ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶ್ಲೇಷಣೆ | ಸೌರಶಕ್ತಿ: ಮಾಲಿನ್ಯದ ಕಣಜವಾದೀತು!

ಬೀಳುತ್ತಿದೆ ಸೌರ ಫಲಕಗಳ ಕಸದ ರಾಶಿ, ನಿರ್ವಹಣೆಗಿಲ್ಲ ವೈಜ್ಞಾನಿಕ ಕ್ರಮ
Published 4 ಜೂನ್ 2024, 0:25 IST
Last Updated 4 ಜೂನ್ 2024, 0:25 IST
ಅಕ್ಷರ ಗಾತ್ರ

ಇನ್ನು ಕೆಲವೇ ವರ್ಷಗಳು. ಚಂದ್ರಯಾನ ಮಾಡಲು ರಾಕೆಟ್ ಹಾರಿಸಲೇಬೇಕೆಂದಿಲ್ಲ. ಮೆಟ್ಟಿಲು ಹತ್ತಿಕೊಂಡೇ ಹೋಗಿಬಿಡಬಹುದು! ಹೇಗೆ ಅಂತೀರಾ? ವಿದ್ಯುತ್ ಉತ್ಪಾದನೆಗಾಗಿ ಈಗಾಗಲೇ ನಾವು ಬಳಸಿ ಬಿಸಾಡಿರುವ ಸೌರ ಫಲಕಗಳನ್ನು ಒಂದರ ಮೇಲೊಂದು ಮೆಟ್ಟಿಲಿನಂತೆ ಜೋಡಿಸಿಟ್ಟು, ಹತ್ತಿಕೊಂಡು ಹೋದರೆ ಸೀದಾ ಚಂದ್ರನ ನೆಲದ ಮೇಲೆ ಕಾಲಿಡಬಹುದು! ಅಂದರೆ, ಸೋಲಾರ್ ವಿದ್ಯುತ್‌ಗಾಗಿ ನಾವೆಲ್ಲ ಬಳಸುತ್ತಿರುವ ಮತ್ತು ಮುಂದಕ್ಕೂ ಬಳಸುವ ಸೌರ ಫಲಕಗಳ ಕಸದ ದೊಡ್ಡ ರಾಶಿ ಬೀಳಲಿದೆ. ಇ–ತ್ಯಾಜ್ಯ ಎನಿಸಿರುವ, ಬಳಸಿ ಬಿಸಾಡಿದ ಸೌರ ಫಲಕಗಳ ಸಂಖ್ಯೆ ದಿನೇ ದಿನೇ ಲಕ್ಷಗಳಲ್ಲಿ ಏರುತ್ತಿದೆ. ಅದರ ಪುನರ್ಬಳಕೆ ಮತ್ತು ವೈಜ್ಞಾನಿಕ ನಿರ್ವಹಣೆಗೆ ನಮ್ಮಲ್ಲಿ ಯಾವುದೇ ಸಮರ್ಪಕವಾದ ಯೋಜನೆ ಇಲ್ಲದಿರುವುದು ದೊಡ್ಡ ಸಮಸ್ಯೆಯಾಗಿದೆ.

ಕಲ್ಲಿದ್ದಲು ಉರಿಸುವ ಉಷ್ಣ ಸ್ಥಾವರಗಳಿಂದ ಮಾಲಿನ್ಯ ಹೆಚ್ಚು. ಜಲವಿದ್ಯುತ್ ಯೋಜನೆಗಳಿಂದ ಸಿಗುವ ಶಕ್ತಿಯು ಅವಶ್ಯಕತೆಯ ಕಾಲು ಭಾಗವನ್ನೂ ಪೂರೈಸುವುದಿಲ್ಲ. ಪವನ ಮತ್ತು ಅಣುವಿದ್ಯುತ್ ಯಾವುದಕ್ಕೂ ಸಾಲುವುದಿಲ್ಲ ಎಂಬ ಸಂಕ್ರಮಣ ಸ್ಥಿತಿ ಇರುವುದರಿಂದ, ಸುಸ್ಥಿರ ಅಭಿವೃದ್ಧಿ ಹಾಗೂ ವಾಯುಗುಣ ನಿಯಂತ್ರಣಕ್ಕಾಗಿ ಸೌರ ವಿದ್ಯುತ್ ಯೋಜನೆಗಳ ಕಡೆ ಮುಖ ಮಾಡಲೇಬೇಕಾದ ಅನಿವಾರ್ಯ ಎದುರಾಗಿದೆ. ಜಾಗತಿಕ ತಾಪಮಾನ ನಿಯಂತ್ರಣಕ್ಕೆ ಸೌರಶಕ್ತಿ ಯೋಜನೆಗಳೇ ಪರಿಹಾರವೆಂಬ ಮಾತು ಎಲ್ಲೆಡೆ ಇದೆ. 2070ರ ವೇಳೆಗೆ ಶೂನ್ಯ ಇಂಗಾಲದ ಉತ್ಸರ್ಜನೆ ಸಾಧಿಸುತ್ತೇವೆ ಎಂದು ನಿರ್ಧರಿಸಿರುವ ನಾವು, ಸೌರ ವಿದ್ಯುತ್‌ನ ಮೇಲೆ ಹೆಚ್ಚು ಅವಲಂಬಿತರಾಗಿದ್ದೇವೆ. ಮುಂದಿನ ವರ್ಷದ ಕೊನೆಯ ವೇಳೆಗೆ ಬರೋಬ್ಬರಿ 100 ಗಿಗಾವಾಟ್‌ನಷ್ಟು ಶಕ್ತಿಯನ್ನು ಸೂರ್ಯನಿಂದ ಪಡೆಯಲು ಯೋಜನೆ ರೂಪಿಸಿ ಈಗಾಗಲೇ ಅರ್ಧ ದಾರಿ ಕ್ರಮಿಸಿದ್ದೇವೆ.

ಆದರೆ ಸೂರ್ಯನಿಂದ ಶಕ್ತಿ ಉತ್ಪಾದಿಸುವಾಗ ಹುಟ್ಟುವ ಸೌರ ಫಲಕಗಳ ತ್ಯಾಜ್ಯದ ವಿಲೇವಾರಿ,
ನಿರ್ವಹಣೆ ಮತ್ತು ಪುನರ್ಬಳಕೆಯ ವಿಚಾರಗಳೇ ಬೃಹತ್ ಸಮಸ್ಯೆಗಳಾಗಿ ಎದುರಿಗೆ ನಿಂತಿವೆ. ಅವಧಿ ಮುಗಿದ ನಂತರ ಎಲೆಕ್ಟ್ರಾನಿಕ್ ಕಸವಾಗಿ ಬದಲಾಗುವ ಸೌರ ಫಲಕಗಳ ಕಸದ ಶೇಕಡ 80ರಷ್ಟು ಭೂಭರ್ತಿ ತಾಣ ಸೇರುತ್ತಿದೆ. ಅದರಲ್ಲಿರುವ ಗಾಜು, ಸಿಲಿಕಾನ್, ಕ್ಯಾಡ್ಮಿಯಂ, ಸೀಸ, ಪಾದರಸ, ನಿಕ್ಕಲ್, ಅಲ್ಯೂಮಿನಿಯಂನ ಭಾಗಗಳು ಮಣ್ಣು, ಗಾಳಿ, ನೀರು, ಅಂತರ್ಜಲವನ್ನು ಮಾಲಿನ್ಯ ಗೊಳಿಸುತ್ತಿವೆ. 2022ರ ಎಲೆಕ್ಟ್ರಾನಿಕ್ಸ್ ವೇಸ್ಟ್ ಮ್ಯಾನೇಜ್‌ಮೆಂಟ್ ನಿಯಮಗಳ ಪ್ರಕಾರ, ಸೌರ ಫಲಕಗಳ ಕಸವನ್ನು ಎಲ್ಲೆಂದರಲ್ಲಿ ಬಿಸಾಡುವುದು ಅಪರಾಧ ಎನಿಸುತ್ತದೆ. ನಮ್ಮಲ್ಲಿ ಈಗಾಗಲೇ ಸೌರಫಲಕ ತ್ಯಾಜ್ಯ ಅಪಾರ ಪ್ರಮಾಣದಲ್ಲಿ ಉತ್ಪತ್ತಿಯಾಗಿದ್ದು, ಇನ್ನು ಆರು ವರ್ಷಗಳಲ್ಲಿ ಅದು ಹಲವು ಪಟ್ಟು ಹೆಚ್ಚಲಿದೆ.

ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯು ಒಟ್ಟು 106 ಬಗೆಯ ಎಲೆಕ್ಟ್ರಾನಿಕ್ ವಸ್ತುಗಳನ್ನು ಇ- ತ್ಯಾಜ್ಯ ಎಂದು ಗುರುತಿಸಿದ್ದು, ಅದರಲ್ಲಿ ಕಂಪ್ಯೂಟರ್, ಲ್ಯಾಪ್‌ಟಾಪ್‌, ಮೊಬೈಲ್ ಫೋನ್, ಟಿ.ವಿ., ರೆಫ್ರಿಜಿರೇಟರ್‌ ಮತ್ತು ಹವಾನಿಯಂತ್ರಕಗಳ ಜೊತೆಗೆ ಸೌರ ಫಲಕಗಳನ್ನೂ ಸೇರಿಸಿದೆ. 2022ರಲ್ಲಿ ಇ- ತ್ಯಾಜ್ಯ ನಿರ್ವಹಣೆ ನಿಯಮಗಳಿಗೆ ತಿದ್ದುಪಡಿ ಮಾಡಿದ ಪರಿಸರ, ಅರಣ್ಯ ಮತ್ತು ವಾಯುಗುಣ ಬದಲಾವಣೆ ಸಚಿವಾಲಯವು ಸೌರ ವಿದ್ಯುತ್ ಸಂಗ್ರಹ ಕೋಶಗಳು ಮತ್ತು ಫಲಕಗಳನ್ನು ತ್ಯಾಜ್ಯದ ಪಟ್ಟಿಗೆ ಸೇರಿಸಿ, ಇವುಗಳ ಬಳಕೆಯ ಅವಧಿ ಮುಗಿದ ನಂತರ ಹುಟ್ಟುವ ಕಸದ ನಿರ್ವಹಣೆಯನ್ನು ಉತ್ಪಾದಿಸಿದ ಕಂಪನಿಗಳೇ ಮಾಡಬೇಕು ಎಂದು ತಾಕೀತು ಮಾಡಿದೆ. 

ಸೌರ ವಿದ್ಯುತ್ ಉತ್ಪಾದನೆ ವಿಧಾನವು ಅತ್ಯಂತ ಪರಿಸರಸ್ನೇಹಿ ಎಂದುಕೊಂಡಿದ್ದ ನಮಗೆಲ್ಲಾ ಅದು ಉತ್ಪಾದಿಸುತ್ತಿರುವ ಕಸವನ್ನು ಕಂಡ ನಂತರ ಮೊದಲಿದ್ದ ಅಭಿಪ್ರಾಯ ಬದಲಾಗುತ್ತಿದೆ. ಸೌರ ವಿದ್ಯುತ್ ಉತ್ಪಾದನಾ ಕ್ರಮಗಳಲ್ಲಿ ಇಂಗಾಲದ ಹೆಜ್ಜೆ ಗುರುತು ಮತ್ತು ಉತ್ಸರ್ಜನೆ ಕಡಿಮೆ ಎಂಬುದೇನೋ ನಿಜ. ಆದರೆ ಬಳಸಿದ ಸೌರ ವಿದ್ಯುತ್ ಕೋಶಗಳ ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡದಿದ್ದರೆ ಉತ್ಪಾದನೆಯ ವಿಷಯದಲ್ಲಿ ಗಳಿಸಿದ ಪಾರಿಸರಿಕ ಅನುಕೂಲಗಳೆಲ್ಲ ಮಂಗಮಾಯವಾಗುತ್ತವೆ.

ಹಿಂದಿನ ದಶಕದಲ್ಲಿ ದೇಶದ ಸೌರ ವಿದ್ಯುತ್ ಉತ್ಪಾದನೆಯ ಪ್ರಮಾಣ ಗಣನೀಯವಾಗಿ ಹೆಚ್ಚಿದೆ. 2014ರಲ್ಲಿ 2.63 ಗಿಗಾವಾಟ್‌ನಷ್ಟಿದ್ದ ಸ್ಥಾಪಿತ ಸಾಮರ್ಥ್ಯವು 2023ರ ವೇಳೆಗೆ 73.32 ಗಿಗಾವಾಟ್‌ಗೆ ಹೆಚ್ಚಿದೆ. ಇನ್ನು ಆರು ವರ್ಷಗಳಲ್ಲಿ ಅದನ್ನು 292 ಗಿಗಾವಾಟ್‌ಗೆ ತಲುಪಿಸುವ ಗುರಿ ಇಟ್ಟುಕೊಂಡಿರುವ ನಾವು, ಈ ಶತಮಾನದ ಮಧ್ಯಭಾಗದ ವೇಳೆಗೆ 1,700 ಗಿಗಾವಾಟ್‌ಗೆ ತಲುಪಿಸುವ ಅಭಿಲಾಷೆ ಇಟ್ಟುಕೊಂಡಿದ್ದೇವೆ. ಯೋಜಿಸಿದಂತೆ ನಡೆದರೆ 2070ಕ್ಕೆ ಸೂರ್ಯ ಮೂಲದಿಂದ 5,600 ಗಿಗಾವಾಟ್‌ ಶಕ್ತಿ ಉತ್ಪಾದನೆ ನಮಗೆ ಸಾಧ್ಯವಾಗಲಿದೆ. ಇದಕ್ಕಾಗಿ ನಾವು ಪಾವಗಡದಲ್ಲಿ ಇರುವ ಸೋಲಾರ್ ಪಾರ್ಕ್‌ನ ಮಾದರಿಯ 39 ಹೊಸ ಸೌರ ವಿದ್ಯುತ್ ಉತ್ಪಾದನಾ ಘಟಕಗಳನ್ನು ಸ್ಥಾಪಿಸಬೇಕಾಗುತ್ತದೆ. ಜೊತೆಗೆ ದೇಶದ ಒಂದು ಕೋಟಿ ಮನೆಗಳ ತಾರಸಿಗಳ ಮೇಲೆ ಸೌರ ಫಲಕಗಳನ್ನು ಅಳವಡಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಒಂದು ಮೆ.ವಾ. ಸೋಲಾರ್ ಶಕ್ತಿ ಉತ್ಪಾದನೆಗೆ ಬೇಕಾದ ಸೋಲಾರ್ ಫಲಕಗಳನ್ನು ಜೋಡಿಸಲು ಕನಿಷ್ಠ 5ರಿಂದ 10 ಎಕರೆ ಜಾಗ ಬೇಕಾಗುತ್ತದೆ. ಸಾವಿರಗಟ್ಟಲೆ ಗಿಗಾವಾಟ್ ಉತ್ಪಾದಿಸಲು ಲಕ್ಷಾಂತರ ಎಕರೆ ಜಾಗ ಬೇಕು.

ಸೌರ ಫಲಕಗಳ ಸರಾಸರಿ ಆಯುಷ್ಯ 20ರಿಂದ 30 ವರ್ಷ ಮಾತ್ರ. ಹದಿನೈದು ವರ್ಷಗಳ ಹಿಂದೆ ಅಳವಡಿಸ ಲಾಗಿದ್ದ ನೆಲಮಟ್ಟದ ಸೌರ ಫಲಕಗಳ ಜೀವಿತಾವಧಿ ಇಷ್ಟರಲ್ಲೇ ಮುಗಿಯುತ್ತಿದೆ. ಇವುಗಳನ್ನು ಪುನರ್ಬಳಕೆ ಮಾಡಲು ಅಥವಾ ಇವುಗಳ ಕಸವನ್ನು ರೀಸೈಕಲ್ ಮಾಡಲು ಯಾವುದೇ ಸಮರ್ಥ ವ್ಯವಸ್ಥೆ ನಮ್ಮಲ್ಲಿ ಇಲ್ಲ ಎಂಬುದು ತಜ್ಞರ ಮಾತು. ಅಂಕಿ ಅಂಶಗಳ ಪ್ರಕಾರ, ಸದ್ಯಕ್ಕೆ ಸೌರಫಲಕಗಳಿಂದ ಶೇ 3ರಷ್ಟು ಇ– ತ್ಯಾಜ್ಯ ಹೊಮ್ಮುತ್ತಿದೆ. ಬೃಹತ್ ಸೌರ ಪಾರ್ಕುಗಳ ಸ್ಥಾಪನೆಯಿಂದ ಸಾಂಸ್ಕೃತಿಕ, ಸಾಮಾಜಿಕ ಮತ್ತು ಜೀವವೈವಿಧ್ಯಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳೂ ಎದುರಾಗಿವೆ. ರಾಜಸ್ಥಾನದ ಭದ್ಲಾದಲ್ಲಿ ರೈತರು ತಾವು ತಮ್ಮ ಪವಿತ್ರ ‘ಒರಾನ್’ ಜಮೀನು ಕಳೆದು ಕೊಂಡಿದ್ದೇವೆ ಮತ್ತು ಕುರಿ ಮೇಯಿಸಲು ಜಾಗಗಳೇ ಇಲ್ಲ ಎಂದು ದೂರುತ್ತಾರೆ. ಫಲಕಗಳ ಕ್ಷಮತೆ ಹೆಚ್ಚಿಸುವ ಸಲುವಾಗಿ ಅದರ ಮೇಲಿನ ದೂಳನ್ನು ತೆಗೆಯಲು ನೀರಿನಿಂದ ತೊಳೆಯಬೇಕಾಗುತ್ತದೆ. ಬೇಕಾದ ನೀರಿಗೆ ಸುತ್ತಲಿನ ನೀರಿನ ಮೂಲಗಳನ್ನೇ ಅವಲಂಬಿಸಬೇಕು. ಅದರಿಂದಾಗಿ ಕೃಷಿಗೆ ಸಿಗುತ್ತಿದ್ದ ಅಷ್ಟೋ ಇಷ್ಟೋ ನೀರು ಸೋಲಾರ್ ಪಾರ್ಕಿನ ಪಾಲಾಗುತ್ತದೆ. ಎಲ್ಲೆಲ್ಲಿ ಬೃಹತ್ ಸೋಲಾರ್ ಪಾರ್ಕುಗಳು ಇವೆಯೋ ಅಲ್ಲೆಲ್ಲಾ ಈ ಸಮಸ್ಯೆ ಇದೆ. ಸುತ್ತಲಿನ ಕೃಷಿ ಕುಂಠಿತಗೊಂಡು ಆಹಾರ ಭದ್ರತೆ ಕಡಿಮೆಯಾಗುತ್ತದೆ.

ಸೌರ ಮತ್ತು ಪವನ ಶಕ್ತಿ ಉತ್ಪಾದನೆಗೆ ಪ್ರಶಸ್ತ ತಾಣಗಳೆನಿಸಿರುವ ಗುಜರಾತ್ ಮತ್ತು ರಾಜಸ್ಥಾನದಲ್ಲಿ ಅಳಿವಿನಂಚಿನಲ್ಲಿರುವ ಗ್ರೇಟ್ ಇಂಡಿಯನ್ ಬಸ್ಟರ್ಡ್ ಪಕ್ಷಿಯ ಸದೃಢ ಆವಾಸಗಳೂ ಇವೆ. ವಿದ್ಯುತ್ ಸಾಗಿಸಲು ಎಳೆದ ತಂತಿಗಳಿಗೆ ಸಿಲುಕಿ ಪಕ್ಷಿಗಳು ಸಾಯುತ್ತಿದ್ದುದರಿಂದ ಈ ಎರಡೂ ರಾಜ್ಯಗಳಿಗೆ ಸೇರಿದ 80 ಸಾವಿರ ಚದರ ಕಿ.ಮೀ. ವ್ಯಾಪ್ತಿಯಲ್ಲಿ ಕಂಬಗಳ ಮೇಲೆ ವಿದ್ಯುತ್ ತಂತಿ ಎಳೆಯಲು ನಿರ್ಬಂಧವಿತ್ತು. ನೆಲದಡಿಯಲ್ಲಿ ಎಳೆದರೆ ಒಳ್ಳೆಯದು ಎಂಬ ಸಲಹೆಯೂ ಇತ್ತು. ಅದು ಕಾರ್ಯರೂಪಕ್ಕೆ ಬರದಿದ್ದುದರಿಂದ ಈಗ 67 ಸಾವಿರ ಚದರ ಕಿ.ಮೀ. ಜಾಗದಲ್ಲಿ ಸೌರಶಕ್ತಿ ಚಟುವಟಿಕೆಗೆ ಮತ್ತು ತಂತಿಗಳನ್ನು ಕಂಬಗಳ ಮೂಲಕ ಎಳೆಯಲು ಅನುಮತಿ ನೀಡಲಾಗಿದೆ. ಇದರಿಂದಾಗಿ, ಇರುವ ಕೆಲವೇ ಕೆಲವು ಪಕ್ಷಿಗಳಿಗೂ ಅಪಾಯ ಎದುರಾಗಿದೆ.

ಹಿಂದೆ ಕೈಗೊಂಡ ಬೃಹತ್ ಯೋಜನೆಗಳಲ್ಲಾದ ಅಪಸವ್ಯಗಳು ಪುನರಾವರ್ತನೆ ಆಗಕೂಡದು. ಸೌರ ಪಾರ್ಕ್‌ಗಳನ್ನು ಸರ್ಕಾರ ಮತ್ತು ಖಾಸಗಿ ಕಂಪನಿಗಳೇ ಸ್ಥಾಪಿಸಬೇಕೆಂದಿಲ್ಲ. ಕೃಷಿ ಮತ್ತು ಸೌರ ವಿದ್ಯುತ್ ಉತ್ಪಾದನೆಯನ್ನು ಸರಿಸಮವಾಗಿ ಪರಿಗಣಿಸುವ ‘ಅಗ್ರಿ ವೋಲ್ಟಾಯಿಕ್ಸ್’ ಎಂಬ ಸುಸ್ಥಿರ ಅಭಿವೃದ್ಧಿ ಮಾದರಿ  ನಮ್ಮದಾಗಬೇಕು. ಜಾನುವಾರುಗಳನ್ನು ಮೇಯಿಸುವ ಜಾಗ ಮತ್ತು ಕೃಷಿಯ ತಾಣಗಳನ್ನು ರೈತರಿಗೆ ಉಳಿಸಿಕೊಡಬೇಕಾದ ಎಲ್ಲ ತುರ್ತು ಈಗ ಇದೆ.

ಸ್ಥಳೀಯ ಪಂಚಾಯಿತಿ ಮತ್ತು ಸಮುದಾಯಗಳಿಗೆ ಅವಕಾಶ ನೀಡಿ, ಕೌಶಲ ಕಲಿಸಿ ಉತ್ಪಾದನೆಯ ಜವಾಬ್ದಾರಿ ವಹಿಸಿದರೆ ಸ್ಥಳೀಯ ಆರ್ಥಿಕತೆ ವೃದ್ಧಿಯಾಗುತ್ತದೆ ಮತ್ತು ಜೀವವೈವಿಧ್ಯಕ್ಕೂ ಸಂರಕ್ಷಣೆ ದೊರಕುತ್ತದೆ. ಉತ್ಪಾದನಾ ಘಟಕದ ಬಳಿಯೇ ರೀಸೈಕ್ಲಿಂಗ್ ಘಟಕವಿದ್ದರೆ ಮಾಲಿನ್ಯ, ಅನಗತ್ಯ ಸಾಗಣೆ ವೆಚ್ಚಕ್ಕೆ ಕಡಿವಾಣ ಬೀಳುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT