ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ಪುಂಡುಗಂದಾಯ ಪ್ರಸ್ತಾಪ: ಸಾಧ್ಯಾಸಾಧ್ಯತೆ

ಮಹಿಳೆ ಮೇಲೆ ದೌರ್ಜನ್ಯ: ಮೂಕಪ್ರೇಕ್ಷಕರಿಗೊಂದು ಗುದ್ದು
Published 26 ಡಿಸೆಂಬರ್ 2023, 23:24 IST
Last Updated 26 ಡಿಸೆಂಬರ್ 2023, 23:24 IST
ಅಕ್ಷರ ಗಾತ್ರ

ಬೆಳಗಾವಿ ತಾಲ್ಲೂಕಿನ ಹೊಸ ವಂಟಮೂರಿ ಗ್ರಾಮದಲ್ಲಿ ಗುಂಪೊಂದು ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿ
ದ್ದಲ್ಲದೆ, ಅವರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿದ ಪ್ರಕರಣವು ನಾಗರಿಕತೆಗೇ ಸಡ್ಡು ಹೊಡೆಯು
ವಂತಹದ್ದು. ಈ ಅಮಾನುಷ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ, ಹೈಕೋರ್ಟ್‌ನ ಮುಖ್ಯ ನ್ಯಾಯ ಮೂರ್ತಿ ಪಿ.ಬಿ.ವರಾಳೆ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರನ್ನು ಒಳಗೊಂಡ ವಿಭಾಗೀಯ ನ್ಯಾಯಪೀಠವು ಈ ಕುರಿತು ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡು ವಿಚಾರಣೆ
ನಡೆಸುತ್ತಿರುವುದು ಶ್ಲಾಘನೀಯ.

ಈ ಪ್ರಕರಣದ ಸಂಬಂಧ ಇದೇ ತಿಂಗಳ 18ರಂದು ನಡೆದ ವಿಚಾರಣೆಯ ವೇಳೆ ನ್ಯಾಯಪೀಠವು ‘ಪುಂಡುಗಂದಾಯ’ದ ಸಂಗತಿಯನ್ನು ಪ್ರಸ್ತಾಪಿಸಿದೆ. ಇದು, ನಿಜಕ್ಕೂ ವಿಚಾರ ಪ್ರಚೋದಕ ಚಿಂತನೆಯನ್ನು ಪ್ರೇರೇಪಿಸುವಂತಿದೆ. ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ, ಕಳ್ಳತನ ಅಥವಾ ದಾಂದಲೆ ನಡೆದರೆ, ಅಂತಹ ಪ್ರಕರಣಗಳು ನಡೆಯುವುದಕ್ಕೆ ಅವಕಾಶ ಮಾಡಿಕೊಟ್ಟ ಅಥವಾ ಅವುಗಳನ್ನು ತಪ್ಪಿಸಲು ಯಾವುದೇ
ಪ್ರಯತ್ನವನ್ನೂ ಮಾಡದ ಕಾರಣಕ್ಕೆ ಇಡೀ ಊರಿಗೆ ‘ಪುಂಡುಗಂದಾಯ’ವನ್ನು ವಿಧಿಸಿ ಶಿಕ್ಷೆಗೆ ಒಳಪಡಿ
ಸಲಾಗುತ್ತಿತ್ತು. ಅಂತಹ ಒಂದು ಕಾಯ್ದೆಯನ್ನು ಗವರ್ನರ್ ಜನರಲ್‌ ವಿಲಿಯಮ್ ಬೆಂಟಿಂಕ್ ಜಾರಿಗೆ ತಂದಿದ್ದ.

ಹೊಸ ವಂಟಮೂರಿ ಗ್ರಾಮದಲ್ಲಿ ನಡೆದಂತಹ ಪ್ರಕರಣದಲ್ಲಿಯೂ ಇಂತಹದ್ದೊಂದು ಕ್ರಮ ಅವಶ್ಯ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಪೀಠವು ಸಾತ್ವಿಕ ಸಿಟ್ಟನ್ನು ಹೊರಹಾಕಿದೆ. ‍ಪ್ರಕರಣ ನಡೆಯುವಾಗ ಮೂಕಪ್ರೇಕ್ಷಕರಾಗಿ ನಿಂತಿದ್ದ ಗ್ರಾಮಸ್ಥರ ಮೇಲೆ ‘ಪುಂಡುಗಂದಾಯ’ ವಿಧಿಸಬೇಕೆಂಬ ಇರಾದೆಯನ್ನು
ವ್ಯಕ್ತಪಡಿಸಿದೆ. ಈ ಕ್ರಮವು ಇಂತಹ ಪ್ರಕರಣಗಳನ್ನು ಹತ್ತಿಕ್ಕಲೇಬೇಕಾದ ಅನಿವಾರ್ಯಕ್ಕೆ ಪೂರಕವಾಗಿ ಇರಲಿದೆ ಎಂದು ಅದು ಹೇಳಿದೆ. ಈ ಮೂಲಕ, ಬೆಂಟಿಂಕ್‌ನ ‘ಸಾಮೂಹಿಕ ಅಸ್ತ್ರ’ವನ್ನು ಎತ್ತಿಹಿಡಿದಿದೆ.

ಪ್ರಸ್ತುತ ಕಾನೂನಿನ ಚೌಕಟ್ಟಿನಲ್ಲಿ ಪುಂಡುಗಂದಾಯವನ್ನು ಕಾರ್ಯರೂಪಕ್ಕೆ ತರುವಂತಹ ಯಾವುದೇ ಕಾಯ್ದೆ ಅಥವಾ ಸಂಹಿತೆಗೆ ಅವಕಾಶವಿಲ್ಲ. ಆದರೂ ಪುಂಡುಗಂದಾಯದ ಮಾದರಿಯ ಬೇರೆ ಶಿಕ್ಷೆಯನ್ನು ಜಾರಿಗೆ ತರಬೇಕೆಂದು ನ್ಯಾಯಪೀಠ ಮುಕ್ತ ಅಭಿಪ್ರಾಯ ವ್ಯಕ್ತಪಡಿಸಿದೆ. ಈ ಕ್ರಮಕ್ಕೆ ಚಾಲನೆ ನೀಡುವಂತಹ ಕಾನೂನನ್ನು ರೂಪಿಸುವುದಕ್ಕೆ ಇರುವ ಸಾಧ್ಯತೆಯನ್ನು ಪರಿಶೀಲಿಸುವಂತೆಯೂ ಅದು ಶಾಸಕಾಂಗಕ್ಕೆ ಸೂಚನೆ ನೀಡಿದೆ.

ಇಲ್ಲಿ ನಮಗೆ ನೆನಪಾಗಬೇಕಾದದ್ದು, ದಂಡ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ)– 1973ರ ಸೆಕ್ಷನ್ 39. ಇದರ ಪ್ರಕಾರ, ಭಾರತೀಯ ದಂಡ ಸಂಹಿತೆ– 1860ರಲ್ಲಿ (ಐಪಿಸಿ) ರಾಜ್ಯದ ವಿರುದ್ಧದ ಅಪರಾಧಗಳು, ಸಾರ್ವಜನಿಕ ನೆಮ್ಮದಿಗೆ ಭಂಗ ತರುವಂಥ ಅಪರಾಧಗಳು, ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡವರು ಅಥವಾ ಅವರಿಗೆ ಸಂಬಂಧಿಸಿದ ಅಪರಾಧಗಳು, ವ್ಯಕ್ತಿಯನ್ನು ಅಪಹರಿಸಿ ಬಂಧನದಲ್ಲಿ ಇರಿಸಿಕೊಂಡು, ಬಿಡುಗಡೆಗೆ ಹಣದ ಬೇಡಿಕೆ ಇಡುವುದು, ಕಳವು ಮಾಡುವ ಸಲುವಾಗಿ ಕೊಲೆ ಮಾಡಲು ಅಥವಾ ಗಾಯಗೊಳಿಸಲು ಸಿದ್ಧತೆ ನಡೆಸುವುದು, ಸುಲಿಗೆ, ದರೋಡೆ, ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿ ಕೊಂಡವರು ಹಾಗೂ ಇತರರಿಂದ ನಡೆಯುವ ಯಾವುದೇ ಅಪರಾಧ ಅಥವಾ ನಂಬಿಕೆದ್ರೋಹ, ಆಸ್ತಿ ಹಾನಿಗೊಳಿಸುವುದು, ಗೃಹಾತಿಕ್ರಮಣ, ಹೊಂಚು ಹಾಕಿ ಗೃಹಾತಿಕ್ರಮಣ ಮಾಡುವುದು, ಕರೆನ್ಸಿ ನೋಟುಗಳಿಗೆ ಸಂಬಂಧಿಸಿದ ಯಾವುದಾದರೂ ಅಪರಾಧಗಳು ನಡೆದದ್ದು ಅಥವಾ ನಡೆಸುವುದಕ್ಕೆ ಸಂಚು ರೂಪಿಸಿರುವುದನ್ನು ಗಮನಿಸಿದವರು ಕೂಡಲೇ ಪೊಲೀಸ್ ಠಾಣೆಗೆ ಧಾವಿಸಿ, ತಾವು ಕಂಡ ಅಥವಾ ತಮಗೆ ಗೊತ್ತಾಗಿರುವ ವಿಷಯದ ಬಗ್ಗೆ ಮಾಹಿತಿಯನ್ನು ನೀಡಬೇಕು. ಇಲ್ಲವಾದರೆ, ಅಂತಹವರ ನಡೆಯು ಐಪಿಸಿ ಸೆಕ್ಷನ್ 202ರ ಪ್ರಕಾರ ಶಿಕ್ಷಾರ್ಹ ಅಪರಾಧ ಎನಿಸುತ್ತದೆ ಎಂಬುದನ್ನು ಈ ಸಂದರ್ಭದಲ್ಲಿ ಪರಿಗಣಿಸಬಹುದು.

‘ಒಂದು ಅಪರಾಧ ಜರುಗಿದೆಯೆಂದು ತಿಳಿದಿದ್ದೂ ಅಥವಾ ಅಪರಾಧ ಜರುಗಿದೆಯೆಂದು ನಂಬುವ ಸಂದರ್ಭವಿದ್ದೂ, ಉದ್ದೇಶಪೂರ್ವಕವಾಗಿ ಜರುಗಿರುವ ಅಪರಾಧದ ಮಾಹಿತಿ ಹೊಂದಿದ್ದೂ ಅಂತಹ ಅಪರಾಧದ ಬಗ್ಗೆ ಕಾನೂನಿನ ಅಡಿಯಲ್ಲಿ ಮಾಹಿತಿ ನೀಡಲೇಬೇಕಾದ ಅಗತ್ಯ ಇರುವಾಗ, ಸಂಬಂಧಪಟ್ಟ ವರಿಗೆ ಆ ಮಾಹಿತಿಯನ್ನು ನೀಡದೇ ಇರುವ ಸಾರ್ವಜನಿಕ ವ್ಯಕ್ತಿ ಅಥವಾ ಪ್ರಜೆಯು ಆರು ತಿಂಗಳಿನ ಕಾರಾಗೃಹವಾಸದ ಶಿಕ್ಷೆಯನ್ನು ಅನುಭವಿಸಬೇಕು’ ಎಂದು ಐಪಿಸಿಯ ಸೆಕ್ಷನ್ 202 ತಿಳಿಸುತ್ತದೆ. ಈ ಪ್ರಕ
ರಣದಲ್ಲಿ, ಮಹಿಳೆಯ ಮೇಲೆ ನಡೆಯುತ್ತಿದ್ದ ದೌರ್ಜನ್ಯಕ್ಕೆ ಪ್ರತ್ಯಕ್ಷ ಸಾಕ್ಷಿದಾರರಾಗಿದ್ದ ಗ್ರಾಮಸ್ಥರು ಆ ಮಾಹಿತಿಯನ್ನು ಪೊಲೀಸರಿಗೆ ನೀಡಬೇಕಾದ ತಮ್ಮ ಜವಾಬ್ದಾರಿಯನ್ನು ಮರೆತು ಮೂಕಪ್ರೇಕ್ಷಕರಂತೆ ನಿಂತಿದ್ದುದು, ಸೆಕ್ಷನ್ 202ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗುತ್ತದೆ.

ರಂಗರಾಜು ವರ್ಸಸ್‌ ಕರ್ನಾಟಕ ರಾಜ್ಯವನ್ನು ಒಳಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ, ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ಬಿ.ವೀರಪ್ಪ ಮತ್ತು ವೆಂಕಟೇಶ್ ಜಿ.ನಾಯಕ್ ಅವರಿದ್ದ ವಿಭಾಗೀಯ ನ್ಯಾಯಪೀಠವು ಕೆಲವು ತಿಂಗಳ ಹಿಂದೆ ಮಹತ್ವದ ಆದೇಶವೊಂದನ್ನು ನೀಡಿದೆ. ಆ ಸಂದರ್ಭದಲ್ಲಿ, ‘ಶವಸಂಭೋಗ’ವನ್ನು ಒಂದು ಅಪರಾಧವನ್ನಾಗಿ ಪರಿಗಣಿಸುವಂತೆ ನ್ಯಾಯಪೀಠವು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಶಿಫಾರಸು ಮಾಡಿದೆ. ಇಂತಹ ಶಿಫಾರಸು ಹೊಸ ವಂಟಮೂರಿಯಲ್ಲಿ ನಡೆದಂತಹ ಪ್ರಕರಣಗಳಿಗೂ ಅನ್ವಯವಾಗುವುದು ಸೂಕ್ತ.

ಈ ಪ್ರಕರಣದಲ್ಲಿ, ಸಾರ್ವಜನಿಕವಾಗಿ ಮಹಿಳೆಯನ್ನು ವಿವಸ್ತ್ರಗೊಳಿಸಿ, ನಂತರ ಆಕೆಯ ಮೆರವಣಿಗೆ ನಡೆಸಿ ಪೌರುಷ ಮೆರೆದ ಗುಂಪಿಗೆ ನ್ಯಾಯಪೀಠವು ಬಹಳಷ್ಟು ಛೀಮಾರಿ ಹಾಕಿದೆ. ಅಲ್ಲದೆ, ಇಂತಹ ವಿಷಯಗಳಲ್ಲಿ ನಾಗರಿಕ ಸಮಾಜದ ವರ್ತನೆಯಲ್ಲಿ ಅತ್ಯಗತ್ಯವಾಗಿ ಆಗಲೇಬೇಕಾದ ಸುಧಾರಣೆಯ ಅಗತ್ಯವನ್ನೂ ಒತ್ತಿ ಹೇಳಿದೆ. ಅಪರಾಧಗಳು, ಅಕೃತ್ಯಗಳು ಜರುಗುವ ಸಂದರ್ಭಗಳಲ್ಲಿ ನೆರೆದವರು ಮೂಕಪ್ರೇಕ್ಷಕರಂತೆ ಇರುವುದು ಸರ್ವೇ ಸಾಮಾನ್ಯ ಎಂಬಂತಾಗಿರುವ ಬಗ್ಗೆ ನ್ಯಾಯಪೀಠ ವಿಷಾದ ವ್ಯಕ್ತಪಡಿಸಿದೆ. ಇಂತಹ ಘಟನಾವಳಿಗಳಿಗೂ ತಮಗೂ ಸಂಬಂಧವೇ ಇಲ್ಲ ಎಂಬಂತೆ ಮೌನ ಸಮ್ಮತಿ ರೂಢಿಸಿಕೊಂಡಿರುವ ಸಾಮಾಜಿಕ ಧೋರಣೆಯನ್ನು ಖಂಡಿಸಿದೆ.

ಮಹಿಳೆಯೊಬ್ಬರ ಮೇಲೆ ತಮ್ಮ ಕಣ್ಣೆದುರೇ ದೌರ್ಜನ್ಯ ನಡೆಯುತ್ತಿದ್ದರೂ ಸಾರ್ವಜನಿಕರ ಅಂತಃಕರಣ ಕಲಕದೇ ಇದ್ದುದನ್ನು ನ್ಯಾಯಪೀಠ ಗುರುತಿಸಿದೆ. ಅದರಲ್ಲೂ ಜನರಲ್ಲಿ ಸಾತ್ವಿಕ ಆಕ್ರೋಶದ ಗುಣ ಕಣ್ಮರೆ ಆಗುತ್ತಿರುವುದನ್ನು ಬಹುಮುಖ್ಯವಾಗಿ ಗಮನಿಸಿದೆ. ಅಂತೆಯೇ, ಸಾರ್ವಜನಿಕ ಕ್ಷೇತ್ರದ ಮುಖಂಡರು ಹಾಗೂ ರಾಜಕೀಯ ನೇತಾರರು ಇಂತಹ ಸೂಕ್ಷ್ಮ ವಿಚಾರಗಳಲ್ಲಿ ಹಮ್ಮಿಕೊಳ್ಳಬೇಕಾಗಿರುವ ಆಂದೋಲನದ ಪ್ರಾಮುಖ್ಯವನ್ನು ಒತ್ತಿ ಹೇಳುವುದನ್ನು ಅದು ಮರೆತಿಲ್ಲ.

ಇದರ ಪರಿಣಾಮವಾಗಿ ಹೊಸ ಕಾನೂನೊಂದು ಜಾರಿಗೆ ಬಂದು, ಅನ್ಯಾಯ ಕಣ್ಣೆದುರಿಗೆ ನಡೆಯುತ್ತಿದ್ದರೂ ಮೂಕಪ್ರೇಕ್ಷಕರಾಗುವವರನ್ನು ಸಹ ಶಿಕ್ಷೆಗೆ ಗುರಿಪಡಿಸುವ ಕ್ರಮವು ತಕ್ಷಣವೇ ಜಾರಿಯಾಗಬೇಕೆಂದು ಹೇಳಿದೆ. ಮಹತ್ತರ ಸದುದ್ದೇಶವನ್ನು ಗುರಿಯಾಗಿ ಇಟ್ಟುಕೊಂಡು, ಪುಂಡುಗಂದಾಯದ ಮಾದರಿಯಲ್ಲಿ ಶಿಕ್ಷೆ ವಿಧಿಸಲು ಅನುವಾಗಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡುವ ಮೂಲಕ ನ್ಯಾಯಪೀಠವು ತನ್ನ ಸಾಮಾಜಿಕ ಹೊಣೆಗಾರಿಕೆ ಯನ್ನು ಮೆರೆದಿದೆ.

ಸರ್ಕಾರ ಹಾಗೂ ಕೆಲವು ಸಂಸ್ಥೆಗಳು ಸಂತ್ರಸ್ತೆಗೆ ಹಣದ ನೆರವು ನೀಡಿರುವುದು ಹಾಗೂ ಸ್ಥಿರಾಸ್ತಿ
ಯನ್ನು ಕೊಡಮಾಡಿರುವುದು ಸಮಾಧಾನದ ಸಂಗತಿ. ಅಂದು ನಡೆದ ಆ ಕುಕೃತ್ಯವನ್ನು ಸುಮಾರು 60 ಜನ ನಿಂತು ನೋಡುತ್ತಿದ್ದಾಗ, ಜಹಾಂಗೀರ್‌ ಎಂಬ ವ್ಯಕ್ತಿ ಆ ಮಹಿಳೆಯ ರಕ್ಷಣೆಗೆ ಪ್ರಯತ್ನಿಸಿದ್ದಾರೆ. ಆದರೆ, ಆ ಕಾರಣಕ್ಕಾಗಿ ಆತ ಹಲ್ಲೆಗೆ ಒಳಗಾದರು ಎನ್ನಲಾಗಿದ್ದು, ಇದನ್ನು ಕೇಳಿದ ಎಂತಹವರ ಕಣ್ಣಾಲಿಯಲ್ಲೂ ನೀರಾಡದೇ ಇರದು. ದುರಂತವೆಂದರೆ, ಮಹಿಳೆಯ ಮಾನ ಕಾಪಾಡಲು ಜಹಾಂಗೀರ್ ಅವರು ಮಾಡಿದ ಪ್ರಯತ್ನವನ್ನು ಸರ್ಕಾರವಾಗಲೀ ಸಂಘ ಸಂಸ್ಥೆಗಳಾಗಲೀ ಈವರೆಗೆ ಗುರುತಿಸಿಲ್ಲ. ಆದಾಗ್ಯೂ, ಅರ್ಜಿ ವಿಲೇವಾರಿಗೂ ಮುನ್ನ ನ್ಯಾಯಪೀಠ ಇದನ್ನು ಗಮನಿಸುತ್ತದೆ ಎಂಬ ನಂಬಿಕೆ ನನಗಿದೆ. ಹೀಗಾದಲ್ಲಿ, ಕೋರ್ಟ್‌ಗಳ ಮೇಲೆ ಜನರಿಗೆ ಇರುವ ಭರವಸೆ ಖಂಡಿತ ಮತ್ತಷ್ಟು ಹೆಚ್ಚುತ್ತದೆ.

ಲೇಖಕ: ಹಿರಿಯ ವಕೀಲ, ಹೈಕೋರ್ಟ್‌

.
.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT