ಪ್ರತಿವರ್ಷವೂ ಡಿಸೆಂಬರ್ 23ರಂದು ಭಾರತ ತನ್ನ ವಿಧಿಯನ್ನೇ ಬದಲಾಯಿಸಿದ, ಮೈಲಿಗಲ್ಲಿನ ಘಟನೆಯೊಂದನ್ನು ಸಂಭ್ರಮದಿಂದ ಆಚರಿಸುತ್ತದೆ. ಅದುವೇ ನಾವು ಇಂದು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಅಥವಾ ಎಚ್ಎಎಲ್ ಎಂದು ಹೆಮ್ಮೆಯಿಂದ ಕರೆಯುವ ಸಂಸ್ಥೆಯ ಸ್ಥಾಪನಾ ದಿನಾಚರಣೆ. ಭಾರತದ ಏರೋಸ್ಪೇಸ್ ಉದ್ಯಮದ ಈ ದೈತ್ಯ ಸಂಸ್ಥೆಯ ಸ್ಥಾಪನೆಯ, ಬೆಳವಣಿಗೆಯ ಹಿಂದೆ ಒಂದು ದೂರ ದೃಷ್ಟಿಯ, ಅಸಾಧಾರಣ ಧೈರ್ಯದ, ಮತ್ತು ದೇಶಭಕ್ತಿಯ ಮಹಾನ್ ಕಥೆಯೇ ಇದೆ. ಈ ಕಥೆ 86 ವರ್ಷಗಳ ಹಿಂದೆ, 1940ರಲ್ಲಿ ಆರಂಭಗೊಂಡಿತು. ಈ ಕಥೆಯ ಕೇಂದ್ರದಲ್ಲಿರುವುದು ಇತರ ರಾಜರು ಕೈಗೆತ್ತಿಕೊಳ್ಳಲು ನಿರಾಕರಿಸಿದ ಅಪಾಯವೊಂದನ್ನು ಸ್ವತಃ ಕೈಗೆತ್ತಿಕೊಂಡ ಓರ್ವ ಯುವ ಮಹಾರಾಜ.

ಈಗ ಆ ಕಾಲಘಟ್ಟವನ್ನೊಮ್ಮೆ ಕಲ್ಪಿಸಿಕೊಳ್ಳಿ: ಅದು 1940ರ ಅವಧಿ. ಸಂಪೂರ್ಣ ಜಗತ್ತೇ ಎರಡನೇ ಮಹಾಯುದ್ಧದ ಜ್ವಾಲೆಗೆ ಸಿಲುಕಿ, ಹತ್ತಿ ಉರಿಯುತ್ತಿತ್ತು. ಯುರೋಪಿನಾದ್ಯಂತ ಎಲ್ಲೆಡೆಯೂ ಬಾಂಬುಗಳ ಸುರಿಮಳೆಯಾಗುತ್ತಿತ್ತು. ಸಂಪೂರ್ಣ ಭೂಮಂಡಲವೇ ಅನಿಶ್ಚಿತತೆಯ ಸುಳಿಗೆ ಸಿಲುಕಿತ್ತು. ಎಲ್ಲೆಡೆಯೂ ಭಯ, ಆತಂಕ ತುಂಬಿತ್ತು. ಇವೆಲ್ಲ ಕೋಲಾಹಲಗಳ ನಡುವೆ, ಕೇವಲ 21 ವರ್ಷ ವಯಸ್ಸಿನ ಜಯಚಾಮರಾಜೇಂದ್ರ ಒಡೆಯರ್ ಎಂಬ ರಾಜಕುಮಾರ ತನ್ನ ದೊಡ್ಡಪ್ಪನ ಅನಿರೀಕ್ಷಿತ ಮರಣದ ಕಾರಣದಿಂದ ಮೈಸೂರಿನ ಮಹಾರಾಜರಾಗಿದ್ದರು. ಆ ವಯಸ್ಸಿಗೆ ಅಧಿಕಾರಕ್ಕೆ ಬಂದ ಬಹಳಷ್ಟು ಮಹಾರಾಜರುಗಳು ತಮ್ಮ ರಾಜ್ಯವನ್ನು ಸುರಕ್ಷಿತವಾಗಿ ನೋಡಿಕೊಳ್ಳುವುದಕ್ಕೇ ಹೆಚ್ಚಿನ ಆದ್ಯತೆ ನೀಡಿ ಸುಮ್ಮನಾಗಿಬಿಡುತ್ತಿದ್ದರೇನೋ. ಆದರೆ, ಈ ಯುವ ಮಹಾರಾಜರಿಗೆ ಬೇರೆಯದೇ ಆದ ಆಲೋಚನೆಗಳಿದ್ದವು. ಅವರ ಆಲೋಚನೆಗಳೇ ಯಾರೂ ಊಹಿಸಲೂ ಸಾಧ್ಯವಿಲ್ಲದ ರೀತಿಯಲ್ಲಿ ಭಾರತದ ಭವಿಷ್ಯವನ್ನೇ ಬದಲಾಯಿಸಲಿದ್ದವು.

ಈ ಕಥೆ ಆರಂಭವಾಗುವುದು ಅಕ್ಟೋಬರ್ 1939ರಲ್ಲಿ ಪಾನ್ ಆಮ್ ಕ್ಲಿಪ್ಪರ್ ವಿಮಾನದಲ್ಲಿ ನಡೆದ ಒಂದು ಭೇಟಿಯಿಂದ. ಅಮೆರಿಕನ್ ಉದ್ಯಮಿ ವಿಲಿಯಮ್ ಡಗ್ಲಾಸ್ ಪಾವ್ಲೇ ಎಂಬಾತ ಭಾರತೀಯ ಉದ್ಯಮಿ ವಾಲ್ಚಂದ್ ಹೀರಾಚಂದ್ ಅವರನ್ನು ವಿಮಾನದಲ್ಲಿ ಖಂಡಗಳ ಮೇಲೆ ಹಾರಾಟ ನಡೆಸುವ ಸಂದರ್ಭದಲ್ಲಿ ಭೇಟಿಯಾಗಿ ಮಾತನಾಡಿದ್ದರು. ಪಾವ್ಲೇ ಆಗ ಚೀನಾದಲ್ಲಿ ಸೆಂಟ್ರಲ್ ಏರ್ಕ್ರಾಫ್ಟ್ ಮ್ಯಾನುಫಾಕ್ಚರಿಂಗ್ ಕಂಪನಿ ಎಂಬ ಸಂಸ್ಥೆಯನ್ನು ನಡೆಸುತ್ತಾ, ಚೈನೀಸ್ ನ್ಯಾಷನಲಿಸ್ಟ್ ಸರ್ಕಾರಕ್ಕೆ ಯುದ್ಧ ವಿಮಾನಗಳನ್ನು ತಯಾರಿಸಿ ಕೊಡುತ್ತಿದ್ದರು. ಆದರೆ, ಮಹಾಯುದ್ಧದಲ್ಲಿ ಜಪಾನ್ ತೀರಾ ಆಕ್ರಮಣಕಾರಿಯಾಗಿ ಮುಂದೊತ್ತಿ ಬರುತ್ತಿದ್ದ ಪರಿಣಾಮವಾಗಿ, ಪಾವ್ಲೇಗೆ ತನ್ನ ಕೆಲಸಗಳನ್ನು ಮುಂದುವರಿಸಲು ತಕ್ಷಣವೇ ಬೇರೊಂದು ಸುರಕ್ಷಿತ ನೆಲೆ ಬೇಕಾಗಿತ್ತು. ಹಾಗೇ ಉದ್ಯಮದ ಸ್ಥಿತಿಗತಿಯ ಕುರಿತು ನಡೆದ ಸಾಮಾನ್ಯ ಮಾತುಕತೆ ಹೊಸದೊಂದು ಆಲೋಚನೆಯ ಕಿಡಿ ಹತ್ತಿಸಿತ್ತು. ಅದೇನೆಂದರೆ, ಭಾರತದಲ್ಲಿ ಏಕೆ ವಿಮಾನಗಳನ್ನು ಉತ್ಪಾದಿಸಬಾರದು?

ಜುಲೈ 1940ರ ವೇಳೆಗೆ, ಪಾವ್ಲೇ ಭಾರತಕ್ಕೆ ತನ್ನ ಮಹತ್ವಾಕಾಂಕ್ಷಿ ಪ್ರಸ್ತಾವನೆಯನ್ನು ಹೊತ್ತು ಬಂದಿಳಿದರು. ಅವರಿಗೆ ತನ್ನ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಭೂಮಿ, ಬಂಡವಾಳ, ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಬಹುತೇಕ ಅಸಾಧ್ಯ ಎಂಬಂತೆ ತೋರುತ್ತಿದ್ದ ಈ ಯೋಜನೆಯನ್ನು ನಂಬುವಷ್ಟು ದೂರದೃಷ್ಟಿ ಹೊಂದಿರುವ ನಾಯಕರು ಬೇಕಾಗಿತ್ತು. ಪ್ರಸ್ತುತ ಯೋಜನೆಗೆ ಬೆಂಬಲ ನೀಡುವವರನ್ನು ಹುಡುಕುವ ಜವಾಬ್ದಾರಿಯನ್ನು ವಾಲ್ಚಂದ್ ಹೀರಾಚಂದ್ ತನ್ನ ಹೆಗಲಿಗೆ ಏರಿಸಿಕೊಂಡರು. ಅವರು ಮೊದಲಿಗೆ ತನ್ನ ಸಿಂದಿಯಾ ಸ್ಟೀಮ್ ನ್ಯಾವಿಗೇಷನ್ ಕಂಪನಿಯ ಪಾಲುದಾರರ ಬಳಿಯೇ ಈ ಯೋಜನೆಯನ್ನು ಪ್ರಸ್ತಾಪಿಸಿದರು. ಆದರೆ ಅವರು ತಕ್ಷಣವೇ ಇದನ್ನು ನಿರಾಕರಿಸಿದರು. ಹಾಗೆಂದು ಇದರಿಂದ ವಿಚಲಿತರಾಗದ ವಾಲ್ಚಂದ್ ಹೀರಾಚಂದ್ ಬರೋಡಾ, ಗ್ವಾಲಿಯರ್, ಭಾವನಗರ್ ಸೇರಿದಂತೆ ಏಳು ರಾಜಾಡಳಿತದ ಸಾಮ್ರಾಜ್ಯಗಳಿಗೆ ತೆರಳಿ, ತನ್ನ ಪ್ರಸ್ತಾವನೆಯನ್ನು ನೀಡಿದರು. ಆದರೆ, ಪ್ರತಿಯೊಂದು ಸಾಮ್ರಾಜ್ಯವೂ ಅವರ ಪ್ರಸ್ತಾವನೆಯನ್ನು ತಳ್ಳಿಹಾಕಿತು. ವಿಮಾನ ನಿರ್ಮಾಣ ಯೋಜನೆ ಅತ್ಯಂತ ಹೆಚ್ಚಿನ ಅಪಾಯ ಹೊಂದಿದ್ದು, ಯುದ್ಧದ ಸಮಯದಲ್ಲಂತೂ ಈ ಅಪಾಯದ ಸಾಧ್ಯತೆ ಇನ್ನೂ ಹೆಚ್ಚು ಎನ್ನುವುದು ಅವರ ವಾದವಾಗಿತ್ತು.

ಆ ಬಳಿಕ ಸಂಪೂರ್ಣ ಚಿತ್ರಣವನ್ನೇ ಬದಲಾಯಿಸುವಂತಹ ಕ್ಷಣ ಎದುರಾಗಿತ್ತು. ಅಕ್ಟೋಬರ್ 1940ರಲ್ಲಿ, ವಾಲ್ಚಂದ್ ಮತ್ತು ಪಾವ್ಲೇ ಬೆಂಗಳೂರಿಗೆ ತೆರಳಿ, ಅಲ್ಲಿ ಮೈಸೂರಿನ ಯುವ ಮಹಾರಾಜರನ್ನು ಭೇಟಿಯಾದರು. ಬಹಳ ಜಾಗರೂಕವಾಗಿದ್ದು, ಈ ಪ್ರಸ್ತಾವನೆಯನ್ನು ಕೇಳುತ್ತಲೇ ನಿರಾಕರಿಸಿದ ಮಹಾರಾಜರುಗಳಂತಲ್ಲದೆ, ಜಯಚಾಮರಾಜೇಂದ್ರ ಒಡೆಯರ್ ಅವರಿಗೆ ಈ ಯೋಜನೆಯಲ್ಲಿ ತಕ್ಷಣದ ಅಪಾಯಗಳನ್ನು ಮೀರಿದ ಸಾಧ್ಯತೆಗಳು ಕಂಡವು. ಅವರಿಗೆ ಈ ಯೋಜನೆಯಲ್ಲಿ ಭಾರತದ ಭವಿಷ್ಯವೂ ಕಾಣಿಸಿತ್ತು. ಭಾರತದ ಅಭಿವೃದ್ಧಿ ಮತ್ತು ಸ್ವಾತಂತ್ರ್ಯಕ್ಕೆ ವೈಮಾನಿಕ ಕ್ಷೇತ್ರ ಅತ್ಯವಶ್ಯಕ ಎನ್ನುವುದನ್ನು ಮಹಾರಾಜರು ಅರ್ಥ ಮಾಡಿಕೊಂಡಿದ್ದರು. ಮಾತುಕತೆ ನಡೆದ ಕೇವಲ 72 ಗಂಟೆಗಳ ಒಳಗಾಗಿ, ಮೈಸೂರು ಸರ್ಕಾರ ಯೋಜನೆಗಾಗಿ 700 ಎಕರೆ ಭೂಮಿಯನ್ನು ಸಂಪೂರ್ಣ ಉಚಿತವಾಗಿ ಒದಗಿಸುವ ಭರವಸೆ ನೀಡಿತು. ಇದರೊಡನೆ, ಪಾಲುದಾರಿಕೆಯ ರೂಪದಲ್ಲಿ 25 ಲಕ್ಷ ರೂಪಾಯಿಗಳ ಹೂಡಿಕೆ ನಡೆಸಿ, ಯೋಜನೆಗೆ ಸಂಪೂರ್ಣ ಸಹಕಾರ ನೀಡುವ ಭರವಸೆ ನೀಡಿತು.

ಇದೊಂದು ಕೇವಲ ಔದ್ಯಮಿಕ ತೀರ್ಮಾನವಷ್ಟೇ ಆಗಿರಲಿಲ್ಲ. ಇದು ನಿಜಕ್ಕೂ ಒಂದು ದೇಶಭಕ್ತಿಯ ಮಹಾನ್ ಹೆಜ್ಜೆಯಾಗಿತ್ತು. ಮಹಾರಾಜರು ಆಗಿನ್ನೂ ಕೇವಲ 21 ವರ್ಷ ವಯಸ್ಸಿನ ಯುವಕರಾಗಿದ್ದು, ಪಟ್ಟಕ್ಕೆ ಬಂದು ಕೇವಲ ಎರಡು ತಿಂಗಳಷ್ಟೇ ಆಗಿತ್ತು. ಆದರೂ ಅವರು ಓರ್ವ ಹಿರಿಯ, ಅನುಭವಿ ಮುತ್ಸದ್ದಿ ತೋರುವ ದೂರದೃಷ್ಟಿಯನ್ನು ಪ್ರದರ್ಶಿಸಿದ್ದರು. ಉಳಿದ ಮಹಾರಾಜರುಗಳು ತಮ್ಮ ಆಸ್ತಿ ಪಾಸ್ತಿಗಳನ್ನು ಕಾಪಾಡಿಕೊಳ್ಳುವುದು ಹೇಗೆ ಎಂದು ಚಿಂತಿಸುತ್ತಿದ್ದ ಸಮಯದಲ್ಲಿ, ಜಯಚಾಮರಾಜೇಂದ್ರ ಒಡೆಯರ್ ಭಾರತದ ಕನಸುಗಳಿಗೆ ಹೂಡಿಕೆ ಮಾಡಲು ಮುಂದಾಗಿದ್ದರು. ಡಿಸೆಂಬರ್ 23, 1940ರಂದು, ಹಿಂದೂಸ್ತಾನ್ ಏರ್ಕ್ರಾಫ್ಟ್ ಕಂಪನಿಯನ್ನು ಮೈಸೂರು ಕಂಪನೀಸ್ ಆಕ್ಟ್ ಅಡಿಯಲ್ಲಿ ಅಧಿಕೃತವಾಗಿ ನೋಂದಾಯಿಸಲಾಯಿತು. ವಾಲ್ಚಂದ್ ಹೀರಾಚಂದ್ ಕಂಪನಿಯ ಅಧ್ಯಕ್ಷರಾಗಿದ್ದರು. ಕಂಪನಿಯ ಶಂಕುಸ್ಥಾಪನೆಯನ್ನು ಮರುದಿನವೇ ನೆರವೇರಿಸಿ, ಆ ಮೂಲಕ ಭಾರತದಲ್ಲಿ ವೈಮಾನಿಕ ಉದ್ಯಮ ಸಂಘಟನಾತ್ಮಕವಾಗಿ ಆರಂಭಗೊಂಡಿತು.

ಆದರೆ, ಯುವ ಮಹಾರಾಜರ ಕನಸುಗಳು ಅಲ್ಲಿಗೇ ಮುಕ್ತಾಯಗೊಳ್ಳಲಿಲ್ಲ. ಭಾರತದ ರಕ್ಷಣೆ ಮತ್ತು ಏರೋಸ್ಪೇಸ್ ಮಹತ್ವಾಕಾಂಕ್ಷೆಗಳಿಗೆ ಅವರ ಕೊಡುಗೆಗಳು ಅಸಾಧಾರಣವಾದವು. ರಾಯಲ್ ಏರ್ ಫೋರ್ಸಿನ ನಂ 129 ಸ್ಕ್ವಾಡ್ರನ್ನ ಸ್ಥಾಪನೆಗೆ ಮೈಸೂರು ಸಾಮ್ರಾಜ್ಯ ಒಂದು ಲಕ್ಷ ಪೌಂಡುಗಳ ಕೊಡುಗೆ ನೀಡಿತು. ಈ ಸ್ಕ್ವಾಡ್ರನ್ ʼಮೈಸೂರು ಸ್ಕ್ವಾಡ್ರನ್ʼ ಎಂಬ ಹೆಸರಿನಿಂದಲೇ ಜನಪ್ರಿಯವಾಯಿತು. ಎರಡನೇ ಮಹಾಯುದ್ಧದಲ್ಲಿ ಸುಪರ್ ಮರೀನ್ ಸ್ಪಿಟ್ಫೈರ್ ಯುದ್ಧ ವಿಮಾನಗಳ ಹಾರಾಟ ನಡೆಸಿದ ಈ ಸ್ಕ್ವಾಡ್ರನ್, ಬ್ಯಾಟಲ್ ಆಫ್ ಬ್ರಿಟನ್ ಮತ್ತು ಇತರ ಮಹತ್ತರ ಕಾರ್ಯಾಚರಣೆಗಳಲ್ಲಿ ಅತ್ಯಂತ ದಿಟ್ಟವಾಗಿ ಹೋರಾಡಿತ್ತು. ಈ ಸ್ಕ್ವಾಡ್ರನ್ನ ಯೋಧರ ಚಿಹ್ನೆ ಮೈಸೂರಿನ ಪೌರಾಣಿಕ ಮಹತ್ವದ ಎರಡು ತಲೆಗಳುಳ್ಳ ಹಕ್ಕಿಯಾದ ಗಂಡಭೇರುಂಡವನ್ನು ಹೆಮ್ಮೆಯಿಂದ ಹೊಂದಿತ್ತು. ಈ ಸ್ಕ್ವಾಡ್ರನ್ ʼಐ ವಿಲ್ ಡಿಫೆಂಡ್ ದ ರೈಟ್ʼ (ನ್ಯಾಯಯುತವಾದುದನ್ನು ರಕ್ಷಿಸುತ್ತೇನೆ) ಎಂಬ ಸ್ಫೂರ್ತಿದಾಯಕ ಘೋಷವಾಕ್ಯವನ್ನೂ ಹೊಂದಿತ್ತು.

ಹೃದಯ ಸ್ಪರ್ಶಿಯಾದ ವೈಯಕ್ತಿಕ ನಡೆಯ ರೂಪದಲ್ಲಿ, ಮಹಾರಾಜರು ಸ್ಕ್ವಾಡ್ರನ್ನ ಪ್ರತಿಯೊಬ್ಬ ಪೈಲಟ್ಗೂ ಗಂಡಭೇರುಂಡ ಬ್ಯಾಜ್ ಮತ್ತು ಯುದ್ಧದಲ್ಲಿ ಗೆಲುವಾಗಲಿ ಎಂದು ಮನದುಂಬಿ ಹಾರೈಸಿದ ಸಂದೇಶವನ್ನೂ ಕಳುಹಿಸಿದ್ದರು. ಮೈಸೂರಿನ ಮಂಡಕಳ್ಳಿಯಲ್ಲಿ ಸ್ವತಃ ವಿಮಾನ ನಿಲ್ದಾಣವನ್ನೂ ನಿರ್ಮಿಸಿದ ಜಯಚಾಮರಾಜೇಂದ್ರ ಒಡೆಯರ್, ಬೆಂಗಳೂರಿನ ಜಕ್ಕೂರಿನಲ್ಲಿ ಸರ್ಕಾರಿ ಹಾರಾಟ ಶಾಲೆ ಆರಂಭಿಸಲು 211 ಎಕರೆ ಭೂಮಿಯನ್ನೂ ದಾನವಾಗಿ ನೀಡಿದರು. ಈ ಹಾರಾಟ ಶಾಲೆ 1948ರಲ್ಲಿ ಕಾರ್ಯಾಚರಣೆ ಆರಂಭಿಸಿತು. ಮಹಾರಾಜರು ತನ್ನ ವೈಯಕ್ತಿಕ ಡಕೋಟಾ ಡಿಸಿ–3 ವಿಮಾನವನ್ನೂ ಹಾರಾಟ ತರಬೇತಿಗೆ ಉಡುಗೊರೆಯಾಗಿ ನೀಡಿ, ಪೈಲಟ್ಗಳ ತರಬೇತಿಗೆ ಅನುಕೂಲ ಕಲ್ಪಿಸಿದರು. ಈ ನಡೆ ಅವರು ಭಾರತದ ವೈಮಾನಿಕ ಸಾಮರ್ಥ್ಯ ವೃದ್ಧಿಸಲು ಎಷ್ಟು ಕಟಿಬದ್ಧರಾಗಿದ್ದರು ಎನ್ನುವುದಕ್ಕೆ ಸಾಕ್ಷಿಯಾಗಿದೆ.

ಇಂತಹ ಮಹಾರಾಜರ ದಿಟ್ಟ ನಿಲುವು, ದೂರದೃಷ್ಟಿಯಿಂದ ಆರಂಭಗೊಂಡ ವಿಮಾನ ಕಾರ್ಖಾನೆ 1942ರಲ್ಲಿ ವಿಮಾನ ಉತ್ಪಾದನೆಯನ್ನು ಆರಂಭಿಸಿತು. ಇದು ಹಾರ್ಲೋ ಪಿಸಿ-5, ಕರ್ಟಿಸ್ ಪಿ-36 ಹಾಕ್ ಫೈಟರ್ಸ್ನಂತಹ ತರಬೇತಿ ವಿಮಾನಗಳು, ವುಲ್ಟೀ ಎ-31 ವೆಂಜೆನ್ಸ್ ವಿಮಾನದಂತಹ ಬಾಂಬರ್ ವಿಮಾನಗಳನ್ನು ಯುದ್ಧದ ಅವಧಿಯಲ್ಲಿ ಭಾರತೀಯ ವಾಯುಪಡೆಗಾಗಿ ನಿರ್ಮಿಸಿಕೊಟ್ಟಿತು. ಮಾರ್ಚ್ 1941ರಲ್ಲಿ ಭಾರತ ಸರ್ಕಾರವೂ ಈ ಸಂಸ್ಥೆಯಲ್ಲಿ ಪಾಲುದಾರನಾಯಿತು. ಬಳಿಕ, 1942ರಲ್ಲಿ ಯುದ್ಧ ಕಾರ್ಯಗಳಿಗೆ ಹೆಚ್ಚಿನ ಬೆಂಬಲ ಒದಗಿಸುವ ಸಲುವಾಗಿ, ಸರ್ಕಾರ ಕಾರ್ಖಾನೆಯ ಸಂಪೂರ್ಣ ಆಡಳಿತವನ್ನು ತನ್ನ ಕೈಗೆತ್ತಿಕೊಂಡಿತು. ಕಂಪನಿ ನಿರಂತರವಾಗಿ ಬೆಳವಣಿಗೆ ಹೊಂದುತ್ತಾ ಸಾಗಿತು. ಬಳಿಕ, ಅಕ್ಟೋಬರ್ 1, 1964ರಂದು ಹಿಂದೂಸ್ತಾನ್ ಏರ್ಕ್ರಾಫ್ಟ್ ಕಂಪನಿ ಮತ್ತು ಏರೋನಾಟಿಕ್ಸ್ ಇಂಡಿಯಾ ಲಿಮಿಟೆಡ್ ಸಂಸ್ಥೆಗಳು ವಿಲೀನಗೊಂಡು, ಇಂದು ನಮ್ಮೆಲ್ಲರಿಗೂ ಚಿರಪರಿಚಿತವಾದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಆಗಿ ಹೊರಹೊಮ್ಮಿತು.

ಆದರೆ, ಈ ಮಹಾನ್ ಇತಿಹಾಸವನ್ನು ಹೇಳುವಲ್ಲಿ ಒಂದು ದುಃಖಕರ ನಿರ್ಲಕ್ಷ್ಯವೂ ಇದೆ. ಬಹಳಷ್ಟು ಜನರು ಎಚ್ಎಎಲ್ ನಿರ್ಮಾಣದ ಹಿಂದಿನ ಕರ್ತೃಗಳು ಎಂದು ಬೇರೆಯವರಿಗೆ ತಪ್ಪಾಗಿ ಮನ್ನಣೆ ನೀಡುತ್ತಾ, ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ನಿರ್ವಹಿಸಿದ ಮಹತ್ವದ ಪಾತ್ರವನ್ನು ಕಡೆಗಣಿಸುತ್ತಾರೆ. ವಾಲ್ಚಂದ್ ಹೀರಾಚಂದ್ ಅವರು ಈ ಯೋಜನೆಯ ಆರಂಭಕ್ಕಾಗಿ ಕೈಗೊಂಡ ಔದ್ಯಮಿಕ ಕ್ರಮಗಳಿಗೆ ನಿಜಕ್ಕೂ ಗೌರವ ಸಲ್ಲಬೇಕು. ಆದರೆ, ಮಹಾರಾಜರ ಕೊಡುಗೆ ಸಂಪೂರ್ಣವಾಗಿ ದೇಶಭಕ್ತಿಯ ದೂರದೃಷ್ಟಿಯದಾಗಿತ್ತೇ ಹೊರತು ಲಾಭದ ದೃಷ್ಟಿಕೋನ ಹೊಂದಿರಲೇ ಇಲ್ಲ. ವಾಸ್ತವವಾಗಿ ಅಪಾಯವನ್ನು ಲೆಕ್ಕಿಸದೆ ಯೋಜನೆಯನ್ನು ಕೈಗೆತ್ತಿಕೊಂಡದ್ದು, ಎಲ್ಲರೂ ಯೋಜನೆಯನ್ನು ತಿರಸ್ಕರಿಸಿದಾಗ ಅದಕ್ಕಾಗಿ ಭೂಮಿ ಮತ್ತು ಬಂಡವಾಳವನ್ನು ಒದಗಿಸಿದ್ದು ಜಯಚಾಮರಾಜೇಂದ್ರ ಒಡೆಯರ್.

ಇಂದು ಎಚ್ಎಎಲ್ ಭಾರತದ ಏರೋಸ್ಪೇಸ್ ಮತ್ತು ರಕ್ಷಣಾ ವಲಯದಲ್ಲಿ ದೈತ್ಯ ಸಂಸ್ಥೆಯಾಗಿ ಬೆಳೆದು ನಿಂತಿದೆ. ಇಂದು ತೇಜಸ್ ರೀತಿಯ ಯುದ್ಧ ವಿಮಾನಗಳಿಂದ, ಧ್ರುವ್ ಮತ್ತು ಪ್ರಚಂಡ್ ನಂತಹ ಹೆಲಿಕಾಪ್ಟರ್ಗಳ ತನಕ ಎಲ್ಲವನ್ನೂ ವಿನ್ಯಾಸಗೊಳಿಸಿ, ಉತ್ಪಾದಿಸುತ್ತದೆ. ಎಚ್ಎಎಲ್ ಇಂದು ಭಾರತದಾದ್ಯಂತ ಉತ್ಪಾದನಾ ಘಟಕಗಳನ್ನು ಹೊಂದಿದ್ದು, ಜಾಗತಿಕ ಏರೋಸ್ಪೇಸ್ ಕಂಪನಿಗಳೊಡನೆಯೂ ಸಹಯೋಗ ಸಾಧಿಸಿ ಕಾರ್ಯಾಚರಿಸುತ್ತಿದೆ. ದೇಶೀಯ ವಿಮಾನ ಅಭಿವೃದ್ಧಿಯಲ್ಲಿ ಎಚ್ಎಎಲ್ ಇಂದಿನ ಸಾಧನೆಗಳು, ದೇಶಕ್ಕೆ ಅತ್ಯಂತ ಅವಶ್ಯಕವಾಗಿದ್ದಾಗ ಭಾರತಕ್ಕೆ ಹಾರಾಡಲು ರೆಕ್ಕೆಗಳನ್ನು ನೀಡಿದ ಯುವ ಮಹಾರಾಜರ ಕನಸುಗಳನ್ನು ಇಂದು ಪ್ರತಿನಿಧಿಸುತ್ತಿವೆ.

ಪ್ರತಿವರ್ಷವೂ ಡಿಸೆಂಬರ್ 23ರಂದು ಎಚ್ಎಎಲ್ ಸ್ಥಾಪನಾ ದಿನವನ್ನು ಆಚರಿಸುವಾಗ, ನಾವು ಅದರ ಸ್ಥಾಪನೆಯ ಹಿಂದಿನ ಸಂಪೂರ್ಣ ಕಥೆಯನ್ನು ನೆನಪಿಟ್ಟುಕೊಳ್ಳೋಣ. ಭಾರತಕ್ಕೆ ಅಸಾಧಾರಣ ಧೈರ್ಯ ಮತ್ತು ದೂರದೃಷ್ಟಿಯ ಅಪಾರ ಅವಶ್ಯಕತೆ ಇದ್ದಾಗ, ಅದೆರಡನ್ನೂ ಪ್ರದರ್ಶಿಸಿದ 21 ವರ್ಷ ವಯಸ್ಸಿನ ಯುವ ದೊರೆಯನ್ನೂ ಗೌರವಿಸೋಣ. ಜಯಚಾಮರಾಜೇಂದ್ರ ಒಡೆಯರ್ ಕೇವಲ ಒಂದು ವಿಮಾನ ನಿರ್ಮಾಣ ಕಂಪನಿಯ ಸ್ಥಾಪನೆಗೆ ನೆರವಾದುದಲ್ಲ. ಬದಲಿಗೆ, ಅವರು ಭಾರತದ ಸ್ವತಂತ್ರ ಭವಿಷ್ಯಕ್ಕೆ ಮತ್ತು ಸ್ವಾವಲಂಬನೆಗೆ ಹೂಡಿಕೆ ನಡೆಸಿದ್ದರು. ಅವರ ದೂರದೃಷ್ಟಿ ಬೆಂಗಳೂರನ್ನು ಒಂದು ಏರೋಸ್ಪೇಸ್ ಕೇಂದ್ರವನ್ನಾಗಿ ರೂಪಿಸಿ, ಜಾಗತಿಕ ಏರೋಸ್ಪೇಸ್ ಶಕ್ತಿಯಾಗುವತ್ತ ಭಾರತದ ಹಾದಿಗೆ ತಳಪಾಯ ನಿರ್ಮಿಸಿತ್ತು. ಜಯಚಾಮರಾಜೇಂದ್ರ ಒಡೆಯರ್ ನಿಜಕ್ಕೂ ಭಾರತಕ್ಕೆ ರೆಕ್ಕೆ ನೀಡಿದ್ದರು. ಅದಕ್ಕಾಗಿ ದೇಶ ಎಂದೆಂದಿಗೂ ಅವರಿಗೆ ಚಿರಋಣಿಯಾಗಿರುತ್ತದೆ.

ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ (girishlinganna@gmail.com)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.