹೇಗೆ ಬದಲಾವಣೆ ತರಬಲ್ಲರು ಎಂಬ ಪ್ರಶ್ನೆ ಸಹಜವಾದದ್ದೇ. ಮಧುಮೇಹ ನಿರ್ವಹಣೆಯ ಕುರಿತು ಹೇಳಿಕೊಡಲು, ಔಷಧಿ ಸಲಹೆ ನೀಡಲು ವೈದ್ಯರಿದ್ದಾರಲ್ಲವೇ ಎಂದು ಕೇಳಬಹುದು.

ಆದರೆ ಮಧುಮೇಹದ ಲಕ್ಷಣಗಳನ್ನು ಮುಂಚಿತವಾಗಿ ಗುರುತಿಸಿಕೊಳ್ಳಲು ಮಾರ್ಗದರ್ಶನವಂತೂ ಬೇಕು. ಮಧುಮೇಹ ಬಂದು, ಅದನ್ನು ವೈದ್ಯರು ಖಚಿತಪಡಿಸುವವರೆಗೂ ಸುಮ್ಮನಿರುವುದು ಅಪಾಯಕ್ಕೆ ಆಹ್ವಾನ ನೀಡಿದಂತೆ.

ಇದನ್ನೂ ಓದಿ: 

ಮಧುಮೇಹದ ಕುರಿತು ಅದು ತಮಗೆ ಬರುವುದಕ್ಕಿಂತ ಮುಂಚೆಯೇ ಜನ ತಿಳಿದುಕೊಳ್ಳಲು ಸಾಧ್ಯವಾಗಬೇಕೆಂದರೆ ಶುಶ್ರೂಷಕರ ಸೇವೆ ಅಗತ್ಯ. ಅಷ್ಟೇ ಅಲ್ಲ, ನಿರ್ದಿಷ್ಟ ಹಂತದವರೆಗೆ ಮಧುಮೇಹಿಗಳು ತಮ್ಮ ರೋಗಕ್ಕೆ ಚಿಕಿತ್ಸೆಯ ಸ್ವಯಂ ನಿರ್ವಹಣೆ ಮಾಡಿಕೊಳ್ಳುವ ದಾರಿಗಳನ್ನೂ ಶುಶ್ರೂಷಕರು ಹೇಳಿಕೊಡಲು ಸಾಧ್ಯವಿದೆ. ಎಲ್ಲ ಸಂದರ್ಭಗಳಲ್ಲೂ ವೈದ್ಯರು ಸಂಪರ್ಕಕ್ಕೆ ಸಿಗುತ್ತಾರೆ ಎಂಬ ಭರವಸೆ ಎಲ್ಲಿಯೂ ಇಲ್ಲವಲ್ಲ!

ಹೀಗಾಗಿಯೇ ವಿಶ್ವದಲ್ಲಿ ಶುಶ್ರೂಷಕರ ಶಿಕ್ಷಣವನ್ನು ಇನ್ನಷ್ಟು ಉತ್ತಮಪಡಿಸಬೇಕು. ಹೆಚ್ಚು ಶುಶ್ರೂಷಕರನ್ನು ನೇಮಿಸಬೇಕು ಮತ್ತು ಅವರನ್ನು ಸೇವೆಯಲ್ಲೇ ಉಳಿಸಿಕೊಳ್ಳಬೇಕು. ಮಧುಮೇಹ ಸೇವೆಯನ್ನು ನೀಡುವಲ್ಲಿ ಅವರಿಗೆ ಬಲ ತುಂಬೇಕು ಎಂದು ಫೆಡರೇಶನ್‌ ಈ ಬಾರಿ ಪ್ರತಿಪಾದಿಸಿದೆ.

ಅಮೆರಿಕಾದ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಡಯಾಬಿಟಿಸ್ ಅಂಡ್‌ ಡೈಜೆಸ್ಟಿವ್‌ ಅಂಡ್‌ ಕಿಡ್ನಿ ಡಿಸೀಸಸ್, ಮಧುಮೇಹದೊಂದಿಗೆ ಜೀವನ ನಡೆಸುವ ಕುರಿತು ನಾಲ್ಕು ಪ್ರಮುಖ ಅಂಶಗಳನ್ನು ಪಟ್ಟಿ ಮಾಡಿದೆ.

ನಾಲ್ಕು ಪ್ರಮುಖ ಅಂಶಗಳು..

1 ಮಧುಮೇಹದ ಕುರಿತು ಸಂಪೂರ್ಣ ತಿಳಿದುಕೊಳ್ಳುವುದು, 2 ನಿಮಗಿರುವ ಮಧುಮೇಹ ಎಂಥದ್ದು (ಟೈಪ್‌ 1 ಅಥವಾ ಟೈಪ್‌ 2, ರಕ್ತದಲ್ಲಿ ಸಕ್ಕರೆಯ ಅಂಶ, ಕೊಬ್ಬಿನ ಅಂಶ)ದ ಕುರಿತು ತಿಳಿದುಕೊಳ್ಳುವುದು. 3 ಮಧುಮೇಹದೊಂದಿಗೆ ಮುಂದುವರಿಯುವುದು ಹೇಗೆಂದು ಅರಿಯುವುದು, 4 ಆರೋಗ್ಯದಿಂದಿರಲು ಅನುಸರಿಸಬೇಕಾದ ಮಾರ್ಗಗಳನ್ನು ತಪ್ಪದೇ ಅನುಸರಿಸುವುದು.

ಈ ನಾಲ್ಕು ಅಂಶಗಳನ್ನು ಪಟ್ಟಿ ಮಾಡಿ ವಿವರಿಸಿರುವ ಇನ್‌ಸ್ಟಿಟ್ಯೂಟ್‌ ಮೊದಲನೇ ಅಂಶವನ್ನು ವಿವರಿಸುವಾಗಲೇ, ಮಧುಮೇಹಿಗಳು ನಿರಂತರ ಸಂಪರ್ಕದಲ್ಲಿರಬೇಕಾದ ವೈದ್ಯರ (ದಂತವೈದ್ಯ, ಮಧುಮೇಹ ಚಿಕಿತ್ಸೆ ತಜ್ಞ, ಪಥ್ಯ ತಜ್ಞ, ಕಣ್ಣು ಮತ್ತು ಕಾಲಿನ ವೈದ್ಯ) ಪಟ್ಟಿಯನ್ನು ಮೊದಲು ಕೊಡುತ್ತದೆ. ನಂತರ ಕುಟುಂಬದ ಸದಸ್ಯರು, ಅವರ ನಂತರ ಮಾನಸಿಕ ಆರೋಗ್ಯ ತಜ್ಞರು. ಐದನೆಯವರೇ ಶುಶ್ರೂಷಕರು. ಅವರ ನಂತರ ಔಷಧ ವ್ಯಾಪಾರಿಗಳು ಮತ್ತು ಸಾಮಾಜಿಕ ಕಾರ್ಯಕರ್ತರೂ ಇದ್ದಾರೆ.

ಇದರರ್ಥ ಇಷ್ಟೇ. ವ್ಯಕ್ತಿಗೆ ಒಮ್ಮೆ ಮಧುಮೇಹ ಬಂದಿತೆಂದರೆ ಅವರ ಆರೋಗ್ಯ ಕಾಳಜಿಯ ಕೇಂದ್ರಬಿಂದುಗಳು ಹೆಚ್ಚು ವಿಸ್ತೀರ್ಣಗೊಳ್ಳುತ್ತವೆ. ಮನೆಯ ಸದಸ್ಯರು ಹಾಗೂ ಗೆಳೆಯರಿಂದ ಶುರುವಾಗಿ ಆಸ್ಪತ್ರೆ, ವೈದ್ಯರು, ಶುಶ್ರೂಷಕರು, ಔಷಧದ ಅಂಗಡಿಯವರೆಗೆ ಎಲ್ಲರ ಜೊತೆಗೂ ನಿರಂತರ ಸಂಪರ್ಕದಲ್ಲಿರಲೇಬೇಕಾಗುತ್ತದೆ.

ಈ ಸಂಪರ್ಕ ಕೊಂಡಿಯಲ್ಲಿ ಪ್ರಮುಖ ಪಾತ್ರ ವಹಿಸುವವರೇ ಶುಶ್ರೂಷಕರು. ಆಪತ್‌ ಕಾಲದಲ್ಲಿ ವೈದ್ಯರು ಲಭ್ಯವಿಲ್ಲದಿದ್ದಾಗ ವೈದ್ಯರ ಪರ್ಯಾಯ ಸಂಪರ್ಕವನ್ನು ಏರ್ಪಡಿಸಿಕೊಡುವವರು. ಅದು ಸಾಧ್ಯವಾಗದೇ ಇದ್ದರೆ ತಾವೇ ಧಾವಿಸಿ ಬರುವವರು. ಬರಲು ಆಗದಿದ್ದರೆ ಜೀವರಕ್ಷಕ ಸಲಹೆಯಂತೂ ಸದಾ ಸಿದ್ಧ.

ಶುಶ್ರೂಷಕರು ಜಾಗತಿಕ ಆರೋಗ್ಯಕ್ಷೇತ್ರದ ಒಟ್ಟು ಮಾನವ ಸಂಪನ್ಮೂಲದ ಅರ್ಧಕ್ಕಿಂತಲೂ ಹೆಚ್ಚಿದ್ದಾರೆ (ಶೇ 59). ಜಗತ್ತಿನಲ್ಲಿ ಮಧುಮೇಹಿಗಳ ಸಂಖ್ಯೆ ಹೆಚ್ಚುತ್ತಿರುವಂತೆ ಶುಶ್ರೂಷಕಿಯರ ಮಹತ್ವವೂ ಹೆಚ್ಚಾಗುತ್ತಿದೆ.

ಜಗತ್ತಿನಲ್ಲಿರುವ ಒಟ್ಟು 2.79 ಕೋಟಿ ಆರೋಗ್ಯ ಸಿಬ್ಬಂದಿಯ ಪೈಕಿ ಪೈಕಿ 1.93 ಕೋಟಿಯಷ್ಟು ವೃತ್ತಿಪರ ಶುಶ್ರೂಷಕರಿದ್ದಾರೆ. 2018ರಲ್ಲಿ 59 ಲಕ್ಷ ಶುಶ್ರೂಷಕರ ಕೊರತೆ ಇತ್ತು. ಅತಿಕಡಿಮೆ ಮತ್ತು ಮಧ್ಯಮ ದರ್ಜೆಯ ಆದಾಯವುಳ್ಳ ದೇಶಗಳಲ್ಲೇ ಈ ಕೊರತೆ ಹೆಚ್ಚು.

ತರಬೇತಿ ಪಡೆದ ಶುಶ್ರೂಷಕರ ಸಂಖ್ಯೆಯು ಪ್ರತಿ ವರ್ಷ ಶೇ 8ರಷ್ಟು ಹೆಚ್ಚಾದರೆ ಮಾತ್ರ 2030ರ ವೇಳೆಗೆ ಅವರ ಕೊರತೆಯನ್ನು ನೀಗಿಸಿಕೊಳ್ಳಬಹುದು ಎಂದು ಫೆಡರೇಶನ್‌ ಹೇಳುತ್ತದೆ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ 2030ರ ವೇಳೆಗೆ ಸಾಮಾಜಿಕ ಅಭಿವೃದ್ಧಿ ಗುರಿಯ ನಿರೀಕ್ಷಿತ ಪರಿಣಾಮವನ್ನು ಪಡೆಯಲು ₹ 30.9 ಸಾವಿರ ಲಕ್ಷ ಕೋಟಿಯಯಷ್ಟು ಬಂಡವಾಳವನ್ನು ಹೂಡಬೇಕು. ಅದರಲ್ಲಿ ಶೇ 40ರಷ್ಟನ್ನು ಆರೋಗ್ಯ ಕ್ಷೇತ್ರದ ಸಿಬ್ಬಂದಿಗಾಗಿಯೇ ಮೀಸಲಿಡಬೇಕು. ಬಡತನ ನಿರ್ಮೂಲನೆ, ಸಮಾನ ಶಿಕ್ಷಣ, ಲಿಂಗ ಸಮಾನತೆಯ ಮೂಲಕ ಮಹಿಳಾ ಸಬಲೀಕರಣ ಮತ್ತು ಸುಸ್ಥಿರ ಆರ್ಥಿಕ ಅಭಿವೃದ್ಧಿಯ ಆಶಯಗಳ ಮೇಲೂ ಇದು ಗಟ್ಟಿ ಪರಿಣಾಮವನ್ನು ಬೀರುತ್ತದೆ ಎಂಬ ಪ್ರತಿಪಾದನೆಯೂ ಇಲ್ಲಿದೆ.

ಮಧುಮೇಹಿಗಳಿಗೆ ಶುಶ್ರೂಷಕರ ಸಕಾಲಿಕ ಸೇವೆ, ಮಾರ್ಗದರ್ಶನ, ನೆರವು ನೀಡುವ ಸನ್ನಿವೇಶ ನಿರ್ಮಾಣವಾಗಲು ಆಡಳಿತದ ನೀತಿ ನಿರೂಪಣೆ ಮಾಡುವವರು ಗಮನ ಹರಿಸಬೇಕು. ಈ ಆಶಯದ ಕುರಿತು ಶುಶ್ರೂಷಕರಲ್ಲಿ ಮತ್ತು ಸಾರ್ವಜನಿಕರಲ್ಲೂ ಜಾಗೃತಿ ಮೂಡಬೇಕು ಎಂಬ ಆಶಯದಲ್ಲೇ ಈ ಬಾರಿ ಫೆಡರೇಶನ್‌ ಸರ್ಕಾರಗಳ ಗಮನವನ್ನೂ ಸೆಳೆಯಲು ಪ್ರಯತ್ನಿಸಿರುವುದು ವಿಶೇಷ.

‘ಆಸ್ಪತ್ರೆಯ ಒಳಗಾಗಲೀ ಹೊರಗಾಗಲೀ, ಚಿಕಿತ್ಸೆಯ ವಿಷಯದಲ್ಲಿ ವೈದ್ಯರ ನಂತರ ಮಹತ್ವದ ಸ್ಥಾನದಲ್ಲಿರುವವರೂ ಅವರೇ. ಅವರು ವೈದ್ಯರಿಗೆ ಸಹಾಯಕರಷ್ಟೇ ಅಲ್ಲ. ಅರೆವೈದ್ಯಕೀಯ ಸಿಬ್ಬಂದಿಯಷ್ಟೇ ಅಲ್ಲ. ಯಾವ ಕ್ಷಣದಲ್ಲಾದರೂ ಮಧುಮೇಹಿಯ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆಗಳ ನಡುವೆ ಶುಶ್ರೂಷಕರ ಹಾಜರಿಯು ಪ್ರಾಣದಾಯಕವಾಗಿಯೇ ಇರಬಲ್ಲದು’ ಎಂದು ಬಳ್ಳಾರಿಯ ಮಧುಮೇಹ ಚಿಕಿತ್ಸೆ ತಜ್ಞ ಡಾ.ಲಿಂಗರಾಜ್ ತಿಳಿಸಿದರು.

‘ಈಗ ಲಭ್ಯವಿರುವ ಮಧುಮೇಹ ತಜ್ಞರು, ವೈದ್ಯರು ಹಾಗೂ ಜನಸಂಖ್ಯೆಯ ಅನುಪಾತಕ್ಕೆ ಹೋಲಿಸಿದರೆ ಶುಶ್ರೂಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಮಧುಮೇಹದ ಕುರಿತು ತಿಳಿವಳಿಕೆ ನೀಡುವುದು, ನಿಯಂತ್ರಣ ಕ್ರಮಗಳ ಕುರಿತು ಅರಿವು ಮೂಡಿಸುವುದು, ನಿಯಮಿತ ರಕ್ತ ಪರೀಕ್ಷೆಯಿಂದ ಔಷಧಗಳ ಬಳಕೆಯವರೆಗೆ ಇರುವ ನೆರವು–ಮಾಹಿತಿಯ ಕೊರತೆಯನ್ನು ನೀಗಿಸುವವರು ಶುಶ್ರೂಷಕರು ಮಾತ್ರ’ ಎಂದು ಅವರು ಅಭಿಪ್ರಾಯಪಟ್ಟರು.

‘ಆರೋಗ್ಯ ಸೇವೆಯ ಮಧ್ಯವರ್ತಿಗಳಾಗಿ ಶುಶ್ರೂಷಕರು ಎಲ್ಲರಿಗೂ ಆಪದ್ಬಾಂಧವರೇ. ಹೀಗಾಗಿ ಕೇಂದ್ರ ಸರ್ಕಾರದ ರಾಷ್ಟ್ರೀಯ ಆರೋಗ್ಯ ಮಿಷನ್‌ ಅಡಿ ನೇಮಕವಾಗಿರುವ, ವೈದ್ಯರು ಮತ್ತು ರೋಗಿಗಳ ನಡುವಿನ ಕೊಂಡಿಯಾಗಿ ಆರೋಗ್ಯ ಸೇವೆ ಪೂರೈಸುವ  (MLHP- Middle Level Health Providers) ಶುಶ್ರೂಷಕರಿಗೆ ಮಧುಮೇಹ ಚಿಕಿತ್ಸೆ ಕುರಿತು ವಿಶೇಷ ಅರಿವು ಮೂಡಿಸಲಾಗಿದೆ’ ಎಂದು ಅವರು ತಿಳಿಸಿದರು.

ಇನ್ನು ತಡವೇಕೆ? ನಿಮಗೆ ಗೊತ್ತಿರುವ, ಹತ್ತಿರದ ಶುಶ್ರೂಷಕರಿಗೆ ಈಗಲೇ ಒಂದು ಕರೆ ಮಾಡಿ. ಭೇಟಿಯಾಗಿ. ನಿಮ್ಮ ಮಧುಮೇಹ ಮತ್ತು ಆರೋಗ್ಯ ಸಮಸ್ಯೆಗಳ ಕುರಿತು ಅವರೊಂದಿಗೆ ಮುಕ್ತವಾಗಿ ಚರ್ಚಿಸಿ. ಸಲಹೆ ಪಡೆಯಿರಿ. ನಿರಂತರ ಸಂಪರ್ಕದಲ್ಲಿರುವಂತೆ ಕೋರಿ. ಅವರಿಗೊಂದು ಕೃತಜ್ಞತೆಯ ನಮಸ್ಕಾರ ಹೇಳಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು