ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಸಾಗರದಲ್ಲಿ ವಾಯುವಿದ್ಯುತ್ ಸ್ಥಾವರ

ಇಂತಹ ಸ್ಥಾವರಗಳ ನಿರ್ಮಾಣ ಯೋಜನೆಯ ಹಿನ್ನಡೆಗೆ ಕಾರಣ ಹಲವು
Last Updated 4 ಫೆಬ್ರುವರಿ 2022, 2:52 IST
ಅಕ್ಷರ ಗಾತ್ರ

ಸದ್ಯದಲ್ಲಿ ನಮ್ಮ ದೇಶದ ಒಟ್ಟು ವಿದ್ಯುತ್ತಿನ ಬೇಡಿಕೆಯಶೇ 38ರಷ್ಟು ಭಾಗ, ಅಂದರೆ 136 ಗಿಗಾವಾಟ್, ನವೀಕರಿಸಬಹುದಾದ ಶಕ್ತಿಯ ಮೂಲಗಳಿಂದ ಬರುತ್ತಿದೆ. ಇದನ್ನು 2030ರ ವೇಳೆಗೆ ಶೇ 50ಕ್ಕೆ ಏರಿಸುವ ವಿಶ್ವಾಸವನ್ನು ಭಾರತದ ಪ್ರಧಾನಿ ಕಳೆದ ನವೆಂಬರ್‌ನಲ್ಲಿ ವಾಯುಗುಣ ಬದಲಾವಣೆಗೆ ಸಂಬಂಧಿಸಿದ ಗ್ಲಾಸ್ಗೊ ಶೃಂಗಸಭೆಯಲ್ಲಿ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಾಗರದಲ್ಲಿ ವಾಯುವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸುವ ಯೋಜನೆಗೆ ಅತಿ ಹೆಚ್ಚಿನ ಮಹತ್ವ ಬಂದಿದೆ.

ಭೂಮಿಯ ಮೇಲಿನ ಗಾಳಿಗಿರಣಿಗಳ ಜೊತೆಗೇ ಸಾಗರದಲ್ಲಿ ವಾಯುವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸುವ ಯೋಚನೆ ಪ್ರಾರಂಭವಾದದ್ದು 2010ರ ದಶಕದಲ್ಲಿ. ಆಧುನಿಕ ಗಾಳಿಗಿರಣಿ ಟರ್ಬೈನುಗಳು ಸಾಂಪ್ರದಾಯಿಕ ಟರ್ಬೈನ್‍ಗಳಿಗಿಂತ ಹತ್ತು ಪಟ್ಟು ಹೆಚ್ಚು ವಿದ್ಯುತ್ ಉತ್ಪಾದಿಸಲು ಪ್ರಾರಂಭವಾದಾಗ ಸಹಜವಾಗಿಯೇ ಗಮನ ಅತ್ತ ಹರಿಯಿತು. ಒಂದೆರಡು ಗಾಳಿಗಿರಣಿಗಳನ್ನು ಸ್ಥಾಪಿಸುತ್ತಿದ್ದಪ್ರವೃತ್ತಿ ಮರೆಯಾಗಿ ನೂರಾರು ಗಾಳಿಯಂತ್ರಗಳ ವಾಯುಶಕ್ತಿ ಫಾರ್ಮ್‌ಗಳಿಗೆ ಆದ್ಯತೆ ದೊರೆಯಿತು. ಈ ರೀತಿಯ ವಾಯುಶಕ್ತಿ ಫಾರ್ಮ್‌ಗಳಿಗೆ ನೂರಾರುಚ.ಕಿ.ಮೀ. ಪ್ರದೇಶಗಳಷ್ಟು ವಿಶಾಲವಾದ, ಅಡೆತಡೆಗಳಿಲ್ಲದ ಬಯಲು ಪ್ರದೇಶ ಬೇಕು. ವಿವಿಧ ಉದ್ದೇಶಗಳಿಗೆ ಭೂಮಿಯ ಮೇಲಿನ ಒತ್ತಡ ಹೆಚ್ಚುತ್ತಿದ್ದ ಸನ್ನಿವೇಶದಲ್ಲಿ ಅಂತಹ ವಿಶಾಲವಾದ ಪ್ರದೇಶಗಳು ದುರ್ಲಭವಾಗಲು ಪ್ರಾರಂಭವಾದಾಗ, ಭಾರತವೂ ಸೇರಿ ಅನೇಕ ದೇಶಗಳ ಗಮನ ವೇಗವಾದ ಗಾಳಿ, ಅಡೆತಡೆಗಳಿಲ್ಲದ ಮುಕ್ತವಾದ ಪ್ರದೇಶವನ್ನು ಒದಗಿಸುವ ಸಾಗರಗಳತ್ತ ಹರಿಯಿತು. ಸಾಗರದಲ್ಲಿ ಗಾಳಿಯ ವೇಗ ಹೆಚ್ಚು. ಗಾಳಿಯ ವೇಗ ಹೆಚ್ಚಿದಷ್ಟೂ ಉತ್ಪಾದಿಸುವ ವಿದ್ಯುತ್ತಿನ ಪ್ರಮಾಣವೂ ಏರುತ್ತದೆ. ನೆಲದ ಮೇಲಿನ ಗಾಳಿಯ ವೇಗಕ್ಕೆ ಹೋಲಿಸಿದರೆ ಸಾಗರದ ಮೇಲಿನ ಗಾಳಿಯ ವೇಗ ಹೆಚ್ಚು ಸ್ಥಿರ. ಹೀಗಾಗಿ ವಿದ್ಯುತ್ ಉತ್ಪಾದನೆಯಲ್ಲಿ ಏರುಪೇರುಗಳು ಬಹಳ ಕಡಿಮೆ.

ಭಾರತ ಸರ್ಕಾರ 2015ರ ಅಕ್ಟೋಬರ್‌ನಲ್ಲಿ ‘ನ್ಯಾಷನಲ್ ಆಫ್ ಶೋರ್ ವಿಂಡ್ ಎನರ್ಜಿ ನೀತಿ’ಯನ್ನು ಪ್ರಕಟಿಸಿತು. ಈ ನೀತಿಯಂತೆ, ದೇಶದ 7,600 ಕಿ.ಮೀ. ಉದ್ದದ ಕರಾವಳಿಯಿಂದ ಸಾಗರದ ವಿವಿಧ ದೂರಗಳ ಪ್ರದೇಶದಲ್ಲಿ ಗಾಳಿಗಿರಣಿಗಳನ್ನು ಸ್ಥಾಪಿಸಿ, 2022ರ ವೇಳೆಗೆ 5 ಗಿಗಾವಾಟ್ ಮತ್ತು 2030ರ ವೇಳೆಗೆ 30 ಗಿಗಾವಾಟ್ ವಿದ್ಯುತ್ತನ್ನು ಉತ್ಪಾದಿಸುವ ಗುರಿಯನ್ನು ನಿಗದಿಪಡಿಸಿತು.

ಕೇಂದ್ರ ಸರ್ಕಾರದ ಹೊಸ ಮತ್ತು ನವೀಕರಿಸಬಹುದಾದ ಶಕ್ತಿ ಸಚಿವಾಲಯದ ಅಂಗಸಂಸ್ಥೆಯಾದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವಿಂಡ್ ಎನರ್ಜಿ, ಗುಜರಾತ್ ಮತ್ತು ತಮಿಳುನಾಡು ರಾಜ್ಯಗಳ ಕರಾವಳಿಯ ಆಚೆ ಒಟ್ಟು 70 ಗಿಗಾವಾಟ್ ಉತ್ಪಾದನಾ ಸಾಮರ್ಥ್ಯದ ಪ್ರದೇಶಗಳನ್ನು ಗುರುತಿಸಿತು. ಅಂತರರಾಷ್ಟ್ರೀಯ ಸ್ಪರ್ಧಾತ್ಮಕ ಹರಾಜಿನ ಮೂಲಕ, ಕರಾವಳಿಯಿಂದ 200 ಕಿ.ಮೀ.ಗಳ ಒಳಗೆ 100ರಿಂದ 500 ಚ.ಕಿ.ಮೀ. ವಿಸ್ತೀರ್ಣದ ಬ್ಲಾಕುಗಳನ್ನು ಖಾಸಗಿ ವಿದ್ಯುತ್ ಉತ್ಪಾದನಾ ಸಂಸ್ಥೆಗಳಿಗೆ 35 ವರ್ಷಗಳ ಅವಧಿಗೆ ಗುತ್ತಿಗೆಯ ಮೇಲೆ ನೀಡುವ ಪ್ರಸ್ತಾಪ ಈ ನೀತಿಯಲ್ಲಿದೆ.

ಇಂತಹ ಗುತ್ತಿಗೆಯನ್ನು ಪಡೆದ ಸಂಸ್ಥೆಗಳು ಮೊದಲ 5 ವರ್ಷಗಳ ಕಾಲ ಸಾಗರತಳದ ಭೂವೈಜ್ಞಾನಿಕ, ಭೂತಾಂತ್ರಿಕ ಸರ್ವೆಗಳನ್ನು ನಡೆಸಿ, ಮೂಲ ಸೌಕರ್ಯಗಳನ್ನು ನಿರ್ಮಿಸಿಕೊಳ್ಳಬಹುದು. ಸಾಗರದಲ್ಲಿನ ವಾಯುವಿದ್ಯುತ್ ಕೇಂದ್ರಗಳಿಂದ ವಿದ್ಯುತ್ತನ್ನು ಸಾಗಿಸಲು ಸಾಗರ ತಳದಲ್ಲಿ ಕೇಬಲ್‍ಗಳನ್ನು ಎಳೆಯಬಹುದು. ಆದರೆ ಸಾಗರತಳದಲ್ಲಿ ಯಾವುದೇ ರೀತಿಯ ಗಣಿಗಾರಿಕೆಗೆ, ಇತರ ಸಂಪನ್ಮೂಲಗಳ ಬಳಕೆಗೆ ಅವಕಾಶವಿಲ್ಲ. ಅಲ್ಲಿನ ಜೀವಿಪ್ರಭೇದಗಳಿಗೆ ಯಾವುದೇ ರೀತಿಯ ಹಾನಿಯಾಗುವಂತಿಲ್ಲ. ಈ ಕೆಲಸಗಳು ಮುಗಿದ ನಂತರ ಮುಂದಿನ 30 ವರ್ಷಗಳವರೆಗೆ ವಿದ್ಯುತ್ ಉತ್ಪಾದಿಸಬಹುದು.

2018ರ ಏಪ್ರಿಲ್‌ನಲ್ಲಿ ಭಾರತ ಸರ್ಕಾರ ಈ ಕ್ಷೇತ್ರದಲ್ಲಿ ಆಸಕ್ತಿಯಿರುವ ರಾಷ್ಟ್ರೀಯ, ಅಂತರರಾಷ್ಟ್ರೀಯ ಕಂಪನಿಗಳಿಂದ ಆಸಕ್ತಿ ಪ್ರಕಟಣೆಯ ಅರ್ಜಿಗಳನ್ನು ಆಹ್ವಾನಿಸಿತು. ಈ ಆಹ್ವಾನಕ್ಕೆ 35 ಕಂಪನಿಗಳು ಪ್ರತಿಕ್ರಿಯಿಸಿದರೂ ಅಲ್ಲಿಂದ ಮುಂದೆ ಯಾವ ಮಹತ್ವದ ಬೆಳವಣಿಗೆಗಳೂ ಆಗಿಲ್ಲ. ಕಳೆದ ಆರು ವರ್ಷಗಳಲ್ಲಿ ಒಂದೇ ಒಂದು ವಾಯುವಿದ್ಯುತ್ ಸ್ಥಾವರವೂ ಸಾಗರದಲ್ಲಿ ನಿರ್ಮಾಣವಾಗಿಲ್ಲ. ಈ ಪರಿಸ್ಥಿತಿಗೆ ಕಾರಣಗಳು ಹಲವಾರು.

ಭೂಮಿಯ ಮೇಲಿನ ಪ್ರತಿಯೊಂದು ಗಾಳಿಯಂತ್ರ 2 ಮೆಗಾವಾಟ್ ವಿದ್ಯುತ್ ಉತ್ಪಾದಿಸಿದರೆ, ಸಾಗರದಲ್ಲಿನ ಗಾಳಿಯಂತ್ರ 6 ಮೆಗಾವಾಟ್ ಉತ್ಪಾದಿಸುತ್ತದೆ. ಆದ್ದರಿಂದ ಸಾಗರದ ಗಾಳಿಯಂತ್ರ, ಟರ್ಬೈನ್‍ಗಳು, ತಿರುಗುವ ಅಲಗುಗಳು ದೊಡ್ಡವು. ಇಂತಹ ಬೃಹದಾಕಾರದ ಸ್ತಂಭಗಳು, ಟರ್ಬೈನುಗಳನ್ನು ಸಾಗರತಳದ ನೆಲದ ಮೇಲೆ ಕೂಡಿಸಬೇಕು. 60 ಮೀಟರ್‌ಗಳಿಗಿಂತ ಹೆಚ್ಚಿನ ಆಳದಲ್ಲಿ ಇದು ಸಾಧ್ಯವಿಲ್ಲ. ಹೀಗಾಗಿ ಆಳ ಕಡಿಮೆಯಾಗಿದ್ದು, ಏಕಪ್ರಕಾರವಾಗಿ ಬೀಸುವ ಗಾಳಿಯಿರುವ, ಸಾಗರ ತೀರದಿಂದ ಬಹಳ ದೂರವಿರದ ತಾಣಗಳಲ್ಲಿ ಗಾಳಿಯಂತ್ರ
ಗಳನ್ನು ಸ್ಥಾಪಿಸಬೇಕು. ಅಲ್ಲಿಂದ ಕೇಬಲ್‍ಗಳ ಮೂಲಕ ತೀರಕ್ಕೆ ತಂದು ಸರಬರಾಜಿನ ಗ್ರಿಡ್‍ಗೆ ಸೇರಿಸಬೇಕು. ಇವುಗಳೊಡನೆ ಸಾಗರದಲ್ಲಿ ವಾಯುಶಕ್ತಿ ಫಾರ್ಮ್‌ಗಳು ಆರ್ದ್ರತೆ, ಲವಣಯುಕ್ತ ನೀರು ಮತ್ತು ಬೃಹದಾಕಾರದ ಅಲೆಗಳ ಹೊಡೆತದ ಸಮಸ್ಯೆಯನ್ನು ಎದುರಿಸಬೇಕು. ಯೋಜನೆಯ ಒಟ್ಟು ವೆಚ್ಚದ ಮೂರನೆಯ ಒಂದು ಭಾಗ ಟರ್ಬೈನ್‍ಗೆ ತಗುಲಿದರೆ, ಉಳಿದ ಭಾಗವು ರಚನೆಯ ನಿರ್ಮಾಣ, ದುರಸ್ತಿ, ನಿರ್ವಹಣೆ, ವಿದ್ಯುತ್ ಸಾಗಣೆ ಮುಂತಾದವುಗಳಿಗೆ ಬೇಕು.

ಸಾಗರ ತೀರದಿಂದ ಸ್ಥಾವರದ ದೂರ ಹೆಚ್ಚಿದಷ್ಟೂ ಎಲ್ಲ ವೆಚ್ಚಗಳೂ ಏರುತ್ತವೆ. ಶಕ್ತಿ ಉತ್ಪಾದನೆಗೆ ಸಂಬಂಧಿಸಿದ ಲೋಕಸಭೆಯ 17ನೆಯ ಕಾಯಂ ಸಮಿತಿಯು ಲೋಕಸಭೆಗೆ ನೀಡಿರುವ ಮಾಹಿತಿಯಂತೆ, ಸಾಗರದ ವಾಯುವಿದ್ಯುತ್, ಭೂಮಿಯ ಮೇಲಿನ ವಾಯು ವಿದ್ಯುತ್‍ಗಿಂತ ಮೂರು ಪಾಲು ದುಬಾರಿಯಾಗಲಿದೆ. ಸಾಗರದಿಂದ ಕೇಬಲ್‍ಗಳ ಮೂಲಕ ಬಂದ ವಿದ್ಯುತ್ತನ್ನು ಕರಾವಳಿ
ಯಲ್ಲಿ ವಿದ್ಯುತ್ ವಿತರಣಾ ಸಂಸ್ಥೆಗಳು ಕೊಂಡು ಬಳಕೆದಾರರಿಗೆ ವಿತರಿಸಬೇಕು. ಆದರೆ ನಮ್ಮ
ದೇಶದ ಎಲ್ಲ ವಿದ್ಯುತ್ ವಿತರಣಾ ಸಂಸ್ಥೆಗಳು ಸದಾಕಾಲ ನಷ್ಟದಲ್ಲಿ ಇರುವಂತಹವು. ಸರ್ಕಾರದಿಂದ ವಿಶೇಷ ನೆರವು ದೊರೆತ ವಿನಾ ಅವುಗಳಿಂದ ಈ ಕೆಲಸ ಸಾಧ್ಯವಿಲ್ಲ.

ಸಾಗರದಲ್ಲಿ ವಾಯುವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸಲು ಆಸಕ್ತಿ ವ್ಯಕ್ತಪಡಿಸಿರುವ ಸಂಸ್ಥೆಗಳಿಗೆ ಈ ಎಲ್ಲ ಸಮಸ್ಯೆಗಳ ಪರಿಚಯವಿದೆ. ಅವು ಸರ್ಕಾರದ ಸ್ಪಷ್ಟನೆ, ಭರವಸೆಗಳಿಗೆ ಕಾಯುತ್ತಿವೆ. ಉದಾಹರಣೆಗೆ, ಸಾಗರದಲ್ಲಿ ಸ್ಥಾಪಿಸಬೇಕಾದ ಬೃಹತ್ ಟರ್ಬೈನ್‍ಗಳನ್ನು ಪ್ರಾರಂಭದಲ್ಲಿ ವಿದೇಶಗಳಿಂದ ಆಮದು ಮಾಡಿಕೊಳ್ಳಬೇಕಾದ ಪರಿಸ್ಥಿತಿಯಿದೆ. ಆದರೆ ವಿಪರೀತ ಕರಭಾರದಿಂದ ಇದು ಲಾಭದಾಯ
ಕವಲ್ಲ. ಬೃಹದಾಕಾರದ ಟರ್ಬೈನ್‍ಗಳು ಹಾಗೂ ಅಲಗುಗಳನ್ನು ಸಾಗಿಸಲು ನಮ್ಮ ರಸ್ತೆಗಳನ್ನು ಅಗಲಗೊಳಿಸ
ಬೇಕು. ಬಿಡಿಭಾಗಗಳನ್ನು ತಂದು ಕರಾವಳಿಯ ಸಮೀಪವೇ ಕಾರ್ಯಾಗಾರಗಳನ್ನು ನಿರ್ಮಿಸಿ, ಜೋಡಿಸಿ ಅಲ್ಲಿಂದ ಸಾಗರದೊಳಕ್ಕೆ ಸಾಗಿಸಬೇಕು.

ಕಳೆದ ಆರು ವರ್ಷಗಳ ಅವಧಿಯಲ್ಲಿ ನೀತಿ-ನಿಲುವುಗಳ ಪ್ರಕಟಣೆಯನ್ನು ಬಿಟ್ಟರೆ ಈ ಕ್ಷೇತ್ರದಲ್ಲಿ ಹೆಚ್ಚಿನ ಕೆಲಸಗಳಾಗಿಲ್ಲ. ಮುಂದಿನ ಎರಡು ವರ್ಷಗಳಲ್ಲಿ ಗುಜರಾತ್‍ನ ತೀರದಿಂದ 25 ಕಿ.ಮೀ.ಗಳ ದೂರದ ಖಾಂಭಾತ್ ಖಾರಿಯಲ್ಲಿ ನಮ್ಮ ದೇಶದ ಮೊದಲ ಒಂದು ಗಿಗಾವಾಟ್ ಸಾಮರ್ಥ್ಯದ ಸಾಗರದ ವಾಯುವಿದ್ಯುತ್ ಸ್ಥಾವರ ಡೆನ್ಮಾರ್ಕ್‌ನ ಸಹಭಾಗಿತ್ವದಲ್ಲಿ ಉತ್ಪಾದನೆ ಪ್ರಾರಂಭಿಸ
ಲಿದೆಯೆಂದು ಸಚಿವಾಲಯದ ಮೂಲಗಳು ತಿಳಿಸಿವೆ. ಆದರೆ ಉಳಿದ ಯಾವ ಸ್ಥಾವರವೂ 2030ರ ಮೊದಲಿಗೆ ಉತ್ಪಾದನೆ ಪ್ರಾರಂಭಿಸುವ ನಿರೀಕ್ಷೆಯಿಲ್ಲವೆಂಬುದು ಪರಿಣತರ ಅಭಿಪ್ರಾಯ.

ಬೀಸುವ ಗಾಳಿ ಮತ್ತು ಸಾಗರದ ಭೂಭೌಗೋಳಿಕ ಸ್ಥಿತಿಯ ಬಗೆಗಿನ ಮಾಹಿತಿ ಸಂಗ್ರಹ, ನೂರಾರು ಬಿಡಿಭಾಗಗಳ ಅಡೆತಡೆಯಿಲ್ಲದ ಸರಬರಾಜು, ಸಾಗರದಲ್ಲಿ ಉತ್ಪಾದಿಸಿದ ವಿದ್ಯುತ್ತನ್ನು ಕರಾವಳಿಗೆ ಸಾಗಿಸುವ ವ್ಯವಸ್ಥೆ, ಬಂದರುಗಳಲ್ಲಿ ಮೂಲ ಸೌಕರ್ಯ ನಿರ್ಮಾಣ, ಟರ್ಬೈನ್‍ಗಳ ವಿನ್ಯಾಸ ಮತ್ತು ತಂತ್ರಜ್ಞಾನದಲ್ಲಿ ಅಗತ್ಯ ಬದಲಾವಣೆಗಳು, ವಿದ್ಯುತ್ ಉತ್ಪಾದನಾ ಕಂಪನಿಗಳಿಗೆ ಧನಸಹಾಯ ಮತ್ತು ಕರ ವಿನಾಯಿತಿ ಮುಂತಾದ ಕೆಲಸಗಳು ಅತ್ಯಂತ ತ್ವರಿತಗತಿಯಲ್ಲಿ ನಡೆಯಬೇಕಾದ ಅಗತ್ಯವಿದೆ.

ಈ ಎಲ್ಲ ಪ್ರಯತ್ನಗಳು ಸಮರೋಪಾದಿಯಲ್ಲಿನಡೆದಾಗ ಮಾತ್ರ, 2030ರ 30 ಗಿಗಾವಾಟ್‍ಗಳ ಗುರಿಯನ್ನು ಮುಟ್ಟುವುದು ಬಹುತೇಕ ಅಸಾಧ್ಯವಾದರೂ 2050ರ ಹೊತ್ತಿಗೆ ಸಾಗರದ ವಾಯುವಿದ್ಯುತ್ ಸ್ಥಾವರಗಳಿಂದ 140 ಗಿಗಾವಾಟ್‍ಗಳಷ್ಟು ವಿದ್ಯುತ್ತನ್ನು ಉತ್ಪಾದಿಸುವುದು ಸಾಧ್ಯವಾಗಬಹುದು.

–ಡಾ. ಎಚ್.ಆರ್.ಕೃಷ್ಣಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT