ವೆನೆಜುವೆಲಾದ ಮೇಲಿನ ಅಮೆರಿಕದ ದಾಳಿ, ವಸಾಹತುಶಾಹಿ ಶಕ್ತಿ ಜಾಗೃತವಾಗಿರುವ ಸಂಕೇತ. ವೆನೆಜುವೆಲಾದ ಸ್ವಾಭಿಮಾನ ಹಾಗೂ ತೈಲ ನಿಕ್ಷೇಪಗಳು ಅಮೆರಿಕದ ಆಕ್ರಮಣಕ್ಕೆ ಕಾರಣವಾಗಿವೆ. ದೌರ್ಜನ್ಯಗಳ ಪರಂಪರೆಯನ್ನೇ ಎದುರಿಸಿರುವ ವೆನೆಜುವೆಲಾ, ಪ್ರಸಕ್ತ ಬಿಕ್ಕಟ್ಟನ್ನು ನಿಭಾಯಿಸಲು ಚರಿತ್ರೆಯ ಸ್ಮೃತಿಗಳಿಂದಲೇ ನೆರವು ಪಡೆಯಬಹುದು.

ದೇಶಗಳ ನಡುವಿನ ಶ್ರಮ ವಿಭಜನೆ ಎಂದರೆ– ಕೆಲವರು ಯಾವಾಗಲೂ ಗೆಲ್ಲುವಲ್ಲಿ ಶಕ್ತರಾಗಿರುವುದು, ಮತ್ತು ಇತರರು ಯಾವಾಗಲೂ ಸೋಲಲು ಮಾತ್ರ ಶಕ್ತರಾಗಿರುವುದು. ಎದುವರ್ದೊ ಗಲಿಯಾನೊ ತನ್ನ ‘ಓಪನ್ ವೇನ್ಸ್ ಆಫ್ ಲ್ಯಾಟಿನ್ ಅಮೆರಿಕ’ ಪುಸ್ತಕದಲ್ಲಿ ಯುರೋಪಿನ ವಸಾಹತುಶಾಹಿಯು ದಕ್ಷಿಣ ಅಮೆರಿಕದ ದೇಶಗಳನ್ನು ವ್ಯವಸ್ಥಿತವಾಗಿ ಅಧೀನದಲ್ಲಿ ಇರಿಸಿಕೊಂಡಿರುವುದು ಹೇಗೆ ಎನ್ನುವುದನ್ನು ವಿವರಿಸಲು ಬಳಸಿರುವ ವಿಶ್ಲೇಷಣೆಯಿದು. ಆತನ ಪ್ರಕಾರ, ದಕ್ಷಿಣ ಅಮೆರಿಕ ಬರೀ ವಸಾಹತುಶಾಹಿಯಿಂದ ದರೋಡೆಯಾದ ಭೂಖಂಡವಲ್ಲ; ಅದು ಮೀನಿನಂತೆ ಕತ್ತರಿಸಿ, ಒಣಗಿಸಿ, ಮಾರುಕಟ್ಟೆಯಲ್ಲಿ ನೇತು ಹಾಕಿದ ನಾಗರಿಕತೆ. ವರ್ತಮಾನದ ದಕ್ಷಿಣ ಅಮೆರಿಕದ ಅನಭಿವೃದ್ಧಿ, ರಾಜಕೀಯ ಅಸ್ಥಿರತೆ ಮತ್ತು ಪಲ್ಲಟಗಳು ಈ ವಸಾಹತುಶಾಹಿಯ ಬಳುವಳಿಗಳಲ್ಲದೆ ಬೇರೇನಲ್ಲ.

ವಸಾಹತುಶಾಹಿ ಯುಗದ ನಂತರ ಬೆಳೆದ ಅಮೆರಿಕ ಸಾಮ್ರಾಜ್ಯಶಾಹಿಯು ಅದೇ ಮಾದರಿ
ಯಲ್ಲಿಯೇ ರಾಜಕೀಯ ಪ್ರಯೋಗಗಳನ್ನು ಈ ದೇಶಗಳಲ್ಲಿ ನಡೆಸಿದೆ. ಈ ದೇಶಗಳ ಸಾರ್ವ
ಭೌಮತ್ವವನ್ನು ತನ್ನ ಸಾಮ್ರಾಜ್ಯಶಾಹಿ ಹಿತಾಸಕ್ತಿಗಳಿಗೆ ಅನುಗುಣವಾದಾಗ ಮಾತ್ರ ಅಮೆರಿಕ ಸಹಿಸಿದೆ. ಜನವರಿ 3ರ ಮುಂಜಾನೆ ವೆನೆಜುವೆಲಾದ ರಾಜಧಾನಿ ಕರಾಕಸ್ನಲ್ಲಿ ನಡೆದ ಅಮೆರಿಕದ ಸೈನ್ಯದ ದಾಳಿ ಈ ಸಾಮ್ರಾಜ್ಯಶಾಹಿ ಭಾಗವಾಗಿಯೇ ಸಂಭವಿಸಿದೆ. ವೆನೆಜುವೆಲಾದ ಅಧ್ಯಕ್ಷ ನಿಕೊಲಸ್ ಮಡೂರೊ ಮತ್ತು ಆತನ ಸರ್ಕಾರವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ. ಅಧ್ಯಕ್ಷ ಮತ್ತು ಆತನ ಪತ್ನಿಯನ್ನು
ಅಮೆರಿಕ ಸೈನ್ಯವು ವಶಕ್ಕೆ ಪಡೆದಿದೆ. ಈ ಘಟನೆ ದಕ್ಷಿಣ ಅಮೆರಿಕದ ಎಂದಿಗೂ ಮುಗಿಯದಂತಿರುವ ರಾಜಕೀಯ ಅಸ್ಥಿರತೆಯ ಹೊಸ ಅಧ್ಯಾಯವಾಗಿದೆ.

ಲ್ಯಾಟಿನ್ ಅಮೆರಿಕದ ಉತ್ತರದ ಭಾಗದಲ್ಲಿರುವ ವೆನೆಜುವೆಲಾ, 16ನೇ ಶತಮಾನದಲ್ಲಿ ಸ್ಪೇನ್ ಸಾಮ್ರಾಜ್ಯಕ್ಕೆ ವಶವಾಗಿ, ಆ ದೇಶದ ವಸಾಹತು ನೆಲೆಯಾಯಿತು. ಆ ಪ್ರದೇಶದ ಚಿನ್ನ, ಕೃಷಿ ಉತ್ಪನ್ನ
ಗಳು ಮತ್ತು ಮಾನವ ಸಂಪನ್ಮೂಲಗಳು ವಸಾಹತು ಆರ್ಥಿಕತೆಯ ಆಧಾರವಾಗಿದ್ದವು. ಸ್ಥಳೀಯ ಮೂಲ
ನಿವಾಸಿಗಳು ಮತ್ತು ಆಫ್ರಿಕಾದದಿಂದ ಕರೆತಂದ ಗುಲಾಮರು ಈ ಶೋಷಣೆಯ ಬಲಿಪಶುಗಳು.

19ನೇ ಶತಮಾನ ಆರಂಭದಲ್ಲಿ, ಸ್ಪೇನ್ ವಿರುದ್ಧದ ಸ್ವಾತಂತ್ರ್ಯ ಹೋರಾಟ ದಕ್ಷಿಣ ಅಮೆರಿಕದಾದ್ಯಂತ ವ್ಯಾಪಿಸಿತು. ಸೀಮೊನ್ ಬೊಲಿವಾರ್ ನೇತೃತ್ವದಲ್ಲಿ 1811ರಲ್ಲಿ ವೆನೆಜುವೆಲಾ ಸ್ವಾತಂತ್ರ್ಯ ಘೋಷಿಸಿತು. ಆದರೆ, ರಾಜಕೀಯ ಸ್ವಾತಂತ್ರ್ಯವು ಆರ್ಥಿಕ ಸ್ವಾತಂತ್ರ್ಯವನ್ನೇನೂ ಖಚಿತಪಡಿಸಲಿಲ್ಲ. ವಸಾಹತು
ಶಾಹಿ ವ್ಯವಸ್ಥೆಯ ಅದೇ ಪಳೆಯುಳಿಕೆಯಲ್ಲಿ ಹೊಸ ವ್ಯವಸ್ಥೆ ರಚನೆಗೊಂಡಿತಷ್ಟೇ.

20ನೇ ಶತಮಾನದ ಆರಂಭದಲ್ಲಿ ತೈಲದ ಅನ್ವೇಷಣೆ ವೆನೆಜುವೆಲಾದ ಇತಿಹಾಸದಲ್ಲಿ ನಿರ್ಣಾಯಕ ತಿರುವು ತಂದಿತು. ತೈಲವು ದೇಶವನ್ನು ವೇಗವಾಗಿ ಜಾಗತಿಕ ಆರ್ಥಿಕತೆಯಲ್ಲಿ ಸೇರಿಸಿತು. ಆದರೆ, ಅದೇ ಸಮಯದಲ್ಲಿ ಬಹುರಾಷ್ಟ್ರೀಯ ತೈಲ ಕಂಪನಿಗಳು ಮತ್ತು ಅಮೆರಿಕದ ರಾಜಕೀಯ ಪ್ರಭಾವ ದೇಶದ ಆರ್ಥಿಕ ನೀತಿಗಳನ್ನು ನಿರ್ಧರಿಸತೊಡಗಿದವು.

1958ರಲ್ಲಿ ಮಿಲಿಟರಿ ಆಡಳಿತದಿಂದ ಪ್ರಜಾಪ್ರಭುತ್ವಕ್ಕೆ ಮರಳಿದರೂ, ಮುಂದಿನ ದಶಕ
ಗಳಲ್ಲಿ ವೆನೆಜುವೆಲಾದ ರಾಜಕೀಯ ವ್ಯವಸ್ಥೆಯು ನವಉದಾರವಾದಿ ಆರ್ಥಿಕ ನೀತಿಗಳು, ಖಾಸಗೀಕರಣ ಮತ್ತು ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಗಳ ಒತ್ತಡಕ್ಕೆ ಸಿಲುಕಿದ್ದರಿಂದ ದೇಶದಲ್ಲಿನ ಅಸಮಾನತೆ ಇನ್ನಷ್ಟು ತೀವ್ರಗೊಂಡಿತು. ಸಂಪೂರ್ಣ ತೈಲ ಕೈಗಾರಿಕೆಯ ಮೇಲೆ ಆರ್ಥಿಕತೆ ನಿಂತ ಪರಿಣಾಮ, ಅಂತರರಾಷ್ಟ್ರೀಯ ತೈಲಬೆಲೆಯ ಏರುಪೇರಿನಿಂದ ವೆನೆಜುವೆಲಾ ತತ್ತರಿಸಿತು. ಈ ಅಸಮಾಧಾನದ ನೆಲೆಯಲ್ಲಿಯೇ 1990ರ ದಶಕದಲ್ಲಿ ಬೊಲಿವೆರಿಯನ್ ಚಳವಳಿ ಉದಯಿಸಿತು. ಆ ಚಳವಳಿಯಿಂದ 1998ರಲ್ಲಿ ಹ್ಯೂಗೋ ಚಾವೆಜ್ ಅಧ್ಯಕ್ಷರಾಗಿ ಆಯ್ಕೆಯಾದರು. ಚಾವೆಜ್ ತೈಲ ರಾಷ್ಟ್ರೀಕರಣ, ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳು ಮತ್ತು ಜನಪರ ಸಂವಿಧಾನಾತ್ಮಕ ಸುಧಾರಣೆಗಳನ್ನು ಜಾರಿಗೆ ತಂದರು. ಇದರಿಂದ ಬಡ ಮತ್ತು ಅಂಚಿನ ಸಮುದಾಯಗಳಿಗೆ ಮೊದಲ ಬಾರಿ ರಾಜಕೀಯ ಪ್ರಾತಿನಿಧ್ಯ ದೊರೆಯಿತು.

ಚಾವೆಜ್ ನಂತರದ ಅವಧಿಯಲ್ಲಿ, ನಿಕೊಲಸ್ ಅಧ್ಯಕ್ಷರಾದ ನಂತರ, ವೆನೆಜುವೆಲಾ ತೀವ್ರ ಆರ್ಥಿಕ ಮತ್ತು ರಾಜಕೀಯ ಸಂಕಟಗಳನ್ನು ಎದುರಿಸಿತು. ತೈಲ ಬೆಲೆಯ ಕುಸಿತ, ಆಂತರಿಕ ಆಡಳಿತಾತ್ಮಕ ದೋಷಗಳು ಮತ್ತು ಅಮೆರಿಕದ ಆರ್ಥಿಕ ದಿಗ್ಭಂದನ ದೇಶವನ್ನು ಗಂಭೀರ ಬಿಕ್ಕಟ್ಟಿಗೆ ತಳ್ಳಿದವು.

ಹೊರಗಿನ ದಾಳಿಗಳನ್ನು ಎದುರಿಸುತ್ತಲೇ ಬಂದಿರುವ ವೆನೆಜುವೆಲಾದ ಹೋರಾಟವನ್ನು ಪ್ರಸ್ತುತ ಬರೀ ರಾಜಕೀಯ ವಿವಾದವಾಗಿ ನೋಡಲಾಗದು. ಇದು ವಸಾಹತುಶಾಹಿಯಿಂದ ಆರಂಭವಾಗಿ, ನವವಸಾಹತುಶಾಹಿ ರೂಪಗಳಲ್ಲಿ ಮುಂದುವರಿದ, ಮತ್ತು ಪ್ರತಿರೋಧದ ಮೂಲಕ ತನ್ನ ಸ್ವಾತಂತ್ರ್ಯವನ್ನು ಮರು ವ್ಯಾಖ್ಯಾನಿಸಿಕೊಂಡ ಸುದೀರ್ಘ ಇತಿಹಾಸದ ಪ್ರಮುಖ ಅಧ್ಯಾಯವಾಗಿದೆ.

ಜಗತ್ತಿನಲ್ಲೇ ಅತಿಹೆಚ್ಚು ತೈಲ ಸಂಪನ್ಮೂಲಗಳನ್ನು ಹೊಂದಿರುವ ದೇಶ ವೆನೆಜುವೆಲಾ. ಆ ಸಂಪನ್ಮೂಲ
ಗಳನ್ನು ವಶಕ್ಕೆ ತೆಗೆದುಕೊಳ್ಳಬೇಕೆನ್ನುವ ಅಮೆರಿಕದ ಪ್ರಯತ್ನಕ್ಕೆ ಅಲ್ಲಿನ ಎಡಪಂಥೀಯ ಸರ್ಕಾರ ಸಡ್ಡು ಹೊಡೆದಿದೆ. ಇದರ ಪರಿಣಾಮವಾಗಿಯೇ, ಅಮೆರಿಕದ ಆರ್ಥಿಕ ನಿರ್ಬಂಧಗಳು, ರಾಜತಾಂತ್ರಿಕ ಸಮಸ್ಯೆಗಳ ಸೃಷ್ಟಿ, ಸೈಬರ್ ಯುದ್ಧ ಮತ್ತು ಸರ್ಕಾರ ಉರುಳಿಸುವ ಪ್ರಯತ್ನಗಳಿಂದ ನಿರಂತರ ದಾಳಿಗೆ ಒಳಗಾಗಿದೆ. ಸ್ವತಂತ್ರ ರಾಜಕೀಯ ಶಕ್ತಿಯಾಗಿ ವೆನೆಜುವೆಲಾ ಬೆಳೆದುದನ್ನು ಅಮೆರಿಕ ಸಹಜವಾಗಿಯೇ ಸಹಿಸಲಿಲ್ಲ.

ಅಮೆರಿಕಗೆ, ದಕ್ಷಿಣ ಅಮೆರಿಕ ಕಚ್ಚಾ ವಸ್ತುಗಳು ಮತ್ತು ಅಗ್ಗದ ಕಾರ್ಮಿಕರನ್ನು ಒದಗಿಸುವ ಮೂಲವೂ ಹೌದು. ಈ ಕಾರಣದಿಂದಾಗಿ, 18ನೇ ಶತಮಾನದ ಆರಂಭದಲ್ಲಿ ಅಮೆರಿಕ, ಮನ್ರೋ ಡಾಕ್ಟರೇನ್ ಮೂಲಕ ಲ್ಯಾಟಿನ್ ಅಮೆರಿಕದ ಮೇಲೆ ಯುರೋಪಿನ ಹಸ್ತಕ್ಷೇಪವನ್ನು ವಿರೋಧಿಸಿ ತನ್ನ ಸಾಮ್ರಾಜ್ಯಶಾಹಿ ನೀತಿಗೆ ನಾಂದಿ ಹಾಡಿತು. ‘ದಕ್ಷಿಣ ಅಮೆರಿಕ ಅಮೆರಿಕದ ಹಿತ್ತಲು, ಅದರ ಹಿತವನ್ನು ಅಮೆರಿಕ ಕಾಯುತ್ತಿದೆ’ ಎಂದು ತನ್ನ ರಾಜಕೀಯ ಹಸ್ತಕ್ಷೇಪಕ್ಕೆ ಸಮರ್ಥನೆ ನೀಡಿತು. ಪ್ರಸ್ತುತ, ಈ ‘ಹಿತ್ತಲಿನ’ ಮೇಲೆ ಅದರ ಹಿಡಿತ ತಪ್ಪುತ್ತಿರುವ ಹೊತ್ತಿನಲ್ಲಿ ದಕ್ಷಿಣ ಅಮೆರಿಕಗೆ ಅನ್ವಯಿಸಿದಂತೆ ಎರಡು ಮಹತ್ವದ ಗುರಿಗಳನ್ನು ಅಮೆರಿಕ ಹೊಂದಿದೆ.

ಮೊದಲನೆಯದು, ಸಮಾಜವಾದ, ಪ್ರಾದೇಶಿಕ ಒಗ್ಗಟ್ಟು ಮತ್ತು ಚೀನಾ–ರಷ್ಯಾ ಮುಂತಾದ ಪ್ರತಿಸ್ಪರ್ಧಿ ದೇಶಗಳ ಜೊತೆ ಸಹಕಾರವನ್ನು ಉತ್ತೇಜಿಸುವ ಸ್ವತಂತ್ರ–ಎಡಪಂಥೀಯ ಸರ್ಕಾರಗಳನ್ನು ತಡೆಯು
ವುದು. ಎರಡನೆಯದು, ಅಮೆರಿಕದ ಹಿತಾಸಕ್ತಿಗಳಿಗೆ ಅನುಗುಣವಾಗಿ ಕೈಗೊಂಬೆ ಸರ್ಕಾರಗಳನ್ನು ರಚಿಸಿ, ಆರ್ಥಿಕವಾಗಿ ಅವಲಂಬನೆ ಸೃಷ್ಟಿಸುವುದು.

ವೆನೆಜುವೆಲಾ ತನ್ನ ತೈಲ ಸಂಪನ್ಮೂಲಗಳನ್ನು ರಾಷ್ಟ್ರೀಕರಣ ಮಾಡಿದಾಗ ಅಥವಾ ಬೊಲಿವಿಯಾ ಭವಿಷ್ಯದ ಇಂಧನ ಮಾರುಕಟ್ಟೆಗಳಿಗೆ ಅತ್ಯಂತ ಪ್ರಮುಖವಾದ ಲಿಥಿಯಂ ಮೇಲಿನ ನಿಯಂತ್ರಣ
ವನ್ನು ಮರಳಿ ಪಡೆದಾಗ ಅಮೆರಿಕದ ಜಾಗತಿಕ ಆರ್ಥಿಕ ಯೋಜನೆಗೆ ಕುತ್ತು ಬಂತು. ದಕ್ಷಿಣ ಅಮೆರಿಕ ದೇಶಗಳಲ್ಲಿ ವ್ಯಾಪಾರ, ತಂತ್ರಜ್ಞಾನ ಹಾಗೂ ಮೂಲಸೌಕರ್ಯ ಹೂಡಿಕೆಗಳ ಮೂಲಕ ಚೀನಾದ ಪ್ರಭಾವವು ಹೆಚ್ಚುತ್ತಿದೆ. ಪ್ರಾದೇಶಿಕ ಸಂಘಟನೆಗಳ ಮೂಲಕ ಒಗ್ಗಟ್ಟನ್ನು ಬಲಪಡಿಸುವ ಮತ್ತು ನವಉದಾರವಾದಿ ಆರ್ಥಿಕ ಯೋಜನೆಯನ್ನು ತಿರಸ್ಕರಿಸುವ ಕಾರ್ಯಕ್ರಮಗಳಿಗೆ ದಕ್ಷಿಣ ಅಮೆರಿಕದ ಹಲವು ದೇಶಗಳು ಅಣಿಯಾಗಿವೆ. ವೆನೆಜುವೆಲಾ ಆರ್ಥಿಕ ಸಂಕಷ್ಟಗಳ ನಡುವೆಯೂ ಚೀನಾ, ರಷ್ಯಾ, ಇರಾನ್ ಮುಂತಾದ ದೇಶಗಳೊಂದಿಗೆ ಸಹಕಾರ ಬೆಳೆಸುವಲ್ಲಿ ಯಶಸ್ವಿಯಾಗಿದೆ ಮತ್ತು ಅಮೆರಿಕದ ಪ್ರಾಬಲ್ಯದ ವಿರುದ್ಧ ಲ್ಯಾಟಿನ್ ಅಮೆರಿಕದ ದೇಶಗಳ ನಡುವೆ ಹೊಸ ಒಗ್ಗಟ್ಟಿನ ಹೋರಾಟಕ್ಕೆ ಕರೆ ನೀಡಿದೆ. ದಕ್ಷಿಣ ಅಮೆರಿಕ ದೇಶಗಳ ಒಗ್ಗಟ್ಟು ಮತ್ತು ಆರ್ಥಿಕ ಸ್ವಾವಲಂಬನೆ ಇಂದಿನ ಬಹುಧ್ರುವೀಕರಣದ ಜಗತ್ತಿನಲ್ಲಿ ನಿರ್ಣಾಯಕ ಪಾತ್ರ ವಹಿಸಿ, ತನ್ನ ಶತಮಾನಗಳ ಪ್ರಾಬಲ್ಯಕ್ಕೆ ಸವಾಲು ಎಸೆಯಬಹುದು ಎಂಬ ಭಯ ಅಮೆರಿಕಗೆ ಇದೆ. ಆ ಆತಂಕ, ವೆನೆಜುವೆಲಾ ಮೇಲೆ ನಡೆಸಿದ ದಾಳಿಯಿಂದ ಸ್ಪಷ್ಟವಾಗುತ್ತದೆ.

ಅಮೆರಿಕದ ವಿರುದ್ಧ ಲ್ಯಾಟಿನ್ ಅಮೆರಿಕದ ಪ್ರತಿರೋಧವನ್ನು ಅದರ ಜನಮಾನಸದಿಂದ ಬೇರ್ಪಡಿಸಲು ಅಸಾಧ್ಯ. ವಸಾಹತು ಆಕ್ರಮಣ, ಶೀತಲಯುದ್ಧದಿಂದ ಹಿಡಿದು ಈ ಪ್ರದೇಶವು ‘ಪ್ರಜಾಪ್ರಭುತ್ವ’ ಎಂಬ ಹೆಸರಿನಲ್ಲಿ ಪಾಶ್ಚಿಮಾತ್ಯ ಜಗತ್ತಿನ ಅಧೀನಕ್ಕೆ ಒಳಗಾಗಿದೆ. ದಮನ ಪರಂಪರೆಯ ಸಾಮೂಹಿಕ ನೆನಪುಗಳಿಂದಲೇ ಅದರ ಸಾಹಿತ್ಯ, ಸಂಗೀತ, ಮತ್ತು ಜನಚಳವಳಿಗಳಲ್ಲಿ ಪ್ರತಿರೋಧದ ಸಂಸ್ಕೃತಿ ರೂಪುಗೊಂಡಿದೆ.

ವೆನೆಜುವೆಲಾ ಪ್ರಭುತ್ವ ಮತ್ತು ನಾಯಕತ್ವದ ಗಂಭೀರವಾದ ತಪ್ಪುಗಳನ್ನೂ ಅಲ್ಲಿನ ಜನಸಮುದಾಯ ಎಂದೂ ಮನ್ನಿಸಿಲ್ಲ; ಅಗತ್ಯ ಬಿದ್ದಾಗ ಪ್ರಭುತ್ವಗಳನ್ನೇ ಬದಲಾಯಿಸಿದೆ. ಅದೇ ರೀತಿ ಅವರು ದೇಶದ ಸಾರ್ವಭೌಮತ್ವದ ಮೇಲೆ ಅಮೆರಿಕ ಬಾಂಬ್ ದಾಳಿ ನಡೆಸಿ, ಅಧ್ಯಕ್ಷ ನಿಕೊಲಸ್ ಮಡೂರೊ ಅವರನ್ನು ಸೆರೆಗೆ ತಳ್ಳಿರುವ ಘಟನೆಯನ್ನು ಸಹಿಸಿಕೊಳ್ಳುತ್ತಾರೆಂದು ನಿರೀಕ್ಷಿಸಲಾಗದು.

ಗಲಿನೋ ಹೇಳಿದಂತೆ, ‘ಲ್ಯಾಟಿನ್ ಅಮೆರಿಕದ ನರನಾಡಿಗಳು ತೆರೆದೆ ಇರುತ್ತವೆ’. ಏಕೆಂದರೆ, ಸಾಮ್ರಾಜ್ಯಶಾಹಿಯ ರಕ್ತದ ದಾಹಕ್ಕೆ ಅವು ಮುಕ್ತವಾಗಿರಬೇಕು. ಅವುಗಳನ್ನು ಮುಚ್ಚಲು ಯಾರಾದರೂ ಯತ್ನಿಸಿದರೆ, ಅವರು ಅಪಾಯಕ್ಕೆ ಸಿಲುಕಲಿದ್ದಾರೆ ಎನ್ನುವುದಕ್ಕೆ ಇತಿಹಾಸದಲ್ಲಿ ನಿದರ್ಶನಗಳಿವೆ.

ಲೇಖಕ: ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.