ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಿಮೆ ವೇತನಕ್ಕೆ ಕಾರಣ ರೋಬೊಗಳೇ?

ತಂತ್ರಜ್ಞಾನ ತಂದ ಬದಲಾವಣೆಯ ಫಲವನ್ನು ಹಂಚಿಕೊಳ್ಳಲು ಕಾರ್ಮಿಕರಿಗೆ ಆಗಲಿಲ್ಲ
Last Updated 17 ಮಾರ್ಚ್ 2019, 20:00 IST
ಅಕ್ಷರ ಗಾತ್ರ

ವೇತನ ನಿಂತ ನೀರಿನಂತೆ ಆಗಿರುವುದು ಹಾಗೂ ಅಸಮಾನತೆ ಹೆಚ್ಚುತ್ತಿರುವುದರ ಬಗ್ಗೆ ನಾನು ಈಚೆಗೆ ಪಾಲ್ಗೊಂಡ ಒಂದು ಕಾರ್ಯಕ್ರಮದಲ್ಲಿ ಚರ್ಚೆ ನಡೆಯಿತು. ಈ ಸಮಸ್ಯೆಗೆ ದೊಡ್ಡ ಕಾರಣ ರೋಬೊಗಳು– ಅಂದರೆ ಯಂತ್ರಗಳು ಉತ್ತಮ ಕೆಲಸಗಳನ್ನು ಮನುಷ್ಯನಿಂದ ಕಿತ್ತುಕೊಳ್ಳುತ್ತಿವೆ– ಎಂದು ಅಲ್ಲಿ ಸೇರಿದ್ದ ಹಲವರು ಭಾವಿಸಿದ್ದು ನನ್ನ ಗಮನ ಸೆಳೆಯಿತು. ಚರ್ಚೆಯ ವೇಳೆ ಇದನ್ನು, ವಸ್ತುಸ್ಥಿತಿ ವಿವರಿಸಲು ಯತ್ನಿಸುವ ಸಿದ್ಧಾಂತವನ್ನಾಗಿ ಮಂಡಿಸಲಿಲ್ಲ, ಬದಲಿಗೆ ಎಲ್ಲರಿಗೂ ಗೊತ್ತಿರುವ ವಿಚಾರ ಎಂಬಂತೆ ಮಂಡಿಸಲಾಯಿತು.

ರೋಬೊಗಳು ಮನುಷ್ಯನ ಕೆಲಸವನ್ನು ಕಿತ್ತುಕೊಳ್ಳುತ್ತಿವೆ ಎಂಬ ನಂಬಿಕೆಯು ನೀತಿ ನಿರೂಪಣೆಗೆ ಸಂಬಂಧಿಸಿದ ಚರ್ಚೆಗಳ ಮೇಲೆ ನಿಜವಾದ ಪರಿಣಾಮ ಬೀರುತ್ತದೆ. ಉದಾಹರಣೆಗೆ: ರೋಬೊಗಳ ಪರಿಣಾಮವಾಗಿ ಉದ್ಯೋಗಾವಕಾಶಗಳು ಇನ್ನೂ ಕಡಿಮೆ ಆಗುತ್ತವೆ ಎಂಬ ನಂಬಿಕೆಯು ಎಲ್ಲರಿಗೂ ಕನಿಷ್ಠ ಪಿಂಚಣಿ ಕೊಡಬೇಕು ಎನ್ನುವ ಹೋರಾಟಗಳಿಗೆ ಮೂಲ. ಹಾಗಾಗಿ, ಈ ವಿಚಾರದಲ್ಲಿ ಎಲ್ಲರಿಗೂ ತಿಳಿದಿರುವುದು ಸತ್ಯವಲ್ಲ ಎಂದು ಹೇಳುವುದು ಒಳ್ಳೆಯ ಕೆಲಸ.

ಭವಿಷ್ಯದಲ್ಲಿ ಏನಾಗುತ್ತದೆ ಎನ್ನುವುದನ್ನು ಊಹಿಸುವುದು ಕಷ್ಟದ ಕೆಲಸ. ಮುಂದೊಂದು ದಿನ ರೋಬೊಗಳು ನಮ್ಮೆಲ್ಲ ಕೆಲಸಗಳನ್ನು ಮಾಡಲು ಆರಂಭಿಸಿಬಿಡಬಹುದು. ಆದರೆ, ಕಳೆದ 40 ವರ್ಷಗಳಲ್ಲಿ ಅಮೆರಿಕದ ಕೆಲಸಗಾರರು ಅನುಭವಿಸಿದ್ದಕ್ಕೆಲ್ಲ ದೊಡ್ಡ ಕಾರಣ ಆಟೊಮೇಷನ್ (ಕೆಲಸಗಳು ಸ್ವಯಂಚಾಲಿತ ಆಗಿದ್ದು) ಅಲ್ಲ.

ನಮ್ಮಲ್ಲಿ ನಿಜಕ್ಕೂ ಒಂದು ದೊಡ್ಡ ಸಮಸ್ಯೆ ಇದೆ– ಆದರೆ ಸಮಸ್ಯೆಗೂ ತಂತ್ರಜ್ಞಾನಕ್ಕೂ ಅಂಥ ದೊಡ್ಡ ಸಂಬಂಧವೇನೂ ಇಲ್ಲ. ಈ ಸಮಸ್ಯೆಗೆ ಇರುವ ನಂಟು ರಾಜಕೀಯ ಹಾಗೂ ಅಧಿಕಾರದ ಜೊತೆ. ಹಾಗಾದರೆ, ರೋಬೊ ಅಂದರೆ ಏನು ಎಂಬ ಪ್ರಶ್ನೆಯನ್ನು ಕೇಳಿಕೊಳ್ಳೋಣ. ಅದು ಹಾಲಿವುಡ್ ಸಿನಿಮಾಗಳಲ್ಲಿ ಕಾಣುವ ಮನುಷ್ಯರೂಪಿ ಯಂತ್ರವೇ ಆಗಿರಬೇಕು ಎಂದೇನೂ ಇಲ್ಲ. ಅರ್ಥಶಾಸ್ತ್ರದ ದೃಷ್ಟಿಯಿಂದ ಹೇಳಬೇಕು ಎಂದಾದರೆ; ಮನುಷ್ಯರು ಮಾಡುತ್ತಿದ್ದ ಕೆಲಸವನ್ನು ತಾನು ಮಾಡಲು ತಂತ್ರಜ್ಞಾನವನ್ನು ಬಳಸುವ ಎಲ್ಲವೂ ರೋಬೊಗಳೇ.

ಈ ಅರ್ಥದ ರೋಬೊಗಳು ನಮ್ಮ ಅರ್ಥವ್ಯವಸ್ಥೆಯನ್ನು ಶತಮಾನಗಳಿಂದಲೂ ಬದಲಾಯಿಸುತ್ತಲೇ ಇವೆ. ಅಂದಹಾಗೆ, ಮಹಾನ್ ಅರ್ಥಶಾಸ್ತ್ರಜ್ಞರಲ್ಲಿ ಒಬ್ಬರಾಗಿದ್ದ ಡೇವಿಡ್ ರಿಕಾರ್ಡೊ, ಯಂತ್ರಗಳು ಅರ್ಥವ್ಯವಸ್ಥೆಯಲ್ಲಿ ತರುವ ಭಾರಿ ಬದಲಾವಣೆಗಳ ಬಗ್ಗೆ 1821ರಲ್ಲೇ ಬರೆದಿದ್ದರು!

ಈ ದಿನಗಳಲ್ಲಿ ಜನ ರೋಬೊಗಳಿಂದ ನಡೆಯುವ ಕೆಲಸಗಳ ಬಗ್ಗೆ ಮಾತನಾಡುವಾಗ, ಅದಿರು ಗಣಿಗಾರಿಕೆ ಬಗ್ಗೆಯೇನೂ ಆಲೋಚಿಸಿರುವುದಿಲ್ಲ. ಹೀಗಿದ್ದರೂ, ಅಂದು ಇಂತಹ ಕೆಲಸಗಳಲ್ಲಿ ಬಳಕೆಯಾದ ಯಂತ್ರಗಳು ಕಲ್ಲಿದ್ದಲು ಗಣಿಗಾರಿಕೆಯನ್ನು ಸಂಪೂರ್ಣವಾಗಿ ಬದಲಿಸಿದವು. 1950ರಿಂದ 2000ನೆಯ ಇಸವಿಯ ನಡುವೆ ಕಲ್ಲಿದ್ದಲು ಉತ್ಪಾದನೆ ಸರಿಸುಮಾರು ದುಪ್ಪಟ್ಟಾಯಿತು. ಇದೇ ವೇಳೆ, ಗಣಿಗಾರಿಕೆಯಲ್ಲಿ ತೊಡಗಿದ್ದವರ ಸಂಖ್ಯೆ ಹಲವು ಪಟ್ಟು ಕಡಿಮೆ ಆಯಿತು.

ಬಂದರುಗಳಲ್ಲಿ ಬೃಹತ್ ಪ್ರಮಾಣದ ಸರಕುಗಳನ್ನು ಹಡಗುಗಳಿಗೆ ಏರಿಸುವ, ಅವುಗಳಿಂದ ಇಳಿಸಿಕೊಳ್ಳುವ ಕೆಲಸ ಗಮನಿಸಿ. ಹಿಂದೆಲ್ಲ ಮನುಷ್ಯ ಅಲ್ಲಿ ಹೆಚ್ಚಿನ ಪಾತ್ರ ವಹಿಸುತ್ತಿದ್ದ. 1970ರ ಈಚೆಗೆ ವಿಶ್ವದಲ್ಲಿ ವ್ಯಾಪಾರ ವಹಿವಾಟು ಹೆಚ್ಚಿದೆ. ಆದರೆ ಇದೇ ಅವಧಿಯಲ್ಲಿ ಅಮೆರಿಕದ ಬಂದರುಗಳಲ್ಲಿ ಕಾರ್ಮಿಕರ ಸಂಖ್ಯೆ ಮೂರನೆಯ ಎರಡರಷ್ಟು ಕಡಿಮೆ ಆಗಿದೆ.

ಅಂದರೆ, ತಂತ್ರಜ್ಞಾನದ ಕಾರಣದಿಂದಾಗಿ ಭಾರಿ ಬದಲಾವಣೆ ಬರುವುದು ಹೊಸದೇನೂ ಅಲ್ಲ. ಆದರೆ, ಈ ಬದಲಾವಣೆಯ ಪ್ರಮಾಣ ಹೆಚ್ಚುತ್ತಿದೆಯೇ? ಅಂಕಿ-ಅಂಶಗಳೇನೂ ಅಂತಹ ಸಂದೇಶ ನೀಡುತ್ತಿಲ್ಲ. ರೋಬೊಗಳು ಕಾರ್ಮಿಕರ ಜಾಗವನ್ನು ಸಾಮೂಹಿಕವಾಗಿ ಅತಿಕ್ರಮಿಸಿಕೊಳ್ಳುತ್ತಿವೆ ಎಂದಾಗಿದ್ದರೆ, ಉತ್ಪಾದಕತೆ ಹೆಚ್ಚಾಗಬೇಕಿತ್ತು. ಆದರೆ ವಾಸ್ತವದಲ್ಲಿ, ಉತ್ಪಾದಕತೆ 90ರ ದಶಕದ ಮಧ್ಯಭಾಗದಿಂದ 2000-2010ರ ದಶಕದ ನಡುವಿನ ಅವಧಿಯವರೆಗೆ ಹೆಚ್ಚಾಯಿತು, ಆ ಅವಧಿಯ ನಂತರದಲ್ಲಿ ಉತ್ಪಾದಕತೆ ಅಷ್ಟೊಂದು ಹೆಚ್ಚಾಗಿಲ್ಲ.

ಹಾಗಾಗಿ, ತಂತ್ರಜ್ಞಾನ ತರುವ ಬದಲಾವಣೆ ಎಂಬುದು ಬಹಳ ಹಳೆಯ ಕಥೆ. ತಂತ್ರಜ್ಞಾನವು ತಂದ ಬದಲಾವಣೆಯ ಫಲವನ್ನು ಹಂಚಿಕೊಳ್ಳಲು ಕಾರ್ಮಿಕರಿಗೆ ಆಗದಿರುವುದು ಹೊಸ ವಿಚಾರ.

ಬದಲಾವಣೆಯ ಜೊತೆ ಹೆಜ್ಜೆ ಹಾಕುವುದು ಸುಲಭ ಎಂದು ನಾನು ಹೇಳುತ್ತಿಲ್ಲ. ಕಲ್ಲಿದ್ದಲು ಗಣಿಗಾರಿಕೆ ಕ್ಷೇತ್ರದಲ್ಲಿ ಉದ್ಯೋಗ ಕಡಿಮೆ ಆಗಿದ್ದು ಹಲವು ಕುಟುಂಬಗಳ ಮೇಲೆ ತೀರಾ ಕೆಟ್ಟ ಪರಿಣಾಮ ಉಂಟುಮಾಡಿತು. ಬಂದರು ನಗರಗಳಲ್ಲಿ ಮಾನವ ಉದ್ಯೋಗಕ್ಕೆ ಎದುರಾದ ಕುತ್ತು ಅಲ್ಲಿ 70 ಹಾಗೂ 80ರ ದಶಕದಲ್ಲಿ ಕಂಡುಬಂದ ಸಾಮಾಜಿಕ ಬಿಕ್ಕಟ್ಟಿಗೆ ಖಂಡಿತಾ ಕೊಡುಗೆ ನೀಡಿದೆ.

ತಾಂತ್ರಿಕತೆ ಮುಂದಡಿ ಇಟ್ಟ ಸಂದರ್ಭದಲ್ಲೆಲ್ಲ ಕೆಲವರು ಅದಕ್ಕೆ ಬಲಿಯಾಗಿದ್ದಾರೆ ಎಂಬುದು ನಿಜ. ಆದರೆ, 1970ರ ದಶಕದವರೆಗೆ ಉತ್ಪಾದಕತೆ ಹೆಚ್ಚಿದಂತೆಲ್ಲ ಕಾರ್ಮಿಕರಲ್ಲಿ ಬಹುತೇಕರ ವೇತನ ಕೂಡ ಹೆಚ್ಚಾಗುತ್ತಿತ್ತು. ನಂತರದ ಕಾಲಘಟ್ಟದಲ್ಲಿ ಉತ್ಪಾದಕತೆ ಹಾಗೂ ವೇತನದ ನಡುವಣ ಕೊಂಡಿ ಕಡಿದುಹೋಯಿತು. ಆ ಕೊಂಡಿಯನ್ನು ತುಂಡರಿಸಿದ್ದು ರೋಬೊಗಳಲ್ಲ.

ಹಾಗಾದರೆ, ಆಗ ಏನಾಯಿತು? ವೇತನದ ವಿಚಾರದಲ್ಲಿ ತಮ್ಮ ಬೇಡಿಕೆಗಳನ್ನು ಇರಿಸುವ ಕಾರ್ಮಿಕರ ಶಕ್ತಿ ಕುಂದಿದ್ದು ವೇತನ ನಿಂತ ನೀರಂತೆ ಆಗಲು ಮುಖ್ಯ ಕಾರಣ ಎನ್ನುವುದು ಅರ್ಥಶಾಸ್ತ್ರಜ್ಞರಲ್ಲಿ ಒಮ್ಮತದ ರೂಪದಲ್ಲಿ ವ್ಯಕ್ತವಾಗುತ್ತಿದೆ. ಈ ಒಮ್ಮತ ಇನ್ನೂ ಪೂರ್ಣ ಪ್ರಮಾಣದಲ್ಲಿ ವ್ಯಕ್ತವಾಗಿಲ್ಲ.

ಅಮೆರಿಕದ ಕನಿಷ್ಠ ವೇತನ ಪ್ರಮಾಣವು ಹಣದುಬ್ಬರಕ್ಕೆ ಹೊಂದಿಸಿ ನೋಡಿದರೆ, ಕಳೆದ ಅರ್ಧ ಶತಮಾನದ ಅವಧಿಯಲ್ಲಿ ಮೂರನೆಯ ಒಂದರಷ್ಟು ಕಡಿಮೆ ಆಗಿದೆ. ಇದೇ ಅವಧಿಯಲ್ಲಿ ಕಾರ್ಮಿಕರ ಉತ್ಪಾದಕತೆ ಪ್ರಮಾಣವು ಶೇಕಡ 150ರಷ್ಟು ಹೆಚ್ಚಳ ಆಗಿದೆ. ಈ ವ್ಯತ್ಯಾಸಕ್ಕೆ ಕಾರಣ ರಾಜಕೀಯ ಎನ್ನುವುದನ್ನು ಸರಳವಾಗಿ ಹೇಳಬಹುದಾಗಿದೆ, ಸ್ಪಷ್ಟವಾಗಿ ಗುರುತಿಸಬಹುದಾಗಿದೆ.

1973ರ ಹೊತ್ತಿನಲ್ಲಿ ಖಾಸಗಿ ರಂಗದ ಉದ್ದಿಮೆಗಳ ಶೇಕಡ 25ರಷ್ಟು ಕಾರ್ಮಿಕರ ಮೇಲೆ ಹಿಡಿತ ಹೊಂದಿದ್ದ ಕಾರ್ಮಿಕ ಸಂಘಟನೆಗಳು ಈಗ ಶೇಕಡ 6ರಷ್ಟು ಕಾರ್ಮಿಕರ ಮೇಲೆ ಹಿಡಿತ ಹೊಂದಿವೆ. ಆದರೆ ಬೇರೆ ದೇಶಗಳಲ್ಲಿ ಈ ಪ್ರಮಾಣದ ಕುಸಿತ ಕಂಡುಬಂದಿಲ್ಲ. ಅಮೆರಿಕದ ಕಾರ್ಮಿಕರು 1973ರಲ್ಲಿ ಎಷ್ಟರಮಟ್ಟಿಗೆ ಸಂಘಟಿತರಾಗಿದ್ದರೋ ಕೆನಡಾದ ಕಾರ್ಮಿಕರು ಈಗಲೂ ಅಷ್ಟೇ ಪ್ರಮಾಣದಲ್ಲಿ ಸಂಘಟಿತರಾಗಿ ಇದ್ದಾರೆ. ಸ್ವೀಡನ್, ನಾರ್ವೆ, ಡೆನ್ಮಾರ್ಕ್‌, ಫಿನ್‌ಲ್ಯಾಂಡ್‌, ಐಸ್‌ಲ್ಯಾಂಡ್‌ (ನಾರ್ಡಿಕ್‌) ದೇಶಗಳ ಕಾರ್ಮಿಕ ಸಂಘಟನೆಗಳು ಈಗಲೂ ಮೂರನೆಯ ಎರಡರಷ್ಟು ಕಾರ್ಮಿಕರ ಮೇಲೆ ಪ್ರಭಾವ ಹೊಂದಿವೆ. ಆದರೆ, ಕಾರ್ಮಿಕರನ್ನು ಸಂಘಟಿಸುವ ಮನಃಸ್ಥಿತಿಗೆ ವಿರುದ್ಧವಾದ ಹಾಗೂ ಕಾರ್ಮಿಕ ಸಂಘಟನೆಗಳನ್ನು ಒಡೆಯುವವರ ಪಾಲಿಗೆ ಸ್ನೇಹಿತನಾದ ಅಮೆರಿಕದ ರಾಜಕೀಯ ಸನ್ನಿವೇಶವು ಆ ದೇಶದ ಸ್ಥಿತಿಯನ್ನು ಬೇರೆ ಆಗಿಸಿತು.

ಕಾರ್ಮಿಕ ಸಂಘಟನೆಗಳ ಕುಸಿತವು ಬಹುದೊಡ್ಡ ಬದಲಾವಣೆ ತಂದಿತು. ಈಗ ಮತ್ತೆ ಮೊದಲಿನ ಪ್ರಶ್ನೆಗೆ ಬರೋಣ. ನಾವು ಏಕೆ ರೋಬೊಗಳ ಬಗ್ಗೆ ಇಷ್ಟೆಲ್ಲ ಮಾತನಾಡುತ್ತಿದ್ದೇವೆ? ಇದು ನನ್ನ ಪ್ರಕಾರ ಗಮನ ಬೇರೆಡೆ ಸೆಳೆಯುವ ತಂತ್ರ. ನಿರುದ್ಯೋಗದ ಪ್ರಮಾಣವನ್ನು ಹೆಚ್ಚಿನ ಮಟ್ಟದಲ್ಲಿ ಇರಿಸಿದ ನೀತಿಗಳಿಂದ ಜನರ ಗಮನ ಬೇರೆಡೆ ಸೆಳೆಯಲು ಬಳಸಿದ ‘ಕೌಶಲ ಕೊರತೆ’ ತಂತ್ರದ ರೀತಿಯಲ್ಲೇ ಇದು ಕಾರ್ಮಿಕ ವಿರೋಧಿ ನೀತಿಗಳಿಂದ ಗಮನ ಬೇರೆಡೆ ಸೆಳೆಯುವ ತಂತ್ರ. ಅಮೆರಿಕದ ಕಾರ್ಮಿಕರಿಗೆ ಹೆಚ್ಚಿನ ಸೌಲಭ್ಯಗಳು ಸಿಗಬೇಕು. ಅವರಿಗೆ ಅವು ಸಿಗದಿರುವುದಕ್ಕೆ ಕಾರಣ ರೋಬೊಗಳಲ್ಲ; ಅದಕ್ಕೆ ಕಾರಣ ರಾಜಕೀಯ ನಾಯಕರು.

ದಿ ನ್ಯೂಯಾರ್ಕ್‌ ಟೈಮ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT