ಸೋಮವಾರ, 25 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಟೊಳ್ಳು ಪ್ರಚಾರ, ಪೊಳ್ಳು ಪತ್ರಿಕೋದ್ಯಮ

ರಾಜ್ಯದ ಮತದಾರರು ಬಿಜೆಪಿಯನ್ನಷ್ಟೇ ಅಲ್ಲ, ಅದು ಪೋಷಿಸಿದ ಪೊಳ್ಳು ಪತ್ರಿಕೋದ್ಯಮವನ್ನೂ ತಿರಸ್ಕರಿಸಿದ್ದಾರೆ
Published 19 ಜುಲೈ 2023, 0:23 IST
Last Updated 19 ಜುಲೈ 2023, 0:23 IST
ಅಕ್ಷರ ಗಾತ್ರ

ಕರ್ನಾಟಕದ ವಿಧಾನಸಭಾ ಚುನಾವಣೆಯ ಫಲಿತಾಂಶವನ್ನು ಈ ಎರಡು ತಿಂಗಳಿನಲ್ಲಿ ರಾಜ್ಯ ಹಾಗೂ ರಾಷ್ಟ್ರೀಯ ಸುದ್ದಿ ಮಾಧ್ಯಮಗಳು ಹಲವಾರು ರೀತಿಯಲ್ಲಿ ವಿಶ್ಲೇಷಣೆ ಮಾಡಿವೆ. ಈ ಫಲಿತಾಂಶಕ್ಕೆ ತಮಗೆ ಅನುಕೂಲಕರವಾದ ಹಲವಾರು ಕಾರಣಗಳನ್ನು ಸಹ ಕೊಟ್ಟುಕೊಂಡಿವೆ. ಆದರೆ ಎಲ್ಲರೂ ಒಂದು ಪ್ರಶ್ನೆಯನ್ನು ಕೇಳಲು ಮಾತ್ರ ಹಿಂಜರಿಯುತ್ತಿದ್ದಾರೆ. ಅದೆಂದರೆ, ‘ಕನ್ನಡಿಗರು ಇಂತಹ ನಿರ್ಣಾಯಕ ತೀರ್ಪು ನೀಡಿದ್ದು ಸುದ್ದಿ ಮಾಧ್ಯಮದ ಕಾರಣದಿಂದಲೋ ಅಥವಾ ಅದಕ್ಕೆ ಹೊರತಾಗಿಯೋ?’

ಬಹುಶಃ ಹಿಂದಿನ 9 ವರ್ಷಗಳಲ್ಲಿ ಮುಖ್ಯವಾಹಿನಿಯ ಮಾಧ್ಯಮಗಳು ನಿರ್ವಹಿಸಿದ ವಂಚಕ ಪಾತ್ರವು ಮನೆಮಾತಾಗಿರುವುದರಿಂದ, ಈ ವಿಷಯವನ್ನು ಉಲ್ಲೇಖಿಸದಿರುವುದೇ ಕ್ಷೇಮ ಎಂದು ಅವು ಭಾವಿಸಿರಬಹುದು. ಆದರೆ ಬಿಜೆಪಿಯ ಸೋಲಿನ ಪ್ರಮಾಣವನ್ನು ನೋಡಿದಾಗ, ಜನಾದೇಶವನ್ನು ನಿರ್ಧರಿಸುವಲ್ಲಿ ಸುದ್ದಿ ಮಾಧ್ಯಮಗಳು ಎಷ್ಟು ದುರ್ಬಲ, ಎಷ್ಟು ನಿಷ್ಪ್ರಯೋಜಕ ಮತ್ತು ಎಷ್ಟು ಅಪ್ರಸ್ತುತವಾಗಿ ವರ್ತಿಸಿದವು ಎಂಬುದು ಎದ್ದು ಕಾಣುತ್ತದೆ.

ಅಂದರೆ ಇದರ ಅರ್ಥ, ಇಲ್ಲಿ ಮಾಧ್ಯಮಗಳು ಯಾವ ಪಾತ್ರವನ್ನೂ ವಹಿಸಲಿಲ್ಲ ಎಂದಲ್ಲ ಅಥವಾ ಎಲ್ಲಾ ಮಾಧ್ಯಮಗಳು ಕಪಟತನದಿಂದ ನಡೆದುಕೊಂಡವು ಎಂದೂ ಅಲ್ಲ. ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಏಳಲು ಕಾರಣವಾದ ಅಂಶಗಳಲ್ಲಿ ಸುದ್ದಿ ಮಾಧ್ಯಮಗಳ ಪ್ರಸಾರವೂ ಒಂದಾಗಿತ್ತು ಎಂಬುದರಲ್ಲಿ ಸಂದೇಹವಿಲ್ಲ. ಆದರೆ ಈ ಮಾಧ್ಯಮಗಳು ಸೂಚಿಸಿದ ಮಾರ್ಗದಲ್ಲಿ ನಡೆಯದೆ, ಅವು ಬೀಸಿದ ಬಲೆಗೆ ಬೀಳದೆ, ಓದುಗರು ಮತ್ತು ವೀಕ್ಷಕರು ತಮ್ಮ ಬುದ್ಧಿವಂತಿಕೆಗೆ ತಕ್ಕಂತೆ ಮತ ಚಲಾಯಿಸಿದ್ದು ಮಾತ್ರ ಬಹಳ ದೊಡ್ಡ ಸಾಧನೆ.

ಚುನಾವಣೆಗೆ ಮುನ್ನ ಬಹುತೇಕ ಪತ್ರಿಕೆಗಳು ಹಾಗೂ ಸುದ್ದಿವಾಹಿನಿಗಳು ಹೇಗೆ ವರ್ತಿಸಿದವು ಎಂಬುದು ರಹಸ್ಯವೇನಲ್ಲ. ಒಂದೇ ರಾಗ, ಒಂದೇ ಹಾಡು: ಮಿಷನ್ 150, ಮೋದಿ ಬ್ರಹ್ಮಾಸ್ತ್ರ, ಶಾ ಆಟ ಶುರು, ಯೋಗಿ ಹವಾ, ಡಬಲ್ ಎಂಜಿನ್ ಧಮಾಕ, ಚುನಾವಣೆ ಸಮೀಪಿಸುತ್ತಿದ್ದಂತೆ ಗಂಟೆಗಟ್ಟಲೆ ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋ ಪ್ರಸಾರ, ಪುಟಗಟ್ಟಲೆ ಅಮಿತ್ ಶಾ ಸಂದರ್ಶನ, ನೋಡಿದಲ್ಲೆಲ್ಲ ಬಿಜೆಪಿ ಜಾಹೀರಾತು... ಸಾಮಾಜಿಕ ಜಾಲತಾಣಗಳಲ್ಲಿ ಯಥಾಪ್ರಕಾರ ಇವೆಲ್ಲ ‘ವೈರಲ್’.

ಒಂದು ಪ್ರಮುಖ ಚಾನೆಲ್‌ನಲ್ಲಿ ‘ಪ್ರಧಾನಿಯವರ ಅಬ್ಬರದ ಪ್ರಚಾರ’ ಶೀರ್ಷಿಕೆಯಡಿ ಸುಮಾರು 68 ಗಂಟೆ ನರೇಂದ್ರ ಮೋದಿ ಅವರ ದರ್ಶನ. ಇನ್ನೊಂದರಲ್ಲಿ, ಪ್ರತಿ ಮಧ್ಯಾಹ್ನ ಮೋದಿ ಅವರ ವರ್ಚಸ್ಸಿನ ಕುರಿತು ಅರ್ಧ ಗಂಟೆ ಭಜನೆ. ರಾತ್ರಿ ಮರುಪ್ರಸಾರ. ಪತ್ರಿಕೆಯೊಂದರಲ್ಲಿ ದಿನವೊಂದಕ್ಕೆ ಬಿಜೆಪಿ ಕುರಿತು 20ರಿಂದ 30 ವರದಿಗಳು ಪ್ರಕಟವಾದರೆ, ಕಾಂಗ್ರೆಸ್‌ಗೆ ಸಂಬಂಧಿಸಿದ ಸುದ್ದಿ ಪ್ರಕಟವಾಗುತ್ತಿದ್ದುದು ಹೆಚ್ಚೆಂದರೆ ಎರಡು. ಇದು ಸಾಲದು ಎಂಬಂತೆ, ಕಾಂಗ್ರೆಸ್‌ನಲ್ಲಿ ಕಿತ್ತಾಟ, ಅತಂತ್ರ ತೀರ್ಪು ಬಂದರೆ ಜೆಡಿಎಸ್‌ಗೆ ನಿರ್ಣಾಯಕ ಪಾತ್ರ ಎಂದೆಲ್ಲ ಮಾಧ್ಯಮಗಳು ಪದೇಪದೇ ಬಿಂಬಿಸಿದವು. ಇದೆಲ್ಲದರ ಹಿಂದೆ ಮೂರು ವರ್ಷಗಳ ಸಿದ್ಧತೆ ಇತ್ತು. ತಬ್ಲಿಗ್‌ ಜಮಾತ್, ಹಿಜಾಬ್, ಹಲಾಲ್, ಆಜಾನ್‌, ಲವ್ ಜಿಹಾದ್‌ನಂತಹ ವಿಷಯಗಳಿದ್ದವು.

ಈ ಮಟ್ಟದ ನಿರಂತರ ಏಕಪಕ್ಷೀಯ ಪ್ರಸಾರಕ್ಕೆ ಹಣ, ಸಿದ್ಧಾಂತ, ಭಯ, ಭಕ್ತಿ, ಬೆದರಿಕೆಯಂತಹ ಯಾವ ಕಾರಣ ಬೇಕಾದರೂ ಆಗಿರಬಹುದು. ಇದಕ್ಕೆ ರಾಜಕಾರಣಿಗಳು, ಸಂಬಂಧಪಟ್ಟ ಮಾಧ್ಯಮಗಳ ಮಾಲೀಕರು, ಸಂಪಾದಕರು, ಜಾಹೀರಾತುದಾರರಂತಹ ಯಾರು ಬೇಕಾದರೂ ಹೊಣೆ ಆಗಿರಬಹುದು. ಏನೇ ಇರಲಿ, ಯಾರೇ ಇರಲಿ ಅದರ ಹಿಂದಿದ್ದ ಸಂದೇಶ ಒಂದೇ: ಅದೆಂದರೆ, ಬಿಜೆಪಿ ಗೆಲುವು ನಿಶ್ಚಿತ, ಮತ ಎಣಿಕೆಯಷ್ಟೇ ಬಾಕಿ. ರಾಜ್ಯದ ಮತದಾರರು ಈ ಟೊಳ್ಳು ಪ್ರಚಾರವನ್ನು ನಿರ್ಲಕ್ಷಿಸಿ ಬರೀ ಬಿಜೆಪಿಯನ್ನು ಸೋಲಿಸಲಿಲ್ಲ, ಅದು ಪೋಷಿಸಿದ ಪೊಳ್ಳು ಪತ್ರಿಕೋದ್ಯಮವನ್ನೂ ತಿರಸ್ಕರಿಸಿದ್ದಾರೆ.

ನಿಜ, ದೇಶದ ಪ್ರಧಾನಿಯೇ ಕಣಕ್ಕೆ ಇಳಿದಾಗ ಪ್ರಚಾರ ಕೊಡದೆ ಅವರನ್ನು ನಿರ್ಲಕ್ಷಿಸುವುದು ಅಸಾಧ್ಯ. ಆದರೆ ಮಾಧ್ಯಮಗಳಿಗೆ ಇರಬೇಕಾದ ಪ್ರಶ್ನಿಸುವ ಸಾಮರ್ಥ್ಯಕ್ಕೆ ಏನಾಗಿತ್ತು? ಟಿಪ್ಪು ಸುಲ್ತಾನನನ್ನು ಒಕ್ಕಲಿಗರು ಕೊಂದರು ಎಂದು ಯಾರೋ ಅವಿವೇಕಿ ಕಥೆ ಕಟ್ಟಿದರೆ, ಆ ಸುಳ್ಳನ್ನು ಮೋದಿ ಅವರು ಅನುಮೋದಿಸುವುದೇ? ಸ್ವತಂತ್ರ ಭಾರತದಲ್ಲಿ ಮಾಧ್ಯಮಗಳು ಅಧಿಕೃತ ‘ನಕಲಿ ಸುದ್ದಿ’ (ಫೇಕ್‌ ನ್ಯೂಸ್‌) ಪ್ರಸಾರ ಮಾಡಿದ್ದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಇನ್ನೊಂದಿಲ್ಲ. ಇಷ್ಟೆಲ್ಲ ಶ್ರಮಿಸಿದರೂ ಗೌಡರ ಪಾಳಯದಲ್ಲಿ ಬಿಜೆಪಿಗೆ ಮಾಧ್ಯಮಗಳು ಗಿಟ್ಟಿಸಿಕೊಟ್ಟಿದ್ದು ಮೊಟ್ಟೆ.

ಚುನಾವಣೆ ಘೋಷಣೆ ಆದ ನಂತರ, ಹಿಂದೆ ಯಾರೂ ಕೇಳಿಲ್ಲದ ಸಂಸ್ಥೆಗಳ ಮಹಾ, ಮೆಗಾ ಸಮೀಕ್ಷೆಗಳ ಮೂಲಕ ಮಾಧ್ಯಮಗಳು ಬಿಜೆಪಿಯ ಪರವಾಗಿ ಕಹಳೆಯನ್ನು ಊದುತ್ತಿದ್ದವು. ಬಿಜೆಪಿ ಮಾಲೀಕತ್ವದ ಒಂದು ಚಾನೆಲ್‌ನಲ್ಲಂತೂ ಬಿಜೆಪಿ ಪರವಾದ ಅಂಕವು ಆಟೊ ಮೀಟರ್‌ನಂತೆ ಏರುತ್ತಲೇ ಹೋಯಿತು. ರಾಜಕೀಯ ಅರ್ಥಶಾಸ್ತ್ರಜ್ಞ ಪ್ರವೀಣ್ ಚಕ್ರವರ್ತಿ ಅವರ ಪ್ರಕಾರ, ಶೇ 30ರಷ್ಟು ಮತದಾರರು ತಾವು ಯಾರಿಗೆ ಮತ ಹಾಕಬೇಕು ಎಂಬುದನ್ನು ಮತದಾನದ ಕೊನೆಯ ಗಳಿಗೆಯಲ್ಲಿ ನಿರ್ಧರಿಸುತ್ತಾರೆ. ಕಾಂಗ್ರೆಸ್‌ನ ಅದೃಷ್ಟ ಹೇಗಿತ್ತೆಂದರೆ, ರಾತ್ರಿ ಒಂಬತ್ತಕ್ಕೆ ನೋಡಿದ ಬಾವಿಗೆ ಕನ್ನಡಿಗರು ಮರುದಿನ ಹಗಲಿನಲ್ಲಿ ಬೀಳಲಿಲ್ಲ!

ಇದಕ್ಕೆ ವ್ಯತಿರಿಕ್ತವಾಗಿ ಸುದ್ದಿ ಮಾಧ್ಯಮಗಳು ಕಾಂಗ್ರೆಸ್ ಪರವಾಗಿ ‘ಬ್ಯಾಟಿಂಗ್’ ಮಾಡಿದ್ದರೆ ಅದೂ ಸರಿಯಾಗುತ್ತಿರಲಿಲ್ಲ. ಹಾಗೆ ಮಾಡುವುದು ಕೂಡ ತಪ್ಪು. ಒಂದು ಪುಟ್ಟ ಕನ್ನಡ ಪೋರ್ಟಲ್ ನಾಗರಿಕರನ್ನು ಪತ್ರಕರ್ತರಂತೆ ಬಳಸಿಕೊಂಡು ಚುನಾವಣಾ ಪ್ರವೃತ್ತಿಯನ್ನು ದೊಡ್ಡ ವಾಹಿನಿಗಳಿಗಿಂತ ಹೆಚ್ಚು ನಿಖರತೆ ಮತ್ತು ಸಮಗ್ರತೆಯೊಂದಿಗೆ ಹೇಗೆ ವರದಿ ಮಾಡಿತು ಎಂಬುದು ವಿಚಾರ ಮಾಡಬೇಕಾದ ಅಂಶ. ಪತ್ರಿಕೋದ್ಯಮ ಹಾಗೂ ಪತ್ರಿಕಾ ಉದ್ಯಮದ ನಡುವೆ ಇರುವ ಅಂತರ ಗೊತ್ತಿರುವವರಿಗೆ ಇದಕ್ಕೆ ಉತ್ತರ ಸುಲಭವಾಗಿ ಗೊತ್ತಾಗುತ್ತದೆ.

ದೇಶದಾದ್ಯಂತ ಮಾಧ್ಯಮಗಳು ಒಂದೇ ರೀತಿಯ ಕಾಯಿಲೆಯಿಂದ ಬಳಲುತ್ತಿವೆ. ಮಾಧ್ಯಮ ಸ್ವಾತಂತ್ರ್ಯ ಸೂಚ್ಯಂಕದಲ್ಲಿ 180 ದೇಶಗಳ ಪೈಕಿ ಭಾರತದ ಸ್ಥಾನ 161ಕ್ಕೆ ಇಳಿದಿದೆ. ಆದರೆ ಕರ್ನಾಟಕದಲ್ಲಿ  ಮಾಧ್ಯಮ ಸ್ವಾತಂತ್ರ್ಯವು ತನ್ನ ವಸ್ತುನಿಷ್ಠತೆ ಹಾಗೂ ಸಮತೋಲನವನ್ನು ಕಳೆದುಕೊಂಡು ಚಿಂತಾಜನಕ ಸ್ಥಿತಿಯಲ್ಲಿದೆ. ಜನರ ಧ್ವನಿಯಾಗುವ ಬದಲು ಅಧಿಕಾರದಲ್ಲಿರುವ ಜನರ ಧ್ವನಿಯಾಗಿ ಮಾರ್ಪಟ್ಟಿದೆ. ಒಂದು ಸಮುದಾಯದ ಜನರನ್ನು ಇನ್ನೊಂದು ಸಮುದಾಯದ ಜನರ ವಿರುದ್ಧ ಎತ್ತಿ ಕಟ್ಟಿ, ಸಾಮಾನ್ಯ ಜನರ ನೋವನ್ನು ಕಡೆಗಣಿಸಿ, ಯಾರದೋ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದ ಪತ್ರಕರ್ತರಿಗೆ ಮತದಾರರು ತಕ್ಕ ಪಾಠವನ್ನೇ ಕಲಿಸಿದ್ದಾರೆ.

ಹಿಂದೆಯೂ ಮಾಧ್ಯಮಗಳು ಚುನಾವಣೆಯ ಮೇಲೆ ಬೀರುತ್ತಿದ್ದ ಪ್ರಭಾವ ಅಷ್ಟರಲ್ಲೇ ಇತ್ತು, ಈಗಿನ ಮೊಬೈಲ್ ಯುಗದಲ್ಲಂತೂ ಇದು ಇನ್ನಷ್ಟು ಕಡಿಮೆ ಎಂದು ವಾದಿಸಬಹುದು. ನಿಜ, ಆದರೆ 2019ರಲ್ಲಿ ಲೋಕನೀತಿ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ವ್ಯಕ್ತವಾದ ಅಭಿಪ್ರಾಯದಂತೆ, ಸಾಮಾಜಿಕ ಮಾಧ್ಯಮಗಳ ಜನಪ್ರಿಯತೆಯು ಮುಖ್ಯವಾಹಿನಿಗಿಂತ ಮೂರುಪಟ್ಟು ಹೆಚ್ಚಾಗಿ ಬೆಳೆಯುತ್ತಿದ್ದರೂ, ಅದರ ರಾಜಕೀಯ ಉಪಯೋಗ ಶೇ 25ರಷ್ಟು ಮಾತ್ರ. ಅಂದರೆ, ಮುಖ್ಯವಾಹಿನಿ ಮಾಧ್ಯಮಗಳಿಗೆ ಇನ್ನೂ ಮಹತ್ವದ ಸ್ಥಾನ ಇದೆ ಎಂದರ್ಥ. ರಾಜ್ಯದ ಐದು ಕೋಟಿ ಮತದಾರರಲ್ಲಿ ಪತ್ರಿಕೆಗಳು ಮತ್ತು ಚಾನೆಲ್‌ಗಳು ಪ್ರತಿನಿತ್ಯ ಸುಮಾರು ಎರಡು ಕೋಟಿ ಜನರನ್ನು ತಲುಪುತ್ತವೆ. ಜವಾಬ್ದಾರಿಯಿಂದ ನಡೆದುಕೊಳ್ಳಲು ಇದೇ ಪ್ರೇರಣೆಯಾಗಬೇಕು.

ಇದು ಮುಗಿದ ಅಧ್ಯಾಯ, ಮತ್ತೆ ಕೆದಕುವುದರಲ್ಲಿ ಏನು ಪ್ರಯೋಜನ ಅನ್ನಿಸಬಹುದು. ಕಾರಣವಿದೆ. ಸುದ್ದಿ ಮಾಧ್ಯಮಗಳು ಜನರ ಕಣ್ಣು ಮತ್ತು ಕಿವಿಗಳು. ಧ್ವನಿಯಿಲ್ಲದವರ ಧ್ವನಿ. ಸುದ್ದಿ ನಿರ್ಮಾಪಕರು ಮತ್ತು ಸುದ್ದಿ ಗ್ರಾಹಕರ ನಡುವಿನ ಸಂಬಂಧ ನಂಬಿಕೆಯ ಮೇಲೆ ನಿಂತಿದೆ. ಈ ವಿಶ್ವಾಸವನ್ನು ಬೇರೊಬ್ಬರಿಗೆ ಹರಾಜು ಹಾಕಿದರೆ ಏನಾಗುತ್ತದೆ ಅನ್ನುವುದಕ್ಕೆ 135– 66 ಸ್ಥಾನಗಳೇ ಸಾಕ್ಷಿ. ಸೋತ ಬಿಜೆಪಿ ಆತ್ಮಾವಲೋಕನ ಮಾಡಿಕೊಳ್ಳತೊಡಗಿದೆ. ಆದರೆ ಮಾಧ್ಯಮಗಳು?

1964ರಲ್ಲಿ ಪ್ರಕಟವಾದ ‘ಅಂಡರ್‌ಸ್ಟ್ಯಾಂಡಿಂಗ್‌ ಮೀಡಿಯಾ’ ಎಂಬ ಪುಸ್ತಕದಲ್ಲಿ, ಪ್ರಸಿದ್ಧ ಸಂವಹನಕಾರ ಮಾರ್ಷಲ್ ಮೆಕ್ಲುಹಾನ್, ಮಾಧ್ಯಮವೇ ಒಂದು ಸಂದೇಶ ಎಂದು ಪ್ರತಿಪಾದಿಸಿದರು. ಇದರ ಅರ್ಥ, ಮಾಧ್ಯಮಗಳು ಒಯ್ಯುವ ವಿಷಯಗಳೇ ಸಂದೇಶವಲ್ಲ, ಸ್ವತಃ ಮಾಧ್ಯಮದ ಸ್ವರೂಪವೇ ಒಂದು ಸಂದೇಶ. 2023ರ ಚುನಾವಣಾ ಫಲಿತಾಂಶವು ಕನ್ನಡಿಗರ ಮನಸ್ಸನ್ನು ಸಕಾರಾತ್ಮಕವಾಗಿ ರೂಪಿಸುವಲ್ಲಿ ಸುದ್ದಿ ಮಾಧ್ಯಮವು ತೋರಿದ ನೈತಿಕ, ಬೌದ್ಧಿಕ ಮತ್ತು ವೃತ್ತಿಪರ ಅಸಮರ್ಪಕತೆಯ ಸಂದೇಶವೇ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT