ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಣ್ಯ ಅತಿಕ್ರಮಣದ ನಾಲ್ಕನೇ ಆಯಾಮ

ನೈಜ ವನವಾಸಿಗಳನ್ನು ಭೂಕಬಳಿಕೆದಾರರಿಂದ ಬೇರ್ಪಡಿಸುವುದೇ ಸವಾಲು
Last Updated 3 ಮಾರ್ಚ್ 2019, 20:17 IST
ಅಕ್ಷರ ಗಾತ್ರ

ಅರಣ್ಯ ಹಕ್ಕು ಕಾಯ್ದೆಯ ಅನ್ವಯ ನೆಲದ ಮಾಲೀಕತ್ವವನ್ನು ಬಯಸಿ ದೇಶದಾದ್ಯಂತ ಅರ್ಜಿ ಸಲ್ಲಿಸಿದ್ದ ಸುಮಾರು ಹನ್ನೊಂದೂಮುಕ್ಕಾಲು ಲಕ್ಷ ಅರಣ್ಯ ಒತ್ತುವರಿದಾರರೀಗ ನಿಟ್ಟುಸಿರು ಬಿಟ್ಟಿದ್ದಾರೆ. ಅರಣ್ಯ ಹಕ್ಕು ಪರಿಶೀಲನಾ ಸಮಿತಿಗಳಿಂದ ತಿರಸ್ಕೃತವಾದ ಅರ್ಜಿದಾರರನ್ನು ಸ್ಥಳದಿಂದ ತೆರವುಗೊಳಿಸಬೇಕೆಂದು ಫೆಬ್ರುವರಿ 13ರಂದು ತಾನು ನೀಡಿದ್ದ ಆದೇಶಕ್ಕೆ, ಸುಪ್ರೀಂ ಕೋರ್ಟ್‌ ಫೆ. 28ರಂದು ತಡೆಯಾಜ್ಞೆ ನೀಡಿದೆ. ಭೂ ಒತ್ತುವರಿ ಮಾಡಿದ ಅಷ್ಟೊಂದು ಕುಟುಂಬಗಳನ್ನು ಒಮ್ಮೆಲೇ ತೆರವುಗೊಳಿಸುವುದು ತೀರಾ ಅಮಾನವೀಯವೂ ಅವಾಸ್ತವವೂ ಆದೀತೆನ್ನುವುದನ್ನು ಮನಗಂಡಿರುವ ನ್ಯಾಯಾಲಯದ ತೀರ್ಮಾನ ಸ್ವಾಗತಾರ್ಹ.

ಈ ಸಮಸ್ಯೆಯೇನೂ ದಿಢೀರ್ ಉಗಮವಾಗಿದ್ದಲ್ಲ. ಕಳೆದ ನಾಲ್ಕು ದಶಕಗಳಿಂದ ಸರ್ಕಾರಗಳು ತೋರಿದ ಬೇಜವಾಬ್ದಾರಿಯಿಂದಾಗಿ ಇದು ಇಷ್ಟೊಂದು ಬೃಹದಾಕಾರವಾಗಿ ಬೆಳೆದುನಿಂತಿದೆ. ಈ ವಿದ್ಯಮಾನಗಳನ್ನು ಆಳವಾಗಿ ವಿಶ್ಲೇಷಿಸಿದರೆ, ಅರಣ್ಯ ನಿರ್ವಹಣೆ ಕುರಿತಾದ ಸರ್ಕಾರದ ನೀತಿ ಮತ್ತು ಅದರ ಅನುಷ್ಠಾನದಲ್ಲಿನ ಅಂತರದ ತೀವ್ರತೆ ಅರಿವಾಗುತ್ತದೆ. ರಾಜ್ಯದಲ್ಲೀಗ ಸುಮಾರು ಒಂದೂಮುಕ್ಕಾಲು ಲಕ್ಷ ಅರಣ್ಯವಾಸಿಗಳ ಅರ್ಜಿಗಳು ತಿರಸ್ಕೃತವಾಗಿವೆಯಲ್ಲವೇ? ಅವರೆಲ್ಲರ ಸಮಾಜೋ-ಆರ್ಥಿಕ ಹಿನ್ನೆಲೆ ಹಾಗೂ ಕಾನೂನು ಅಂಶಗಳನ್ನು ಪರಿಶೀಲಿಸಿದರೆ, ಅರಣ್ಯ ಅತಿಕ್ರಮಣದಾರರಲ್ಲಿ ನಾಲ್ಕು ಪ್ರಮುಖ ಬಗೆಗಳನ್ನು ಕಾಣಬಹುದು.

ಮೊದಲಿನದು, 1978ಕ್ಕೂ ಹಿಂದಿನಿಂದಲೇ ವಾಸ ಮತ್ತು ಬೇಸಾಯಕ್ಕಾಗಿ ಅರಣ್ಯ ಪ್ರದೇಶವನ್ನು ಅವಲಂಬಿಸಿದ ರೈತವರ್ಗ. ವಿಶೇಷವಾಗಿ, ಮಲೆನಾಡಿನ ಕಣಿವೆಗಳಲ್ಲಿ ಒಂದೆರಡು ಎಕರೆ ಪ್ರದೇಶವನ್ನು ಮಾತ್ರ ಬಳಸಿಕೊಂಡು, ಪರಿಸರಸ್ನೇಹಿ ಬದುಕು ಕಟ್ಟಿಕೊಂಡ ಅಪ್ಪಟ ವನವಾಸಿಗಳು ಇವರು. 1980ರ ಅರಣ್ಯ ಸಂರಕ್ಷಣಾ ಕಾಯ್ದೆಯು ಜಾರಿಗೆ ಬರುವಾಗ, ಅವರು ಉಳುತ್ತಿರುವ ಹೊಲದ ಹಕ್ಕನ್ನು ಯಾವ ಷರತ್ತಿಲ್ಲದೇ ನೀಡಬೇಕೆಂದು ನಿರ್ಧಾರವಾಗಿತ್ತು. ಆ ಪ್ರಕಾರ ಹಲವರಿಗೆ ಭೂಮಿ ದೊರಕಿತಾದರೂ, ಸರ್ಕಾರದ ವಿಳಂಬದಿಂದಾಗಿ ಇನ್ನೂ ಹಲವರಿಗೆ ಮಂಜೂರಾಗಿಲ್ಲ. ಈ ರೈತರು ಕೇಳುತ್ತಿರುವ ಹಕ್ಕು ನ್ಯಾಯಯುತವಾದದ್ದು.

ಎರಡನೇ ಬಗೆಯೆಂದರೆ, ‘ಬಗರ್-ಹುಕುಂ’ ರೈತರು. ಸರ್ಕಾರಿ ಕಂದಾಯ ಭೂಮಿಯಲ್ಲಿ ಮನೆ ಕಟ್ಟಿಕೊಂಡು, ಬೇಸಾಯವನ್ನೂ ರೂಢಿಸಿಕೊಂಡಿರುವ ಕುಟುಂಬಗಳಿವು. 1990ರ ಪೂರ್ವದಿಂದಲೂ ಕಾನು, ಗೋಮಾಳದಂಥ ಕಂದಾಯ ಭೂಮಿಯಲ್ಲಿರುವ ಇಂಥ ರೈತರ ಹಿತ ಕಾಯಲು ಜಾರಿಯಾದದ್ದು ‘ಅಕ್ರಮ ಸಕ್ರಮ’ ಯೋಜನೆ. ಇದರ ಅನ್ವಯ ಅನೇಕರಿಗೆ ಭೂಮಿ ದೊರಕಿದರೂ, ದಾಖಲೆಗಳ ಕೊರತೆಯಿಂದಾಗಿಯೋ ಅಥವಾ ‘ಬಗರ್-ಹುಕುಂ’ ಸಮಿತಿಗಳ ರಾಜಕಾರಣದಿಂದಾಗಿಯೋ ಕೆಲವು ಅರ್ಹರಿಗೆ ಭೂಮಿಯ ಒಡೆತನವಿನ್ನೂ ಲಭಿಸಿಲ್ಲ. ಜೀವನೋಪಾಯಕ್ಕಾಗಿ ಅನ್ಯ ಜಮೀನೇ ಇಲ್ಲದ ಈ ಬಗೆಯ ರೈತರು ಅರಣ್ಯ ಹಕ್ಕು ಕಾಯ್ದೆಯಡಿ ಬೇಡಿಕೆ ಸಲ್ಲಿಸಿದ್ದರೆ ಅದೂ ನ್ಯಾಯಯುತವಾದುದೇ.

ಮೂರನೇ ಗುಂಪೆಂದರೆ, ಅರಣ್ಯ ಪ್ರದೇಶದಲ್ಲಿ ತಲೆತಲಾಂತರದಿಂದ ಬದುಕುತ್ತಿದ್ದರೂ, ಭೂಮಿಯ ಹಕ್ಕು ಇನ್ನೂ ದೊರೆಯದ ಬುಡಕಟ್ಟು ಹಾಗೂ ವನವಾಸಿಗಳ ವರ್ಗ. ಇವರಿಗಾದ ಚಾರಿತ್ರಿಕ ಅನ್ಯಾಯವನ್ನು ಸರಿಪಡಿಸುವ ಉದ್ದೇಶದಿಂದ 2006ರ ಅರಣ್ಯ ಹಕ್ಕು ಕಾಯ್ದೆ ಜಾರಿಯಾಯಿತಷ್ಟೆ. ಅದರ ಪ್ರಕಾರ, 2005ಕ್ಕೂ ಪೂರ್ವದಲ್ಲಿ ಕಾಡಿನಲ್ಲಿರುವ ಬುಡಕಟ್ಟು ಜನಾಂಗಗಳ ಕುಟುಂಬಗಳಿಗೆ ಭೂಮಿ ದೊರಕಬೇಕು. ಕರ್ನಾಟಕದಲ್ಲಿನ ಸಾವಿರಾರು ಅರ್ಹ ಕುಟುಂಬಗಳಿಗೆ ಈಗ ಈ ಹಕ್ಕು ಸಿಗುತ್ತಿದೆ. ಆದರೆ, ಗೌಳಿ, ಕುಣಬಿ, ಹಾಲಕ್ಕಿ ಸಮುದಾಯದಂಥ ಹಲವು ಅಪ್ಪಟ ಬುಡಕಟ್ಟು ವರ್ಗಗಳನ್ನು ಸರ್ಕಾರ ಇನ್ನೂ ಬುಡಕಟ್ಟು ಜನಾಂಗವೆಂದು ಗುರುತಿಸದೇ ಇರುವುದರಿಂದ, ಅನೇಕ ಅರ್ಹ ಕುಟುಂಬಗಳು ವಂಚಿತವಾಗುತ್ತಿವೆ.

ಇನ್ನು, ‘ಇತರ ಅರಣ್ಯವಾಸಿ’ ವರ್ಗದವರು 2005ಕ್ಕೂ ಮುಂಚೆ ಕನಿಷ್ಠ 75 ವರ್ಷಗಳಿಂದ ಕಾಡಿನಲ್ಲಿ ವಾಸವಾಗಿರುವುದರ ದಾಖಲೆ ಸಲ್ಲಿಸಬೇಕು. ಅನೇಕ ವಲಸೆ ವನವಾಸಿಗರಿಗೆ ಈ ದಾಖಲೆ ನೀಡುವುದು ಕಷ್ಟವಾಗಿ, ಅರ್ಜಿ ತಿರಸ್ಕೃತವಾದವರೂ ಇದ್ದಾರೆ.

ಒಟ್ಟಿನಲ್ಲಿ, ಈ ಮೂರು ರೀತಿಯ ಕುಟುಂಬಗಳು ಭೂಮಿ ಪಡೆಯಲು ಅರ್ಹವೇ. ಆದರೆ, ಈ ಮೂರಕ್ಕೂ ಸೇರದ ನಾಲ್ಕನೇ ಗುಂಪೊಂದಿದೆ. ಇವರು ಈಗಾಗಲೇ ಕಂದಾಯ ಭೂಮಿಯುಳ್ಳವರು ಅಥವಾ ಉದ್ಯೋಗ, ಉದ್ಯಮ, ವ್ಯವಹಾರದಲ್ಲಿ ತೊಡಗಿ
ಕೊಂಡ ಉಳ್ಳವರು. ಹಣ, ಜಾತಿಬಲ, ರಾಜಕೀಯ ಸಂಪರ್ಕ ಬಳಸಿಕೊಂಡು, ಒಂದೆರಡು ದಶಕಗಳಿಂದ ಇವರು ವ್ಯಾಪಕವಾಗಿ ಅರಣ್ಯವನ್ನು ಅತಿಕ್ರಮಿಸುತ್ತಿದ್ದಾರೆ. ಪಶ್ಚಿಮಘಟ್ಟ ವ್ಯಾಪ್ತಿಯಲ್ಲಂತೂ ದಟ್ಟ ಕಾಡೇ ಈ ಕೃತ್ಯಕ್ಕೆ ಬಲಿಯಾಗುತ್ತಿದೆ. ದಶಕದಿಂದೀಚೆಗೆ ಅತಿಕ್ರಮಿಸಿಯೂ, ಆಡಳಿತದ ಲೋಪಗಳನ್ನೆಲ್ಲ ಬಳಸಿಕೊಂಡು ಎಪ್ಪತ್ತೈದು ವರ್ಷಗಳ ಹಿಂದಿನ ದಾಖಲೆ ನೀಡಿದವರಿದ್ದಾರೆ! ಅರಣ್ಯ ಹಕ್ಕು ಕಾಯ್ದೆಯ ಅನ್ವಯ ಕುಟುಂಬವೊಂದಕ್ಕೆ ಗರಿಷ್ಠ ಹತ್ತು ಎಕರೆ ಎಂದು ನಿಗದಿಯಾಗಿರುವುದರಿಂದ, ಕುಟುಂಬದ ಸದಸ್ಯರೆಲ್ಲರ ಹೆಸರಿನಲ್ಲಿ ಪ್ರತ್ಯೇಕ ಅರ್ಜಿ ಸಲ್ಲಿಸಿದವರೂ ಇದ್ದಾರೆ. ಮತಬೇಟೆಯ ಅಧಿಕಾರ ರಾಜಕಾರಣ ಹಾಗೂ ಭ್ರಷ್ಟಾಚಾರಯುಕ್ತ ಅಧಿಕಾರಶಾಹಿಯ ಸಹಾಯವಿಲ್ಲದೆ ಇವೆಲ್ಲ ಸಾಧ್ಯವೇ?

ಬಗರ್-ಹುಕುಂ ಪ್ರಕರಣಗಳಲ್ಲಂತೂ ಕಾನೂನು ಉಲ್ಲಂಘನೆ ಮಿತಿಮೀರಿದೆ. ಕುಟುಂಬವೊಂದಕ್ಕೆ ನಾಲ್ಕೂವರೆ ಎಕರೆ ನಿಗದಿಯಾಗಿರುವುದರಿಂದ, ಹೆಂಡತಿ-ಮಕ್ಕಳ ಹೆಸರಿನಲ್ಲೆಲ್ಲ ಅರ್ಜಿ ಸಲ್ಲಿಸಿ ಮೂವತ್ತು–ನಲವತ್ತು ಎಕರೆ ಭೂಮಿ ಗಿಟ್ಟಿಸಲು ಪ್ರಯತ್ನಿಸುತ್ತಿರುವವರು ಇದ್ದಾರೆ. ರಾತ್ರಿಯೊಂದರಲ್ಲಿ ಕಾಡನ್ನು ಸವರಿ ಗಿಡ ನೆಟ್ಟು ಭೂಮಿ ತಮ್ಮದೆಂದು ದಾಖಲೆ ಸೃಷ್ಟಿಸಿದ ನಿದರ್ಶನಗಳಿವೆ. ಮಲೆನಾಡಿನ ಕಾನುಅರಣ್ಯ, ಕಾಫಿಕಾನು, ಬಾಣೆ, ಗೋಮಾಳಗಳು, ಕರಾವಳಿಯ ಕುಮ್ಕಿ ಹಾಗೂ ಹಾಡಿಗಳು, ಬಯಲುನಾಡಿನ ಇನಾಂ ಭೂಮಿಯಂಥ ಸಮುದಾಯ ಭೂಮಿ ಇದಕ್ಕೆ ಬಲಿಯಾಗುತ್ತಿವೆ.

ಸ್ವಾತಂತ್ರ್ಯಪೂರ್ವದ ಆಡಳಿತವು ಕಾಡನ್ನು ಬಳಸಿಕೊಳ್ಳಲು ನೀಡಿದ್ದ ಕೆಲವು ಸವಲತ್ತುಗಳನ್ನೇ ಹಕ್ಕೆಂದು ಸರ್ಕಾರಿ ದಾಖಲೆಗಳಲ್ಲಿ ತಿದ್ದಿ, ಭೂಮಿ ಗಿಟ್ಟಿಸಿಕೊಳ್ಳುತ್ತಿರುವ ಸಂದರ್ಭಗಳೂ ಇವೆ. ಈ ಬಗೆಯ ಹಲವು ಪ್ರಕರಣಗಳೀಗ ಭೂಕಳ್ಳತನ ನಿಯಂತ್ರಣ ವಿಶೇಷ ನ್ಯಾಯಾಲಯ ಹಾಗೂ ಹೈಕೋರ್ಟ್‌ ಕಟ್ಟೆಯನ್ನೇರಿದ್ದರೂ, ಈ ಪ್ರವೃತ್ತಿ ಮುಂದುವರಿದಿದೆ. ಇವರೆಷ್ಟು ಪ್ರಭಾವಶಾಲಿಗಳೆಂದರೆ, ಬಗರ್-ಹುಕುಂ ಅರ್ಜಿ ಸ್ವೀಕರಿಸುವ ಕೊನೆ ದಿನಾಂಕವನ್ನು ಕಂದಾಯ ಇಲಾಖೆಯು ಇಂದಿನವರೆಗೂ ವಿಸ್ತರಿಸಿಕೊಂಡು ಬಂದಿದೆ! ಕೆಲವೇ ಸಾವಿರ ಇರಬಹುದಾದ ಈ ಬಗೆಯವರು ಕಬಳಿಸಿರುವುದು ಮಾತ್ರ ಲಕ್ಷಾಂತರ ಎಕರೆ ಸಮೃದ್ಧವಾದ ಅರಣ್ಯ ಮತ್ತು ಗೋಮಾಳ!

ಸುಪ್ರೀಂ ಕೋರ್ಟ್‌ನ ಪ್ರಸಕ್ತ ತೀರ್ಪನ್ನು ಈ ವಿಶಾಲ ಹಿನ್ನೆಲೆಯಲ್ಲಿ ಗಮನಿಸಬೇಕಿದೆ. ಅರ್ಹ ಬಡ ಅತಿಕ್ರಮಣದಾರರಿಗೆ ಭೂಮಿಯ ಹಕ್ಕನ್ನು ಒದಗಿಸುವುದು ಮತ್ತು ಲಾಭಕ್ಕೋಸ್ಕರ ಅರಣ್ಯಭೂಮಿ ಕಬಳಿಸುತ್ತಿರುವ ಬಲಾಢ್ಯರಿಂದ ಕಾಡನ್ನು ರಕ್ಷಿಸುವುದು- ಇವೆರಡನ್ನೂ ಜೊತೆಯಲ್ಲಿ ಸಾಧಿಸಬೇಕಿದೆ. ಉಪಗ್ರಹ ಆಧಾರಿತ ಸಮೀಕ್ಷೆ ಹಾಗೂ ದಾಖಲೆಗಳನ್ನು ಗಣಕೀಕರಣ ಮಾಡಿ ಇದನ್ನು ಯಶಸ್ವಿಯಾಗಿಸಲು ಸಾಧ್ಯವಿದೆ. ನೈಜ ವನವಾಸಿಗಳಿಗೆ ಭೂಹಕ್ಕನ್ನು ನೀಡಿ, ಜನಸಹಭಾಗಿತ್ವದಲ್ಲಿ ಅರಣ್ಯವನ್ನು ಸಂರಕ್ಷಿಸುವ ನೀತಿ ನಮ್ಮದಾಗಬೇಕಿದೆ. ಮೇವು, ಉರುವಲಿನಂಥ ಅವಶ್ಯಕತೆಗಳನ್ನು ಪೂರೈಸುವ ಜಲಾನಯನ ಅಭಿವೃದ್ಧಿ ಆಧಾರಿತ ‘ಹಸಿರು-ಗ್ರಾಮ’ಗಳನ್ನಾಗಿ ರೂಪಿಸಬಹುದು. ಬುಡಕಟ್ಟು ಸಮುದಾಯಗಳಿಗೆ ಸಾಮೂಹಿಕ ಭೂಮಿ ಹಕ್ಕು ನೀಡಿ, ಪಾರಂಪರಿಕ ಜೀವನಕ್ರಮವನ್ನು ಪುರಸ್ಕರಿಸಲೂಬಹುದು. ಅರಣ್ಯ ಇಲಾಖೆ, ಬುಡಕಟ್ಟು ಕಲ್ಯಾಣ ಇಲಾಖೆಗಳು ಜಂಟಿಯಾಗಿ, ಕಾಲಮಿತಿಯೊಂದಿಗೆ ಪಾರದರ್ಶಕವಾಗಿ ಕೆಲಸ ಮಾಡಿದರೆ ಇದು ಸಾಧ್ಯ. ಅಂಥ ‘ಮಿಶನ್’ ಮಾತ್ರ ವನವಾಸಿಗಳ ಶ್ರೇಯೋಭಿವೃದ್ಧಿ, ಅಳಿದುಳಿದ ಅರಣ್ಯದ ರಕ್ಷಣೆ ಎರಡನ್ನೂ ಸಾಧ್ಯವಾಗಿಸಬಲ್ಲದು.

ಲೇಖಕ: ನಿರ್ದೇಶಕ, ಸಂರಕ್ಷಣಾ ಜೀವಶಾಸ್ತ್ರ ಮತ್ತು ಸುಸ್ಥಿರ ಅಭಿವೃದ್ಧಿ ಅಧ್ಯಯನ ಕೇಂದ್ರ, ಶಿರಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT