ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗರ ನಾಲಗೆಗಳ ‘ನವಭಾರತ’

ನಮ್ಮ ಸಂಸದೀಯ ಪರಿಭಾಷೆಯ ಕತ್ತು ಹಿಸುಕಲು ಮುಂದಾಗಿರುವ ಭೂಪರು!
Last Updated 7 ಏಪ್ರಿಲ್ 2019, 20:15 IST
ಅಕ್ಷರ ಗಾತ್ರ

ಸಂವಿಧಾನಾತ್ಮಕವಾಗಿ ನಮ್ಮದು ಸಂಸದೀಯ ಪ್ರಜಾಪ್ರಭುತ್ವ. ಫ್ಯೂಡಲ್ ಪದ್ಧತಿಯಿಂದ ತಾಂತ್ರಿಕವಾಗಿ ಪ್ರಜಾಪ‍್ರಭುತ್ವ ಪದ್ಧತಿಗೆ ವರ್ಗಾವಣೆಗೊಂಡ ನಮ್ಮ ದೇಶದ ನೇತಾರರ ಪರಿಭಾಷೆಯನ್ನು ನೋಡಿದರೆ ನಾವಿನ್ನೂ ರಾಜಶಾಹಿ ಫ್ಯೂಡಲ್‌ಗಿರಿಯಲ್ಲೇ ಇದ್ದೇವೇನೋ ಎನ್ನಿಸುತ್ತದೆ.

ಸ್ವಾತಂತ್ರ್ಯ ಚಳವಳಿಯ ಹಿನ್ನೆಲೆಯಿಂದ ಬಂದ ನೇತಾರರಲ್ಲಿ ಸಹಜವಾಗಿಯೇ ಸಂಸದೀಯ ಪರಿಭಾಷೆಯ ಪ್ರಾಮಾಣಿಕತೆಯಿತ್ತು. ಮೊದಲ ಹಂತದ ನೇತಾರರಲ್ಲಿದ್ದ ಈ ಪರಿಭಾಷೆಯು ಜಮೀನ್ದಾರಿ ಫ್ಯೂಡಲ್ ಪ್ರಭುಗಳಲ್ಲಿ ಇಲ್ಲದೆ ಇದ್ದುದು ಇತಿಹಾಸದ ಒಂದು ವಾಸ್ತವವೂ ಆಗಿತ್ತು. ಆದರೆ, ಜನಚಳವಳಿಗಳುಪ್ರಬಲವಾಗುತ್ತ ಬಂದಂತೆ ರಾಜಕೀಯ ನೇತಾರರ ನಡೆ, ನುಡಿಗಳಲ್ಲಿಯೂ ಬದಲಾವಣೆಗಳು ಕಾಣಿಸಿಕೊಂಡವು. ಇನ್ನೇನು ನಮ್ಮ ಭಾರತವು ಪರಿಪಕ್ವ ಪ್ರಜಾಪ್ರಭುತ್ವವಾಗುತ್ತದೆ ಎಂದು ಕನಸಿದವರಿಗೆ ಇತ್ತೀಚಿನ ವರ್ಷಗಳಲ್ಲಿ ದೌರ್ಜನ್ಯದ ದುಃಸ್ವಪ್ನಗಳೇ ದಾಳಿಯಿಡುತ್ತಿವೆ.

ಮೋದಿಯವರು 2017ರ ಮಾರ್ಚ್‌ 12ರಂದು ತಮ್ಮ ‘ನವಭಾರತ’ ಕಲ್ಪನೆಯನ್ನು ಘೋಷಿಸಿದರು. ಈ ನವಭಾರತವು 2022ರ ವೇಳೆಗೆ ಸಾಕಾರವಾಗುತ್ತದೆ ಎಂದರು. ತಮ್ಮ ಮುನ್ನೋಟದ ಭಾಗವಾಗಿ ಗಾಂಧಿ, ಅಂಬೇಡ್ಕರ್ ಮತ್ತು ಸರ್ದಾರ್ ಪಟೇಲರ ಆದರ್ಶಗಳನ್ನು ಉಲ್ಲೇಖಿಸಿದರು; ನೆಹರೂ ಅವರ ಹೆಸರನ್ನು ಹೇಳಲಿಲ್ಲ. ವಾಸ್ತವವಾಗಿ ಪ್ರಧಾನಿಯಾಗಿ ತಾವು ಮಾಡಿದ ಮೊದಲ ಭಾಷಣಗಳಲ್ಲೇ ನೆಹರೂ ತಮ್ಮನ್ನು ‘ಪ‍್ರಧಾನ ಸೇವಕ’ರೆಂದು ಕರೆದುಕೊಂಡಿದ್ದರು. ‘ನವಭಾರತ’ ನಿರ್ಮಾಣದ ಅಗತ್ಯವನ್ನು ಪ್ರತಿಪಾದಿಸಿದ್ದರು. ಈಗ ಈ ಪದಗಳನ್ನು ತಮ್ಮದಾಗಿಸಿಕೊಂಡು ಮೋದಿಯವರು ಬಳಸುತ್ತಿರುವುದರಿಂದ ನೆಹರೂ ಅವರ ಪ್ರಸ್ತಾಪ‍ ಮಾಡದೇ ಇರುವುದು ಸಹಜವಾಗಿದೆ! ಕೆಲವರು ಬಳಸುವ ಭಾಷೆಯು ‘ನವಭಾರತ’ ಬಿಡಿ, ಮೂಲ ಸಂಸದೀಯ ಪರಿಭಾಷೆಯ ಹತ್ಯೆಗೆ ನಿಂತಂತೆ ಕಾಣುತ್ತಿದೆ.ಒಂದು ಕಡೆ ‘ಬಂದೂಕು ಭಯೋತ್ಪಾದಕರ’ ಅಮಾನವೀಯ ಹಾವಳಿ, ಇನ್ನೊಂದು ಕಡೆ ‘ಭಾಷಾ ಭಯೋತ್ಪಾದಕರ’ ಹದ್ದುಮೀರಿದ ಜಿದ್ದಿನ ಚಾಳಿ! ‘ಬಂದೂಕು ಭಯೋತ್ಪಾದಕರು’ ನೇರವಾಗಿ
ಹಿಂಸಾಕೃತ್ಯಕ್ಕಿಳಿದು ಬಲಿ ಪಡೆಯುವ ದುಷ್ಟರು. ಭಾಷಾ ಭಯೋತ್ಪಾದಕರು ಹಿಂಸಾತ್ಮಕ ಭಾಷೆ ಮೂಲಕ ಗಲಭೆಗಳ ಪ್ರಚೋದಕರು!

ನವಭಾರತದಲ್ಲಿ ಭಾಷಾ ಭಯೋತ್ಪಾದಕರ ಆಂತರಿಕ ಹಾವಳಿ ಹೆಚ್ಚಾಗುತ್ತಿದೆ. ಹಿಂದೆ ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದ ನಾಗರ ನಾಲಗೆಯ ನೇತಾರರು ಇತ್ತೀಚೆಗೆ ನಿರ್ಲಜ್ಜೆಯಿಂದ ನಿತ್ಯದರ್ಶನ ಕೊಡುತ್ತಿರುವುದಕ್ಕೆ ಬಹಳಷ್ಟು ನಿದರ್ಶನಗಳಿವೆ. ಮೋದಿಯವರು ‘ನವಭಾರತ’ದ ಮುನ್ನೋಟ ನೀಡಿದ ಐದೇ ದಿನದಲ್ಲಿಉತ್ತರಪ್ರದೇಶದ ಬರೇಲಿ ಹತ್ತಿರದ ಹಳ್ಳಿಗಳ ಮುಸ್ಲಿಮರ ಮನೆಗೋಡೆಗೆ ಕೆಲವು ಭಿತ್ತಿಪತ್ರಗಳನ್ನು ಆಂಟಿಸಿದ್ದು ಬೆಳಕಿಗೆ ಬಂತು. ‘ಈಗ ಬಿಜೆಪಿ ಸರ್ಕಾರ ಬಂದಿದೆ. ನೀವು ಊರು ಬಿಟ್ಟು ತೊಲಗದಿದ್ದರೆ ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಭಿತ್ತಿಪತ್ರಗಳಲ್ಲಿ ಬರೆಯಲಾಗಿತ್ತು. ಉತ್ತರಪ್ರದೇಶದ ಶಾಸಕ ವಿಕ್ರಂ ಸೈನಿ ಎಂಬಾತ ‘ಗೋವನ್ನು ಗೌರವಿಸದೆ ಇರುವವರ ಕಾಲು ಕತ್ತರಿಸುತ್ತೇನೆ’ ಎಂದು ಘೋಷಿಸಿದ್ದು ಸುದ್ದಿಯಾಗಿತ್ತು. ಈ ಎಲ್ಲವೂ ನಡೆದದ್ದು ‘ನವಭಾರತ’ ಫೋಷಣೆಯಾದ ತಿಂಗಳಲ್ಲಿ ಮತ್ತು ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ ನೇತೃತ್ವದ ಬಿಜೆಪಿ ಸರ್ಕಾರ ಬಂದ ಹೊಸತರಲ್ಲಿ ಎಂಬುದನ್ನು ಗಮನಿಸಬೇಕು.

ಆದರೆ, ಈ ಪ್ರವೃತ್ತಿ ಇದ್ದಕ್ಕಿದ್ದಂತೆ ಬಂದದ್ದಲ್ಲ. ಸ್ವತಃ ಆದಿತ್ಯನಾಥರೇ 2015ರ ಜೂನ್‌ 9ರಂದು ‘ಯೋಗ ವಿರೋಧಿಗಳು ಹಿಂದೂಸ್ತಾನ ಬಿಡಲಿ. ಸೂರ್ಯ ನಮಸ್ಕಾರ ವಿರೋಧಿಗಳು ಸಮುದ್ರಕ್ಕೆ ಬೀಳಲಿ’ ಎಂದು ಅಪ್ಪಣೆ ಕೊಡಿಸಿದ್ದರು. ಸಂಸದ ಸಾಕ್ಷಿ ಮಹಾರಾಜ್ ‘ಗೋಡ್ಸೆ ಮಹಾನ್ ದೇಶಭಕ್ತ’ ಎಂದು ಹೇಳಿದ್ದಲ್ಲದೆ‘ಮತಾಂತರ ಹೊಂದುವವರನ್ನು ನೇಣಿಗೇರಿಸಬೇಕು’ ಎಂದುಫರ್ಮಾನು ಹೊರಡಿಸಿದ್ದರು. ಇವರ ಪ್ರಕಾರ ನೇಣಿಗೆ ಏರಬೇಕಾದವರು ‘ಮೂಲ’ ಹಿಂದೂಗಳೇ ಎಂಬುದನ್ನು ಈ ಹಿಂದೂ ಧರ್ಮ ದುರಂಧರರು ತಿಳಿಯಬೇಕು. ಮತಾಂತರದ ಕಾರಣಗಳನ್ನು ಹುಡುಕಿ ಮನವರಿಕೆ ಮಾಡಬೇಕು. ಗೋಡ್ಸೆ ಭಕ್ತ ಸಾಕ್ಷಿ ಮಹಾರಾಜ್‌ರಂತೆಯೇ ಭಾರತ ಹಿಂದೂ ಸಭಾದ ರಾಷ್ಟ್ರೀಯ ಕಾರ್ಯದರ್ಶಿ ಪೂಜಾ ಶಕುನ್‌ ಪಾಂಡೆ ‘ಗೋಡ್ಸೆಗಿಂತ ಮೊದಲು ನಾನು ಹುಟ್ಟಿದ್ದರೆ ನಾನೇ ಗಾಂಧಿಯನ್ನು ಕೈಯ್ಯಾರೆ ಕೊಲ್ಲುತ್ತಿದ್ದೆ’ ಎಂದು 2018ರ ಆಗಸ್ಟ್‌ನಲ್ಲಿ ಘೋಷಿಸಿದ್ದು ವರದಿಯಾಗಿತ್ತು. ತೆಲಂಗಾಣದ ಅಂದಿನ ಶಾಸಕ ರಾಜಾಸಿಂಗ್‌ ತೋಮರ್‌ 2017ರ ಏಪ್ರಿಲ್‌ 9ರಂದು ‘ರಾಮಮಂದಿರಕ್ಕೆ ಅಡ್ಡಿಪಡಿಸಿದರೆ ತಲೆ ಕತ್ತರಿಸುತ್ತೇನೆ, ಗುಂಡು ಹಾರಿಸುತ್ತೇನೆ’ ಎಂದು ಅಬ್ಬರಿಸಿದರು. 2017ರ ಡಿಸೆಂಬರ್‌ 14ರಂದು ಕರ್ನಾಟಕದ ಯಾದಗಿರಿಗೆ ಬಂದು ‘ಹಿಂದೂ ಧರ್ಮದ ವಿರೋಧಿಗಳ ತಲೆ ಕಡಿಯಬೇಕು’ ಎಂದು ಕರೆ ಕೊಟ್ಟರು. ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಅವರ ಬಂಧು ಅಭಿಷೇಕ್‌ ‘ನಮ್ಮ ಪಕ್ಷಕ್ಕೆ ಸವಾಲು ಹಾಕುವವರ ಕೈ ಕತ್ತರಿಸುತ್ತೇನೆ, ಕಣ್ಣು ಕೀಳುತ್ತೇನೆ’ ಎಂದು 2015ರ ಜೂನ್‌ 23ರಂದು ಅಬ್ಬರಿಸಿದ್ದರು.ತಲೆ ಕಡಿಯುವುದು, ಗುಂಡು ಹೊಡೆಯುವುದು ‘ಹಿಂದೂ ಧರ್ಮ’ದ ನೀತಿಯಲ್ಲ ಎಂಬ ಪ್ರಜ್ಞೆ ಇವರಾರಿಗೂ ಇಲ್ಲ.

ಬಾಯಿಬಾಂಬಿಗರಿಗೆ ಕರ್ನಾಟಕದಲ್ಲೂ ಉದಾಹರಣೆಗಳಿವೆ. ಒಂದು ವರ್ಷದ ಹಿಂದೆ ಶಾಸಕ ಬಸನಗೌಡ ಪಾಟೀಲ ಯತ್ನಾಳರು ‘ನಾನು ಗೃಹ ಮಂತ್ರಿಯಾಗಿದ್ದರೆ, ಜಾತ್ಯತೀತರೆಂದುಕೊಳ್ಳುವ ಬುದ್ಧಿಜೀವಿಗಳನ್ನು ಸಾಲಾಗಿ ನಿಲ್ಲಿಸಿ ಗುಂಡಿಕ್ಕಿ ಕೊಲ್ಲಿ ಎಂದು ಆಜ್ಞೆ ಮಾಡುತ್ತಿದ್ದೆ’ ಎಂದು ಹೇಳಿದ್ದು ವರದಿಯಾಗಿತ್ತು. ಸದ್ಯ, ಅವರು ಗೃಹ ಮಂತ್ರಿಯಾಗಲಿಲ್ಲ; ನಮ್ಮಂಥವರು ಬಚಾವಾದೆವು! ಇನ್ನು ಅನಂತಕುಮಾರ ಹೆಗಡೆಯವರು ಏನೆಲ್ಲ ಮಾತಾಡಿದರೆಂದು ಮತ್ತೆ ನೆನಪಿಸಬೇಕಾಗಿಲ್ಲ. ಅವರ ಅಭಿಪ್ರಾಯ ಒಪ್ಪದವರೆಲ್ಲ ಗಂಜಿ ಗಿರಾಕಿಗಳು; ಬಿಕನಾಸಿಗಳು; ಪುಟಗೋಸಿಗಳು! ಸದ್ಯ ಅವರು ಯಾರನ್ನೂ ಕೊಲ್ಲುವ ಮಾತಾಡಲಿಲ್ಲ
ವೆಂಬುದು ಸಮಾಧಾನ ಸಂಗತಿ. ಆದರೆ ಕೆಲ ಕಾಂಗ್ರೆಸ್ಸಿಗರ ರಣೋತ್ಸಾಹದ ಅವಿವೇಕವು ‘ಹೊಡಿ, ಬಡಿ’ ಮಾತುಗಳನ್ನು ಆಡಿಸಿದೆ. ಬೇಳೂರು ಗೋಪಾಲಕೃಷ್ಣ ಅವರು ‘ಮೋದಿಗೆ ಗುಂಡು ಹೊಡೆಯಬೇಕು’ ಎಂದದ್ದು, ದಿನೇಶ್‌ ಗುಂಡೂರಾವ್‌ ‘ಚಪ್ಪಲಿಯಲ್ಲಿ ಹೊಡೆಯಿರಿ’ ಎಂದದ್ದು ಅವಿವೇಕದ ಅತಿರೇಕ. ಆಮೇಲೆ ತಪ್ಪು ತಿದ್ದಿಕೊಂಡದ್ದು ಸಮಾಧಾನಕರವಾದರೂ ಇಂತಹ ಭಾಷಾ ಬಂದೂಕು ಯಾಕೆ ಬೇಕು?

ಇನ್ನು ‘ನವಭಾರತ’ದ ರಾಷ್ಟ್ರೀಯತೆಯ ಪರಿಕಲ್ಪನೆಯಂತೂ ಅಪವ್ಯಾಖ್ಯಾನದ ಉತ್ತಮ ಉದಾಹರಣೆಯಾಗಿದೆ. ದೇಶಭಕ್ತಿ ಮತ್ತು ರಾಷ್ಟ್ರೀಯತೆಗಳು ಬಿಜೆಪಿ ಮತ್ತು ಮೋದಿ ಕೇಂದ್ರಿತವಾಗುತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ.

ಈ ಹಿನ್ನೆಲೆಯಲ್ಲಿ, ಬಿಜೆಪಿಯ ಹಿರಿಯ ನಾಯಕ ಎಲ್‌.ಕೆ.ಅಡ್ವಾಣಿ ಅವರು ಇತ್ತೀಚೆಗೆ ತಮ್ಮ ಬ್ಲಾಗ್‌ನಲ್ಲಿ ರಾಷ್ಟ್ರೀಯತೆ ಕುರಿತು ಹೇಳಿದ ಮಾತುಗಳನ್ನು ಗಮನಿಸಬೇಕು: ‘ರಾಜಕೀಯ ಭಿನ್ನಾಭಿಪ್ರಾಯ ಇರುವವರನ್ನು ದೇಶದ್ರೋಹಿಗಳೆಂದು ಕರೆಯುವುದು ನಮ್ಮ ರಾಷ್ಟ್ರೀಯತೆಯ ಪರಿಕಲ್ಪನೆಯಲ್ಲಿ ಎಂದೂ ಇರಲಿಲ್ಲ’. ಅಡ್ವಾಣಿಯವರ ರಾಷ್ಟ್ರೀಯತೆಯ ನೋಟಕ್ಕೆ ಇಂದಿನ ಸಾಂದರ್ಭಿಕ ಮಹತ್ವವಷ್ಟೇ ಅಲ್ಲ; ಚಾರಿತ್ರಿಕ ಮಹತ್ವವೂ ಇದೆ. ಹುಸಿ ರಾಷ್ಟ್ರೀಯತೆಯ ನಾಗರ ನಾಲಗೆಗಳು ‘ನವಭಾರತ’ದ ನಿಜದ ಸೋಗಿನ ಸಹಜ ಸಂತಾನವಾಗದಿರಲಿ ಎಂದು ಹಾರೈಸಬೇಕಾಗಿದೆ. ಬಹುತ್ವ ಭಾವದ ನಿಜ ರಾಷ್ಟ್ರೀಯತೆಯನ್ನು ಬದುಕಿಸಿಕೊಳ್ಳಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT