ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರ ಶಿಕ್ಷಣ: ಸುಧಾರಣೆಗೆ ದೊರೆತ ಸದವಕಾಶ

Last Updated 7 ಜನವರಿ 2015, 20:27 IST
ಅಕ್ಷರ ಗಾತ್ರ

ಶಿಕ್ಷಕರ ಶಿಕ್ಷಣಕ್ಕೆ ಸಂಬಂಧಿಸಿದಂತೆ ಚರ್ಚೆಗಳು ಆರಂಭವಾಗಿ ವರ್ಷಗಳುರುಳಿದವು. ಬೋಧನೆಯ ಗುಣಮಟ್ಟ ಹೆಚ್ಚುವುದಕ್ಕೆ ಶಿಕ್ಷಕರ ಶಿಕ್ಷಣದ ಮಾದರಿಯೂ ಬದಲಾಗಬೇಕು ಎಂಬುದು ಎಲ್ಲರೂ ಒಪ್ಪುವ ನಿಲುವು. ಇದಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿ (National Council For Teacher Education) ಕಳೆದ ವರ್ಷದ ಕೊನೆಯಲ್ಲಿಯೇ ಶಿಕ್ಷಕರ ಶಿಕ್ಷಣ ಮತ್ತು ತರಬೇತಿಗೆ ಸಂಬಂಧಿಸಿದ ಪ್ರಸ್ತಾವಗಳನ್ನು ಮುಂದಿಟ್ಟಿತ್ತು.  ಮಂಗಳವಾರ (ಜ.6) ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರ ನೇತೃತ್ವದಲ್ಲಿ ನಡೆದ ರಾಜ್ಯಗಳ ಶಿಕ್ಷಣ ಸಚಿವರ ಸಭೆಯಲ್ಲಿ ಈ ವಿಚಾರದ ಚರ್ಚೆ ನಡೆಯಿತು. ಈ ವರ್ಷದಿಂದ ಜಾರಿಯಾಗಬೇಕಾದ ಸುಧಾರಣೆಗಳು ಹೀಗಿವೆ: ಸದ್ಯ ಒಂದು ವರ್ಷದ ಅವಧಿಯ  ಬಿ.ಎಡ್ ಮತ್ತು ಎಂ.ಎಡ್ ಕೋರ್ಸ್‌ಗಳನ್ನು ಎರಡು ವರ್ಷದ ಕೋರ್ಸ್‌­ಗಳ­ನ್ನಾಗಿ ಮಾರ್ಪಡಿಸಬೇಕು. ಪದವಿಯ ಜೊತೆಗೇ ಸೇರಿಕೊಂಡಿರುವ ಸಮಗ್ರ ಶಿಕ್ಷಕರ ಶಿಕ್ಷಣ ಕೋರ್ಸ್‌­ಗಳನ್ನು ಪರಿಚಯಿಸಬೇಕು. ಅಂದರೆ ನಾಲ್ಕು ವರ್ಷಗಳ ಅವಧಿಯ ಬಿ.ಎ–ಬಿ.ಎಡ್, ಬಿ.ಎಸ್ಸಿ–ಬಿ.ಎಡ್ ಕೋರ್ಸ್‌ಗಳನ್ನು ಆರಂಭಿಸು­ವುದು. ಸದ್ಯ ದೂರಶಿಕ್ಷಣದಲ್ಲಿಯೂ ಎಂ.ಎಡ್ ಪದವಿಯನ್ನು ಪಡೆಯಲು ಸಾಧ್ಯವಿದೆ. ಇದನ್ನು ರದ್ದುಪಡಿಸುವುದು. ಹಾಗೆಯೇ ಬೋಧನೆಯಲ್ಲಿ ತರಬೇತಿ ಪಡೆಯದ ಅಧ್ಯಾಪಕರಿಗೆ ಅರೆಕಾಲಿಕ ಕೋರ್ಸ್‌ಗಳನ್ನು ರೂಪಿಸುವುದು.

ಈ ಸುಧಾರಣಾ ಕ್ರಮಗಳಿಗೊಂದು ಹಿನ್ನೆಲೆಇದೆ. ೨೦೦೯ರಲ್ಲಿ ಶಿಕ್ಷಕರ ಶಿಕ್ಷಣಕ್ಕಾಗಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ರೂಪುಗೊಂಡ ಮೇಲೆ ಅದರಲ್ಲಿರುವ ಆಶಯಗಳನ್ನು ಕಾರ್ಯ­ರೂಪಕ್ಕೆ ತರುವ ದಿಸೆಯಲ್ಲಿ ಸುಪ್ರೀಂ ಕೋರ್ಟಿನ ನಿರ್ದೇಶನದಂತೆ ನ್ಯಾಯಮೂರ್ತಿ ಜೆ.ಎಸ್. ವರ್ಮ ಅವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಆಯೋಗವೊಂದನ್ನು ರಚಿಸಲಾಯಿತು. ಇದು ಆಗಸ್ಟ್ ೨೦೧೨ರಲ್ಲಿ ವರದಿಯನ್ನು ಸಲ್ಲಿಸಿತು. ಇದನ್ನು ಸುಪ್ರೀಂ ಕೋರ್ಟ್ ಅಂಗೀಕರಿಸಿ, ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿಗೆ ಅನುಷ್ಠಾನ ಪ್ರಕ್ರಿಯೆಯನ್ನು ಸೂಚಿಸುವಂತೆ ಕೇಳಿತು. ಅದರ ಅನ್ವಯ ಸರ್ಕಾರ ಈ ಕ್ರಮ­ಗಳನ್ನು ಕೈಗೊಳ್ಳುತ್ತಿದೆ.   ಕೋರ್ಸ್‌ನ ಅವಧಿಯ ವಿಸ್ತರಣೆ ೨೦೧೫–೧೬ರಿಂದ ಆರಂಭವಾಗಿ, ಐದು ವರ್ಷ­ಗಳಲ್ಲಿ ಅನುಷ್ಠಾನಗೊಳಿಸಬೇಕೆಂದು ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿ ರಚಿಸಿದ್ದ ‘ಪೂನಮ್ ಬಾತ್ರ ಸಮಿತಿ’ಯೂ ಶಿಫಾರಸು ಮಾಡಿತ್ತು.

ಕೋರ್ಸ್‌ನ ಅವಧಿಯನ್ನು ಎರಡು ವರ್ಷಕ್ಕೆ ಹೆಚ್ಚಿಸುವುದರಿಂದ ಮಾತ್ರ ಶಿಕ್ಷಕರ ಶಿಕ್ಷಣ ಕ್ಷೇತ್ರದಲ್ಲಿ ಗುಣಾತ್ಮಕ ಬದಲಾವಣೆ ಉಂಟಾಗುತ್ತದೆಯೆಂದು ನಿರೀಕ್ಷಿಸಬಹುದೇ? ಸೇವಾಪೂರ್ವ ಶಿಕ್ಷಕರ ಸಿದ್ಧತೆಗೆ ಸಂಬಂಧಿಸಿದಂತೆ, ಈಗಿರುವ ಸಾಂಸ್ಥಿಕ ನೆಲೆಗಟ್ಟು ಮತ್ತು ಈ ಪ್ರಕ್ರಿಯೆಯಲ್ಲಿ ತೊಡಗಿ­ಕೊಂಡ ಪ್ರಮುಖ ಪಾತ್ರಧಾರಿಗಳ ಧೋರಣೆ, ಈ ಬದಲಾವಣೆಗಳನ್ನು ಎಷ್ಟರ­ಮಟ್ಟಿಗೆ ಸ್ವಾಗತಿಸುತ್ತವೆ? ಎಂಬ ಪ್ರಶ್ನೆಗಳ ಜೊತೆಗೇ ಈ ಸುಧಾರಣೆಗಳನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ.

ಸದ್ಯ ಬೋಧಕರ ಶಿಕ್ಷಣ ವ್ಯವಸ್ಥೆಯಲ್ಲಿ ಬಳಸುತ್ತಿರುವ ಪಠ್ಯಕ್ರಮ, ಬೋಧನಾ ವಿಧಾನಗಳು ಇಂದಿನ ನೈಜ ಅಗತ್ಯವನ್ನು ಪರಿಗಣಿಸದೆ, ದಶಕಗಳ ಹಿಂದಿನ ಪದ್ಧತಿಯನ್ನೇ ಅನುಸರಿಸುತ್ತಿವೆ.  ರಾಜ್ಯ­ದೆಲ್ಲೆಡೆ ಶಿಕ್ಷಕರ ಶಿಕ್ಷಣ ಸಂಸ್ಥೆಗಳು ವ್ಯಾಪಕವಾಗಿ ಹಬ್ಬಿದ್ದು, ಅವುಗಳಲ್ಲಿ ಹಲವು ಮೂಲಭೂತ ಸೌಕರ್ಯಗಳಿಲ್ಲದೆ ಬಳಲುತ್ತಾ, ಮೌಲ್ಯ ಕುಂದಿದ ಬಿ.ಎಡ್ ಪದವಿಗಳನ್ನು ಮಾರಾಟ ಮಾಡುತ್ತಿವೆ.

ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ಹಲವು ವರ್ಷಗಳಿಂದ ಚಾಲನೆ ದೊರೆಯದೆ ಶೈಕ್ಷಣಿಕ ಪದವಿಗಳನ್ನು ಪಡೆದ ಸಾವಿರಾರು ಮಂದಿ ನಿರುದ್ಯೋಗಿಗಳಾಗಿರುವುದರಿಂದ, ಕಾಲೇಜು­ಗಳು ವಿದ್ಯಾರ್ಥಿಗಳ ಬರುವಿಕೆಗಾಗಿ ಹಾತೊರೆಯುತ್ತಿವೆ. ಇತ್ತೀಚಿಗೆ ಬಿ.ಕಾಂ., ಬಿ.ಬಿ.ಎಂ ಇನ್ನಿತರ ಪದವಿಗಳನ್ನು ಪಡೆದ ವಿದ್ಯಾರ್ಥಿ­ಗಳಿಗೂ ಬಿ.ಎಡ್ ಸೇರುವ ಅವಕಾಶ ಕಲ್ಪಿಸಲಾಗಿದೆ. ಇಂಥ ಸ್ಥಿತಿಯಲ್ಲಿ ಸಂಶೋಧನೆ­ಯನ್ನು ನಿರೀಕ್ಷಿಸುವುದೇ ತಪ್ಪಾಗಿಬಿಡುತ್ತದೆ. ಈ ವ್ಯವಸ್ಥೆ ಸೃಷ್ಟಿಸಿರುವ ಶಿಕ್ಷಕರಲ್ಲಿ ಅಗತ್ಯಕ್ಕನುಗುಣ­ವಾದ ಜ್ಞಾನ ವಿಸ್ತಾರ, ಪರಿಣತಿಯ ಕೊರತೆ ಎದ್ದು ಕಾಣಿಸುತ್ತದೆ. ಅದರಲ್ಲೂ ಗಣಿತ, ವಿಜ್ಞಾನ, ಇಂಗ್ಲಿಷ್ ಮತ್ತು ಸಮಾಜ ವಿಜ್ಞಾನ ವಿಷಯಗಳಲ್ಲಿ ಗುಣಮಟ್ಟದ ಬೋಧಕರ ಕೊರತೆಯಿದೆ. ವೃತ್ತಿಪರತೆಯೂ ತೀರಾ ಕಡಿಮೆ.

ಈ ಸ್ಥಿತಿ ಬದಲಾಗದಿದ್ದರೆ ನಮ್ಮ ಶೈಕ್ಷಣಿಕ ಸ್ಥಿತಿಗತಿ ಬದಲಾಗುವುದಿಲ್ಲ. ಆದರೆ ಇದಕ್ಕೆ ಕೇವಲ ಕೋರ್ಸ್‌ಗಳ ಅವಧಿಯನ್ನು ಹೆಚ್ಚಿಸಿದರಷ್ಟೇ ಸಾಕೇ? ಎನ್‌ಸಿಟಿಇಯ ಮಾದರಿ ಬಿ.ಎಡ್ ಪಠ್ಯಕ್ರಮವು ನಿರ್ದಿಷ್ಟ ವಿಷಯ ಜ್ಞಾನ, ಮಾನವ ಸಂಪನ್ಮೂಲ ಅಭಿವೃದ್ಧಿ, ಬೋಧನಾ ವಿಧಾನದ ಬಗೆಗಿನ ಅಧ್ಯಯನ ಮತ್ತು ಸಂವಹನ ಕೌಶಲ­ಗಳನ್ನು ಒಳಗೊಂಡಿರುತ್ತವೆ. ಇವು ಶೈಕ್ಷಣಿಕ ದೃಷ್ಟಿ­ಕೋನ, ಪಠ್ಯ ಮತ್ತು ಬೋಧನಾ ವಿಧಾನಗಳ ಬಗೆಗಿನ ಅಧ್ಯಯನ ಹಾಗೂ ಕಾರ್ಯಕ್ಷೇತ್ರ­ದೊಂದಿಗೆ ನಿರಂತರ ಸಂಪರ್ಕ ಈ ಮೂರು ಮುಖ್ಯ ಪಠ್ಯ ವಿಷಯಗಳಡಿ ಅಭ್ಯಾಸಕ್ಕೆ ಒಳಗಾಗುತ್ತವೆ. ಈ ಸೈದ್ಧಾಂತಿಕ ವಿಚಾರಗಳು ಕಾರ್ಯರೂಪಕ್ಕೆ ಬರುವ ಹೊತ್ತಿಗೆ ಏನಾಗುತ್ತವೆ?

ಮುಂದಿನ ವರ್ಷದಿಂದ ಬಿ.ಎಡ್ ಅಧ್ಯಯನದ ಅವಧಿ ಹೆಚ್ಚಾಗುತ್ತದೆ ಎಂಬ ಕಾರಣಕ್ಕೆ ಈ ವರ್ಷದ ಬಿ.ಎಡ್ ದಾಖಲಾತಿ ಪ್ರಮಾಣ ಹೆಚ್ಚಾಗಿದೆ ಎಂಬ ವಾಸ್ತವವೇ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡಲು ಹೊರಟಿರುವವರು ಸುಧಾರಣೆಯನ್ನು ಹೇಗೆ ಸ್ವಾಗತಿಸುತ್ತಿದ್ದಾರೆ ಎಂಬುದನ್ನು ಸೂಚಿಸುತ್ತಿದೆ. ಇಂಥದ್ದೊಂದು ಬದಲಾವಣೆಯ ವಿಚಾರ ವರ್ಷದಿಂದಲೇ ಚರ್ಚೆಯಲ್ಲಿದ್ದರೂ ಇದಕ್ಕೆ ಅಗತ್ಯವಿರುವ ಪ್ರಾಥಮಿಕ ತಯಾರಿಯಲ್ಲಿ ವಿಶ್ವವಿದ್ಯಾಲಯಗಳಿಂದ ಆರಂಭಿಸಿ ಕಾಲೇಜುಗಳ ತನಕದ ಯಾರೂ ತೊಡಗಿಸಿಕೊಂಡಂತೆ ಕಾಣಿಸು­ವುದಿಲ್ಲ. ಸುಧಾರಣೆಯು ಅಧ್ಯಯನದ ಅವಧಿಯ ಹೆಚ್ಚಳದಲ್ಲೇ ಕೊನೆಗೊಂಡರೆ ಹೇಗೆ?

ಇಂಥದ್ದೊಂದು ಸ್ಥಿತಿ ಉದ್ಭವಿಸದೇ ಇರಲು ಹಾಗೂ ಶಿಕ್ಷಕರ ಶಿಕ್ಷಣವನ್ನು ಪರಿಣಾಮಕಾರಿಯಾಗಿಸಲು ಸರ್ಕಾರ  ಕೆಲವು ಕ್ರಮಗಳನ್ನು ಕೈಗೊಳ್ಳುವುದಕ್ಕೆ ಮುಂದಾಗಬೇಕು. ಪಾಶ್ಚಾತ್ಯ ಮತ್ತು ಭಾರತೀಯ ಮೂಲದ ವಿವಿಧ ತತ್ವಜ್ಞಾನಿ ಚಿಂತಕರು ಪ್ರಸ್ತುತಪಡಿಸಿರುವ ಚಿಂತನೆಗಳ ಮೂಲಕ ಶಿಕ್ಷಣದ ಮೂಲಭೂತ ಗುರಿಗಳನ್ನು ಅರ್ಥೈಸಿಕೊಳ್ಳುವಾಗ ಪ್ರಸ್ತುತ ಕಾಲಮಾನದ ಸಾಮಾಜಿಕ ನೆಲೆಯೊಂದಿಗೆ ಸಮೀಕರಿಸಿ ಪರೀಕ್ಷಿಸುವಂತಾಗಬೇಕು. ವಾಸ್ತವದ ತರಗತಿ ಕೋಣೆಯಲ್ಲಿ ಅನುಷ್ಠಾನಗೊಳ್ಳುವ ‘ನಲಿಕಲಿ’ ಮುಂತಾದ ವಿಧಾನಗಳನ್ನು ಸೇವಾಪೂರ್ವ ತರಬೇತಿ ವಿಧಾನಗಳಲ್ಲಿ ಜಾರಿಗೊಳಿಸಬೇಕು.

ಎನ್‌ಸಿಟಿಇ ಮಾರ್ಗಸೂಚಿ ಅನ್ವಯ ಬಿ.ಎಡ್ ಮತ್ತು ಎಂ.ಎಡ್ ಪಠ್ಯಕ್ರಮಗಳ ಪುನರ್‌ ರಚನೆ ಮಾಡುವ ಮೊದಲು ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳ ಪ್ರತಿನಿಧಿಗಳನ್ನೊಳಗೊಂಡ ‘ಪಠ್ಯಕ್ರಮ ಪುನರ್‌ ರಚನಾ ತಂಡ’ವನ್ನು ರಚಿಸ­ಬೇಕು.  ಅದರಲ್ಲಿ, ಪ್ರಾದೇಶಿಕ ಶೈಕ್ಷಣಿಕ ಸಂಸ್ಥೆ (ಆರ್ಐಇ),  ಬಾಹ್ಯ ಶಿಕ್ಷಣ ತಜ್ಞರು, ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಇರಬೇಕು. ಈ ತಂಡ ಇಡೀ ರಾಜ್ಯಕ್ಕೆ ಅನ್ವಯಿಸಲು ಸಾಧ್ಯವಿರುವ ಒಂದು ಪಠ್ಯಕ್ರಮವನ್ನು ರೂಪಿಸಬೇಕು. ಆದರೆ ಇದು ವಿಶ್ವವಿದ್ಯಾಲಯಗಳ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳದೆ ಆಯಾ ವಿಶ್ವವಿದ್ಯಾಲಯಗಳು ಪರೀಕ್ಷೆ ದೃಷ್ಟಿಯಿಂದ ನಿರ್ದಿಷ್ಟ ಪಠ್ಯಕ್ರಮವನ್ನು ಆಯ್ಕೆ ಮಾಡಿಕೊಳ್ಳುವಂಥ ವ್ಯವಸ್ಥೆಯನ್ನು ಖಾತರಿಪಡಿಸಬೇಕು. ಅಂತಿಮವಾಗಿ ವಿಷಯ ಮತ್ತು ಬೋಧನಾ ವಿಧಾನಗಳೆರಡನ್ನೂ ಮೇಳೈಸಿ, ಮೌಲ್ಯಮಾಪನವನ್ನೂ ಇದರ ಭಾಗ­ವಾಗಿಯೇ ನೋಡುವಂತೆ ಹಾಗೂ ಅಭ್ಯಸಿಸು­ವಂತೆ ಪಠ್ಯಕ್ರಮವನ್ನು ರೂಪಿಸಬೇಕು. ನಿರಂತರ ಆಂತರಿಕ ಮೌಲ್ಯಮಾಪನಕ್ಕೆ ಶೇಕಡ 20ರಿಂದ 30 ಅಂಕಗಳನ್ನು, ಬಾಹ್ಯ ಪರೀಕ್ಷೆಗೆ ಶೇ 70 ರಿಂದ 80 ಅಂಕಗಳನ್ನು ಮೀಸಲಿಡಬೇಕೆಂಬ ಮಾರ್ಗ­ಸೂಚಿ­ಯನ್ನು ಅನುಷ್ಠಾನಗೊಳಿಸಬೇಕು.

ಒಬ್ಬ ಅನನುಭವಿ ವಿದ್ಯಾರ್ಥಿಶಿಕ್ಷಕ, ಉತ್ತಮ ಶಿಕ್ಷಕನಾಗುವ ಪ್ರಕ್ರಿಯೆ ದೀರ್ಘವಾದದ್ದು. ಇದಕ್ಕೆ ವಿವಿಧ ಹಂತಗಳ ಅಭ್ಯಾಸ ಅಗತ್ಯ. ಪರಾವಲಂಬಿಯಿಂದ ಸ್ವಾವಲಂಬಿ ಹಂತದವರೆಗೆ ತರಗತಿ ವೀಕ್ಷಣೆ, ಶಾಲೆಯ ಸಹಪಠ್ಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು, ನುರಿತ ಅನುಭವಿ ಶಿಕ್ಷಕರಿಗೆ ಸಹಾಯಕನಾಗಿರುವುದು ಮತ್ತು ಅವರ ಮಾರ್ಗದರ್ಶನದಲ್ಲಿ ಸ್ವತಂತ್ರವಾಗಿ ಬೋಧಿಸುವುದು, ಹೀಗೆ ಕ್ರಮವಾಗಿ ಒಂದೊಂದೇ ಮೆಟ್ಟಿಲನ್ನು ಕ್ರಮಿಸಿ ‘ಸ್ವತಂತ್ರ ಶಿಕ್ಷಕನ’ ಸ್ಥಾನಕ್ಕೇರಬೇಕಾಗುತ್ತದೆ. ಬಿ.ಎಡ್‌ನ ಎರಡು ವರ್ಷಗಳ ಅವಧಿಯ ಕೋರ್ಸ್‌ನಲ್ಲಿ ಮೊದಲ ವರ್ಷದಲ್ಲಿ ನಾಲ್ಕು ವಾರಗಳ ಕಾಲ, ಎರಡನೇ ವರ್ಷದಲ್ಲಿ 16 ವಾರಗಳ ಕಾಲಾವಧಿಯ ಇಂಟರ್ನ್‌ಶಿಪ್‌ನ್ನು ನೆರೆಹೊರೆಯ ಶಾಲೆಗಳಲ್ಲಿ ಕೈಗೊಳ್ಳುವ ಮೂಲಕ ವೈವಿಧ್ಯಮಯ ಅಗತ್ಯಗಳುಳ್ಳ ವಿದ್ಯಾರ್ಥಿಗಳಿಗೆ ಬೋಧಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕಾಗಿದೆ.

ಈ ಹಂತದಲ್ಲಿ ಶಾಲೆ ಒಂದು ಸಾಮಾಜಿಕ ಸಂಸ್ಥೆಯಾಗಿ ಹೇಗೆ ಕಾರ್ಯನಿರ್ವಹಿಸುತ್ತದೆ, ವಿವಿಧ ಪ್ರಕ್ರಿಯೆಗಳು ವ್ಯಕ್ತವಾಗುವ ಬಗೆ, ಬೋಧನಾಕಲಿಕೆ ಹೇಗೆ ಉಂಟಾಗುತ್ತದೆ, ಮಕ್ಕಳ ಶೈಕ್ಷಣಿಕ ಪ್ರಗತಿ ಹೇಗೆ ಸಾಗಿದೆ, ಭಾಗೀದಾರರ ಪಾಲ್ಗೊಳ್ಳುವಿಕೆ ಯಾವ ಮಟ್ಟದಲ್ಲಿದೆ, ಇವೆಲ್ಲವನ್ನೂ ಹತ್ತಿರದಿಂದ ಗಮನಿಸುವ ಅವಕಾಶ ಅವರಿಗೆ ಇರಬೇಕಾಗುತ್ತದೆ. ಮುಖ್ಯವಾಗಿ, ಅಭ್ಯಾಸ ಬೋಧನಾ ಅಂಶವನ್ನು ಶೇ 70ರ ಪ್ರಮಾಣಕ್ಕೆ ಏರಿಸಬೇಕಾಗಿದೆ. ಶಿಕ್ಷಕನಾಗಿ ರೂಪುಗೊಳ್ಳುವ ಸಂದರ್ಭದಲ್ಲಿ ಅಭ್ಯಾಸದ ತಾಣ (ಶಾಲೆ), ವಾಸ್ತವಿಕ ಶಾಲೆಯ ಪ್ರತಿರೂಪದಂತೆಯೇ ಇರಬೇಕು. ಈ ದಿಸೆಯಲ್ಲಿ ಪೂನಂ ಬಾತ್ರ ಸಮಿತಿಯ ಶಿಫಾರಸಿನಂತೆ ಪ್ರತಿಯೊಂದು ಶಿಕ್ಷಕರ ಶಿಕ್ಷಣ ಸಂಸ್ಥೆ ಕನಿಷ್ಠ ೧೦ ಶಾಲೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು, ಆ ಶಾಲೆಗಳಲ್ಲಿ ವಿದ್ಯಾರ್ಥಿ ಶಿಕ್ಷಕರಿಗೆ ತರಗತಿ ಕೋಣೆಯಲ್ಲಿ ಅಭ್ಯಾಸದ ಭಾಗವಾಗಿ ಬೋಧಿಸುವ ಏರ್ಪಾಟು ಮಾಡಬೇಕಾಗುತ್ತದೆ.

ಬೋಧನಾ ಶಿಕ್ಷಕರ ಅಭಿವೃದ್ಧಿಗಾಗಿ ದೀರ್ಘಕಾಲಿಕ ದೃಷ್ಟಿಯನ್ನು ತಾಳಬೇಕಾದದ್ದು ಅತ್ಯಂತ ಅಗತ್ಯ. ಡಯಟ್, ಸಿಟಿಇಗಳಲ್ಲಿ ಬೋಧಿಸುವ ಸೇವಾನಿರತ ಬೋಧಕ ಸಿಬ್ಬಂದಿಗೂ ಇದು ಅನ್ವಯವಾಗುವುದರಿಂದ ಇವರನ್ನು ಆಡಳಿತಾತ್ಮಕ ಕೆಲಸಗಳಿಂದ ಹೊರತಾದ, ಶೈಕ್ಷಣಿಕ ಬೆಳವಣಿಗೆಗೆ ಅನುಕೂಲವಾಗುವ ಪ್ರತ್ಯೇಕ ವೃತ್ತಿ ಮಾರ್ಗವನ್ನು ನಿರ್ಮಿಸಬೇಕಾಗಿದೆ. ವಿಷಯ ಪುನರ್‌ ಮನನ ಕಾರ್ಯಾಗಾರಗಳು, 6ನೇ ತರಗತಿಯಿಂದ 12ನೇ ತರಗತಿವರೆಗಿನ ಪಠ್ಯಪುಸ್ತಕಗಳ ವಿಶ್ಲೇಷಣೆ, ವ್ಯಕ್ತಿತ್ವ ವಿಕಸನ ತರಬೇತಿ, ಭಾಷೆ ಮತ್ತು ಸಂವಹನ ಕ್ರಿಯೆಗಳ ವೃದ್ಧಿ, ವಿಶ್ಲೇಷಣಾತ್ಮಕವಾಗಿ ವಿಷಯಗಳನ್ನು ಅವಲೋಕಿಸಿ, ತರ್ಕಬದ್ಧವಾಗಿ ಮಂಡಿಸುವ ಅವಕಾಶ, ಅನೌಪಚಾರಿಕ ವೃತ್ತಿಪರ ಗುಂಪು­ಗಳಲ್ಲಿ ಕಲಿಕೆ, ಅನುಭವಗಳನ್ನು ಹಂಚಿಕೊಳ್ಳುವ ವೇದಿಕೆಗಳ ನಿರ್ಮಾಣ ಹಾಗೂ ಸಂಶೋಧನಾ ಮನೋಭಾವ ಬೆಳೆಸಿಕೊಳ್ಳಲು ಮತ್ತು ತಂತ್ರಜ್ಞಾನ ಬಳಸಲು ವಿದ್ಯಾರ್ಥಿಶಿಕ್ಷಕ ಮತ್ತು ಬೋಧಕ ಶಿಕ್ಷಕರಿಗೆ ವೇದಿಕೆ ನಿರ್ಮಿಸ­ಬೇಕಾಗಿದೆ.
ಎರಡು ವರ್ಷದ ಬಿ.ಎಡ್ ಪದವಿಯಲ್ಲಿ ವಿವಿಧ ವಿಷಯ ಮತ್ತು ಹಂತಗಳಲ್ಲಿ ಐಚ್ಛಿಕ ವಿಷಯವನ್ನು ಆಯ್ಕೆ ಮಾಡಿಕೊಂಡು ಆಯಾ ಕ್ಷೇತ್ರಗಳಲ್ಲಿ ವಿಶೇಷ ಅಧ್ಯಯನ ಕೈಗೊಳ್ಳಲು ಅವಕಾಶವಿರಬೇಕು. ಅತ್ಯುತ್ತಮ ಮಟ್ಟದ ಕಲಿಕಾ ಸಾಮಗ್ರಿಗಳನ್ನು ಪುನರ್‌ರಚಿತ ಸೇವಾಪೂರ್ವ ಪಠ್ಯಕ್ರಮದಂತೆ ಕನ್ನಡದಲ್ಲಿ ತಯಾರಿಸಲು ಸಿದ್ಧತೆ ನಡೆಸಬೇಕು. ವಿಶ್ವವಿದ್ಯಾಲಯಗಳ ಕನ್ನಡ ವಿಭಾಗ­ಗಳು ಉತ್ತಮ ಗುಣಮಟ್ಟದ ಭಾಷಾಂತರ ಕಾರ್ಯ ಕೈಗೊಳ್ಳಲು ಮುಂದಾಗ­ಬೇಕು. ಉತ್ತಮ ಸಂಪನ್ಮೂಲ ವ್ಯಕ್ತಿಗಳ ವಿಡಿಯೊ ಭಾಷಣ, ಮಾದರಿ ಶಿಕ್ಷಕರ ಉತ್ತಮ ಅಭ್ಯಾಸ­ಗಳು ಮತ್ತು ಬೋಧನಾ ವಿಧಾನಗಳ ಆಯ್ದ ಭಾಗಗಳನ್ನು ವಿದ್ಯುನ್ಮಾನ ರೂಪದಲ್ಲಿ ಸೇರಿಸಿ ಸಾಮಗ್ರಿಗಳನ್ನು ಆಯೋಜಿಸಬೇಕಿದೆ.

ಶಿಕ್ಷಕರ ಶಿಕ್ಷಣ ಸಂಸ್ಥೆಗಳ ಗುಣಮಟ್ಟವನ್ನು ಕಾಯ್ದುಕೊಳ್ಳಲು ನಿರ್ದಿಷ್ಟ ಮಾನದಂಡಗಳಿಂದ ಉದಾಹರಣೆಗೆ ಸಂಸ್ಥೆಯಲ್ಲಿನ ನಾಯಕತ್ವ, ಬೋಧನಾ ಸಿಬ್ಬಂದಿಯ ಗುಣಮಟ್ಟ, ಭೌತಿಕ ಸಂಪನ್ಮೂಲಗಳು, ಬೋಧನಾ ಸಂಪನ್ಮೂಲಗಳು ಇತ್ಯಾದಿ ಮೌಲ್ಯಮಾಪನ ಮಾಡುವಂತಿರಬೇಕು. ಇಡೀ ರಾಜ್ಯದಲ್ಲಿ ಐದಾರು ಅತ್ಯುತ್ತಮ ವಿಶ್ವವಿದ್ಯಾಲಯಗಳು ಅಥವಾ ಶಿಕ್ಷಕರ ಶಿಕ್ಷಣ ಸಂಸ್ಥೆಗಳಿಗೆ ನೆರೆಹೊರೆಯ ಜಿಲ್ಲೆಗಳ ಇತರ ಶಿಕ್ಷಕರಶಿಕ್ಷಣ ಸಂಸ್ಥೆಗಳಿಗೆ ಮಾರ್ಗದರ್ಶನ ನೀಡುವ ಹೊಣೆಗಾರಿಕೆ ವಹಿಸಿ, ಸಂಪನ್ಮೂಲ ಸಂಸ್ಥೆಗಳಾಗಿ ಕಾರ್ಯನಿರ್ವಹಿಸಲು ಪ್ರೇರೇಪಿಸಬೇಕಿದೆ. ಯಾವ ಯಾವ ಶಿಕ್ಷಕ ಶಿಕ್ಷಣ ಸಂಸ್ಥೆಗಳಲ್ಲಿ ಬೋಧನಾ ಸಿಬ್ಬಂದಿಯ ಕೊರತೆ, ಪೂರ್ಣ ಪ್ರಮಾಣದ ವಿದ್ಯಾರ್ಥಿಗಳಿಲ್ಲದಿರುವುದು, ತರಗತಿಗಳು ನಿಯಮಿತವಾಗಿ ನಡೆಯದೆ ನ್ಯಾಯಯುತವಾಗಿ ಪರೀಕ್ಷೆಗಳನ್ನು ನಡೆಸದಿರುವುದು, ಅಭ್ಯಾಸ ತರಗತಿಗಳಲ್ಲಿ ಬೋಧಿಸುವ ಅವಕಾಶವನ್ನು ಕಲ್ಪಿಸದಿರುವುದು, ಕಲಿಕೆಗೆ ಅಗತ್ಯವಿರುವ ಭೌತಿಕ ಸಂಪನ್ಮೂಲಗಳನ್ನು ಹೊಂದಿರದಿರುವುದು ಹಾಗೂ ಕೇವಲ ‘ಲಾಭ’ಕ್ಕಾಗಿಯೇ ನಡೆಸುವ ಶಿಕ್ಷಣ ಸಂಸ್ಥೆಗಳನ್ನು ಕಾನೂನಿನ ರೀತಿ ಮುಚ್ಚಲು ಕ್ರಮ ಕೈಗೊಳ್ಳಲು ಸರ್ಕಾರ ಮತ್ತು ವಿಶ್ವವಿದ್ಯಾಲಯಗಳು ಇಚ್ಛಾಶಕ್ತಿ ಪ್ರದರ್ಶಿಸಬೇಕಿದೆ.

ನಮ್ಮಲ್ಲಿರುವ ಎಷ್ಟು ಮಂದಿ ಉಜ್ವಲ, ಪ್ರತಿಭಾವಂತ ವಿದ್ಯಾರ್ಥಿಗಳು ಶಿಕ್ಷಕರಾಗಬಯಸುತ್ತಾರೆ ಎಂಬುದು ಮೂಲಭೂತ ಪ್ರಶ್ನೆ.  ಶಾಲಾ ಕಾಲೇಜುಗಳಲ್ಲಿ  ವಿಜ್ಞಾನ, ಗಣಿತ, ಇಂಗ್ಲಿಷ್, ಭೂಗೋಳ ವಿಷಯಗಳಲ್ಲಿ ಪದವಿ ಪಡೆದ ಪ್ರತಿಭಾನ್ವಿತರನ್ನು ಶಿಕ್ಷಕರಾಗಲು ಪ್ರೇರೇಪಿಸು­ವುದು ಶಿಕ್ಷಣ ಇಲಾಖೆ ಮುಂದಿರುವ ದೊಡ್ಡ ಸವಾಲು. ಇದನ್ನು ಸಮರ್ಥವಾಗಿ ಎದುರಿಸ­ದಿದ್ದಲ್ಲಿ, ಮುಂದಿನ ಪೀಳಿಗೆಯ ವಿದ್ಯಾರ್ಥಿ­ಗಳು ಸಾಮರ್ಥ್ಯವಿಲ್ಲದ ಶಿಕ್ಷಕರಿಂದ ಅಥವಾ ಅನ್ಯ ವಿಷಯಗಳನ್ನು ಮುಖ್ಯ ವಿಷಯವಾಗಿ ಅಭ್ಯಸಿಸಿದವರಿಂದ ಪ್ರಮುಖ ವಿಷಯ­ಗಳನ್ನು ಕಲಿಯಬೇಕಾದ ಪರಿಸ್ಥಿತಿ ಉಂಟಾಗುತ್ತದೆ.

ಕೇಂದ್ರ ಸರ್ಕಾರದ ನೀತಿಯಿಂದ ಒದಗಿಬಂದಿರುವ ಅವಕಾಶವನ್ನು ಸರ್ಕಾರ ಮತ್ತು ವಿಶ್ವವಿದ್ಯಾಲಯಗಳು ಸಮರ್ಥವಾಗಿ ಬಳಸಿಕೊಳ್ಳಬೇಕಿದೆ. ಈ ಬದಲಾವಣೆಗಳನ್ನು ದೀರ್ಘಾವಧಿಯ ಕಾಣ್ಕೆ, ಬದ್ಧತೆ ಮತ್ತು ಇಚ್ಛಾಶಕ್ತಿಯಿಂದ ಕೈಗೊಂಡರೆ, ಗುಣಾತ್ಮಕ ಶಿಕ್ಷಣದ ಅಡಿಪಾಯ­ವಾದ ಶಿಕ್ಷಕರ ಶಿಕ್ಷಣವನ್ನು ಬಲಪಡಿಸುವುದರಲ್ಲಿ ಪ್ರಮುಖ ಹೆಜ್ಜೆಯನ್ನಿಟ್ಟಂತಾಗುತ್ತದೆ.
(ಲೇಖಕರು ರಾಜ್ಯ ಮುಖ್ಯಸ್ಥರು, ಕರ್ನಾಟಕ ಅಜೀಂ ಪ್ರೇಂಜಿ ಫೌಂಡೇಷನ್)

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT