ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಹಾವುಗಳ ದಿನ | ಉರಗ ಸಂರಕ್ಷಣೆ ಏಕೆ? ಹೇಗೆ?

ವಿಶ್ಲೇಷಣೆ
Last Updated 16 ಜುಲೈ 2021, 19:31 IST
ಅಕ್ಷರ ಗಾತ್ರ

ಹಾವುಗಳ ಕುರಿತಾಗಿ ಇರುವಷ್ಟು ಮೂಢನಂಬಿಕೆ ಜಗತ್ತಿನ ಬೇರೆ ಯಾವುದೇ ಪ್ರಾಣಿಗಳ ಕುರಿತಾಗಿ ಇಲ್ಲ. ಇದಕ್ಕೆ ಮುಖ್ಯವಾದ ಕಾರಣ ಹಾವಿನ ಕುರಿತ ಅತಿಕಡಿಮೆ ತಿಳಿವಳಿಕೆ ಮತ್ತು ಅನಗತ್ಯ ಭಯ! ಎಲ್ಲ ಜಾತಿಯ ಹಾವುಗಳೂ ವಿಷಪೂರಿತವಾಗಿವೆ, ಎಲ್ಲ ಹಾವುಗಳೂ ಕಚ್ಚುತ್ತವೆ, ಹಾವು ಕಚ್ಚಿದರೆ ಬದುಕುಳಿಯುವುದು ಕಷ್ಟ ಎಂಬ ನಂಬಿಕೆ ಹೆಚ್ಚಿನ ಜನರಲ್ಲಿದೆ. ಆದ್ದರಿಂದ, ಹಾವನ್ನು ನೋಡಿದ ತಕ್ಷಣ ಬಹಳ ಜನ ಮೊದಲು ಬಡಿಗೆ ಹುಡುಕುತ್ತಾರೆ.

ಕರ್ನಾಟಕದಲ್ಲಿ ಸುಮಾರು 50 ಜಾತಿಯ ಹಾವುಗಳಿರಬಹುದು ಎಂದು ಅಂದಾಜಿಸಲಾಗಿದೆ. ಇವುಗಳಲ್ಲಿ ನಾಲ್ಕು ಜಾತಿಯ ಹಾವುಗಳು ಮಾತ್ರ ವಿಷಪೂರಿತವಾಗಿವೆ. ಅಂದರೆ, ಆಕಸ್ಮಿಕವಾಗಿ ಅವು ಕಚ್ಚಿದಲ್ಲಿ ವ್ಯಕ್ತಿ ಮರಣಿಸಬಹುದು ಅಥವಾ ತೀವ್ರವಾಗಿ ಅನಾರೋಗ್ಯ ಕಾಡಬಹುದು. ಉಳಿದವೆಲ್ಲಾ ವಿಷರಹಿತ ಹಾವುಗಳೇ.ಸಹಜ ಅರಣ್ಯ ಪ್ರದೇಶವನ್ನು ಬರಿದು ಮಾಡುತ್ತಿರುವ ಮಾನವನಿಂದಾಗಿ ನೆಲೆ ಕಳೆದುಕೊಂಡ ವನ್ಯಜೀವಿಗಳು ಅನಿವಾರ್ಯವಾಗಿ ಮಾನವನಿರ್ಮಿತ ಹಳ್ಳಿಗೋ ಪೇಟೆಗೋ ಅಥವಾ ಹೊಲಕ್ಕೋ ಬರುತ್ತಿವೆ.

ಧಾನ್ಯಗಳನ್ನು ಬೆಳೆಯುವ ರೈತರು ಇಲಿ– ಹೆಗ್ಗಣಗಳಿಂದಾಗಿ ತಮ್ಮ ಫಸಲಿನ ಶೇ 40ರಷ್ಟು ಭಾಗವನ್ನು ಕಳೆದುಕೊಳ್ಳುತ್ತಿದ್ದಾರೆ. ಮನುಷ್ಯನಿಗಿಂತ ತೀರಾ ಮೊದಲೇ ಈ ಧರೆಯಲ್ಲಿ ಅವತರಿಸಿದ ದಂಶಕ ಸಂತತಿಯು ನಿಸರ್ಗದ ಎಲ್ಲಾ ತರಹದ ವೈಪರೀತ್ಯಗಳನ್ನು ಎದುರಿಸಿ ಬದುಕಿದೆ. ಅದರಲ್ಲೂ ಇಲಿ ಮತ್ತು ಹೆಗ್ಗಣಗಳು ಬಹಳ ಬುದ್ಧಿಮತ್ತೆಯನ್ನು ಪ್ರದರ್ಶಿಸುವ ಪ್ರಾಣಿಗಳಾಗಿವೆ. ಭತ್ತ ಕಾಳು ಬಿಡುವ ಹೊತ್ತಿನ ಸಮಯದಲ್ಲೇ ಗದ್ದೆಯಲ್ಲಿ ಇಲಿ-ಹೆಗ್ಗಣಗಳ ಸುರಂಗ ಮಾರ್ಗ ನಿರ್ಮಿತವಾಗಿರುತ್ತದೆ. ಅಹೋರಾತ್ರಿ ಶ್ರಮಪಟ್ಟ ಫಸಲನ್ನು ಇಲಿಗಳು ಬಹಳ ನಾಜೂಕಾಗಿ ಕತ್ತರಿಸಿ ತಮ್ಮ ಸುರಂಗ ಮಳಿಗೆಗಳಿಗೆ ಸಾಗಿಸುತ್ತವೆ. ಉತ್ತಮ ಹವಾಮಾನ ಮತ್ತು ಹೇರಳ ಆಹಾರವಿದ್ದಲ್ಲಿ ಜೋಡಿ ಇಲಿಗಳು ಒಂದು ವರ್ಷದ ಅವಧಿಯಲ್ಲಿ ತಮ್ಮ ಸಂಖ್ಯೆಯನ್ನು 800ರಷ್ಟು ವಿಸ್ತರಿಸಿಕೊಳ್ಳುತ್ತವೆ ಎಂದು ಕಂಡುಕೊಳ್ಳಲಾಗಿದೆ.

ರೈತರಿಗೆ ಮಾರಕವಾದ ದಂಶಕಗಳ ಸಂಖ್ಯೆಯನ್ನು ನಿಯಂತ್ರಿಸುವ ಸಲುವಾಗಿ ಸರ್ಕಾರಗಳು ಖರ್ಚು ಮಾಡುವ ಹಣ ಅಷ್ಟು ಸುಲಭವಾಗಿ ಲೆಕ್ಕಕ್ಕೆ ಸಿಗಲಾರದು. ದಂಶಕಗಳ ಸಂಖ್ಯೆ ವಿಪರೀತ ಹೆಚ್ಚದಂತೆ ಕಡಿವಾಣ ಹಾಕಲು ನಿಸರ್ಗ ಸೃಷ್ಟಿ ಮಾಡಿದ ಪ್ರಾಣಿಯೇ ಹಾವು ಅಥವಾ ಉರಗ. ಇಲಿಗಳ ಸುರಂಗದೊಳಗೆ ಅನಾಯಾಸವಾಗಿ ನುಗ್ಗಿ ಬೇಟೆಯಾಡುವ ಹಾವುಗಳು, ಇಲಿಗಳಿಗೆ ನೈಸರ್ಗಿಕ ಶತ್ರುಗಳು. ಇಲಿಗಳನ್ನು ತಿನ್ನುವ ಇನ್ನಿತರ ಪ್ರಾಣಿಗಳಿಗೆ ಸುರಂಗದ ಒಳಗೆ ಹೋಗಿ ಬೇಟೆ ಯಾಡುವ ತಂತ್ರ ಸಿದ್ಧಿಸಿಲ್ಲ. ಉದಾಹರಣೆಗೆ, ಬಿಲದಿಂದ ಹೊರಬಂದ ಇಲಿಯನ್ನಷ್ಟೇ ಗೂಬೆಗಳು ಬೇಟೆಯಾಡಬಲ್ಲವು.

ಇಂತಹ ರೈತಸ್ನೇಹಿ ಹಾವುಗಳು ವಿನಾಕಾರಣ ಮನುಷ್ಯನಿಗೆ ಬಲಿಯಾಗುತ್ತಿರುವುದು ಮಾತ್ರ ಅತಿದೊಡ್ಡ ವಿಪರ್ಯಾಸ. ಒಂದು ಹಾವು ವಾರದಲ್ಲಿ ಎರಡು ಇಲಿ ಗಳನ್ನು ತಿನ್ನುತ್ತದೆ ಎಂದಿಟ್ಟುಕೊಂಡರೆ, ವರ್ಷದಲ್ಲಿ ಕಡಿಮೆಯೆಂದರೂ ನೂರು ಚಿಲ್ಲರೆ ಇಲಿಗಳನ್ನು ತಿಂದ ಹಾಗಾಯಿತು. ಒಂದು ಹಾವಿನ ನಾಶವು ಲಕ್ಷಾಂತರ ಇಲಿಗಳ ಹುಟ್ಟಿಗೆ ಕಾರಣವಾಗುತ್ತದೆ ಎಂಬುದು ಕಣ್ಣಿಗೆ ಕಾಣುವ ಲೆಕ್ಕಾಚಾರ. ಕರ್ನಾಟಕದಲ್ಲಾಗಲೀ ಅಥವಾ ಭಾರತದಲ್ಲಾಗಲೀ ಹಾವಿನ ಕಡಿತಕ್ಕೊಳಗಾಗಿ ಸಾಯುವವರ ಸಂಖ್ಯೆಗಿಂತ ಇಲಿ ಮೂಲದ ಕಾಯಿಲೆಗೆ ಬಲಿಯಾಗುವವರ ಸಂಖ್ಯೆಯೇ ಹೆಚ್ಚಿದೆ.

ಸಿನಿಮಾದಲ್ಲಿ ಹಾವು ಅಟ್ಟಿಸಿಕೊಂಡು ಬಂದು ಖಳನಾಯಕನನ್ನೋ ಅಥವಾ ಖಳನಾಯಕಿಯನ್ನೋ ಕಚ್ಚುವ ಅತಿರೇಕದ ದೃಶ್ಯಗಳನ್ನು ಸಾಮಾನ್ಯವಾಗಿ ನೋಡಿದ ಜನ, ವಾಸ್ತವದಲ್ಲೂ ಇದು ನಿಜ ಎಂದುಕೊಂಡಿರುತ್ತಾರೆ. ಹಾವಿನ ದ್ವೇಷ ಹನ್ನೆರಡು ವರ್ಷ ಎಂಬ ಮಾತೂ ಮೂಢನಂಬಿಕೆಗಳನ್ನು ಪುಷ್ಟೀಕರಿಸುವಲ್ಲಿ ತನ್ನ ಪಾತ್ರ ವಹಿಸಿದೆ. ಆದರೆ, ಹಾವಿಗೆ ಯಾವುದೇ ನೆನಪಿನ ಶಕ್ತಿಯಾಗಲೀ, ನೋಡಿದ ಮನುಷ್ಯನನ್ನು ಗುರುತಿಟ್ಟುಕೊಳ್ಳುವ ಶಕ್ತಿಯಾಗಲೀ ಇಲ್ಲ. ಆಕಸ್ಮಿಕವಾಗಿ ವಿಷದ ಹಾವು ಕಚ್ಚಿದರೂ ತಕ್ಷಣದಲ್ಲಿ ಪ್ರತಿವಿಷದ ಚಿಕಿತ್ಸೆ ಕೊಡಿಸಿದಲ್ಲಿ, ವ್ಯಕ್ತಿ ಮರಣಹೊಂದುವ ಸಾಧ್ಯತೆ ತೀರಾ ಕಡಿಮೆ. ಹಾವು ಕಡಿತಕ್ಕೊಳಗಾದ ವ್ಯಕ್ತಿಯು ಹೆಚ್ಚಿನ ಬಾರಿ ಹೆದರಿಕೆಯಿಂದ ಸಾಯುವುದೇ ಹೆಚ್ಚು. ವಿಷರಹಿತ ಹಾವಿನಿಂದ ಕಚ್ಚಿಸಿಕೊಂಡು ಸತ್ತವರೂ ಇದ್ದಾರೆ ಎಂದರೆ, ಹಾವಿನ ಕುರಿತಾದ ನಮ್ಮ ಭಯ ಎಂಥಾದ್ದಿರಬಹುದು?

ಸತತ ಬರದಿಂದ ನಲುಗಿದ್ದ ಪೂರ್ವ ಆಸ್ಟ್ರೇಲಿಯಾವನ್ನು ಇಲಿಗಳ ದಂಡು ತೀವ್ರವಾಗಿ ಬಾಧಿಸುತ್ತಿದೆ. ಕಷ್ಟ ಪಟ್ಟು ಬೆಳೆದ ಧಾನ್ಯಗಳು ಇಲಿಗಳಿಗೆ ಆಹಾರವಾಗುತ್ತಿವೆ. ಲಕ್ಷಾಂತರ ಇಲಿಗಳು ಸರ್ವವ್ಯಾಪಿಯಾಗಿ ಸಿಕ್ಕಿದ್ದನ್ನೆಲ್ಲಾ ತಿಂದು ಹಾಕುತ್ತಿವೆ. ಇಲಿಗಳು ಅಲ್ಲಿ ಅಕ್ಷರಶಃ ಮಾನವನ ಮೇಲೆ ಯುದ್ಧವನ್ನೇ ಸಾರಿವೆ. ಇಲಿಗಳನ್ನು ಬಂಧಿಸಿಡಲು ಅಲ್ಲಿ ಯಾವುದೇ ಕಿಂದರಜೋಗಿಗಳು ಇಲ್ಲ. ಅಲ್ಲಿನ ಪೂರಕ ವಾತಾವರಣ ಇಲಿಗಳ ಸಂಖ್ಯೆ ಹೆಚ್ಚಲು ಕಾರಣ ಎಂಬುದು ಸಾಮಾನ್ಯ ಅಭಿಪ್ರಾಯ.

ಯಾವುದೇ ಪ್ರಾಣಿಯ ಸಂಖ್ಯೆ ಮೇರೆಮೀರಿದಲ್ಲಿ ಅದನ್ನು ನಿಸರ್ಗಸಹಜವಾಗಿ ನಿಯಂತ್ರಿಸಲು ಪ್ರಕೃತಿಯಲ್ಲಿ ತನ್ನದೇ ಆದ ವ್ಯವಸ್ಥೆ ಇರುತ್ತದೆ. ಪೂರ್ವ ಆಸ್ಟ್ರೇಲಿಯಾದಲ್ಲಿ ಹಾವುಗಳ ಸಂಖ್ಯೆ ಅತಿ ಕಡಿಮೆಯಾಗಿರುವುದು ಇಲಿಗಳ ಹೆಚ್ಚಳಕ್ಕೆ ಕಾರಣವಾಗಿದೆ ಎಂಬುದು ಇನ್ನೊಂದು ವಾದ. ತಕ್ಷಣದಲ್ಲಿ ಚಳಿಗಾಲ ಪ್ರಾರಂಭವಾದಲ್ಲಿ ಇಲಿಗಳ ಸಂಖ್ಯೆ ನಿಸರ್ಗಸಹಜ ವಾಗಿಯೇ ನಿಯಂತ್ರಣಗೊಳ್ಳುತ್ತದೆ. ಇಲ್ಲವಾದಲ್ಲಿ, ಸರ್ಕಾರ ಏನಾದರೂ ಕ್ರಮ ಕೈಗೊಳ್ಳುವುದು ಅನಿವಾರ್ಯ.

ಇಲಿಗಳನ್ನು ಕೊಲ್ಲಲು ಹಲವು ತರಹದ ರಾಸಾಯನಿಕ ಯುಕ್ತ ಔಷಧಗಳಿವೆ. ಅದರಲ್ಲಿ ಮುಖ್ಯವಾದುದು ಝಿಂಕ್ ಫಾಸ್ಫೇಟ್. ಆದರೆ ಇಲಿಗಳನ್ನು ಸಂಹರಿಸಲು ಇನ್ನೂ ಘೋರ ವಿಷ ಬೇಕು ಎಂಬುದು ಕೃಷಿ ಇಲಾಖೆಯ ಅಧಿ ಕಾರಿಗಳು ಮತ್ತು ಮಂತ್ರಿಮಹೋದಯರ ಅಂಬೋಣ. ಬ್ರೊಮೋಡಿಯೋಲೋನ್ ಎಂಬ ವಿಷ ಬಳಸಲು ಸರ್ಕಾರದ ಅನುಮತಿಗಾಗಿ ಕಾದು ಕುಳಿತಿದ್ದಾರೆ. ಈ ವಿಷವನ್ನು ತಿಂದು ಸತ್ತ ಇಲಿಗಳನ್ನು ತಿನ್ನುವ ಅಲ್ಲಿನ ವನ್ಯಪಕ್ಷಿಗಳು, ಇನ್ನಿತರ ವನ್ಯಜೀವಿಗಳು ಸಾವಿನ ಅಂಚು ತಲುಪಲಿವೆ ಎಂಬ ಎಚ್ಚರಿಕೆಯನ್ನು ವನ್ಯಪ್ರೇಮಿಗಳು ನೀಡುತ್ತಿದ್ದಾರೆ. ಇದಿಷ್ಟು ಪೂರ್ವ ಆಸ್ಟ್ರೇಲಿಯಾದ ಬಿಕ್ಕಟ್ಟಿನ ಪ್ರಸಂಗ.

ಮಲೆನಾಡಿನಲ್ಲಿ ಸ್ವಾಭಾವಿಕವಾಗಿ ಉರಗ ಸಂತತಿ ಹೆಚ್ಚಿರುತ್ತದೆ. ಪೇಟೆ ಪಟ್ಟಣಗಳಲ್ಲೂ ಇವು ಕಂಡು ಬರುತ್ತವೆ. ಮನೆಯ ಸುತ್ತ ಕಸ ಕಡ್ಡಿಗಳು, ಹೇರಳ ಗಲೀಜು ಇದ್ದಲ್ಲಿ, ಇಲಿಗಳು ಅವುಗಳನ್ನು ತಿನ್ನಲು ಬರುತ್ತವೆ. ಅವುಗಳ ಹಿಂದೆಯೇ ಹಾವುಗಳೂ ಬರುತ್ತವೆ. ಹಾವು ಹಿಡಿಯುವವರಿಗಾಗಿ ಹುಡುಕಾಟ ಮಾಡಿ, ತಜ್ಞತೆಯೇ ಇಲ್ಲದವರನ್ನು ಕರೆಸಿ, ಅವರಿಗೊಂದಿಷ್ಟು ಹಣ ನೀಡಿ, ಹಾವು ಹಿಡಿಸಲಾಗುತ್ತದೆ. ಅವೈಜ್ಞಾನಿಕವಾಗಿ ಹಾವುಗಳನ್ನು ಹಿಡಿಯುವುದು ಮತ್ತು ಅದರ ದಲ್ಲದ ಪ್ರದೇಶದಲ್ಲಿ ಬಿಟ್ಟುಬರುವುದು ಕಾನೂನಿನ ಪ್ರಕಾರ ತಪ್ಪು. ನಮ್ಮ ಅರಣ್ಯ ಇಲಾಖೆಯ ಕ್ಷಮತೆ ಹೇಗಿದೆ ಎಂದರೆ, ಇಲಾಖೆಯ ಯಾರೊಬ್ಬರಿಗೂ ಹಾವನ್ನು ಸುರಕ್ಷಿತವಾಗಿ ಹಿಡಿದು, ನಿರ್ವಹಿಸಲು ಗೊತ್ತಿಲ್ಲ. ಖಾಸಗಿ ವ್ಯಕ್ತಿಗಳ ಮೊರೆ ಹೋಗಿಯೇ ಹಾವು ಹಿಡಿಸುವ ಅನಿವಾರ್ಯ ಇಲಾಖೆಗಿದೆ.

ವನ್ಯಜೀವಿ ಸಂರಕ್ಷಣಾ ಕಾಯ್ದೆ– 1972ರ ಅಡಿಯಲ್ಲಿ ಹೆಬ್ಬಾವು ಪರಿಚ್ಛೇದ 1ರಲ್ಲಿ ಬರುತ್ತದೆ. ಹುಲಿ-ಸಿಂಹ- ಆನೆಗಳು ಇದರಡಿಯಲ್ಲಿ ಬರುತ್ತವೆ. ಉಳಿದ ಉರಗ ಸಂತತಿಗಳು ಪರಿಚ್ಛೇದ 2ರ ಅಡಿಯಲ್ಲಿ ಬರುತ್ತವೆ. ಇವು ಗಳಿಗೂ ಬಿಗಿಯಾದ ಕಾನೂನಿನ ರಕ್ಷಣೆ ಇದೆ. ಜನವಸತಿ ಪ್ರದೇಶದಲ್ಲಿ ಹಾವುಗಳು ಬಂದಾಗ ನಿರ್ವಹಣೆ ಮಾಡುವ ರೀತಿಯಲ್ಲಿ ಇಲಾಖೆ ತೀವ್ರ ತಾರತಮ್ಯ ಮಾಡುತ್ತಿದೆ. ಹಾವುಗಳ ರಕ್ಷಣೆಯ ವಿಷಯದಲ್ಲಿ ಅರಣ್ಯ ಇಲಾಖೆಗೆ ಇಚ್ಛಾಶಕ್ತಿಯ ಅತೀವ ಕೊರತೆಯಿದೆ.

ಆನೆಯೊಂದು ಗುಂಡಿಗೆ ಬಿದ್ದಾಗ ಇಲಾಖೆಯ ಉನ್ನತ ಸ್ತರದ ಅಧಿಕಾರಿಗಳು ಓಡಿ ಬರುತ್ತಾರೆ. ಅದೇ ಹೆಬ್ಬಾವೊಂದು ಬಾವಿಯಲ್ಲಿ ಬಿದ್ದಾಗ ಬರೀ ವಾಚರ್ ಮತ್ತು ಗಾರ್ಡುಗಳು ಅದನ್ನು ಹಿಡಿಸುವ ಮತ್ತು ನಿರ್ವಹಿಸುವ ಕೆಲಸ ಮಾಡಬೇಕಾಗುತ್ತದೆ. ಹಾವುಗಳು ಜೀವಜಾಲದ ಕೊಂಡಿಯಲ್ಲಿ ಅತಿಮುಖ್ಯ ಪಾತ್ರ ವಹಿಸುತ್ತವೆ. ಇವುಗಳ ರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ. ವಿಷದ ಹಾವುಗಳು ಆಕಸ್ಮಿಕವಾಗಿ ಜನವಸತಿ ಪ್ರದೇಶಕ್ಕೆ ಬಂದಾಗ ವೈಜ್ಞಾನಿಕವಾಗಿ ಹೇಗೆ ನಿರ್ವಹಿಸಬೇಕು ಎಂಬುದಕ್ಕೆ ಅರಣ್ಯ ಇಲಾಖೆ ಅತಿ ಸ್ಪಷ್ಟವಾದ ನೀತಿ ನಿಯಮಗಳನ್ನು ರೂಪಿಸಿ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಇದರ ಅರಿವನ್ನು ಜನಸಾಮಾನ್ಯರಲ್ಲಿ ಮೂಡಿಸಬೇಕು. ಅಂದಹಾಗೆ, ಜುಲೈ 16 ಅನ್ನು ವಿಶ್ವ ಹಾವು ದಿನವನ್ನಾಗಿ ಆಚರಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT