ಉಕ್ರೇನ್ ಮತ್ತು ರಷ್ಯಾ ನಡುವಿನ ಕದನಕ್ಕೆ ಇನ್ನೇನು ವರ್ಷ ತುಂಬುತ್ತದೆ. 2022ರ ಫೆಬ್ರುವರಿ 24ರಂದು ಉಕ್ರೇನಿನ ಮೇಲೆ ರಷ್ಯಾ ದಾಳಿ ಆರಂಭಿಸಿದಾಗ, ರಷ್ಯಾದ ಸೇನಾ ಸಾಮರ್ಥ್ಯದ ಎದುರು ಉಕ್ರೇನ್ ಹೆಚ್ಚು ಕಾಲ ಎದೆಸೆಟೆಸಿ ನಿಲ್ಲಲಾರದು ಎಂಬ ಅಭಿಪ್ರಾಯವಿತ್ತು. ರಷ್ಯಾ ಕೂಡ ಅದೇ ಲೆಕ್ಕಾಚಾರದೊಂದಿಗೆ ಉಕ್ರೇನ್ ಮೇಲೆರಗಿತ್ತು. ಆದರೆ ಉಕ್ರೇನ್ ಮಂಡಿಯೂರಲಿಲ್ಲ. ಪೂರ್ಣ ಸಾಮರ್ಥ್ಯ ಬಳಸಿ ಪ್ರತಿರೋಧ ಒಡ್ಡತೊಡಗಿತು. ಉಕ್ರೇನ್ ಬೆಂಬಲಕ್ಕೆ ಹಿಂಬದಿಯಿಂದ ಅಮೆರಿಕ ನಿಂತಿತು. ಇತರ ನ್ಯಾಟೊ ರಾಷ್ಟ್ರಗಳು ಕದನ ತಮ್ಮ ಬಾಗಿಲಿನವರೆಗೂ ಬಾರದಿದ್ದರೆ ಸಾಕು ಎಂದು ಉಕ್ರೇನ್ ಬತ್ತಳಿಕೆ ಬರಿದಾಗದಂತೆ ನೋಡಿಕೊಂಡವು.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ರಷ್ಯಾ ವಿರುದ್ಧ ಕೆಲವು ಬಾರಿ ಖಂಡನಾ ನಿರ್ಣಯ ಮಂಡಿಸಲಾಯಿತೇ ವಿನಾ ಹೆಚ್ಚೇನೂ ಮಾಡಲು ಸಾಧ್ಯವಾಗಲಿಲ್ಲ!

ಉಕ್ರೇನ್ ತನ್ನ ನಾಗರಿಕರ ಕೈಗೆ ಶಸ್ತ್ರ ಕೊಟ್ಟಿತು, ಯುರೋಪಿನ ವಿವಿಧ ದೇಶಗಳ ನಿವೃತ್ತ ಯೋಧರು ಉಕ್ರೇನ್ ಪರ ಕಾದಾಡಲು ಹೊರಟಿದ್ದಾರೆ ಎಂಬ ಸುದ್ದಿ ಬಂತು. ಎದೆಗುಂದಿದ ರಷ್ಯಾವು ಸಿರಿಯಾದಿಂದ ಉಗ್ರರನ್ನು, ಬಾಡಿಗೆ ಸೈನಿಕರನ್ನು ಕರೆತಂದು ಕದನಕ್ಕೆ ಇಳಿಸಿದೆ ಎಂಬ ಆರೋಪ ಉಕ್ರೇನ್ ಕಡೆಯಿಂದ ಬಂತು. ಉಭಯ ಸೇನೆಯ ಒಂದಿಷ್ಟು ಸೈನಿಕರು ಪ್ರಾಣ ತೆತ್ತರು. ರಷ್ಯಾದ ಇಂತಿಷ್ಟು ಸೈನಿಕರು ಮತ್ತು ಸೇನಾ ಅಧಿಕಾರಿಗಳು ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್ ಕೊಟ್ಟ ಲೆಕ್ಕವನ್ನು ರಷ್ಯಾ ಒಪ್ಪಲಿಲ್ಲ. ರಷ್ಯಾದ ಅಂಕಿಸಂಖ್ಯೆಗಳನ್ನು ಉಕ್ರೇನ್ ತಳ್ಳಿಹಾಕಿತು. ಯುದ್ಧಕ್ಕೆ ಕೊನೆಹಾಡಲು ಒಂದು ಹಂತದಲ್ಲಿ ಮಾತುಕತೆಯ ಮೇಜು ಸಿದ್ಧವಾಗಿತ್ತಾದರೂ ಆ ಪ್ರಯತ್ನಕ್ಕೆ ಯಶಸ್ಸು ಸಿಗಲಿಲ್ಲ. ತಂತ್ರಗಾರಿಕೆಯ ಭಾಗವಾಗಿ ರಷ್ಯಾ ಮತ್ತು ಅಮೆರಿಕ ಉರುಳಿಸಿದ ದಾಳ ಫಲಿತಾಂಶ ನೀಡಲಿಲ್ಲ.

ಮೊದಲಿಗೆ ಅಮೆರಿಕ ಮತ್ತು ಮಿತ್ರ ರಾಷ್ಟ್ರಗಳು ರಷ್ಯಾವನ್ನು ಆರ್ಥಿಕ ದಿಗ್ಬಂಧನದ ಮೂಲಕ ಕಟ್ಟಿಹಾಕಲು ಯತ್ನಿಸಿದವು. ರಷ್ಯಾದ ಕಚ್ಚಾವಸ್ತುಗಳನ್ನು ಬಹಿಷ್ಕರಿ
ಸಲಾಯಿತು. ರಷ್ಯಾದೊಂದಿಗಿನ ವಾಣಿಜ್ಯಿಕ ವ್ಯವಹಾರಗಳಿಗೆ ತಡೆಬಿತ್ತು. ಅಂತರರಾಷ್ಟ್ರೀಯ ಪಾವತಿ ವ್ಯವಸ್ಥೆಯಿಂದ (ಸ್ವಿಫ್ಟ್) ರಷ್ಯಾವನ್ನು ಹೊರಗಿಡಲಾಯಿತು. ಈ ಕ್ರಮಗಳಿಂದಾಗಿ ರಷ್ಯಾದ ಜಿಡಿಪಿ ಕುಸಿಯುತ್ತದೆ, ವಿದೇಶಿ ವಿನಿಮಯ ಸಂಗ್ರಹ ಕರಗುತ್ತದೆ, ಆರ್ಥಿಕ ಸಂಕಷ್ಟಕ್ಕೆ ರಷ್ಯಾ ಒಳಗಾಗಲಿದೆ ಮತ್ತು ಉಕ್ರೇನ್ ಆಕ್ರಮಣದಿಂದ ಅದು ಹಿಂದೆ ಸರಿಯಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಹಾಗಾಗಲಿಲ್ಲ. ಕೆನಡಾ, ಆಸ್ಟ್ರೇಲಿಯಾ ಮತ್ತು ಅಮೆರಿಕವು ರಷ್ಯಾದಿಂದ ತೈಲವನ್ನು ಆಮದು ಮಾಡಿಕೊಳ್ಳುವುದಿಲ್ಲ ಎಂಬ ನಿಲುವು ತಳೆದವು ನಿಜ, ಆದರೆ ಜರ್ಮನಿ, ಫ್ರಾನ್ಸ್ ಮತ್ತು ಇತರ ಐರೋಪ್ಯ ದೇಶಗಳಿಗೆ ಬದಲಿ ವ್ಯವಸ್ಥೆ ಕಾಣದಾಯಿತು. ಅವು ಹಂತಹಂತವಾಗಿ ರಷ್ಯಾ ಮೇಲಿನ ತೈಲ ಮತ್ತು ಅನಿಲ ಅವಲಂಬನೆ ಕಡಿದುಕೊಳ್ಳುವುದಾಗಿ ಪ್ರಕಟಿಸಿದವು. ಹಾಗಾಗಿ ಒಮ್ಮೆಲೇ ರಷ್ಯಾಕ್ಕೆ ಆರ್ಥಿಕ ಹೊಡೆತ ಬೀಳಲಿಲ್ಲ.

ರಷ್ಯಾ ಬದಲಿ ಗ್ರಾಹಕರನ್ನು ಮತ್ತು ಪಾವತಿ ವ್ಯವಸ್ಥೆಯನ್ನು ಕಂಡುಕೊಂಡಿತು. ಭಾರತ, ಚೀನಾ ಮತ್ತು ಟರ್ಕಿಗೆ ಹೆಚ್ಚಿನ ತೈಲವನ್ನು ಕಡಿಮೆ ಬೆಲೆಗೆ ಪೂರೈಸಿತು ಮತ್ತು ಆಯಾ ದೇಶಗಳ ಕರೆನ್ಸಿಯಲ್ಲಿಯೇ ಹಣ ಪಡೆಯಿತು. ಮುಖ್ಯವಾಗಿ ರಷ್ಯಾ ಅಗತ್ಯ ವಸ್ತುಗಳ ವಿಷಯದಲ್ಲಿ ಒಂದಿಷ್ಟು ಸ್ವಾವಲಂಬನೆ ಸಾಧಿಸಿತ್ತು ಮತ್ತು ಒಂದು ದಿಕ್ಕಿನ ದ್ವಾರ ಮುಚ್ಚಿದಾಗ ಚೀನಾ, ಬೆಲಾರಸ್ ಮತ್ತು ಟರ್ಕಿಯಿಂದ ತನಗೆ ಬೇಕಿದ್ದ ಉತ್ಪನ್ನಗಳನ್ನು ಆಮದು ಮಾಡಿಕೊಂಡಿತು. ಹಾಗಾಗಿ ದಿಗ್ಬಂಧನದ ಬಿಸಿ ಜನಜೀವನವನ್ನು ಹೆಚ್ಚು ಬಾಧಿಸಲಿಲ್ಲ. ಮೋಟಾರು ವಾಹನ ತಯಾರಿಕೆ, ವಿಮಾನಯಾನ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳು ಹಿನ್ನಡೆ ಅನುಭವಿಸಿದವು. ಕಡಿಮೆ ಬೆಲೆಗೆ ತೈಲವನ್ನು ರಫ್ತು ಮಾಡಿದ್ದರಿಂದ ಕೊಂಚ ಆದಾಯ ನಷ್ಟವಾಯಿತು. ಆದರೆ ಇಡಿಯಾಗಿ ಆರ್ಥಿಕತೆ ಕುಸಿಯಲಿಲ್ಲ. ದಿಗ್ಬಂಧನ ಎಂಬ ಮೊಂಡು ಅಸ್ತ್ರ ರಷ್ಯಾವನ್ನು ಬಾಗುವಂತೆ ಮಾಡಲಿಲ್ಲ.

ಇತ್ತ ರಷ್ಯಾ ತನ್ನ ಮೇಲಿನ ತೈಲಾವಲಂಬನೆಯನ್ನು ಬಳಸಿಕೊಂಡು ಯುರೋಪಿನ ಪ್ರಮುಖ ರಾಷ್ಟ್ರಗಳ ಮೇಲೆ ಒತ್ತಡ ಹೇರಲು ನೋಡಿತು. ತೈಲ ಮತ್ತು ಅನಿಲ ಪೂರೈಕೆ ನಿಲ್ಲಿಸುವ ಬೆದರಿಕೆ ಒಡ್ಡಿತು. ಆದರೆ ಅಮೆರಿಕ ಮತ್ತು ಕತಾರ್ ದ್ರವೀಕೃತ ಸ್ವಾಭಾವಿಕ ಅನಿಲ ಪೂರೈಕೆಯನ್ನು ಐರೋಪ್ಯ ರಾಷ್ಟ್ರಗಳಿಗೆ ಹೆಚ್ಚಿಸಿದವು. ನೈಜೀರಿಯಾ, ಅಲ್ಗೇರಿಯಾ ಮತ್ತು ನಾರ್ವೆ ಕೂಡ ಹೆಗಲು ಕೊಟ್ಟವು. ರಷ್ಯಾದ ಬೆದರಿಕೆಯ ತಂತ್ರ ಕೆಲಸ ಮಾಡಲಿಲ್ಲ. ನಂತರ ಪುಟಿನ್, ಚಳಿಗಾಲವನ್ನು ಉಕ್ರೇನ್ ವಿರುದ್ಧ ಅಸ್ತ್ರವಾಗಿ ಬಳಸಲು ನೋಡಿದರು. ವಿದ್ಯುತ್ ಸ್ಥಾವರಗಳನ್ನು ಗುರಿಯಾಗಿಸಿಕೊಂಡು ರಷ್ಯಾ ದಾಳಿ ನಡೆಸಿತು. ಉಕ್ರೇನಿನ ಹಲವು ನಗರಗಳಲ್ಲಿ ಕತ್ತಲು ಆವರಿಸಿತು. ಉಕ್ರೇನ್ ಅಧೀರಗೊಳ್ಳಲಿಲ್ಲ.

ವೈದ್ಯಕೀಯ ಮತ್ತು ಇತರ ಅಗತ್ಯ ಸೇವೆಗಳಿಗೆ ವಿದ್ಯುತ್ ಅಭಾವ ಕಾಡದಂತೆ ನೋಡಿಕೊಳ್ಳಲು ಅಮೆರಿಕ ಮತ್ತು ಐರೋಪ್ಯ ಒಕ್ಕೂಟ ಹೆಚ್ಚಿನ ಸಾಮರ್ಥ್ಯದ
ಜನರೇಟರ್‌ಗಳನ್ನು ಉಕ್ರೇನಿಗೆ ರವಾನಿಸಿದವು. ಜನ ಮೇಣದ ಬತ್ತಿಗಳನ್ನು, ಕಟ್ಟಿಗೆಗಳನ್ನು ಉರುವಲಾಗಿ ತಮ್ಮ ಅಗತ್ಯಗಳಿಗೆ ಬಳಸಿಕೊಂಡರು. ಥರ್ಮಲ್ ಬಟ್ಟೆಗಳು ಜನರನ್ನು ಬೆಚ್ಚಗಿಡಲು ನೆರವಾದವು. ಹೀಗೆ ಉಭಯ ದೇಶಗಳು ಪರಸ್ಪರ ಬಗ್ಗುಬಡಿಯಲು ರೂಪಿಸಿದ ತಂತ್ರಗಳು ಯಶ ಕಾಣಲಿಲ್ಲ. ಹಾಗಾಗಿ ಯುದ್ಧ ದೀರ್ಘ ಅವಧಿಗೆ ಮುಂದುವರಿಯಿತು.

ಉಕ್ರೇನ್– ರಷ್ಯಾ ನಡುವಿನ ಈ ಕದನ ಒಂದಿಷ್ಟು ಪ್ರಶ್ನೆಗಳನ್ನು ಮುಂದೆಮಾಡಿತು ಮತ್ತು ಜಗತ್ತು ಬದಲಾಗಿದೆ ಎಂಬುದನ್ನು ತೋರಿಸಿತು. ಅಮೆರಿಕ ಮತ್ತು ಅದರ ಐರೋಪ್ಯ ಮಿತ್ರ ರಾಷ್ಟ್ರಗಳು ಯುರೋಪ್ ಸಮಸ್ಯೆಯನ್ನು ಜಾಗತಿಕ ಸಮಸ್ಯೆ ಎಂದು ಇದುವರೆಗೆ ಬಿಂಬಿಸುತ್ತಾ ಬಂದಿದ್ದವು. ಆದರೆ ಬದಲಾದ ಕಾಲಘಟ್ಟದಲ್ಲಿ ಅದನ್ನು ಒಪ್ಪಿಕೊಳ್ಳಲು ಇತರ ದೇಶಗಳು ಸಿದ್ಧವಿಲ್ಲ ಎಂಬುದು ಉಕ್ರೇನ್ ಯುದ್ಧದ ವಿಷಯದಲ್ಲಿ ಜಾಹೀರಾಯಿತು.

ಜಗತ್ತಿನ ಯಾವುದೇ ಭಾಗದಲ್ಲಿ ಬಿಕ್ಕಟ್ಟು ಉಂಟಾದಾಗ ಸೂಪರ್ ಪವರ್ ಅಥವಾ ಶಕ್ತ ರಾಷ್ಟ್ರದ ಆಣತಿಯಂತೆ ನಡೆದುಕೊಳ್ಳಬೇಕಿಲ್ಲ ಎನ್ನುವ ಸಂದೇಶ ಹೊರಹೊಮ್ಮಿತು. ರಷ್ಯಾ ಮತ್ತು ಪಶ್ಚಿಮ ರಾಷ್ಟ್ರಗಳ ನಡುವಿನ ಕಾದಾಟದಲ್ಲಿ ಯಾವುದೇ ಗುಂಪಿನೊಂದಿಗೆ ಗುರುತಿಸಿಕೊಳ್ಳಬೇಕಿಲ್ಲ ಎಂಬುದನ್ನು ಉಕ್ರೇನ್ ಯುದ್ಧಕ್ಕೆ ಪ್ರತಿಕ್ರಿಯಿಸಿದ ರೀತಿಯಲ್ಲಿ ಏಷ್ಯಾ, ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕ ಭಾಗದ ರಾಷ್ಟ್ರಗಳು ತೋರಿಸಿದವು. ಹೆಚ್ಚಿನ ದೇಶಗಳು ಉಕ್ರೇನ್ ಪರ ಅನುಕಂಪ ಮತ್ತು ರಷ್ಯಾದ ಅಮಾನವೀಯ ಕೃತ್ಯಗಳಿಗೆ ಖಂಡನೆ ವ್ಯಕ್ತಪಡಿಸಿದವು, ಆದರೆ ನೇರವಾಗಿ ಉಕ್ರೇನನ್ನು ಬೆಂಬಲಿಸುವ ನಿಲುವು ಪ್ರಕಟಿಸಲಿಲ್ಲ.

ಒಟ್ಟಾರೆಯಾಗಿ ನೋಡುವುದಾದರೆ, ವರ್ಷದ ಅವಧಿಯ ಈ ಸಂಘರ್ಷದಲ್ಲಿ ರಷ್ಯಾದ ಸೇನೆಗೆ ಹಿನ್ನಡೆಯಾಗಿದೆ. ಉಕ್ರೇನ್ ಬಡಕಲಾಗಿದೆ. ಅಮೆರಿಕದ ಶಸ್ತ್ರಾಸ್ತ್ರ
ಮತ್ತು ಆರ್ಥಿಕ ನೆರವು ನಿಂತ ದಿನ ಉಕ್ರೇನ್ ಕದನ ಕಣದಲ್ಲಿ ಕುಸಿಯುತ್ತದೆ. ಸದ್ಯದ ಮಟ್ಟಿಗಂತೂ ಅಮೆರಿಕ ಮತ್ತು ಮಿತ್ರರಾಷ್ಟ್ರಗಳು ಉಕ್ರೇನಿನ ಬತ್ತಳಿಕೆ ತುಂಬುತ್ತಲೇ ಇವೆ. ಲಿಯೋಪಾರ್ಡ್ ಯುದ್ಧವಾಹನಗಳನ್ನು ಪೂರೈಸುವುದಾಗಿ ಇತ್ತೀಚೆಗೆ ಜರ್ಮನಿ ಹೇಳಿದೆ. ಅತ್ತ ಪುಟಿನ್, ಸ್ಟಾಲಿನ್‍ಗ್ರಾಡ್ ಕದನಕ್ಕೆ 80 ವರ್ಷ ತುಂಬಿದ ಹಿನ್ನೆಲೆಯಲ್ಲಿ ಮಾತನಾಡುತ್ತಾ, ಇದೀಗ ಮತ್ತೊಮ್ಮೆ ಜರ್ಮನಿಯ ಲಿಯೋಪಾರ್ಡ್ ಯುದ್ಧವಾಹನಗಳನ್ನು ಎದುರಿಸಬೇಕಿದೆ ಎಂದು ಇತಿಹಾಸವನ್ನು ಕೆದಕಿದ್ದಾರೆ.

ಸ್ಟಾಲಿನ್‍ಗ್ರಾಡ್ ಕದನ ಎರಡನೇ ವಿಶ್ವಸಮರಕ್ಕೆ ಮಹತ್ವದ ತಿರುವು ನೀಡಿದ ರೋಚಕ ಕದನ. ಆ ಯುದ್ಧದಲ್ಲಿ ಜರ್ಮನಿಯ ವಿರುದ್ಧ ಸೋವಿಯತ್ ಮೇಲುಗೈ ಸಾಧಿಸಿತ್ತು. ಆ ಸಮರವನ್ನು ಉಲ್ಲೇಖಿಸುವ ಮೂಲಕ ಉಕ್ರೇನ್ ಜೊತೆಗಿನ ಸಂಘರ್ಷ ಬರುವ ದಿನಗಳಲ್ಲಿ ತೀವ್ರತೆ ಪಡೆದುಕೊಳ್ಳಲಿದೆ ಎಂಬ ಸೂಚನೆಯನ್ನು ಪುಟಿನ್ ನೀಡಿರಲಿಕ್ಕೆ ಸಾಕು.

ಸಂಧಾನ ಅಥವಾ ಮಾತುಕತೆಗೆ ತೆರೆದುಕೊಳ್ಳದ ಎರಡು ಪಡೆಗಳ ನಡುವಿನ ಯುದ್ಧ, ದೀರ್ಘ ಅವಧಿಗೆ ಮುಂದುವರಿದರೆ ಅಂತಹ ಯುದ್ಧಗಳು ದೊಡ್ಡದೊಂದು ಅವಘಡದೊಂದಿಗೆ ಮುಕ್ತಾಯವಾಗುವ ಸಾಧ್ಯತೆಯೇ ಹೆಚ್ಚು. ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧ ಆ ಹಾದಿ ಹಿಡಿಯಬಹುದೇ ಎಂಬ ಆತಂಕವಂತೂ ಇದ್ದೇ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.