ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಪ್ಲಾಸ್ಟಿಕ್‌ ಮಾಲಿನ್ಯ ತಡೆ– ಸಹಮತ ಸಾಧ್ಯವೇ?

Published 14 ಆಗಸ್ಟ್ 2023, 23:35 IST
Last Updated 14 ಆಗಸ್ಟ್ 2023, 23:35 IST
ಅಕ್ಷರ ಗಾತ್ರ

ನಾಗರಿಕ ಸೇವಾ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಯೊಬ್ಬ ಕರೆ ಮಾಡಿ ‘ಸರ್, ಪ್ಲಾಸ್ಟಿಕ್ ಮಾಲಿನ್ಯ ನಿಯಂತ್ರಣದ ಬಗ್ಗೆ ಪ್ರಬಂಧ ಬರೆಯೋಕೆ ತಯಾರಾಗ್ತಾ ಇದ್ದೆ, ಅದ್ರಲ್ಲೂ ಭಾರತದ ನಿಲುವಿನ ಕುರಿತು ಬರೀಬೇಕಿತ್ತು. ಕೆಲವು ಪತ್ರಿಕೆಗಳಲ್ಲಿ ಓದ್ತಾ ಇದ್ದೆ, ಪ್ಲಾಸ್ಟಿಕ್ ನಿಯಂತ್ರಣದ ಬಗೆಗಿನ ಜಾಗತಿಕ ಒಪ್ಪಂದಕ್ಕೆ ನಾವು ವಿರೋಧ ಮಾಡ್ತಿದ್ದೇವಂತೆ. ನಮ್ಮ ಹಾಗೆ ವಿರೋಧಿಸಿರೋ ದೇಶಗಳ ಗುಂಪನ್ನು ‘ನೋ ಆ್ಯಂಬಿಷನ್ ಕೊಯಿಲಿಶನ್ (ನ್ಯಾಕ್‌– ಮಹತ್ವಾಕಾಂಕ್ಷೆ ಇಲ್ಲದ ದೇಶಗಳ ಒಕ್ಕೂಟ) ಅಂತ ಕರೀತಾರಂತೆ ಹೌದಾ? ಯಾಕೆ ಸರ್?’ ಎಂದ.

ಹೌದು, ಆತನ ಮಾತಿನಲ್ಲಿ ಸತ್ಯಾಂಶವಿತ್ತು. ಈ ವರ್ಷದ ಮೇ ತಿಂಗಳಿನಲ್ಲಿ ನಡೆದ ಜಾಗತಿಕ ಮಟ್ಟದ ಸಭೆಯಲ್ಲಿ ಅದು ಬಯಲಾಗಿತ್ತು. ವೇದಿಕೆ ಮೇಲೆ ಹೇಳಿಕೆ ನೀಡುವಾಗ, ಪ್ಯಾನಲ್ ಚರ್ಚೆ ಮಾಡುವಾಗ, ಪ್ಲಾಸ್ಟಿಕ್ ಎಂಬುದು ಮನುಷ್ಯನೂ ಸೇರಿದಂತೆ ಸಕಲ ಜೀವಿಗಳ ಶತ್ರು, ಅದನ್ನು ನಿಷೇಧಿಸಲೇಬೇಕು ಎಂದು ದೊಡ್ಡ ಗಂಟಲಲ್ಲಿ ಮಾತನಾಡುವ ನಮ್ಮ ನಾಯಕರು, ಜಾಗತಿಕ ವೇದಿಕೆಯಲ್ಲಿ ಮಾತ್ರ ಅಲ್ಲಿನ ನಿರ್ಣಯಗಳಿಗೆ ಉಲ್ಟಾ ಹೊಡೆಯುವ ಚಾಳಿ ಶುರುಮಾಡಿಕೊಂಡಿದ್ದಾರೆ.

ಈ ವರ್ಷದ ವಿಶ್ವ ಪರಿಸರ ದಿನಾಚರಣೆಯ ಧ್ಯೇಯವಾಕ್ಯವು ಪ್ಲಾಸ್ಟಿಕ್ ಮಾಲಿನ್ಯ ತಡೆಗಟ್ಟುವುದೇ ಆಗಿತ್ತು. ವಿಶ್ವ ಪ್ಲಾಸ್ಟಿಕ್ ಒಪ್ಪಂದದ (ಜಿಪಿಟಿ- ಗ್ಲೋಬಲ್ ಪ್ಲಾಸ್ಟಿಕ್ ಟ್ರೀಟಿ) ಕರಡು ತಯಾರಿಸಿ, ಪ್ಲಾಸ್ಟಿಕ್ ಮಾಲಿನ್ಯದ ಅಂತ್ಯವಲ್ಲದೆ ಪ್ಲಾಸ್ಟಿಕ್‍ನ ಉತ್ಪಾದನೆ ಮತ್ತು ಬಳಕೆಯನ್ನು ವಿಶೇಷವಾಗಿ ವಾಣಿಜ್ಯರೂಪದಲ್ಲಿ ಕಡಿಮೆ ಮಾಡುವುದು ಹೇಗೆ ಎಂಬುದನ್ನು ನಿರ್ಧರಿಸಲು 193 ದೇಶಗಳು ಮೇ 29ರಂದು ಪ್ಯಾರಿಸ್‍ನಲ್ಲಿ ಸಭೆ ಸೇರಿದ್ದವು.

ಎಲ್ಲ ದೇಶಗಳಿಗೂ ಜವಾಬ್ದಾರಿ ಮತ್ತು ಕಾನೂನಾತ್ಮಕವಾದ ಹೊಣೆಗಾರಿಕೆ ವಹಿಸುವ ‘ಝೀರೊ ಡ್ರಾಫ್ಟ್’ (ಪ್ರಾಥಮಿಕ ಹಂತದ ಕರಡು) ತಯಾರಿಕೆಯ ಉದ್ದೇಶದಿಂದ ‘ಇಂಟರ್‌ ಗವರ್ನಮೆಂಟಲ್ ನೆಗೋಶಿಯೇಟಿಂಗ್ ಕಮಿಟಿಯು (ಐಎನ್‌ಸಿ) ಈ ಸಭೆಯನ್ನು ಆಯೋಜಿಸಿತ್ತು. ಐದು ದಿನ ಸಭೆ ನಡೆದ ನಂತರ, ಝೀರೊ ಡ್ರಾಫ್ಟ್ ತಯಾರಿಕೆಯನ್ನು ನವೆಂಬರ್‌ವರೆಗೆ ಮುಂದೂಡಲಾಗಿದೆ ಎಂದು ಹೇಳಿಕೆ ನೀಡಿದ ಐಎನ್‌ಸಿ, ‘ಆ ಕೆಲಸ ಮಾಡಲು ಯುಎನ್‍ಇಪಿ (ಯುನೈಟೆಡ್‌ ನೇಷನ್ಸ್‌ ಎನ್ವಿರಾನ್‌ಮೆಂಟ್‌ ಪ್ರೋಗ್ರಾಂ) ಸಚಿವಾಲಯಕ್ಕೆ ಹೇಳಿದ್ದೇವೆ, ನವೆಂಬರ್‌ನಲ್ಲಿ ನೈರೋಬಿಯಲ್ಲಿ ನಡೆಯುವ ಸಭೆಯ ವೇಳೆಗೆ ಕರಡು ತಯಾರಾಗುತ್ತದೆ, ಅಲ್ಲಿ ಚರ್ಚಿಸೋಣ’ ಎಂದು ಸಭೆಯನ್ನು ಬರ್ಖಾಸ್ತುಗೊಳಿಸಿತು.

ಅದಕ್ಕೆ ಪ್ರಮುಖ ಕಾರಣ, ನೋ ಆ್ಯಂಬಿಷನ್ ಕೊಯಿಲಿಶನ್‌ನವರು ಮಾಡಿದ ಗದ್ದಲ. ಸಭೆಯ ಎರಡನೇ ದಿನದ ಕಾರ್ಯಕಲಾಪಗಳನ್ನು ಹೈಜಾಕ್ ಮಾಡಿದ ಅವರು, ತಮ್ಮ ದೇಶಗಳಲ್ಲಿ ಪ್ಲಾಸ್ಟಿಕ್ ಉತ್ಪಾದನೆ, ಬಳಕೆಗಳಿಂದ ಎಷ್ಟೇ ಮಾಲಿನ್ಯ ಉಂಟಾದರೂ ಅದರಿಂದ ಆರ್ಥಿಕ ಲಾಭವಿದೆ ಎಂಬ ಕಾರಣದಿಂದ ಸಭೆಯು ಯಾವುದೇ ಒಮ್ಮತಕ್ಕೆ ಬರದಂತೆ ಗದ್ದಲ ಎಬ್ಬಿಸಿದರು. ಪ್ಲಾಸ್ಟಿಕ್ ಮಾಲಿನ್ಯ ನಿಯಂತ್ರಣಕ್ಕೆ ತಾನು ಬದ್ಧ ಎಂದು ಕಳೆದ ವರ್ಷ ಉರುಗ್ವೆಯಲ್ಲಿ ನಡೆದ ಸಭೆಯಲ್ಲಿ ಒಪ್ಪಿಗೆ ನೀಡಿದ್ದ ನಮ್ಮ ವಕ್ತಾರರು, ನಿಯಮ 37 ಮತ್ತು 38.1 ಈ ಎರಡೂ ಸರಿ ಇಲ್ಲ ಎಂದು ಈ ಸಭೆಯಲ್ಲಿ ತಗಾದೆ ತೆಗೆದರು.

ಪಾದರಸ ಮಾಲಿನ್ಯ ತಡೆಯಲು ರೂಪಿಸಲಾದ ಮಿನಮಾಟ ಒಪ್ಪಂದದಂತೆ ಪ್ಲಾಸ್ಟಿಕ್‍ನ ವಿಷಯದಲ್ಲೂ ನಿರ್ಣಯ ಕೈಗೊಳ್ಳಲಾಗಿರುವುದನ್ನು ನಾವು ಪ್ರಶ್ನಿಸುತ್ತೇವೆ ಎಂದಿದ್ದ ಭಾರತ, ‘ನಿಯಮ 37 ಮತ್ತು 38.1 ಎರಡೂ ಕಾರ್ಯಸಾಧುವಲ್ಲ. ಅವುಗಳನ್ನು ನಮ್ಮಂಥ ಅಭಿವೃದ್ಧಿಪರ ದೇಶಗಳಿಗೆ ಅನ್ವಯಿಸಲಾಗದು’ ಎಂದು ಪಟ್ಟು ಹಿಡಿದು, ಎರಡೂ ನಿಯಮಗಳನ್ನು ಸದ್ಯಕ್ಕೆ ತಡೆಹಿಡಿದರೆ ಮಾತ್ರ ಮುಂದಿನ ಮಾತು ಎಂದುಬಿಟ್ಟಿತು. ನಿಯಮ 37ರ ಪ್ರಕಾರ, ಯಾವುದೇ ನಿರ್ಣಯದ ಬಗ್ಗೆ ವಿಶ್ವದ ಪ್ರತಿಯೊಂದು ದೇಶಕ್ಕೂ ಒಂದು ಮತ ಚಲಾವಣೆಯ ಅಧಿಕಾರ ಇರುತ್ತದೆ ಮತ್ತು ಆರ್ಥಿಕತೆಯ ಹೆಸರಿನಲ್ಲಿ ಒಕ್ಕೂಟ ಸ್ಥಾಪಿಸಿಕೊಂಡ ದೇಶಗಳ ಪರವಾಗಿ ಯಾವುದಾದರೊಂದು ದೇಶ ಮತ ಹಾಕಬಹುದು.

ಪರಸ್ಪರ ಮಾತುಕತೆಗಳಿಂದ ಒಮ್ಮತಾಭಿಪ್ರಾಯಕ್ಕೆ ಬರಲಾಗದಿದ್ದರೆ ಬಹುಮತ ಸಾಬೀತು ಮಾಡಲು ಮತದಾನ ನಡೆಯಬೇಕು ಎಂದು ಎರಡನೇ ನಿಯಮ (38.1) ಹೇಳುತ್ತದೆ. ಮತದಾನವಾದರೆ ಮುಂದಿನ ದಿನಗಳಲ್ಲಿ ನಿರ್ಣಯಗಳನ್ನು ಬದಲಾಯಿಸುವುದು ಕಷ್ಟ, ಅದರ ಬದಲಿಗೆ ಒಮ್ಮತಾಭಿಪ್ರಾಯಕ್ಕೆ ಬರುವುದೇ ಸರಿಯಾದ ದಾರಿ ಎಂಬ ವಾದ ನಮ್ಮದು. ನಮ್ಮ ಈ ನಿಲುವನ್ನು ಸೌದಿ ಅರೇಬಿಯ, ರಷ್ಯಾ, ಚೀನಾ, ಇರಾನ್, ಅರ್ಜೆಂಟೀನಾ, ಸಂಯುಕ್ತ ಅರಬ್ ರಾಷ್ಟ್ರಗಳು ಬೆಂಬಲಿಸಿದವು.

ಸಭೆಯ ಮೂರನೆಯ ದಿನ ಇನ್ನಷ್ಟು ಅಧ್ವಾನಗಳು ಬೆಳಕಿಗೆ ಬಂದವು. ಕೆಲವು ದೇಶಗಳಂತೂ ಪ್ಲಾಸ್ಟಿಕ್ ಉದ್ಯಮದಲ್ಲಿ ನಮಗೆ ಭಾರಿ ಲಾಭವಿದೆ, ಅದನ್ನು

ಸ್ಥಗಿತಗೊಳಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿಬಿಟ್ಟವು. ಅಷ್ಟಾದರೂ ಎರಡು ಸಮಿತಿಗಳನ್ನು ರಚಿಸಿದ ಐಎನ್‌ಸಿ, ಒಂದು ಸಮಿತಿಯು ಉದ್ದೇಶ ಮತ್ತು ಇನ್ನೊಂದು ಸಮಿತಿಯು ಅನುಷ್ಠಾನ ಕ್ರಮಗಳ ಕುರಿತು ಚರ್ಚಿಸಲಿ ಎಂದು ಸಲಹೆ ನೀಡಿತು. ಉದ್ದೇಶದ ಬಗ್ಗೆ ಯಾವ ದೇಶದ ತಕರಾರೂ ಇರಲಿಲ್ಲ. ತಕರಾರು ಇರುವುದು ಹೇಗೆ, ಎಷ್ಟು ದಿನಗಳೊಳಗೆ ಮತ್ತು ಯಾರು ಯಾರಿಗೆ ಹಣಕಾಸು, ತಂತ್ರಜ್ಞಾನದ ನೆರವು ನೀಡುತ್ತಾರೆ, ನೀಡಬೇಕು ಎನ್ನುವುದರ ಬಗ್ಗೆ.

ಪ್ಲಾಸ್ಟಿಕ್ ಮಾಲಿನ್ಯ ಕೊನೆಗೊಳಿಸುವುದೆಂದರೆ, ಪ್ಲಾಸ್ಟಿಕ್‍ನ ಸಂಪೂರ್ಣ ನಿರ್ಮೂಲನದವರೆಗೆ ಮನುಷ್ಯನ ಹಾಗೂ ವಾತಾವರಣದ ಆರೋಗ್ಯ ಕಾಪಾಡಲು ಆದ್ಯತೆ ಇರಬೇಕು ಎಂದು ಬಹುತೇಕ ಸದಸ್ಯ ರಾಷ್ಟ್ರಗಳು ವಾದಿಸಿದವು. ಆದರೆ, ಭಾರತ ಮಾತ್ರ ಉದ್ದೇಶ ಸಾಧನೆಗೆ ಕಾಲಮಿತಿ ಸರಿಯಲ್ಲ ಎಂದು ಪಟ್ಟುಹಿಡಿಯಿತು.

ಪ್ಲಾಸ್ಟಿಕ್ ಮಾಲಿನ್ಯ ನಿಯಂತ್ರಣದ ಮೂಲ ಉದ್ದೇಶದ ಕುರಿತು ಏನಾದರೂ ತಕರಾರುಗಳಿವೆಯೇ ಎಂಬ ಪ್ರಶ್ನೆಗೆ ‘ಸಮಸ್ಯೆ ಇರುವುದು ಪ್ಲಾಸ್ಟಿಕ್‍ನಿಂದಲ್ಲ, ಅದನ್ನು ಎಲ್ಲೆಂದರಲ್ಲಿ ಬಿಸಾಡುವುದರಲ್ಲಿ. ಆದ್ದರಿಂದ ನಮ್ಮ ಗಮನ ಇರಬೇಕಾದದ್ದು ಪ್ಲಾಸ್ಟಿಕ್ ತ್ಯಾಜ್ಯದ ಸರಿಯಾದ ನಿರ್ವಹಣೆಯ ಕಡೆಗೇ ವಿನಾ ಅದರ ನಿಷೇಧದ ಕಡೆಗಲ್ಲ. ಪ್ಲಾಸ್ಟಿಕ್‍ ಅನ್ನು ಸಂಪೂರ್ಣ ನಿಷೇಧಿಸುವುದಕ್ಕೆ, ಅದರ ಬೇಡಿಕೆ ಅಥವಾ ಸರಬರಾಜನ್ನು ಕಡಿಮೆಗೊಳಿಸುವುದಕ್ಕೆ

ನಮ್ಮ ಒಪ್ಪಿಗೆ ಇಲ್ಲ ಎಂದುಬಿಟ್ಟಿತು. ನಮ್ಮ ವಾದವನ್ನೇ ಅನುಸರಿಸಿದ ಚೀನಾ, ಕೊರಿಯಾ, ರಷ್ಯಾ, ಇರಾನ್ ಮತ್ತು ಇಂಡೊನೇಷ್ಯಾವು ಭಾರತ ಹೇಳುತ್ತಿರುವುದು ಸರಿ ಎಂದವು.

ಪ್ರತಿ ದೇಶವೂ ಪ್ಲಾಸ್ಟಿಕ್ ಮಾಲಿನ್ಯ ತಡೆಯಲು ಸಾವಿರಾರು ಕೋಟಿ ಹಣ ವ್ಯಯಿಸುತ್ತಿದೆ. ಇನ್ನೊಂದೆಡೆ, ಪ್ಲಾಸ್ಟಿಕ್ ಉತ್ಪಾದನೆ ದಿನೇದಿನೇ ಹೆಚ್ಚುತ್ತಿದೆ. ಹಿಂದಿನ ಹತ್ತು ವರ್ಷಗಳಲ್ಲಿ ಉತ್ಪತ್ತಿಯಾದ ಪ್ಲಾಸ್ಟಿಕ್ ಕಳೆದ ನೂರು ವರ್ಷಗಳಲ್ಲಿ ಉತ್ಪತ್ತಿಯಾದದ್ದಕ್ಕಿಂತ ಹೆಚ್ಚು. ದೇಶಗಳ ಮಟ್ಟದಲ್ಲಿ ಪ್ಲಾಸ್ಟಿಕ್ ಕುರಿತ ಕ್ರಿಯಾ ಯೋಜನೆಗಳು ಜಾರಿಯಲ್ಲಿವೆ. ಅಚ್ಚರಿಯೆಂಬಂತೆ, ಆಫ್ರಿಕಾದ ದೇಶಗಳು ಪ್ಲಾಸ್ಟಿಕ್ ನಿಷೇಧದ ಕುರಿತು ಉತ್ಸಾಹ ತೋರಿಸಿವೆ. ಇದು ಮುಂದುವರಿದ ದೇಶಗಳ ಅಚ್ಚರಿಗೆ ಕಾರಣವಾಗಿದ್ದು, ದೇಶಗಳ ನಡುವೆ ಅಘೋಷಿತ ಸಂಘರ್ಷ ಶುರುವಾಗಲಿದೆ. ಸಮಯ ಸಂದರ್ಭ ನೋಡಿಕೊಂಡು ಕೆಲಸ ಮಾಡಬೇಕೇ ವಿನಾ ಅದಕ್ಕೊಂದು ಪ್ರಮಾಣಫಲಕ ಬರೆದುಕೊಂಡು ಮಾಡುವುದು ಸರಿಯಲ್ಲ ಎಂದಿರುವ ನಮ್ಮನ್ನು ಅಮೆರಿಕ ಮತ್ತು ರಷ್ಯಾ ಬೆಂಬಲಿಸಿವೆ. ವಾತಾವರಣಕ್ಕೆ ತೊಂದರೆ ಕೊಡುವ ಪ್ಲಾಸ್ಟಿಕ್‍ ಅನ್ನು ನಿಷೇಧಿಸುವ ಮತ್ತು ಉತ್ಪಾದನೆಯನ್ನು ತಡೆಯುವುದರ ಪರ ನಾವಿಲ್ಲ ಎಂದಿವೆ.

ತಮ್ಮದೇ ಆರ್ಥಿಕ ಅಜೆಂಡಾ ಇಟ್ಟುಕೊಂಡಿರುವ ದೇಶಗಳು ಏಕಾಭಿಪ್ರಾಯಕ್ಕೆ ಬರುವುದು ದೂರದ ಮಾತು. ಅದಕ್ಕೆ ತುಂಬಾ ಸಮಯ ಹಿಡಿಯುತ್ತದೆ. ಅದಕ್ಕೆಂದೇ ಮಾಂಟ್ರಿಯಲ್ ಮತ್ತು ತಂಬಾಕು ನಿಯಂತ್ರಣ ಒಪ್ಪಂದಗಳನ್ನು ಮತದಾನದ ಮೂಲಕವೇ ನಿರ್ಣಯಿಸಲಾಗಿತ್ತು.

ಎರಡೂ ಒಪ್ಪಂದಗಳು ನಿರೀಕ್ಷೆಗೂ ಮೀರಿ ಯಶಸ್ಸು ಕಂಡವು. ಒಮ್ಮತಾಭಿಪ್ರಾಯಕ್ಕೆ ಬರಲು ಎಲ್ಲ ಪ್ರಯತ್ನಗಳನ್ನು ಮಾಡಿದ ನಂತರವೂ ಸಹಮತ ಸಾಧ್ಯವಾಗದಿದ್ದರೆ ಮತದಾನ ನಡೆಯಲಿ ಎಂಬ ನಿಯಮವನ್ನು ಬೇಡ ಎಂದಿರುವ ನಮ್ಮವರ ಲೆಕ್ಕಾಚಾರವಾದರೂ ಏನು?

ಈಗಾಗಲೇ ಏಕಬಳಕೆ ಪ್ಲಾಸ್ಟಿಕ್‍ ನಿಷೇಧಿಸಿರುವ ನಾವು, ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಅದೇಕೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದೇವೆ? ಪ್ಲಾಸ್ಟಿಕ್ ಅವಲಂಬನೆಯನ್ನು ಕಡಿಮೆ ಮಾಡಿಕೊಳ್ಳಲು ಒಪ್ಪದಿರುವ ನಮ್ಮ ಮನೋಭಾವ ಬದಲಾಗುವುದೆಂದು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT