ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಕೊರೊನಾ ಮತ್ತು ಸುಲಿಗೆಯೆಂಬ ಯಾಗ

ಮಹಾಭಾರತದಲ್ಲಿರುವ ಕ್ಷಾಮದ ವರ್ಣನೆ, ಇಂದಿನ ಕೊರೊನಾದ ದುರಂತದ ಚಿತ್ರಗಳನ್ನೇ ನೆನಪಿಸುವಂತಿದೆ
ಅಕ್ಷರ ಗಾತ್ರ

ಅನಾರೋಗ್ಯಕರ ವಾತಾವರಣದಲ್ಲಿ ಮನುಷ್ಯನ ಶರೀರವಷ್ಟೇ ಅಲ್ಲ ಅವನ ಮನಸ್ಸು, ಬುದ್ಧಿ, ಚಾರಿತ್ರ್ಯಗಳೂ ರೋಗಗ್ರಸ್ತವಾಗಬಲ್ಲವು, ಭ್ರಷ್ಟವಾಗಬಲ್ಲವು ಎಂಬ ಸಂದೇಶವನ್ನು ಕೊರೊನಾದಂತಹ ದುರ್ಭಿಕ್ಷದ ಕಾಲಮಾನವು ನೀಡಿದೆ. ಇದಕ್ಕೆ ವೈದ್ಯಕೀಯ ಸೇವೆಯ ದಂಧೆ, ಔಷಧೋದ್ಯಮದ ಧನದಾಹಿತನ, ಲಜ್ಜೆಗೇಡು ಚುನಾವಣೆಗಳು ಮತ್ತು ಚುನಾವಣಾ ಪ್ರಚಾರಗಳು (ಉತ್ತರ ಪ್ರದೇಶದಲ್ಲಿ 577 ಶಿಕ್ಷಕರು ಹಾಗೂ ಗುಜರಾತ್‌ನಲ್ಲಿ 137 ಶಿಕ್ಷಕರು ಪಂಚಾಯಿತಿ ಚುನಾವಣಾ ಕರ್ತವ್ಯ ನಿರ್ವಹಿಸಿ ಕೋವಿಡ್‌ನಿಂದ ಮೃತರಾಗಿದ್ದಾರೆ ಎಂಬ ವರದಿಗಳಿವೆ), ಕೋವಿಡ್ ಪಿಡುಗನ್ನು ಉಲ್ಬಣಿಸಬಲ್ಲ ಕುಂಭಮೇಳದಂಥ ಮೇಳಗಳು ಇವೆಲ್ಲ ವರ್ತಮಾನದ ಜೀವಂತ ಉದಾಹರಣೆಗಳಾಗಿವೆ.

ಭ್ರಷ್ಟತನವು ಪ್ರಕೃತಿವಿಕೋಪಕ್ಕೆ ಜನ್ಮ ನೀಡುತ್ತದೋ ಅಥವಾ ಪ್ರಕೃತಿವಿಕೋಪವು ಭ್ರಷ್ಟತನಕ್ಕೆ ಜನ್ಮ ನೀಡುತ್ತದೋ ಎಂಬ ಪ್ರಶ್ನೆ ಬೀಜ-ವೃಕ್ಷ ನ್ಯಾಯದಷ್ಟೇ ಜಟಿಲವಾದುದು. 1934ರ ಬಿಹಾರ ಭೂಕಂಪದ ಸಮಯದಲ್ಲಿ ಗಾಂಧೀಜಿ ಮತ್ತು ಕವಿ ರವೀಂದ್ರರ ನಡುವೆ ಈ ಪ್ರಶ್ನೆ ತೀವ್ರವಾಗಿ ಚರ್ಚೆಯಾಗಿತ್ತು. ಕಾರಣವೇನೇ ಇರಲಿ, ವಿಕೋಪಗಳು- ಮನುಷ್ಯಕೃತ ವಿಕೋಪ ಇರಬಹುದು ಅಥವಾ ಪ್ರಕೃತಿದತ್ತ ವಿಕೋಪವಿರಬಹುದು- ಪ್ರತಿಸಲ ನಮ್ಮ ಅಂತರಂಗದಲ್ಲಿ ಮನೆಮಾಡಿರುವ ಕೊಳಕನ್ನು, ಭ್ರಷ್ಟತೆಯನ್ನು ಅನಾವರಣ ಮಾಡುತ್ತವೆ.

ಇತಿಹಾಸದಲ್ಲಿ ಇಂತಹ ಹಲವು ದುರ್ಭಿಕ್ಷಗಳು ಸಂಭವಿಸಿವೆ ಮತ್ತು ಭವಿಷ್ಯದಲ್ಲೂ ಸಂಭವಿಸಲಿವೆ. ತ್ರೇತಾಯುಗ ಅಂತ್ಯಗೊಂಡು ದ್ವಾಪರಯುಗ ಪ್ರಾರಂಭವಾದಾಗ ಹನ್ನೆರಡು ವರ್ಷಗಳ ಕಾಲ ಭೀಕರವಾದ ಕ್ಷಾಮ ಉಂಟಾಗಿತ್ತಂತೆ. ಮಹಾಭಾರತದಲ್ಲಿ ಉಲ್ಲೇಖಗೊಂಡಿರುವ ಆ ಕ್ಷಾಮದ ವರ್ಣನೆ ಇಂದಿನ ಕೊರೊನಾದ ದುರಂತದ ಚಿತ್ರಗಳನ್ನೇ ನೆನಪಿಸುತ್ತದೆ:

ಹನ್ನೆರಡು ವರ್ಷಗಳ ಅವಧಿಯಲ್ಲಿ ಒಂದೇ ಒಂದು ಹನಿ ಮಳೆ ಬೀಳಲಿಲ್ಲ. ಬಾವಿ, ಕೆರೆ, ನದಿಗಳ ಜಲಮೂಲವೆಲ್ಲ ಬತ್ತಿ ಹೋದವು. ಜನ ಕೃಷಿ ಮತ್ತು ಹೈನುಗಾರಿಕೆಯನ್ನು ಬಿಟ್ಟರು, ನಗರ ಪ್ರದೇಶಗಳಲ್ಲಿ ವ್ಯಾಪಾರ ವಹಿವಾಟುಗಳು ಪೂರ್ತಿಯಾಗಿ ನಿಂತು ಹೋದವು. ಎಲ್ಲಿ ನೋಡಿದರಲ್ಲಿ ರಾಶಿ ರಾಶಿ ಹೆಣಗಳು, ಮೂಳೆಯ ರಾಶಿಗಳು ಪರ್ವತೋಪಾದಿಯಲ್ಲಿ ಬಿದ್ದಿದ್ದವು. ಕಂಗೆಟ್ಟ ಜನ ಹೆಣಗಳ ವಸ್ತ್ರಾಭರಣಗಳನ್ನು ಕದಿಯುತ್ತಿದ್ದರು. ನಗರಗಳು ಮತ್ತು ವಸತಿ ಪ್ರದೇಶಗಳು ಜನರಿಲ್ಲದೇ ಖಾಲಿಯಾಗಿ ಬಿಕೋ ಎನ್ನುತ್ತಿದ್ದವು. ದೇವಸ್ಥಾನಗಳು ಮತ್ತು ಪೂಜಾಸ್ಥಳಗಳು ಜನರಿಂದ ಪರಿತ್ಯಕ್ತವಾದವು. ಭೂಮಿ ತನ್ನ ಜೀವಕಳೆ ಕಳೆದುಕೊಂಡು ಪ್ರೇತವನದ ರೂಪ ತಳೆಯಿತು.

ಸರಿ-ತಪ್ಪುಗಳ ವಿವೇಚನೆ ಯಾರೊಬ್ಬರಿಗೂ ಇರಲಿಲ್ಲ. ಜನ ಹಸಿವಿನಿಂದ ಕಂಗೆಟ್ಟು ತಮ್ಮ ಮಾನವೀಯ ಸಂವೇದನೆಯನ್ನೇ ಕಳೆದುಕೊಂಡರು; ಒಬ್ಬರನ್ನೊಬ್ಬರು ತಿನ್ನಲಾರಂಭಿಸಿದರು. ಅರಣ್ಯವಾಸಿಗಳಾದ ಋಷಿಗಳು ತಮ್ಮ ತಪೋಕರ್ಮವನ್ನು ಪರಿತ್ಯಜಿಸಿ ಆಹಾರಕ್ಕಾಗಿ ಕಾಡು ಮೇಡುಗಳಲ್ಲಿ ಅಲೆದಾಡಲಾರಂಭಿಸಿದರು (ಮಹಾಭಾರತ, ಶಾಂತಿ ಪರ್ವ, 141ನೇ ಸರ್ಗ).

ಇಂದಿನ ಪರಿಸ್ಥಿತಿಯೂ ಹೆಚ್ಚು ಕಡಿಮೆ ಇದೇ ರೀತಿಯಲ್ಲಿದೆ. ವಿಕೋಪದಿಂದ ಜಲಮೂಲಗಳು ಬತ್ತಿ ಹೋಗುವುದು ಹಾಗಿರಲಿ, ಉಸಿರಾಡುವ ಆಮ್ಲಜನಕಕ್ಕೂ ಇಂದು ತತ್ವಾರ ಉಂಟಾಗಿದೆ. ದೇಶದಾದ್ಯಂತ ಚಿತಾಗಾರಗಳೆದುರು ಸಾಲುಗಟ್ಟಿ ಮಲಗಿರುವ ಹೆಣಗಳು ದ್ವಾಪರಯುಗದ ಹೆಣದ ರಾಶಿಯನ್ನೇ ನೆನಪಿಸುತ್ತವೆ. ನಗರ ಪ್ರದೇಶಗಳ ಸ್ಥಿತಿವಂತರು ಹಾಗೆಯೇ ಕೂಲಿ ಕಾರ್ಮಿಕರು ಹಳ್ಳಿಗಳತ್ತ ಗುಳೆ ಹೋಗುತ್ತಿರುವುದು, ದೇವಾನುದೇವತೆಗಳು ನಾಗರಿಕ ಮನುಷ್ಯರ ವಿಕಾರವಾದ ಮುಖಗಳನ್ನು ನೋಡಲು ನಿರಾಕರಿಸಿರುವರೇನೋ ಎಂಬಂತೆ ದೇವಸ್ಥಾನ, ಚರ್ಚು, ಮಸೀದಿ, ಪೂಜಾ ಮಂದಿರಗಳು ಬಾಗಿಲು ಜಡಿದುಕೊಂಡಿರುವುದು, ಆಂಬುಲೆನ್ಸ್, ಆಟೊರಿಕ್ಷಾ ಚಾಲಕರುಗಳಿಂದ ಹಿಡಿದು ಅಂತ್ಯಕ್ರಿಯೆ ನೆರವೇರಿಸುವ ಪುರೋಹಿತರವರೆಗೆ ಪ್ರತಿಯೊಂದು ವೃತ್ತಿಯವರೂ ಸರಿತಪ್ಪುಗಳ ವಿವೇಚನೆ ಇಲ್ಲದೇ ಸಂತ್ರಸ್ತರ ಸುಲಿಗೆಗೆ ಇಳಿದಿರುವುದು ಇವೆಲ್ಲ ಇತಿಹಾಸದ ಪುನರಾವರ್ತನೆಯೇ ಆಗಿವೆ.

ಭ್ರಷ್ಟಾಚಾರವೆಂಬುದು ಆರ್ಥಿಕ ಅಪರಾಧಕ್ಕೆ ಮಾತ್ರ ಸೀಮಿತವಾದ ಸಂಗತಿಯಲ್ಲ. ಅದು ನಮ್ಮದೇ ಅಂತರಂಗದ ಒಂದು ಸ್ವಭಾವವಾಗಿದ್ದು, ಆಪತ್ತಿನ ಸಂದರ್ಭದಲ್ಲಿ ವ್ಯಕ್ತವಾಗುತ್ತದೆ. ಸಾಮಾಜಿಕ ಮಾಧ್ಯಮಗಳಲ್ಲಿ ದ್ವೇಷ, ಅಸಹಿಷ್ಣುತೆಗಳನ್ನು ಕಾರಿಕೊಳ್ಳುವುದು, ಸೈದ್ಧಾಂತಿಕ ಭಿನ್ನಾಭಿಪ್ರಾಯವುಳ್ಳವರ ಸಾವನ್ನು ಸಂಭ್ರಮಿಸುವುದು, ಆತಂಕಕ್ಕೆ ಒಳಗಾದವರನ್ನು
ಸಾಂತ್ವನಗೊಳಿಸಬೇಕಾದ ಮಾಧ್ಯಮಗಳು ವಸ್ತುಸ್ಥಿತಿಯನ್ನು ಅತಿರಂಜಿತಗೊಳಿಸುವುದು ಅಥವಾ ತುರ್ತಾಗಿ ಆಗಬೇಕಾದ ಕೆಲಸಗಳನ್ನು ಬದಿಗೆ ಸರಿಸಿ ಬೇಡದ ಚರ್ಚೆಗಳನ್ನು- ಉದಾಹರಣೆಗೆ ರಾಮ, ಹನುಮಂತ ಅಥವಾ ಸಾಯಿಬಾಬಾರ ಜನ್ಮಭೂಮಿ ಯಾವುದು ಎಂಬ ತರಹದ ಚರ್ಚೆಗಳನ್ನು- ಮುನ್ನೆಲೆಗೆ ತಂದು ದಾರಿ ತಪ್ಪಿಸುವುದು ಇವೆಲ್ಲ ಭ್ರಷ್ಟತೆಯ ನಾನಾ ರೂಪಗಳಾಗಿವೆ.

ನಮಗೇ ಅಜ್ಞಾತವಾಗಿರುವ ನಮ್ಮೊಳಗಿನ ಇಂಥ ನೂರಾರು ವಿಕೃತಿಗಳು ಕೊರೊನಾದಿಂದ ಅನಾವರಣವಾಗಿವೆ. ಈ ವಿಕೋಪದಿಂದ ವರ್ತಮಾನದಲ್ಲಿ ಹಲವು ದುಷ್ಪರಿಣಾಮಗಳಾಗಿದ್ದರೂ ಭವಿಷ್ಯದಲ್ಲಿ ಕೆಲವು ಒಳ್ಳೆಯ ಪರಿಣಾಮಗಳೂ ಆಗುತ್ತವೆ. ಮುಖ್ಯವಾಗಿ, ಸದ್ಯಕ್ಕೆ ಕೊರೊನಾ ನಮ್ಮೊಳಗೆ ನಾವು ಸಾಕಿಕೊಂಡಿರುವ ಇಂತಹ ಹಲವು ವಿಕೃತಿಗಳಿಗೆ ಒಂದು ದರ್ಪಣವಾಗಿ ಒದಗಿಬಂದಿದೆ. ಇದು ನಮ್ಮ ಆತ್ಮಾವಲೋಕನಕ್ಕೆ ಮತ್ತು ಈವರೆಗೆ ನಾವು ನಂಬಿಕೊಂಡು ಬಂದಿರುವ ಮೌಲ್ಯಗಳ ಮರುಪರಿಷ್ಕರಣೆಗೆ ಒಂದು ಅವಕಾಶ ನಿರ್ಮಿಸಿಕೊಟ್ಟಿದೆಯಲ್ಲದೆ ಭವಿಷ್ಯದಲ್ಲಿ ಹೊಸ ಮೌಲ್ಯಗಳ ಸೃಷ್ಟಿಗೂ ಕಾರಣವಾಗಬಹುದು.

ಮೇಲೆ ಉಲ್ಲೇಖಿಸಲಾದ ಕ್ಷಾಮಕ್ಕೆ ಸಂಬಂಧಿಸಿದಂತೆ ಮತ್ತೊಂದು ಕತೆಯಿದೆ. ಬ್ರಹ್ಮರ್ಷಿ ವಿಶ್ವಾಮಿತ್ರನಿಗೆ ತಿನ್ನಲು ಏನೂ ಸಿಗದೆ ಕಾಡಿನಲ್ಲಿ ಅಲೆದಾಡುತ್ತಾ ಕೊನೆಗೆ ಬೇಡರ ಜನಾಂಗದವರ ಒಂದು ಬಿಡಾರಕ್ಕೆ ಬರುತ್ತಾನೆ. ಅಲ್ಲಿ ಚರ್ಮ ಸುಲಿದು ಹದಗೊಳಿಸಿದ್ದ ನಾಯಿಯ ಮಾಂಸವನ್ನು ಕಂಡು ಅದನ್ನು ನೀಡಿರೆಂದು ಯಾಚಿಸುತ್ತಾನೆ. ಅವರು ಭಿಕ್ಷೆ ನೀಡಲು ಒಪ್ಪದಿದ್ದಾಗ ರಾತ್ರಿಯ ಅವೇಳೆಯಲ್ಲಿ ಬಿಡಾರಕ್ಕೆ ಬಂದು ಮಾಂಸವನ್ನು ಕದ್ದು ಸಿಕ್ಕಿಹಾಕಿಕೊಳ್ಳುತ್ತಾನೆ. ಬೇಡರ ಕುಲದವರು, ‘ಬ್ರಹ್ಮರ್ಷಿಯಾದ ನೀನು ಹೀಗೆ ಎರಡೆರಡು ಪಾಪಗಳನ್ನು ಮಾಡಬಹುದೇ? (ಕಳ್ಳತನ ಮತ್ತು ಮಾಂಸಾಹಾರ ಸೇವನೆ) ನಿನ್ನಿಂದ ನಮಗೂ ಪಾಪ ಅಂಟುತ್ತದೆ’ ಎಂದಾಗ, ‘ನಾನು ಸಾಯುತ್ತಿದ್ದೇನೆ; ಮೊದಲು ತಿನ್ನಲು ಬಿಡಿ ಆಮೇಲೆ ನಿಮ್ಮ ಪ್ರಶ್ನೆಗಳಿಗೆ ಉತ್ತರಿಸುತ್ತೇನೆ. ಈ ಹಿಂದೆ ಅಗಸ್ತ್ಯ ಋಷಿ ವಾತಾಪಿ ಎಂಬ ಅಸುರನನ್ನೇ ತಿಂದಿರಲಿಲ್ಲವೇ’ ಎಂದು ಬೇಡರನ್ನೇ ಮರುಪ್ರಶ್ನಿಸಿ ಮಾಂಸವನ್ನು ಹೊತ್ತು ತನ್ನ ಆಶ್ರಮಕ್ಕೆ ಹಿಂದಿರುಗುತ್ತಾನೆ. ಅಲ್ಲಿ ಶಾಸ್ತ್ರೋಕ್ತ ವಿಧಿವಿಧಾನಗಳಿಂದ ಯಜ್ಞಕುಂಡವನ್ನು ನಿರ್ಮಿಸಿ ನಾಯಿಯ ಮಾಂಸವನ್ನೇ ಹವಿಸ್ಸಾಗಿ ದೇವತೆಗಳಿಗೆ ಸಮರ್ಪಿಸಿ ತಾನೂ ಸೇವನೆ ಮಾಡುತ್ತಾನೆ. ವಿಶ್ವಾಮಿತ್ರನ ನೈವೇದ್ಯದಿಂದ ಸಂತೃಪ್ತನಾದ ದೇವೇಂದ್ರನು ಧಾರಾಕಾರವಾಗಿ ಮಳೆ ಸುರಿಸಿ ಕ್ಷಾಮವನ್ನು ನೀಗಿಸುತ್ತಾನೆ.

ತಿಲಕರ ಗೀತಾರಹಸ್ಯದಲ್ಲಿ ಉಲ್ಲೇಖಿತವಾಗಿರುವ ಆಪದ್ಧರ್ಮದ ಮಹಿಮೆಯನ್ನು ವಿವರಿಸುವ ಈ ಕತೆಯು ಮಹಾತ್ಮ ಗಾಂಧಿಯವರನ್ನು ಬಹಳ ದಿವಸಗಳ ಕಾಲ ಕಾಡಿತ್ತು. ಅವನು ಮಾಂಸ ಸೇವನೆ ಮಾಡದೆ ಪ್ರಾಣತ್ಯಾಗ ಮಾಡಿದ್ದರೂ ಸರಿಯಾಗುತ್ತಿತ್ತು ಎಂದು ಗಾಂಧೀಜಿ ಉದ್ಗರಿಸಿದ್ದರಂತೆ (ಗಾಂಧಿ- ಗಂಗಾ (ಇನ್‌ಸ್ಪೈರಿಂಗ್ ಸ್ಟೋರೀಸ್), 44ನೇ ಅಧ್ಯಾಯ ಸಂ: ಮಹೇಂದ್ರ ಮೇಘನಾನಿ, ಬಾಂಬೆ ಸರ್ವೋದಯ ಮಂಡಲ್, ಮುಂಬೈ, 2011). ಇದನ್ನು ಮಹಾಭಾರತವು ಆಪದ್ಧರ್ಮ– ಆಪತ್ಕಾಲದಲ್ಲಿ ಪಾಲಿಸಬೇಕಾದ ಧರ್ಮ– ಎಂದು ಕರೆಯುತ್ತದೆ.

ಎಷ್ಟೋ ಸಲ ಆಪತ್ಕಾಲದಲ್ಲಿ ಪಾಲಿಸಬೇಕಾದ ತಾತ್ಕಾಲಿಕ ಧರ್ಮ ಶಾಶ್ವತಧರ್ಮವೂ ಆಗಬಹುದು. ಅಧ್ಯಾತ್ಮ ಮಾರ್ಗ ಹಿಡಿದಿದ್ದ ಗಾಂಧಿ ಆಪದ್ಧರ್ಮವೆಂದೇ ರಾಜಕಾರಣಕ್ಕೆ ಬಂದದ್ದು. ಮುಂದೆ ಆ ಆಪದ್ಧರ್ಮವೇ ಅವರ ಪಾಲಿನ ಶಾಶ್ವತ ಧರ್ಮವಾಗಿ ಪರಿಣಮಿಸಿತು.

ವಿಶ್ವಾಮಿತ್ರನ ಈ ಕತೆಯಿಂದ ಧರ್ಮವು ನಮ್ಮ ಮತ್ತು ಇತರರ ಬದುಕಿನ ಧಾರಣೆಗೆ, ರಕ್ಷಣೆಗೆ ಸಹಾಯಕ
ವಾಗುವುದೇ ಧರ್ಮ (ಧಾರಣಾದ್ಧರ್ಮ ಇತ್ಯಾಹುಃ) ಎಂಬ ಹೊಸ ವ್ಯಾಖ್ಯಾನ ಪಡೆಯಿತು. ಆಪತ್ಕಾಲದಲ್ಲೂ
ಸುಲಿಗೆಯೆಂಬ ಯಾಗವನ್ನು ಮುಂದುವರಿಸಿರುವ ನಮಗೆ, ಕೊರೊನೋತ್ತರ ಕಾಲದಲ್ಲಾದರೂ ಧರ್ಮದ ಈ ಹೊಸ ವ್ಯಾಖ್ಯಾನ ನೆನಪಾಗಬಹುದು.

ಟಿ.ಎನ್‌.ವಾಸುದೇವಮೂರ್ತಿ
ಟಿ.ಎನ್‌.ವಾಸುದೇವಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT