ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಂಥಾಲಯಗಳ ಜಡತ್ವ ತೊಡೆಯಬೇಕಿದೆ

ಬದಲಾಗುತ್ತಿರುವ ಓದುಗರ ಆಯ್ಕೆ, ಗ್ರಂಥಾಲಯಗಳ ಕಾರ್ಯವೈಖರಿ ಬಗ್ಗೆ ಸಮೀಕ್ಷೆ ನಡೆಯಲಿ
Last Updated 9 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

‘ನಾನೊಂದು ಗ್ರಂಥವಾಗಿದ್ದರೆ ಅಜ್ಞಾನದ ವಿರುದ್ಧ ಈಜಿ ದಡ ತಲುಪುತ್ತಿದ್ದೆ’ ಎಂಬ  ಪ್ರಸಿದ್ಧ ವಾಕ್ಯ ಪೋರ್ಚುಗೀಸ್ ಭಾಷೆಯ ಪುಸ್ತಕವೊಂದರಲ್ಲಿ ಬರುತ್ತದೆ. ಈ ಪುಸ್ತಕದ ಲೇಖಕರು ಜಾರ್ಜಲೀಡೇರಿಯಾ ಮತ್ತು ಆಂಡ್ರೆ ಲಿಟೀರಿಯಾ. ಈ  ಪುಸ್ತಕವನ್ನು ‘If I were a book’ ಎಂಬ ಹೆಸರಿನಲ್ಲಿ ಇಸಬೆಲ್ಲ ಟೆರ್ರಿ  ಇಂಗ್ಲಿಷ್‌ಗೆ ಭಾಷಾಂತರಿಸಿದ್ದಾರೆ.

ಕೇವಲ 56 ಪುಟಗಳ 24 ವಾಕ್ಯಗಳೊಂದಿಗೆ  ಮುಕ್ತಾಯವಾಗುವ ಈ ಪುಸ್ತಕದಲ್ಲಿನ ಕೆಲವು ವಾಕ್ಯಗಳು ಹೀಗಿವೆ:  ‘ನಾನೊಂದು ಪುಸ್ತಕವಾಗಿದ್ದರೆ, ದಾರಿಯಲ್ಲಿ ಹೋಗುವವರನ್ನು  ಕುರಿತು ನನ್ನನ್ನು ಮನೆಗೆ ಕರೆದುಕೊಂಡು ಹೋಗು ಎನ್ನುತ್ತಿದ್ದೆ’, ‘ನಾನೊಂದು ಪುಸ್ತಕವಾಗಿದ್ದರೆ,  ಪ್ರಾಮಾಣಿಕವಾಗಿ ನಿನಗೆ ತಿಳಿವಳಿಕೆ, ಜ್ಞಾನವನ್ನು ನೀಡುತ್ತಿದ್ದೆ...’ .

ಪ್ರಜಾಪ್ರಭುತ್ವದ ಬುನಾದಿಗೆ, ಬೌದ್ಧಿಕ ವಿಕಾಸಕ್ಕೆ ಪುಸ್ತಕಗಳಲ್ಲಿರುವ ಸೈದ್ಧಾಂತಿಕ ಸಂದೇಶಗಳು ಪ್ರಮುಖ ಕಾರಣ. ನಮ್ಮ ಜ್ಞಾನಾಭಿವೃದ್ಧಿಗೆ ಒತ್ತಾಸೆಯಾಗಿ ಅನೇಕ ಸಂಘ ಸಂಸ್ಥೆಗಳು, ಸ್ಥಳೀಯ ಸರ್ಕಾರಗಳು, ರಾಜಾಶ್ರಯದ ವ್ಯವಸ್ಥೆಗಳು ಹಾಗೂ ಕೆಲವು ಖಾಸಗಿ ವ್ಯಕ್ತಿಗಳಿಂದ ಗ್ರಂಥಾಲಯಗಳು ರೂಪುಗೊಂಡಿವೆ. ಗ್ರಂಥಗಳ ಸಂಗ್ರಹ ಮಾಡಿಕೊಂಡು ಕಾಲಕಾಲಕ್ಕೆ ಓದುವ ಅಭಿರುಚಿ ಹೆಚ್ಚಿಸಿವೆ.

ಒಂದು ಕಾಲಕ್ಕೆ ಕೆಲವೇ ಜನರ ಸ್ವತ್ತಾಗಿದ್ದ ಅಕ್ಷರ ಜ್ಞಾನವು ಸಾರ್ವಜನಿಕರ ಸ್ವತ್ತಾಗಿ ಕ್ರಮೇಣ ಸ್ವಾತಂತ್ರ್ಯ ಚಳವಳಿಯ ಪೂರ್ವದಲ್ಲಿ ಹಾಗೂ ಪ್ರಸ್ತುತ ಪ್ರಜಾಪ್ರಭುತ್ವದ ಕಾಲಘಟ್ಟದಲ್ಲಿ ಶ್ರೀಸಾಮಾನ್ಯನ ಕೈ ಸೇರಲು ಪ್ರಾರಂಭವಾಗಿ ಅಕ್ಷರ ಕ್ರಾಂತಿಗೆ ನಾಂದಿಯಾಯಿತು.

ಸ್ವಾತಂತ್ರ್ಯಾನಂತರ ದೇಶದಲ್ಲಿ ಭಾಷಾವಾರು ರಾಜ್ಯಗಳ ಉದಯವಾದಾಗ ಅನೇಕ ರಾಜ್ಯಗಳು ಗ್ರಂಥಾಲಯ ಕಾಯ್ದೆಗಳನ್ನು ರಚಿಸಿಕೊಂಡು  ಗ್ರಂಥಾಲಯಗಳನ್ನು ಸ್ಥಾಪಿಸಿ ಸಾರ್ವಜನಿಕರಿಗೆ ನಿರಂತರವಾಗಿ ಓದುವ ಹಕ್ಕು ಮತ್ತು ಸ್ವಾತಂತ್ರ್ಯವನ್ನು ಒದಗಿಸಲು ಪ್ರಾರಂಭಿಸಿದವು. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಈ ರೀತಿಯ ವ್ಯವಸ್ಥೆ 18ನೇ ಶತಮಾನದಿಂದಲೇ ಪ್ರಾರಂಭವಾಗಿರುವುದು ಉಲ್ಲೇಖನಾರ್ಹ. ಆದರೆ ನಮ್ಮ ಅನೇಕ ರಾಜ್ಯಗಳು ಇನ್ನೂ ಗ್ರಂಥಾಲಯ ಕಾಯ್ದೆಯನ್ನು ರಚಿಸಿಕೊಂಡಿಲ್ಲ ಎಂಬುದೂ ನಿಜ.

ಕರ್ನಾಟಕವು ಸಾರ್ವಜನಿಕ ಗ್ರಂಥಾಲಯಗಳ ಕಾಯ್ದೆಯನ್ನು 1965ರಲ್ಲಿ ರಚಿಸಿ 1968ರಿಂದ ಜಾರಿಗೆ ತಂದು ಪ್ರಗತಿಪರ ರಾಜ್ಯಗಳ ಪಟ್ಟಿಯಲ್ಲಿದೆ. ಈ ಕಾಯ್ದೆಗೆ ಎರಡು ಮಹತ್ವದ ಜವಾಬ್ದಾರಿಗಳಿವೆ. ಮೊದಲನೆಯದಾಗಿ, ಗ್ರಂಥಾಲಯಗಳ ಸ್ಥಾಪನೆಗೆ ಬೇಕಾಗುವ ಸಂಪನ್ಮೂಲವನ್ನು ಸ್ಥಳೀಯ ಸಂಸ್ಥೆಗಳು ಗ್ರಂಥಾಲಯ ಕರದ ಮೂಲಕ ಸಂಗ್ರಹಿಸುವುದು, ಎರಡನೆಯದಾಗಿ, ಈ ಗ್ರಂಥಾಲಯಗಳನ್ನು ನಿರ್ವಹಿಸಲು ಸರ್ಕಾರದ ಸಂಚಿತ ನಿಧಿಯಿಂದ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುವುದು.

ಗ್ರಂಥಾಲಯ ಇಲಾಖೆಯನ್ನು ಪ್ರಾರಂಭಿಸಿ, ಎಲ್ಲ ಗ್ರಂಥಾಲಯಗಳ ನಿರ್ವಹಣೆ, ಓದುಗರಿಗೆ ಬೇಕಾಗುವ ಸೇವೆ ಎಲ್ಲವೂ ಇದರ ಕೆಳಗೆ ಬರುವಂತೆ ಮಾಡಲಾಗಿದೆ. ಇಲಾಖೆಯ ಜವಾಬ್ದಾರಿಗಳನ್ನು ಹಂತಹಂತವಾಗಿ ನಿರ್ವಹಿಸಲು ಅನುಕೂಲವಾಗುವಂತೆ ಜಿಲ್ಲಾ, ನಗರ ಗ್ರಂಥಾಲಯ ಪ್ರಾಧಿಕಾರಗಳಿವೆ.


ಇಲಾಖೆ ಪ್ರಾರಂಭವಾಗಿ 50 ವರ್ಷಗಳನ್ನು ಪೂರೈಸಿದೆ. ರಾಜ್ಯ ಕೇಂದ್ರ ಗ್ರಂಥಾಲಯ ಸೇರಿ ಒಟ್ಟು 557 ಜಿಲ್ಲಾ, ನಗರ ಗ್ರಂಥಾಲಯಗಳು ಕಾರ್ಯ ನಿರ್ವಹಿಸುತ್ತಿವೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ 5700  ಗ್ರಂಥಾಲಯಗಳನ್ನು ಪ್ರಾರಂಭಿಸಲಾಗಿದೆ. 1970-90ರವರೆಗೂ ಸಾರ್ವಜನಿಕ ಗ್ರಂಥಾಲಯಗಳನ್ನು ಸ್ಥಾಪಿಸಿದ್ದಲ್ಲದೆ ಸ್ಥಳೀಯ ಸಂಸ್ಥೆಗಳು ನಡೆಸುತ್ತಿದ್ದ ಅನೇಕ ಪ್ರತಿಷ್ಠಿತ ಹಾಗೂ ಚಾರಿತ್ರಿಕ ಗ್ರಂಥಾಲಯಗಳನ್ನು ಕಾಯ್ದೆಯ ಚೌಕಟ್ಟಿನಡಿ ಇಲಾಖೆಯು ತನ್ನ ತೆಕ್ಕೆಗೆ ತೆಗೆದುಕೊಂಡಿದ್ದು ಕಂಡುಬರುತ್ತದೆ.

ಈ ಮೂಲಕ ಅಮೂಲ್ಯ ಗ್ರಂಥಗಳ ಸಂರಕ್ಷಣೆ ಹಾಗೂ ನಗರ, ಜಿಲ್ಲೆಗಳ ಕೇಂದ್ರ ಸ್ಥಳಗಳಲ್ಲಿರುವ ಬೆಲೆಬಾಳುವ ಹಳೆಯ ಗ್ರಂಥಾಲಯ ಕಟ್ಟಡಗಳು ಹಾಗೂ ವಿಶಾಲವಾದ ನಿವೇಶನಗಳನ್ನೂ ಸರ್ಕಾರ ಸ್ವಾಧೀನಕ್ಕೆ ತೆಗೆದುಕೊಂಡಿತು.

ನಾವು ಈಗ ನೋಡುತ್ತಿರುವ ಕೃಷ್ಣರಾಜೇಂದ್ರ ಜ್ಯುಬಿಲಿ ಕಟ್ಟಡಗಳು, ಉತ್ತರ ಕರ್ನಾಟಕದಲ್ಲಿನ ಅನೇಕ ಸಂಸ್ಥಾನಗಳು ಹಾಗೂ ಸ್ಥಳೀಯ ಸಂಸ್ಥೆಗಳು ನಡೆಸುತ್ತಿದ್ದ ಗ್ರಂಥಾಲಯಗಳು ಸಾರ್ವಜನಿಕ ಗ್ರಂಥಾಲಯಗಳ ವ್ಯಾಪ್ತಿಗೆ ಬಂದು ಇಲಾಖೆ ಬಲಗೊಂಡಿತು. ಆದರೆ ಎರಡು- ಮೂರು ದಶಕಗಳಿಂದೀಚೆಗೆ ಗ್ರಂಥಾಲಯಗಳ ಸ್ಥಾಪನೆ ಹಾಗೂ ಬಲವರ್ಧನೆ ಪ್ರಕ್ರಿಯೆ ವರ್ಷಂಪ್ರತಿ ಕುಂಠಿತವಾಗುತ್ತಿದೆ. 

ನಗರಗಳು ವಿಸ್ತಾರಗೊಳ್ಳುತ್ತಿವೆ, ಹೊಸ ಹೊಸ ಬಡಾವಣೆಗಳು ತಲೆ ಎತ್ತುತ್ತಿವೆ. ಆದರೂ ಹೊಸ ಗ್ರಂಥಾಲಯ ಶಾಖೆಗಳನ್ನು ಪ್ರಾರಂಭಿಸುವ ಪ್ರಯತ್ನವಂತೂ ಕಾಣುತ್ತಿಲ್ಲ. ವಿಪರ್ಯಾಸವೆಂದರೆ, ಹಳೆಯ ಶಾಖೆಗಳ ಪುಸ್ತಕಗಳ ಸಂಖ್ಯೆ ಕನಿಷ್ಠ ಒಂದು ಲಕ್ಷ ಮೀರಿದೆ. ಅವುಗಳನ್ನು ನಿರ್ವಹಿಸುವ ಕಾಯಂ ಸಿಬ್ಬಂದಿ ನಿವೃತ್ತಿ ಹೊಂದಿದ ನಂತರ ಸಿಬ್ಬಂದಿಯ ಪುನರ್ ನೇಮಕವಾಗದೆ ಸ್ಥಳೀಯವಾಗಿ ಹೊರಗುತ್ತಿಗೆ ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗುತ್ತಿದೆ. ಇದರಿಂದ ಗ್ರಂಥಾಲಯಗಳ ವೃತ್ತಿನೈಪುಣ್ಯ ಹಾಗೂ ಸೇವೆ ಕಣ್ಮರೆಯಾಗುತ್ತಿದೆ.

ಲಭ್ಯವಿರುವ ಅಂಕಿ ಅಂಶಗಳ ಪ್ರಕಾರ, ಶೇಕಡ 30-40ರಷ್ಟು ಸಿಬ್ಬಂದಿಯ ಮೂಲಕ ಜಿಲ್ಲಾ, ನಗರ ಗ್ರಂಥಾಲಯಗಳನ್ನು ನಡೆಸಲಾಗುತ್ತಿದೆ. ಕಾಯಂ ಹುದ್ದೆಗಳಲ್ಲಿ ಇರುವವರು  ತಮಗೆ ಬೇಕಾದ ನಗರ,  ಜಿಲ್ಲಾ ಕೇಂದ್ರಗಳಲ್ಲಿ 2-3 ದಶಕಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ.

ಕೆಲವು ಗ್ರಂಥಾಧಿಕಾರಿಗಳಂತೂ 2-3 ಜಿಲ್ಲೆಗಳು ಹಾಗೂ ನಗರ ಗ್ರಂಥಾಲಯಗಳ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಗ್ರಂಥಾಲಯಗಳ ಆಡಳಿತ ಹಾಗೂ ವೃತ್ತಿಪರತೆ ಅಧೋಗತಿಗೆ ಹೋಗುತ್ತಿದೆ. ಇದರ ಪರಿಣಾಮ ಹೆಚ್ಚಾಗಿ ಓದುಗರ ಮೇಲೆ ಆಗುತ್ತಿದೆ. ಅದಾಗಲೇ ಗ್ರಂಥಾಲಯಗಳತ್ತ  ವಿಮುಖರಾಗುತ್ತಿರುವ ಓದುಗರ ನಡುವೆ ಹೊಸ ಓದುಗರನ್ನು ಆಕರ್ಷಿಸುವಲ್ಲಿ ವಿಫಲವಾಗುತ್ತಾ, ಕೇವಲ ವಾಚನಾಲಯಗಳಾಗಿ ಕಾರ್ಯ ನಿರ್ವಹಿಸುತ್ತಾ, ಬೇಕೆಂದಾಗ ತೆರೆಯುತ್ತಾ, ತೆರೆದರೂ ಸಿಬ್ಬಂದಿಯ ಇಚ್ಛೆಯಂತೆ ಸಮಯ ಪಾಲನೆ ಮಾಡಲಾಗುತ್ತಿದೆ.

ಗ್ರಾಮ ಪಂಚಾಯಿತಿ ಗ್ರಂಥಾಲಯಗಳ ನೇಮಕಾತಿ ಗೌರವ ಸಂಭಾವನೆಯ ಮೂಲಕ ನಡೆಯುತ್ತಿದೆ. ಇವರಿಗೆ ಸೇವಾ ಭದ್ರತೆ ಇಲ್ಲದೆ ಈ ಗ್ರಂಥಾಲಯಗಳನ್ನು ಔಪಚಾರಿಕವಾಗಿ ತೆರೆಯಲಾಗುತ್ತಿದೆ. ಈ  ಸಿಬ್ಬಂದಿ ಬಗ್ಗೆ ಸರ್ಕಾರ ಮೂರು ದಶಕಗಳಿಂದಲೂ ಅನಾದರ ತೋರಿಸುತ್ತಿದೆ. ಖಾಲಿ ಹುದ್ದೆಗಳನ್ನು ತುಂಬದೆ ಅನೇಕ ವರ್ಷಗಳಾಗಿವೆ. ಅವುಗಳ ಭೌತಿಕ ಪರಿಶೀಲನೆ ತುರ್ತಾಗಿ ಆಗಬೇಕಾಗಿದೆ. ಪ್ರತಿವರ್ಷ ಗ್ರಂಥಾಲಯಗಳ ನಿರ್ವಹಣೆಗೆ ಮಾತ್ರ ಹಣ ಬಿಡುಗಡೆಯಾಗುತ್ತಿದ್ದು ಅದು ಬೇರೆ ರೀತಿಯಲ್ಲಿ ಬಳಕೆಯಾಗುತ್ತಿದೆ.

ಒಟ್ಟಿನಲ್ಲಿ 70-90ರ ದಶಕಗಳಲ್ಲಿ ಪರಿಣಾಮಕಾರಿಯಾಗಿ ಪ್ರಾರಂಭಿಸಿದ ಗ್ರಂಥಾಲಯಗಳು, ಅವುಗಳ ಆಸ್ತಿ-ಪಾಸ್ತಿ, ಅಮೂಲ್ಯ ಪುಸ್ತಕಗಳು, ಪೀಠೋಪಕರಣಗಳು, ಗಣಕ ಯಂತ್ರಗಳು, ಜೆರಾಕ್ಸ್ ಯಂತ್ರಗಳು ಹಾಗೂ ಇತರ ವಸ್ತುಗಳು ಜವಾಬ್ದಾರಿಯಿಲ್ಲದ ಸಿಬ್ಬಂದಿಯಿಂದ ಕಾಣೆಯಾಗುತ್ತಿವೆ ಇಲ್ಲವೇ ನಿರುಪಯುಕ್ತವಾಗಿ ನಾಶವಾಗುತ್ತಿವೆ.

ಗ್ರಂಥಾಲಯ ಇಲಾಖೆಯಿಂದ ನೇರವಾಗಿ ಪ್ರತಿವರ್ಷ ಸುಮಾರು ₹ 15 ಕೋಟಿಯಷ್ಟು ಮೌಲ್ಯದ ಪುಸ್ತಕಗಳ ಸಗಟು ಖರೀದಿ  ಹಾಗೂ ಕೋಲ್ಕತ್ತ ರಾಜಾರಾಮ್ ಮೋಹನರಾಯ್ ಪ್ರತಿಷ್ಠಾನದಿಂದ ₹ 10  ಕೋಟಿ  ಮೌಲ್ಯದ ಪುಸ್ತಕಗಳು ನೇರವಾಗಿ ಖರೀದಿಯಾಗುತ್ತಿವೆ. ಈ ಗ್ರಂಥಗಳ ಆಯ್ಕೆ ರಾಜ್ಯ ಮಟ್ಟದ ಆಯ್ಕೆ ಸಮಿತಿಯ ಮೂಲಕ ಆಗುತ್ತಿದೆ. ಹೀಗೆ ಆಯ್ಕೆಯಾದ ಪಟ್ಟಿಯು ಸುಮಾರು 3500 ಶೀರ್ಷಿಕೆಗಳನ್ನು ಒಳಗೊಂಡಿರುತ್ತದೆ.

ಇದರಿಂದ ಕನಿಷ್ಠ 300 ಪ್ರತಿಗಳನ್ನು ಖರೀದಿಸಿ ಜಿಲ್ಲಾ ಕೇಂದ್ರ ಗ್ರಂಥಾಲಯಗಳಿಗೆ ರವಾನಿಸಲಾಗುತ್ತದೆ. 1995ರಿಂದ ಪ್ರಾರಂಭವಾದ ಈ ಪ್ರಕ್ರಿಯೆಯಿಂದಾಗಿ ಒಂದು ಅಂದಾಜಿನ ಪ್ರಕಾರ, ಕನಿಷ್ಠ 10 ಲಕ್ಷ ಪ್ರತಿಗಳು ಪ್ರತಿವರ್ಷ ಗ್ರಂಥಾಲಯಗಳನ್ನು ಸೇರುತ್ತಾ ಹೋಗುತ್ತಿವೆ. ಇದರ ಜೊತೆಯಲ್ಲಿ ಆಯಾ ಗ್ರಂಥಾಲಯ ಪ್ರಾಧಿಕಾರಗಳು 10-15 ಲಕ್ಷ ಪುಸ್ತಕಗಳ ಪ್ರತಿಗಳನ್ನು ಸೇರಿಸುತ್ತಾ ಹೋಗುತ್ತಿವೆ.

ಬೆಂಗಳೂರಿನ ಒಂದೊಂದು ವಲಯದಿಂದ 2 ಕೋಟಿ ರೂಪಾಯಿಯ ಪುಸ್ತಕ ಖರೀದಿ ಪ್ರತಿವರ್ಷ ಆಗುತ್ತಿದೆ. ವಿಪರ್ಯಾಸವೆಂದರೆ ಯಾವುದೇ ಹೊಸ ಗ್ರಂಥಾಲಯ ಸ್ಥಾಪನೆಯಾಗದೆ ಅನೇಕ ವರ್ಷಗಳಾಗಿವೆ. ಇರುವ ಗ್ರಂಥಾಲಯಗಳಿಗೇ ಹೊಸ ಹೊಸ ಪುಸ್ತಕಗಳು ಸೇರ್ಪಡೆಯಾಗುತ್ತಿವೆ. ಅವುಗಳ ವಿಂಗಡಣೆ, ಸಂಗ್ರಹ, ವಿತರಣೆಯ ಚಿತ್ರಣ ಕಲ್ಪಿಸಿಕೊಳ್ಳಲೂ ಅಸಾಧ್ಯವಾದ ಸ್ಥಿತಿಯನ್ನು ತಲುಪಿದೆ.

ತಮ್ಮ ಪುಸ್ತಕಗಳನ್ನು ಗ್ರಂಥಾಲಯಗಳಿಗೆ ತೂರಿಸಿ ಹಣ ಮಾಡಿಕೊಳ್ಳಲು ಹವಣಿಸುವ ವ್ಯಾಪಾರಿಗಳ ದೊಡ್ಡ ಜಾಲವೇ ಸದಾ ಸಿದ್ಧವಾಗಿರುತ್ತದೆ. ಸ್ಥಳೀಯ ಗ್ರಂಥಾಲಯ ಪ್ರಾಧಿಕಾರಗಳು ಕಾಟಾಚಾರಕ್ಕೆ ವರ್ಷಕ್ಕೊಮ್ಮೆ ಸೇರಿ ಒಂದು ಬಜೆಟ್‌ ತಯಾರಿಸಿಕೊಟ್ಟರೆ ಜವಾಬ್ದಾರಿ ಮುಗಿಯಿತು ಎಂದು ಭಾವಿಸಿವೆ. ಕೇಂದ್ರ ಗ್ರಂಥಾಲಯ ಪ್ರಾಧಿಕಾರದ ಸಮಿತಿಗೆ ಶಿಕ್ಷಣ ಸಚಿವರು  ಅಧ್ಯಕ್ಷರಾಗಿರುತ್ತಾರೆ.

ವರ್ಷಕ್ಕೊಮ್ಮೆ ಅನುಕೂಲಕ್ಕೆ ತಕ್ಕಂತೆ ಸಭೆ ನಡೆಯುತ್ತದೆ. ಪ್ರಾಧಿಕಾರದ ಸದಸ್ಯರ ಬದಲಾವಣೆ ನಿಗದಿತ ಸಮಯಕ್ಕೆ ಆಗದೆ ಎಷ್ಟೋ ವರ್ಷಗಳಾಗಿವೆ. ಇದನ್ನು ಇಲಾಖೆಯಾಗಲಿ ಸಾರ್ವಜನಿಕರಾಗಲಿ ಸರ್ಕಾರವಾಗಲಿ ಗಂಭೀರವಾಗಿ ಪರಿಗಣಿಸಿಲ್ಲ. ಇದರಿಂದ ಮೂಲ ಕಾಯ್ದೆಯ ಆಶಯ ಕುಸಿಯುತ್ತಿದೆ.

ಗ್ರಂಥಾಲಯ ಇಲಾಖೆ ಪ್ರಾರಂಭವಾದಾಗಿನಿಂದಲೂ ಪುಸ್ತಕಗಳ ಆಯ್ಕೆಯ ಬಗ್ಗೆ ಸಮಾಧಾನಕರ ಅಥವಾ ಟೀಕೆಗಳಿಲ್ಲದ ವ್ಯವಸ್ಥೆಯಿಲ್ಲ. ಇದರಲ್ಲಿ ಎರಡು ಆಯಾಮಗಳಿವೆ. ಇಲಾಖೆಗೆ ಓದುಗರು ಮುಖ್ಯವೋ ಅಥವಾ ಲೇಖಕರ ಕೃತಿಗಳು ಹಾಗೂ ಅವುಗಳನ್ನು ಪ್ರಕಟಿಸುವ ವ್ಯಕ್ತಿಗಳು, ಸಂಸ್ಥೆಗಳು ಮುಖ್ಯವೋ ಎಂಬ ದ್ವಂದ್ವ ಇದೆ.

ಇಲಾಖೆ ಪ್ರಾರಂಭವಾದ ಕೆಲವೇ ವರ್ಷಗಳಲ್ಲಿ ಓದುಗರ ಆಯ್ಕೆ ಮೇಲುಗೈ ಸಾಧಿಸಿತ್ತು. ಅವರಿಗೆ ಬೇಕಾದ ಪುಸ್ತಕಗಳ ಪೂರೈಕೆ ಆಯಾ ಪ್ರಾಧಿಕಾರಗಳು ಹಾಗೂ ಮುಖ್ಯ ಗ್ರಂಥಾಲಯಾಧಿಕಾರಿಗಳ ವಿವೇಚನೆಯಲ್ಲಿದ್ದು, ಗ್ರಂಥಾಲಯಗಳು ಓದುಗ ಸಮುದಾಯವನ್ನೇ ಸೃಷ್ಟಿಸಿದ್ದವು.

ಆದಾಗ್ಯೂ ಕೆಲವು ನಗರಗಳಲ್ಲಿ ಪ್ರಖ್ಯಾತ ಸಂಸ್ಥೆಗಳ ಕೆಲವೇ ವರ್ಗಗಳು ಗ್ರಂಥಾಲಯಗಳ ಅನುಕೂಲವನ್ನು ಪಡೆಯುತ್ತಿದ್ದವು. ಮುದ್ರಣ ಮಾಧ್ಯಮದ ಆಧುನೀಕರಣ, ಹೊಸ ಲೇಖಕರ ಆಗಮನದಿಂದ 70-80ರ ದಶಕದಲ್ಲಿ ಪ್ರಕಾಶನ ವ್ಯವಸ್ಥೆಯಲ್ಲಿ ಅನೇಕ ಬದಲಾವಣೆಗಳಾದವು.

ಪುಸ್ತಕೋದ್ಯಮವು ಸಮಾಜದ ಕೆಲವೇ ನಿರ್ದಿಷ್ಟ ಜನರ ತೆಕ್ಕೆಯಿಂದ ಸಾಮಾನ್ಯ ಲೇಖಕನೂ ಪ್ರಕಾಶಕನಾಗಿ, ಸಮಾಜದ ಬೇರೆ ಬೇರೆ ವರ್ಗಗಳಿಂದ ಅನೇಕ ಯುವಕರು ಪುಸ್ತಕ ಪ್ರಕಾಶನ ವ್ಯವಸ್ಥೆಯನ್ನು ಪ್ರವೇಶಿಸಿದರು. ಹಲವರು  ಪೈಪೋಟಿಯಿಂದ ಪ್ರಕಾಶನ ಸಂಸ್ಥೆಗಳನ್ನು ಪ್ರಾರಂಭಿಸಿ ಪುಸ್ತಕ ಪ್ರಕಟಣಾ ಪ್ರಪಂಚಕ್ಕೆ ಬಂದರು.

ಕೆಲವು ಪಟ್ಟಭದ್ರ ಪ್ರಕಾಶಕರು ಹಾಗೂ ಹೊಸ ಪ್ರಕಾಶಕರ ಪೈಪೋಟಿಯಿಂದ ಗ್ರಂಥಾಲಯ ಇಲಾಖೆಯ ಪುಸ್ತಕ ಖರೀದಿ ವ್ಯವಸ್ಥೆ ಓದುಗರನ್ನು ಮರೆತು ಪ್ರಕಾಶಕ, ಲೇಖಕರ ಕೃಪಾಪೋಷಿತ ಸಂಸ್ಥೆಯಾಗಿ ಪರಿವರ್ತನೆಯಾಗಿ ಇಂದಿನ ಸ್ಥಿತಿ ತಲುಪಿದೆ.


ಓದುಗರು ಅಪೇಕ್ಷಿಸುವ ಅಥವಾ ಗ್ರಂಥಾಲಯಗಳಲ್ಲಿ ಇಡಲೇಬೇಕಾದ ಪುಸ್ತಕಗಳನ್ನು ಸಂಗ್ರಹಿಸುವ ವಿಧಾನ ಮರೆಯಾಗುತ್ತಿದೆ. ಆಯ್ಕೆ ಸಮಿತಿಯು ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡುವಂತೆ, ಆಯ್ಕೆಗಾಗಿ ಸ್ವೀಕರಿಸಿದ ಗ್ರಂಥಗಳನ್ನು ರಾಶಿ ಹಾಕಿಕೊಂಡು ಆಯ್ಕೆಯೆಂಬ ಸಂಪ್ರದಾಯವನ್ನು ಯಾಂತ್ರಿಕವಾಗಿ ಪಾಲಿಸುತ್ತಿದೆ. ಗ್ರಂಥಾಲಯಗಳ ಕಾರ್ಯವೈಖರಿ ಹಾಗೂ ಬದಲಾಗುತ್ತಿರುವ ಓದುಗರ ಆಯ್ಕೆಯ ಬಗ್ಗೆ ಯಾವುದೇ ಸಂಶೋಧನೆ ಅಥವಾ ಸಮೀಕ್ಷೆಗಳನ್ನು ಇಲಾಖೆ ಮಾಡುತ್ತಿಲ್ಲ. ಈಗಲಾದರೂ ಈ ಕಾರ್ಯವನ್ನು ಇಲಾಖೆ ಕೈಗೆತ್ತಿಕೊಳ್ಳಬೇಕು.


ಆಯ್ಕೆಯಾದ ರಾಶಿರಾಶಿ ಗ್ರಂಥಗಳನ್ನು ಹೇಗಾದರೂ ಗ್ರಂಥಾಲಯಗಳಿಗೆ ತೂರಿಸಬೇಕೆಂಬ ಹೊಸ ಲೇಖಕರ, ಪ್ರಕಾಶಕರ ಪಟ್ಟಿ ಬೆಳೆಯುತ್ತಿದೆ. ಖರೀದಿಸಿದ ಪುಸ್ತಕಗಳು ರಾಜಧಾನಿಯಿಂದ ರಾಜ್ಯದ ಕೇಂದ್ರ ಗ್ರಂಥಾಲಯಗಳಿಗೆ ಹೊರಗುತ್ತಿಗೆಯ ಮೂಲಕ ಸರಬರಾಜಾಗುತ್ತಿವೆ.

ಅಲ್ಲಿಂದ ಏನಾಗುತ್ತಿವೆ ಎಂಬುದು ತಿಳಿಯುತ್ತಿಲ್ಲ. ಹೊಸ ಪುಸ್ತಕಗಳನ್ನು ಪ್ರದರ್ಶನಕ್ಕೆ ಇಡುವಲ್ಲಿ ಹಾಗೂ   ಕಂಪ್ಯೂಟರೀಕರಣದ ಮೂಲಕ ಅವುಗಳನ್ನು ದಾಖಲಿಸುವಲ್ಲಿ ಗ್ರಂಥಾಲಯಗಳು ಸಂಪೂರ್ಣ ವಿಫಲವಾಗಿವೆ. ಒಂದು ಅಂಕಿ ಅಂಶದ ಪ್ರಕಾರ ಇತ್ತೀಚಿನ ವರ್ಷಗಳಲ್ಲಿ ಸುಮಾರು 50 ಕೋಟಿ ರೂಪಾಯಿಯ ಪುಸ್ತಕ ಖರೀದಿಯಾಗುತ್ತಿದೆ. ಇವುಗಳನ್ನು ಪುಸ್ತಕ ವ್ಯಾಪಾರಿಗಳ ಗುಂಪು ವಿವಿಧ ತಂತ್ರಗಾರಿಕೆಯಿಂದ ಗ್ರಂಥಾಲಯಗಳ ಒಳಗೆ ಸೇರಿಸುವಲ್ಲಿ ಯಶಸ್ವಿಯಾಗಿದೆ.

ಹೀಗೆ ಬಹುತೇಕ ಸಾರ್ವಜನಿಕ ಗ್ರಂಥಾಲಯಗಳು ವೃತ್ತಿನೈಪುಣ್ಯ ಸಾಧಿಸುವಲ್ಲಿ ಸಂಪೂರ್ಣ ವಿಫಲವಾಗಿ ಜಡತ್ವದತ್ತ ಸಾಗುತ್ತಿವೆ.
ಲೇಖಕ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿವೃತ್ತ  ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT