ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ವೈಚಾರಿಕ ಬೋಧನೆಗೆ ಕಾರ್ಮೋಡ

ಶಾಲೆಗಳ ಮೇಲೆ ಗೂಢಚಾರಿಕೆ ನಡೆದರೆ ಅಧ್ಯಾಪಕರು ನಿರ್ಭಿಡೆಯಿಂದ ಕೆಲಸ ಮಾಡಲಾದೀತೇ?
Published 17 ಫೆಬ್ರುವರಿ 2024, 0:30 IST
Last Updated 17 ಫೆಬ್ರುವರಿ 2024, 0:30 IST
ಅಕ್ಷರ ಗಾತ್ರ

ಮಂಗಳೂರಿನ ಸಂತ ಜೆರೋಸಾ ಶಾಲೆಯ ಅಧ್ಯಾಪಕಿಯೊಬ್ಬರು ಹಿಂದೂ ಧರ್ಮಕ್ಕೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ ನಡೆಸಿದ ಪ್ರತಿಭಟನೆಯ ರೂಪದ ದೌರ್ಜನ್ಯ ಆಘಾತಕಾರಿಯಾಗಿದೆ. ಆಘಾತಕಾರಿ ಯಾಕೆಂದರೆ, ಶಾಲೆಯ ನಾಲ್ಕು ಗೋಡೆಗಳ ನಡುವೆ ನಡೆಯುವ ಪಾಠದ ವಿಚಾರಗಳು ಆ ಗೋಡೆಗಳನ್ನು ದಾಟಿ ಪೋಷಕರನ್ನು ಮುಟ್ಟಿವೆ ಮತ್ತು ಅವರನ್ನು ಕೆರಳಿಸಿವೆ. ನಂತರ ಆ ಕೆರಳಿದ ಪೋಷಕರಿಂದ ಕೆಲವು ಧಾರ್ಮಿಕ ಸಂಘಟನೆಗಳ ಮುಖಂಡರಿಗೆ ಸುದ್ದಿ ಮುಟ್ಟಿದೆ! ಆ ಸುದ್ದಿ ಅಲ್ಲಿಂದ ರಾಜಕೀಯ ಪಕ್ಷವೊಂದರ ಸದಸ್ಯರಾದ ಜನಪ್ರತಿನಿಧಿಗಳಿಗೆ ತಲುಪಿದೆ. ಸುದ್ದಿ ತಿಳಿದವರು ಶಾಲೆಗೆ ದಾಳಿ ಮಾಡಿ ಗುಡುಗಿದ್ದಾರೆ. ಪೊಲೀಸರು, ಜಿಲ್ಲಾ ಆಡಳಿತದ ಅಧಿಕಾರಿಗಳ ಎದುರಿನಲ್ಲಿಯೇ ಅಧ್ಯಾಪಕಿಯನ್ನು ಅಮಾನತು ಮಾಡುವಂತೆ ಆಗ್ರಹಿಸಲಾಗಿದೆ.

ಬಳಿಕ ಅದೇ ಶಾಲೆಯ ಮಕ್ಕಳನ್ನು ಒಟ್ಟುಗೂಡಿಸಿಕೊಂಡು ‘ಹಿಂದೂ’ ಧರ್ಮದ ಪರವಾಗಿ ಘೋಷಣೆ ಕೂಗಿಸಲಾಗಿದೆ. ಅದೇ ಮಕ್ಕಳು ಮಾಧ್ಯಮಗಳಿಗೆ ಸಂದರ್ಶನ ನೀಡಿ, ತಮ್ಮ ಧರ್ಮದ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಶಿಕ್ಷಕರ ವಿರುದ್ಧ ಆರೋಪಿಸಿದ್ದಾರೆ. ಈ ಪ್ರಕರಣವು ಇನ್ನು ಮುಂದೆ ಈ ನೆಲದಲ್ಲಿ ಅಧ್ಯಾಪಕರಿಗೆ ಬೋಧನೆ ಮಾಡಲು ಸ್ವಾತಂತ್ರ್ಯ ಇಲ್ಲದ್ದನ್ನು ಮತ್ತು ಅಂತಹ ಸ್ವಾತಂತ್ರ್ಯವನ್ನು ಧರ್ಮದ ಹೆಸರಿನಲ್ಲಿ ಕಸಿದುಕೊಂಡಿರುವುದನ್ನು ಎತ್ತಿ ತೋರಿಸುತ್ತದೆ. ಅಲ್ಲದೆ ಶಿಕ್ಷಣ ಎನ್ನುವುದು ಇನ್ನು ಮುಂದೆ ಕಂದಾಚಾರಗಳು, ಗೊಡ್ಡು ಸಂಪ್ರದಾಯಗಳ ಸ್ತುತಿಪಾಠ ಮಾತ್ರವಾಗಿರುತ್ತದೆ ಎಂಬುದನ್ನೂ ಸೂಚಿಸುತ್ತದೆ.

ಹಾದಿಬೀದಿಗಳಲ್ಲಿ ಜಾನುವಾರು ರಕ್ಷಣೆಯ ಹೆಸರಿನಲ್ಲಿ ದಾಂದಲೆ ಮಾಡಿದಂತೆ ಶಾಲೆಗಳ ಮೇಲೆ ಗೂಢಚಾರಿಕೆ ಮಾಡಿಸಿ ದಾಂದಲೆ ಮಾಡಿದರೆ ಅಧ್ಯಾಪಕರು ನಿರ್ಭಿಡೆಯಿಂದ ಕೆಲಸ ಮಾಡಲು ಸಾಧ್ಯವೇ? ಅಲ್ಲಿ ಮುಕ್ತ ಚಿಂತನೆಗೆ ಮತ್ತು ಬೋಧನೆಗೆ ಅವಕಾಶವಿರಲು ಸಾಧ್ಯವೇ? ಈ ಪ್ರಶ್ನೆಗಳು ಕಾಡುತ್ತಿವೆ.

ಮಂಗಳೂರಿನ ಈ ಪ್ರಕರಣ ಹೆಚ್ಚು ಸುದ್ದಿ ಮಾಡಿದೆಯಷ್ಟೇ. ಇಂತಹ ಹಲವು ಪ್ರಕರಣಗಳು ಘಟಿಸಿವೆ ಮತ್ತು ಅವು ತಂದೊಡ್ಡುವ ಸವಾಲುಗಳನ್ನು ಅನೇಕ ಅಧ್ಯಾಪಕರು ಕಾಲೇಜುಗಳಲ್ಲಿ ನಿತ್ಯ ಒಂದಲ್ಲ ಒಂದು ಬಗೆಯಲ್ಲಿ ಎದುರಿಸುತ್ತಿದ್ದಾರೆ. ಇಲ್ಲಿ ಶಾಲೆಯ ಮಕ್ಕಳಾಗಿರುವುದರಿಂದ ಅವರು ಪೋಷಕರಿಗೆ ಸುದ್ದಿ ಮುಟ್ಟಿಸಿದ್ದಾರೆ. ಕಾಲೇಜುಗಳ ಹಂತದಲ್ಲಿ ವಿದ್ಯಾರ್ಥಿಗಳಿಂದ ಹೊರಗಿನ ಸಂಘಟನೆಗಳ ವಕ್ತಾರರಿಗೆ ನೇರವಾಗಿ ಸುದ್ದಿ ಮುಟ್ಟುತ್ತಿದೆ. ಆ ಮೂಲಕ ವಿದ್ಯಾರ್ಥಿಗಳೇ ಗುಂಪುಗೂಡಿಕೊಂಡು, ವೈಚಾರಿಕವಾಗಿ ಬೋಧನೆ ಮಾಡುವ ಅಧ್ಯಾಪಕರ ಮೇಲೆ ಮುಗಿಬೀಳುತ್ತಿದ್ದಾರೆ. ಇಲ್ಲವೆ ಅಂತಹ ಅಧ್ಯಾಪಕರನ್ನು ಎದುರಿಸಲಾಗದಿದ್ದರೆ ಅವರ ವಿರುದ್ಧ ಅಪಪ್ರಚಾರ ಮಾಡುವುದು ಇಲ್ಲವೇ ಅವರ ತರಗತಿಗಳನ್ನು ಬಹಿಷ್ಕರಿಸುವಂತಹ ಪರಿಪಾಟ ಶುರುವಾಗಿದೆ.

ಅಂದರೆ, ಇಂದು ತರಗತಿಗಳಲ್ಲಿ ನಡೆಯುವ ಚರ್ಚೆಗಳು ಪೋಷಕರ ಇಲ್ಲವೇ ವಿದ್ಯಾರ್ಥಿಗಳ ಮೂಲಕ ಹೊರಗಿನವರಿಗೆ ಮುಟ್ಟುತ್ತಿವೆಯೆಂದರೆ, ವಿದ್ಯಾರ್ಥಿಗಳು ಮುಗ್ಧತೆಯನ್ನು ಕಳೆದುಕೊಂಡು ಮಾಹಿತಿದಾರರಾಗಿ ಕೆಲಸ ಮಾಡುತ್ತಿದ್ದಾರೆಯೇ? ಮಕ್ಕಳಿಗೆ ವೈಚಾರಿಕತೆಗಿಂತ ಧರ್ಮದ ವಿಚಾರಗಳೇ ಮುಖ್ಯವಾದವೇ? ಅಲ್ಲದೆ ಪೋಷಕರು ಮಕ್ಕಳ ಮಾತುಗಳನ್ನು ಕೇಳಿ ಆಕ್ರೋಶಗೊಂಡು ಮತ್ತ್ಯಾರಿಗೋ ಸುದ್ದಿ ಮುಟ್ಟಿಸುತ್ತಿದ್ದಾರೆಂದರೆ, ಪೋಷಕರ ಮನಃಸ್ಥಿತಿ ಅದೆಷ್ಟು ಮಲಿನಗೊಂಡಿರಬಾರದು? ನಮ್ಮ ಸಮಾಜ ಹೀಗೆ ಜನರಿಗೆ ಪ್ರಿಯವೆನಿಸಿದ ಕೆಲವು ಧಾರ್ಮಿಕ ವಿಚಾರಗಳಿಂದ ಪ್ರೇರಣೆಗೊಂಡು ತಮ್ಮ ಧರ್ಮಕ್ಕೆ, ನಂಬಿಕೆಗಳಿಗೆ ವಿರುದ್ಧವಾದುದನ್ನು ಶಾಲೆಗಳಲ್ಲಿ ಬೋಧಿಸಲಾಗುತ್ತಿದೆ ಎಂದು ಪ್ರತಿಭಟಿಸಲು ಮುಂದಾದರೆ, ಭವಿಷ್ಯದಲ್ಲಿ ಅದೆಂತಹ ಅಂಧಕಾರ ಕವಿಯಬಹುದು? ಒಂದುವೇಳೆ ಮಂಗಳೂರಿನಲ್ಲಿ ನಡೆದಂತಹ ಪ್ರಕರಣ ಎಲ್ಲೆಡೆ ನಡೆದರೆ ರಾಜ್ಯದಲ್ಲಿರುವ ಎಲ್ಲ ವಿಶ್ವವಿದ್ಯಾಲಯಗಳು, ಶಾಲಾ ಕಾಲೇಜುಗಳನ್ನು ಇಂದೇ ಮುಚ್ಚಬೇಕಾಗುತ್ತದೆ.

ಯಾಕೆಂದರೆ, ಪ್ರಾಥಮಿಕ ಹಂತದಿಂದ ವಿಶ್ವವಿದ್ಯಾಲಯಗಳ ಎಲ್ಲ ಹಂತದ ಭಾಷೆ ಮತ್ತು ಸಮಾಜವಿಜ್ಞಾನ ಪಠ್ಯಗಳನ್ನು ವೈಚಾರಿಕ ಮತ್ತು ವೈಜ್ಞಾನಿಕ ವಿಚಾರಗಳ ತಳಹದಿಯ ಮೇಲೆಯೇ ರೂಪಿಸಲಾಗಿದೆ. ಬಸವಣ್ಣ, ಕುವೆಂಪು, ಅಂಬೇಡ್ಕರ್ ಅಲ್ಲಿ ಇದ್ದೇ ಇರುತ್ತಾರೆ. ಆ ಎಲ್ಲ ಪಠ್ಯಗಳು ಯಾವುದೇ ಧರ್ಮದ ಮಠೀಯ ವಿಚಾರಗಳನ್ನು ಪ್ರಶ್ನಿಸುತ್ತವೆ. ಅಂತಹ ಪಠ್ಯಗಳನ್ನು ಬೋಧನೆ ಮಾಡುವಾಗ ವರ್ತಮಾನದ ಅನೇಕ ಧಾರ್ಮಿಕ ಆಚರಣೆಗಳು, ನಂಬಿಕೆಗಳು ಮತ್ತು ಭಕ್ತಿಯ ಹೆಸರಿನಲ್ಲಿ ನಡೆಯುತ್ತಿರುವ ಮೋಸಗಳನ್ನು ಉದಾಹರಣೆಯಾಗಿ ನೀಡಿಯೇ ಬೋಧನೆ ಮಾಡಬೇಕಾಗುತ್ತದೆ. ಅಂದರೆ, ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿನ ವಿವಿಧ ಹಂತಗಳ ಕಲಿಕೆಯ ಪಠ್ಯಕ್ರಮಗಳಲ್ಲಿ ವೈಚಾರಿಕ ಪಠ್ಯಗಳು ಅಡಕವಾಗಿವೆ. ಅಂತಹ ಹಲವು ಪಠ್ಯಗಳನ್ನು ಅಧ್ಯಾಪಕರಾದವರು ಪಾಠ ಮಾಡಲೇಬೇಕಿದೆ.

ಕೆಲವು ಪಠ್ಯಗಳನ್ನಂತೂ ಹೆಚ್ಚು ವಿವರಿಸುವ ಅಗತ್ಯವೂ ಇರುವುದಿಲ್ಲ. ಆ ಪಠ್ಯಗಳು ಇರುವಂತೆ ಜೋರಾಗಿ ಓದಿದರೂ ಅವು ಎಲ್ಲ ಮಠೀಯ ಧರ್ಮಗಳ, ಜಾತಿಗಳ ಮತ್ತು ಅಸಮಾನತೆಯ ಮೌಲ್ಯಗಳ ಪೊಳ್ಳುತನವನ್ನು ಎತ್ತಿ ತೋರಿಸುತ್ತವೆ. ಇತ್ತೀಚಿನ ದಿನಗಳಲ್ಲಿ ತರಗತಿಗಳಲ್ಲಿ ಇಂತಹ ಪಠ್ಯಗಳನ್ನು ಬೋಧಿಸುವುದೇ ಸವಾಲಿನದಾಗಿದೆ. ಇಂತಹ ಪಠ್ಯಗಳನ್ನು ಬೋಧಿಸುತ್ತಿದ್ದರೆ ಹೊರಗಿನ ಸಮಾಜ ಇಲ್ಲವೇ ಕೋಮುವಾದಿ ಚಿಂತನೆಗಳಿಂದ ಪ್ರಭಾವಿತವಾಗಿರುವ ಕುಟುಂಬಗಳಲ್ಲಿ ಬೆಳೆದು ಬರುತ್ತಿರುವ ಮಕ್ಕಳು ಆ ಪಠ್ಯಗಳನ್ನು ಮತ್ತು ಪಾಠ ಹೇಳುವ ಅಧ್ಯಾಪಕರನ್ನು ವಿರೋಧಿಸುತ್ತಿರುವುದು ನಡೆದಿದೆ.

ವೈಚಾರಿಕವಾಗಿ ಪಾಠ ಮಾಡಬೇಕಿರುವುದು ಹೊಣೆಯರಿತ ಅಧ್ಯಾಪಕರ ನಿಜವಾದ ಕರ್ತವ್ಯ. ಅದರಲ್ಲಿಯೂ ಜಾತಿ, ಲಿಂಗ ಮತ್ತು ವರ್ಗ ಅಸಮಾನತೆ ವ್ಯಾಪಕವಾಗಿರುವ ಸಮಾಜದಲ್ಲಿ ಮುಕ್ತ ಚಿಂತನೆಗೆ ಮತ್ತು ಅಭಿವ್ಯಕ್ತಿಗೆ ಅವಕಾಶ ಉಳಿಸಬೇಕು. ಅಂತಹ ಅವಕಾಶ ಬಳಸಿಕೊಂಡು ಅಧ್ಯಾಪಕರು ತಮ್ಮ ಕರ್ತವ್ಯ ನಿರ್ವಹಿಸಬೇಕಿರುತ್ತದೆ. ಆಗ ಮಾತ್ರವೇ ಉತ್ತಮ ಮತ್ತು ಸಮ ಸಮಾಜ ರೂಪಿಸಲು ಸಾಧ್ಯ. ಆದರೆ ಇಂದು ಅಂತಹ ಕರ್ತವ್ಯವನ್ನೇ ನಿರ್ವಹಿಸಲಾರದಂತಹ ಪರಿಸ್ಥಿತಿಯನ್ನು ವ್ಯವಸ್ಥಿತವಾಗಿ ರೂಪಿಸಲಾಗುತ್ತಿದೆ. ಇದಕ್ಕೆ ಅಧ್ಯಾಪಕರೂ ಹೊಂದಿಕೊಳ್ಳುತ್ತಿರುವಂತೆ ಕಾಣಿಸುತ್ತಿದೆ.

ಅಂದರೆ, ವೈಚಾರಿಕ ಪಠ್ಯಗಳನ್ನು ಬೋಧನೆ ಮಾಡುವುದೇ ಅಪರಾಧ ಎನ್ನುವ ಸ್ಥಿತಿಯಿದೆ. ಹಾಗಾದರೆ ಶಿಕ್ಷಣದ ಮೂಲಭೂತ ತತ್ವವಾದರೂ ಏನು? ಮಕ್ಕಳು ಏನನ್ನು ಕಲಿಯಬೇಕು? ಪೋಷಕರು ತಮ್ಮ ಮಕ್ಕಳಿಗೆ ಏನನ್ನು ಕಲಿಸಲು ಬಯುಸುತ್ತಿದ್ದಾರೆ? ವೈಚಾರಿಕತೆಯನ್ನು ಕೊಂದು ಬರೀ ಮಾಹಿತಿಗಳನ್ನು ತುರುಕುವುದೇ ಶಿಕ್ಷಣ ಎಂದು ಪೋಷಕರು ಅರ್ಥಾತ್ ಇಂದಿನ ಸಮಾಜ ನಂಬಿದೆಯೇ ಎಂಬ ಪ್ರಶ್ನೆಗಳು ಹುಟ್ಟುತ್ತವೆ.

ವೈಚಾರಿಕತೆಯನ್ನು ಮಕ್ಕಳು, ಪೋಷಕರು ಅರ್ಥಾತ್ ಸಮಾಜ ನಿರಾಕರಿಸುತ್ತಿದೆ ಎಂದರೆ ಮುಂದಿನ ತಲೆಮಾರು ಹೇಗೆ ರೂಪುಗೊಳ್ಳಬಹುದು? ಇದನ್ನು ನೆನೆದರೆ ಮನದಲ್ಲಿ ಭೀಕರ ಕತ್ತಲು ಆವರಿಸಿಕೊಳ್ಳುತ್ತದೆ. ಬಸವಣ್ಣ ‘ಜ್ಞಾನದ ಬಲದಿಂದ ಅಜ್ಞಾನದ ಕೇಡ ನೋಡಯ್ಯ’ ಎಂದರು. ಆದರೆ ಇಂದು ಅಜ್ಞಾನವು ಜ್ಞಾನದ ಮೇಲೆ ದಬ್ಬಾಳಿಕೆ ನಡೆಸುತ್ತದೆ. ಹೀಗೆ ನಡೆಸುವುದರಿಂದ ಇಲ್ಲಿಯವರೆಗೂ ಕನ್ನಡದ ಮುಖ್ಯವಾಹಿನಿಯಲ್ಲಿ ಜೀವಂತವಾಗಿ ಇಟ್ಟುಕೊಂಡು ಬಂದಿರುವ ವೈಚಾರಿಕ ಪರಂಪರೆಯ ಮೇಲೆ ಮಣ್ಣೆಳೆಯಬೇಕಾಗುತ್ತದೆ. ಬುದ್ಧ, ಬಸವಣ್ಣ, ಕನಕ, ಷರೀಫ, ಗಾಂಧಿ, ಅಂಬೇಡ್ಕರ್, ಕುವೆಂಪು, ಶಿವರಾಮ ಕಾರಂತ, ಲಂಕೇಶ್, ದೇವನೂರ ಮಹಾದೇವ ಮತ್ತು ಆ ನಂತರದ ತಲೆಮಾರು ಕಟ್ಟುತ್ತಿರುವ ಮನುಷ್ಯಪರವಾದ ಉದಾತ್ತ ಚಿಂತನೆಗಳನ್ನು ಗೋರಿಗಳಲ್ಲಿ ಹೂತಿಡಬೇಕಾಗುತ್ತದೆ.

ನಮ್ಮ ಪೋಷಕರು ಇಂದಿನ ಖಾಸಗಿ ಶಿಕ್ಷಣ ವ್ಯವಸ್ಥೆಯಲ್ಲಿ, ದುಡಿದ ಹಣ ತೆತ್ತು ಅಜ್ಞಾನವನ್ನು ಕೊಂಡುಕೊಳ್ಳಬೇಕಾಗುತ್ತದೆ. ಉದ್ಯಮಪತಿಗಳು ಮತ್ತು ಸನಾತನವಾದಿಗಳ ಹಿತಾಸಕ್ತಿ ಕಾಪಾಡಲು ಅನುಕೂಲಕರವಾಗಿ ಇರುವುದನ್ನೇ ನಿಜವಾದ ಶಿಕ್ಷಣ ಎನ್ನುವಂತೆ ಬಿಂಬಿಸಲಾಗುತ್ತಿದೆ. ಅದನ್ನೇ ಇಂದಿನ ಸಮಾಜ ದೊಡ್ಡ ಆದರ್ಶವಾಗಿ ಸ್ವೀಕರಿಸುತ್ತಿದೆ.

ಇಂತಹ ಅನೇಕ ಬದಲಾವಣೆಗಳಿಂದ ನಮ್ಮ ಶೈಕ್ಷಣಿಕ ಕ್ಷೇತ್ರದಲ್ಲಿ ಈಗಾಗಲೇ ದೊಡ್ಡ ದುರಂತ ಸಂಭವಿಸಿಯಾಗಿದೆ. ಇದಕ್ಕೆ ತಡೆಯೊಡ್ಡದಿದ್ದರೆ ಮುಂದಿನ ದಿನಗಳು ಮತ್ತೂ ಭೀಕರವಾಗಿರುತ್ತವೆ. ಹಾಗಾಗಿ, ಇಂದಿನ ಸರ್ಕಾರ ಈ ಅಪಾಯವನ್ನು ಅರಿತು ರಾಜ್ಯದ ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಬೋಧನೆಗೆ ಮುಕ್ತ ವಾತಾವರಣ ಇರುವಂತೆ ನೋಡಿಕೊಳ್ಳಬೇಕು. ಬೋಧನೆ ಮತ್ತು ಕಲಿಕೆಯ ಪ್ರಕ್ರಿಯೆಯಲ್ಲಿ ಮೌಢ್ಯವನ್ನು ಸಾಮಾನ್ಯಗೊಳಿಸದಂತೆ ನೋಡಿಕೊಳ್ಳಬೇಕು. ಹೊರಗಿನ ಶಕ್ತಿಗಳು ಶಿಕ್ಷಣ ಸಂಸ್ಥೆಗಳ ಒಳಗೆ ನುಸುಳದಂತೆ ನೋಡಿಕೊಳ್ಳಬೇಕು. ಈ ಬಗ್ಗೆ ಇಡೀ ಸಮಾಜ ಹೊಣೆಯರಿತು ತನ್ನ ಕೆಲಸ ನಿಭಾಯಿಸಬೇಕು. ಇಲ್ಲವಾದಲ್ಲಿ ನಮ್ಮ ಒಟ್ಟು ಶಿಕ್ಷಣ ವ್ಯವಸ್ಥೆ ನಾಶವಾಗಿ ಇಡೀ ಸಮಾಜ ಅಜ್ಞಾನದಲ್ಲಿ ಕೊಳೆಯಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT