ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶ್ಲೇಷಣೆ: ಮನ ಮಂದಿರದಲಿ ನಲ್ಮೆಯೊಲುಮೆ

ಪ್ರೀತಿಯೇ ಸಿದ್ಧಾಂತವೂ ಕ್ರಿಯೆಯೂ ಆದಾಗ ನಾವು ಎಂಬುದು ಹುಟ್ಟಿ ನಾನೆಂಬುದು ಅಳಿಯುತ್ತದೆ
Last Updated 18 ಮೇ 2022, 19:45 IST
ಅಕ್ಷರ ಗಾತ್ರ

ಅಂದು ರಸ್ತೆಯ ಇಕ್ಕೆಲದಲ್ಲೂ ಜನ ಸಾಲಾಗಿ ನಿಂತು ಕುತೂಹಲ ತಣಿಸಿಕೊಳ್ಳುತ್ತಿದ್ದರು. ಒಂದು ಮದುವೆಯ ದಿಬ್ಬಣ ಹತ್ತಿರದಲ್ಲೇ ಇದ್ದ ದಲಿತರ ಕೇರಿಯ ಕಡೆಗೆ ಹೋಗುತ್ತಿತ್ತು. ಅಚ್ಚ ಕಪ್ಪು ಹುಡುಗ ಮತ್ತು ಸಾಧಾರಣ ಬೆಳ್ಳಗಿನ ಹುಡುಗಿ. ದಿಬ್ಬಣ ಮುಂದಕ್ಕೆ ಹೋಗುತ್ತಿದ್ದಂತೆ ಅಲ್ಲಿ ಸೇರಿದ್ದ ಹೆಂಗಳೆಯರು ‘ಶ್ಶೆ! ಈ ಹುಡುಗಿಗೆ ಏನಾಯ್ತು. ಈ ಕೇರಿ ಹುಡುಗನ್ನ ಮದ್ವೆ ಆಗಿದ್ದಾಳಲ್ಲ? ಅದು ಹೇಗೆ ಆ ಕೇರಿಯಲ್ಲಿ ಬದುಕುತ್ತಾಳೋ’ ಅಂತ ಸಂತಾಪ ಪಡುತ್ತಿದ್ದರು.

ಇದು ಸುಮಾರು ನಲವತ್ತೈದು ವರ್ಷಗಳ ಹಿಂದಿನ ಮಾತು. ಆಕೆ ಒಬ್ಬ ಮುಸ್ಲಿಂ ಆಗಿದ್ದು, ಸರ್ಕಾರಿ ನೌಕರಿಯಲ್ಲೂ ಇದ್ದಳು. ಅಸ್ಪೃಶ್ಯತೆ ಮಗುಮ್ಮಾಗಿ ಆಚರಣೆಯಲ್ಲಿದ್ದ ಆ ಕಾಲದಲ್ಲಿ ದಲಿತ ಹುಡುಗನೊಂದಿಗಿನ ಆಕೆಯ ಮದುವೆಯು ಕೇರಿಯ ಸುತ್ತಮುತ್ತ ಇದ್ದ ಸ್ಪೃಶ್ಯರಿಗೆ ವಿಚಿತ್ರ
ಎನಿಸುತ್ತಿತ್ತು. ಮಾತ್ರವಲ್ಲ ಆಕೆ ಮೇಲ್ಜಾತಿಯವಳು ಎಂಬ ನಂಬಿಕೆಯಿತ್ತು. ಇಷ್ಟಾಗಿಯೂ ಅಲ್ಲಿ ಯಾರೂ ಹಲ್ಲು ಕಚ್ಚಿ ಸಿಟ್ಟು ತೋರುತ್ತಿರಲಿಲ್ಲ. ಅವಳು ಹೇಗೆ ಬಾಳುತ್ತಾಳೋ ಎಂಬ ಕಲ್ಪಿತ ಆತಂಕ ಇತ್ತೇ ವಿನಾ ಅವಳನ್ನಾಗಲೀ ಅವನನ್ನಾಗಲೀ ಚಚ್ಚಿ ಕೊಂದು ಹಾಕಬೇಕು ಎಂಬ ಆಕ್ರೋಶ ಇರಲಿಲ್ಲ. ಅವಳು ಅವರೆಲ್ಲರೆದುರಲ್ಲಿ ಅದೇ ಕೇರಿಯಲ್ಲಿ ಬಾಳಿ ಬದುಕಿದಳು.

ಬಾಲ್ಯದಲ್ಲಿ ನಾನು ಕಂಡ ಈ ದೃಶ್ಯ ನನ್ನ ಕಣ್ಣ ಮುಂದೆ ಹಾಗೇ ಅಚ್ಚಳಿಯದೆ ಉಳಿದಿದೆ. ಇಷ್ಟು ವರ್ಷಗಳ ನಂತರ ಪ್ರೇಮವಿವಾಹದ ಬಗೆಗೆ ಸಹನೀಯತೆ, ಒಂದು ವೇಳೆ ಅದು ಸಫಲವಾಗದಿದ್ದಲ್ಲಿ ಅದರಿಂದ ಹೊರಬರಲು ಕಾನೂನುಸಮ್ಮತ ದಾರಿಯಿದೆ ಎಂಬ ಉದಾರತೆ ನಮ್ಮೊಳಗೆ ಬೆಳೆಯಬೇಕಿತ್ತು. ಆದರೆ ಕಳೆದ ತಿಂಗಳು ಹೈದರಾಬಾದ್‍ನಲ್ಲಿ ಮುಸ್ಲಿಂ ಹುಡುಗಿಯನ್ನು ಮದುವೆಯಾದ ದಲಿತ ಹುಡುಗನನ್ನು ಮರ್ಯಾದೆಯ ಹೆಸರಿನಲ್ಲಿ ಸಾಯಬಡಿದಾಗ, ಜನ ಆ ಕೊಲೆಯನ್ನು ವಿಡಿಯೊ ಮಾಡಿದರೇ ವಿನಾ ಆತನನ್ನು ರಕ್ಷಿಸಲಿಲ್ಲ. ಈ ಎರಡು ಘಟನೆಗಳ ನಡುವಿನ ಈ ಅಂತರ ಹೇಗೆ ಸಂಭವಿಸಿತು? ಮನುಷ್ಯನೊಳಗಿನ ಪ್ರೀತಿ, ಕರುಣೆ ಎಂಬ ಭಾವ ಬತ್ತಿ ಹೋಗಿದೆಯೇ?

ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿನ ಸುಧಾರಣಾವಾದ ಅನೇಕ ಅಮಾನವೀಯ ಸಂಪ್ರದಾಯ
ಗಳನ್ನು ಪ್ರಶ್ನಿಸಿ ತಿದ್ದಿ ತೀಡಲು ಪ್ರಯತ್ನಿಸಿತು. ಆ ನಂತರದಲ್ಲಿ ಜನರ ಮನಸ್ಸಿನಲ್ಲಿ ವ್ಯಾಪಕ ಪರಿಣಾಮ ಬೀರಿದ ಸಿನಿಮಾ ಮತ್ತು ಸಾಹಿತ್ಯವು ಪ್ರೀತಿಯನ್ನು ಒಂದು ಮೌಲ್ಯವಾಗಿ ಮುನ್ನೆಲೆಗೆ ತಂದವು. ಅನೇಕ ದುರಂತ ಅಂತ್ಯದ ಪ್ರೀತಿ ಕಥಾನಕಗಳು ನೋಡುಗರು, ಓದುಗರ ಮನ ಕರಗುವಂತೆ ಮಾಡಿದವು. ಜಾತಿ, ಧರ್ಮದಾಚೆಗಿನ ಮದುವೆಗಳ ಕುರಿತು ಸಾಮಾಜಿಕ ಅಸಹನೆ ಇದ್ದೂ, ಅವರು ಎಲ್ಲಾದರೂ ಬದುಕಿಕೊಳ್ಳಲಿ ಎಂದುವವರನ್ನು ಕುಟುಂಬಗಳಿಂದ ದೂರ ಮಾಡುವ ಕಠಿಣತೆಯನ್ನು ತೋರಿತು ವಿನಾ ಅವರ ಬದುಕನ್ನು ನಾಶ ಮಾಡಲಿಲ್ಲ.

‘ಪ್ರೀತಿ ಎಂಬುದೊಂದು ಕಲೆಯಾಗಿದ್ದು, ಎಲ್ಲವನ್ನೂ ಕಲಿಯುವ ನಾವು ಪ್ರೀತಿಯನ್ನು ಕಲಿಯಲು ಮನಸ್ಸು ಮಾಡುವುದಿಲ್ಲ’ ಎಂದು ಎರಿಕ್ ಫ್ರಾಮ್ ಹೇಳುತ್ತಾರೆ. ಪ್ರೀತಿ ಕೂಡಾ ಪಿತೃಪ್ರಾಧಾನ್ಯದ ವ್ಯಾಖ್ಯೆಯಲ್ಲಿ ನರಳುತ್ತಿದೆ. ಗಂಡು ಹೆಣ್ಣು ಒಬ್ಬರನ್ನೊಬ್ಬರು ಇಷ್ಟಪಟ್ಟ ಮೇಲೆ, ಆಕೆ ಅವನನ್ನು ಒಪ್ಪಿಕೊಂಡ ಮೇಲೆ ಅವನ ಬದುಕಿಗೆ ತನ್ನನ್ನು ಸಂಪೂರ್ಣ ಕೊಟ್ಟುಕೊಳ್ಳುವುದು ಮತ್ತು ಅವನು ಆಕೆಯ ಎಲ್ಲಾ ಇಚ್ಛೆಯನ್ನು ಪೂರೈಸಿ ಅವಳನ್ನು ಸಂತೃಪ್ತಿಯಿಂದ ನಡೆಸಿಕೊಳ್ಳುವುದು ಎಂಬ ಮೇಲು ಮೇಲಿನ ನಂಬಿಕೆಯೇ ಎಲ್ಲೆಡೆಯೂ ಇರುವುದು. ಒಂದೋ ಪ್ರೇಮವನ್ನು ಪರಾಕ್ರಮ ಎಂದು ಬಿಂಬಿಸುತ್ತೇವೆ. ಇಲ್ಲವೇ ಅದೊಂದು ಆದರ್ಶ ಎಂದು ಬಿಂಬಿಸುತ್ತೇವೆ. ಇವೆರಡೂ ಅಲ್ಲದ ಅದನ್ನು ನಿಜ ಜೀವನದಲ್ಲಿ ಬಾಳಲಾಗದು.

ಪ್ರೀತಿಯೆಂಬುದು ಎರಡು ಜೀವಗಳ ನಡುವಿನ ಸ್ನೇಹ, ಸಾಂಗತ್ಯ, ನಂಬಿಕೆ, ಗೌರವಗಳನ್ನು ಉಳಿಸಿಕೊಂಡು ಪರಸ್ಪರ ಪರಿಚಿತರಾಗುತ್ತಾ ಹೋಗುವ ನಿರಂತರ ಪಯಣ ಮತ್ತು ಇದು ಇಬ್ಬರದೂ ಜವಾಬ್ದಾರಿ. ಇಲ್ಲಿ ಯಾರೂ ಹೆಚ್ಚಲ್ಲ, ಯಾರೂ ಕಡಿಮೆಯಲ್ಲ ಎಂಬ ನೆಲೆಯಲ್ಲಿ ಇದನ್ನು ವಿಸ್ತರಿಸುವ ಯಾವ ಪ್ರಯತ್ನವನ್ನೂ ನಾವಿನ್ನೂ ಮಾಡಿಲ್ಲ, ಎಳೆಯರಿಗೆ ಇದನ್ನು ದಾಟಿಸುತ್ತಲೂ ಇಲ್ಲ. ಇನ್ನೊಂದೆಡೆ, ಸಾಂಪ್ರದಾಯಿಕ ಮದುವೆಗಳಲ್ಲಿ ವಸ್ತುಸಾಂಗತ್ಯವೇ ಮುಖ್ಯ ಸಂಗತಿಯಾಗಿ, ಮದುವೆಯೆಂಬುದು ಒಪ್ಪಂದವೆನಿಸಿ, ಇರುವ ಆಸ್ತಿ ಪಾಸ್ತಿಗಳನ್ನು ಇಬ್ಬರೂ ಮುನ್ನಡೆಸಿಕೊಂಡು ಹೋಗುವುದರ ಜೊತೆಗೆ ಒಬ್ಬರನ್ನೊಬ್ಬರು ಇಷ್ಟಪಟ್ಟರೆ ಅದು ಅದೃಷ್ಟವೆನಿಸಿ, ಇಲ್ಲದಿದ್ದಲ್ಲಿ ಹಣೆಬರಹವೆನಿಸಿ ಹೇಗೋ ನಡೆಯುತ್ತಲೋ ಕುಂಟುತ್ತಲೋ ಕಡಿದು ಹೋಗುತ್ತಲೋ ಇರುತ್ತದೆ.

ವಸ್ತುಸಾಂಗತ್ಯವೇ ಜೀವನದ ಯಶಸ್ಸೆನಿಸಿದ ಈ ಕಾಲದಲ್ಲಿ ಎಲ್ಲರೂ ಅಂತರಂಗದಲ್ಲಿ ಹೆಚ್ಚು ಹೆಚ್ಚು ಒಂಟಿಯಾಗುತ್ತಿದ್ದಾರೆ. ಜಾಗತೀಕರಣದ ನಂತರದ ಬದುಕಿನಲ್ಲಿ ಬಂದ ಪಲ್ಲಟವು, ಚಿಕ್ಕ ಮಗುವಿನಿಂದಲೇ ಖಾಸಗಿ ಆಸ್ತಿಯನ್ನು ಹೆಚ್ಚಿಸಿಕೊಳ್ಳುವುದು ಹೇಗೆ ಎಂಬ ಪಾಠದಲ್ಲೇ ಬೆಳೆಯತೊಡಗಿ, ಎಲ್ಲವೂ ವ್ಯವಹಾರವಾಗಿ, ಪ್ರಕೃತಿಸಹಜವಾದ ಅನುಬಂಧದಿಂದ ದೂರವಾಗಿ, ಮೂಲ ಪ್ರೀತಿಯ ಅನುಭವದಿಂದ ವಂಚಿತಗೊಂಡ ಮನಸ್ಸು ಖಿನ್ನತೆಯಲ್ಲಿ ನರಳುವಂತಹ ಬೆಳವಣಿಗೆಗಳಾಗುತ್ತಿವೆ. ಇನ್ನೊಂದೆಡೆ, ಜಾತಿ, ಧರ್ಮ, ವರ್ಗ ಎಲ್ಲವೂ ಅದರೆಡೆಗೆ ವ್ಯಾಮೋಹಿತರಾಗಿರುವವರಿಗೆ ಪ್ರತಿಷ್ಠೆಯಾಗಿಯೂ ಮತ್ತು ಹಲವರಿಗೆ ಲಾಭದ ಬಾಬತ್ತುಗಳಾಗಿಯೂ ಪರಿವರ್ತನೆಗೊಂಡಿವೆ. ಪ್ರೀತಿಯ ತ್ಯಾಗಕ್ಕಿಂತಲೂ ದ್ವೇಷದ ಅಟ್ಟಹಾಸವು ಸ್ವೀಕೃತವೆನ್ನಿಸಿ, ಇವುಗಳ ಹೆಸರಿನಲ್ಲಿ ನಡೆಯುವ ಎಲ್ಲ ಹಿಂಸೆಗಳೂ ಮಾನ್ಯವಾಗತೊಡಗಿವೆ. ಸಾಮಾನ್ಯ ಸಂಗತಿಯೆನ್ನಿಸಿವೆ.

ತಮ್ಮ ಹುಕುಮ್ಮಿನಂತೆ ಇರುವುದಲ್ಲದೆ ಬೇರೊಂದು ಭಾವನಾ ಜಗತ್ತೇ ನಿನಗಿಲ್ಲ ಎಂದು ಅಧೀನ ನೆಲೆಯಲ್ಲಿರಿ
ಸಿದ ತಮ್ಮದೇ ಧರ್ಮದ ಹೆಣ್ಣು ಮತ್ತು ಅನ್ಯ ಧರ್ಮದ ಜನರನ್ನು ನಿರ್ಬಂಧಿಸುವ ಮೂಲಭೂತವಾದಿಗಳ ಭಾಷೆಯು ಇಂದು ನಮ್ಮ ನಾಡಿನ ಹೊಸಿಲಲ್ಲಿ ಹೊಂಚು ಹಾಕುತ್ತಿದೆಯೇ? ಒಂದು ಕಾಲದಲ್ಲಿ ಒಲುಮೆಯೆಡೆಗಿನ ವಿರೋಧದ ಹಲವು ಗಡಿಗಳನ್ನು ದಾಟಿದ ಸಾಹಸಿಗರ ಬವಣೆಯು ವ್ಯರ್ಥವಾಗುತ್ತಿದೆಯೇ?

ಸ್ವಂತ ಅತ್ತೆಯ ಮಗನಾದ ಗುತ್ತಿಯನ್ನು ಮದುವೆಯಾಗ ಬಯಸಿದ ತಿಮ್ಮಿಗೆ ವಿರೋಧ ಬಂದಿದ್ದು, ಅವಳು ಬೇರೆ ಊರಿಗೆ ಹೋದರೆ ತಮಗೆ ಆಳೊಂದು ಕಡಿಮೆಯಾಗುತ್ತದೆ ಎಂಬ ಅವಳ ಒಡೆಯರ ಲೆಕ್ಕಾಚಾರದ ಕಾರಣಕ್ಕೆ. ಪ್ರಾಣಾಂತಿಕವಾದ ಅಪಾಯ ಇದ್ದಾಗಲೂ ಆಕೆ ಘೋರ ಕಾನನದ ಕತ್ತಲಲ್ಲಿ, ಧೋ ಎಂದು ಸುರಿಯುವ ಮಳೆಯನ್ನೂ ಲೆಕ್ಕಿಸದೆ ಮನೆಯಿಂದ ಪರಾರಿಯಾಗಿ ಗುತ್ತಿಯನ್ನು ಸೇರಿಕೊಳ್ಳುತ್ತಾಳೆ. ಮಲೆಯ ತುತ್ತ ತುದಿಯಲ್ಲಿ ಹುಲಿ ಗರ್ಜನೆಯ ಭೀಕರ ಅನುಭವದ ನಡುವೆಯೂ ರಾತ್ರಿ ಕಳೆದು ಬೆಳಗಾದಾಗ, ತನ್ನ ಜೀವನದಲ್ಲೇ ಎಂದೂ ‘ಕಾಣದಿದ್ದ’ ಸೂರ್ಯೋದಯದ ಅದ್ಭುತ ಸೌಂದರ್ಯವನ್ನು ನೋಡಿ ಬೆಕ್ಕಸ ಬೆರಗಾಗುತ್ತಾಳೆ.

ಎಲ್ಲ ಕೃತಕ ಬೇಲಿಗಳನ್ನೂ ದಾಟಿ ಬೆಟ್ಟದ ತುದಿಯ ಏಕಾಂತದಲ್ಲಿ, ಎರಡಳಿದು ಒಂದಾದ ಭಾವ ಹೊಮ್ಮಿಸಿದ್ದ ಗುತ್ತಿಯ ಸಾಂಗತ್ಯವೆಂತೋ ಅಂತೆಯೇ ಪ್ರಕೃತಿಯೊಂದಿಗೂ ಎರಡಳಿದು ಒಂದಾದ ಭಾವ ಹುಟ್ಟಿದ ಅಪೂರ್ವ ಕ್ಷಣವದು. ತಾನು ಒಂಟಿಯಲ್ಲ, ತನ್ನೊಳಗನ್ನು ಅಪ್ಪಿದ ಈ ಭಾವ ಮೊಳೆತು ಬೆಳೆಯುತ್ತಲೇ ತನ್ನ ಬಾಳೂ ಅರಳುತ್ತದೆ ಎಂಬ ಸೋಜಿಗವೇ ಪ್ರೀತಿ.

‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯಲ್ಲಿ ಕುವೆಂಪು ಚಿತ್ರಿಸಿದ ತಿಮ್ಮಿಗಾದ ಈ ದರ್ಶನಾನುಭವ ಎಲ್ಲರಿಗೂ ಆಗಬೇಕೆಂದರೆ, ಪ್ರೀತಿಗೆ ಸಂಬಂಧವೇ ಇಲ್ಲದ ಎಲ್ಲ ಕೃತಕ ಬೇಲಿಗಳನ್ನೂ ಕಿತ್ತು ಹಾಕಬೇಕು. ಜಾತಿ, ಧರ್ಮ, ವರ್ಗ, ವರ್ಣಭೇದಗಳ ವಿಷವನ್ನು ಕುಡಿದು, ಮರ್ಯಾದೆಯ ಹೆಸರಿನಲ್ಲಿ ಪ್ರೇಮಿಗಳನ್ನು ಕೊಚ್ಚಿ ಕಡಿದು ಹಾಕುವವರಿಗೆ, ಸಂಗಾತಿಯನ್ನು ಅನುಮಾನದಿಂದ ಅವಮಾನಿಸುವವರಿಗೆ ಎಂದೆಂದಿಗೂ ಅರ್ಥವಾಗದ ಸಂಗತಿಯಿದು.

ಮನೋಮಂದಿರದೊಳಗೆ ಪ್ರೀತಿಮೂರ್ತಿಯ ಕಟೆಯದೇ ಹೊರಗೆ ಕಟ್ಟಿದ ಮಂದಿರ/ಮಹಲುಗಳಿಂದ ಯಾರಿಗೆ ಸುಖ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT