ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ಏಕರೂಪ ನಾಗರಿಕ ಸಂಹಿತೆ ಚರ್ಚೆ: ಮೋದಿ ಸರ್ಕಾರಕ್ಕೆ ಹಲವು ಪ್ರಶ್ನೆಗಳು
ಏಕರೂಪ ನಾಗರಿಕ ಸಂಹಿತೆ ಚರ್ಚೆ: ಮೋದಿ ಸರ್ಕಾರಕ್ಕೆ ಹಲವು ಪ್ರಶ್ನೆಗಳು
Published 13 ಸೆಪ್ಟೆಂಬರ್ 2023, 23:30 IST
Last Updated 13 ಸೆಪ್ಟೆಂಬರ್ 2023, 23:30 IST
ಅಕ್ಷರ ಗಾತ್ರ

ಯಾವ ಕಾನೂನುಗಳನ್ನು ಯುಸಿಸಿ ಬದಲಿಸುತ್ತದೆ? ಯುಸಿಸಿಯು ಕೇವಲ ಮದುವೆ, ವಿಚ್ಛೇಧನ ಮತ್ತು ಪಾಲಕತ್ವಕ್ಕೆ ಸೀಮಿತವೇ? ಅಥವಾ ಇದು ವಾರಸುದಾರಿಕೆ, ತೆರಿಗೆ ಮತ್ತು ಇತರೆ ವಿಚಾರಗಳಿಗೂ ಅನ್ವಯವಾಗುತ್ತದೆಯೇ? ಏಕೆಂದರೆ ಹಿಂದೂ ಅವಿಭಕ್ತ ಕುಟುಂಬಕ್ಕೆ ಪ್ರತ್ಯೇಕ ತೆರಿಗೆ ನಿಯಮಗಳು ಮತ್ತು ಪ್ರತ್ಯೇಕ ಉತ್ತರಾಧಿಕಾರ ನಿಯಮಗಳು ಅನ್ವಯವಾಗುತ್ತವೆ. ಪ್ರಸ್ತಾವಿತ ಯುಸಿಸಿಯು ಹಿಂದೂ ಅವಿಭಕ್ತ ಕುಟುಂಬ ಎಂಬುದನ್ನೇ ರದ್ದುಪಡಿಸುತ್ತದೆಯೇ?

***

ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಹಲವು ದಶಕಗಳಿಂದ ಬಿಜೆಪಿಯ ಪ್ರಣಾಳಿಕೆಯಲ್ಲಿ ಇರುವ ವಿಚಾರ. ಆದರೆ, ನರೇಂದ್ರ ಮೋದಿ ಸರ್ಕಾರವು ಒಂಬತ್ತು ವರ್ಷಗಳಿಂದ ಅಧಿಕಾರದಲ್ಲಿ ಇದ್ದಾಗ್ಯೂ ಯುಸಿಸಿ ಬಗ್ಗೆ ಹೆಚ್ಚೇನೂ ಕ್ರಮಗಳನ್ನು ತೆಗೆದುಕೊಂಡಿರಲಿಲ್ಲ. ಈಗ ದಿಢೀರ್ ಎಂದು ಯುಸಿಸಿ ವಿಚಾರವನ್ನು ಮುನ್ನೆಲೆಗೆ ತಂದಿದೆ. 2024ರ ಲೋಕಸಭಾ ಚುನಾವಣೆಗೆ ಈ ವಿಚಾರವನ್ನು ಬಳಸಿಕೊಳ್ಳುವುದೇ ಬಿಜೆಪಿಯ ನಿಜವಾದ ಗುರಿಯಾಗಿದೆ. ಜತೆಗೆ ಅಭಿವೃದ್ಧಿ ಮತ್ತು ರಾಷ್ಟ್ರೀಯ ಭದ್ರತೆ ವಿಚಾರಗಳಲ್ಲಿ ತಾನು ನೀಡಿದ್ದ ಭರವಸೆಗಳನ್ನು ಈಡೇರಿಸುವುದರಲ್ಲಿ ಆಗಿರುವ ವೈಫಲ್ಯವನ್ನು ಮರೆಮಾಚಲೂ ಮೋದಿ ಸರ್ಕಾರ ಯುಸಿಸಿ ವಿಚಾರವನ್ನು ಕೈಗೆತ್ತಿಕೊಂಡಿದೆ.

ಮೋದಿ ಸರ್ಕಾರವು ಯುಸಿಸಿ ವಿಚಾರವನ್ನು ಮೊದಲ ಬಾರಿಗೆ ಚರ್ಚೆಗೆ ಎತ್ತಿಕೊಂಡಿದ್ದು 2018ರಲ್ಲಿ. ಅದೂ 2019ರ ಲೋಕಸಭಾ ಚುನಾವಣೆಗೆ ಇನ್ನೇನು ಕೆಲವು ತಿಂಗಳಿದೆ ಎನ್ನುವಾಗ. 2018ರಲ್ಲಿ 21ನೇ ಕಾನೂನು ಆಯೋಗವು ಯುಸಿಸಿ ಜಾರಿಗೆ ಸಂಬಂಧಿಸಿದಂತೆ ಸಾರ್ವಜನಿಕರ ಅಭಿಪ್ರಾಯವನ್ನು ಸಂಗ್ರಹಿಸಿತ್ತು. ಜನರಿಂದ ಬಂದ ಪ್ರತಿಕ್ರಿಯೆಗಳನ್ನು ಪರಿಶೀಲಿಸಿ ಮತ್ತು ವಿಷಯವನ್ನು ವಿಶ್ಲೇಷಿಸಿ ಆಯೋಗವು ವರದಿ ನೀಡಿತ್ತು. ವರದಿಯಲ್ಲಿ, ‘ಯುಸಿಸಿ ಅಗತ್ಯವೂ ಅಲ್ಲ, ಅಪೇಕ್ಷಣೀಯವೂ ಅಲ್ಲ’ ಎಂದು ಹೇಳಿತ್ತು. ಇಂಥದ್ದೇ ಕಾರಣಕ್ಕೆ ನಮ್ಮ ಸಂವಿಧಾನದ ರಚನಾಕಾರರು ಯುಸಿಸಿಯನ್ನು ರಾಜನೀತಿ ನಿರ್ದೇಶಕ ತತ್ವಗಳ ಅಡಿಯಲ್ಲಿ ಇರಿಸಿದರು. ರಾಜನೀತಿ ನಿರ್ದೇಶಕ ತತ್ವಗಳನ್ನು, ಮೂಲಭೂತ ಹಕ್ಕುಗಳಂತೆ ಕಡ್ಡಾಯವಾಗಿ ಜಾರಿಮಾಡಬೇಕಿಲ್ಲ. 

ದೇಶದ ಎಲ್ಲಾ ಧರ್ಮದ ಜನರ ಮದುವೆ, ವಿಚ್ಛೇದನ, ದತ್ತಕ, ವಾರಸುದಾರಿಕೆ ಮತ್ತು ಉತ್ತರಾಧಿಕಾರದ ವಿಚಾರವನ್ನು ಹಿಂದೂ ವಿವಾಹ ಕಾಯ್ದೆ, ಹಿಂದೂ ಉತ್ತರಾಧಿಕಾರ ಕಾಯ್ದೆ, ಭಾರತೀಯ ಕ್ರೈಸ್ತ ವಿವಾಹ ಕಾಯ್ದೆ, ಭಾರತೀಯ ವಿಚ್ಛೇಧನ ಕಾಯ್ದೆ, ಪಾರ್ಸಿ ವಿವಾಹ ಮತ್ತು ವಿಚ್ಛೇದನ ಕಾಯ್ದೆಯಂತಹ ಪ್ರತ್ಯೇಕ ವೈಯಕ್ತಿಕ ಕಾನೂನುಗಳು ನಿರ್ವಹಿಸುತ್ತವೆ. ಯುಸಿಸಿ ಜಾರಿಗೆ ಬಂದರೆ, ಅದು ಈ ಎಲ್ಲಾ ಪ್ರತ್ಯೇಕ ವೈಯಕ್ತಿಕ ಕಾನೂನುಗಳನ್ನು ರದ್ದುಪಡಿಸುತ್ತದೆ. ಆ ನಂತರ ಎಲ್ಲಾ ಧರ್ಮದ ಜನರ ಮದುವೆ, ವಿಚ್ಛೇದನ, ದತ್ತಕ, ವಾರಸುದಾರಿಕೆ ಮತ್ತು ಉತ್ತರಾಧಿಕಾರದ ವಿಚಾರಗಳು ಯುಸಿಸಿ ಅಡಿಯಲ್ಲೇ ಬರುತ್ತವೆ. 

ನಮ್ಮ ದೇಶದ ವೈಯಕ್ತಿಕ ಕಾನೂನುಗಳನ್ನು ಮೂಲಭೂತ ಹಕ್ಕುಗಳಿಗೆ ಹೊಂದಿಕೆಯಾಗುವಂತೆ ಮಾರ್ಪಡಿಸಿಕೊಳ್ಳುವ ಮೂಲಕ, ಅವುಗಳಲ್ಲಿ ವೈವಿಧ್ಯವನ್ನು ಉಳಿಸಿಕೊಳ್ಳಬೇಕು. ಇದುವೇ ವೈಯಕ್ತಿಕ ಕಾನೂನುಗಳನ್ನು ನಿರ್ವಹಿಸಬೇಕಾದ ಸರಿಯಾದ ಮಾರ್ಗ. ಕೌಟುಂಬಿಕ ವಿಷಯಗಳಿಗೆ ಸಂಬಂಧಿಸಿದ ವೈಯಕ್ತಿಕ ಕಾನೂನುಗಳನ್ನು ಸಂಹಿತೆಯನ್ನಾಗಿಸಬೇಕು ಮತ್ತು ಅವುಗಳಲ್ಲಿ ಇರುವ ಅಸಮಾನತೆಯನ್ನು ತಿದ್ದುಪಡಿ ಮೂಲಕ ಹೋಗಲಾಡಿಸಬೇಕು ಎಂದು 21ನೇ ಕಾನೂನು ಆಯೋಗವು ತನ್ನ ವರದಿಯಲ್ಲಿ ಹೇಳಿತ್ತು. ಭಾರತೀಯ ಸಮಾಜದಲ್ಲಿನ ಅಸಾಧಾರಣ ವೈವಿಧ್ಯವನ್ನು ಆಯೋಗವು ತನ್ನ ವರದಿಯಲ್ಲಿ ಗುರುತಿಸಿತ್ತು ಮತ್ತು ಯುಸಿಸಿಯನ್ನು ರೂಪಿಸುವ ಸಂದರ್ಭದಲ್ಲಿ ದುರ್ಬಲ ಸಮುದಾಯಗಳಿಗೆ ಧಕ್ಕೆಯಾಗಬಾರದು ಎಂಬುದನ್ನು ಒತ್ತಿಹೇಳಿತ್ತು.

ಈಗ 22ನೇ ಕಾನೂನು ಆಯೋಗವು, ಪ್ರಜಾಸತ್ತಾತ್ಮಕವಲ್ಲದ ಸ್ವರೂಪದ ಮತ್ತು ಪ್ರಶ್ನಾರ್ಹವಾದ ಬರಹದ ಮೂಲಕ ಯುಸಿಸಿಗಾಗಿ ಅಭಿಪ್ರಾಯಗಳನ್ನು ಆಹ್ವಾನಿಸುವ ಮೂಲಕ ಯುಸಿಸಿಯನ್ನು ಮತ್ತೆ ಚರ್ಚೆಗೆ ಎತ್ತಿಕೊಳ್ಳಲಾಗಿದೆ. ಆಯೋಗವು ಇದಕ್ಕಾಗಿ ನೀಡಿದ ನೋಟಿಸ್‌ನಲ್ಲಿ, ಪ್ರಸ್ತಾವಿತ ಯುಸಿಸಿಯ ವಿವರಗಳ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಅಲ್ಲದೆ, ಇಂತಹ ಸಂಕೀರ್ಣವಾದ ಮತ್ತು ಬಹುಆಯಾಮದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಲು ಆಯೋಗವು ನೀಡಿದ್ದು ಕೇವಲ 30 ದಿನಗಳ ಕಾಲಾವಕಾಶ. ಇವೆಲ್ಲವೂ ಈ ವಿಚಾರಕ್ಕೆ ಸಂಬಂಧಿಸಿದಂತೆ ಜನರ ಪ್ರತಿಕ್ರಿಯಾ ಸಾಧ್ಯತೆಗಳನ್ನು ಸೀಮಿತಗೊಳಿಸಿದವು. 2018ರಲ್ಲಿ 21ನೇ ಕಾನೂನು ಆಯೋಗವು ಇಂತಹ ನೋಟಿಸ್‌ ನೀಡಿದ್ದಾಗ, ಅದರಲ್ಲಿ ಪ್ರಶ್ನಾವಳಿಗಳನ್ನು ನೀಡಿತ್ತು. ರಚನಾತ್ಮಕವಾದ ಮತ್ತು ಸಮಗ್ರ ಸ್ವರೂಪದ ಪ್ರತಿಕ್ರಿಯೆಯನ್ನು ನೀಡಲು ಅವಕಾಶ ಮಾಡಿಕೊಡಲಾಗಿತ್ತು. ಆದರೆ ಈ ಬಾರಿ ಇಂತಹ ಮಾಹಿತಿಗಳು ಇಲ್ಲದೇ ಇರುವುದು ಆತಂಕವನ್ನು ಹೆಚ್ಚಿಸಿದೆ ಮತ್ತು ಒಂದು ಅರ್ಥಪೂರ್ಣವಾದ ಸಂವಾದದ ಸಾಧ್ಯತೆಯನ್ನು ತೊಡೆದುಹಾಕಿದೆ.

ಉತ್ತರಾಖಂಡದ ಬಿಜೆಪಿ ಸರ್ಕಾರವು ರಾಜ್ಯಮಟ್ಟದಲ್ಲಿ ಯುಸಿಸಿ ಜಾರಿಯ ಬಗ್ಗೆ ಪರಿಶೀಲನೆ ನಡೆಸುತ್ತಿದೆ. ಇದಕ್ಕಾಗಿ ಹಲವಾರು ತಿಂಗಳನ್ನು ವ್ಯಯಿಸಲಾಗಿದೆ ಮತ್ತು ಕರಡನ್ನು ರಚಿಸಲು ವ್ಯಕ್ತಿಗತವಾದ ಸಂವಾದಗಳನ್ನು ನಡೆಸಲಾಗಿದೆ. ಆದರೆ ಆ ಕರಡು ಯುಸಿಸಿ ಇನ್ನೂ ಸಾರ್ವಜನಿಕರಿಗೆ ಲಭ್ಯವಿಲ್ಲ.

ಈಗ ಪ್ರಧಾನಿ ನರೇಂದ್ರ ಮೋದಿ ಅವರೇ ಯುಸಿಸಿ ವಿಚಾರವನ್ನು ಚರ್ಚೆಗೆ ತಂದಿದ್ದಾರೆ. ಆದರೆ, ಯುಸಿಸಿಗೆ ಸಂಬಂಧಿಸಿದಂತೆ ಹಲವು ಪ್ರಶ್ನೆಗಳು ಎದ್ದಿವೆ. ಯುಸಿಸಿ ಸಂಬಂಧ ಕ್ರಮ ತೆಗೆದುಕೊಳ್ಳುವ ಮುನ್ನ ಈ ಎಲ್ಲಾ ಮಹತ್ವದ ಪ್ರಶ್ನೆಗಳಿಗೆ ಸರ್ಕಾರ ಉತ್ತರಿಸಬೇಕಿದೆ. ಆ ಪ್ರಶ್ನೆಗಳು ಇಂತಿವೆ:

1. ಬುಡಕಟ್ಟು ಸಮುದಾಯಗಳನ್ನು ಮತ್ತು ಈಶಾನ್ಯ ಭಾರತೀಯರನ್ನು ಯುಸಿಸಿಯಿಂದ ಹೊರಗಿಡುತ್ತೇವೆ ಎಂದು ಹಲವು ಕೇಂದ್ರ ಸಚಿವರು ಸಾರ್ವಜನಿಕವಾಗಿ ಹೇಳುತ್ತಲೇ ಇದ್ದಾರೆ. ಹಾಗಿದ್ದರೆ ಇದು ಎಲ್ಲಾ ಭಾರತೀಯರಿಗೆ ಅನ್ವಯವಾಗುವ ಏಕರೂಪದ ಕಾನೂನು ಹೇಗಾಗುತ್ತದೆ? ಮುಸ್ಲಿಂ ವೈಯಕ್ತಿಕ ಕಾನೂನುಗಳಲ್ಲಿ ಬದಲಾವಣಗೆ ಆಗ್ರಹಿಸಲು ಬಹುಪತ್ನಿತ್ವವೇ ಕಾರಣ ಎನ್ನುವುದಾದರೆ, ಕೆಲವು ಬುಡಕಟ್ಟು ಸಮುದಾಯಗಳಲ್ಲಿ ಇರುವ ಬಹುಪತ್ನಿತ್ವ ಪದ್ದತಿಯನ್ನೂ ಸರ್ಕಾರ ರದ್ದುಪಡಿಸುತ್ತದೆಯೇ?

2. ಎಲ್ಲಾ ಭಾರತೀಯರಿಗೂ ಅವರ ಲಿಂಗ ಮತ್ತು ಲಿಂಗತ್ವ ಆಸಕ್ತಿಗಳ ಭೇದವಿಲ್ಲದೆ ಏಕರೂಪತೆಯನ್ನು ತಂದುಕೊಡಲು ಕೇಂದ್ರ ಸರ್ಕಾರ ಬದ್ಧವಾಗಿದೆಯೇ?

3. ಸಂವಿಧಾನಬದ್ಧವಾದ ಸಮಾನತೆ, ಸ್ವಾತಂತ್ರ್ಯ, ಭ್ರಾತೃತ್ವ ಮತ್ತು ಜಾತ್ಯತೀತ ನಿಲುವುಗಳನ್ನು ಯುಸಿಸಿ ಅನುಸರಿಸುತ್ತದೆಯೇ? ಅಥವಾ ಬಹುಸಂಖ್ಯಾತರ ನೈತಿಕ ಪರಿಕಲ್ಪನೆಗಳನ್ನು ಧಾರ್ಮಿಕ, ಸಾಂಸ್ಕೃತಿಕ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಮೇಲೆ ಹೇರಲು ಯತ್ನಿಸುತ್ತದೆಯೇ?

4. ಯಾವ ಕಾನೂನುಗಳನ್ನು ಯುಸಿಸಿ ಬದಲಿಸುತ್ತದೆ? ಯುಸಿಸಿಯು ಕೇವಲ ಮದುವೆ, ವಿಚ್ಛೇಧನ ಮತ್ತು ಪಾಲಕತ್ವಕ್ಕೆ ಸೀಮಿತವೇ? ಅಥವಾ ಇದು ವಾರಸುದಾರಿಕೆ, ತೆರಿಗೆ ಮತ್ತು ಇತರೆ ವಿಚಾರಗಳಿಗೂ ಅನ್ವಯವಾಗುತ್ತದೆಯೇ? ಏಕೆಂದರೆ ಹಿಂದೂ ಅವಿಭಕ್ತ ಕುಟುಂಬಕ್ಕೆ ಪ್ರತ್ಯೇಕ ತೆರಿಗೆ ನಿಯಮಗಳು ಮತ್ತು ಪ್ರತ್ಯೇಕ ಉತ್ತರಾಧಿಕಾರ ನಿಯಮಗಳು ಅನ್ವಯವಾಗುತ್ತವೆ. ಪ್ರಸ್ತಾವಿತ ಯುಸಿಸಿಯು ಹಿಂದೂ ಅವಿಭಕ್ತ ಕುಟುಂಬ ಎಂಬುದನ್ನೇ ರದ್ದುಪಡಿಸುತ್ತದೆಯೇ?

5. ಮದುವೆ ಸಂಬಂಧದಲ್ಲಿ ಗಂಡು–ಹೆಣ್ಣಿನ ನಡುವೆ ಸಮಾನತೆಯನ್ನು ತರುವ 160 ಅಂಶಗಳಿಗೆ ತಿದ್ದುಪಡಿ ತರಬೇಕಾಗುತ್ತದೆ ಎಂದು ಅಟಾರ್ನಿ ಜನರಲ್ ಅವರು ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದ್ದರು. ಹಾಗಿದ್ದರೆ ಯುಸಿಸಿಯ ಕಾರಣದಿಂದ ಎಷ್ಟು ಕಾನೂನುಗಳನ್ನು ತಿದ್ದುಪಡಿ ಮಾಡಬೇಕಾಗುತ್ತದೆ? 

6. ದೇಶದುದ್ದಕ್ಕೂ ಹಲವು ಸಮುದಾಯಗಳಲ್ಲಿ ಆಚರಣೆಯಲ್ಲಿರುವ ವಿವಿಧ ಸಂಪರದಾಯಗಳನ್ನು ಯುಸಿಸಿ ಏನು ಮಾಡುತ್ತದೆ? ಉದಾಹರಣೆಗೆ ಬಂಟರಲ್ಲಿ, ನಾಯರ್‌ಗಳಲ್ಲಿ, ಮೇಘಾಲಯದ ಬುಡಕಟ್ಟು ಸಮುದಾಯಗಳಲ್ಲಿ ಇರುವ ಮಾತೃಪ್ರಧಾನ ಪದ್ಧತಿ ಏನಾಗುತ್ತದೆ? ಸೋದರ ಸಂಬಂಧದಲ್ಲೇ ಮದುವೆಗೆ ಅವಕಾಶ ಮಾಡಿಕೊಡುವಂತಹ ಕೆಲವು ಸಂಪ್ರದಾಯಗಳು ಏನಾಗುತ್ತವೆ?

7. ಯುಸಿಸಿಯು, ವೈವಿಧ್ಯಮಯವಾದ ಸಂಪ್ರದಾಯಗಳ ವಿಚಾರದಲ್ಲಿ ಭಾರತದ ಅಸಾಧಾರಣ ಶ್ರೀಮಂತಿಕೆಯನ್ನು ನಿರಾಕರಿಸುವ  ಕಾನೂನಾಗುತ್ತದೆಯೇ?

ಯುಸಿಸಿ ವಿಚಾರವನ್ನು ಕೈಗೆತ್ತಿಕೊಂಡ ಸಮಯ, ಉದ್ದೇಶ ಮತ್ತು ಅದರ ಸಂಭಾವ್ಯ ಅಂಶಗಳು ಹತ್ತಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ವೈಯಕ್ತಿಕ ಕಾನೂನುಗಳನ್ನು ಹೇಗೆ ಸುಧಾರಿಸಬೇಕು ಮತ್ತು ಅವು ಇಂದಿನ ಅಗತ್ಯಗಳಿಗೆ ಹೇಗೆ ಅನುಗುಣವಾಗಿರಬೇಕು ಎಂಬುದನ್ನು ಪರಿಶೀಲಿಸಲು ಬೃಹತ್ ಪ್ರಮಾಣದಲ್ಲಿ ಮುಕ್ತವಾದ ಸಂವಾದ ಏರ್ಪಡಬೇಕು. ದುರದೃಷ್ಟವೆಂದರೆ ಬಿಜೆಪಿ ಸರ್ಕಾರದ ನಡೆಗಳು ನ್ಯಾಯಯುತವಾಗಿ ಇಲ್ಲವೇ ಇಲ್ಲ ಮತ್ತು ಅಂತಹ ನಡೆಗಳೆಲ್ಲವೂ ರಾಜಕೀಯ ಉದ್ದೇಶದಿಂದಲೇ ಕೂಡಿವೆ.

ಮುಸ್ಲಿಮರ ವೈಯಕ್ತಿಕ ಕಾನೂನು ಅದರಲ್ಲೂ ಬಹುಪತ್ನಿತ್ವವನ್ನೇ ಗುರಿಯಾಗಿಸಿಕೊಂಡು ಯುಸಿಸಿಯ ಸುತ್ತ ರಾಜಕೀಯ ಸಂಕಥನಗಳನ್ನು ರೂಪಿಸುವ ಕೆಲಸವನ್ನು ಬಿಜೆಪಿ ತನ್ನ ಇತಿಹಾಸದುದ್ದಕ್ಕೂ ಮಾಡುತ್ತಲೇ ಬಂದಿದೆ. ಆದರೆ ವಾಸ್ತವದಲ್ಲಿ ಬಹುಪತ್ನಿತ್ವ ಎಂಬುದು ಭಾರತದ ಎಲ್ಲಾ ಧರ್ಮೀಯರಲ್ಲೂ ಇಳಿಕೆಯಾಗುತ್ತಲೇ ಬಂದಿದೆ. ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆ–5ರ ಪ್ರಕಾರ ಮುಸ್ಲಿಮರಲ್ಲಿ ಬಹುಪತ್ನಿತ್ವದ ಪ್ರಮಾಣ ಶೇ 1.9ರಷ್ಟಿದ್ದರೆ ಕ್ರೈಸ್ತ ಧರ್ಮೀಯರಲ್ಲಿ ಶೇ 2.1ರಷ್ಟು ಮತ್ತು ಹಿಂದೂಗಳಲ್ಲಿ ಶೇ1.3ರಷ್ಟಕ್ಕೆ ಇಳಿದಿದೆ.

ಲೇಖಕ: ಕರ್ನಾಟಕ ರಾಜ್ಯ ಪರಿವರ್ತನಾ ಸಂಸ್ಥೆ (ಯೋಜನಾ ಮಂಡಳಿ) ಉಪಾಧ್ಯಕ್ಷ

ವಿರೋಧದ ಹಿಂದೆ ವೋಟ್‌ ಬ್ಯಾಂಕ್‌ ರಾಜಕಾರಣ

ಮದುವೆ, ವಿಚ್ಛೇದನ, ಉತ್ತರಾಧಿಕಾರ ಕಾಯ್ದೆ, ಮಗುವಿನ ಪಾಲನೆ... ಇಂತಹ ಗಂಭೀರ ಮತ್ತು ಸೂಕ್ಷ್ಮ ವಿಚಾರಗಳಿಗೆ ಸಾಮಾನ್ಯ ಕಾನೂನಿನಡಿ ಪರಿಹಾರ ಪಡೆಯಲು ಏಕರೂಪ ನಾಗರಿಕ ಸಂಹಿತೆ ಅವಶ್ಯಕ. ವೈಯಕ್ತಿಕ ಕಾನೂನುಗಳಲ್ಲಿ ಅಸಮಾನತೆಯ ಕೂಗು ಕೇಳಿದಾಗಲೆಲ್ಲ ಕೋರ್ಟ್‌ಗಳು ಮಧ್ಯ ಪ್ರವೇಶ ಮಾಡಿವೆ. ಈ ದಿಸೆಯಲ್ಲಿ ಜೀವನಾಂಶದ ಹಕ್ಕಿನ ವಿಷಯಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸಿಆರ್‌ಪಿಸಿಗೆ (ಅಪರಾಧ ಪ್ರಕ್ರಿಯಾ ಸಂಹಿತೆ) ತಂದ ಬದಲಾವಣೆ ನಮ್ಮ ಕಣ್ಣೆದುರು ಇದೆ. 

ಯುಸಿಸಿ ನಾಗರಿಕ ಸಮಾಜದ ಸಲ್ಲಕ್ಷಣ. ಇದು ಧರ್ಮದ ಆಧಾರದಲ್ಲಿ ಮಾಡುತ್ತಿರುವ ಬದಲಾವಣೆ ಅಲ್ಲವೇ ಅಲ್ಲ. ಇದರಿಂದ ಹೆಚ್ಚಿನ ಅನುಕೂಲವಾಗುವುದು ಎಲ್ಲಾ ಧರ್ಮ, ವರ್ಗ, ಜಾತಿಯ ಮಹಿಳೆಯರಿಗೆ ಎಂಬುದನ್ನು ನಾವ್ಯಾರೂ ಮರೆಯಬಾರದು. ಸಮಾಜ ಇದನ್ನು ಮುಕ್ತವಾಗಿ ಸ್ವಾಗತಿಸಿದ್ದೇ ಆದರೆ ದೇಶದ ಪ್ರಗತಿಯ ವೇಗವನ್ನು ಸಲೀಸಾಗಿ ಹೆಚ್ಚಿಸಿಕೊಳ್ಳಬಹುದು. ಇದನ್ನು ವಿರೋಧಿಸುವವರು ಕೇವಲ ತಮ್ಮ ವೋಟ್‌ ಬ್ಯಾಂಕ್‌ ರಾಜಕಾರಣಕ್ಕಾಗಿ ವಿರೋಧ ಮಾಡುತ್ತಿದ್ದಾರೆ ಎನ್ನದೇ ವಿಧಿಯಿಲ್ಲ.

-ಲಕ್ಷ್ಮಿ ಅಯ್ಯಂಗಾರ್, ಹಿರಿಯ ವಕೀಲೆ, ಹೈಕೋರ್ಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT