ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಅನುತ್ತರ | ಋಷಿವಾಕ್ಯದೊಡನೆ ವಿಜ್ಞಾನ ಕಲೆ...

Published 5 ಸೆಪ್ಟೆಂಬರ್ 2023, 21:41 IST
Last Updated 5 ಸೆಪ್ಟೆಂಬರ್ 2023, 21:41 IST
ಅಕ್ಷರ ಗಾತ್ರ

ಡಿವಿಜಿ ಅವರ ಮಿತ್ರರೊಬ್ಬರಿಗೆ ಕತ್ತು ಉಳುಕಿತ್ತಂತೆ.

ಸ್ನೇಹಿತರೊಬ್ಬರು ಹೇಳಿದರು: ‘ಮಂತ್ರ ಹಾಕಿದರೆ ಉಳುಕು ಹೋಗುತ್ತದೆ.’ ಕೂಡಲೇ ಡಿವಿಜಿ ಹೇಳಿದರು: ‘ಹೌದು ಹೌದು! ಮಂತ್ರ ಹಾಕಿ ನೀವಿದರೆ ಹೊರಟುಹೋಗುತ್ತದೆ!!’

‘ಚಂದ್ರಯಾನ 3’ರ ಸಮಯದಲ್ಲಿ ಕೆಲವರು ಇಸ್ರೊ ವಿಜ್ಞಾನಿಗಳು ತಿರುಪತಿಗೆ ಹೋದಾಗ ನಡೆದ ಚರ್ಚೆಗಳ ಸಂದರ್ಭದಲ್ಲಿ ಈ ಪ್ರಸಂಗ ನೆನಪಾಯಿತು. ನಮ್ಮ ಮಾನಸಿಕತೆಯಲ್ಲಿರುವ ವಿಜ್ಞಾನ ಮತ್ತು ಧಾರ್ಮಿಕ ನಂಬಿಕೆಗಳ ಸಾಮರಸ್ಯವನ್ನು ಡಿವಿಜಿ ಮಾತು ಧ್ವನಿಸಿದೆ.

ತಿರುಪತಿಗೆ ಹೋಗಿಬಂದ ವಿಜ್ಞಾನಿಗಳನ್ನು ಕೆಲವರು ಟೀಕಿಸಿ, ‘ಇದು ಮೌಢ್ಯ’ ಎಂದು ಜರಿದರು. ಕೆಲವರಂತೂ ‘ಚಂದ್ರಯಾನ’ದ ವೈಫಲ್ಯವನ್ನೇ ಹಂಬಲಿಸಿದರು! ವಿಜ್ಞಾನದ ಯಶಸ್ಸಿಗಿಂತಲೂ ದೇಶದ ಹೆಮ್ಮೆಗಿಂತಲೂ ಅವರಿಗೆ ತಮ್ಮ ‘ರಾಜಕೀಯ’ವೇ ಮುಖ್ಯವಾಯಿತು. ಅನಂತರ, ಇಸ್ರೊ ಮುಖ್ಯಸ್ಥ ಎಸ್‌. ಸೋಮನಾಥ್ ಚಂದ್ರಯಾನದ ಯಶಸ್ಸಿನ ಬಳಿಕ ಭದ್ರಕಾಳಿ ದೇವಸ್ಥಾನದಲ್ಲಿ ಪೂಜೆಯನ್ನು ಸಲ್ಲಿಸಿದರು. ‘ಬಾಹ್ಯ ಜಗತ್ತಿನ ಅನ್ವೇಷಣೆಗಾಗಿ ವಿಜ್ಞಾನವನ್ನೂ ಅಂತರಂಗದ ಅನ್ವೇಷಣೆಗಾಗಿ ಅಧ್ಯಾತ್ಮವನ್ನೂ ಆಶ್ರಯಿಸಿದ್ದೇನೆ’ ಎಂಬ ಅರ್ಥದ ಮಾತುಗಳನ್ನು ಆ ಸಮಯದಲ್ಲಿ ಹೇಳಿದರು. ಈ ಮಾತುಗಳಿಗೂ ಪರ, ವಿರೋಧಗಳು ಎದುರಾದವು. ಇಂಥ ಸಂದರ್ಭಗಳಲ್ಲಿ ನಡೆಯುವ ‘ಚರ್ಚೆ’ಗಳಲ್ಲಿ ರಾಗ–ದ್ವೇಷಗಳು ಕಾಣಿಸಿಕೊಳ್ಳುತ್ತಿವೆಯೇ ವಿನಾ ವಸ್ತುನಿಷ್ಠ ವಿಶ್ಲೇಷಣೆ ವಿರಳವಾಗುತ್ತಿದೆ. ಇದು ಖೇದಕರ ಬೆಳವಣಿಗೆ.

ಯಾರಿಗಾದರೂ ‘ವಿಜ್ಞಾನ’ದ ಬಗ್ಗೆಯಷ್ಟೇ ಪ್ರೀತಿ ಅಥವಾ ‘ಧರ್ಮ’ದ ಬಗ್ಗೆಯಷ್ಟೇ ಪ್ರೀತಿ ಇದ್ದಾಗ ಸಮಸ್ಯೆಗಳು ಎದುರಾಗುತ್ತವೆ. ಈ ಎರಡರ ವ್ಯಾಪ್ತಿ, ಶಕ್ತಿಗಳು ಎಲ್ಲಿಯತನಕ ಎಂಬುದರ ಅರಿವು ಈ ‘ಗುಂಪಿನವರಲ್ಲಿ’ ಇಲ್ಲದಿದ್ದಾಗ ಆಯಾ ವಿಷಯಗಳ ಸಮರ್ಥನೆಯು ಬಾಲಿಶತನದ ದಾರಿಯನ್ನು ಹಿಡಿಯುತ್ತದೆ. ‘ವಿಜ್ಞಾನಕ್ಕೆ ಗೊತ್ತಿಲ್ಲದ ಸಂಗತಿಗಳೇ ಸೃಷ್ಟಿಯಲ್ಲಿ ಇಲ್ಲ’ ಎಂದು ಭ್ರಮಿಸಿ, ವಿಜ್ಞಾನಿಗಳ ಧಾರ್ಮಿಕ ವಿಶ್ವಾಸ, ಶ್ರದ್ಧೆಯನ್ನು ಮೌಢ್ಯ ಎಂದು ಟೀಕಿಸಲಾಗುತ್ತದೆ. ವಾಸ್ತವದಲ್ಲಿ ಇಂಥವರು ಧಾರ್ಮಿಕತೆಯ ‘ಮೌಢ್ಯ’ವನ್ನು ಟೀಕಿಸುವ ಉಮೇದಿನಲ್ಲಿ ‘ವಿಜ್ಞಾನದ ಸರ್ವಜ್ಞತೆ’ ಎಂಬ ಮೌಢ್ಯದ ಅನುಯಾಯಿಗಳೇ ಆಗಿರುತ್ತಾರೆ.

ವಿಜ್ಞಾನಿಗಳಲ್ಲಿ ಅಂದಿನಿಂದ ಇಂದಿನವರೆಗೂ ಆಸ್ತಿಕರೂ ನಾಸ್ತಿಕರೂ ಇದ್ದಾರೆ. ವೈಜ್ಞಾನಿಕ ಸತ್ಯಗಳು ವೈಯಕ್ತಿಕ ನಂಬಿಕೆಗಳಿಗಿಂತ ಹೊರತಾದ ಪಾತಳಿಯ ಮೇಲೆ ಸ್ಥಾಪಿತವಾಗುವಂಥವು. ಈ ವಾಸ್ತವ ವಿಜ್ಞಾನಿಗಳಿಗೆ ಗೊತ್ತು. ಹೀಗಾಗಿ, ಅವರಲ್ಲಿ ಈ ವಿಷಯವಾಗಿ ಅಷ್ಟಾಗಿ ಗೊಂದಲಗಳಿರವು. ಆದರೆ ವಿಜ್ಞಾನದ ಲಕ್ಷಣದ ಬಗ್ಗೆ ಸ್ಪಷ್ಟತೆ ಇಲ್ಲದ ಕೆಲವರು ಸ್ವಘೋಷಿತ ವೈಜ್ಞಾನಿಕ ಮನೋಧರ್ಮದವರು ಮಾತ್ರ ಗೊಂದಲದಲ್ಲಿ ಒದ್ದಾಡುತ್ತಿರು ತ್ತಾರೆ. ಈ ಗುಂಪಿನವರ ಪೂರ್ವಗ್ರಹ ಎಷ್ಟು ಆಳವಾಗಿರು ತ್ತದೆ ಎಂದರೆ, ವಿಜ್ಞಾನಿಗಳೇ ವಿಜ್ಞಾನದ ಇತಿಮಿತಿಗಳ ಬಗ್ಗೆ ಹೇಳಿದರೂ ಕೇಳಲು ಇವರು ಸಿದ್ಧರಿರುವುದಿಲ್ಲ!

ಜಗತ್ತಿನಲ್ಲಿ ಎಷ್ಟೋ ಶ್ರೇಷ್ಠ ವಿಜ್ಞಾನಿಗಳು ಧಾರ್ಮಿಕರೂ ಆಗಿದ್ದರು. ಕಾಲಾನಂತರದಲ್ಲಿ ಜಗತ್ತು ಅವರ ವಿಜ್ಞಾನವನ್ನು ಸ್ವೀಕರಿಸಿದೆಯೇ ವಿನಾ ಅವರ ಧಾರ್ಮಿಕ ನಂಬಿಕೆಗಳನ್ನಲ್ಲ. ಆದರೆ ಅವರ ವೈಯಕ್ತಿಕ ‘ಧಾರ್ಮಿಕತೆ’ ಅವರ ಜ್ಞಾನಾನ್ವೇಷಣಕ್ಕೆ ದಾರಿಬುತ್ತಿಯಾಗಿ ಒದಗಿರುತ್ತದೆ. ನ್ಯೂಟನ್‌ ಮತ್ತು ನಮ್ಮವರೇ ಆದ ಶ್ರೀನಿವಾಸ ರಾಮಾನುಜನ್ – ಇಂಥ ಹಲವರು ಮಹಾಪ್ರತಿಭೆಗಳ ವೈಯಕ್ತಿಕ ನಂಬಿಕೆಗಳೂ ಜ್ಞಾನಾನ್ವೇಷಣೆಯ ಸಿದ್ಧಿಗಳೂ ಇಲ್ಲಿ ಸ್ಮರಣಾರ್ಹ.

ಯುರೋಪ್‌, ಚೀನಾ ಮತ್ತು ಭಾರತೀಯ ವೈಜ್ಞಾನಿಕ ಪರಂಪರೆಗಳ ಸಾಮ್ಯ, ವೈಷಮ್ಯಗಳ ಬಗ್ಗೆ ವಿದ್ವಾಂಸ ಪ್ರಿಟ್ಸ್‌ ಸ್ಟಾಲ್‌ ಬಹಳ ಹಿಂದೆಯೇ ಲೇಖನವೊಂದನ್ನು ಬರೆದಿದ್ದಾರೆ. ಅಲ್ಲಿ ಅವರು ಜ್ಞಾನದ ಲಕ್ಷಣವನ್ನು ನಿರೂಪಿಸಲು ಬಳಸಿಕೊಂಡಿರುವ ಮಾತು ಶಂಕರಾಚಾರ್ಯರದ್ದು ಎನ್ನುವುದು ಗಮನಾರ್ಹ. ‘ವಸ್ತುವಿನ ತತ್ವದ ಜ್ಞಾನವು ಪುರುಷನ ಬುದ್ಧಿಯನ್ನು ಅನುಸರಿಸಿ ಸಿದ್ಧವಾಗುವಂಥದ್ದಲ್ಲ; ಅದು ವಸ್ತುವಿಗೆ ಅಧೀನವಾಗಿಯೇ ಉಂಟಾಗುವುದು’. ಶಂಕರರ ಈ ಮಾತು ನಮ್ಮ ಸಂಸ್ಕೃತಿಯು ಸಾಧಿಸಿರುವ ವಿಜ್ಞಾನ–ಧಾರ್ಮಿಕತೆಗಳ ಸಾಮರಸ್ಯಕ್ಕೆ ಅದ್ಭುತ ಸಾಕ್ಷ್ಯವಾಗಿದೆ. ಸೋಮನಾಥ್‌ ಅವರ ಮಾತಿನಲ್ಲಿ ಕಾಣಬೇಕಾಗಿರುವುದು ಕೂಡ ಇಂಥ ಸಾಮರಸ್ಯವನ್ನೇ.

ಎ.ಕೆ. ರಾಮಾನುಜನ್‌ ಅವರ ಪ್ರಬಂಧವೊಂದು ಇಲ್ಲಿ ಅಧ್ಯಯನಾರ್ಹ. ‘ಭಾರತೀಯ ವಿಚಾರಧಾರೆ ಎಂಬುದಿದೆಯೆ?’ (ಈಸ್‌ ದೇರ್‌ ಆ್ಯನ್‌ ಇಂಡಿಯನ್‌ ವೇ ಆಫ್‌ ಥಿಂಕಿಂಗ್‌?) ಎಂಬ ಪ್ರಶ್ನೆಗೆ ಉತ್ತರದ ಹುಡುಕಾಟದಲ್ಲಿ ತೊಡಗುವ ಈ ಪ್ರಬಂಧವು, ಭಾರತೀಯ ಆಲೋಚನಾಕ್ರಮದ ಕೆಲವೊಂದು ಮಾದರಿಗಳನ್ನು ನಿರೂಪಿಸುತ್ತದೆ. ಲೇಖಕರ ತಂದೆ ಗಣಿತಜ್ಞ, ಖಗೋಳಶಾಸ್ತ್ರಜ್ಞ. ಜೊತೆಗೆ ಸಂಸ್ಕೃತಪಂಡಿತ, ಜ್ಯೋತಿಷಿ. ಅವರನ್ನು ನೋಡಲು ವಿದೇಶದಿಂದ ಗಣಿತಜ್ಞರೂ, ಸ್ಥಳೀಯ ಸಂಪ್ರದಾಯಸ್ಥ ಪಂಡಿತರೂ ಬರುತ್ತಿದ್ದರು. ‘ಒಂದೇ ಮಿದುಳಿನಲ್ಲಿ ಖಗೋಳಶಾಸ್ತ್ರ ಮತ್ತು ಜ್ಯೋತಿಷ ಎರಡೂ ಹೇಗೆ ಇರಬಲ್ಲವು?’ ಇದು ಲೇಖಕರ ಆಶ್ಚರ್ಯಕ್ಕೆ ಕಾರಣವಾಗುತ್ತಿದ್ದಿತು. ಅವರ ತಂದೆ ಹಣೆಗೆ ನಾಮವನ್ನಿಟ್ಟು, ಭಗವದ್ಗೀತೆಯ ಪಾರಾಯಣವನ್ನೂ ಮಾಡುತ್ತಿದ್ದರು, ಅನಂತರ ಬರ್ಟ್ರಂಡ್‌ ರಸಲ್‌ ಅವರನ್ನೂ ಮೆಚ್ಚಿ, ಓದುತ್ತಿದ್ದರು. ‘ಇದು ಹೇಗೆ ಸಾಧ್ಯವಾದೀತು’ ಎಂದು ಕೇಳಿದರೆ, ಅವರು ಹೇಳುತ್ತಿದ್ದರಂತೆ: ‘ಗೀತೆಯನ್ನು ಓದುವುದು ನನ್ನ ಮನಸ್ಸಿನ ಸ್ವಾಸ್ಥ್ಯಕ್ಕೆ. ಅಲ್ಲದೆ ಮಿದುಳಿನಲ್ಲಿ ಎರಡು ಗೋಳಗಳಿವೆಯಲ್ಲ!’ ಹಲವರಿಗೆ ಇದು ‘ಹಿಪಾಕ್ರಸಿ’ಯಾಗಿ ಕಾಣುತ್ತಿದ್ದಿರಬಹುದು. ಆದರೆ, ಯಾವುದರ ವ್ಯಾಪ್ತಿ ಎಲ್ಲಿಯತನಕ ಎಂಬುದರ ಸ್ಪಷ್ಟತೆ ಅವರಲ್ಲಿತ್ತು.

ಭಾರತೀಯ ಆಲೋಚನೆಯ ವೈಶಿಷ್ಟ್ಯ ಇರುವುದೇ ಜ್ಞಾನದ ‘ಶಿವ–ಶಕ್ತಿ’ ಸ್ವರೂಪವನ್ನು ‘ಸಂದರ್ಭನಿಷ್ಠ’ವಾಗಿ ಗ್ರಹಿಸುವ ಅದರ ಪ್ರಬುದ್ಧತೆಯಲ್ಲಿ. ಎಲ್ಲಿಯವರೆಗೂ ಕತ್ತನ್ನು ಉಳುಕಿಸಿಕೊಂಡವನಿಗೂ ಅದನ್ನು ನೀವುತ್ತಿರುವವನಿಗೂ ‘ಮಂತ್ರ’ ಮತ್ತು ‘ನೀವು’– ಈ ಎರಡು ಕ್ರಿಯೆಗಳ ಫಲದ ಗೊತ್ತು ಗುರಿಗಳ ಸ್ಪಷ್ಟತೆ ಇರುತ್ತದೆಯೋ ಅಲ್ಲಿಯವರೆಗೂ ಆ ಇಬ್ಬರ ವೈಚಾರಿಕ ಆರೋಗ್ಯಕ್ಕೆ ಧಕ್ಕೆ ಇರದು. ಉಪನಿಷತ್ತುಗಳಲ್ಲಿಯೇ ಇಂಥ ಪ್ರಬುದ್ಧ ಚಿಂತನೆ ಇದೆ. ಪರ–ಅಪರಾವಿದ್ಯೆ, ಪ್ರೇಯಸ್ಸು–ಶ್ರೇಯಸ್ಸುಗಳ ಕಲ್ಪನೆ– ಇವೆಲ್ಲವೂ ಇದೇ ಮಾದರಿಯ ಚಿಂತನೆಗಳು.

ಭಾರತೀಯ ವೈಜ್ಞಾನಿಕ ಪರಂಪರೆಯ ಬಗ್ಗೆ ಸೋಮನಾಥ್‌ ಅವರು ಆಡಿದ್ದ ಮಾತುಗಳು ಈ ಸಂದರ್ಭದಲ್ಲಿ ಮುನ್ನೆಲೆಗೆ ಬಂದವು. ಪ್ರಾಚೀನ ಭಾರತೀಯ ವೈಜ್ಞಾನಿಕ ಪರಂಪರೆಯನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲವಷ್ಟೆ. ಸೂರ್ಯಸಿದ್ಧಾಂತ, ಆರ್ಯಭಟೀಯ – ಇವೆಲ್ಲವೂ ಭಾರತೀಯ ಗಣಿತ–ಖಗೋಳವಿಜ್ಞಾನದ ಸಾಧನೆಗಳೇ ಹೌದು. ಜವಾಹರಲಾಲ್‌ ನೆಹರೂ ಅವರೂ ಭಾರತೀಯ ಗಣಿತ ಪರಂಪರೆಯ ಸಾಧನೆಗಳನ್ನು ಕೊಂಡಾಡಿದ್ದಾರೆ; ಮಾತ್ರವಲ್ಲ, ಧಾರ್ಮಿಕ ಪರಂಪರೆಗೂ ಗಣಿತದ ಸಾಧನೆಗೂ ಇದ್ದ ಸಂಬಂಧವನ್ನೂ ಗುರುತಿಸಿದ್ದಾರೆ. ಸೋಮನಾಥ್‌ ಅವರ ಮಾತುಗಳ ಹಿನ್ನೆಲೆಯಲ್ಲಿ ನಾವು ಗಂಭೀರವಾಗಿ ಆಲೋಚಿಸಬೇಕಾದದ್ದು, ವೈಜ್ಞಾನಿಕತೆಯೂ ಆಧ್ಯಾತ್ಮಿಕತೆಯೂ ಗಟ್ಟಿಯಾಗಿದ್ದ ಪರಂಪರೆಯೊಂದು ಸದ್ಯ ಎರಡರಲ್ಲೂ ತನ್ನ ಹೊಳಪನ್ನು ಕಳೆದುಕೊಳ್ಳಲು ಕಾರಣಗಳೇನು? ಸುಮಾರು ನೂರೈವತ್ತು ಕೋಟಿ ಜನಸಂಖ್ಯೆಗೆ ತಕ್ಕ ಪ್ರಮಾಣದಲ್ಲಿ ನಮ್ಮ ವೈಜ್ಞಾನಿಕ ಸಾಧನೆಗಳು ಕಾಣಿಸಿಕೊಳ್ಳುತ್ತಿಲ್ಲವೇಕೆ? ತವರುನೆಲದಲ್ಲೇ ಆಧ್ಯಾತ್ಮಿಕತೆ ಸವಕಲಾಗುತ್ತಿರುವುದಕ್ಕೆ ಕಾರಣಗಳೇನು?

ಇಂದು ನಮ್ಮ ಗ್ರಹಿಕೆಗಳಿಗೇ ಗ್ರಹಣ ಹಿಡಿದಂತಿದೆ. ಇದಕ್ಕೆ ಕಾರಣ ನಮ್ಮ ಎಲ್ಲ ತಿಳಿವಳಿಕೆಗಳ ಮೂಲವಾದ ಶಿಕ್ಷಣ ಪದ್ಧತಿ. ಆನಂದ ಕುಮಾರಸ್ವಾಮಿ ಈ ಪದ್ಧತಿಯನ್ನು ಕುರಿತು ‘Nowadays, nothing is taught of Self-knowledge, but only of Ego-knowledge’ ಎಂದಿರುವುದು ಮನನೀಯವಾಗಿದೆ. ನಮ್ಮ ನಡೆ ನುಡಿಗಳಲ್ಲಿ ಆತ್ಮಾವಲೋಕನಕ್ಕೆ (‘ಆತ್ಮ’ವು ದೇಹವನ್ನೂ ಚೈತನ್ಯವನ್ನೂ ಸಂಕೇತಿಸುತ್ತದೆ; ಇಲ್ಲಿ ‘ಆತ್ಮಾವಲೋಕನ’ ಎಂದರೆ ಅಂತರಂಗ, ಬಹಿರಂಗಗಳ ಪ್ರಜ್ಞಾಯಾನ) ಅವಕಾಶವೇ ಇಲ್ಲವಾಗುತ್ತಿದೆ, ಅಹಂಕಾರವೊಂದೇ ಮೆರೆಯುತ್ತಿದೆ. ಆದುದರಿಂದಲೇ ನಮ್ಮಲ್ಲಿ ವ್ಯಷ್ಟಿ ಮೂಲದಲ್ಲಿ ಇರಬೇಕಾದ ಪ್ರಬುದ್ಧತೆಯೂ ಸಮಷ್ಟಿ ಮೂಲದಲ್ಲಿ ಇರಬೇಕಾದ ಬದ್ಧತೆಯೂ ಮರೆಯಾಗುತ್ತಿವೆ. ‘ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ ಜಸವು ಜನಜೀವನಕೆ’ – ಡಿವಿಜಿಯವರ ಈ ಸೂತ್ರದಲ್ಲಿ ಭಾರತೀಯ ಪ್ರಜ್ಞಾಪರಂಪರೆಯ ಗಟ್ಟಿತನವಿದೆ. ಇದರ ಅನುಸಂಧಾನದಲ್ಲಿಯೇ ನಾವು ನಮ್ಮ ಅಂತರಂಗ, ಬಹಿರಂಗದ ಸಾಮರಸ್ಯವನ್ನು ಸಾಧಿಸಿಕೊಳ್ಳಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT