ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

National Doctor's Day| ವೈದ್ಯ ಮಿತ್ರನಿಗೆ ಕುಂವೀ ಪತ್ರ

Published 30 ಜೂನ್ 2023, 17:37 IST
Last Updated 30 ಜೂನ್ 2023, 23:43 IST
ಅಕ್ಷರ ಗಾತ್ರ

ನನ್ನ ಪ್ರೀತಿಯ ಸ್ನೇಹಿತರೂ, ನನ್ನ ನೆಚ್ಚಿನ ವೈದ್ಯ ಮಿತ್ರರೂ ಆದ ಡಾ. ಹೆಚ್. ಆರ್. ಬಸವನಗೌಡ ಅವರಿಗೆ ಡಾ. ಬಿ.ಸಿ. ರಾಯ್ ಜನ್ಮ ದಿನದ ಹಾಗೂ ವೈದ್ಯರ ದಿನಾಚರಣೆ ಶುಭಾಶಯಗಳು, ಹೇಗಿರುವಿರಿ ಸಾರ್! ನೀವೆಲ್ಲರೂ ಸೌಖ್ಯವೆಂದು ಭಾವಿಸುತ್ತೇನೆ, ವೈದ್ಯರಾಗಿ ಗೆಳೆಯರಾಗಿ ನೀವು ನನ್ನನ್ನು ತುಂಬಾ ಕಾಡುತ್ತಿರುವಿರಿ, ನಮ್ಮಿಬ್ಬರ ಪರಿಚಯಕ್ಕೆ ನಾಲ್ಕು ದಶಕಗಳ ಇತಿಹಾಸವಿದೆ. ಮಯೂರದಲ್ಲಿ ಪ್ರಕಟವಾಗುತ್ತಿದ್ದ ನನ್ನ ಕಥೆಗಳನ್ನು ಓದಿ ನನ್ನನ್ನು ಅಭಿಮಾನಿಸಲಾರಂಭಿಸಿದಿರಿ. ಆಗಿನ್ನು ನೀವು ಬಳ್ಳಾರಿ ಮೆಡಿಕಲ್ ಕಾಲೇಜಲ್ಲಿ ಹೌಸ್‌ ಸರ್ಜನ್ ಆಗಿದ್ದಿರಿ, ಕಾಣಲೆಂದೇ ನಾನು ನೀವು ಇರುವಲ್ಲಿಗೆ ಬರುತ್ತಿದ್ದೆ. ಸಣ್ಣಪುಟ್ಟ ನ್ಯೂನತೆಗಳ ಕುರಿತು ಚರ್ಚಿಸುತ್ತಿದ್ದೆ. ಸಾಹಿತ್ಯ ಲಲಿತ ಕಲೆಗಳ ಕುರಿತು ವಿಶೇಷ ಒಲವು ಇರಿಸಿಕೊಂಡಿದ್ದ ನೀವು ಅತ್ಯಂತ ಆಸಕ್ತಿಯಿಂದ ಸಮಸ್ಯೆಗಳನ್ನು ಆಲಿಸುತ್ತಿದ್ದಿರಿ, ಕೂಡಲೆ ಸ್ಪಂದಿಸುತ್ತಿದ್ದಿರಿ. ಪೇಷೆಂಟ್ಸ್ ಕಡೆ ಮಾಂತ್ರಿಕ ದೃಷ್ಟಿ ಬೀರುತ್ತಿದ್ದಿರಿ, ಮುಂಗೈ ಹಿಡಿದು ರೋಗಿಯ ನಾಡಿ ಪರೀಕ್ಷಿಸುತ್ತಿದ್ದಿರಿ, ಗುಳಿಗೆ ಚೀಟಿ ಬರೆದು ಕೊಡುತ್ತಿದ್ದಿರಿ, ಮುಖ ಓದಿ ರೋಗಿಯ ಜೇಬಲ್ಲಿ ಹಣವಿರುವುದೋ ಇಲ್ಲವೋ ಎಂದು ಪರಿಶೀಲಿಸುತ್ತಿದ್ದಿರಿ. ಬಡರೋಗಿಗಳ ಔಷಧಿ ಖರ್ಚಿಗೆ ಐವತ್ತೋ ನೂರೋ ಬಡಕಲು ಕೈಗಳಿಗೆ ಇಕ್ಕುತ್ತಿದ್ದಿರಿ, ಜಠರದ ಮೇಲೆ ಕೈಯಾಡಿಸಿ ರೋಗಿ ಉಂಡಿರುವನೋ ಉಪವಾಸ ಇರುವನೋ ಎಂದು ಅರ್ಥ ಮಾಡಿಕೊಳ್ಳುತ್ತಿದ್ದಿರಿ, ಟಿಫನ್ ಮಾಡ್ಕೊಂಡು ಬಾ ಅಂತ ಹೇಳಿ ಹಸಿದ ರೋಗಿಗಳಿಗೆ ಹತ್ತಿಪ್ಪತ್ತು ರೂಪಾಯಿ ಕೊಡುತ್ತಿದ್ದಿರಿ. ಅವರೆಲ್ಲ ನಮ್ಮ ಡಾಕುಟ್ರು ದ್ಯಾವರಂತ ಮನ್ಶಾ ಎಂದು ಬಾಯಿ ತುಂಬಾ ಹಾರೈಸುತ್ತಿದ್ದುದನ್ನು ನಾನು ಕಿವಿಯಾರೆ ಕೇಳಿಸಿಕೊಳ್ಳುತ್ತಿದ್ದೆ.

ಡಾಕ್ಟರೆ ನೀವು ಈಎನ್ಟಿ ಸ್ಪೆಶಲಿಸ್ಡು. ಆದರೆ ನೀವು ಆಲ್ ಇನ್ ಒನ್. ನಾನೇ ನಿಮ್ಮಿಂದ ಎಲ್ಲಾ ರೋಗಗಳಿಗೆ ಇಲಾಜು ಮಾಡಿಸಿಕೊಂಡಿರುವೆ. ನನಗೆ ಹಣದ ಅಡಚಣೆ ಇದ್ದಾಗ ನನ್ನ ಪತ್ನಿಗೆ ಗರ್ಭದ ಶಸ್ತ್ರ ಚಿಕಿತ್ಸೆ ಮಾಡಿದಿರಿ. ಕೊಟ್ಟಷ್ಟು ಇಸಿದುಕೊಂಡಿರಿ. ಈಗಲೂ ನೀವು ನನ್ನ ಪಾಲಿನ ಆನ್‌ಲೈನ್ ಡಾಕ್ಟರ್. ನೆಗಡಿ ಜಡ್ಡು ಬಂದರೆ ನಾನು ನಿಮಗೆ ಎಲ್ಲೆಲ್ಲಿಂದನೋ ಹಲೋ ಅಂತೀನಿ, ನೀವು ಅಲ್ಲಲ್ಲಿಂದಲೇ ಔಷಧಿ ಮಾತ್ರೆ ಸೂಚಿಸುವಿರಿ. ನೀವು ನಿಜವಾಗಲೂ ಗ್ರೇಟ್ ಸಾರ್, ನಿಮ್ಮ ಪ್ರೀತಿಯ ಡಾಕ್ಟರಕಿಯ ನಿರಂತರ ಫಲಾನುಭವಿ ನಾನು. ಈ ದಿವಸ ನಿಮ್ಮನ್ನೂ ಬೆಂಗಾಲ ರಾಜ್ಯದ ಎರಡನೇ ಮುಖ್ಯಮಂತ್ರಿ ಡಾ. ಬಿಪಿನ್ ಚಂದ್ರರಾಯ್‌ರನ್ನು ಒಟ್ಡಿಗೆ ಜ್ಞಾಪಿಸಿಕೊಂಡೆ. ಅವರಲ್ಲಿನ ಮಾನವೀಯ ಗುಣಗಳು ನಿಮ್ಮಲ್ಲೂ ಇವೆ. ನೀವು ರೋಗಿಗಳಿಂದ ಶ್ಲಾಘಿಸಿಕೊಳ್ಳುವ ಡಾಕ್ಟರ್. ಬಳ್ಳಾರಿಯಲ್ಲಿನ ನಿಮ್ಮ ಶಕ್ತಿ ನರ್ಸಿಂಗ್ ಹೋಂ ಬಡರೋಗಿಗಳ ಪ್ರೀತಿಯ ಮನೆ. ಆ ಕಾಲದಿಂದ ನೋಡುತ್ತಿರುವೆ ನೀವು ಆರಕ್ಕೇರಿಲ್ಲ, ಮೂರಕ್ಕಿಳಿದಿಲ್ಲ, ಒಂದೇ ಥರ ಇರುವಿರಿ. ಯು ಆರ್ ಆಲ್ವೇಸ್ ಗ್ರೇಟ್ ಸರ್.

ನಿಮ್ಮ, ಕುಂವೀ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT