ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಕರ್‌ ಫೆರ್ನಾಂಡಿಸ್‌: ಜಾಲಿ ಕ್ಲಬ್‌ನಿಂದ ಸಂಸತ್‌ ಭವನದವರೆಗೆ

ಎಲ್‌ಐಸಿ ಹಾಗೂ ಪ್ಲಾಸ್ಟಿಕ್ ಕಾರ್ಖಾನೆಯಲ್ಲಿ ಉದ್ಯೋಗಿಯಾಗಿದ್ದ ಆಸ್ಕರ್‌ ಫೆರ್ನಾಂಡಿಸ್‌
Last Updated 14 ಸೆಪ್ಟೆಂಬರ್ 2021, 5:01 IST
ಅಕ್ಷರ ಗಾತ್ರ

ಉಡುಪಿ: ರಾಜಕೀಯ ಜೀವನದ ಹೊರತಾಗಿ ಆಸ್ಕರ್ ಫರ್ನಾಂಡಿಸ್‌ ಅವರ ವ್ಯಕ್ತಿತ್ವ, ಹವ್ಯಾಸ, ಹೋರಾಟ, ಆಸಕ್ತಿಗಳು ಬಹಳ ಕುತೂಹಲಕಾರಿ. ಕಾಲೇಜು ಜೀವನದಲ್ಲಿ ಸಮಾನ ಮನಸ್ಕ ಗೆಳೆಯರೊಟ್ಟಿಗೆ ‘ಜಾಲಿ ಕ್ಲಬ್‌’ ಕಟ್ಟಿಕೊಂಡ್ಡಿದ್ದ ಅವರು, ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಅವರ ಒಡನಾಡಿಗಳಾಗಿದ್ದ ಫಾದರ್ ವಿಲಿಯಂ ಮಾರ್ಟಿಸ್‌ ಹಾಗೂ ಪ್ರೇಮನಾಥ್ ಕಲ್ಮಾಡಿ ಅವರು ಆಸ್ಕರ್‌ ಅವರ ಒಡನಾಟದ ದಿನಗಳನ್ನು ಸ್ಮರಿಸಿದ್ದಾರೆ.

1958ರಲ್ಲಿ ರಾಜ್ಯದ ಪಿಯುಸಿ ಫಲಿತಾಂಶ ಶೇ 18 ಕ್ಕೆ ಕುಸಿದಾಗ, ಜಿಲ್ಲೆಯ ಹೆಚ್ಚಿನ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದರು. ಅವರನ್ನೆಲ್ಲ ಜಾಲಿ ಕ್ಲಬ್‌ನಲ್ಲಿ ಒಟ್ಟುಗೂಡಿಸಿ ಕಲಿಕೆಗೆ ಅವಕಾಶ ಮಾಡಿಕೊಟ್ಟರು. ಪರಿಣಾಮ, ಮರುವರ್ಷ ಫಲಿತಾಂಶದಲ್ಲಿ ಸುಧಾರಣೆ ಕಂಡಿತು. 1960ರ ಸಂದರ್ಭ ಉಡುಪಿಯ ಅಜ್ಜರಕಾಡಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದ್ದಾಗ, ರಸ್ತೆ ಕಾಮಗಾರಿಗೆ ನೀರು ಸುರಿಯುವ ವಾಹನ ತಂದು ಸತತ ಮೂರು ವರ್ಷ ಜನರಿಗೆ ನೀರು ಕೊಟ್ಟರು.

ಇದಕ್ಕೆ ಪ್ರತಿಯಾಗಿ ಅಜ್ಜರಕಾಡು ಮತದಾರರು ಆಸ್ಕರ್ ಅವರ ರಾಜಕೀಯ ಪ್ರವೇಶಕ್ಕೆ ವೇದಿಕೆ ನಿರ್ಮಿಸಿ ಕೊಟ್ಟರು. ಉಡುಪಿಯ ಮುನ್ಸಿಪಲ್‌ ಚುನಾವಣೆಯಲ್ಲಿ ದೊಡ್ಡ ಅಂತರದಲ್ಲಿ ಅವರನ್ನು ಗೆಲ್ಲಿಸಿದರು. ಉಡುಪಿಯ ಬಹುತೇಕ ಕ್ಷೇತ್ರಗಳಲ್ಲಿ ಗೆದ್ದು ಜನಸಂಘ ಪರಾಕ್ರಮ ಮೆರೆದರೂ, ಆಸ್ಕರ್ ವಿರುದ್ಧ ಗೆಲ್ಲಲು ಸಾಧ್ಯವಾಗಿರಲಿಲ್ಲ.

ಆಸ್ಕರ್ ರಾಜಕೀಯ ಪ್ರವೇಶಿಸುವ ಮುನ್ನ ಮಣಿಪಾಲದ ‘ಪ್ಯಾಲೆಸ್‌ ಪ್ಲಾಸ್ಟಿಕ್’ ಕಾರ್ಖಾನೆಯಲ್ಲಿ ದುಡಿಯುತ್ತಿದ್ದರು. ಎಲ್‌ಐಸಿ ಸಂಸ್ಥೆಯಲ್ಲಿ ನಾಲ್ಕೈದು ವರ್ಷ ಉದ್ಯೋಗಿ ಕೂಡ ಆಗಿದ್ದರು. ಅಲ್ಲಿಂದ ಅವರನ್ನು ರಾಜಕೀಯಕ್ಕೆ ಕರೆತರಲಾಯಿತು. ಜಾತಿ, ಧರ್ಮ ಮೀರಿದ ಅವರ ವ್ಯಕ್ತಿತ್ವ ಬಹಳ ಎತ್ತರಕ್ಕೆ ಬೆಳೆಯುವಂತೆ ಮಾಡಿತು. ಮುನ್ಸಿಪಲ್ ಚುನಾವಣೆ ಗೆದ್ದ ಬಳಿಕ ನೇರವಾಗಿ 1980ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದರು. ಈ ಚುನಾವಣೆಗೆ ಜನರೇ ಹಣ ಹೊಂದಿಸಿ ಗೆಲ್ಲಿಸಿದ್ದು ವಿಶೇಷ. ಬಳಿಕ, ರಾಜಕೀಯದಲ್ಲಿ ಆಸ್ಕರ್‌ ಹಿಂತಿರುಗಿ ನೋಡಿದ್ದೇ ಇಲ್ಲ.

ಸಂಸದರಾದ ಬಳಿಕ ಆಸ್ಕರ್ ಕಾರ್ಯವೈಖರಿ ಪ್ರಧಾನಿ ಇಂದಿರಾ ಗಾಂಧಿ, ರಾಜೀವ್‌ ಗಾಂಧಿ, ಸೋನಿಯಾ ಗಾಂಧಿ ಅವರನ್ನು ಬಹುವಾಗಿ ಸೆಳೆಯಿತು. ಆಸ್ಕರ್‌ಗೆ ಹಲವು ಹೊಣೆಗಳನ್ನು ನೀಡಲಾಯಿತು.

ನಾಗಾಲ್ಯಾಂಡ್‌ ಚುನಾವಣೆಯ ಉಸ್ತುವಾರಿಯಾಗಿದ್ದಾಗ ಪಕ್ಷ ಚುನಾವಣೆಯ ಖರ್ಚಿಗೆ ಕೊಟ್ಟ ಹಣದಲ್ಲಿ ಉಳಿಕೆ ಹಣವನ್ನು ಆಸ್ಕರ್ ಪ್ರಾಮಾಣಿಕವಾಗಿ ಪಕ್ಷಕ್ಕೆ ಮರಳಿಸಿದ್ದರು. ಬಹುಶಃ ಎಐಸಿಸಿ ಇತಿಹಾಸದಲ್ಲಿಯೇ ಇಂಥದ್ದೊಂದು ಘಟನೆ ನಡೆದಿರಲಿಕ್ಕಿಲ್ಲ. ಗಾಂಧಿ ಕುಟುಂಬಕ್ಕೆ ಆಸ್ಕರ್ ಬಹಳ ಹತ್ತಿರವಾದರು. ಉನ್ನತ ಹುದ್ದೆ ಹಾಗೂ ಸ್ಥಾನಮಾನಗಳು ದೊರೆತವು.

ದೆಹಲಿಯಲ್ಲಿದ್ದಷ್ಟೂ ದಿನ ಮಧ್ಯರಾತ್ರಿ 2 ಗಂಟೆಯವೆರಗೂ ಆಸ್ಕರ್ ನಿವಾಸದ ಲೈಟ್‌ ಉರಿಯುತ್ತಲೇ ಇರುತ್ತಿತ್ತು. ಸಾಮಾನ್ಯ ಕಾರ್ಯಕರ್ತರಿಂದ ಹಿಡಿದು ನಾಯಕರವರೆಗೆ ಎಲ್ಲರೂ ಅವರನ್ನು ಸುಲಭವಾಗಿ ಭೇಟಿ ಮಾಡಬಹುದಿತ್ತು. ಸಸ್ಯಾಹಾರಿಯಾಗಿದ್ದ ಆಸ್ಕರ್, ಸ್ವತಃ ಆಹಾರ ತಯಾರಿಸಿ, ಸ್ನೇಹಿತರಿಗೆ ಬಡಿಸಿ ಖುಷಿ ಪಡುತ್ತಿದ್ದರು.

ಕ್ರೈಸ್ತ ಸಮುದಾಯದಲ್ಲಿ ಹುಟ್ಟಿದ ಕಾರಣಕ್ಕೆ ಅವರನ್ನು ಕ್ರಿಶ್ಚಿಯನ್ ಎಂದು ಕರೆಯಬಹುದೇ ಹೊರತು, ಅವರು ಎಂದೂ ಕ್ರಿಶ್ಚಿಯನ್ ಮುಖಂಡರಾಗಿರಲಿಲ್ಲ. ಕರಾವಳಿಯ ನೆಲದಲ್ಲಿ ಜಾತ್ಯತೀತತೆಯ ಬೀಜ ಬಿತ್ತಿದ ಆಸ್ಕರ್ ಅವರನ್ನು ಕರಾವಳಿಯ ಜನ 5 ಬಾರಿ ಸಂಸದರನ್ನಾಗಿ ಆಯ್ಕೆ ಮಾಡಿದ್ದು, ಅವರೊಬ್ಬ ಜಾತಿ, ಧರ್ಮ ಮೀರಿದ ನಾಯಕ ಎಂಬುದಕ್ಕೆ ನಿದರ್ಶನ. ಕ್ರಿಶ್ಚಿಯನ್ನರಿಗೆ ಓಸ್ಕರ್ ಫರ್ನಾಂಡಿಸ್ ಆದರೆ, ಮುಸ್ಲಿಮರಿಗೆ ಅಸ್ಕರ್‌ ಭಾಯ್‌, ಹಿಂದೂಗಳಿಗೆ ಭಾಸ್ಕರ್ ಫರ್ನಾಂಡಿಸ್ ಆಗಿದ್ದರು.

ಕೇಂದ್ರ ಸಚಿವರಾಗಿದಾಗಲೂ ಅಹಂಕಾರ, ಡೋಂಗಿ, ಹುಸಿತನ ಅವರ ಬಳಿ ಸುಳಿಯಲಿಲ್ಲ. ಕೈಕೆಳಗಿನ ಅಧಿಕಾರಿಗಳಿಗೂ ಅವರ ಗದರಿದ್ದು ಕಂಡಿಲ್ಲ. ಕಾನೂನಿನಲ್ಲಿ ಅವಕಾಶವಿದ್ದರೆ ಮಾತ್ರ ಕೆಲಸ ಮಾಡಿಕೊಡಿ ಎಂದು ವಿನಮ್ರತೆಯಿಂದ ಹೇಳುತ್ತಿದ್ದರು. ಸಹಾಯ ಕೇಳಿ ಬಂದವರಿಗೂ ಹುಸಿ ಆಶ್ವಾಸನೆಗಳನ್ನು ಕೊಡದೆ, ಕೆಲಸ ಆಗುವುದಿದ್ದರೆ ಮಾಡಿಕೊಡುತ್ತಿದ್ದರು. ಇಲ್ಲವಾದರೆ, ಸಾಧ್ಯವಿಲ್ಲ ಎಂದು ಕಡ್ಡಿ ಮುರಿದಂತೆ ಹೇಳುತ್ತಿದ್ದರು. ಬದುಕಿನುದ್ದಕ್ಕೂ ಸರಳತೆ, ಪ್ರಾಮಾಣಿಕತೆ ಮೈಗೂಡಿಸಿಕೊಂಡಿದ್ದ ಆಸ್ಕರ್ ನಿಧನ ತುಂಬಲಾರದ ನಷ್ಟ ಎನ್ನುತ್ತಾರೆ ಅವರ ಒಡನಾಡಿ ಫಾದರ್ ವಿಲಿಯಂ ಮಾರ್ಟಿಸ್‌ ಹಾಗೂ ಪ್ರೇಮನಾಥ್ ಕಲ್ಮಾಡಿ.

(ನಿರೂಪಣೆ: ಬಾಲಚಂದ್ರ ಎಚ್‌.)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT