ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಸ್ಲಿಮರ ತಲ್ಲಣ ಮತ್ತು ಅರ್ಥವಿಲ್ಲದ ರಾಜಕಾರಣ

ಮಸೀದಿ ಬಗ್ಗೆ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು ಪೂರ್ವಗ್ರಹಗಳನ್ನು ಇನ್ನಷ್ಟು ಗಟ್ಟಿಗೊಳಿಸುವುದೇ?
Last Updated 16 ಅಕ್ಟೋಬರ್ 2018, 20:22 IST
ಅಕ್ಷರ ಗಾತ್ರ

ಭಾರತದ ಮುಸ್ಲಿಮರು ಮತ್ತೊಮ್ಮೆ ತಲ್ಲಣಗೊಂಡಿದ್ದಾರೆ. ಮಸೀದಿ ಕುರಿತು ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು, ತ್ರಿವಳಿ ತಲಾಖ್‌ ಕುರಿತಂತೆ ಸರ್ಕಾರ ಹೊರಡಿಸಿರುವ ಸುಗ್ರೀವಾಜ್ಞೆ, ವಿಭಿನ್ನ ಮಾದರಿಯ ಹಿಂದುತ್ವಗಳ ನಡುವಣ ಗೊಂದಲಗಳು ಈ ತಲ್ಲಣಕ್ಕೆ ಕಾರಣ ಎಂದರೆ ತಪ್ಪಾಗಲಾರದು. ಮಸೀದಿಯ ಕುರಿತು ಸುಪ್ರೀಂ ಕೋರ್ಟ್‌ ತೀರ್ಪು ಆಕ್ರೋಶಭರಿತ ಪ್ರತಿರೋಧಕ್ಕೆ ದಾರಿಮಾಡಿಕೊಡಲಿಲ್ಲ; ಹಾಗಿದ್ದರೂ ಮುಸ್ಲಿಮರಲ್ಲಿ ತಣ್ಣನೆಯ ತಲ್ಲಣವನ್ನು ಇದು ಸೃಷ್ಟಿಸಿರುವುದು ನಿಜ. ಇದರ ಪರಿಣಾಮ ತಕ್ಷಣಕ್ಕೆ ಕಾಣಿಸದೇ ಇರಬಹುದು.

ಆದರೆ, ಅದು ಭಾರತದ ಮುಸ್ಲಿಮರನ್ನು ಮತ್ತೊಮ್ಮೆ ಅಂಚಿಗೆ ತಳ್ಳಬಹುದಾದ ಆತಂಕ ಇಲ್ಲಿ ಬಹುಮುಖ್ಯ. ಎರಡನೆಯದಾಗಿ ಭಾರತದ ಅತ್ಯುನ್ನತ ನ್ಯಾಯಾಲಯವು ಈ ತೀರ್ಪು ನೀಡಿದೆ. ಹಾಗಾಗಿ ಈ ತೀರ್ಪಿಗೆ ವ್ಯಾಪಕ ಮನ್ನಣೆಯೂ ಇದೆ ಎಂಬುದು ತಲ್ಲಣವನ್ನು ಇನ್ನಷ್ಟು ಹೆಚ್ಚಿಸಿದೆ.

ಅಯೋಧ್ಯೆಯ ರಾಮ ಮಂದಿರ ಮತ್ತು ಬಾಬ್ರಿ ಮಸೀದಿ ಸಂಘರ್ಷದ ಹಿನ್ನೆಲೆಯಲ್ಲಿ ಇಸ್ಲಾಂನಲ್ಲಿ ಮಸೀದಿಯ ಮಹತ್ವದ ಕುರಿತು ಸುಪ್ರೀಂ ಕೋರ್ಟ್‌ ಕೆಲವು ದಿನಗಳ ಹಿಂದೆ ಈ ತೀರ್ಪು ನೀಡಿತ್ತು. ವಿವಾದವನ್ನು ಇನ್ನಷ್ಟು ಸಂಕೀರ್ಣಗೊಳಿಸುವಂತೆ ‘ಮಸೀದಿಯು ಇಸ್ಲಾಂನ ಅವಿಭಾಜ್ಯ ಅಂಗವಲ್ಲ’ ಎಂದು ಸುಪ್ರೀಂ ಕೋರ್ಟ್‌ ತೀರ್ಪಿನಲ್ಲಿ ಹೇಳಿದೆ. ಈ ತೀರ್ಪು ಉಂಟು ಮಾಡಬಹುದಾದ ಪರಿಣಾಮಗಳು ಅಪಾರ. ಇದು ಸರ್ವಾನುಮತದ ತೀರ್ಪು ಆಗಿರಲಿಲ್ಲ, ಬದಲಿಗೆ ಬಹುಮತದ ತೀರ್ಪು. 1994ರಲ್ಲಿ ಫಾರೂಕಿ ಪ್ರಕರಣದಲ್ಲಿ ಅಲಹಾಬಾದ್‌ ಹೈಕೋರ್ಟ್‌ ನೀಡಿದ್ದ ತೀರ್ಪನ್ನು ವ್ಯಾಖ್ಯಾನಿಸುವ ಕೆಲಸವನ್ನು ಸುಪ್ರೀಂ ಕೋರ್ಟ್ ಮಾಡಿದೆಯೇ ಹೊರತು ಹೊಸ ಮತ್ತು ಭಿನ್ನವಾದ ತೀರ್ಪನ್ನು ನೀಡಿಲ್ಲ.

ಅಲಹಾಬಾದ್‌ ಹೈಕೋರ್ಟ್‌ ತೀರ್ಪು ಕೊಟ್ಟಾಗಲೂ ಅದಕ್ಕೆ ವಿರೋಧವಾಗಲೀ, ಗಟ್ಟಿಯಾದ ಪ್ರತಿರೋಧವಾಗಲೀ ವ್ಯಕ್ತವಾಗಿರಲಿಲ್ಲ; ಸುಪ್ರೀಂ ಕೋರ್ಟ್‌ನ ತೀರ್ಪಿಗೂ ಈಗ ಯಾವುದೇ ಪ್ರತಿರೋಧ ಕಂಡುಬಂದಿಲ್ಲ. ಈಗ, ಭಾರತದ ಸಾಂಸ್ಕೃತಿಕ ರಾಷ್ಟ್ರೀಯತೆಯ ಕಥನ ಬದಲಾಗಿದೆ ಮತ್ತು ಹಿಂದುತ್ವವಾದ ಇನ್ನಷ್ಟು ತೀವ್ರವಾಗಿದೆ. ಹಾಗಾಗಿ ಸಹಜವೇ ಎಂಬಂತೆ ಮುಸ್ಲಿಮರು ತಲ್ಲಣಗೊಂಡಿದ್ದಾರೆ.

ಮಸೀದಿ ಕುರಿತಾದ ಚರ್ಚೆ ಹೊಸತೇನಲ್ಲ. ಅದನ್ನು ವಿವಿಧ ದೃಷ್ಟಿಕೋನ, ವಿವಿಧ ತಾತ್ವಿಕ ನಿಲುವುಗಳಿಂದ ವಿಶ್ಲೇಷಿಸುತ್ತಲೇ ಬರಲಾಗಿದೆ. ಇಸ್ಲಾಮಿನ ಬಗ್ಗೆ ಚರ್ಚೆಗಳು ನಡೆದಾಗಲೆಲ್ಲಾ ಸೂಫಿ ಸಂತರ ದರ್ಗಾಗಳು ಧುತ್ತೆಂದು ಎದುರಾಗುತ್ತವೆ. ಈ ದರ್ಗಾಗಳು ಮುಸ್ಲಿಂ ಅಸ್ಮಿತೆಯನ್ನು ಪ್ರತಿನಿಧಿಸುವುದಕ್ಕಿಂತ ಹೆಚ್ಚಾಗಿ ಗ್ರಾಮೀಣ ಸಂಸ್ಕೃತಿ, ಸಮುದಾಯಗಳ ನಡುವಣ ವಿಶಿಷ್ಟ ಬಂಧ, ಗಾಢವಾದ ಅಲೌಕಿಕ ಪ್ರೇಮ ಮತ್ತು ಬದುಕನ್ನು ಪ್ರತಿನಿಧಿಸುವುದೇ ಹೆಚ್ಚು. ಮಸೀದಿ ಇದಕ್ಕೆ ತದ್ವಿರುದ್ಧ. ಮಸೀದಿಯಲ್ಲಿ ಮೂರು ಅಂಶಗಳನ್ನು ಗಮನಿಸಬಹುದು– ಮೊದಲನೆಯದಾಗಿ ಅದು ಸಮುದಾಯದ ಅಸ್ಮಿತೆಯ ಪ್ರತಿನಿಧಿ. ಆ ಕಾರಣಕ್ಕಾಗಿಯೇ ಅದು ಸಮುದಾಯಕ್ಕೆ ಅವಿಭಾಜ್ಯವೂ ಹೌದು. ಎರಡನೆಯದಾಗಿ, ಸಮುದಾಯವನ್ನು ಅಲೌಕಿಕ ಪ್ರಜ್ಞೆಯೊಂದಿಗೆ ಮತ್ತೆ ಮತ್ತೆ ಬೆಸೆಯುವ ಕೆಲಸವನ್ನು ಮಸೀದಿ ಮಾಡುತ್ತದೆ. ಮೂರನೆಯದಾಗಿ, ಮಸೀದಿ ಎಂಬುದೊಂದು ಚೌಕಟ್ಟು ಮತ್ತು ಅದು ನಿರಾಕಾರ ದೇವನ ರೂಪಕ. ಇಗರ್ಜಿಯಲ್ಲಿ ಇರುವ ಹಾಗೆ ಮಸೀದಿಯಲ್ಲಿ ಶ್ರೇಣೀಕೃತ ವ್ಯವಸ್ಥೆ ಇಲ್ಲ.

ಚರ್ಚ್‌ಗಳನ್ನು ನಿಯಂತ್ರಿಸಲು ಪೋಪ್‌ ಇದ್ದಹಾಗೆ ಮಸೀದಿಯನ್ನು ನಿಯಂತ್ರಿಸುವುದಕ್ಕೊಂದು ವ್ಯವಸ್ಥೆ ಇಲ್ಲ. ಹಾಗಾಗಿಯೇ, ಅಲ್ಲಲ್ಲಿ ಹರಡಿದ, ಚದುರಿದ ನೂರಾರು ಮಸೀದಿಗಳು ಕಾಣ ಸಿಗುತ್ತವೆ. ಮುಸ್ಲಿಂ ಜನಸಂಖ್ಯೆ ಹೆಚ್ಚಾಗಿ ಕೇಂದ್ರೀಕೃತವಾಗಿರುವ ಪ್ರದೇಶಗಳಲ್ಲಿಯೇ ಮಸೀದಿಗಳು ಇರುವುದರಿಂದ ಅವು ಮುಸ್ಲಿಂ ಕೇರಿಗಳನ್ನು ಪ್ರತಿನಿಧಿಸುವ ಕೆಲಸವನ್ನೂ ಮಾಡುತ್ತವೆ. ಭಾರತದಲ್ಲಿ ಇರುವ ಮಸೀದಿಗಳ ಸಂಖ್ಯೆ ಒಂದು ಲೆಕ್ಕಾಚಾರದಂತೆ ಮೂರು ಲಕ್ಷಕ್ಕೂ ಹೆಚ್ಚು.

ಕೋಮು ಗಲಭೆಗಳ ಸಂದರ್ಭದಲ್ಲಿ ಮೊದಲ ಗುರಿ ಈ ಮಸೀದಿಗಳೇ. ರಾಷ್ಟ್ರೀಯತೆಯ ಕಥನಗಳ ವಿಸ್ತರಣೆಯೇ ಇರಲಿ, ಭಯೋತ್ಪಾದನೆ ಹಾಗೂ ಜಿಹಾದಿ ವಾದಗಳ ಸಂದರ್ಭವೇ ಆಗಿರಲಿ ಮೊದಲ ಬಲಿ ಮಸೀದಿಗಳು, ಅದಕ್ಕೆ ಸಂಬಂಧಿಸಿದ ಸಂಸ್ಥೆಗಳು ಮತ್ತು ಸಂಘಟನೆಗಳು. ಈ ಸಾಲಿಗೆ ಇತ್ತೀಚೆಗೆ ದರ್ಗಾಗಳೂ ಸೇರಿವೆ. ಮಸೀದಿಗಳು ಅರಬ್‌ ಸಾಮ್ರಾಜ್ಯಶಾಹಿಯ ಪ್ರತೀಕಗಳು, ಜಿಹಾದಿಗಳನ್ನು ಮತ್ತು ಉಗ್ರರನ್ನು ಸೃಷ್ಟಿಸುವ ಕಾರ್ಖಾನೆಗಳು ಎಂಬ ಕಥನಗಳು ಈಗಿನ ಪ್ರಜ್ಞೆಯಲ್ಲಿ ನೆಲೆ ಕಂಡುಕೊಂಡಿವೆ.

ಮಸೀದಿಯ ಬಗ್ಗೆ ಆಗಿರುವ ಚರ್ಚೆಗಳು ಬಹಳ, ಬಂದಿರುವ ವ್ಯಾಖ್ಯೆಗಳು ವಿಪುಲ. ದುರಾಮ್‌ ವಿಶ್ವವಿದ್ಯಾಲಯದ ಮಾನವಶಾಸ್ತ್ರಜ್ಞ ಔರಂಗಜೇಬ್‌ ಮುಗಲ್‌ ಪ್ರಕಾರ, ಮಸೀದಿ ಎಂಬುದು ಧಾರ್ಮಿಕತೆ, ಅಲೌಕಿಕತೆಯೊಂದಿಗೆ ಬೆಸೆದುಕೊಂಡಿರುವ ಸಾಮಾಜಿಕ ಅವಕಾಶ ಅಥವಾ ಸ್ಥಳ. ರಾಬರ್ಟ್‌ ಹಿಲ್ಲೆನ್‌ಬ್ರಾಂಟ್‌ ಪ್ರಕಾರ, ಮಸೀದಿ ಎಂಬುದು ಇಸ್ಲಾಂ ಧರ್ಮದ ಬಹುಮುಖ್ಯ ಚೌಕಟ್ಟು ಇಲ್ಲವೇ ಕಟ್ಟಡ. ಮುಸ್ಲಿಮರ ಜೀವನದಿಂದ ಬೇರ್ಪಡಿಸಲಾಗದ ಭಾಗ ಎಂದು ಮಸೀದಿಗೆ ಅರ್ಥ ಕೊಟ್ಟವರೂ ಇದ್ದಾರೆ. ಮದೀನಾದಲ್ಲಿ ಪ್ರವಾದಿ ಮುಹಮ್ಮದರು ಮಸೀದಿ ಕಟ್ಟಿದ ನಂತರವೇ ಮಸೀದಿಗೆ ಮಹತ್ವ ಬಂತು ಮತ್ತು ಅದು ಇಸ್ಲಾಂನ ಅವಿಭಾಜ್ಯ ಅಂಗವಾಯಿತು.

ಅಲ್‌ ಹರಮ್‌ ಮತ್ತು ಅಲ್‌ ಅಕ್ಸಾ ಮಸೀದಿಗಳು ಪ್ರವಾದಿ ಪೂರ್ವದಿಂದಲೂ ಅಸ್ತಿತ್ವದಲ್ಲಿದ್ದವು. ಮದೀನಾ ಮಸೀದಿಯು ಧಾರ್ಮಿಕ ಪಾವಿತ್ರ್ಯ ಮತ್ತು ಲೌಕಿಕತೆ ನಡುವಣ ಕೊಂಡಿಯಾಯಿತು. ಧರ್ಮ, ಯುದ್ಧ, ಸಾಮಾಜಿಕ ನೀತಿ, ಆಡಳಿತ,ನ್ಯಾಯ ಇತ್ಯಾದಿ ಇಲ್ಲಿ ಚರ್ಚಿತವಾದವು. ದೇವರ ಮನೆಯೊಂದಿಗೆ ಮಸೀದಿ ಲೌಕಿಕ ವಿಚಾರಗಳ ಜಿಜ್ಞಾಸೆಯ ಸ್ಥಳವಾಯಿತು. ಎಲ್ಲಾ ಮಸೀದಿಗಳು ಲೌಕಿಕತೆಯೊಂದಿಗೆ ಅನುಸಂಧಾನ ಮಾಡಿದವು ಎಂದು ಇದರ ಅರ್ಥವಲ್ಲ. ಬಹಳಷ್ಟು ಮಸೀದಿಗಳು ಅಲೌಕಿಕತೆಗೆ ಮಾತ್ರ ಮಹತ್ವ ನೀಡಿದವು. ಈ ಅಂಶಗಳನ್ನು ಸುಪ್ರೀಂ ಕೋರ್ಟ್ ಗಮನಿಸಲಿಲ್ಲವೆಂದೇ ಹೇಳಬೇಕು.

‌ದೇವರ ಮನೆ ಎಂಬ ಕಲ್ಪನೆ ಮಸೀದಿಯ ಆಚೆಗೂ ವ್ಯಾಪಿಸಿದೆ ಎಂಬುದು ಸತ್ಯ. ಮಸೀದಿಯನ್ನು ಬಿಟ್ಟು ಕೂಡ ದೇವರ ಮನೆಯ ಕಲ್ಪನೆ ಸಾಧ್ಯವಿದೆ. ಸ್ಮಶಾನ ಮತ್ತು ಬಹಿರ್ದೆಸೆ ಸ್ಥಳಗಳನ್ನು ಹೊರತುಪಡಿಸಿ ಉಳಿದೆಲ್ಲಾ ಕಡೆಗಳಲ್ಲಿಯೂ ಪ್ರಾರ್ಥನೆಗೆ ಅವಕಾಶವಿದೆ. ಯಾವುದೇ ಸ್ಥಳ ಮಸೀದಿ ಆಗಬಹುದೆಂಬ ಪ್ರವಾದಿಯವರ ವಾದ ಈ ಸಂದರ್ಭದಲ್ಲಿ ಬಹು ಮುಖ್ಯ. ಹಾಗಾದರೆ ಮಸೀದಿಯೆಂದರೆ ಏನು ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಅದು ಒಂದು ಮಾಮೂಲಿ ಸ್ಥಳವೇ? ಮುಸ್ಲಿಂ ಅಸ್ಮಿತೆಯ ಕೇಂದ್ರ ಬಿಂದುವೇ? ದೇವರ ಮನೆಯೇ? ಅಥವಾ ಸಮುದಾಯವನ್ನು ಒಂದು ಚೌಕಟ್ಟಿನೊಳಗೆ ಕೂಡಿಡುವ ಮನೆಯೇ?

ವಾಸ್ತವವಾಗಿ ಮಸೀದಿ ಒಂದು ವಿಶಿಷ್ಟ ಮತ್ತು ಪವಿತ್ರ ಸ್ಥಳ; ಅಲ್ಲಿ ಧರ್ಮ-ಸಮಾಜ-ಅಸ್ಮಿತೆ-ರಾಜಕೀಯ- ಧರ್ಮಾಂಧತೆ ಇತ್ಯಾದಿ ಒಂದುಗೂಡುತ್ತವೆ. ಇಲ್ಲಿ ಧರ್ಮ ಮತ್ತು ಆಚಾರ, ಧರ್ಮ ಮತ್ತು ಸಂಪ್ರದಾಯ, ಧರ್ಮ ಮತ್ತು ಪರಂಪರೆ ಇತ್ಯಾದಿಗಳು ಮುಖಾಮುಖಿಯಾಗುತ್ತವೆ. ಆದರೆ ಜಾತ್ಯತೀತತೆ, ಲಿಂಗ ತಾರತಮ್ಯ ಆಧುನಿಕತೆಯೊಂದಿಗಿನ ಸಂಬಂಧಗಳು ಇತ್ಯಾದಿ ವಿಷಯಗಳು ಬಂದಾಗಲೆಲ್ಲಾ ಅನುಸಂಧಾನ ನಡೆಯುವುದಿಲ್ಲ. ಅಲ್ಲದೇ ಮಾರುಕಟ್ಟೆ, ದಿನನಿತ್ಯದ ಆರ್ಥಿಕ ವಿಷಯಗಳು ಬಂದಾಗಲೆಲ್ಲ ಅದಕ್ಕೆ ಹಿಡಿತವಿರುವುದಿಲ್ಲ. ಇದಕ್ಕೆ ಅಪವಾದವೆಂದರೆ ಕೇರಳದ ಮಸೀದಿಗಳು ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳು ಮತ್ತು ಆಧುನಿಕ ಮದರಸಗಳು. ಅಲ್ಲಿ ಇಂತಹ ಸಂಸ್ಥೆಗಳು ಮಸೀದಿಯ ಅವಿಭಾಜ್ಯ ಅಂಗಗಳಾಗಿಬಿಟ್ಟಿವೆ.

ಕೆಲವು ದರ್ಗಾಗಳು ಕೂಡ ಇದಕ್ಕೆ ಅಪವಾದ ಎಂಬಂತೆ ಇವೆ. ಮುಂಬೈನ ಹಾಜಿ ಅಲಿ ದರ್ಗಾ ಅಧೀನದಲ್ಲಿ ಶಾಲಾ, ಕಾಲೇಜುಗಳು ಇವೆ.ಕಲಬುರ್ಗಿಯ ಬಂದೇ ನವಾಜ್ ದರ್ಗಾವು ವಿಶ್ವವಿದ್ಯಾಲಯವನ್ನು ಸ್ಥಾಪಿಸಿದೆ. ಉಳ್ಳಾಲದ ಸೈಯದ್ ಮದನಿ ದರ್ಗಾವು ಆಸ್ಪತ್ರೆ, ಕಾಲೇಜುಗಳನ್ನು ನಡೆಸುತ್ತಿದೆ. ದರ್ಗಾಗಳು ರಾಜಕೀಯದ ಕೇಂದ್ರಗಳಾಗಿದ್ದ ಇತಿಹಾಸ ಕೂಡ ಇದೆ. 1857ರ ಸಂದರ್ಭದಲ್ಲಿ ಮೂವತ್ತಕ್ಕೂ ಹೆಚ್ಚು ಉಲೇಮಾಗಳು ಬ್ರಿಟಿಷ್ ವಸಾಹತುಶಾಹಿವಿರೋಧಿಸಲು ಫತ್ವಾ ಜಾರಿ ಮಾಡಿದ್ದನ್ನು ಇಲ್ಲಿ ನೆನಪಿಸಬೇಕು. ಬಹಳಷ್ಟು ರೈತ ಹೋರಾಟದ ಸಂದರ್ಭದಲ್ಲಿ (1921ರ ಅವಧ್ ರೈತ ಹೋರಾಟ, 1920ರ ಮಾಪಿಳ್ಳ ರೈತರ ದಂಗೆ) ಮಸೀದಿಗಳು ಹೋರಾಟಗಾರರಿಗೆ ಎಲ್ಲಾ ನಿಟ್ಟಿನ ಸಹಾಯ ಮಾಡಿದ ಉದಾಹರಣೆಗಳು ಇವೆ.

ರಾಷ್ಟ್ರೀಯ ಹೋರಾಟದ ಸಂದರ್ಭದಲ್ಲಿ ಮಸೀದಿಯು ರಾಜಕೀಯ ಚಟುವಟಿಕೆಯ ಕೇಂದ್ರವಾಯಿತು. ಬಹಳಷ್ಟು ರಾಷ್ಟ್ರೀಯ ನಾಯಕರು ಮಸೀದಿಗೆ ಭೇಟಿ ಕೊಟ್ಟು ರಾಷ್ಟ್ರೀಯ ಹೋರಾಟಕ್ಕೆ ಕರೆ ಕೊಟ್ಟದ್ದು ಇದೆ. ದೆಹಲಿಯ ಜುಮಾ ಮಸೀದಿ ಹಾಗೂ ಫತೇಪುರ್ ಮಸೀದಿಗಳಲ್ಲಿ ಮಹಾತ್ಮ ಗಾಂಧಿ ಮತ್ತು ಸ್ವಾಮಿ ಶ್ರದ್ಧಾನಂದ ಮಾಡಿದ ಭಾಷಣ ಒಂದು ಇತಿಹಾಸ. ಮೌಲಾನ ಅಬುಲ್ ಕಲಾಂ ಆಜಾದ್‍ರವರು ದೇಶ ವಿಭಜನೆಯ ಸಂದರ್ಭದಲ್ಲಿ ಮಾಡಿದ ‘ಬಯಾನ್’ ಅಥವಾ ಭಾಷಣ ಅತೀ ಮುಖ್ಯ. ಭಾರತದ ವಿಭಜನೆಯನ್ನು ವಿರೋಧಿಸುತ್ತಲೇ ಅವರು ರಾಷ್ಟ್ರದ ಬೆಳವಣಿಗೆಯಲ್ಲಿ ಮತ್ತು ಅಭಿವೃದ್ಧಿಯಲ್ಲಿ ಮುಸ್ಲಿಮರು ಪಾತ್ರಧಾರಿಗಳಾಗಬೇಕು, ಅದಕ್ಕಾಗಿ ತಮ್ಮ ಮಾತೃಭೂಮಿಯಾದ ಭಾರತದಲ್ಲಿಯೇ ಉಳಿಯಬೇಕು ಮತ್ತು ಪಾಕಿಸ್ತಾನಕ್ಕೆ ವಲಸೆ ಹೋಗಬಾರದು ಎಂದು ವಾದಿಸಿದರು. ‘ದೇಶ ಬಿಟ್ಟು ಹೋದವರನ್ನು ಮಸೀದಿ, ದರ್ಗಾ, ಮಿನಾರಗಳು ಕ್ಷಮಿಸಲಾರವು’ ಎಂಬುದು ಅವರ ಬಹಳ ಪ್ರಸಿದ್ಧವಾದ ಮಾತು. ಈ ‘ಬಯಾನ್’ ಇಂದಿಗೂ ಪ್ರಸ್ತುತ.

ಹಾಗಾಗಿಯೇ ಮಸೀದಿಯನ್ನು ಎರಡು ರೀತಿಯಲ್ಲಿ ನೋಡುವುದಕ್ಕೆ ಸಾಧ್ಯವಾಗುತ್ತದೆ. ಬಹಳ ಪ್ರಗತಿಪರವಾಗಿ ಕೆಲಸ ಮಾಡಿದ ಇತಿಹಾಸ ಮಸೀದಿಗಳಿಗೆ ಇದ್ದರೂ ಮತ್ತೊಂದೆಡೆ, ಆಧುನಿಕತೆಯನ್ನು ಗಟ್ಟಿಗೊಳಿಸುವ, ಪ್ರಗತಿಪರತೆಯನ್ನು ಪ್ರತಿಪಾದಿಸುವ ಕೇಂದ್ರಗಳಾಗಿ ಇವು ಬೆಳೆಯಲೇ ಇಲ್ಲ. ಚರ್ಚ್‌ಗಳ ರೀತಿಯಲ್ಲಿ ಆಧುನಿಕತೆಗೆ ತೆರೆದುಕೊಳ್ಳಲು ಮಸೀದಿಗಳಿಗೆ ಸಾಧ್ಯವಾಗಲೇ ಇಲ್ಲ. ಚರ್ಚ್‌ಗಳ ಜತೆಜತೆಗೇ ಶಾಲೆಗಳು, ಶಿಕ್ಷಣ ಸಂಸ್ಥೆಗಳು ಬಂದವು. ಅವುಗಳು ಆಧುನಿಕತೆಯ ಸಂಕೇತಗಳಾದವು.

1990ರ ದಶಕದ ನಂತರ ಬಂದ ಕಥನಗಳನ್ನು ಎರಡು ರೀತಿಯಾಗಿ ನೋಡಬಹುದು. ಮೊದಲನೆಯ ಕಥನ ಹೀಗಿದೆ: ಮಸೀದಿ– ಮದರಸಗಳೆಂದರೆ ಕೋಮುವಾದ, ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ಕೇಂದ್ರಗಳು. ಜನರ ಮನಸ್ಸಿನಲ್ಲಿ ಆಕ್ರಮಣಶೀಲತೆ ಬಿತ್ತುವ, ಜಿಹಾದಿಗಳನ್ನು ಸೃಷ್ಟಿಸುವ ಕಾರ್ಖಾನೆಗಳು. ಅಲ್ಪಸಂಖ್ಯಾತರನ್ನು ಬಹುಸಂಖ್ಯಾತರಾಗಿಸುವ, ಆಧುನಿಕತೆ ನಿರಾಕರಿಸುವ, ಕ್ಷುಲ್ಲಕ ಕಾರಣಗಳಿಗೂ ಪ್ರತಿಭಟನೆ ನಡೆಸುವ, ಸಂಪ್ರದಾಯದ ಸುತ್ತಲೇ ಗಿರಕಿ ಹೊಡೆಯುವ ವ್ಯವಸ್ಥೆ. ಮಸೀದಿ ಅಥವಾ ಸಮುದಾಯ ತರಲು ಬಯಸುವ ಯಾವುದೇ ಬದಲಾವಣೆಯನ್ನು ಈ ಚೌಕಟ್ಟಿನಲ್ಲಿಯೇ ವಿಶ್ಲೇಷಿಸಲಾಗುತ್ತದೆ. ಆಧುನಿಕ ತಂತ್ರಜ್ಞಾನ ಅಳವಡಿಸಲು ಮುಂದಾ ಗುವುದು ಇರಲಿ, ತ್ರಿವಳಿ ತಲಾಖ್‌ನ ಪರ ಅಥವಾ ವಿರೋಧದ ಚರ್ಚೆ ಇರಲಿ ವಿಶ್ಲೇಷಣೆಗಳು ಈ ಚೌಕಟ್ಟು ಮೀರುವುದಿಲ್ಲ.

ಈ ಕಥನಗಳ ಹಿಂದಿರುವ ರಾಜಕಾರಣವು ಅರ್ಥ ಮತ್ತು ಉದ್ದೇಶಗಳನ್ನು ಹುಡುಕುವ ಉಸಾಬರಿಗೆ ಹೋಗುವುದಿಲ್ಲ. ಹಾಗಾಗಿಯೇ ಸಮುದಾಯ, ವ್ಯಕ್ತಿಗಳು ಮತ್ತು ಮಸೀದಿಗಳನ್ನು ಈ ಪಡಿಯಚ್ಚಿನಲ್ಲಿ ಸೀಮಿತಗೊಳಿಸುತ್ತಾ ಹೋಗುತ್ತದೆ. ಹಾಗಾಗಿಯೇ, ಮಸೀದಿ ಬಗ್ಗೆಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು ಪೂರ್ವಗ್ರಹಗಳನ್ನು ಇನ್ನಷ್ಟು ಗಟ್ಟಿಗೊಳಿಸಬಹುದು ಎಂಬ ಹೆದರಿಕೆಯೇ ಮುಸ್ಲಿಮರಲ್ಲಿ ಸೃಷ್ಟಿಯಾಗಿರುವ ತಲ್ಲಣಕ್ಕೆ ಕಾರಣ.

ಇದಕ್ಕೆ ಇನ್ನಷ್ಟು ಪುಷ್ಟಿ ಕೊಡುವಂತೆ ಎರಡನೇ ಕಥನವಿದೆ. ಇದನ್ನು ತಣ್ಣನೆಯ ತಲ್ಲಣಗಳ ಕಥನ ಎನ್ನಬಹುದು. ಧಾರ್ಮಿಕ ಆಚರಣೆಯ ಹಕ್ಕು ಕಳೆದುಕೊಳ್ಳುವ, ಮಸೀದಿ ನಿರ್ಮಿಸಲು ಸಾಧ್ಯವೇ ಇಲ್ಲದ ಸ್ಥಿತಿ ನಿರ್ಮಾಣವಾಗುವ, ಸಮುದಾಯವು ಮತ್ತೆ ಮತ್ತೆ ಕೇರೀಕರಣಗೊಳ್ಳುವ (ಘೆಟ್ಟೊ), ಕೋಮು ಸಂಘರ್ಷದ ಆತಂಕ ಮತ್ತು ಅಸ್ಮಿತೆಯನ್ನು ಕಳೆದುಕೊಳ್ಳುವ ತಲ್ಲಣಗಳೇ ಈ ಎರಡನೇ ಕಥನ. ಈ ಕಥನದಲ್ಲಿ ಮಸೀದಿಯು ಅಲೌಕಿಕತೆಯ ಕೇಂದ್ರವಾಗುವುದಿಲ್ಲ, ಬದಲಿಗೆ ಅದು ಬದುಕಿನ ಅವಿಭಾಜ್ಯ ಅಂಗವಾಗುತ್ತದೆ ಮತ್ತು ಅಸ್ಮಿತೆಯ ಸಂಕೇತವಾಗುತ್ತದೆ. ಮಸೀದಿಗೆ ಇರಲೇಬೇಕಾದ ಸ್ಥಳ ಮತ್ತು ಚೌಕಟ್ಟಿನ ನಿರಾಕರಣವಾದ ಇಲ್ಲಿ ಗೌಣವಾಗುತ್ತದೆ.

ಸುಪ್ರೀಂ ಕೋರ್ಟ್‌ನ ತೀರ್ಪು ಇವೆರಡೂ ಕಥನಗಳನ್ನು ಗಟ್ಟಿಗೊಳಿಸಿದೆ. ದೇಶದಲ್ಲಿರುವ ಮೂರು ಲಕ್ಷಕ್ಕೂ ಹೆಚ್ಚು ಮಸೀದಿಗಳು ತಮ್ಮ ಪ್ರದೇಶಗಳಲ್ಲಿ ಒಂದೊಂದು ಶಾಲೆ, ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸುತ್ತಿದ್ದರೆ, ಆಧುನಿಕತೆಯೊಂದಿಗೆ ಅನುಸಂಧಾನ ಮಾಡುತ್ತಿದ್ದರೆ ಈಗಿನ ತಲ್ಲಣಗಳ ತೀವ್ರತೆ ಕಡಿಮೆಯಾಗುತ್ತಿತ್ತು. ದುರಂತವೆಂದರೆ ಈ ಎರಡು ಕಥನಗಳಲ್ಲಿ, ಸುಪ್ರೀಂ ಕೋರ್ಟ್‌ನ ತೀರ್ಪಿನಲ್ಲಿ ಸೋತು ಹೋದ ಭಾರತವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT