ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ಹಿಂದಿಯೇತರ ರಾಜ್ಯಗಳ ಹಿತಕ್ಕೆ ಬಾಧಕ?

ಸಂಸದೀಯ ಸಮಿತಿಯ ವರದಿಗೆ ಬೇರೆಯದೇ ಉದ್ದೇಶಗಳಿರುವ ಗುಮಾನಿ ಇದೆ
Last Updated 17 ನವೆಂಬರ್ 2022, 21:33 IST
ಅಕ್ಷರ ಗಾತ್ರ

ಭಾಷಾವಾರು ಪ್ರಾಂತಗಳ ರಚನೆಗೆ ಎರಡು ಉದ್ದೇಶಗಳಿವೆ. ಒಂದು, ಜನಕಲ್ಯಾಣ ಸುಗಮಗೊಳಿಸಲು ಜನರ ಭಾಷೆಯಲ್ಲೇ ಆಡಳಿತ, ಶಿಕ್ಷಣ ನೀಡುವುದು. ಎರಡು, ಒಕ್ಕೂಟ ವ್ಯವಸ್ಥೆಯನ್ನು ಬಲಗೊಳಿಸಲು ವಿಕೇಂದ್ರೀಕೃತ ಆಡಳಿತಕ್ಕೆ ಮಹತ್ವ ನೀಡುವುದು. ಈ ಉದ್ದೇಶಗಳನ್ನು ನಿರಾಕರಿಸುವ ಎಲ್ಲ ಲಕ್ಷಣಗಳು ಗೃಹ ಇಲಾಖೆಯ ಅಧಿಕೃತ ಭಾಷೆಗಳ ಬಗೆಗಿನ ಸಂಸದೀಯ ಸಮಿತಿಯು ಸೆಪ್ಟೆಂಬರ್‌ನಲ್ಲಿ ರಾಷ್ಟ್ರಪತಿಗೆ ಸಲ್ಲಿಸಿರುವ ವರದಿಯಲ್ಲಿವೆ.

1. ಕೇಂದ್ರ ಸರ್ಕಾರದ ಇಲಾಖೆಗಳಿಗೆ ಸಿಬ್ಬಂದಿಯ ನೇಮಕಾತಿಗೆ ನಡೆಸುವ ಲಿಖಿತ ಪರೀಕ್ಷೆಯನ್ನು ಹಿಂದಿಯಲ್ಲಿ ಮಾತ್ರ ನಡೆಸಬೇಕು.

2. ಕೇಂದ್ರೀಯ ವಿದ್ಯಾಲಯಗಳಲ್ಲಿ, ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ, ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್, ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್‍ನಲ್ಲಿ ಹಿಂದಿಯಲ್ಲೇ ಪಠ್ಯ ಪ್ರವಚನಗಳು ನಡೆಯಬೇಕು.

3. ರಾಜ್ಯಗಳು ಹಿಂದಿ ಪ್ರಚಾರ ಮಾಡುವುದನ್ನು ಕಡ್ಡಾಯಗೊಳಿಸಬೇಕು ಎಂಬಂಥ ಶಿಫಾರಸುಗಳಿವೆ. ಸದ್ಯಕ್ಕೆ ಇವು ಶಿಫಾರಸುಗಳು. ಒಂದು ವೇಳೆ ಇವು ಅನುಷ್ಠಾನಗೊಂಡರೆ ಹಿಂದಿಯೇತರ ರಾಜ್ಯಗಳ ಉದ್ಯೋಗಾರ್ಥಿಗಳು, ಶಿಕ್ಷಣಾರ್ಥಿಗಳ ಭವಿಷ್ಯದ ಮೇಲೆ ಗಾಢ ಪರಿಣಾಮ ಬೀರಬಹುದು.

ಕೇಂದ್ರೀಯ ಶಿಕ್ಷಣ ಸಂಸ್ಥೆಗಳಲ್ಲಿ ಯಾವ ಮಾಧ್ಯಮದಲ್ಲಿ ಪಠ್ಯ ಪ್ರವಚನ ನಡೆಸಬೇಕು, ಕೇಂದ್ರ ಸರ್ಕಾರದ ಇಲಾಖೆಗಳ ಪರೀಕ್ಷೆಯನ್ನು ಯಾವ ಭಾಷೆಯಲ್ಲಿ ನಡೆಸಬೇಕು ಎಂಬುದೆಲ್ಲ ಈ ಸಮಿತಿಯ ವ್ಯಾಪ್ತಿಗೆ ಬರುವುದಿಲ್ಲ. ಹಿಂದಿ ಜೊತೆಗೆ ಇಂಗ್ಲಿಷ್ ಕೂಡ ದೇಶದ ಅಧಿಕೃತ ಭಾಷೆಯೆಂದು ಅರವತ್ತರ ದಶಕದಲ್ಲೇ ತೀರ್ಮಾನವಾಗಿದೆ. ಇದನ್ನು ಬದಲಾಯಿಸಬೇಕಾದರೆ ಸಂವಿಧಾನ ತಿದ್ದುಪಡಿ ಆಗಬೇಕು. ಆದ್ದರಿಂದ ಅಧಿಕೃತ ಭಾಷೆ ಬಗೆಗಿನ ವರದಿಗೆ ಬೇರೆ ಉದ್ದೇಶಗಳಿವೆ ಎನ್ನುವ ಗುಮಾನಿ ಇದೆ. ಬೇರೆ ಉದ್ದೇಶಗಳು ಅರ್ಥವಾಗಬೇಕಾದರೆ ವರ್ತಮಾನದಲ್ಲಿ ನಡೆಯುತ್ತಿರುವ, ಎಲ್ಲವನ್ನೂ ಕೇಂದ್ರೀಕರಿಸುವ ಪ್ರಕ್ರಿಯೆಯನ್ನು ಗಮನಿಸಬೇಕು.

ಈ ಎಲ್ಲ ಬೆಳವಣಿಗೆಗಳಿಗೂ ಬಿಜೆಪಿಯ ಒಂದು ದೇಶ, ಒಂದು ಭಾಷೆ, ಒಂದು ಸಂಸ್ಕೃತಿ, ಒಂದು ಮಾರುಕಟ್ಟೆ, ಒಂದು ತೆರಿಗೆ, ಒಂದು ಚುನಾವಣೆ ಉದ್ದೇಶಕ್ಕೂ ಸಂಬಂಧ ಇದೆ. ಈ ಸಾಲಿನಲ್ಲಿ ಪರಿಗಣಿಸಬಹುದಾದ ಕೆಲವು ಬೆಳವಣಿಗೆಗಳು ಇಂತಿವೆ.1. ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ), 2. ಕೇಂದ್ರ ಮತ್ತು ರಾಜ್ಯಗಳ ನಡುವೆ ಸಂಪನ್ಮೂಲ ವಿತರಣೆ ಮತ್ತು 3. ಮತಕ್ಷೇತ್ರಗಳ ಮರುವಿಂಗಡಣೆ.

ವಿವಿಧ ಭಾಷೆಗಳ ನೆಲೆಯಲ್ಲಿ ರೂಪುಗೊಂಡ ರಾಜ್ಯಗಳ ಅಭಿವೃದ್ಧಿಗೆ ಅವಶ್ಯವಿರುವ ಸಂಪನ್ಮೂಲ ರೂಢಿಸಿಕೊಳ್ಳಲು ತೆರಿಗೆ ವಿಧಿಸುವ ಹಕ್ಕನ್ನು ರಾಜ್ಯಗಳಿಗೆ ಸಂವಿಧಾನ ನೀಡಿದೆ. ಆದರೆ 2017ರಲ್ಲಿ ನಡೆದ ಸಂವಿಧಾನ ತಿದ್ದುಪಡಿ ಮತ್ತು ಜಿಎಸ್‍ಟಿ ಮಂಡಳಿ ರಚನೆಯು ರಾಜ್ಯಗಳ ತೆರಿಗೆ ವಿಧಿಸುವ ಅಧಿಕಾರವನ್ನು ಮೊಟಕುಗೊಳಿಸಿವೆ. ಈ ತಿದ್ದುಪಡಿ ನಂತರ, ಶೇ 80ರಷ್ಟು ಸರಕು ಸೇವೆಗಳ ಮೇಲೆ ತೆರಿಗೆ ವಿಧಿಸುವ ಮತ್ತು ಸಂಗ್ರಹಿಸುವ ಅಧಿಕಾರ ಜಿಎಸ್‍ಟಿ ಮಂಡಳಿಗೆ ವರ್ಗಾವಣೆ ಆಗಿದೆ. ‘ತೆರಿಗೆ ವಿಧಿಸುವ ವಿಚಾರದಲ್ಲಿ ಶಾಸನ ರೂಪಿಸುವ ಸಮಾನ ಅಧಿಕಾರವು ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಕ್ಕೆ ಇದೆ. ಹೀಗಾಗಿ, ಜಿಎಸ್‌ಟಿ ಮಂಡಳಿಯ ಶಿಫಾರಸುಗಳು ಕಡ್ಡಾಯವಾಗಿ ಪಾಲಿಸಬೇಕಾದವು ಅಲ್ಲ’ ಎಂದು ಸುಪ್ರೀಂ ಕೋರ್ಟ್‌ ಹೇಳಿದ್ದರೂ, ಯಾವ ರಾಜ್ಯವೂ ಶಿಫಾರಸನ್ನು ಮೀರಿಲ್ಲ. ಇಂದು ರಾಜ್ಯಗಳು ತಮ್ಮ ಸಮಸ್ಯೆ ಪರಿಹಾರಕ್ಕಾಗಿ ಪ್ರತ್ಯೇಕ ತೆರಿಗೆ ಸಂಗ್ರಹಿಸುವ ಸ್ಥಿತಿಯಲ್ಲಿಲ್ಲ. ಸಂಪನ್ಮೂಲ ಇಲ್ಲವಾದರೆ ನಮ್ಮ ಭಾಷೆ, ನಮ್ಮ ಸಂಸ್ಕೃತಿ, ನಮ್ಮ ಅಭಿವೃದ್ಧಿ ಬಗ್ಗೆ ಮಾತನಾಡುವುದು ಒಣ ಚರ್ಚೆ ಆಗುತ್ತದೆ.

ರಾಜ್ಯಗಳ ಅಭಿವೃದ್ಧಿಗೆ ಅಡ್ಡಿಯಾಗುವ ಎರಡನೇ ಅಂಶವು ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಂಪನ್ಮೂಲ ಹಂಚುವಿಕೆ. ಕೇಂದ್ರ ಸರ್ಕಾರ ಸಂಗ್ರಹ ಮಾಡುವ ಆದಾಯ ತೆರಿಗೆ, ಉದ್ದಿಮೆಗಳ ಲಾಭದ ಮೇಲಿನ ತೆರಿಗೆ, ಕೇಂದ್ರದ ಅಬಕಾರಿ ತೆರಿಗೆ ಮತ್ತು ಇತರ ಸಂಪನ್ಮೂಲಗಳಲ್ಲಿರಾಜ್ಯಗಳ ಪಾಲನ್ನು ಹಣಕಾಸು ಸಮಿತಿ ನಿರ್ಧರಿಸುತ್ತದೆ.15ನೇ ಹಣಕಾಸು ಸಮಿತಿಯು ರಾಜ್ಯಗಳೊಂದಿಗೆ ಹಂಚಿಕೊಳ್ಳಬೇಕಾದ ಸಂಪನ್ಮೂಲದ ಪಾಲನ್ನು ಹಿಂದಿನ ಶೇ 32ರಿಂದ ಶೇ 42ಕ್ಕೆ ಏರಿಸಿದೆ. ಈ ಸಮಿತಿಯ ವರದಿ ಜಾರಿಗೆ ಬರುವ ಮುನ್ನವೇ ಕೇಂದ್ರ ಸರ್ಕಾರವು ರಾಜ್ಯಗಳ ಪಾಲನ್ನು ಹಿಂದಿನ ಸ್ಥಿತಿಯಲ್ಲೇ ಇಡಲು ಪ್ರಯತ್ನಿಸುತ್ತಿದೆ.

ಕೇಂದ್ರವು ಸಂಗ್ರಹ ಮಾಡುವ ತೆರಿಗೆಯಲ್ಲಿ ಎರಡು ಭಾಗಗಳಿವೆ. ಒಂದು, ಮೂಲ ತೆರಿಗೆ ಮತ್ತು ಎರಡು, ಸೆಸ್. ಮೂಲ ತೆರಿಗೆಯನ್ನು ರಾಜ್ಯಗಳೊಂದಿಗೆ ಹಂಚಿಕೊಳ್ಳಬೇಕು. ಸೆಸ್‍ ಅನ್ನು ರಾಜ್ಯಗಳೊಂದಿಗೆ ಹಂಚಿಕೊಳ್ಳುವ ಅಗತ್ಯ ಇಲ್ಲ. ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸೆಸ್ ಸಂಗ್ರಹ ಪ್ರಮಾಣ ಹೆಚ್ಚುತ್ತಾ ಹೋಗಿದೆ. 2011-12ರಲ್ಲಿ ಶೇ 10ರಷ್ಟಿದ್ದ ಸೆಸ್ ಸಂಗ್ರಹವು 2021-22ರ ವೇಳೆಗೆ ಶೇ 20ಕ್ಕೆ ಏರಿದೆ. ಅಂದರೆ ರಾಜ್ಯಗಳೊಂದಿಗೆ ಹಂಚಿಕೊಳ್ಳುವ ಭಾಗಶೇ 100ರಿಂದ ಶೇ 90 ಮತ್ತು ಈಗ ಶೇ 80ಕ್ಕೆ ಇಳಿದಿದೆ.

ತೈಲದ ಮೇಲಿನ ಅಬಕಾರಿ ತೆರಿಗೆ (ಸೆಂಟ್ರಲ್ ಎಕ್ಸೈಸ್) ಕೇಂದ್ರಕ್ಕೆ ಬಹುದೊಡ್ಡ ರೆವಿನ್ಯೂ ಸಂಗ್ರಹದ ಮೂಲವಾಗಿದೆ. 2021ರಲ್ಲಿ ಒಂದು ಲೀಟರ್ ಪೆಟ್ರೋಲ್ ಮೇಲೆ ಸೆಂಟ್ರಲ್ ಎಕ್ಸೈಸ್ ₹ 32 ಇತ್ತು. ಇದರಲ್ಲಿ ₹ 1.40 ಮಾತ್ರ ಮೂಲ ತೆರಿಗೆ ಆಗಿದ್ದು, ₹ 30.60 ಸೆಸ್ ಆಗಿತ್ತು. ಅಂದರೆ ಯಾವುದೇ ರಾಜ್ಯದ ಮೂಲೆಯಲ್ಲೂ ಒಂದು ಲೀಟರ್ ಪೆಟ್ರೋಲ್ ಖರೀದಿಸಿದಾಗ ಪ್ರತಿಯೊಬ್ಬರೂ ಕನಿಷ್ಠ ₹ 30 ಅನ್ನು ಕೇಂದ್ರದ ಖಜಾನೆಗೆ ತುಂಬುತ್ತಾರೆ.

ಮೇಲಿನವುಗಳೊಂದಿಗೆ ಮತಕ್ಷೇತ್ರಗಳ ಮರುವಿಂಗಡಣೆಯು ನಮ್ಮ ಒಕ್ಕೂಟ ವ್ಯವಸ್ಥೆಗೆ ಬಹುದೊಡ್ಡ ಸವಾಲನ್ನು ಒಡ್ಡಬಹುದು. ಸಂವಿಧಾನದ ಪ್ರಕಾರ, ವಿಧಾನಸಭೆ ಮತ್ತು ಲೋಕಸಭೆ ಕ್ಷೇತ್ರಗಳ ಮರುವಿಂಗಡಣೆಯನ್ನು ಜನಸಂಖ್ಯೆಯ ಆಧಾರದಲ್ಲಿ ನಡೆಸಬೇಕು. ಅದರಂತೆ 1951, 61 ಮತ್ತು 71ರಲ್ಲಿ ಈ ಕಾರ್ಯ ನಡೆದಿದೆ. 1976ರಲ್ಲಿ ಸಂವಿಧಾನ ತಿದ್ದುಪಡಿ ಮಾಡಿ ಕ್ಷೇತ್ರಗಳ ಮರುವಿಂಗಡಣೆಯನ್ನು 2001ಕ್ಕೆ ಮುಂದೂಡಲಾಯಿತು. ಇದಕ್ಕೆ ಕಾರಣ, ಕೇಂದ್ರದ ಜನಸಂಖ್ಯೆ ನಿಯಂತ್ರಣ ನೀತಿಯನ್ನು ದಕ್ಷಿಣದ ರಾಜ್ಯಗಳು ಜಾರಿಗೊಳಿಸಿದಷ್ಟು ಪರಿಣಾಮಕಾರಿಯಾಗಿ ಉತ್ತರದ ಹಿಂದಿ ರಾಜ್ಯಗಳು ಜಾರಿಗೊಳಿಸಲಿಲ್ಲ ಎಂಬುದು. ಇದರಿಂದ ಉತ್ತರಪ್ರದೇಶ, ಬಿಹಾರ, ಮಧ್ಯಪ್ರದೇಶ, ರಾಜಸ್ಥಾನದಲ್ಲಿ ಜನಸಂಖ್ಯೆ ಹೆಚ್ಚಾಗಿದೆ. ಇದೇ ಕಾರಣವನ್ನು ಮುಂದಿಟ್ಟು 2002ರಲ್ಲಿ ಎನ್‍ಡಿಎ ಸರ್ಕಾರ ಕೂಡ ಕ್ಷೇತ್ರಗಳ ಮರುವಿಂಗಡಣೆಯನ್ನು 2026ಕ್ಕೆ ಮುಂದೂಡಿದೆ. ಜನಸಂಖ್ಯೆಯನ್ನು ಆಧರಿಸಿ ಕ್ಷೇತ್ರಗಳ ಮರುವಿಂಗಡಣೆ ಆಗದೆ ಈಗಾಗಲೇ 50 ವರ್ಷಗಳಾಗಿವೆ. ಆದ್ದರಿಂದ 2026ರಲ್ಲಿ ಕ್ಷೇತ್ರಗಳ ಮರುವಿಂಗಡಣೆ ಮಾಡುವ ಅನಿವಾರ್ಯ ಇದೆ.

2021ರ ಜನಸಂಖ್ಯೆಯು ಐದು ವರ್ಷ ಹಿಂದಿನದು ಎಂಬ ನೆಪ ಹೇಳಿ 2026ರ ಉದ್ದೇಶಿತ ಕ್ಷೇತ್ರಗಳ ಮರುವಿಂಗಡಣೆ ಕಾರ್ಯವನ್ನು 2031ಕ್ಕೆ ಮುಂದೂಡುವ ಸಾಧ್ಯತೆ ಇಲ್ಲದಿಲ್ಲ. ಕೆಲವು ಅಧ್ಯಯನಗಳ ಪ್ರಕಾರ, ಒಂದು ವೇಳೆ 2031ರ ಜನಸಂಖ್ಯೆ ಪ್ರಕಾರ ಮರುವಿಂಗಡಣೆ ನಡೆದರೆ ಉತ್ತರಪ್ರದೇಶದಲ್ಲಿ ಈಗ ಇರುವ 80 ಲೋಕಸಭಾ ಸೀಟುಗಳು 143ಕ್ಕೆ, ಬಿಹಾರದಲ್ಲಿರುವ 40 ಸೀಟುಗಳು 79ಕ್ಕೆ, ಮಧ್ಯಪ್ರದೇಶದಲ್ಲಿರುವ 29 ಸೀಟುಗಳು 52ಕ್ಕೆ, ರಾಜಸ್ಥಾನದಲ್ಲಿರುವ 25 ಸೀಟುಗಳು 50ಕ್ಕೆ ಏರುವ ಸಾಧ್ಯತೆಗಳಿವೆ ಮತ್ತು ಈ ನಾಲ್ಕು ರಾಜ್ಯಗಳಲ್ಲಿ ಒಟ್ಟು 324 ಸೀಟುಗಳಾಗಬಹುದು.

ಇದೇ ಸಂದರ್ಭದಲ್ಲಿ ದಕ್ಷಿಣದ ರಾಜ್ಯಗಳಲ್ಲಿ ವಿಶೇಷ ಏರಿಕೆ ಆಗುವುದಿಲ್ಲ. ಅಂಧ್ರಪ್ರದೇಶ ಮತ್ತು ತೆಲಂಗಾಣ ಸೇರಿ ಈಗ ಇರುವ 42 ಸೀಟುಗಳು 54ಕ್ಕೆ, ತಮಿಳುನಾಡಿನಲ್ಲಿರುವ 39 ಸೀಟುಗಳು 49ಕ್ಕೆ ಏರಿಕೆಯಾಗಲಿದ್ದು, ಕೇರಳದಲ್ಲಿರುವ 20 ಸೀಟುಗಳು ಯಥಾಸ್ಥಿತಿಯಲ್ಲಿ ಮುಂದುವರಿಯಲಿವೆ. ಒಡಿಶಾದಲ್ಲಿರುವ 21 ಸೀಟುಗಳು 26ಕ್ಕೆ ಏರುವ ಸಾಧ್ಯತೆಗಳಿವೆ ಮತ್ತು ಒಟ್ಟು ಈ ರಾಜ್ಯಗಳಲ್ಲಿ 149 ಸೀಟುಗಳಾಗಬಹುದು.

ಹೀಗೆ ಉತ್ತರದ ಹಿಂದಿ ರಾಜ್ಯಗಳಲ್ಲಿ 150 ಸೀಟುಗಳು ಹೆಚ್ಚಾದಾಗ ದಕ್ಷಿಣದ ಹಿಂದಿಯೇತರ ರಾಜ್ಯಗಳಲ್ಲಿ ಬರೀ 27 ಸೀಟುಗಳು ಹೆಚ್ಚಾಗಬಹುದು. ಇಂತಹ ಒಂದು ರಾಜಕೀಯ ಸ್ಥಿತಿ ಬಿಜೆಪಿಗೆ ಹೆಚ್ಚು ಅನುಕೂಲಕರ ಆಗಬಹುದು. ಏಕೆಂದರೆ, ಬಿಜೆಪಿ ಮಾತ್ರ ಒಂದು ದೇಶ, ಒಂದು ಭಾಷೆ, ಒಂದು ಧರ್ಮ, ಒಂದು ಮಾರುಕಟ್ಟೆಯಂತಹ ಹಲವು ‘ಒಂದು’ಗಳ ಬಗ್ಗೆ ಕಾರ್ಯಕ್ರಮಗಳನ್ನು ಹಾಕಿಕೊಂಡಿರುವುದು.

ಹಿಂದಿಗೆ ಮಹತ್ವ ನೀಡುವುದರಿಂದ, ಇಂದು ಅಲ್ಪಸಂಖ್ಯಾತರನ್ನು ಹೊರಗಿಟ್ಟು ಅಧಿಕಾರಕ್ಕೆ ಏರುವ ಬಿಜೆಪಿ ಮುಂದೊಂದು ದಿನ ಹಿಂದಿಯೇತರರನ್ನು ಹೊರಗಿಟ್ಟು ಕೂಡ ಅಧಿಕಾರಕ್ಕೆ ಏರಬಹುದು. ಆದರೆ ದೇಶದ ಅದರಲ್ಲೂ ಹಿಂದಿಯೇತರ ರಾಜ್ಯಗಳ ಭವಿಷ್ಯದ ದೃಷ್ಟಿಯಿಂದ ಇವೆಲ್ಲವೂ ಉತ್ತಮ ಬೆಳವಣಿಗೆಗಳಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT