ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರೆಸಾ ಅವರನ್ನು ನೆನೆಯುವುದು ಹೇಗೆ?

ಮಾತುಕತೆಯ ತಂತ್ರವಾಗಿ ಕಾಣಲಿಲ್ಲ ‘ಒಪ್ಪಂದ ಇಲ್ಲದ ಬ್ರೆಕ್ಸಿಟ್’
Last Updated 26 ಮೇ 2019, 20:24 IST
ಅಕ್ಷರ ಗಾತ್ರ

ಪ್ರಧಾನಿ ಹುದ್ದೆಯಿಂದ ಕೆಳಗಿಳಿಯುವುದಾಗಿ ತೆರೆಸಾ ಮೇ ಘೋಷಿಸುವುದನ್ನು ಕೇಳಲು ಬ್ರಿಟನ್ ಸಿದ್ಧವಾಗುತ್ತಿದ್ದ ಹೊತ್ತಿನಲ್ಲಿ, ಮೇ ಅವರ ಸ್ಮರಣೀಯ ಚಿತ್ರವೊಂದು ಪ್ರಕಟವಾಯಿತು. ಚಿತ್ರದಲ್ಲಿ ಅವರು ಕಾರಿನ ಹಿಂದಿನ ಸೀಟಿನಲ್ಲಿ ಕುಳಿತಿದ್ದರು. ಅವರ ಕಣ್ಣುಗಳು ತೇವಗೊಂಡಿದ್ದವು. 1990ರ ನವೆಂಬರ್‌ನಲ್ಲಿ ತೆಗೆದ ಮಾರ್ಗರೆಟ್ ಥ್ಯಾಚರ್ ಅವರ ಚಿತ್ರಕ್ಕೆ ಇದು ಹೋಲಿಕೆಯಾಗುವಂತಿತ್ತು.

ಈ ಕಣ್ಣೀರು ಮಾಮೂಲಿನಂತೆ ಇರಲಿಲ್ಲ. ಬ್ರೆಕ್ಸಿಟ್‌ (ಐರೋಪ್ಯ ಒಕ್ಕೂಟದಿಂದ ಬ್ರಿಟನ್‌ ಹೊರನಡೆಯುವ ಪ್ರಕ್ರಿಯೆ) ಸಾಧ್ಯವಾಗಿಸುವ ಅವರ ಆಸೆ ಕಮರುತ್ತಿದ್ದರೂ, ಅವರು 2 ವರ್ಷ ಹಾಗೂ 10 ತಿಂಗಳುಗಳಿಂದ ಆ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಸಿದ್ದರು. ಈಗ ಮೇ ಅವರು ತಾವು ಕನ್ಸರ್ವೆಟಿವ್ ಪಕ್ಷದ ನಾಯಕಿ ಸ್ಥಾನಕ್ಕೆ ಜೂನ್‌ 7ರಂದು ರಾಜೀನಾಮೆ ನೀಡುವುದಾಗಿ, ಉತ್ತರಾಧಿಕಾರಿಯ ಆಯ್ಕೆ ಆಗುವವರೆಗೆ ಪ್ರಧಾನಿಯಾಗಿ ಮುಂದುವರಿಯುವುದಾಗಿ ಹೇಳಿದ್ದಾರೆ.

ಸಂಸತ್ತಿನಲ್ಲಿ ನಾಲ್ಕನೆಯ ಬಾರಿಗೆ ಅವಮಾನಕಾರಿ ಸೋಲು ಎದುರಾಗಬಹುದು ಎಂಬುದನ್ನು ಮುಂದಾಲೋಚಿಸಿ, ಅಂದುಕೊಂಡ ಕೆಲಸ ಮಾಡಲು ಇದ್ದ ಎಲ್ಲ ಮಾರ್ಗಗಳೂ ಮುಚ್ಚಿಹೋಗಿವೆ ಎಂಬ ತೀರ್ಮಾನಕ್ಕೆ ಬಂದರು ಮೇ. ಅವರ ಬ್ರೆಕ್ಸಿಟ್‌ ಕಾರ್ಯತಂತ್ರವು ದೇಶವನ್ನು ಬಿಕ್ಕಟ್ಟಿನ ಸ್ಥಿತಿಯಲ್ಲಿ ನಿಲ್ಲಿಸಿದೆ. ಅಲ್ಲಿನ ಜನ ಅಪಾಯಕಾರಿ ಎನ್ನುವ ರೀತಿಯಲ್ಲಿ ವಿಭಜನೆಗೊಂಡಿದ್ದಾರೆ, ಮೇ ಅವರ ನಂತರ ಪ್ರಧಾನಿ ಸ್ಥಾನಕ್ಕೆ ಬರುವವರು ‘ಒಪ್ಪಂದವೇ ಇಲ್ಲದ ಬ್ರೆಕ್ಸಿಟ್‌’ ಕಡೆ ಮುಖ ಮಾಡುವ ಸಾಧ್ಯತೆಯೂ ಇದೆ.

ಬ್ರೆಕ್ಸಿಟ್‌ನ ರಾಜಕೀಯ ವಾಸ್ತವಗಳನ್ನು ತ್ವರಿತವಾಗಿ ಅರ್ಥ ಮಾಡಿಕೊಳ್ಳಲು ಮೇ ವಿಫಲರಾಗಿದ್ದು ಕೂಡ ಅವರು ಈಗ ರಾಜೀನಾಮೆ ನೀಡುವ ಸ್ಥಿತಿ ಎದುರಾಗಿರುವುದಕ್ಕೆ ದೊಡ್ಡ ಕಾರಣ. ‘ಒಪ್ಪಂದವೇ ಇಲ್ಲದ ಬ್ರೆಕ್ಸಿಟ್’ಗೆ ತಮ್ಮ ಸಮ್ಮತಿ ಇಲ್ಲ ಎಂಬುದನ್ನು ಹೇಳಿದರೂ, ಆ ವೇಳೆಗೆ ತಡವಾಗಿತ್ತು. ಹಾಗೆಯೇ, ತಮ್ಮ ಪಕ್ಷದ ಹೊರಗಿನವರತ್ತ ಸ್ನೇಹಹಸ್ತ ಚಾಚಿದ್ದೂ ತಡವಾಯಿತು.

‘ಮೇ ಅವರು ಸಮಯಕ್ಕೆ ಸರಿಯಾಗಿ ಕ್ರಿಯಾಶೀಲರಾಗಲಿಲ್ಲ. ಸಾಗುವ ಮಾರ್ಗ ಬದಲಿಸಿಕೊಳ್ಳುವ ಒಳನೋಟ ಅವರಲ್ಲಿ ಇರಲಿಲ್ಲ. ಮಾರ್ಗ ಬದಲಿಸಲು ತೀರಾ ದೀರ್ಘ ಅವಧಿ ತೆಗೆದುಕೊಳ್ಳುವ ಟ್ಯಾಂಕರ್‌ ಇದ್ದಂತೆ ಅವರು’ ಎಂದು ಮೇ ಅವರ ಜೀವನ ಚರಿತ್ರೆ ಬರೆದಿರುವ ರೋಸಾ ಪ್ರಿನ್ಸ್‌ ಹೇಳುತ್ತಾರೆ.

ಕ್ವೀನ್ ಮೇರಿ ವಿಶ್ವವಿದ್ಯಾಲಯದಲ್ಲಿ ರಾಜಕೀಯ ವಿಷಯದ ಪ್ರೊಫೆಸರ್ ಆಗಿರುವ ಟಿಮ್ ಬೇಲ್ ಅವರು ಮೇ ಅವರ ಆಡಳಿತ, ‘ವ್ಯರ್ಥ ಕಸರತ್ತುಗಳ ಅವಧಿ’ ಎನ್ನುತ್ತಾರೆ. ‘ಪ್ರಧಾನಿ ಹುದ್ದೆಯಲ್ಲಿದ್ದು ಅತ್ಯಂತ ಕಳಪೆ ಸಾಧನೆ ತೋರಿದ ವ್ಯಕ್ತಿಯಾಗಿ ಮೇ ನೆನಪುಗಳಲ್ಲಿ ಉಳಿಯಲಿದ್ದಾರೆ’ ಎಂದು ಬೇಲ್ ಅಭಿಪ್ರಾಯಪಡುತ್ತಾರೆ.

ಮೇ ಅವರ ಅಧಿಕಾರಾವಧಿ ಈ ರೀತಿ ಕೊನೆಗೊಳ್ಳಬಾರದಿತ್ತು. 2016ರಲ್ಲಿ ನಡೆದ ಜನಮತಗಣನೆಯ ನಂತರದ ಹೊತ್ತಿನಲ್ಲಿ ಮೇ ಅವರು ರಾಜಿಸೂತ್ರದ ಕಡೆ ದೇಶವನ್ನು ಒಯ್ಯಬಲ್ಲ ವ್ಯಕ್ತಿಯಾಗಿ ಕಾಣಿಸಿದ್ದರು. ರಾಜಕೀಯವಾಗಿ ಏಕಾಂಗಿಯಾಗಿದ್ದ ಮೇ ಅವರು ವೆಸ್ಟ್‌ಮಿನ್‌ಸ್ಟರ್‌ನ ಯಾವ ರಾಜಕೀಯ ಗುಂಪುಗಳಿಗೂ ಸೇರಿದ್ದವರಲ್ಲ. ಅವರು ಅಧಿಕಾರ ವಹಿಸಿಕೊಂಡ ನಂತರದಲ್ಲಿ ಅವರ ಗುಣಗಳೇ ಅವರ ಸೋಲಿಗೆ ಕಾರಣವಾದವು.

ಮಾತುಕತೆಗಳ ಆರಂಭಿಕ ಹಂತಗಳಲ್ಲಿ ಮೇ, ‘ರಾಜಿ ಮಾತುಗಳು ಸುಲಭವಾಗಿ ಆಗುತ್ತವೆ’ ಎಂದು ಬ್ರೆಕ್ಸಿಟ್ ಪರ ಇರುವವರು ನೀಡಿದ ಭರವಸೆಗಳನ್ನು ನಂಬಿದರು. ಮಾತುಕತೆಯ ಅಸ್ತ್ರವಾಗಿ ಅವರು, ‘ಒಪ್ಪಂದವೇ ಇಲ್ಲದೆ ಒಕ್ಕೂಟದಿಂದ ಹೊರನಡೆಯಲೂ ಸಿದ್ಧ’ ಎಂದು ಘೋಷಿಸಿದರು. ‘ಬ್ರೆಕ್ಸಿಟ್ ಪರ ಇದ್ದವರ ಮಾತುಗಳೆಲ್ಲ ಒಕ್ಕೂಟದಿಂದ ಹೊರನಡೆಯುವುದು ಬಹಳ ಸುಲಭ ಎಂಬ ನೆಲೆಯಲ್ಲೇ ಇದ್ದವು. ಹೊರನಡೆಯುವುದು ಸಂಕೀರ್ಣವಾಗಿರುವುದಿಲ್ಲ ಎಂದು ಮೇ ಅವರಿಗೂ ಹೇಳಲಾಯಿತು’ ಎಂದು ವಿವರಿಸುತ್ತಾರೆ ಮೇ ಅವರಿಗೆ ಭಾಷಣ ಬರೆದುಕೊಡುತ್ತಿದ್ದ ಕ್ರಿಸ್ ವಿಲ್ಕಿನ್ಸ್‌.

2017ರ ಜನವರಿಯಲ್ಲಿ ಮಾಡಿದ ಭಾಷಣದಲ್ಲಿ ಮೇ, ಐರೋಪ್ಯ ಒಕ್ಕೂಟದ ಆರ್ಥಿಕ ಸಂರಚನೆಯಿಂದ ಹೊರಬರುವ ಹಾಗೂ ಒಕ್ಕೂಟದ ‘ಐರೋಪ್ಯ ನ್ಯಾಯಾಲಯ’ದ ವ್ಯಾಪ್ತಿಯಿಂದ ಹೊರನಡೆಯುವ ಭರವಸೆ ನೀಡಿದರು. ಸಂದರ್ಭ ಎದುರಾದರೆ 2019ರ ಮಾರ್ಚ್‌ 29ರಂದೇ ಯಾವುದೇ ಒಪ್ಪಂದ ಮಾಡಿಕೊಳ್ಳದೆ ಒಕ್ಕೂಟದಿಂದ ಹೊರನಡೆಯಲು ಸಿದ್ಧ ಎಂದೂ ಘೋಷಿಸಿದ್ದರು. ‘ಕೆಟ್ಟ ಒಪ್ಪಂದ ಮಾಡಿಕೊಳ್ಳುವುದಕ್ಕಿಂತಲೂ ಯಾವುದೇ ಒಪ್ಪಂದ ಮಾಡಿಕೊಳ್ಳದೆ ಇರುವುದು ಬ್ರಿಟನ್ನಿನ ಪಾಲಿಗೆ ಒಳ್ಳೆಯದು’ ಎಂದಿದ್ದರು. ಈ ಮಾತುಗಳು ಬ್ರೆಕ್ಸಿಟ್ ಪರ ಕಟ್ಟರ್‌ವಾದಿಗಳ ಚಿಂತನೆಯು ಕನ್ಸರ್ವೆಟಿವ್ ಪಕ್ಷದ ಮುಖ್ಯವಾಹಿನಿಗೆ ಬಂದಿದ್ದರ ಸೂಚನೆಯಾಗಿತ್ತು.

‘ಇದು ಒಂದು ಭಾಷಣದಲ್ಲಿ ಮಾತ್ರ ಹೇಳಿದ್ದಲ್ಲ. ಇದನ್ನು ಅವರು ಮತ್ತೆ ಮತ್ತೆ ಹೇಳಿದರು’ ಎನ್ನುತ್ತಾರೆ ಸಂಸತ್ತಿನಲ್ಲಿ ಯುರೋಪ್‌ ವಿರೋಧಿ ದನಿ ಎಂದು ಗುರುತಿಸಿಕೊಂಡಿರುವ ಜಾನ್‌ ರೆಡ್‌ವುಡ್‌. ಆದರೆ, ಈ ಸಾಲುಗಳನ್ನು ಭಾಷಣದಲ್ಲಿ ಸೇರಿಸುವ ಮೊದಲು ಹೆಚ್ಚೇನೂ ಆಲೋಚನೆ ಮಾಡಿರಲಿಲ್ಲ. ಇದನ್ನು ಹೇಳಬೇಕು ಎಂಬ ಕಾರಣಕ್ಕೆ ಹೇಳಿದೆವು’ ಎನ್ನುತ್ತಾರೆ ವಿಲ್ಕಿನ್ಸ್‌.

ಮೂರು ವರ್ಷಗಳ ನಂತರ ನಡೆಯಲಿದ್ದ ಚುನಾವಣೆಯನ್ನು ತಕ್ಷಣಕ್ಕೆ ನಡೆಸಿ ಮೇ ಅವರು ‘ಕಷ್ಟ’ದ ಪರಿಸ್ಥಿತಿಯನ್ನು ‘ತೀರಾ ಕಷ್ಟ’ದ ಪರಿಸ್ಥಿತಿಯನ್ನಾಗಿ ಪರಿವರ್ತಿಸಿಕೊಂಡರು. ಸಂಸತ್ತಿನಲ್ಲಿ ತಮಗೆ ಬಹುಮತ ಸಿಗುತ್ತದೆ, ಆಗ ಬ್ರೆಕ್ಸಿಟ್‌ ಪ್ರಕ್ರಿಯೆ ಸುಲಭವಾಗುತ್ತದೆ ಎಂದು ಅವರು ಭಾವಿಸಿದ್ದರು. ಆದರೆ, ಮೊದಲು ಹೊಂದಿದ್ದ ಅಲ್ಪ ಬಹುಮತವನ್ನೂ ಕಳೆದುಕೊಂಡ ಕನ್ಸರ್ವೆಟಿವ್ ಪಕ್ಷ, ಉತ್ತರ ಐರ್ಲೆಂಡಿನ ಡೆಮಾಕ್ರಟಿಕ್ ಯೂನಿಯನಿಸ್ಟ್‌ ಪಕ್ಷದ ಬೆಂಬಲ ಪಡೆದು ಅಲ್ಪಮತದ ಸರ್ಕಾರ ರಚಿಸಬೇಕಾಯಿತು.

ಇದಾದ ನಂತರ ಮೇ ಮತ್ತು ಅವರ ತಂಡವು ರಾಜಕೀಯ ಉಳಿವಿನ ಪ್ರತಿನಿತ್ಯದ ಬಿಕ್ಕಟ್ಟಿನ ಮೇಲೆಯೇ ಹೆಚ್ಚಿನ ಗಮನ ನೀಡಿತು. ‘ಮೇ ಅವರು ಇವತ್ತಿನ ಪರಿಸ್ಥಿತಿ ನಿಭಾಯಿಸಿ, ನಾಳೆಯೂ ಉಳಿದುಕೊಳ್ಳುವುದು ಹೇಗೆ ಎಂಬಷ್ಟರ ಬಗ್ಗೆ ಮಾತ್ರ ಆಲೋಚಿಸುತ್ತಾರೆ’ ಎಂದು ವಿಲ್ಕಿನ್ಸ್ ಹೇಳುತ್ತಾರೆ.

ಮೇ ಅವರು ಸಂಸತ್ತಿನ ಮೇಲೆ ಹೊಂದಿದ್ದ ಭರವಸೆ ಪ್ರಯೋಜನಕ್ಕೆ ಬರಲಿಲ್ಲ. ಅವರು ಸಿದ್ಧಪಡಿಸಿದ್ದ ಒಪ್ಪಂದಕ್ಕೆ ಮೂರು ಬಾರಿ ಭಾರಿ ಪ್ರಮಾಣದ ಸೋಲಾಯಿತು. ಮೊದಲ ಬಾರಿ 230 ಮತಗಳಿಂದ, ಎರಡನೆಯ ಬಾರಿ 149 ಮತಗಳಿಂದ ಹಾಗೂ ಮೂರನೆಯ ಬಾರಿ 58 ಮತಗಳಿಂದ ಸೋಲಾಯಿತು.

ದೇಶವನ್ನು ‘ಒಪ್ಪಂದವೇ ಇಲ್ಲದೆ ಬ್ರೆಕ್ಸಿಟ್’ ಕಡೆ ಒಯ್ಯಲು ತಮ್ಮಿಂದ ಆಗದು ಎಂಬುದು ಮೇ ಅವರಿಗೆ ಗೊತ್ತಾಗಿತ್ತು. ಒಕ್ಕೂಟದಿಂದ ಹಠಾತ್ತನೆ ನಿರ್ಗಮಿಸಿದರೆ ಉಂಟಾಗುವ ರಾಜಕೀಯ ಹಾಗೂ ಆರ್ಥಿಕ ಪರಿಣಾಮಗಳ ಬಗ್ಗೆ ಮೇ ಅವರಿಗೆ ಅಧಿಕಾರಿಗಳು ವಿವರಣೆ ನೀಡಿದ್ದರು. ‘ಅದಾದ ನಂತರದ ಎಲ್ಲ ಪ್ರಯತ್ನಗಳು ಒಪ್ಪಂದವೇ ಇಲ್ಲದ ಸ್ಥಿತಿಯನ್ನು ತಪ್ಪಿಸಿಕೊಳ್ಳುವತ್ತ ಕೇಂದ್ರೀಕೃತವಾಗಿವೆ’ ಎಂದು ವಿಲ್ಕಿನ್ಸ್‌ ತಿಳಿಸಿದರು.

ಆದರೆ, ಮೇ ತಮ್ಮ ಒಪ್ಪಂದಕ್ಕೆ ಅನುಮತಿ ಪಡೆದುಕೊಳ್ಳಲು ಹೆಣಗುತ್ತಿರುವ ಸಂದರ್ಭದಲ್ಲೇ ಕನ್ಸರ್ವೆಟಿವ್‌ ಕಾರ್ಯಕರ್ತರಲ್ಲಿ ಅಭಿಪ್ರಾಯ ಬದಲಾಗುತ್ತಿತ್ತು. ಅವರು ‘ಒಪ್ಪಂದ ಇಲ್ಲದ ಬ್ರೆಕ್ಸಿಟ್’ ಅನ್ನು ಮಾತುಕತೆಯ ತಂತ್ರವಾಗಿ ಕಾಣದೆ, ಅದನ್ನು ಒಂದು ಆಯ್ಕೆಯಾಗಿ ನೋಡಲು ಆರಂಭಿಸಿದರು.

ಮೇ ಅವರ ನಂತರ ಪ್ರಧಾನಿಯಾಗಲಿದ್ದಾರೆ ಎನ್ನಲಾದ ಬೋರಿಸ್ ಜಾನ್ಸನ್‌ ಅವರು ‘ಜನ ಬಯಸಿದ್ದು ಒಪ್ಪಂದವೇ ಇಲ್ಲದ ಬ್ರೆಕ್ಸಿಟ್‌ ಅನ್ನು’ ಎಂದು ಜನವರಿಯಲ್ಲಿ ಘೋಷಿಸಿದ್ದರು. ‘ಮೇ ಅವರನ್ನು ಧೈರ್ಯದ ಕೊರತೆ ಇದ್ದ ಪ್ರಧಾನಿಯಾಗಿ ನೋಡಲಾಗುತ್ತದೆ’ ಎನ್ನುತ್ತಾರೆ ಲೇಬರ್‌ ಪಕ್ಷದ ನಾಯಕರಿಗೆ ಸಲಹೆಗಾರರಾಗಿದ್ದ ಆಯೆಷಾ ಹಜಾರಿಕಾ.

-ದಿ ನ್ಯೂಯಾರ್ಕ್‌ ಟೈಮ್ಸ್‌

*

ಎಲೆನ್ ಬ್ಯಾರ್ರಿ
ಎಲೆನ್ ಬ್ಯಾರ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT