ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂಸೆಯ ಹೊಸ ಅವತಾರ

ದೇವಸ್ಥಾನಗಳು ಧಾರ್ಮಿಕ ಕೇಂದ್ರಗಳಾಗಷ್ಟೇ ಉಳಿದಿವೆಯೇ?
Last Updated 17 ಡಿಸೆಂಬರ್ 2018, 20:15 IST
ಅಕ್ಷರ ಗಾತ್ರ

ಅಧಿಕಾರಕ್ಕಾಗಿ ಜಾತಿ, ಧರ್ಮ, ದೇವರು, ಐಡಿಯಾಲಜಿ ಇತ್ಯಾದಿಗಳ ಹೆಸರಿನಲ್ಲಿ ನರಮೇಧ ನಡೆಸಿದ್ದಾಯಿತು. ಇದೀಗ ದೇವಸ್ಥಾನದಲ್ಲಿ ವಿತರಿಸುವ ಪ್ರಸಾದದಲ್ಲಿ ವಿಷವಿಕ್ಕುವಂತಹದ್ದು ಆಘಾತಕಾರಿ. ಈ ಪ್ರಕರಣದಿಂದ ದೇವಸ್ಥಾನಗಳು ಧಾರ್ಮಿಕ ಕೇಂದ್ರವಾಗಷ್ಟೇ ಉಳಿದಿಲ್ಲವೆಂಬುದು ಮತ್ತೊಮ್ಮೆ ಸಾಬೀತಾಗಿದೆ.

ದೇವಸ್ಥಾನಗಳ ಇತಿಹಾಸವನ್ನು ಗಮನಿಸಿದರೆ ಯಾವ ಕಾಲಘಟ್ಟದಲ್ಲೂ, ಜಗತ್ತಿನ ಯಾವ ಮೂಲೆಯಲ್ಲೂ ದೇವಸ್ಥಾನಗಳು ಕೇವಲ ಶುದ್ಧ ಧಾರ್ಮಿಕ ಕೇಂದ್ರಗಳಾಗಿರಲಿಲ್ಲ. ಅದು ದೊರೆ ಸಾಲೋಮನ್‍ ದೇವಸ್ಥಾನವಿರಬಹುದು, ಈಜಿಪ್ಟ್‌ನ ಫೆರೋಗಳ ದೇಗುಲಗಳಿರ
ಬಹುದು, ಯುರೋಪಿನ ಚರ್ಚು ಕ್ಯಾಥೆಡ್ರಲ್‍ಗಳಿರಬಹುದು ಅಥವಾ ಭಾರತದ ಶೈವ-ವೈಷ್ಣವ ಮಂದಿರಗಳಿರಬಹುದು.

ಜಗತ್ತಿನ ಎಲ್ಲ ದೇವಸ್ಥಾನಗಳೂ ಅನಾದಿ ಕಾಲದಿಂದಲೂ ರಾಜಕೀಯ ಪ್ರತಿಷ್ಠೆ, ಮೇಲಾಟದ ಸಂಕೇತ ವಾಗೇ ನಿರ್ಮಾಣಗೊಂಡಿರುವುದನ್ನು ಕಾಣಬಹುದು. ಹಾಗೆ ನೋಡಿದರೆ ವೇದಯುಗದಲ್ಲಿ ದೇವಸ್ಥಾನಗಳೇ ಇರಲಿಲ್ಲ, ವೈದಿಕ ಋಷಿಗಳು ನಮ್ಮ ಬುಡಕಟ್ಟು- ಜನಪದರಂತೆ ಮರಗಿಡಗಳ, ನದಿ ಪರ್ವತಗಳ, ಒಟ್ಟಾರೆ ಈ ಸಮಸ್ತ ಪ್ರಕೃತಿಯ ಆರಾಧಕರಾಗಿದ್ದರು. ಅವರು ಆಶ್ರಮ
ಗಳನ್ನು, ಗುರುಕುಲಗಳನ್ನು ನಿರ್ಮಿಸಿಕೊಂಡು ಕಾಡುಮೇಡುಗಳಲ್ಲಿ ವಾಸಿಸುತ್ತಿದ್ದರೇ ವಿನಾ ತಮ್ಮಿಂದ ನಿರ್ಮಾಣಗೊಂಡ ಪರ್ಣಕುಟಿಗಳನ್ನು ಅವರು ತಮ್ಮ ಪ್ರತಿಷ್ಠೆಯ ಸಂಕೇತವೆಂದು ಭಾವಿಸಿರಲಿಲ್ಲ. ಒಬ್ಬ ನಿಜವಾದ ಧಾರ್ಮಿಕ ವ್ಯಕ್ತಿ ಗುಡಿಸಲು ಕಟ್ಟಿಕೊಳ್ಳಲು ಕನಸುವನಲ್ಲದೆ ಗುಡಿ ಕಟ್ಟುವ ಉಪದ್ವ್ಯಾಪಕ್ಕೆ ಇಳಿಯುವುದಿಲ್ಲ.

ಆದರೆ ವೇದಯುಗದ ನಂತರ ಭಾರತದ ಧಾರ್ಮಿಕತೆಯ ಹಾದಿ ಪಲ್ಲಟಗೊಂಡಿತು. ಸ್ಮೃತಿ, ಪುರಾಣಗಳ ಪ್ರಭಾವ ಹೆಚ್ಚಾಯಿತು, ಪ್ರಕೃತಿ ಆರಾಧನೆಗಿಂತ ವ್ಯಕ್ತಿಪೂಜೆ ಮುಖ್ಯವಾಯಿತು. ಸರಳವಾದ ಸತ್ಯ ವಾಕ್ಯಗಳಿಗಿಂತ ಕಾವ್ಯ-ಪುರಾಣಗಳ ಕಾಲ್ಪನಿಕ, ಆಲಂಕಾರಿಕ ನುಡಿಗಳು ಮುಖ್ಯವಾದವು, ಅನಾಮಿಕರಾದ ಋಷಿಗಳಿಗಿಂತ ಹೆಸರು ವಾಸಿಯಾದ ವೀರೋದಾತ್ತ ನಾಯಕರು ಮುಖ್ಯರಾದರು. ಇನ್ನು ಆ ಕಾವ್ಯ ಪುರಾಣಗಳಾದರೂ ಬರೀ ರಾಜಮಹಾರಾಜರುಗಳ ಕತೆಗಳಿಂದಲೇ ತುಂಬಿವೆ.

ಈ ಬೆಳವಣಿಗೆಗಳನ್ನು ಕಂಡೇ ಇರಬೇಕು ವೇದಗಳು ‘ಅವನಿಗೆ ಪ್ರತಿಮೆ ಎಂಬುದಿಲ್ಲ’ (ನ ತಸ್ಯ ಪ್ರತಿಮಾ ಅಸ್ತಿ, ಯಜು, ಅ 40, ಮಂ.9) ಎಂದು ಸಾರಿರುವುದು. ಇಲ್ಲಿ ವ್ಯಕ್ತಿಪೂಜೆ ಎಂದರೆ ರಾಜ ಮಹಾರಾಜರುಗಳ ಪೂಜೆಯೆಂದೇ ತಿಳಿಯಬೇಕಾಗುತ್ತದೆ. ಈ ಬಗೆಯ ಪೂಜೆ
ಗಳನ್ನು ಖಂಡಿಸುವ ಉಪನಿಷತ್ಕಾರರು ವ್ಯಕ್ತಿಪೂಜೆ ಸಾರಾಸಗಟಾಗಿ ತಿರಸ್ಕರಿಸಿದರು. ‘ಯಾವುದು ಪ್ರಾಣದಿಂದ ಚಲಿಸುವುದಿಲ್ಲವೋ, ಯಾವುದರಿಂದ ಪ್ರಾಣ ಚಲನೆ ಹೊಂದುತ್ತದೋ ಅದನ್ನೇ ಬ್ರಹ್ಮನೆಂದು ತಿಳಿ, ಈಗ ಯಾವುದನ್ನು ಪೂಜಿಸುತ್ತಿರುವೆಯೋ ಅದನ್ನು ಪೂಜಿಸಬೇಡ’ (ಯತ್ಪ್ರಾಣೇನ ನ ಪ್ರಾಣಿತಿ ಯೇನ ಪ್ರಾಣಃ ಪ್ರಣೀಯತೇ | ತದೇವ ಬ್ರಹ್ಮ ತ್ವಂ ವಿದ್ಧಿ ನೇದಂ ಯದಿದಮುಪಾಸತೇ|| ಕೇನೋಪನಿಷತ್ 1:9).

ತುಂಬ ಖಾಸಗಿಯಾದ, ವ್ಯಕ್ತಿಗತವಾದ ನಂಬಿಕೆಗಳು ಸಾರ್ವಜನಿಕ ಪರಿಪ್ರೇಕ್ಷ್ಯ ಪಡೆಯುತ್ತಲೇ ಅವು ಅನೇಕ ಬಾರಿ ಮೂಲಭೂತವಾದದ ರೂಪ ಪಡೆಯುತ್ತವೆ. ಧರ್ಮದಂತಹ ಹೃದಯ ಸಂಬಂಧಿ ತತ್ವಕ್ಕೆ ಸಾಂಸ್ಥಿಕ ರೂಪ ಬರುತ್ತಲೇ ಅವು ಎಲ್ಲ ಕುಟಿಲತೆ, ಹಿಂಸಾಚಾರಗಳ ಕೇಂದ್ರವಾಗಿ ಪರಿಣಮಿಸುತ್ತವೆ. ಆ ಹಿಂಸಾಚಾರದ ಹೊಸ ಅವತಾರವಾಗಿ ಸುಳ್ವಾಡಿ ಗ್ರಾಮದ ವಿಷಪ್ರಾಶನದ ಪ್ರಕರಣ ಕಾಣಿಸುತ್ತದೆ.

ದೇವಸ್ಥಾನದ ಹೆಸರಿನಲ್ಲಿ ನಡೆವ ರಾಜಕಾರಣ ಮತ್ತು ಆ ರಾಜಕಾರಣದ ರಾಕ್ಷಸ ಗುಣವನ್ನು ಬೇಂದ್ರೆ
ಯವರ ‘ತುತ್ತಿನ ಚೀಲ’ ಪದ್ಯ ಮಾರ್ಮಿಕವಾಗಿ ಅನಾವರಣ ಮಾಡುತ್ತದೆ. ಅನ್ನ ಬ್ರಹ್ಮದ ದೇಗುಲದಲ್ಲಿ | ‌ಬೆಳಗೂ ಬೈಗೂ ಛಿಳಿ ಛಿಟಿ ಬೆಂಕಿ || ಡೊಂಬರ ಪೂಜೆಯು, ಕಾಗೆಯ ಮಂತ್ರ | ಗಾಳಿಯ ಎಡೆಯು ಬೊಬ್ಬೆಯ ಗಂಟೆ || ಅನ್ನ ಬ್ರಹ್ಮದ ದೇಗುಲದಲ್ಲಿ!

ಅದು ಅನ್ನಬ್ರಹ್ಮದ ದೇಗುಲವೇ ಆದರೂ ಅಲ್ಲಿ ಹಗಲಿರುಳೂ ಬೆಂಕಿ (ದ್ವೇಷಾಸೂಯೆಯ ಬೆಂಕಿ) ಹೊಗೆಯಾಡುತ್ತಲೇ ಇರುತ್ತದೆ. ಮಂತ್ರೋಚ್ಚಾರಣೆ ಕಾಗೆಯ ಕರ್ಕಶ ಧ್ವನಿಯಂತೆ ಕೇಳಿಸುತ್ತದೆ (ಈ ಮಾರಣ ಹೋಮದಲ್ಲಿ ಪಾಪ ಕಾಗೆಗಳೂ ಬಲಿಯಾಗಿವೆ), ಅಲ್ಲಿ ನೀಡುವ ಪ್ರಸಾದ ಗಾಳಿಯಂತೆ ಖಾಲಿ ಖಾಲಿ, ಹೊಟ್ಟೆ ತುಂಬಿಸದು!

ಇನ್ನು ಗಂಟೆಯ ಶಬ್ದ ಬರೀ ಗದ್ದಲ! ದೈವುಳ್ಳವರಿಗೆ ದಯವೇ ಇಲ್ಲ | ತಿತ್ತಿರಿ ತುಂಬಿದೆ ಕೂಳಿನ ಕೋಟೆ || ಬಿಡುಗಣ್ಣವರಿಗೆ ಕಾಣುವುದಿಲ್ಲ | ಅಮೃತದ ತೇಗಿನ ಮದವಂತಹುದು ||| ಹಸಿದವ ಬಲ್ಲ ಹಸಿವೆಯ ಶೂಲಿ ||

ಬದುಕಿನಲ್ಲಿ ಒಂದು ಜೀವಿಯ ಉಳಿವಿಗೆ ಮತ್ತೊಂದು ಜೀವಿಯ ಸಾವು ಅನಿವಾರ್ಯ. ಇಲ್ಲಿ ಹಿಂಸೆ ಹೋರಾಟಗಳು ನಿತ್ಯ ದಿನಚರಿಯಾಗಿವೆ, ಇದು ಪ್ರಕೃತಿಯ ನಿಯಮ. ಆದರೆ ಗುಡಿ ಚರ್ಚು ಮಸೀದಿಗಳಲ್ಲಿ ನಡೆವ ಕಿತ್ತಾಟ ಆ ತರಹದ್ದಲ್ಲ. ಸುಭಿಕ್ಷವಾಗಿಯೇ ಜೀವನ ನಡೆಸುವ, ಅಮೃತದ ತೇಗಿನಿಂದ ಮದಿಸಿದ ಪ್ರತಿಷ್ಠಿತ ಶಕ್ತಿಗಳು ತಮ್ಮ ಯಾವುದೋ ವ್ಯರ್ಥ ಹಿತಾಸಕ್ತಿಗಾಗಿ
ಹಿಂಸಾಚಾರಕ್ಕಿಳಿಯುತ್ತವೆ. ವಿಷಪ್ರಾಶನದಲ್ಲಿ ಅಸುನೀಗಿದವರ ಧ್ವನಿಯನ್ನೇ ಅನುರಣಿಸುವಂತಿವೆ ಈ ಸಾಲುಗಳು–ಶಿವಾ ಶಿವಾ ಹೇ ಶಿವ ಮಾದೇವಾ | ಅತ್ತಿತು ಕೂಗಿತು ಚೀರಿತು ಜೀವ || ಬಾಯಂಗಳದಲಿ ಹುಟ್ಟಿದ ಮಾತು | ಮುಗಿಲಿನ ಕಿವಿಯನು ಮುಟ್ಟಲೆ ಇಲ್ಲ | ಹಾಡುವ ಸಭೆಯಲಿ ನರಳುವುದುಂಟೇ? ||

ಈ ಅಮಾನವೀಯತೆಯ ವಿರುದ್ಧ ಧ್ವನಿಯೆತ್ತುವುದೂ ಹಿಂಸಾಚಾರ ನಡೆಸಿದವರ ಪಾಲಿಗೆ ಅನುಚಿತವೆಂದು ತೋರುತ್ತದೆ. ‘ಹಾಡುವ ಸಭೆಯಲ್ಲಿ ಯಾರಾದರೂ ಹೀಗೆ ನರಳುವುದೇ?’ ಎಂದು ಬೇಂದ್ರೆ ವ್ಯಂಗ್ಯದ ದನಿಯಲ್ಲಿ ಕೇಳುತ್ತಾರೆ.

ಭಾರತದಲ್ಲಿ ಧರ್ಮವೆಂಬುದು ಸಾರ್ವಜನಿಕ ರೂಪ ಪಡೆದುಕೊಂಡ ಮರುಗಳಿಗೆಯೇ ಭ್ರಷ್ಟವಾಯಿತು. ಇದನ್ನು ಮನಗಂಡೇ ವಚನಕಾರರು ದೇಹವನ್ನೇ ದೇವಾಲಯವೆಂದು ಭಾವಿಸಿದರು. ಧಾರ್ಮಿಕ ಕೇಂದ್ರಗಳನ್ನು ಕಟುವಾಗಿ ವಿಮರ್ಶಿಸುವುದರಿಂದ ಯಾವುದೇ ಧರ್ಮೀಯರ ಭಾವನೆಗೆ ಧಕ್ಕೆಯಾಗುವುದಿಲ್ಲ. ದೇವಸ್ಥಾನ ನಿರ್ಮಿಸುವ ಅಥವಾ ಅಲ್ಲಿ ಪೂಜೆ ಸಲ್ಲಿಸುವ ಕುರಿತು ಹಿಂದೂ ಧರ್ಮದ ಆದಿಮ ಗ್ರಂಥವಾದ ವೇದಗಳಲ್ಲಿ ಉಲ್ಲೇಖವಿಲ್ಲ, ಉಪನಿಷತ್ತು, ಭಗವದ್ಗೀತೆಯಲ್ಲೂ ದೇವಸ್ಥಾನದ ಮಹತ್ವದ ಕುರಿತು ಒಂದೇ ಒಂದು ಮಾತಿಲ್ಲ. ಇತಿಹಾಸದ ಒಂದು ನಿರ್ದಿಷ್ಟ ಕಾಲಘಟ್ಟದಲ್ಲಿ ನಮ್ಮ ನೆಲದ ಧರ್ಮ, ರಾಜಕೀಯ ಮೇಲಾಟದ ಆಡುಂಬೊಲವಾಗಿ ಪರಿಣಮಿಸಿತು. ಅಲ್ಲಿಂದಾಚೆಗೆ ದೇವಸ್ಥಾನ ಕಟ್ಟುವ, ಕೆಡವುವ ಯುಗ ಪ್ರಾರಂಭವಾಯಿತು. ಸರ್ವಧರ್ಮ ಸಮನ್ವಯಕಾರ
ರೆಂದು, ವಿಶ್ವಗುರುಗಳೆಂದು ಬೆನ್ನು ತಟ್ಟಿಕೊಳ್ಳುವ ನಾವು ನೂರಾರು ಶೈವ-ವೈಷ್ಣವ ಮಂದಿರಗಳನ್ನು ಕ್ಷುಲ್ಲಕವಾದ ನಂಬಿಕೆಗಳಿಗಾಗಿ ಭಗ್ನಗೊಳಿಸಿದ್ದೇವೆ. ಇದೀಗ ಅಮಾಯಕ ಜೀವಗಳನ್ನು ಬಲಿ ತೆಗೆದುಕೊಳ್ಳಲೂ ಪ್ರಾರಂಭಿಸಿದ್ದೇವೆ. ಮುಂದೆ ಅಯೋಧ್ಯೆ ಮಥುರಾ ಕಾಶಿ ಮುಂತಾದೆಡೆಗಳಲ್ಲಿ ಮಂದಿರ– ಮಸೀದಿ ವಿವಾದ ಹುಟ್ಟುಹಾಕಿ ಆ ಮೂಲಕ ಇನ್ನೂ ಅಂತಹ ಹಿಂಸೆಗಳಿಗೆ ಹೊಂಚು ಹಾಕುತ್ತಿದ್ದೇವೆ.

ಬೇಂದ್ರೆಯವರ ಕಾವ್ಯ ವರ್ತಮಾನ ಪ್ರತಿಬಿಂಬಿಸುವ ಕಾರಣಕ್ಕಾಗಿ ಮಾತ್ರವಲ್ಲ, ಭವಿಷ್ಯದ ದಿಕ್ಕು ತೋರಿಸುವ ಗತಿಬಿಂಬವಾಗಿಯೂ ಮುಖ್ಯವಾಗುತ್ತದೆ. ಅದೇ ಪದ್ಯದಲ್ಲಿ ‘ದೇವರದೊಂದು ಗೋರಿಯ ಕಟ್ಟ’ಬೇಕೆಂದು ಬೇಂದ್ರೆ ಕರೆ ನೀಡುತ್ತಾರೆ. ದೇವರ ಹೆಸರಿನಲ್ಲಿ ನಮ್ಮೊಳಗಿನ ಮನುಷ್ಯತ್ವ ಗೋರಿ ಕಾಣುವ ಮುನ್ನ ದೇವರಿಗೆ ಗೋರಿ ಕಾಣಿಸಿ ಉಳಿದಿರುವ ಅಷ್ಟಿಷ್ಟು ಮನುಷ್ಯತ್ವವನ್ನು ಉಳಿಸಿಕೊಳ್ಳುವುದು ಲೇಸಲ್ಲವೇ? ಇದು ಧರ್ಮನಿಂದನೆಯ ಮಾತಲ್ಲ, ಧರ್ಮವೇ ಕಲಿಸಿಕೊಟ್ಟ ಮಾತಾಗಿದೆ: ‘ತಿಳಿಯದುದನ್ನು ಪೂಜಿಸುವವರು ಕತ್ತಲೆಯಲ್ಲಿ ಕಳೆದುಹೋಗುತ್ತಾರೆ, ತಿಳಿದುದನ್ನು ಪೂಜಿಸುವವರು ಇನ್ನೂ ಗಾಢಾಂಧಕಾರದಲ್ಲಿ ಕರಗಿ ಕಣ್ಮರೆಯಾಗುತ್ತಾರೆ’ (ಅಂಧಂ ತಮಃ ಪ್ರವಿಶಂತಿ ಯೇ ಅಸಂಭೂತಿಮುಪಾಸತೇ..|| ಈಶೋಪನಿಷತ್ 9-12).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT