ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶ್ಲೇಷಣೆ: ಬಿರಿದ ಭೂಮಿ, ಕುಸಿದ ಬದುಕು!

ಮಲೆನಾಡು, ಕರಾವಳಿಯ ಬಹುತೇಕ ಭೂಕುಸಿತಗಳು ಮಾನವನಿರ್ಮಿತ ಎನ್ನುತ್ತವೆ ಅಧ್ಯಯನಗಳು
Last Updated 5 ಜುಲೈ 2022, 22:30 IST
ಅಕ್ಷರ ಗಾತ್ರ

ಕಳೆದ ಮಳೆಗಾಲದಲ್ಲಿ ಉತ್ತರ ಕನ್ನಡದ ಕಾಳಿ ನದಿ ಕಣಿವೆಯ ಕಳಚೆ ಗ್ರಾಮವು ಭೂಕುಸಿತದಲ್ಲಿ ಕೊಚ್ಚಿ ಹೋಯಿತು. ಕುಸಿದ ಗುಡ್ಡಗಳ ಮಣ್ಣಿನಡಿಯಲ್ಲಿ ಜನ ಪ್ರಾಣ ತೆತ್ತರು, ಜಾನುವಾರುಗಳು ಕಣ್ಮರೆಯಾದವು. ಮನೆ-ಕೊಟ್ಟಿಗೆ, ಗದ್ದೆ-ತೋಟಗಳ ಮೇಲೆ ನೂರಾರು ಅಡಿ ಮಣ್ಣಿನರಾಶಿ ಬಿತ್ತು. ಬೆಳಗಾಗುವುದರಲ್ಲಿ ಎಲ್ಲ ಕಳೆದುಕೊಂಡಿದ್ದ ಹಲವಾರು ಕುಟುಂಬಗಳು, ಕೆಸರಲ್ಲಿ ಹುದುಗಿಹೋಗಿದ್ದ ತಮ್ಮದೇ ನೆಲದಿಂದ ಭಾರವಾದ ಹೆಜ್ಜೆಗಳನ್ನಿಡುತ್ತ, ಉಟ್ಟಬಟ್ಟೆಯಲ್ಲಿ ಸಮೀಪದ ಯಲ್ಲಾಪುರ ಪಟ್ಟಣಕ್ಕೆ ನಿರಾಶ್ರಿತರಾಗಿ ಸಾಗಿದರು.

ಅಂದಿನಿಂದ ಇಂದಿನವರೆಗೆ, ಅದೆಷ್ಟೋ ಜನಪ್ರತಿನಿಧಿ ಗಳು ಹಾಗೂ ಅಧಿಕಾರಿಗಳ ಭೇಟಿ, ಮಾಧ್ಯಮಗಳಲ್ಲಿ ವರದಿ, ನಷ್ಟ ಅಂದಾಜಿಸುವ ಸಮೀಕ್ಷೆಗಳು, ಪುನರ್ವಸತಿ ಪ್ರಸ್ತಾವ, ಪರಿಹಾರದ ಆಶ್ವಾಸನೆ- ಎಲ್ಲ ಜರುಗುತ್ತಿವೆ. ಆದರೆ, ಕಳಚೆ ಊರಿನವರಿಗೆಈವರೆಗೆ ಸಿಕ್ಕಿದ್ದೇನು? ಈ ಮುಂಗಾರಿನ ಆರಂಭದಲ್ಲಿ ಜಿಲ್ಲಾ ಆಡಳಿತದಿಂದ ಬಂದ, ‘ನಿಮ್ಮ ಮನೆ-ಜಮೀನು ಭೂಕುಸಿತದ ಸಾಧ್ಯತೆಯಿರುವ ಪ್ರದೇಶದಲ್ಲಿ ಇರುವುದರಿಂದ ಮಳೆಗಾಲದಲ್ಲಿ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಗೊಳ್ಳಬೇಕು’ ಎಂಬ ಒಕ್ಕಣೆಯ ಸೂಚನಾಪತ್ರ ಮಾತ್ರ!

ಕಳಚೆ ಗ್ರಾಮದ ಭೂಕುಸಿತದಂಥ ದುರ್ಘಟನೆಗಳು ಮಲೆನಾಡು ಹಾಗೂ ಕರಾವಳಿಯಲ್ಲಿ ಜರುಗತೊಡಗಿ ದಶಕವೇ ಸಂದಿದೆ. ಭಾರಿಮಳೆ, ಭೂಕುಸಿತ, ಜೀವಹಾನಿ, ಆಸ್ತಿನಷ್ಟ, ಸರ್ಕಾರದಿಂದ ಪರಿಹಾರದ ಮಾತು- ಪ್ರತೀ ಮಳೆಗಾಲದಲ್ಲೂ ಇದೇ ಘಟನಾಚಕ್ರ! ಭೂಕುಸಿತದ ವ್ಯಾಪ್ತಿ ಮತ್ತು ತೀವ್ರತೆ ಮಾತ್ರ ಐದು ವರ್ಷಗಳಿಂದ ಹೆಚ್ಚುತ್ತಲೇ ಇದೆ. ಸಹ್ಯಾದ್ರಿ ತಪ್ಪಲಿನ ಜನಸಮುದಾಯಗಳು ಮಳೆಗಾಲವೆಂದರೆ ಬೆದರುವಷ್ಟು ಪರಿಸ್ಥಿತಿ ಈಗ ಬಿಗಡಾಯಿಸುತ್ತಿದೆ. ಇದಕ್ಕೆ ಸಮಗ್ರ ಪರಿಹಾರೋಪಾಯ ಕೈಗೊಳ್ಳಬೇಕಿದ್ದ ಸರ್ಕಾರ ಮಾತ್ರ ಮೇಘಸ್ಫೋಟ, ಭೂಕಂಪ, ಪರಿಹಾರದ ಪ್ಯಾಕೇಜ್‌ನಂತಹ ಶಬ್ದಗಳಲ್ಲೇ ಮುಳುಗಿ, ತನ್ನ ಅಯೋಮಯ ಆಡಳಿತದ ಗೊಂದಲ ವನ್ನು ಜನರ ಮೇಲೂ ಹೇರುತ್ತ ಕಾಲ ತಳ್ಳುತ್ತಿದೆ!

ಸಹ್ಯಾದ್ರಿಯಲ್ಲಿ ವ್ಯಾಪಕವಾಗುತ್ತಿರುವ ಭೂಕುಸಿತಗಳನ್ನು ಅಭ್ಯಸಿಸಿರುವ ದೇಶದ ವೈಜ್ಞಾನಿಕ ಲೋಕಕ್ಕೆ, ಇದರ ಕಾರಣಗಳು ಈಗಾಗಲೇ ಅರಿವಾಗಿವೆ. ದೆಹಲಿಯ ರಾಷ್ಟ್ರೀಯ ಭೂಕಂಪನ ಮಾಹಿತಿ ಕೇಂದ್ರ ಹಾಗೂ ಹೈದರಾಬಾದಿನ ರಾಷ್ಟ್ರೀಯ ಭೂಗರ್ಭ ಸಂಶೋಧನಾ ಸಂಸ್ಥೆಯು ಪಶ್ಚಿಮಘಟ್ಟದಲ್ಲಿ ಭೂಕಂಪದ ಸಾಧ್ಯತೆಗಳನ್ನು ಆಳವಾಗಿ ಪರಿಶೀಲಿಸಿವೆ. ಹವಾಮಾನ ವೈಪರೀತ್ಯ, ಅಕಾಲಿಕ ಮಳೆ ಹಾಗೂ ಭೂಕುಸಿತಗಳ ಕುರಿತು ಉಪಗ್ರಹ ಆಧಾರಿತ ದೂರಸಂವೇದಿ ತಂತ್ರಜ್ಞಾನ ಬಳಸಿಕೊಂಡು ಇಸ್ರೊ ನಿಖರ ಮಾಹಿತಿ ಒದಗಿಸುತ್ತಿದೆ. ಭಾರತೀಯ ಭೂಗರ್ಭಶಾಸ್ತ್ರ ಸರ್ವೇಕ್ಷಣಾ ಸಂಸ್ಥೆಯು ದೇಶದೆಲ್ಲೆಡೆಯ ಭೂಕುಸಿತ ಸಾಧ್ಯತೆಯ ಪ್ರದೇಶಗಳ ನಕ್ಷೆ ತಯಾರಿಸಿದೆ. ಜೊತೆಗೆ, ಭೂಕುಸಿತದ ಮುನ್ಸೂಚನಾತಂತ್ರಜ್ಞಾನವನ್ನೂ ಅಭಿವೃದ್ಧಿಪಡಿಸುತ್ತಿದೆ. ಇವನ್ನೆಲ್ಲ ಬಳಸಿಕೊಂಡು, ಕರ್ನಾಟಕ ರಾಜ್ಯ ನೈಸರ್ಗಿಕ ಪ್ರಕೋಪ ಉಸ್ತುವಾರಿ ಕೇಂದ್ರವು ಭೂಕುಸಿತವೂ ಸೇರಿದಂತೆ ಪ್ರಕೃತಿ ವಿಕೋಪಗಳನ್ನು ನಿರ್ವಹಿಸಲು ರಾಜ್ಯ ಸರ್ಕಾರ ಹಾಗೂ ಜಿಲ್ಲಾ ಆಡಳಿತಗಳಿಗೆ ಮಾರ್ಗದರ್ಶನ ಮಾಡುತ್ತಿದೆ.

ಕೊಡಗಿನ 2018ರ ಭೂಕುಸಿತಗಳ ನಂತರ, ಅವನ್ನು ಸಮರ್ಥವಾಗಿ ನಿರ್ವಹಿಸಲು ಸಮಗ್ರ ಕಾರ್ಯನೀತಿ ಕೈಗೊಳ್ಳುವಂತೆ ಸರ್ಕಾರವನ್ನು ಹಲವಾರು ತಜ್ಞರು, ರೈತ ಸಂಘಟನೆಗಳ ಪ್ರತಿನಿಧಿಗಳು ಹಾಗೂ ನೀತಿ ನಿರೂಪಕರು ಒತ್ತಾಯಿಸಿದ್ದರು. ಹೀಗಾಗಿ, ಸರ್ಕಾರವು 2020ರಲ್ಲಿ ಕರ್ನಾಟಕ ಜೀವವೈವಿಧ್ಯ ಮಂಡಳಿಯ ಅಧ್ಯಕ್ಷರ ನೇತೃತ್ವದಲ್ಲಿ ಉನ್ನತ ಮಟ್ಟದ ತಜ್ಞ ಸಮಿತಿಯೊಂದನ್ನು ರಚಿಸಿತ್ತು. ಮೇಲೆ ಪ್ರಸ್ತಾಪಿಸಿದ ಸಂಶೋಧನಾ ಸಂಸ್ಥೆಗಳ ಜೊತೆಗೆ ಭಾರತೀಯ ವಿಜ್ಞಾನ ಮಂದಿರದ ವಿಜ್ಞಾನಿಗಳು, ವಿವಿಧ ವಿಷಯತಜ್ಞರು ಹಾಗೂ ಹಿರಿಯ ಅಧಿಕಾರಿಗಳು ಸಮಿತಿಯ ಸದಸ್ಯರಾಗಿದ್ದರು. ವಿಸ್ತೃತ ಕ್ಷೇತ್ರಾಧ್ಯಯನ, ಜನಾಭಿಪ್ರಾಯ ಸಂಗ್ರಹ ಹಾಗೂ ಸಂಶೋಧನಾ ಮಾಹಿತಿಗಳ ಕ್ರೋಡೀಕರಣ- ಇವೆಲ್ಲವನ್ನೂ ಆಧರಿಸಿ ರೂಪಿಸಿದ ಸಮಗ್ರ ವರದಿಯನ್ನು ಆ ಸಮಿತಿಯು 2021ರ ಮೇ ತಿಂಗಳಿನಲ್ಲಿ ಸರ್ಕಾರಕ್ಕೆ ಸಲ್ಲಿಸಿತು. ಈಗ ಅದರ ಅನುಷ್ಠಾನವಾಗಬೇಕಿದೆ.

ಮೂರು ಮುಖ್ಯ ಪ್ರಶ್ನೆಗಳಿಗೆ ಈ ವರದಿಯಲ್ಲಿನ ಉತ್ತರಗಳೇನೆಂದು ಇಲ್ಲಿ ಸಂಕ್ಷಿಪ್ತವಾಗಿ ಪರಿಶೀಲಿಸೋಣ. ಮೊದಲಿನದು, ಈ ಭೂಕುಸಿತಗಳಿಗೆ ಭೂಕಂಪ ಕಾರಣವೇ ಎಂಬುದು. ಇಲ್ಲವೆನ್ನುತ್ತಾರೆ ವಿಜ್ಞಾನಿಗಳು. ಭೂಕಂಪದ ಸಾಧ್ಯತೆಯಿರುವ ದೇಶದ ಪ್ರದೇಶಗಳನ್ನೆಲ್ಲ ನಿಖರವಾಗಿ ಈಗಾಗಲೇ ನಕ್ಷೆ ಮಾಡಲಾಗಿದ್ದು, ರಾಜ್ಯದ ಪಶ್ಚಿಮಘಟ್ಟವು ಸುರಕ್ಷಿತ ವಲಯದಲ್ಲಿದೆ. ಭೂಮಿ ಕುಸಿಯುವಷ್ಟು ಭೂಕಂಪ ಇಲ್ಲಿ ಆಗುವುದಿಲ್ಲ; ಹೀಗಾಗಿ ಭಯಪಡಬೇಕಿಲ್ಲ.

ಎರಡನೆಯದು, ಇತ್ತೀಚೆಗೆ ಕೊಡಗಿನಲ್ಲಿ ಬಹಳ ಸಲ ಅನುಭವಕ್ಕೆ ಬಂದ ಭೂಕಂಪನ ಎಂಥದ್ದು? ಹಿಂದೆಯೂ ಘಟಿಸಿರುವ ಈ ತೆರನ ಸಂದರ್ಭಗಳಿಗೆ, ಸಹ್ಯಾದ್ರಿಶಿಖರ ಗಳ ಭೂಗರ್ಭದಾಳದಲ್ಲಿರುವ ಮೆತ್ತನೆ ಪ್ರದೇಶಗಳು ಹಾಗೂ ಅಲ್ಲಿನ ಶಿಲಾವಲಯಗಳ ಬಿರುಕುಗಳು ಕಾರಣ ಎನ್ನಬೇಕು. ಅವು ಸಹಜವಾಗಿ ಆಗಾಗ ಕುಸಿದಾಗ, ಸಣ್ಣಪ್ರಮಾಣದಲ್ಲಿ ಭೂಮಿ ಕಂಪಿಸುತ್ತದೆ. ಕಂಪನದ ಜೊತೆಗೆ, ಕೆಲವೊಮ್ಮೆ ಸ್ಫೋಟದ ಶಬ್ದವೂ ಕೇಳುವುದಿದೆ. ಭೂಮಿಯಾಳದಲ್ಲಿ ಮಣ್ಣು ಪುಡಿಯಾಗಿ ಅಥವಾ ಪ್ರಾಣಿ-ಸಸ್ಯಜನ್ಯ ಅವಶೇಷಗಳ ಕೊಳೆಯುವಿಕೆಯಿಂದಾಗಿ ಕೆಲವೊಮ್ಮೆ ಖಾಲಿ ರಂಧ್ರಗಳು ನಿರ್ಮಾಣವಾಗಿರುತ್ತವೆ. ಭಾರಿ ಮಳೆಯಲ್ಲಿ ಮೇಲ್ಭಾಗದ ಹಸಿಮಣ್ಣು ನೆಲದಾಳದಲ್ಲಿರುವ ಈ ನಿರ್ವಾತ ರಂಧ್ರಗಳ (Cavities) ಮೇಲೆ ಕುಸಿದಾಗ, ಸ್ಫೋಟದ ಶಬ್ದ ಒಮ್ಮೆಲೆ ಹೊರ ಹೊಮ್ಮುವುದು! ಆದರೆ, ಈ ಕಂಪನ ಹಾಗೂ ಶಬ್ದ ಗಳಿಂದ ಮಾತ್ರವೇ ಭೂಕುಸಿತವಾಗದು ಎನ್ನುತ್ತಾರೆ ವಿಜ್ಞಾನಿಗಳು.

ಅಂತಿಮವಾಗಿ ಮುಖ್ಯ ಪ್ರಶ್ನೆ, ಇಲ್ಲಿನ ಭೂಕುಸಿತಗಳಿಗೆ ಕಾರಣಗಳೇನು? ಉತ್ತರ ಸ್ಪಷ್ಟವಿದೆ. ಸಹ್ಯಾದ್ರಿಯ ಮೇಲ್ಮಣ್ಣಿನಲ್ಲಿ ಹೆಚ್ಚಾಗಿ ದೊರಕುವುದು ಬಸಾಲ್ಟ್ ಬಿರಿದು ನಿರ್ಮಾಣವಾದ ಗುಂಡುಕಲ್ಲುಗಳು. ಜೊತೆಗೆ, ತೀರಾ ಸಡಿಲವಾದ ಜಂಬಿಟ್ಟಿಗೆ ಮಣ್ಣು ಮತ್ತು ಸುಣ್ಣದಕಲ್ಲಿನ ರೀತಿಯ ರೂಪಾಂತರಶಿಲೆಯ ಮಿಶ್ರಣ. ಆಳದಲ್ಲಿ ಇದನ್ನು ಹೊತ್ತುನಿಂತ ಗ್ರಾನೈಟ್ ಸ್ತರವು ಗಟ್ಟಿಯಾಗಿದ್ದರೂ, ಎರೆ ಮಣ್ಣಿನ ಈ ಮೇಲ್ಪದರು ಮಾತ್ರ ಸಡಿಲವಾಗಿದೆ. ಹೊರಗೆ ಆವರಿಸಿರುವ ಕಾಡಿನ ಹಸಿರುಪದರು, ಗಿಡಮರಗಳ ಬೇರಿನಜಾಲ ಮತ್ತು ಕೊಳೆತ ಜೀವಜನ್ಯ ವಸ್ತುಗಳೆಲ್ಲ ಸೇರಿ ಸೃಷ್ಟಿಸಿದ ನೈಸರ್ಗಿಕ ರಕ್ಷಣಾಪೊರೆ ಮಾತ್ರ ಈ ಸಡಿಲಮಣ್ಣನ್ನು ಗಟ್ಟಿಯಾಗಿ ಬೆಸೆದಿಟ್ಟಿದೆ.

ಆದರೆ, ಪಶ್ಚಿಮಘಟ್ಟದ ಶೇ 96ಕ್ಕೂ ಹೆಚ್ಚಿನ ಭೂಕುಸಿತಗಳು ಈ ಮೇಲ್ಮಣ್ಣಿನ ಕವಚ ನಾಶವಾಗಿದ್ದ ರಿಂದಲೇ ಘಟಿಸುತ್ತಿವೆ. ಅರಣ್ಯನಾಶದ ಜೊತೆಗೆ, ಗಣಿಗಳು, ಹೆದ್ದಾರಿ, ರೈಲುಮಾರ್ಗ, ಕಟ್ಟಡ ನಿರ್ಮಾಣ, ಕೃಷಿ ವಿಸ್ತರಣೆ ಇತ್ಯಾದಿಗಳಿಗಾಗಿ ಗುಡ್ಡಗಳನ್ನು ಎಲ್ಲೆಂದರಲ್ಲಿ ಲಂಬಕೋನದಲ್ಲಿ ಕತ್ತರಿಸುತ್ತಿರುವುದೇ ಇದಕ್ಕೆ ಕಾರಣ. ಕಾನನದ ಹಸಿರುಹೊದಿಕೆಯನ್ನು ತೆಗೆದಾಗ ಮೇಲ್ಮಣ್ಣು ಸವಕಳಿಯಾಗಿ, ಮಳೆನೀರು ಒಮ್ಮೆಲೆ ಆಳಕ್ಕಿಳಿದು ಭೂಪದರುಗಳು ಕುಸಿಯತೊಡಗುತ್ತವೆ. ಹವಾಮಾನ ಬದಲಾವಣೆಯಿಂದಾಗಿ ಒಂದೇ ದಿನದಲ್ಲಿ ನೂರು-ಇನ್ನೂರು ಮಿ.ಮೀ. ಮಳೆ ಸುರಿಯುವ ಸಂದರ್ಭಗಳು ಇತ್ತೀಚೆಗೆ ಹೆಚ್ಚುತ್ತಿದ್ದು, ಅಂಥ ಭಾರಿ ಮಳೆಯೇ ಭೂಕುಸಿತಕ್ಕೆ ಮೊದಲ ಪ್ರಚೋದನೆಯೇನೋ ಹೌದು. ಆದರೆ, ಬಿದ್ದ ಮಳೆನೀರನ್ನು ತಡೆಯುವ ಹಾಗೂ ಹಿಡಿದಿಡುವ ಮೇಲ್ಮಣ್ಣಿನ ಸಾಮರ್ಥ್ಯವನ್ನೆಲ್ಲ ಭೂಸ್ವರೂಪದಅವೈಜ್ಞಾನಿಕ ಪರಿವರ್ತನೆಯು ನಾಶ ಮಾಡಿರುವುದು ಹಾಗೂ ನೆಲ-ಜಲ ನಿರ್ವಹಣೆಯೇ ಮೂಲ ಕಾರಣಗಳೆಂಬುದು ವಿಜ್ಞಾನಿಗಳ ಖಚಿತ ಅಭಿಪ್ರಾಯ.

ಸೂಕ್ಷ್ಮ ಸಹ್ಯಾದ್ರಿಯನ್ನು ಸೂಕ್ತ ನೆಲ-ಜಲ ಬಳಕೆ ನೀತಿಗೆ ಈಗಲಾದರೂ ಒಳಪಡಿಸಬೇಕಿದೆ. ಮಲೆನಾಡು- ಕರಾವಳಿಯಲ್ಲಿ ಸಾಗಿರುವ ಅರಣ್ಯ ಅತಿಕ್ರಮಣ ಹಾಗೂ ಕಾಡುನಾಶಕ್ಕೆ ತಡೆ ಬೀಳಬೇಕಿದೆ. ಅಡವಿ ಕಡಿದು ಶುಂಠಿ, ರಬ್ಬರ್, ಅಕೇಶಿಯಾ, ಗೇರು ಬೆಳೆಸುವ ‘ವಾಣಿಜ್ಯಕೃಷಿ’ ನಿಲ್ಲಬೇಕಿದೆ. ಮಿತಿಮೀರಿ ಭಾರಿ ಯಂತ್ರಗಳನ್ನು ಬಳಸಿ ಗುಡ್ಡಗಳನ್ನೆಲ್ಲ ಕತ್ತರಿಸುತ್ತಿರುವ ವಿನಾಶಕಾರಿ ಯೋಜನೆ ಗಳನ್ನು ನಿರ್ಬಂಧಿಸಲೇಬೇಕಿದೆ.

ಜೀವಜಲ ತರುವ ಮಳೆಗಾಲವೇ ಜೀವಕ್ಕೆ ಕುತ್ತು ತರುವಂತಾಗಿದ್ದು, ನೆಲ-ಜಲ ನಿರ್ವಹಣಾ ನೀತಿಯ ತೀವ್ರ ಕುಸಿತದಿಂದಾಗಿ ಮಾತ್ರ. ಸರ್ಕಾರ ಎಚ್ಚೆತ್ತುಕೊಂಡೀತೇ? ಏಕೆಂದರೆ, ಇದೀಗ ಮತ್ತೆ ಮಳೆ ಹೊಯ್ಯುತಿದೆ!

– ಕೇಶವ ಎಚ್‌. ಕೊರ್ಸೆ

(ಲೇಖಕ: ನಿರ್ದೇಶಕ, ಸಂರಕ್ಷಣಾ ಜೀವಶಾಸ್ತ್ರ ಮತ್ತು ಸುಸ್ಥಿರ ಅಭಿವೃದ್ಧಿ ಅಧ್ಯಯನ ಕೇಂದ್ರ, ಶಿರಸಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT