ಏಕರೂಪ ನಾಗರಿಕ ಸಂಹಿತೆ (ಯೂನಿಫಾರ್ಮ್ ಸಿವಿಲ್ ಕೋಡ್– ಯುಸಿಸಿ) ಕುರಿತು ಪರ, ವಿರೋಧದ ಚರ್ಚೆಗಳು ಇತ್ತೀಚೆಗೆ ದೇಶದಾದ್ಯಂತ ನಡೆಯುತ್ತಿವೆ. ಆದರೆ, ಭಾರತದಂತಹ ಬಹುಧರ್ಮೀಯ, ಬಹುಸಂಸ್ಕೃತಿಯ ರಾಷ್ಟ್ರದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ರೂಪಿಸುವಾಗ ಏಳುವ ಅನೇಕ ತೊಡಕುಗಳು ಹಾಗೂ ಸವಾಲುಗಳನ್ನು ಕುರಿತು ಹೆಚ್ಚಿನ ರೀತಿಯಲ್ಲಿ ಚರ್ಚೆಯಾಗುತ್ತಿಲ್ಲ ಎಂದು ತೋರುತ್ತದೆ.

ಏಕರೂಪ ನಾಗರಿಕ ಸಂಹಿತೆಯನ್ನು ರೂಪಿಸುವ ವಿಷಯವು ಸಂವಿಧಾನ ಸಭೆಯಲ್ಲಿ ಚರ್ಚೆಗೆ ಬಂದಾಗ, ಆ ವಿಧಿಯನ್ನು ಹಿಂದೂಗಳು ಹಾಗೂ ಮುಸ್ಲಿಮರು ಒಟ್ಟಿಗೇ ವಿರೋಧಿಸಿದ್ದರು. ಅವರ ನಿಲುವು ‘ಧಾರ್ಮಿಕ ವಿಷಯಗಳಲ್ಲಿ ಸರ್ಕಾರದ ಹಸ್ತಕ್ಷೇಪ ಇರಬಾರದು’ ಎಂಬುದಾಗಿತ್ತು. ಆದರೆ, ಕೆ.ಎಂ.ಮುನ್ಶಿ, ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್, ಡಾ. ಬಿ.ಆರ್.ಅಂಬೇಡ್ಕರ್ ಅಂತಹವರ ಆಗ್ರಹದಿಂದ ಸಂವಿಧಾನದ 44ನೆಯ ವಿಧಿ ಅಂಗೀಕಾರಗೊಂಡರೂ ಅದು ‘ಮಾರ್ಗಸೂಚಿ ತತ್ವಗಳು’ (ಡೈರೆಕ್ಟಿವ್ ಪ್ರಿನ್ಸಿಪಲ್ಸ್) ಭಾಗದಲ್ಲಿ ಸೇರಿತು. ‘ಮಾರ್ಗಸೂಚಿ ತತ್ವ’ಗಳನ್ನು ಜಾರಿಗೆ ತರದಿರುವುದು ಅಸಾಂವಿಧಾನಿಕ ಎಂದು ನ್ಯಾಯಾಲಯಗಳ ಮೆಟ್ಟಿಲೇರಲು ಆಗುವುದಿಲ್ಲ. ಯುಸಿಸಿ ವಿಷಯದಲ್ಲಿ ನೆಹರೂ ಅವರ ನಿಲುವು ‘ಈ ಕ್ಷೇತ್ರದಲ್ಲಿ ಸರ್ಕಾರವೇ ನೇರವಾಗಿ ಹಸ್ತಕ್ಷೇಪ ಮಾಡುವ ಬದಲು ಆಯಾ ಧರ್ಮಗಳಿಗೆ ಸೇರಿದ ಜನರಿಂದಲೇ ಸುಧಾರಣೆಗಾಗಿ ಒತ್ತಾಯ ಬಂದರೆ ಆಗ ಸರ್ಕಾರ ಅವರ ನೆರವಿಗೆ ಬರಬಹುದು’ ಎಂಬುದಾಗಿತ್ತು.

ಈಗ ಯುಸಿಸಿ ಕುರಿತ ಚರ್ಚೆಯು ಮುನ್ನೆಲೆಗೆ ಬಂದಿರುವುದರ ಮುಖ್ಯ ಕಾರಣ, ಷರಿಯತ್ ಹಾಗೂ ಬಾಲ್ಯವಿವಾಹ ತಡೆ ಕಾಯ್ದೆಯ (2006) ನಡುವೆ ಇರುವ ವೈರುಧ್ಯ. ಮುಸ್ಲಿಂ ಸಮಾಜದಲ್ಲಿ, ವಿವಾಹವಾಗುವಾಗ ವರನಿಗೆ 15 ವರ್ಷಗಳಾಗಿದ್ದರೆ ಮತ್ತು ವಧು ‘ಪ್ರೌಢಾವಸ್ಥೆ’ಯನ್ನು ತಲಪಿದ್ದರೆ ಸಾಕು (ಋತುಸ್ರಾವವು ಪ್ರಾರಂಭವಾಗಿದ್ದರೆ ಆ ಮಹಿಳೆ ‘ಪ್ರೌಢೆ’). ಆದರೆ, ಭಾರತದ ಎಲ್ಲ ಪ್ರಜೆಗಳಿಗೂ ಅನ್ವಯಿಸುವ ‘ಬಾಲ್ಯವಿವಾಹ ತಡೆ ಕಾಯ್ದೆ 2006’ರ ಪ್ರಕಾರ, ವಧು- ವರರಿಗೆ ಕ್ರಮವಾಗಿ ಕನಿಷ್ಠ 18 ಮತ್ತು 21 ವರ್ಷ ವಯಸ್ಸಾಗಿರಬೇಕು. ಹಾಗಿದ್ದರೆ, ಷರಿಯತ್ ಪ್ರಕಾರ ಮದುವೆಯಾದ ಎಲ್ಲ ವಿವಾಹಗಳೂ ‘ಬಾಲ್ಯವಿವಾಹಗಳೇ’? ‘ಹೌದು’ ಎಂದು ಮದ್ರಾಸ್ ಹೈಕೋರ್ಟ್ ‘ಅಬ್ದುಲ್ ಖಾದರ್’ ಪ್ರಕರಣದಲ್ಲಿ 2014ರಲ್ಲಿ ಮತ್ತು ಕೇರಳ ಹೈಕೋರ್ಟ್ ‘18 ವರ್ಷಗಳಾಗದ ಮುಸ್ಲಿಂ ಕನ್ಯೆ’ ಪ್ರಕರಣದಲ್ಲಿ 2022ರಲ್ಲಿ ಆದೇಶ ನೀಡಿದ್ದರೆ, ಸುಪ್ರೀಂ ಕೋರ್ಟ್ ‘ಅಲ್ಲ’ ಎಂದು ಹಾದಿಯಾ ಪ್ರಕರಣದಲ್ಲಿ 2017ರಲ್ಲಿ ತೀರ್ಪು ಕೊಟ್ಟಿದೆ.

ಷರಿಯತ್ ಮತ್ತು ಬಾಲ್ಯವಿವಾಹ ತಡೆ ಕಾಯ್ದೆಯ ನಡುವಿನ ವೈರುಧ್ಯವನ್ನು ಪರಿಹರಿಸುವುದು ಹೇಗೆ? ‘ಏಕರೂಪ ನಾಗರಿಕ ಸಂಹಿತೆಯ ಮೂಲಕ’ ಎಂದು ಮೇಲ್ನೋಟಕ್ಕೆ ಅನಿಸುತ್ತದೆ. ಆದರೆ ಈ ಸಂಹಿತೆಯನ್ನು ಜಾರಿಗೊಳಿಸಿದರೆ ಕೆಳಗಿನ ತೊಡಕುಗಳು ಎದುರಾಗುತ್ತವೆ:

1. ಬಹುಪತ್ನಿತ್ವ ಮತ್ತು ದ್ವಿಪತ್ನಿತ್ವ: ಇಸ್ಲಾಂ ಧರ್ಮಾನುಯಾಯಿಗಳಲ್ಲಿ (ಷರಿಯತ್ ಪ್ರಕಾರ) ಬಹುಪತ್ನಿತ್ವ ನ್ಯಾಯಸಮ್ಮತವಾಗಿದೆ. ಹಿಂದೂ- ಕ್ರೈಸ್ತ- ಪಾರ್ಸಿ ಧರ್ಮಾನುಯಾಯಿಗಳಲ್ಲಿ ಬಹುಪತ್ನಿತ್ವ ಇಲ್ಲ. ಬಹುಪತ್ನಿತ್ವವು ಮಹಿಳೆಯ ಶೋಷಣೆಯ ಒಂದು ಭಾಗ, ಅದನ್ನು ನಿಷೇಧಿಸಬೇಕು, ನಿಜ. ಆದರೆ ದ್ವಿಪತ್ನಿತ್ವ? ಕೆಲವು ಹಿಂದೂ ಸಮುದಾಯಗಳಲ್ಲಿ ಇರುವ ದ್ವಿಪತ್ನಿತ್ವವೂ ಅದೇ ಬಗೆಯ ಶೋಷಣೆಯಲ್ಲವೇ?

1961ರ ಜನಗಣತಿಯ ಪ್ರಕಾರ, ದ್ವಿಪತ್ನಿತ್ವವು ಹಿಂದೂಗಳಲ್ಲಿ ಶೇ 5.8ರಷ್ಟು, ಬೌದ್ಧರಲ್ಲಿ ಶೇ 7.9ರಷ್ಟು ಮತ್ತು ಬುಡಕಟ್ಟು ಜನಾಂಗಗಳಲ್ಲಿ ಶೇ 15.25ರಷ್ಟು ಪ್ರಮಾಣದಲ್ಲಿ ಇದೆ. 1974ರಲ್ಲಿ ನಡೆದ ‘ಗವರ್ನಮೆಂಟ್ ಸರ್ವೆ’ ಕೂಡಾ ಈ ಶೇಕಡಾವಾರು ಅಂಶಗಳನ್ನು ಸಮರ್ಥಿಸುತ್ತದೆ (ನೋಡಿ: ರಿತು ಮೆನನ್, ‘ಅನೀಕ್ವಲ್ ಸಿಟಿಜನ್ಸ್: ಎ ಸ್ಟಡಿ ಆಫ್ ಮುಸ್ಲಿಂ ವಿಮೆನ್ ಇನ್ ಇಂಡಿಯಾ’, 2005 ಮತ್ತು ರಾಮ್ ಪುಣಿಯಾನಿ, ‘ಕಮ್ಯುನಲ್ ಪಾಲಿಟಿಕ್ಸ್: ಫ್ಯಾಕ್ಟ್ ವರ್ಸಸ್ ಮಿಥ್ಸ್’, 2003).

‘ಹಿಂದೂ ವಿವಾಹ ಕಾಯ್ದೆ 1955’ ದ್ವಿಪತ್ನಿತ್ವವನ್ನು ನಿಷೇಧಿಸಿರುವಾಗ ಹಿಂದೂ ಸಮಾಜದಲ್ಲಿ ದ್ವಿಪತ್ನಿತ್ವ ಇರುವುದು ಹೇಗೆ? ಇದಕ್ಕೆ ಕಾರಣ, ಈ ಕಾಯ್ದೆಯ ಪ್ರಕಾರ, ದ್ವಿಪತ್ನಿತ್ವ ಅಸಂಜ್ಞೇಯ (ನಾನ್ ಕಾಗ್ನಿಜಬಲ್) ಅಪರಾಧವಾಗಿದೆ ಮತ್ತು ಅಪರಾಧಿ ಜಾಮೀನಿಗೆ ಅರ್ಹ. ಇಷ್ಟೇ ಅಲ್ಲದೆ, ಪುರುಷನೊಬ್ಬನು ಮೊದಲನೆಯ ಪತ್ನಿ ಇರುವಾಗಲೇ, ಅವಳಿಗೆ ವಿಚ್ಛೇದನ ಕೊಡದೆ ಮತ್ತೊಬ್ಬಳನ್ನು ಮದುವೆಯಾದರೆ ಆ ‘ನೊಂದ ಮಹಿಳೆ’ ಅಂದರೆ ಮೊದಲ ಪತ್ನಿ ಅಥವಾ ಅವಳ ರಕ್ತಸಂಬಂಧಿಗಳಾದ ತಂದೆ, ತಾಯಿ, ಸಹೋದರ, ಸಹೋದರಿ, ಮಗ, ಮಗಳು ಮಾತ್ರ ದೂರು ಕೊಡಬಹುದು. ಹೆಚ್ಚಿನ ಭಾರತೀಯ ಮಹಿಳೆಯರು ಅಶಿಕ್ಷಿತರಾಗಿರುವುದರಿಂದ ಅಥವಾ ಆರ್ಥಿಕವಾಗಿ ದುರ್ಬಲರಾಗಿರುವುದರಿಂದ ಅವರಿಗೆ ನ್ಯಾಯಾಲಯಗಳಲ್ಲಿ ಹೋರಾಡುವುದು ಅಸಾಧ್ಯವಾಗುತ್ತದೆ. ಅರ್ಥಾತ್, ಯುಸಿಸಿಯು ಹಿಂದೂಗಳಲ್ಲಿರುವ ದ್ವಿಪತ್ನಿತ್ವವು ಸಂಜ್ಞೇಯ ಅಪರಾಧವೆಂದು ಸೆಕ್ಷನ್ 494ಕ್ಕೆ ತಿದ್ದುಪಡಿ ಮಾಡಬೇಕಾಗುತ್ತದೆ.

2. ಆರ್ಥಿಕ ಹಕ್ಕುಗಳು: ಸದ್ಯ ಹಿಂದೂ ಮಹಿಳೆಗೆ ಪುರುಷನಿಗೆ ಸಮಾನವಾಗಿ ಆಸ್ತಿಯ ಹಕ್ಕು ಇದೆ. ಆಸ್ತಿಯು ಪಿತ್ರಾರ್ಜಿತ ಆಗಿರಬಹುದು ಅಥವಾ ಸ್ವಯಾರ್ಜಿತ ಆಗಿರಬಹುದು. ಆದರೆ, ಮಾತೃಮೂಲೀಯ ವ್ಯವಸ್ಥೆ ಇರುವಲ್ಲಿ ಆಸ್ತಿಯ ಹಕ್ಕು ಮಹಿಳೆಗೆ ಇದ್ದು, ಅದು ತಾಯಿಯಿಂದ ಮಗಳಿಗೆ ದೊರಕುತ್ತದೆ. ಯುಸಿಸಿ ಈ ಪದ್ಧತಿಯನ್ನು ತಿರಸ್ಕರಿಸಬೇಕು ಅಥವಾ ತಿದ್ದುಪಡಿ ಮಾಡಬೇಕಾಗುತ್ತದೆ.

ಕ್ರೈಸ್ತ ಧರ್ಮಾನುಯಾಯಿಗಳಲ್ಲಿ, ಪುರುಷನೊಬ್ಬನು ಉಯಿಲು ಅಥವಾ ವಿಲ್ ಬರೆಯದೆ ಮೃತನಾದರೆ ಮತ್ತು ಅವನ ಮಗ ಅವನಿಗಿಂತ ಮೊದಲೇ ಮೃತನಾಗಿದ್ದರೆ, ಮಗನ ವಿಧವೆಗೆ ಆಸ್ತಿಯಲ್ಲಿ ಯಾವ ಪಾಲೂ ಸಿಗುವುದಿಲ್ಲ. ಯುಸಿಸಿಯು ಕ್ರೈಸ್ತ ಧರ್ಮಾನುಯಾಯಿಗಳಿಗೆ ಅನ್ವಯವಾಗುವ ಈ ಕಾನೂನನ್ನು ರದ್ದು ಮಾಡಬೇಕಾಗುತ್ತದೆ ಅಥವಾ ತಿದ್ದುಪಡಿ ಮಾಡಬೇಕಾಗುತ್ತದೆ.

ಇನ್ನು ಪಾರ್ಸಿ ಸಮುದಾಯಕ್ಕೆ ಬಂದರೆ, ಪಾರ್ಸಿ ಪುರುಷನೊಬ್ಬನು ಪಾರ್ಸಿಯಲ್ಲದ ಮಹಿಳೆಯನ್ನು ಮದುವೆಯಾದರೆ, ಅವನ ಪತ್ನಿಗೆ ಗಂಡನ ಆಸ್ತಿಯಲ್ಲಿ ಯಾವ ಪಾಲೂ ಇರುವುದಿಲ್ಲ (ಅವರಿಬ್ಬರ ಮಕ್ಕಳಿಗೆ ಮಾತ್ರ ತಂದೆಯ ಆಸ್ತಿಯ ಮೇಲೆ ಹಕ್ಕಿದೆ). ಅಲ್ಲದೆ, ಮೃತ ವ್ಯಕ್ತಿಯ ಮಗನು ಆ ವ್ಯಕ್ತಿಗಿಂತ ಮೊದಲೇ ಸತ್ತಿದ್ದರೆ, ಆ ಮಗನ ವಿಧವೆಗೆ ಆಸ್ತಿಯಲ್ಲಿ ಯಾವ ಪಾಲೂ ದೊರೆಯುವುದಿಲ್ಲ. ಯುಸಿಸಿಯು ಪಾರ್ಸಿ ಸಮುದಾಯಕ್ಕೆ ಅನ್ವಯಿಸುವ ಈ ಕಾನೂನನ್ನು ರದ್ದು ಅಥವಾ ತಿದ್ದುಪಡಿ ಮಾಡಬೇಕಾಗುತ್ತದೆ.

3. ಜೀವನಾಂಶ: ಮುಸ್ಲಿಂ ವಿವಾಹ, ವಿಚ್ಛೇದನ ಹಾಗೂ ಜೀವನಾಂಶ ಕುರಿತ ಒಂದು ಮಹತ್ವದ ಕಾನೂನೆಂದರೆ, ‘ಮುಸ್ಲಿಂ ಮಹಿಳೆಯ (ವೈವಾಹಿಕ ಹಕ್ಕುಗಳ ರಕ್ಷಣೆ) ಕಾಯ್ದೆ, 2019’. ಈ ಕಾಯ್ದೆಯ ಪ್ರಕಾರ, ‘ತ್ರಿವಳಿ ತಲಾಖ್’ ಕೊಡುವವನನ್ನು ಶಿಕ್ಷಾರ್ಹ ಎಂದು ಪರಿಗಣಿಸಿ, ಅವನಿಗೆ ಗರಿಷ್ಠ ಮೂರು ವರ್ಷಗಳ ಕಾರಾಗೃಹ ವಾಸ ಮತ್ತು ಜುಲ್ಮಾನೆಯನ್ನು ವಿಧಿಸಬಹುದು. ಅಂತಹ ಸಂದರ್ಭದಲ್ಲಿ, ಪತಿಯು ಜೈಲಿನಲ್ಲಿರುವಾಗ ಅವನ ಹೆಂಡತಿ ಹಾಗೂ ಮಕ್ಕಳನ್ನು ಸಾಕುವವರು ಯಾರು? ಅಂತಹ ಪತಿಯಿಂದ ಸೂಕ್ತ ಜೀವನಾಂಶವನ್ನು ಪಡೆಯುವ ಹಕ್ಕು ಆ ವಿಚ್ಛೇದಿತ ಪತ್ನಿಗೆ ಇದೆ. ಆದರೆ, ಸ್ಥಿರಾಸ್ತಿ ಏನೂ ಇಲ್ಲದೆ, ದುಡಿದು ಸಂಬಳ ಪಡೆದು ಬದುಕುವ ಪತಿ ಜೈಲಿನಲ್ಲಿದ್ದರೆ ಅವನು ಜೀವನಾಂಶವನ್ನು ಕೊಡುವುದು ಹೇಗೆ? ಪತಿಯನ್ನು ಜೈಲಿಗಟ್ಟಿದ ಪತ್ನಿಯನ್ನು ಅವಳ ತವರುಮನೆಯವರೂ ತಿರಸ್ಕರಿಸುವ ಸಾಧ್ಯತೆ ಇರುತ್ತದೆ. ಆದ್ದರಿಂದ ತ್ರಿವಳಿ ತಲಾಖ್ ಕುರಿತ 2019ರ ಕಾಯ್ದೆಗೆ ತಿದ್ದುಪಡಿಯ ಅವಶ್ಯಕತೆ ಇದೆ.

19ನೆಯ ಶತಮಾನದ ಪ್ರಸಿದ್ಧ ನ್ಯಾಯವಾದಿ ಮೆಂಡೆಲ್ ಫಿಲಿಪ್ಸ್ ಅವರು ಹೇಳಿದಂತೆ, ‘ಕಾನೂನಿಗೆ ಜೊತೆಯಲ್ಲಿ ಪ್ರೀತಿ ತುಂಬಿದ ಹಾಗೂ ಜೀವಂತಿಕೆಯ ಒಂದು ಸಾರ್ವಜನಿಕ ಅಭಿಪ್ರಾಯ ಇಲ್ಲ ಎಂದಾದರೆ, ಆ ಕಾನೂನು ಅರ್ಥಹೀನವಾಗುತ್ತದೆ’.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.