ಇದೇ ಡಿಸೆಂಬರ್ 16ರಂದು ಬೆಂಗಳೂರಿನ ರೈಲು ನಿಲ್ದಾಣದಿಂದ ಸಾಗರ ಹರಿದು ಬಂದಂತೆ, ಗುಲಾಬಿ ಬಣ್ಣದ ಸೀರೆಯುಟ್ಟ ಸಹಸ್ರಾರು ‘ಆಶಾ’ ಕಾರ್ಯಕರ್ತೆಯರು ಬೃಹತ್ ರ್‍ಯಾಲಿಯ ಮೂಲಕ ಬಂದು, ಸ್ವಾತಂತ್ರ್ಯ ಉದ್ಯಾನದ ತುಂಬಾ ತುಂಬಿ ಹೋಗಿದ್ದರು. ರಾಜ್ಯದ 30 ಜಿಲ್ಲೆಗಳಿಗೆ ಸೇರಿದ ಹಳ್ಳಿ ಹಳ್ಳಿಗಳಿಂದ ದೂರು-ದುಮ್ಮಾನಗಳ ಸಂಕಟ ಹೊತ್ತು ಬಂದಿದ್ದ ಇವರ ನೋವಿನ ಮೊರೆ ಮುಗಿಲು ಮುಟ್ಟಿತ್ತು.

ಇದುವರೆಗೆ ಇವರಿಗೆ ಗೌರವಧನ ಪಾವತಿಸಲು ಅನುಸರಿಸಿದ ಹಿಂದಿನ ಎಲ್ಲಾ ವಿಧಾನಗಳು ಮತ್ತು ಒಂದು ವರ್ಷದ ಹಿಂದೆ ಪ್ರಾರಂಭವಾಗಿರುವ ‘ಆಶಾ ನಿಧಿ’ (ಆಶಾ ಸಾಫ್ಟ್) ಎಂಬ, ಸೇವೆಯನ್ನು ಆನ್‌ಲೈನ್ ಮೂಲಕ ದಾಖಲಿಸುವ ವಿಧಾನ ಸಂಪೂರ್ಣ ವಿಫಲವಾಗಿ, ಅಲೆದಾಟದ ದುಡಿಮೆಗೆ ಗೌರವಧನದ ಹೆಸರಿನಲ್ಲಿ ಸಿಗುತ್ತಿದ್ದ ಅಲ್ಪಸ್ವಲ್ಪ ಕಾಸೂ ಕೈ ಸೇರದೆ ಅವರು ಕಂಗಾಲಾಗಿದ್ದರು. ಹೀಗೆಂದೇ ‘ಮಾಸಿಕ ಗೌರವಧನ’ ನಿಗದಿ ಮಾಡಬೇಕು, ‘ಆಶಾ ಸಾಫ್ಟ್’ ರದ್ದುಪಡಿಸಬೇಕು ಮತ್ತು ಹಿಂದಿನ ಎಲ್ಲಾ ಹಿಂಬಾಕಿ ಹಣ ಪಾವತಿಸಬೇಕೆಂದು ವಿಧಾನಸೌಧಕ್ಕೆ ಕೇಳುವಂತೆ ಮೊರೆಯಿಡುತ್ತಿದ್ದರು. ಇದನ್ನು ಕೇಳಿ ಬಹುಶಃ ಮೇಲಿನ ದೇವತೆಗಳ ಹೃದಯ ಚುರುಗುಟ್ಟಿರಬಹುದು! ಮಾತ್ರವಲ್ಲದೆ ಅದು ನಮ್ಮ ಮಾಧ್ಯಮಗಳ ಕರುಳನ್ನೂ ಕರಗಿಸಿ ಪ್ರಮುಖ ಸುದ್ದಿ ಮಾಡಿಸಿತ್ತು. ಆದರೆ... ಪ್ರಭುತ್ವದ, ಅಧಿಕಾರಶಾಹಿಯ ಮನಸ್ಸು ಮಾತ್ರ ಒಂದಿಷ್ಟೂ ಮಿಸುಕಲಿಲ್ಲ.

ಕೇಂದ್ರ ಸರ್ಕಾರದ ‘ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ಯೋಜನೆ’ಯಡಿ 2005ರಲ್ಲಿ ‘ಆಶಾ’ (ಅಕ್ರೆಡಿಟೆಡ್ ಸೋಷಿಯಲ್ ಹೆಲ್ತ್ ಆ್ಯಕ್ಟಿವಿಸ್ಟ್) ಯೋಜನೆಗೆ ಹಸಿರು ನಿಶಾನೆ ಸಿಕ್ಕಿ, 2007ರಲ್ಲಿ ಕರ್ನಾಟಕದಲ್ಲಿ ಆರೋಗ್ಯ ಇಲಾಖೆಯಡಿ ಇವರನ್ನು ನೇಮಿಸಿಕೊಳ್ಳಲಾಯಿತು. ಗ್ರಾಮೀಣ ಪ್ರದೇಶದ, ಕನಿಷ್ಠ ಎಂಟನೇ ತರಗತಿಯವರೆಗೆ ಓದಿರುವ ಹೆಣ್ಣು ಮಕ್ಕಳಿಗೆ, ಪ್ರತಿ ಸಾವಿರ ಜನಸಂಖ್ಯೆಗೆ ಒಬ್ಬರಂತೆ ಜನರ ಆರೋಗ್ಯದ ಜವಾಬ್ದಾರಿ ನೀಡಿ ಬೇರುಮಟ್ಟದ ಕೊಂಡಿಯಾಗಿ ನೇಮಿಸಲಾಯಿತು. ಈಗ 37,000ಕ್ಕೂ ಹೆಚ್ಚಿನ ‘ಆಶಾ’ ತಾಯಂದಿರು ರಾಜ್ಯದ ಹಳ್ಳಿಗಳಲ್ಲಿ ಮತ್ತು ಕೆಲ ನಗರಗಳ ಕೊಳಚೆ ಪ್ರದೇಶಗಳಲ್ಲಿ ಅಹರ್ನಿಶಿ ದುಡಿಯುತ್ತಿದ್ದಾರೆ. ದೇಶದಲ್ಲಿ 9 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಅಸಹಾಯಕ ಬಡ ಮಹಿಳೆಯರು, ವಿಧವೆಯರು, ವಿಚ್ಛೇದಿತರು, ಪರಿತ್ಯಕ್ತರಿಗೆ ಈ ಯೋಜನೆಯಡಿ ಕಾರ್ಯ ನಿರ್ವಹಿಸಲು ಆದ್ಯತೆ ನೀಡಿ, ಅವರ ಆರ್ಥಿಕ ಸ್ವಾವಲಂಬನೆಗೆ ಒತ್ತು ನೀಡಲಾಗುತ್ತದೆ ಎಂಬ ಸರ್ಕಾರಗಳ ಘೋಷಣೆಯೇ ಇಂತಹ ಮಹಿಳೆಯರ ಪಾಲಿಗೆ ಒಂದು ಆಶಾಕಿರಣವಾಗಿತ್ತು. ಆದರೆ ಹಗಲು ರಾತ್ರಿ ಎನ್ನದೇ ದುಡಿಯುವ ಕಾಯಕ ಇದಾಗಿದ್ದರೂ, ಅದಕ್ಕೆ ತಕ್ಕ ಪ್ರತಿಫಲದ ವ್ಯವಸ್ಥೆಯಿಲ್ಲದೆ ಅವರ ಆರ್ಥಿಕ ಪರಿಸ್ಥಿತಿ ಇಂದಿಗೂ ಸುಧಾರಿಸಿಲ್ಲ. ಒಂದು ಸಂವೇದನಾಶೀಲ ಸರ್ಕಾರ ಕನಿಷ್ಠ ನಿರುದ್ಯೋಗ ಭತ್ಯೆಯನ್ನು ನೀಡುವಂತಿದ್ದರೂ ಈಗವರು ಪಡೆಯುವುದಕ್ಕಿಂತ ಹೆಚ್ಚಿನ ಹಣ ನೀಡಬೇಕಿರುತ್ತಿತ್ತು.

‘ಪ್ರಪಂಚದ ಅತಿ ಹೆಚ್ಚು ಸಾಮೂಹಿಕ ಆರೋಗ್ಯ ಕಾರ್ಯಕರ್ತೆಯರು ಇರುವ ಯೋಜನೆ’ ಎಂಬ ಹೆಗ್ಗಳಿಕೆ ಈ ಯೋಜನೆಗಿದೆ. ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದಲ್ಲಿ ‘ಸ್ಪಷ್ಟವಾಗಿ ಕಾಣುವ ಏಕೈಕ ಸಾಧನೆ’ ಎಂದು ಗುರುತಿಸಲಾಗಿದೆ. ‘ಆಧಾರಸ್ತಂಭ’, ‘ಕೀಲುಸಾಧನವೆಂದರೆ ಆಶಾ ಕಾರ್ಯಕರ್ತೆಯರು’ ಎಂದೆಲ್ಲ ಸರ್ಕಾರದ ಯೋಜನೆಯ ಕೈಪಿಡಿಯಲ್ಲಿ ದಾಖಲಿಸಲಾಗಿದೆ. ಇವೆಲ್ಲವೂ ನಿಜವೇ ಎಂಬುದು ಹೆಮ್ಮೆಯ ಸಂಗತಿ. ಆದರೆ ಈ ಸತ್ಯ ಸರ್ಕಾರಕ್ಕೆ ತನ್ನ ಝಂಡಾ ಹಾರಿಸಿಕೊಳ್ಳಲು ಮಾತ್ರ ಬೇಕು!

ಪ್ರತಿದಿನ ಗರ್ಭಿಣಿಯರ ಸುರಕ್ಷಿತ ಹೆರಿಗೆ, ಸ್ವಸ್ಥ ಶಿಶುವಿನ ಜನನ, ಆರೈಕೆ, ಆರೋಗ್ಯ ಮತ್ತು ಪೌಷ್ಟಿಕತೆಯ ಅರಿವು ಮೂಡಿಸುತ್ತ, ಕ್ಷಯ, ಕುಷ್ಠ ರೋಗ, ಮಲೇರಿಯ, ಡೆಂಗಿ, ಚಿಕೂನ್‌ಗುನ್ಯ ಇತ್ಯಾದಿ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವಲ್ಲಿ ಶ್ರಮಿಸುತ್ತಾ, ಕುಟುಂಬ ಯೋಜನೆ, ಶೌಚಾಲಯ ಬಳಕೆ, ಸಮಗ್ರ ಅಭಿವೃದ್ಧಿ ಕುರಿತು ಗ್ರಾಮೀಣ ಸಮಾಜದ ಆರೋಗ್ಯಕರ ಬದಲಾವಣೆಗೆ ವಿಷಮ ಪರಿಸ್ಥಿತಿಗಳಲ್ಲೂ ಸದ್ದಿಲ್ಲದೆ ಸೇವೆ ಸಲ್ಲಿಸುತ್ತಾ, ಗ್ರಾಮೀಣ ಜನಸಮುದಾಯಕ್ಕೂ ಆರೋಗ್ಯ ಇಲಾಖೆಗೂ ನಡುವಿನ ಸೇತುವೆಯಾಗಿ ಕಳೆದ 7- 8 ವರ್ಷಗಳಿಂದ ದುಡಿಯುತ್ತಿರುವ ಇವರು ಗ್ರಾಮದ ಆರೋಗ್ಯ ಮಾತೆಯರು. ಜನರಿಗೀಗ ಇವರು ಅನಿವಾರ್ಯ. ಆದರೆ ಗರಿಷ್ಠ ಶ್ರಮ ವಿನಿಯೋಗಿಸಿ ದುಡಿದರೂ ಸಮರ್ಪಕ ಗೌರವಧನ ಪಡೆಯಲಾಗದೆ, ತಮ್ಮ ಕುಟುಂಬದವರಿಂದ ಛೀಮಾರಿಗೆ ಒಳಗಾಗಿ ಕಂಗಾಲಾಗಿರುವ ಈ ಹೆಣ್ಣು ಮಕ್ಕಳ ಬಗ್ಗೆ ಕನಿಷ್ಠ ಕಾಳಜಿಯೂ ನಮ್ಮನ್ನಾಳುವ ಸರ್ಕಾರಕ್ಕೆ ಇಲ್ಲದಿರುವುದು ವಿಷಾದನೀಯ.

ನಮ್ಮ ದೇಶದಲ್ಲಿ ಹೆಣ್ಣು ಮಕ್ಕಳ ಬಹಳಷ್ಟು ‘ಸೇವೆ’ಗಳಿಗೆ ಕನಿಷ್ಠ, ಕೃತಜ್ಞತೆಯೂ ಇಲ್ಲ. ಗೃಹಿಣಿಯಾಗಿ, ಕೃಷಿ ಕಾರ್ಮಿಕಳಾಗಿ ಅವಳು ಸಲ್ಲಿಸುವ ಸೇವೆಯ ಹೆಸರಿನ ‘ದುಡಿಮೆ’ಗೆ, ಗರಿಷ್ಠ ಶ್ರಮ, ಸಮಯ ವಿನಿಯೋಗವಾದರೂ ಆಟಕ್ಕುಂಟು ಲೆಕ್ಕಕ್ಕಿಲ್ಲವೆಂಬಂತಾಗಿ ಸಾಮಾಜಿಕ ಗೌರವವೂ ದಕ್ಕದು. ಅದರ ಮುಂದುವರಿಕೆಯೆಂಬಂತೆ, ಸರ್ಕಾರದಿಂದಲೇ ಈ ಬಗೆಯ ಆಧುನಿಕ ಜೀತಕ್ಕೆ ನೇಮಕವಾಗಿರುವ ‘ಆಶಾ’, ಅಂಗನವಾಡಿ ಹಾಗೂ ಬಿಸಿಯೂಟದ ಕಾರ್ಯಕರ್ತೆಯರದು ಇಂತಹದೇ ಹೀನಾಯ ಸ್ಥಿತಿ.

ಕಡಿಮೆ ಹಣಕ್ಕೆ ಹೆಚ್ಚು ಸಮಯ ಮತ್ತು ಶ್ರಮವಹಿಸಿ ದುಡಿಯಲು ಸರ್ಕಾರಗಳಿಗೆ ಹೆಣ್ಣು ಮಕ್ಕಳೇ ಬೇಕು! ಏಕೆಂದರೆ ಅವರಷ್ಟು ನಿಸ್ಪೃಹತೆ, ಪ್ರಾಮಾಣಿಕತೆ, ಸಹನೆಯಿಂದ ಇಷ್ಟು ಕಡಿಮೆ ಪ್ರತಿಫಲಕ್ಕೆ ಪುರುಷರು ದುಡಿಯಲಾರರೆಂಬ ಕಟು ವಾಸ್ತವವನ್ನವರು ಬಂಡವಾಳ ಮಾಡಿಕೊಂಡಿದ್ದಾರೆ.
ಈ ‘ಆಶಾ’ ಕಾರ್ಯಕ್ಷೇತ್ರಕ್ಕೆ ಇಂತಿಷ್ಟೇ ಎಂದು ನಿಗದಿತ ಚೌಕಟ್ಟಿಲ್ಲ. ಹಲವಾರು ಕಾರ್ಯ ವಿಧಾನಗಳನ್ನು ಅನುಸರಿಸಿ ಕೆಲಸ ಮಾಡಬೇಕು.

ರಾಜ್ಯದಾದ್ಯಂತ ಜಿಲ್ಲೆಗಳಲ್ಲಿ ‘ಆಶಾ’ಗಳ ಮೇಲಧಿಕಾರಿಗಳಿಗೆ ತಕ್ಕಂತೆ ಕಾರ್ಯವಿಧಾನಗಳು ಬದಲಾಗಿರುತ್ತವೆ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆಯುವ ಮಾಸಿಕ ಸಭೆಯಲ್ಲಿ ಭಾಗವಹಿಸಿದರೆ ₹ 150, ಗರ್ಭಿಣಿಯನ್ನು ನೋಂದಾಯಿಸಿ ಹೆರಿಗೆ ಮುಂಚಿನ ಆರೋಗ್ಯ ಸೌಕರ್ಯಗಳನ್ನು ಒದಗಿಸಿಕೊಡಲು ಮತ್ತು ಚಿಕಿತ್ಸೆ ಕೊಡಿಸಿ ಸುರಕ್ಷಿತ ಹೆರಿಗೆ ಮಾಡಿಸಲು 9 ತಿಂಗಳುಗಳ ಶ್ರಮಕ್ಕೆ ₹ 300, ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಹೆರಿಗೆ ಮಾಡಿಸಿದರೆ ₹ 200, ಲಸಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ ₹ 100... ಸರ್ಕಾರದಿಂದ ನಿಗದಿಯಾದ ಇಂತಹ 32 ಕೆಲಸಗಳನ್ನು ಅವರು ನಿರ್ವಹಿಸಬೇಕು. ಆದರೆ ಇವುಗಳನ್ನೂ ಮೀರಿ ಪ್ರತಿ ತಿಂಗಳು ಒಂದಿಲ್ಲೊಂದು ರೋಗದ ಸರ್ವೆಗಳು. ಜೊತೆಗೆ ರೋಗಿಗಳ ಕಫ ತೆಗೆದುಕೊಂಡು ಬನ್ನಿ, ಮತ್ತೊಂದು ತನ್ನಿ, ಮಗದೊಂದು ತನ್ನಿ... ಎಷ್ಟೆಲ್ಲಾ ಕೆಲಸಗಳನ್ನು ತಿಂಗಳೆಲ್ಲಾ ಬಾಯಿಮುಚ್ಚಿಕೊಂಡು ಮಾಡಿದರೂ ಸಮರ್ಪಕವಾಗಿ ದಕ್ಕಲಾರದ, ಹೆಸರಿಗಿರುವ ಗೌರವಧನಕ್ಕಾಗಿ ಒದ್ದಾಡುತ್ತಾ ಗೌರವವಿಲ್ಲದೇ ದುಡಿಯುತ್ತಿದ್ದಾರೆ.

‘ಇಷ್ಟು ವರ್ಷಗಳಿಂದ ಕಷ್ಟವಿದ್ದರೂ, ಸಂಸಾರಕ್ಕೆ ಆಧಾರವಾದೀತು, ಏನೋ ಒಂದು ಸರ್ಕಾರಿ ಕೆಲಸ ಇಂದಲ್ಲ ನಾಳೆ ಮನಕರಗಿ ಹೊಟ್ಟೆ ತುಂಬುವಷ್ಟಾದರೂ ನೀಡಬಹುದೇನೋ ಎಂದು ದುಡಿಯುತ್ತಿದ್ದೇವೆ. ಕನಿಷ್ಠ ₹ 5000 ನಿಗದಿತ ಮೊತ್ತದ ಹಣವನ್ನಾದರೂ ನೀಡಿದರೆ ನಾವು ಈ ಕೆಲಸ ಮುಂದುವರಿಸಬಹುದು’ ಎಂಬುದು ‘ಆಶಾ’ ತಾಯಂದಿರ ಅಳಲು.

ಪ್ರತಿ ಪ್ರಕರಣಕ್ಕೆ ಇಂತಿಷ್ಟು ಪ್ರೋತ್ಸಾಹಧನವಿದ್ದು, ತಿಂಗಳಿಗೆ ದುಡಿದಷ್ಟೂ ಹಣ ಬರುವುದೆಂದು ಯೋಜನೆ ಪ್ರಾರಂಭದಲ್ಲಿ ಹೇಳಲಾಗಿತ್ತು. ಆದರೆ ಈ ಕಾಂಪೊನೆಂಟ್ ವ್ಯವಸ್ಥೆ ಅತ್ಯಂತ ಕ್ಲಿಷ್ಟಕರ ಲೆಕ್ಕಾಚಾರವೂ ಹೌದು, ಅವೈಜ್ಞಾನಿಕವೂ ಹೌದು. ಇಂತಹ ಪೀಸ್‌ವರ್ಕ್ ಲೆಕ್ಕಾಚಾರದ ಅಸಮರ್ಪಕ ಸರ್ಕಾರಿ ಯೋಜನೆ ಇನ್ನೊಂದಿಲ್ಲ. ಪ್ರತೀ ತಿಂಗಳು ನಿಗದಿತ ದಿನಾಂಕದಂದು ಎಲ್ಲಾ ಕಾಂಪೊನೆಂಟ್‌ಗಳ ಪ್ರೋತ್ಸಾಹಧನ ನೀಡದೆ, ಸರಿಯಾದ ಲೆಕ್ಕಾಚಾರವೂ ನಡೆಯದೆ, ಎಂದೋ ತಿಂಗಳಾನುಗಟ್ಟಲೆಗಳ ನಂತರ ನೀಡುವಾಗ, ಯಾವ ಕೆಲಸಕ್ಕೆ ಕೊಟ್ಟಿರುತ್ತಾರೆ ಯಾವುದಕ್ಕೆ ಬಿಟ್ಟಿರುತ್ತಾರೆ ತಿಳಿಯದಂಥ ಅಯೋಮಯ ಪರಿಸ್ಥಿತಿ.

‘ಆಶಾ’ ಕಾರ್ಯಕರ್ತೆಯರಿಗೆ ಮಾಸಿಕ ಪ್ರೋತ್ಸಾಹಧನವನ್ನು ವಿವಿಧ ರೀತಿಯ ಚಟುವಟಿಕೆಗಳನ್ನು ಆಧರಿಸಿ ‘ಆಶಾ ಸಾಫ್ಟ್’ ಆನ್‌ಲೈನ್ ಮೂಲಕ ದಾಖಲು ಮಾಡಿ ವ್ಯವಸ್ಥಿತವಾಗಿ, ನಿಗದಿತವಾಗಿ ಮತ್ತು ನಿಯಮಿತವಾಗಿ ಪಾವತಿಸಲು ಸಾಧ್ಯವಾಗುತ್ತದೆ ಎಂದು ಇಲಾಖೆ ಪ್ರಾರಂಭದಲ್ಲಿ ಹೇಳಿತ್ತು. ಆದರೆ ಈ ವಿಧಾನ ಜಾರಿಯಾದಂದಿನಿಂದ ಮೊದಲಿಗಿಂತ ದುಪ್ಪಟ್ಟು ಪಡಿಪಾಟಲು ಪಡುವಂತಾಗಿದೆ. ಮಾಡಿರುವ ಚಟುವಟಿಕೆಗಳ ದಾಖಲಾತಿಯಿಂದ ಹಿಡಿದು, ಪ್ರೋತ್ಸಾಹಧನ ಪಡೆಯುವವರೆಗೆ ಇರುವ ಪ್ರಕ್ರಿಯೆಯನ್ನು ಪೂರೈಸಲು ಹೆಣಗಾಡಿ ಬೇಸತ್ತ ನೂರಾರು ಕಾರ್ಯಕರ್ತೆಯರು ‘ಆಶಾ’ ಕೆಲಸವನ್ನೇ ಬಿಟ್ಟಿದ್ದಾರೆ. ಉಳಿದವರ ಸಹನೆಯ ಕಾಯುವಿಕೆಯನ್ನು ಆರೋಗ್ಯ ಇಲಾಖೆ ಇನ್ನೂ ನಿಷ್ಕರುಣೆಯಿಂದ ಪರೀಕ್ಷಿಸುತ್ತಿದೆ.

ಕೇಂದ್ರ ಸರ್ಕಾರದಿಂದ ₹ 1000 ಪ್ರೋತ್ಸಾಹಧನ ಇವರಿಗೆಂದು ಬಿಡುಗಡೆಯಾಗುತ್ತಿದ್ದು ಅದಕ್ಕೆ ಸರಿಸಮಾನ ಪ್ರೋತ್ಸಾಹಧನ (ಮ್ಯಾಚಿಂಗ್ ಗ್ರ್ಯಾಂಟ್) ರಾಜ್ಯ ಸರ್ಕಾರದಿಂದ ಪಾವತಿಯಾಗಬೇಕು. ಆದರೆ ಹಲವೆಡೆ ಪ್ರತಿ ತಿಂಗಳೂ ಆ ಹಣ ಸಹ ತಲುಪುತ್ತಲೇ ಇಲ್ಲ. ಆಶಾಗಳು ನಿರ್ವಹಿಸಿದ ಕೆಲಸಕ್ಕೆ ತಕ್ಕಂತೆ ಸಂಪೂರ್ಣ ಪ್ರೋತ್ಸಾಹಧನ ಎಲ್ಲಿಯೂ ಬರುತ್ತಿಲ್ಲ. ಇವರು ಮಾಡಿದ ಕೆಲಸವನ್ನು ಆರೋಗ್ಯಾಧಿಕಾರಿ, ಆರೋಗ್ಯ ಸಹಾಯಕರು ಸಾಕಷ್ಟು ಪೀಡಿಸಿ ದೃಢೀಕರಿಸಿದ ನಂತರ ‘ಆಶಾ ಸಾಫ್ಟ್’ನಲ್ಲಿ ದಾಖಲಿಸ ಹೋದರೆ ಅದು ಸರಿಯಾದ ಹಣಕ್ಕೆ ಫೀಡ್ ಆಗುವುದಿಲ್ಲ. ಮುಂದಿನ ತಿಂಗಳು ಮಾಡಲು ಸಾಫ್ಟ್ ಸ್ವೀಕರಿಸುವುದಿಲ್ಲ. ಸಂದೇಶ ಕಳಿಸುವ ಕೆಲಸ ಎಎನ್‌ಎಮ್‌ಗಳದ್ದಾಗಿದ್ದು (ಕಿರಿಯ ಆರೋಗ್ಯ ಸಹಾಯಕಿ) ಬಹಳಷ್ಟು ಕಡೆ ಅವರಿಗೆ ಈ ಕೆಲಸಗಳ ಬಗ್ಗೆ ತಾತ್ಸಾರ.

ಸರಿಯಾದ ಸಮಯಕ್ಕೆ ಸಂದೇಶ ಕಳಿಸದೆ, ಪೋರ್ಟಲ್‌ಗೆ ಸರಿಯಾಗಿ ಅಪ್‌ಲೋಡ್ ಮಾಡದೆ, ಮಾಡುವವರು ಇಲ್ಲದೆ ‘ಆಶಾ’ಗಳಿಗೆ ಸಿಗುವ ಕನಿಷ್ಠ ಹಣಕ್ಕೂ ಖೋತಾ. ಕಂಪ್ಯೂಟರ್‌ಗೆ ಡಾಟಾ ತುಂಬುವವರ ಕೊರತೆ ಕೆಲವೆಡೆಯಾದರೆ, ಇರುವ ಕಡೆ ಅಸಹಕಾರ. ಅದನ್ನು ಪರೀಕ್ಷಿಸಲು ವೈದ್ಯರೇ ಇರುವುದಿಲ್ಲ. ಹೀಗೆ ನೂರೆಂಟು ಸಮಸ್ಯೆಗಳ ಜೊತೆಗೆ ಹಲವು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಂಪ್ಯೂಟರ್ ಇಲ್ಲ, ಇದ್ದರೆ ಇಂಟರ್‌ನೆಟ್ ಇಲ್ಲ. ಕೆಲವೆಡೆ ನೆಟ್‌ವರ್ಕ್ ಇಲ್ಲ. ಎಲ್ಲಾ ಇದ್ದರೆ ಹಳ್ಳಿಗಳಲ್ಲಿ ಕರೆಂಟೇ ಇಲ್ಲ. ಇಂತಹ ಕೊರತೆ, ಅವ್ಯವಸ್ಥೆಗಳ ಮಧ್ಯೆ ಖಂಡಿತಾ ‘ಆಶಾ ನಿಧಿ’ ಕೆಲಸ ಮಾಡಲು ಸಾಧ್ಯವೇ ಇಲ್ಲ. ಈ ತಳಮಟ್ಟದ ಜ್ವಲಂತ ಸಮಸ್ಯೆಗಳು ಅರ್ಥವಾಗಬೇಕೆಂದರೆ ನಮ್ಮ ಅಧಿಕಾರಿಗಳು, ಜನಪ್ರತಿನಿಧಿಗಳು ತಮ್ಮ ಹವಾನಿಯಂತ್ರಿತ ಕಚೇರಿ, ಕಾರುಗಳನ್ನು ಬಿಟ್ಟು ಕನಿಷ್ಠ ವಾರವಾದರೂ ಹಳ್ಳಿಗಳಲ್ಲಿ ವಾಸ್ತವ್ಯ ಹೂಡಬೇಕು.

ಈ ‘ಕೊಂಕಣ ಸುತ್ತಿ ಮೈಲಾರ ಸೇರುವ’ ಕಾಂಪೊನೆಂಟ್ ಮತ್ತು ‘ಆಶಾ ಸಾಫ್ಟ್’ ಪದ್ಧತಿ ಬಿಟ್ಟು ಅವರಿಗೆ ಕನಿಷ್ಠ ತಿಂಗಳಿಗೆ ₹ 6 ಸಾವಿರ ಗೌರವಧನವನ್ನು ನೀಡಿದರೆ ಖಂಡಿತಾ ಸರ್ಕಾರದ ಗೌರವವೂ ಹೆಚ್ಚುತ್ತದೆ. ಇದೇನು ಅಸಂಭವದ ಕೆಲಸವಲ್ಲ. ಏಕೆಂದರೆ ಈಗಾಗಲೇ ಕೇರಳ, ರಾಜಸ್ತಾನ, ಅಸ್ಸಾಂಗಳಲ್ಲಿ ‘ಆಶಾ’ ತಾಯಂದಿರಿಗೆ ಮಾಸಿಕ ನಿಗದಿತ ಗೌರವಧನ ನೀಡಲಾಗುತ್ತಿದೆ. ಅವರಲ್ಲಿ ಸಂತೃಪ್ತಿಯಿಂದ ಕೆಲಸ ನಿರ್ವಹಿಸುತ್ತಿದ್ದಾರೆ. ಅದು ನಮ್ಮ ರಾಜ್ಯದಲ್ಲಿಯೂ ಆಗಬೇಕು. ಏಕೆಂದರೆ ‘ಆಶಾ’ಗಳು ಸೇವೆ ಸಲ್ಲಿಸಲು ಆರಂಭಿಸಿದಾಗಿನಿಂದ ಸಾಂಸ್ಥಿಕ ಹೆರಿಗೆಗಳ ಪ್ರಮಾಣ ಹೆಚ್ಚಿದೆ. ಗರ್ಭಿಣಿ ಹಾಗೂ ಶಿಶು ಮರಣ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಜನರಲ್ಲಿ ಗ್ರಾಮ ಹಾಗೂ ವೈಯಕ್ತಿಕ ನೈರ್ಮಲ್ಯದ ಕುರಿತು ಹೆಚ್ಚಿನ ಅರಿವು ಮೂಡಿದೆ. ಸಾಂಕ್ರಾಮಿಕ ರೋಗಗಳಿಗೆ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುವವರ ಸಂಖ್ಯೆ ಹೆಚ್ಚಾಗಿದೆ. ಬಾಣಂತಿ ಮತ್ತು ಮಗುವಿನ ಸುರಕ್ಷತೆ, ಲಸಿಕಾ ಕಾರ್ಯಕ್ರಮಗಳ ವಿವರ, ಅಪೌಷ್ಟಿಕತೆಗೆ ಚಿಕಿತ್ಸೆಯ ತಿಳಿವಳಿಕೆ ತಕ್ಷಣಕ್ಕೆ ಗೋಚರಿಸುವಷ್ಟು ಪ್ರಮಾಣದಲ್ಲಿ ಹೆಚ್ಚಾಗಿದೆ. ಇದನ್ನು ಆರೋಗ್ಯಾಧಿಕಾರಿಗಳೇ ಹೇಳುತ್ತಿದ್ದಾರೆ. ಸರ್ಕಾರಿ ವರದಿಗಳೂ ಗುಣಾತ್ಮಕ ಬದಲಾವಣೆಯನ್ನು ಸೂಚಿಸುತ್ತಿವೆ.

ಬಾಲ್ಯವಿವಾಹದ ಪರಿಣಾಮ, ಶಿಕ್ಷಣದ ಅವಶ್ಯಕತೆ, ಮದ್ಯಪಾನದ ದುಷ್ಪರಿಣಾಮ, ಹೆಣ್ಣು ಭ್ರೂಣಹತ್ಯೆ... ಹೀಗೆ ಸಾಮಾಜಿಕ ಆರೋಗ್ಯದ ಕುರಿತೂ ‘ಆಶಾ’ ತಾಯಂದಿರು ಜಾಗೃತಿ ಮೂಡಿಸುತ್ತಿದ್ದಾರೆ. ಸೇವಾ ಮನೋಭಾವದಿಂದ, ಗಾಢ ಶ್ರದ್ಧೆ, ಸಮರ್ಪಣಾ ಭಾವದಿಂದ ನಿಗದಿತ ಚೌಕಟ್ಟು ಮೀರಿ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಿರುವ ಇವರನ್ನು ನಿಜಕ್ಕೂ ಸರ್ಕಾರ ಅಭಿನಂದಿಸಬೇಕೇ ಹೊರತು, ಸಮರ್ಪಕ ಗೌರವಧನ ನೀಡದೇ ಸತಾಯಿಸುವುದಲ್ಲ. ಇನ್ನಾದರೂ ‘ಆಶಾ’ ತಾಯಂದಿರ ಮೊರೆ ಸರ್ಕಾರಕ್ಕೆ ಕೇಳಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.