ಕಳೆದ ಐದಾರು ವರ್ಷಗಳಿಂದ ಕರ್ನಾಟಕದಲ್ಲಿ ಶಾಲಾ ಶಿಕ್ಷಣ ವರ್ಷದಿಂದ ವರ್ಷಕ್ಕೆ ಅಧೋಗತಿಗೆ ತಲುಪುತ್ತಿರುವುದು, ಶಿಕ್ಷಣ ಇಲಾಖೆಯ ತೀರ್ಮಾನ ಮತ್ತು ಕಾರ್ಯಕ್ರಮಗಳಿಂದ ಸಾಬೀತಾಗಿದೆ. ಕೋವಿಡ್ ಸಾಂಕ್ರಾಮಿಕ ರೋಗದಿಂದ ಉಂಟಾದ ಬಿಕ್ಕಟ್ಟಿನ ಅವಧಿ (2019–2023), ಇಡೀ ಶಿಕ್ಷಣ ವ್ಯವಸ್ಥೆಯನ್ನು ಹತ್ತಾರು ವರ್ಷಗಳಷ್ಟು ಹಿಂದಕ್ಕೆ ಕೊಂಡೊಯ್ದಿತು. ಕೊರೊನಾ ಅವಧಿ, ಅಲ್ಲಿಯವರೆಗೆ ಸಾಧಿಸಿದ್ದ ಸ್ವಲ್ಪಮಟ್ಟಿಗಿನ ಯಶಸ್ಸನ್ನೂ ಕಸಿಯಿತು. ಇದೇ ಸಂದರ್ಭದಲ್ಲಿ ಸಾಂಕ್ರಾಮಿಕ ರೋಗವು, ಶಿಕ್ಷಣ ವ್ಯವಸ್ಥೆಯ ಸಮರ್ಥ ನಿರ್ವಹಣೆಯಲ್ಲಿ ವಿವಿಧ ಪಾಲುದಾರರು, ಅಂದರೆ – ಸರ್ಕಾರ, ಶಿಕ್ಷಣ ಸಂಸ್ಥೆಗಳು, ಶಿಕ್ಷಕರು, ಪೋಷಕರು ಮತ್ತು ವಿದ್ಯಾರ್ಥಿಗಳ ನಡುವಿನ ಸಹಯೋಗ ಮತ್ತು ಪಾಲುದಾರಿಕೆಗಳ (ಭಾರತದ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು) ಮಹತ್ವವನ್ನು ಎತ್ತಿ ತೋರಿಸಿತು (ಮೆಹ್ತ, 2021). ಇದರಿಂದ ಹೆಚ್ಚೇನೂ ಪಾಠ ಕಲಿಯದ ನಾವು, ಮಾನವನಿಗೆ ಮಾರಕವಾಗಿದ್ದ ಕೊರೊನಾವನ್ನು ಲೆಕ್ಕಿಸದೆ, ಒಂದು ನಿರ್ದಿಷ್ಟ ನಂಬಿಕೆಯ ರಾಜಕೀಯ ಅವಶ್ಯಕತೆಗೆ ಶಿಕ್ಷಣವನ್ನು ಬಳಸಿಕೊಂಡು, ಇಡೀ ಶಿಕ್ಷಣದ ಉದ್ದೇಶ ಮತ್ತು ಕಲಿಕಾ ವಿಷಯವನ್ನು ಪಲ್ಲಟಗೊಳಿಸಿದೆವು. ಆ ಮೂಲಕ ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರವನ್ನು ಅಧೋಗತಿಗೆ ಕೊಂಡೊಯ್ದಿದ್ದು ಇತಿಹಾಸ.

ಶಿಕ್ಷಣವನ್ನು ಉತ್ತಮ ಸ್ಥಿತಿಗೆ ತರುವ ಭರವಸೆಯ ಮೂಲಕ ಅಧಿಕಾರಕ್ಕೆ ಬಂದ ಹೊಸ ಸರ್ಕಾರ, ಕಳೆದ ಎರಡು ವರ್ಷಗಳಲ್ಲಿ ಉತ್ತಮ ಸ್ಥಿತಿಗೆ ತರುವುದು ಇರಲಿ, ಮನಸೋಇಚ್ಛೆ ಬದಲಾವಣೆಗಳ ಮೂಲಕ ಶಿಕ್ಷಣದ ಮೂಲ ಉದ್ದೇಶವನ್ನೇ ಮೂಲೆಗುಂಪಾಗಿಸಿದೆ. ರಾಷ್ಟ್ರೀಯ ಕಾಂಗ್ರೆಸ್, ಕಳೆದ ಲೋಕಸಭಾ ಚುನಾವಣೆಯ (2024) ಪ್ರಣಾಳಿಕೆಯಲ್ಲಿ– ಶಿಕ್ಷಣ ಒಂದು ಸಾರ್ವಜನಿಕ ಒಳಿತಾಗಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಗೂ ರಾಜ್ಯವು ಒದಗಿಸಲೇಬೇಕಾದ ಗುಣಮಟ್ಟದ ಉಚಿತ ಶಿಕ್ಷಣದ ಹಕ್ಕಿದೆ, ಶಾಲಾ– ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ಪ್ರಧಾನವಾಗಿ ಸಾರ್ವಜನಿಕ ಸಂಪನ್ಮೂಲಗಳಿಂದ ನಿಧಿಯನ್ನು ಪಡೆಯುವ ಸಾರ್ವಜನಿಕ ಸಂಸ್ಥೆಗಳಾಗಿರಬೇಕು ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳು ಪೂರಕ ಪಾತ್ರವನ್ನು ವಹಿಸುತ್ತವೆ ಎಂದು ನಾವು ಗುರುತಿಸುತ್ತೇವೆ ಎಂಬ ಮುಂಗಾಣ್ಕೆಯ ಆಶಯವನ್ನು ವ್ಯಕ್ತಪಡಿಸಿತ್ತು. ರಾಜ್ಯ ಸರ್ಕಾರ ಕನಿಷ್ಠ ಆ ಮುಂಗಾಣ್ಕೆಯನ್ನು ಗುರಿಯನ್ನಾಗಿಸಿಕೊಂಡು ಕಾರ್ಯ ನಿರ್ವಹಿಸಬಹುದಿತ್ತು.

ಶಿಕ್ಷಣ ಎನ್ನುವುದು ಬರೀ ಸಾಕ್ಷರತೆ ಮತ್ತು ಅದು ಸಾಧಿಸಿದ ಪ್ರಗತಿಯನ್ನು ಅಳೆಯುವ ಒಂದಷ್ಟು ಪರೀಕ್ಷೆಗಳನ್ನು ನಡೆಸುವ ಪ್ರಕ್ರಿಯೆಯಲ್ಲ. ಒಂದು ರಾಜ್ಯದಲ್ಲಿನ ಶಿಕ್ಷಣ ಮತ್ತು ಕಲಿಕಾ ವ್ಯವಸ್ಥೆ, ಅಲ್ಲಿನ ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಅಭಿವೃದ್ಧಿಯ ಸೂಚ್ಯಂಕ. ಸಂವಿಧಾನದ ಆಶಯದಂತೆ ಸಮಸಮಾಜವನ್ನು ಕಟ್ಟಿಕೊಳ್ಳುವ ಪ್ರಕ್ರಿಯೆಗೆ ಅಗತ್ಯ ಮಾನವ ಸಂಪನ್ಮೂಲಗಳ ರೂಪರೇಷೆಯನ್ನು ನಿರ್ಧರಿಸುವ ದಿಕ್ಸೂಚಿ.

ಇತ್ತೀಚೆಗೆ, ಗುಣಮಟ್ಟದ ಸುಧಾರಣೆಯೆಂದರೆ ಪರೀಕ್ಷೆಗಳ ಸಂಖ್ಯೆ ಹೆಚ್ಚಿಸುವುದು (ಈಗ ನಾವು ವರ್ಷಕ್ಕೆ ಮೂರು ಸಾರ್ವತ್ರಿಕ ಪರೀಕ್ಷೆಗಳನ್ನು ನಡೆಸುತ್ತೇವೆ); ಮೌಲ್ಯಮಾಪನ ವಿಧಾನಗಳನ್ನು ಮತ್ತಷ್ಟು ಸಂಕೀರ್ಣಗೊಳಿಸುವುದು; (ಉದಾಹರಣೆಗೆ, ಶಿಕ್ಷಣ ಇಲಾಖೆ ಹೊಸದಾಗಿ ಜಾರಿಗೊಳಿಸಿರುವ ಪಾಠ ಆಧಾರಿತ ಮೌಲ್ಯಮಾಪನದ– ಎಲ್ಬಿಎ– ಅನ್ವಯ, ಶಿಕ್ಷಕರು ಹೇಳುವಂತೆ 4ರಿಂದ 8ನೇ ತರಗತಿಯವರೆಗೆ 364 ಪಾಠಗಳಿದ್ದು, 364 ಪರೀಕ್ಷೆ, 364 ಮೌಲ್ಯಮಾಪನ, 364 ವಿಶ್ಲೇಷಣೆ ಹಾಗೂ 364 ದಾಖಲೀಕರಣ ಪ್ರಕ್ರಿಯೆ ಮಾಡಬೇಕಾಗುತ್ತದೆ) ಮತ್ತು ಅಂಕ ಕೇಂದ್ರಿತ ಫಲಿತಾಂಶವೇ ಗುಣಮಟ್ಟ ಎಂದು ಪರಿಭಾವಿಸಿ ಅಂಕದಾಟವಾಡುವುದು; ಅಂದರೆ, ವಿದ್ಯಾರ್ಥಿ 35 ಅಂಕ ಗಳಿಸಬೇಕೋ ಅಥವಾ 33 ಅಂಕ ಸಾಕೋ? 33ರಲ್ಲಿ ಆಂತರಿಕ ಮೌಲ್ಯಮಾಪನದ ಅಂಕವೆಷ್ಟು, ಬಾಹ್ಯ ಮೌಲ್ಯಮಾಪನದ ಅಂಕವೆಷ್ಟು? ಈ ಅಂಶಗಳೇ ಶಿಕ್ಷಣದ ಗುಣಮಟ್ಟದ ಮಾನದಂಡಗಳಾಗಿ ಇರುವುದು ಆತಂಕಕಾರಿ.

ನಕಾರಾತ್ಮಕ ಬೆಳವಣಿಗೆಗಳ ಬಗ್ಗೆ ಯುನೆಸ್ಕೊ, ‘ನಮ್ಮ ಭವಿಷ್ಯವನ್ನು ಒಟ್ಟಾಗಿ ಮರುಕಲ್ಪಿಸಿಕೊಳ್ಳಲು: ಶಿಕ್ಷಣಕ್ಕಾಗಿ ಹೊಸ ಸಾಮಾಜಿಕ ಒಪ್ಪಂದ’ ಎಂಬ ಪ್ರಕಟಣೆಯಲ್ಲಿ ವಿವರವಾಗಿ ಚರ್ಚಿಸಿದೆ. ಶಿಕ್ಷಣ, ಸಮಾಜದ ಒಳಿತಿಗಾಗಿ ಸಹಕರಿಸಲು ಸಮಾಜದ ಸದಸ್ಯರ ನಡುವಿನ ಒಂದು ಸೂಚ್ಯ ಅಂತರ್ಗತ ಸಾಮಾಜಿಕ ಒಪ್ಪಂದ. ಈ ಸಾಮಾಜಿಕ ಒಪ್ಪಂದ ಕೇವಲ ಶಿಕ್ಷಣದ ಒಂದು ವಹಿವಾಟು ಆಗಿರದೆ, ಶಾಸನಬದ್ಧವಾದ ಮತ್ತು ಸಾಂಸ್ಕೃತಿಕವಾಗಿ ಹುದುಗಿಸಲಾದ ರೂಢಿ, ಬದ್ಧತೆ ಮತ್ತು ಸಾಮಾಜಿಕ ತತ್ವಗಳನ್ನು ಪ್ರತಿಬಿಂಬಿಸುತ್ತದೆ. ಸಾರ್ವಜನಿಕ ಉದ್ದೇಶದ ಒಪ್ಪಿತ ಮುಂಗಾಣ್ಕೆ ಶಿಕ್ಷಣದ ಪ್ರಾರಂಭಿಕ ಹೆಜ್ಜೆ.

20ನೇ ಶತಮಾನದಲ್ಲಿ, ಸಾರ್ವಜನಿಕ ಶಿಕ್ಷಣವು ಮಕ್ಕಳಿಗೆ ಕಡ್ಡಾಯ ಶಾಲಾ ಶಿಕ್ಷಣದ ಮೂಲಕ ಶಿಕ್ಷಣವನ್ನು ಒಂದು ಮೂಲಭೂತ ಹಕ್ಕನ್ನಾಗಿಸಿ, ಪೌರತ್ವ ಮತ್ತು ಅಭಿವೃದ್ಧಿ ಪ್ರಯತ್ನಗಳನ್ನು ಬೆಂಬಲಿಸುವ ಗುರಿಯನ್ನು ಹೊಂದಿತ್ತು. ಇಂದು, 21ನೇ ಶತಮಾನದಲ್ಲಿ ಮಾನವೀಯತೆ ಹಾಗೂ ಮಾನವೀಯ ಮೌಲ್ಯಗಳು ದೊಡ್ಡ ಬಿಕ್ಕಟ್ಟಿನಲ್ಲಿವೆ. ಜೀವರಾಶಿಯನ್ನು ಬೆಂಬಲಿಸುವ ಏಕೈಕ ಗ್ರಹದ ಭವಿಷ್ಯಕ್ಕೆ ಗಂಭೀರ ಅಪಾಯಗಳು ಎದುರಾಗಿವೆ. ಸಾಮಾಜಿಕ, ಆರ್ಥಿಕ ಅಸಮಾನತೆ ದಿನದಿಂದ ದಿನಕ್ಕೆ ದೊಡ್ಡದಾಗುತ್ತಿದೆ. ಈ ಎಲ್ಲಾ ಸವಾಲುಗಳನ್ನು ಎದುರಿಸಲು ನಾವು ತುರ್ತಾಗಿ ಶಿಕ್ಷಣವನ್ನು ಮರುಶೋಧಿಸಬೇಕಿದೆ. ಈ ಹಿನ್ನೆಲೆಯಲ್ಲಿ, ನಾವು ಶಿಕ್ಷಣದ ಬಗ್ಗೆ ಕೇಳಬೇಕಾದ ಮೂರು ಅಗತ್ಯ ಪ್ರಶ್ನೆಗಳಿವೆ: ನಾವು ಯಾವುದನ್ನು ಮುಂದುವರಿಸಬೇಕು? ಏನನ್ನು ಕೈಬಿಡಬೇಕು? ಹೊಸದಾಗಿ ಏನನ್ನು ಸೃಜನಾತ್ಮಕವಾಗಿ ಆವಿಷ್ಕರಿಸಬೇಕು? (ಯುನೆಸ್ಕೊ, 2021).

ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ ನಡೆಸಲಾದ ಬಹುಪಾಲು ಅಧ್ಯಯನಗಳು– ಪರೀಕ್ಷೆಗಳು ಕಂಠಪಾಠ ಉತ್ತೇಜಿಸಿವೆ, ಒತ್ತಡವನ್ನು ಹೆಚ್ಚಿಸಿವೆ ಮತ್ತು ಕಲಿಕೆಯ ಸೃಜನಶೀಲತೆಯನ್ನು ನಿರ್ಬಂಧಿಸಿವೆ ಎಂದು ಹೇಳಿವೆ. ಜೊತೆಗೆ, ಪರೀಕ್ಷೆಗಳು ಗ್ರಾಮೀಣ ಹಾಗೂ ನಗರ ವಿದ್ಯಾರ್ಥಿಗಳ ನಡುವೆ, ಸರ್ಕಾರಿ ಹಾಗೂ ಖಾಸಗಿ ಶಾಲೆಗಳ ವಿದ್ಯಾರ್ಥಿಗಳ ನಡುವೆ ಕಂದರ ಸೃಷ್ಟಿಸಿವೆ. ಗುಣಮಟ್ಟದ ಕಲಿಕೆ ಕೇವಲ ಮೌಲ್ಯಮಾಪನಕ್ಕೆ ಸೀಮಿತವಾದ ವಿಷಯವಲ್ಲ. ಅಂಕಗಳಿಗೆ ಸೀಮಿತವೂ ಅಲ್ಲ. ಪರಿಣಾಮಕಾರಿ ಗುಣಾತ್ಮಕ ಕಲಿಕೆಯೆಂದರೆ; ಕಲಿತ ವಿಷಯವನ್ನು ಜೀವನದಲ್ಲಿ ಬಳಸುವ ಸಾಮರ್ಥ್ಯ, ಪ್ರಜಾಸತ್ತಾತ್ಮಕ ಸಂಭಾಷಣೆ, ಶಿಕ್ಷಕ– ವಿದ್ಯಾರ್ಥಿಗಳು– ಸಮುದಾಯದ ನಡುವಿನ ಸಹಭಾಗಿತ್ವ, ಸಹಬಾಳ್ವೆ, ಆಲೋಚನೆ ಮತ್ತು ಪ್ರಶ್ನಿಸುವ ಸಾಮರ್ಥ್ಯ, ನ್ಯಾಯ–ಸತ್ಯದ ಪರ ನಿಲ್ಲುವುದು. ಇದು ಸಾಧ್ಯವಾಗಬೇಕಾದರೆ ಸೃಜನಶೀಲ ಕಲಿಕೆಗೆ ಉತ್ತೇಜನ, ಸಂವೇದನಾಶೀಲತೆ ಮತ್ತು ಮಾನವೀಯ ಮೌಲ್ಯಬೋಧನೆ ಕಲಿಕೆಯ ವಿಧಾನವಾಗಬೇಕು. ಶಿಕ್ಷಣವು ಒಂದು ಮಾನವೀಯ ಸಮಸಮಾಜವನ್ನು ನಿರ್ಮಿಸಲು ವಿದ್ಯಾರ್ಥಿಗಳನ್ನು ಅಣಿಗೊಳಿಸುತ್ತಿದೆಯೇ ಎಂಬುದು ಮೌಲ್ಯಮಾಪನ ಆಗಬೇಕು.

ಶಿಕ್ಷಕರನ್ನು ಬರೀ ಕಲಿಕೇತರ ಕೆಲಸ ನಿರ್ವಹಿಸುವ ಸರ್ಕಾರಿ ನೌಕರರಂತೆ ನೋಡದೆ– ಕಲಿಕೆ, ಕ್ರಿಯಾ ಸಂಶೋಧನೆ, ಕಲಿಕೆಯನ್ನು ಉದ್ದೀಪಿಸುವ ಮಾರ್ಗದರ್ಶಕರಾಗಿ ಮತ್ತು ಕಲಿಕೆಯನ್ನು ಪ್ರಜಾಸತ್ತಾತ್ಮಕವಾಗಿ ಕೊಡು–ಕೊಳ್ಳುವಿಕೆ ಮೂಲಕ ಸಮನ್ವಯಗೊಳಿಸುವ ಸಂವಹನಕಾರರಾಗಿ ಕಾರ್ಯ ನಿರ್ವಹಿಸಲು ಅವಕಾಶ ಮಾಡಿಕೊಡಬೇಕು. ಎಲ್ಲವನ್ನೂ ಮೇಲಿಂದಲೇ ತೀರ್ಮಾನಿಸಿ, ಶಿಕ್ಷಕರನ್ನು ಅನುಷ್ಠಾನಗೊಳಿಸುವ ಯಂತ್ರಗಳಂತೆ ನಡೆಸಿಕೊಳ್ಳುವುದನ್ನು ಮೊದಲು ನಿಲ್ಲಿಸಬೇಕು. ಶಿಕ್ಷಕರ ಮೇಲಿನ ಕನಿಷ್ಠ ನಂಬಿಕೆ ಹಾಗೂ ವಿಶ್ವಾಸ ಕಲಿಕಾ ಪ್ರಕ್ರಿಯೆಗೆ ವೇಗವರ್ಧಕವಾಗುವುದರಲ್ಲಿ ಸಂದೇಹವಿಲ್ಲ.

ಡಾರ್ಲಿಂಗ್ ಹ್ಯಾಮ್ಮಂಡ್ ಅವರ ಪ್ರಕಾರ, ಫಿನ್ಲೆಂಡ್, ಕೆನಡಾ, ಜಪಾನ್ ಮುಂತಾದ ದೇಶಗಳು ಶಿಕ್ಷಕರ ಸಬಲೀಕರಣಕ್ಕಾಗಿ ಮಾಡಿರುವ ಪ್ರಯತ್ನಗಳು ಅಲ್ಲಿನ ಶಿಕ್ಷಣದ ಗುಣಮಟ್ಟವನ್ನು ಅತ್ಯುತ್ತಮ ಮಟ್ಟಕ್ಕೆ ಕೊಂಡೊಯ್ದಿವೆ. ಭಾರತದಲ್ಲಿ ಸರ್ಕಾರಿ ಶಿಕ್ಷಕರನ್ನು ನಿರಂತರ ಕಲಿಕೇತರ ಕೆಲಸದ ಒತ್ತಡದಲ್ಲಿ ಇಟ್ಟಿರುವ ಕಾರಣ, ಅದು ಮಕ್ಕಳ ಗುಣಾತ್ಮಕ ಶಿಕ್ಷಣದ ಮೇಲೆ ನಕಾರಾತ್ಮಕ ಪ್ರಭಾವ ಬೀರಿದೆ.

ಇಲ್ಲಿ ಪ್ರಸ್ತಾಪಿಸಲೇಬೇಕಾದ ಮತ್ತೊಂದು ಮುಖ್ಯ ವಿಷಯ, ಕಲಿಕೆಗೆ ಪೂರಕವಾದ ಮೂಲಸೌಕರ್ಯಗಳಿಲ್ಲದೆ ಯಾವುದೇ ಗುಣಮಟ್ಟದ ಕನಸು ಸಾಧ್ಯವಿಲ್ಲ ಎನ್ನುವುದು. ಕನಿಷ್ಠ ಸೌಲಭ್ಯಗಳಾದ, ಉತ್ತಮ ಸ್ಥಿತಿಯಲ್ಲಿನ ಕಟ್ಟಡ, ಅಗತ್ಯ ಸಂಖ್ಯೆಯ ಶಿಕ್ಷಕರು, ಶುದ್ಧ ಕುಡಿಯುವ ನೀರು, ಶೌಚಾಲಯ, ವಿದ್ಯುಚ್ಛಕ್ತಿ, ಆಟದ ಮೈದಾನ, ಗುಣಮಟ್ಟದ ಪಠ್ಯಪುಸ್ತಕ ಹಾಗೂ ವರ್ಕ್ ಪುಸ್ತಕ, ಪಾಠೋಪಕರಣ, ಗ್ರಂಥಾಲಯ, ಪ್ರಯೋಗಾಲಯ, ಪೀಠೋಪಕರಣ, ಕ್ರೀಡಾ ಸಾಮಗ್ರಿ, ಇತ್ಯಾದಿಗಳು ಕಲಿಕಾ ಸ್ವರೂಪ ಮತ್ತು ಗುಣಮಟ್ಟವನ್ನು ನಿರ್ಧರಿಸುವಲ್ಲಿ ನಿರ್ಣಾಯಕ ಮೂಲಾಧಾರಗಳಾಗುತ್ತವೆ. ಶಿಕ್ಷಣ ಹಕ್ಕು ಕಾಯ್ದೆಯಲ್ಲಿ (2009) ಇವೆಲ್ಲವನ್ನು ಸವಿವರವಾಗಿ ನಿಗದಿಪಡಿಸಲಾಗಿದೆ. ಈ ಅಂಶಗಳನ್ನು ಸರಿಪಡಿಸದೆ, ಕೇವಲ ಪರೀಕ್ಷೆಗಳ ಸಂಖ್ಯೆಯ ಹೆಚ್ಚಳ, ಶೇಕಡಾವಾರು ಅಂಕದ ಇಳಿಕೆ, ಪಾಠ ಆಧಾರಿತ ಮೌಲ್ಯಮಾಪನ, ಪ್ರಶ್ನೆಪತ್ರಿಕೆಯನ್ನು ಸುಲಭಗೊಳಿಸುವುದು, ಶಿಕ್ಷಕರ ಮೇಲೆ ಅನಗತ್ಯ ಪ್ರಹಾರ ಮಾಡುವುದರಿಂದ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲಾಗದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.