ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶ್ಲೇಷಣೆ: ಪಠ್ಯಕ್ರಮ ಚೌಕಟ್ಟು ಮತ್ತು ತಾತ್ವಿಕ ನೆಲೆಗಟ್ಟು

ಎನ್‌ಸಿಎಫ್‌ ಪಠ್ಯಕ್ರಮವಲ್ಲ; ಪಠ್ಯಕ್ರಮದ ಅಭಿವೃದ್ಧಿಗೆ ಪೂರಕವಾದ ಒಂದು ಚೌಕಟ್ಟು
Published : 9 ಅಕ್ಟೋಬರ್ 2023, 22:21 IST
Last Updated : 9 ಅಕ್ಟೋಬರ್ 2023, 22:21 IST
ಫಾಲೋ ಮಾಡಿ
Comments

ಕೇಂದ್ರ ಶಿಕ್ಷಣ ಸಚಿವಾಲಯ ಇತ್ತೀಚೆಗೆ ಬಿಡುಗಡೆ ಮಾಡಿರುವ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (ಎನ್‌ಸಿಎಫ್)‌, ಶಾಲಾ ಶಿಕ್ಷಣಕ್ಕೆ ಮಾರ್ಗದರ್ಶನ ನೀಡುವ ಉದ್ದೇಶವನ್ನು ಹೊಂದಿದೆ. ಶಿಕ್ಷಣ ಕ್ಷೇತ್ರದಲ್ಲಿ ಇರುವವರಿಗೆ ಮಾತ್ರವಲ್ಲದೆ ಇಡೀ ಸಮಾಜದ ಹಿತಕ್ಕೆ ಎನ್‌ಸಿಎಫ್‌ ನಿರ್ಣಾಯಕ ಎನಿಸಿರುವುದರಿಂದ, ಇದು ಏನನ್ನು ಒಳಗೊಂಡಿದೆ ಎಂಬುದನ್ನು ಅರಿಯುವುದು ಹೆಚ್ಚು ಉಪಯುಕ್ತ.

ನಾನು, ಈ ಪಠ್ಯಕ್ರಮ ಚೌಕಟ್ಟನ್ನು ಅಭಿವೃದ್ಧಿ ಪಡಿಸಲು ಸಚಿವಾಲಯವು ರೂಪಿಸಿದ್ದ ತಂಡದ ಸದಸ್ಯ. ಪಠ್ಯಕ್ರಮವೆಂದರೆ, ಶೈಕ್ಷಣಿಕ ಉದ್ದೇಶವನ್ನು ಸಾಧಿಸುವ ಹಾದಿಯಲ್ಲಿ ಮಗು ಶಾಲೆಯಲ್ಲಿ ಪಡೆಯುವ ಸಂಪೂರ್ಣ ಅನುಭವ. ಕಲಿಕೆಯ ಗುರಿಗಳು, ಪಠ್ಯವಿಷಯ, ಶಿಕ್ಷಣ ಶಾಸ್ತ್ರೀಯ ಅಭ್ಯಾಸಗಳು, ಬೋಧನಾ- ಕಲಿಕಾ ಸಾಮಗ್ರಿಗಳು, ತರಗತಿಯ ಅಭ್ಯಾಸಗಳು, ಶಾಲಾ ಸಂಸ್ಕೃತಿಯಂತಹ ಅನೇಕ ಸಂಗತಿಗಳನ್ನು ಅದು ಒಳಗೊಂಡಿರುತ್ತದೆ. ಈ ಎಲ್ಲಾ ಅಂಶಗಳು ಮಗುವಿನ ಕಲಿಕೆಯನ್ನು ರೂಪಿಸುವುದರಿಂದ, ಪಠ್ಯಕ್ರಮವನ್ನು ಸಂಕುಚಿತ ವ್ಯಾಖ್ಯಾನದ ಬದಲಿಗೆ ವಿಶಾಲವಾದ ದೃಷ್ಟಿಕೋನದಿಂದ ಪರಿಭಾವಿಸುವುದು ಮುಖ್ಯ. ಪಠ್ಯಕ್ರಮವನ್ನು ವಸ್ತುವಿಷಯ, ಶಿಕ್ಷಣಶಾಸ್ತ್ರ ಮತ್ತು ಮೌಲ್ಯಮಾಪನದ ಪರಿಮಿತಿಗೆ ಒಳಪಡಿಸದೆ, ಅದರ ಬಗ್ಗೆ ವಿಸ್ತೃತವಾದ ಅರಿವು ಮೂಡಿಸಿಕೊಳ್ಳುವುದು ಹೆಚ್ಚು ನೈಜತೆಯಿಂದ ಕೂಡಿರುತ್ತದೆ.

ಎನ್‌ಸಿಎಫ್‌ ಎನ್ನುವುದು ಪಠ್ಯಕ್ರಮವಲ್ಲ; ಪಠ್ಯಕ್ರಮವನ್ನು ಅಭಿವೃದ್ಧಿಪಡಿಸುವುದಕ್ಕೆ ಪೂರಕವಾದ ಒಂದು ಚೌಕಟ್ಟು. ಪಠ್ಯಕ್ರಮವನ್ನು ಅಭಿವೃದ್ಧಿಪಡಿಸುವುದಕ್ಕಾಗಿ ಅನುಸರಿಸಬೇಕಾದ ತತ್ವಗಳು, ಗುರಿಗಳು, ಸಂರಚನೆಗಳು ಮತ್ತು ಪೂರಕವಾದ ಅಂಶಗಳನ್ನು ಇದು ವಿವರಿಸುತ್ತದೆ ಹಾಗೂ ಆನಂತರ ಇದು ಪಠ್ಯವಿಷಯ, ಪಠ್ಯಪುಸ್ತಕಗಳು ಮತ್ತು ಮೌಲ್ಯಮಾಪನ (ಪರೀಕ್ಷೆಗಳು) ಸೇರಿದಂತೆ ಬೋಧನಾ- ಕಲಿಕಾ ಸಾಮಗ್ರಿಯಂಥವುಗಳಿಗೆ ಮಾರ್ಗದರ್ಶನ ನೀಡುತ್ತದೆ. ರಾಜ್ಯ ಮಟ್ಟದ ಸೂಕ್ತ ಸಂಸ್ಥೆಗಳು, ಅಂದರೆ ಶಾಲೆಗಳಿಗೆ ಜವಾಬ್ದಾರಿಯುತವಾದ ಮಂಡಳಿಗಳು ಅಥವಾ ಇತರ ಸಂಸ್ಥೆಗಳು ಇವೆಲ್ಲವುಗಳನ್ನು
ಅಭಿವೃದ್ಧಿಪಡಿಸಬೇಕು.

ಶಾಲೆಯ ವಾತಾವರಣ, ಅಲ್ಲಿ ವಿದ್ಯಾರ್ಥಿಗಳಿಗೆ ದಕ್ಕುವ ಅನುಭವಗಳು ಮತ್ತು ಶಾಲಾ ವ್ಯವಸ್ಥೆಗಳು ಪೋಷಿಸಬೇಕಾದ, ಬದಲಿಸಬೇಕಾದ ಹಾಗೂ ಬೆಳೆಸಬೇಕಾದ ಕಾರ್ಯನೀತಿಗಳನ್ನು ಎನ್‌ಸಿಎಫ್ ನಿರ್ದೇಶಿಸಲಿದೆ.

ಶಾಲಾ ಶಿಕ್ಷಣವನ್ನು ರಾಜ್ಯದ ವಿಷಯ ಎಂದು ಪರಿಗಣಿಸಿರುವುದರಿಂದ, ಇಂತಹ ಸಾಮಾನ್ಯ ರಾಷ್ಟ್ರೀಯ ಚೌಕಟ್ಟು ದೇಶದ ರಾಜ್ಯಗಳಾದ್ಯಂತ ಶಾಲಾ ಶಿಕ್ಷಣಕ್ಕೆ ಅಗತ್ಯವಾದ ಸಾಮರಸ್ಯ ಮತ್ತು ಸುಸಂಬದ್ಧತೆಯನ್ನು ಒದಗಿಸುತ್ತದೆ. ಹೀಗೆ, ಎನ್‌ಸಿಎಫ್‌ ಎನ್ನುವುದು ದೇಶದ ಒಕ್ಕೂಟ ವ್ಯವಸ್ಥೆಯ ಸಮಗ್ರತೆಯನ್ನು ಎತ್ತಿಹಿಡಿಯುವ ಪ್ರಮುಖ ಕಾರ್ಯರೀತಿ ಎನಿಸಿದೆ. ಆದರೆ ರಾಜ್ಯಗಳು ತಮ್ಮ ಶಾಲಾ ವ್ಯವಸ್ಥೆಗೆ ತಕ್ಕಂತೆ ತಮ್ಮದೇ ಆದ ಆದ್ಯತೆಗಳನ್ನು ಹೊಂದಿರುತ್ತವೆ ಮತ್ತು ಪಠ್ಯಕ್ರಮವನ್ನು ನಿರ್ಧರಿಸುತ್ತವೆ.

ಎನ್‌ಸಿಎಫ್‌ ತನ್ನ ವಿಧಾನ ಮತ್ತು ತತ್ವಗಳಿಗೆ ಸಂಬಂಧಿಸಿದಂತೆ ಉನ್ನತ ಸ್ತರದಲ್ಲಿ ಅಮೂರ್ತವಾಗಿಯೇ ಉಳಿದುಬಿಡಬಹುದಿತ್ತು. ಆದರೆ ಶೈಕ್ಷಣಿಕ ಕ್ಷೇತ್ರದ ವೃತ್ತಿಪರರನ್ನು ಸಮರ್ಥರನ್ನಾಗಿಸಲು ಖಚಿತ ನಿಲುವು ಅತ್ಯಗತ್ಯ ಎಂಬುದನ್ನು ದಶಕಗಳ ಅನುಭವವು ನಮಗೆ ತಿಳಿಸುತ್ತದೆ. ಈ ‘ವೃತ್ತಿಪರ’ರಲ್ಲಿ ಶಿಕ್ಷಕರು, ಶಾಲಾ ಮುಖ್ಯಸ್ಥರು, ಪಠ್ಯಕ್ರಮವನ್ನು ಅಭಿವೃದ್ಧಿಪಡಿಸುವವರು, ಪಠ್ಯಪುಸ್ತಕಗಳ ಲೇಖಕರು, ಶೈಕ್ಷಣಿಕ ಆಡಳಿತಗಾರರು ಹಾಗೂ ಇನ್ನಿತರರು ಸೇರಿದ್ದಾರೆ. ಎನ್‌ಸಿಎಫ್‌ನಲ್ಲಿನ ವಿವರಗಳು ತಳಹಂತದಲ್ಲಿ ನೈಜ ಅಭ್ಯಾಸಗಳನ್ನು ಬದಲಿಸಲು ನೆರವು ನೀಡುವ ಗುರಿಯನ್ನು ಹೊಂದಿವೆ. ಅಷ್ಟಾದರೂ ಈ ಚೌಕಟ್ಟಿನ ಯಾವುದೇ ವಿವರಗಳು ಆದೇಶಾತ್ಮಕ ಆಗಿರದೆ ಬರೀ ವಿವರಣಾತ್ಮಕವಾಗಿವೆ. ಉದಾಹರಣೆಗೆ, ಶಾಲೆಯೊಂದರ ಸಾಂಸ್ಕೃತಿಕ ಅಭ್ಯಾಸಗಳು ಸಮಾನತೆ ಮತ್ತು ಬಹುತ್ವವನ್ನು ಉತ್ತೇಜಿಸಬೇಕು ಎಂದಷ್ಟೇ ಎನ್‌ಸಿಎಫ್‌ ಹೇಳಬಹುದು. ಅದಕ್ಕೆ ಬದಲಾಗಿ, ಅದು ಈ ತತ್ವವನ್ನು ಸೂಚಿಸುವುದಲ್ಲದೆ, ಸಮಾನತೆ ಮತ್ತು ಬಹುತ್ವದ ಮೌಲ್ಯಗಳನ್ನು ಅಭಿವೃದ್ಧಿಪಡಿಸಲು ನೆರವಾಗುವ ಅಭ್ಯಾಸಗಳನ್ನು ನಿರ್ದಿಷ್ಟವಾಗಿ ಸ್ಪಷ್ಟಪಡಿಸುತ್ತದೆ. ಈ ನಿರ್ದಿಷ್ಟ ಅಭ್ಯಾಸಗಳು ತತ್ವಗಳಿಗೆ ನೆಲೆಗಟ್ಟನ್ನು ಒದಗಿಸುತ್ತವೆ ಹಾಗೂ ಅವುಗಳಿಗೆ ನೈಜತೆಯ ರೂಪವನ್ನು ನೀಡುತ್ತವೆ. ಈ ತತ್ವಗಳನ್ನು ಆಧರಿಸಿ ಶಾಲೆಗಳು ತಮ್ಮದೇ ಆದ ಅಭ್ಯಾಸ ಕ್ರಮಗಳನ್ನು ಅಭಿವೃದ್ಧಿಪಡಿಸುವ ಸ್ವಾತಂತ್ರ್ಯವನ್ನು ಹೊಂದಿವೆ.

ಸಂಕ್ಷಿಪ್ತವಾಗಿ ಹೇಳುವುದಾದರೆ, ಶಿಕ್ಷಕರಾಗಲಿ ಅಥವಾ ಪಠ್ಯವಿಷಯವನ್ನು ಅಭಿವೃದ್ಧಿಪಡಿಸುವ ಯಾವುದೇ ವ್ಯಕ್ತಿಯಾಗಲಿ, ‘ಶಿಕ್ಷಣ ತಜ್ಞ’ರ ಕನಿಷ್ಠ ಹಸ್ತಕ್ಷೇಪದೊಂದಿಗೆ, ತಮ್ಮ ಪಾತ್ರ ಕುರಿತಂತೆ ಎನ್‌ಸಿಎಫ್‌ನಿಂದ ಸೂಚ್ಯಾರ್ಥಗಳನ್ನು ಅರಿಯಲು ಸಾಧ್ಯವಾಗಬೇಕು. ಇಂತಹ ಎಲ್ಲ ದಾಖಲೆಗಳಿಗೆ ಇದೊಂದು ಮೂಲ ಅಗತ್ಯ ಎನಿಸಿದೆ. ಅಚ್ಚರಿಯ ವಿಷಯವೆಂದರೆ, ಹೆಚ್ಚಿನ ಸಂದರ್ಭಗಳಲ್ಲಿ ಈ ರೀತಿ ನಡೆದಿಲ್ಲ.

ತಳಹಂತದಲ್ಲಿನ ಅಭ್ಯಾಸಗಳಲ್ಲಿ ಅಪೇಕ್ಷಿತ ಬದಲಾವಣೆಗಳನ್ನು ಪರಿಣಾಮಕಾರಿಯಾಗಿ ತರಲು, ಶಾಲೆಯು ಸದ್ಯಕ್ಕೆ ಹೊಂದಿರುವ ಸಂಪನ್ಮೂಲಗಳನ್ನು ಬಳಸಿಯೇ ಕಾರ್ಯಗತಗೊಳಿಸಲು ಸಾಧ್ಯವಾಗುವಂತೆ ಎನ್‌ಸಿಎಫ್‌ ಅನ್ನು ವಿನ್ಯಾಸಗೊಳಿಸಲಾಗಿದೆ. ಹಾಗೆಂದ ಮಾತ್ರಕ್ಕೆ ಶಾಲೆಗಳಿಗೆ ಅಗತ್ಯವಿರುವ ಮತ್ತು ಅವು ಹೊಂದಲೇಬೇಕಾದ ಸಂಪನ್ಮೂಲಗಳನ್ನು ಖಾತರಿಪಡಿಸುವ ವಿಚಾರದಲ್ಲಿ ಎನ್‌ಸಿಎಫ್‌ ಬದ್ಧತೆಯನ್ನು ಹೊಂದಿಲ್ಲ ಎಂದು ಅರ್ಥೈಸಬಾರದು. ಆದರೆ ಎಲ್ಲ ಸಂಪನ್ಮೂಲಗಳೂ ಲಭ್ಯವಾದ ನಂತರವಷ್ಟೇ ಅನುಷ್ಠಾನ ಸಾಧ್ಯ ಎಂದುಕೊಳ್ಳುವುದು ಸರಿಯಲ್ಲ.

ಶಾಲೆಗೆ ಅಗತ್ಯವಿರುವ ಎಲ್ಲ ಸಂಪನ್ಮೂಲಗಳು ದೊರೆಯುವತನಕ ನಾವು ಕಾದು ಕುಳಿತಲ್ಲಿ ಫಲಶ್ರುತಿ ಬೇರೆ ರೀತಿಯೇ ಇರುತ್ತದೆ. ನಮ್ಮ ದೇಶದಲ್ಲಿ ವಾಸ್ತವ ಸ್ಥಿತಿ ಹೇಗಿದೆಯೆಂದರೆ, ‘ನಮಗೆ ಸಂಪನ್ಮೂಲಗಳು ದೊರೆತಾಗಷ್ಟೇ ನಾವಿದನ್ನು ಕಾರ್ಯಗತಗೊಳಿಸುತ್ತೇವೆ’ ಎಂಬ ನೆವವನ್ನು ಹೇಳುತ್ತಾ ಅನುಷ್ಠಾನ ಕಾರ್ಯವನ್ನು ಮುಂದೂಡುತ್ತಲೇ ಹೋಗುತ್ತೇವೆ.

ಪ್ರಸ್ತುತ ಸನ್ನಿವೇಶಗಳಿಗೆ ಅನುಗುಣವಾಗಿ ಕಾರ್ಯಕ್ರಮ ಜಾರಿಗೊಳಿಸುವುದನ್ನು ಖಾತರಿಪಡಿಸುವ ಹಾಗೂ ಸಂಪನ್ಮೂಲಗಳು ಸುಧಾರಣೆಗೊಳ್ಳುತ್ತಾ ಹೋದಂತೆ ಮುಂದಿನ ದಾರಿಯನ್ನು ನಿರ್ಧರಿಸುವ ವಿಧಾನವನ್ನು ಎನ್‌ಸಿಎಫ್‌ ಅನುಸರಿಸುತ್ತದೆ. ಉದಾಹರಣೆಗೆ, ಸಂಗೀತ ಸೇರಿದಂತೆ ಕಲಾ ವಿಷಯಕ್ಕೆ ಗಣಿತಕ್ಕೆ ನೀಡಿದಷ್ಟೇ ಪ್ರಾಮುಖ್ಯವನ್ನು ಈ ಚೌಕಟ್ಟು ನೀಡುತ್ತದೆ. ಸಾಮಾನ್ಯವಾಗಿ, ‘ನಾವು ಕಲಾ ತರಗತಿಗಳನ್ನು ನಡೆಸುವ ಮೊದಲು ಎಲ್ಲ ಶಾಲೆಗಳಲ್ಲಿ ಅದಕ್ಕೆ ಅಗತ್ಯವಾದ ಕಲಾ ಶಿಕ್ಷಕರು ನಮಗೆ ಬೇಕಾಗುತ್ತಾರೆ’ ಎಂಬ ತತ್‌ಕ್ಷಣದ ಪ್ರತಿಕ್ರಿಯೆ ಬರುತ್ತದೆ. ಈ ಬೇಡಿಕೆ ಕಾರ್ಯರೂಪಕ್ಕೆ ಬರಲು 10-15 ವರ್ಷಗಳೇ ಬೇಕಾಗಬಹುದು.

ಇಂತಹ ವಾಸ್ತವ ಸ್ಥಿತಿಯನ್ನು ನಿಭಾಯಿಸುವುದಕ್ಕಾಗಿ ಎನ್‌ಸಿಎಫ್‌ ಮೂರು ಅಂಶಗಳನ್ನು ಮುಂದಿಡುತ್ತದೆ. ಮೊದಲನೆಯದಾಗಿ, ವಿಷಯಕ್ಕೆ ಸಂಬಂಧಿಸಿದ ನಿಗದಿತ ಶಿಕ್ಷಕರು ಲಭ್ಯವಿಲ್ಲದಿದ್ದರೂ, ಕಲಾ ವಿಷಯದಲ್ಲಿ ಸಾಧಿಸಬೇಕಾದ ಕಲಿಕಾ ಮಾನದಂಡಗಳನ್ನು ಇದು ಸ್ಪಷ್ಟಪಡಿಸುತ್ತದೆ. ಎರಡನೆಯದಾಗಿ, ಕಲಾ ವಿಷಯಕ್ಕೆ ಅದರ ಪ್ರಾಮುಖ್ಯಕ್ಕೆ ಅನುಗುಣವಾಗಿ, ‘ವೇಳಾಪಟ್ಟಿಯಲ್ಲಿ ಅವಕಾಶ’ವನ್ನು ಇದು ಕಲ್ಪಿಸುತ್ತದೆ. ಮೂರನೆಯದಾಗಿ, ಪ್ರಸ್ತುತ ಸೇವಾನಿರತ ಶಿಕ್ಷಕರಿಗೆ (ಉದಾಹರಣೆಗೆ, ಭಾಷೆ ಅಥವಾ ಗಣಿತ ಶಿಕ್ಷಕರು) ಲಭ್ಯವಿರುವ ಇತರ ಸ್ಥಳೀಯ ಸಂಪನ್ಮೂಲಗಳ ಸಹಾಯದೊಂದಿಗೆ ತರಬೇತಿ ನೀಡುವ ಪ್ರಾಯೋಗಿಕ ವಿಧಾನವನ್ನು ಇದು ಸೂಚಿಸುತ್ತದೆ. ಹೀಗಾಗಿ, ಕಲಿಕಾ ಮಾನದಂಡಗಳನ್ನು ಸಾಧಿಸುವ ದಿಸೆಯಲ್ಲಿ ಅವರು ಕಲೆಯನ್ನು ಬೋಧಿಸಲು ಶಕ್ತರಾಗುತ್ತಾರೆ.

ಎನ್‌ಸಿಎಫ್‌ ಬಿಡುಗಡೆಯಾದಾಗಿನಿಂದ ಬಹುತೇಕ ಮಾಧ್ಯಮಗಳ ಶೀರ್ಷಿಕೆಗಳು ಬೋರ್ಡ್‌ ಪರೀಕ್ಷೆ ನಡೆಸುವ ಕುರಿತು ಅದು ನೀಡಿರುವ ಸಲಹೆಗಳ ಬಗ್ಗೆಯೇ ಹೆಚ್ಚು ಗಮನ ಕೇಂದ್ರೀಕರಿಸಿವೆ. ಇದು, ಪರೀಕ್ಷೆ ಕುರಿತು ನಮ್ಮ ಸಮಾಜಕ್ಕೆ ಇರುವ ಗೀಳನ್ನು ಪ್ರತಿಬಿಂಬಿಸುತ್ತದೆ. ಎನ್‌ಸಿಎಫ್‌ ಬದಲಿಸಲು ಪ್ರಯತ್ನಿಸುವ ಪ್ರಮುಖ ವಿಚಾರಗಳಲ್ಲಿ ಇದೂ ಒಂದಾಗಿದೆ. ಆದರೆ ಈ ಚೌಕಟ್ಟು ಶಾಲಾ ಶಿಕ್ಷಣದ ಎಲ್ಲ ಆಯಾಮಗಳನ್ನೂ ವ್ಯಾಪಕವಾಗಿ ಒಳಗೊಳ್ಳುತ್ತದೆ. ಶಾಲಾ ಶಿಕ್ಷಣದ ಇತರ ಅನೇಕ ನಿರ್ದಿಷ್ಟ ಮತ್ತು ಪ್ರಮುಖ ವಿಚಾರಗಳನ್ನು ಎನ್‌ಸಿಎಫ್‌ ಹೇಗೆ ನಿರ್ವಹಿಸುತ್ತದೆ ಹಾಗೂ ಅವುಗಳ ಸುಧಾರಣೆಗೆ ಇದು ಯಾವ ರೀತಿ ಸಹಾಯಕವಾಗಲಿದೆ ಎಂಬುದು ಮುಂದೆ ತಿಳಿಯುತ್ತಾ ಹೋಗುತ್ತದೆ.

ಲೇಖಕ: ಸಿಇಒ, ಅಜೀಂ ಪ್ರೇಮ್‌ಜಿ ಫೌಂಡೇಷನ್

ಅನುರಾಗ್ ಬೆಹರ್ 
ಅನುರಾಗ್ ಬೆಹರ್ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT