ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಭಜಿಸುವವರಿಗೆ ಗಾಂಭೀರ್ಯದ ಉತ್ತರ

ವಿವಾದ ಎದುರಿಸುತ್ತ, ಸಾಮಾಜಿಕ ಮಿತಿಗಳನ್ನು ಮುರಿಯುತ್ತ ಸಾಗಿರುವ ಸಂಗೀತ ಯಾನ
Last Updated 19 ನವೆಂಬರ್ 2018, 20:00 IST
ಅಕ್ಷರ ಗಾತ್ರ

ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕ ಟಿ.ಎಂ. ಕೃಷ್ಣ ಅವರು ಸರ್ಕಾರದ ಮಾಲೀಕತ್ವದ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಪ್ರಾಯೋಜಕತ್ವದ ಸಂಗೀತ ಕಾರ್ಯಕ್ರಮವೊಂದರಲ್ಲಿ ಹಾಡಬೇಕಿತ್ತು. ನವದೆಹಲಿಯಲ್ಲಿ ನಡೆಯಬೇಕಿದ್ದ ಈ ಕಾರ್ಯಕ್ರಮದಲ್ಲಿ ಅವರು ಹಾಡುವುದು ರದ್ದಾಗಿದ್ದಕ್ಕೆ ಕಾರಣ ‘ಬಲಪಂಥೀಯ’ ಹಿಂದುತ್ವವಾದದ ಬೆಂಬಲಿಗರ ಒತ್ತಡ ಎಂಬ ಮಾತು ಇದೆ.

ಟಿ.ವಿ. ವಾಹಿನಿಯೊಂದು ನಡೆಸಿದ ಸಂದರ್ಶನದಲ್ಲಿ ಈ ಬಗ್ಗೆ ಪ್ರಶ್ನಿಸಿದಾಗ ಕೃಷ್ಣ, ‘ಆಡಳಿತದಲ್ಲಿ ಇರುವವರು ಭಿನ್ನ ದನಿಗಳಿಗೆ ಕಿವಿಗೊಡಬೇಕು. ಪ್ರತಿಭಟನೆಯ ಹಾಡುಗಳನ್ನು ಅವರು ಆಲಿಸಬೇಕು’ ಎಂದು ಉತ್ತರಿಸಿದರು.

ಕೋಮು ಆಧಾರದಲ್ಲಿ ಸಮಾಜ ವಿಭಜಿಸುವ ಆವೇಶದ ಮಾತುಗಳಿಂದ, ಅಧಿಕಾರದಲ್ಲಿ ಇರುವ ಜನರ ಪ್ರೋತ್ಸಾಹದ ಮಾತುಗಳಿಂದ ಸಂಕುಚಿತ ಮನಸ್ಸಿನ ವ್ಯಕ್ತಿಗಳಿಗೆ ಉತ್ತೇಜನ ಸಿಗುತ್ತದೆ. ಬಹುತ್ವದ ನೆಲೆಯಲ್ಲಿ ವಿಕಾಸಗೊಂಡಿರುವ ಈ ಅದ್ಭುತ ದೇಶದ ಸಂಸ್ಕೃತಿಗೆ ವಿರುದ್ಧವಾಗಿ ಅವರ ಮಾತುಗಳು ಮತ್ತು ಕೃತಿಗಳು ಕೋಪದ ವಾತಾವರಣ ಸೃಷ್ಟಿಸುತ್ತಿವೆ, ಅಸಹನೆಯನ್ನೂ ಗೂಂಡಾ ಪ್ರವೃತ್ತಿಯನ್ನೂ ಉತ್ತೇಜಿಸುತ್ತಿವೆ ಎಂದು ಕೃಷ್ಣ ಹೇಳಿದ್ದಾರೆ.

ಅಮೆರಿಕದ ವಾಷಿಂಗ್ಟನ್‌ನ ಹಿಂದೂ ದೇವಸ್ಥಾನದ ಆವರಣದಲ್ಲಿ ಎರಡು ತಿಂಗಳ ಹಿಂದೆ ನಡೆಯಬೇಕಿದ್ದ ಕೃಷ್ಣ ಅವರ ಸಂಗೀತ ಕಾರ್ಯಕ್ರಮವು ಕೊನೆಯ ಕ್ಷಣದಲ್ಲಿ ರದ್ದಾಯಿತು. ಇದಕ್ಕೆ ಕಾರಣ ಬೆದರಿಕೆ ಮತ್ತು ಅಮೆರಿಕದಲ್ಲಿನ ಕಟ್ಟರ್ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸುವುದಾಗಿ ನೀಡಿದ ಎಚ್ಚರಿಕೆ.

ಕೊನೆಯಲ್ಲಿ, ದೈವೇಚ್ಛೆಯಂತೆ ಒಳ್ಳೆಯದೇ ಆಯಿತು. ಪ್ರಾಯೋಜಕರು ಈ ಕಾರ್ಯಕ್ರಮವನ್ನು ಇನ್ನಷ್ಟು ಹೆಚ್ಚಿನ, ಬೇರೆ ಬೇರೆ ವರ್ಗಗಳ ವೀಕ್ಷಕರನ್ನು ಒಳಗೊಳ್ಳಲು ಸಾಧ್ಯವಾಗುವ ಜಾರ್ಜ್‌ ವಾಷಿಂಗ್ಟನ್ ಟೌನ್ ಯೂನಿವರ್ಸಿಟಿಗೆ ಸ್ಥಳಾಂತರ ಮಾಡಿದರು. ನಮ್ಮಲ್ಲಿ, ವಿಮಾನ ನಿಲ್ದಾಣ ಪ್ರಾಧಿಕಾರ ಕೈಬಿಟ್ಟ ಕಾರ್ಯಕ್ರಮವನ್ನು ಅರವಿಂದ ಕೇಜ್ರಿವಾಲ್ ನೇತೃತ್ವದ ಸರ್ಕಾರ ದೆಹಲಿಯಲ್ಲಿ ಆಯೋಜಿಸಿತು. ಈ ಕಾರ್ಯಕ್ರಮಕ್ಕೆ ದೊಡ್ಡ ಸಂಖ್ಯೆಯಲ್ಲಿ ಬರಬೇಕು ಎಂದು ಜನರನ್ನು ಕೋರುವ ಮೂಲಕ ಕೇಜ್ರಿವಾಲ್ ರಾಜಕೀಯ ಲಾಭ ಪಡೆದರು, ರಾಜಕೀಯ ಸಂದೇಶವೊಂದನ್ನು ರವಾನಿಸಿದರು.

ಮಹಾನ್ ವ್ಯಕ್ತಿಗಳ ರಚನೆಗಳನ್ನು ಹಾಡುವ ವಿಚಾರದಲ್ಲಿ ಕೃಷ್ಣ ಕೂಡ ಸಂಪ್ರದಾಯವಾದಿಯೇ. ಇದುವರೆಗೆ ಗೌರವದಿಂದ ಪಾಲಿಸಿಕೊಂಡು ಬಂದಿರುವ ಶಾಸ್ತ್ರೀಯ ಸಂಪ್ರದಾಯವನ್ನು ಮುಂದುವರಿಸುವವರೇ. ಕೃಷ್ಣ ಅವರು ದಿವಂಗತ ಸೆಮ್ಮಂಗುಡಿ ಶ್ರೀನಿವಾಸ ಅಯ್ಯರ್ ಅವರ ಶಿಷ್ಯ. ಆದರೆ, ಶಾಸ್ತ್ರೀಯ ಸಂಗೀತವನ್ನು ಆದಿವಾಸಿಗಳು, ಲೈಂಗಿಕ ಅಲ್ಪಸಂಖ್ಯಾತರಂತಹ ಸಮಾಜದ ಅಂಚಿನ ಸಮುದಾಯಗಳತ್ತ ಕೊಂಡೊಯ್ಯುತ್ತಿರುವವರು. ಹುಟ್ಟಿನಿಂದ ಬ್ರಾಹ್ಮಣರಾಗಿರುವ ಕೃಷ್ಣ ಅವರು ಶಾಸ್ತ್ರೀಯ ಸಂಗೀ
ತವನ್ನು ದೇವಸ್ಥಾನಗಳ ಆವರಣದ ಆಚೆಗೂ ಕೊಂಡೊಯ್ಯಲು ಯತ್ನಿಸುತ್ತಿರುವವರು. ಈ ಸಂಗೀತವು ಸಮಾಜದ ಇನ್ನಷ್ಟು ವರ್ಗಗಳ ಕೈಗೆ ಸಿಗಬೇಕು, ಬ್ರಾಹ್ಮಣ್ಯದ ಭದ್ರಕೋಟೆಯ ಆಚೆಗೂ ಪಸರಿಸಬೇಕು ಎಂದು ಬಯಸುವವರು.

ಆದಿವಾಸಿಗಳ ಊರುಗಳ ಬಳಿ ಕೃಷ್ಣ ಅವರು ಸಂಗೀತ ಕಛೇರಿ ನಡೆಸುತ್ತಾರೆ. ಅಲ್ಲಿನ ಯುವಕರನ್ನು ತಮ್ಮ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಅವರ ಸಂಗೀತವು ಶಾಸ್ತ್ರೀಯ ಸಂಗೀತ ಪ್ರಕಾರಗಳಿಗಿಂತ ಕೀಳು ಎಂದು ಭಾವಿಸುವುದಿಲ್ಲ– ಅವು ಇನ್ನಷ್ಟು ಜೀವಂತಿಕೆ ತುಂಬಿರುವ ಇನ್ನೊಂದು ಸಂಗೀತ ಪ್ರಕಾರ ಮಾತ್ರ ಎಂದು ಪರಿಗಣಿಸುತ್ತಾರೆ. ವಿವಾದಗಳನ್ನು ಎದುರಿಸುತ್ತ, ಸಾಮಾಜಿಕ ಹಾಗೂ ಜಾತಿಯ ಮಿತಿಗಳನ್ನು ಮುರಿಯುತ್ತ ಅವರು ಸಂಗೀತ ಯಾನವೊಂದನ್ನು ನಡೆಸುತ್ತಿದ್ದಾರೆ.

ತಮ್ಮ ಕೆಲವು ಸಂಗೀತ ಸಹಪಥಿಕರು ಕ್ರೈಸ್ತರು ನಡೆಸುವ ಸಂಸ್ಥೆಗಳಲ್ಲಿ ಕರ್ನಾಟಕ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟಿದ್ದನ್ನು ಸಮರ್ಥಿಸಿಕೊಂಡಿದ್ದಕ್ಕಾಗಿ ಕೃಷ್ಣ ಅವರು ಹಿಂದೂ ಧಾರ್ಮಿಕ ಬಲಪಂಥೀಯ ಗುಂಪುಗಳ ಆಕ್ರೋಶಕ್ಕೆ ಈಚೆಗೆ ಗುರಿಯಾಗಿದ್ದಾರೆ. ಕಿಡಿಗೇಡಿ ಗುಂಪುಗಳು ಒಡ್ಡಿದ ಬೆದರಿಕೆಗೆ ಎದುರಾಗಿ, ತಮ್ಮ ಸಹ ಕಲಾವಿದರ ಬೆನ್ನಿಗೆ ನಿಂತಿದ್ದಕ್ಕಾಗಿ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಪರವಾಗಿ ಮಾತನಾಡಿದ್ದಕ್ಕಾಗಿ ಅವರನ್ನು ಮೆಚ್ಚಬೇಕು. ಈ ಕಲಾವಿದರನ್ನು ವಿರೋಧಿಸುತ್ತಿರುವವರ ಪ್ರಕಾರ, ಅವರು ಚರ್ಚ್‌ಗಳಲ್ಲಿ ಹಾಗೂ ಕ್ರೈಸ್ತ ಸಂಸ್ಥೆಗಳಲ್ಲಿ ಸಂಗೀತ ಕಛೇರಿ ನಡೆಸುವುದು ಹಿಂದೂ ಧರ್ಮಕ್ಕೆ ಅಗೌರವ ಸೂಚಿಸಿದಂತೆ; ಅದು ಧರ್ಮನಿಂದನೆಗೆ ಸಮ.

ಕರ್ನಾಟಕ ಶಾಸ್ತ್ರೀಯ ಸಂಗೀತ ಜಗತ್ತಿನ ನಿಷ್ಠುರ ಮಾತಿನ ವ್ಯಕ್ತಿ ಎಂದೇ ಹಲವರಿಂದ ಕರೆಸಿಕೊಳ್ಳುವ ಕೃಷ್ಣ ಅವರು ‘ಸಂಗೀತ ವೈಶ್ವಿಕವಾದದ್ದು. ಅಜ್ಞಾನಿಗಳು, ಸಂಕುಚಿತ ಮನಸ್ಸಿನವರು ಅದಕ್ಕೆ ಕೋಮು ಬಣ್ಣ ನೀಡುತ್ತಿದ್ದಾರೆ’ ಎಂದು ಘೋಷಿಸಿದರು. ರಾಮ ಮತ್ತು ಕೃಷ್ಣರ ಬಗ್ಗೆ ಹಾಡುಗಳನ್ನು ಬರೆದ ಸೂಫಿ ಸಂತರ ಹೆಸರನ್ನು ಕೃಷ್ಣ ಉಲ್ಲೇಖಿಸಿದರು.

ಸತ್ಯ ಏನೆಂಬುದನ್ನು ಕಾಣದೆಯೇ ಹಲವರು ಈಕಲಾವಿದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ವಿವಾದ ಕಾಳ್ಗಿಚ್ಚಿನಂತೆ ಹಬ್ಬಿತು. ಈ ಕಲಾವಿದರು ‘ಕ್ರೈಸ್ತ ಮಿಷನರಿಗಳಿಗೆ ತಮ್ಮ ಆತ್ಮ ಮಾರಿಕೊಂಡಿದ್ದಾರೆ’ ಎಂದರು ಕೆಲವರು. ನಿತ್ಯಶ್ರೀ, ಒ.ಎಸ್. ಅರುಣ್ ಮತ್ತು ಉನ್ನಿಕೃಷ್ಣನ್ ಅವರಂತಹ ಖ್ಯಾತ ಕಲಾವಿದರ ಮೇಲೆ ಸಾಮಾಜಿಕ ಜಾಲತಾಣಗಳ ಮೂಲಕ ದಾಳಿ ನಡೆಸಲಾಯಿತು. ಇವರು ಕ್ರೈಸ್ತರ ಭಾವನೆಗಳನ್ನು ಓಲೈಸುತ್ತಿದ್ದಾರೆ ಎಂದು ಆರೋಪಿಸಲಾಯಿತು.

ಮಾತಿನ ಮೂಲಕ ನಿಂದಿಸುವುದು ಮಾತ್ರವೇ ಅಲ್ಲದೆ, ಕಲಾವಿದರ ಮೇಲೆ ದೈಹಿಕ ಹಲ್ಲೆ ನಡೆಸುವ ಬೆದರಿಕೆಗಳನ್ನೂ ಸಾಮಾಜಿಕ ಜಾಲತಾಣಗಳ ಮೂಲಕ ಒಡ್ಡಲಾಯಿತು ಎಂದು ವರದಿಯಾಗಿದೆ. ಬೆದರಿಕೆಗೆ ಒಳಗಾದ ಕಲಾವಿದರು ಹಿಂದೆ ಸರಿದರೂ, ಕೃಷ್ಣ ತಮ್ಮ ಸಹಪಥಿಕರ ಪರವಾಗಿ ಎದ್ದುನಿಂತರು.

ಹಿಂದೂಸ್ತಾನಿ ಸಂಗೀತ ಕ್ಷೇತ್ರದ ಹಲವು ದಿಗ್ಗಜರು– ಉಸ್ತಾದ್ ಬಡೇ ಗುಲಾಮ್ ಅಲಿ ಖಾನ್, ಅಬ್ದುಲ್ ಕರೀಂ ಖಾನ್, ಬೇಗಂ ಅಖ್ತರ್, ವಿಲಾಯತ್ ಖಾನ್, ಬಿಸ್ಮಿಲ್ಲಾ ಖಾನ್ – ಇಸ್ಲಾಂ ಧರ್ಮದ ಅನುಯಾಯಿಗಳು. ಆದರೆ ಅವರು ಹಿಂದೂ ದೇವತೆಗಳನ್ನು ಹೊಗಳುವ ಹಾಡು ಹಾಡಿದರು, ಹಾಡುಗಳಿಗೆ ಸಂಗೀತ ನುಡಿಸಿದರು.

ಉಸ್ತಾದ್ ಬಡೇ ಗುಲಾಮ್ ಅಲಿ ಖಾನ್ ಅವರ ‘ಹರಿ ಓಂ ತತ್ಸತ್’ ಭಜನೆಯು ಕೇಳುಗರಿಗೆ ಸ್ವರ್ಗಸುಖದ ಅನುಭವ ನೀಡಬಲ್ಲದು. ಕ್ರೈಸ್ತರಾದ ಜೇಸುದಾಸ್‌ ಅವರು ಪ್ರಮುಖ ದೇವಸ್ಥಾನಗಳ ಉತ್ಸವಗಳಲ್ಲಿ ಸಂಗೀತ ಕಾರ್ಯಕ್ರಮ ನೀಡುತ್ತಾರೆ, ಕೇಳುಗರನ್ನು ಮಂತ್ರಮುಗ್ಧಗೊಳಿಸುತ್ತಾರೆ. ಪಂಡಿತ್ ಜಸರಾಜ್ ಅವರು ಅಲ್ಲಾಹುವಿನ ಬಗ್ಗೆ ಹಾಡುವ ‘ಮೇರೊ ಅಲ್ಲಾಹ್ ಮೆಹೆರ್ಬಾನ್’ ಅಥವಾ
‘ಓಂ ಅಲ್ಲಾಹ್ ಓಂ’ ಭಜನೆಯನ್ನು ಕೇಳದವರು ಯಾರು?

ಅವರು ಇದನ್ನು ಹಾಡುವುದನ್ನು ನಾನು ಬೆಂಗಳೂರಿನಲ್ಲಿ ಕೆಲವು ವರ್ಷಗಳ ಹಿಂದೆ ಕೇಳಿದ್ದೆ. ಸಂಗೀತ ಕ್ಷೇತ್ರದ ದೇವತೆ ಎಂ.ಎಸ್. ಸುಬ್ಬುಲಕ್ಷ್ಮಿ ಅವರು ಕಬೀರ್ ಮತ್ತು ಮೀರಾ ಬರೆದ ಭಜನೆಗಳಿಗೆ ಸಮಾನ ಭಕ್ತಿಯಿಂದ ದನಿ ನೀಡಿದರು. ಆಶ್ಚರ್ಯದ ಸಂಗತಿಯೆಂದರೆ, ವಿರೋಧ ಪಕ್ಷದ ಸಾಲಿನಲ್ಲಿ ಕುಳಿತಿದ್ದಾಗ ಎಲ್ಲಾ ರಾಜಕೀಯ ಪಕ್ಷಗಳು ಅಭಿವ್ಯಕ್ತಿ ಸ್ವಾತಂತ್ರ್ಯದ ಪರ ಮಾತನಾಡುತ್ತವೆ. ಆದರೆ, ಅಧಿಕಾರದಲ್ಲಿ ಇದ್ದಾಗ ಅದೇ ಪಕ್ಷಗಳು ಭಿನ್ನ ದನಿಗಳನ್ನು ಅಡಗಿಸುತ್ತವೆ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಇಂದಿರಾ ಗಾಂಧಿ ಅವರು ಕಿಶೋರ್ ಕುಮಾರ್ ಅವರ ಹಾಡುಗಳನ್ನೂ ನಿರ್ಬಂಧಿಸಿದ್ದನ್ನು ಮರೆಯಲು ಸಾಧ್ಯವೇ? ಯುಪಿಎ ಆಡಳಿತ ಅವಧಿಯಲ್ಲಿ ಹಿಂದೂ ಹಾಗೂ ಇಸ್ಲಾಮಿಕ್ ಸಂಘಟನೆಗಳನ್ನು ಮೆಚ್ಚಿಸಲು ಎಂ.ಎಫ್. ಹುಸೇನ್ ಅವರನ್ನು ಮುಂಬೈನಿಂದ ಹೊರಗಿಡಲಾಗಿತ್ತು, ಸಾಹಿತ್ಯ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳದಂತೆ ಸಲ್ಮಾನ್ ರಷ್ದಿ ಅವರನ್ನು ತಡೆಯಲಾಯಿತು ಎಂಬುದನ್ನು ಮರೆಯಲು ಸಾಧ್ಯವೇ?

ಕೃಷ್ಣ ಅವರು ದೆಹಲಿ ಕಾರ್ಯಕ್ರಮದ ಕೊನೆಯಲ್ಲಿ ‘ರಘುಪತಿ ರಾಘವ ರಾಜಾರಾಂ’ ಗೀತೆ ಹಾಡಿದರು. ಇದು ಗಾಂಧೀಜಿಯ ಅಚ್ಚುಮೆಚ್ಚಿನ ಗೀತೆ. ಇದನ್ನು ಜನಪ್ರಿಯಗೊಳಿಸಿದ್ದು ಶ್ರದ್ಧಾವಂತ ಹಿಂದೂ ಆಗಿದ್ದ ವಿಷ್ಣು ದಿಗಂಬರ ಪಲುಸ್ಕರ್. ಕೃಷ್ಣ ಅವರು ಈ ಹಾಡನ್ನು ಕೊನೆಯಲ್ಲಿ ಹಾಡಿದ್ದು, ಸಮಾಜದ ಎಲ್ಲ ವಿಭಜನಕಾರಿ ದನಿಗಳಿಗೆ ನೀಡಿದ ಘನಗಾಂಭೀರ್ಯದ ಉತ್ತರ ಅದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT