ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಣಿ ಆತ್ಮಹತ್ಯೆ: ಸಮಸ್ಯೆ, ಪರಿಹಾರ

ಕೃಷಿ ಉತ್ಪನ್ನಗಳ ಸೂಕ್ತ ಸಂಸ್ಕರಣೆ, ಮೌಲ್ಯವರ್ಧಿತ ಮಾರಾಟ ವ್ಯವಸ್ಥೆ ಆಗಬೇಕಾಗಿದೆ
Last Updated 10 ಜುಲೈ 2015, 16:48 IST
ಅಕ್ಷರ ಗಾತ್ರ

ರಾಜ್ಯದಲ್ಲಿ ಈಗ ಕಂಡುಬರುತ್ತಿರುವ ರೈತರ ಸರಣಿ ಆತ್ಮಹತ್ಯೆಗೆ ಮೂಲ ಕಾರಣ ಮತ್ತು ಪರಿಹಾರ ಕ್ರಮಗಳ ಬಗ್ಗೆ ಚರ್ಚಿಸಬೇಕಾದ ಅಗತ್ಯ ಇದೆ. ನಮ್ಮ ಬಹುತೇಕ ಕೃಷಿಕರು ಸಣ್ಣ ಮತ್ತು ಅತಿಸಣ್ಣ ಹಿಡುವಳಿದಾರರಾಗಿದ್ದು ತಮ್ಮ ಮಿತವಾದ ಆದಾಯದಿಂದ ಬೇಸಾಯದ ಖರ್ಚು, ಸಂಸಾರ ನಿರ್ವಹಣೆ, ಹಬ್ಬ-ಹರಿದಿನ, ಮಕ್ಕಳ ವಿದ್ಯಾಭ್ಯಾಸ, ಮದುವೆ ಮುಂತಾದವುಗಳ ಖರ್ಚಿಗಾಗಿ ಸಾಲ ಮಾಡಿರುತ್ತಾರೆ. ಬಳಿಕ ಅದನ್ನು ತೀರಿಸಲಾಗದೆ ಸಾಲದ ಸುಳಿಯಿಂದ ಹತಾಶರಾಗಿ ಬಹುತೇಕರು ತಮ್ಮ ಜಮೀನು ಮತ್ತು ಆಸ್ತಿಯನ್ನು ಮಾರಿ ಪಟ್ಟಣಗಳಿಗೆ ವಲಸೆ ಬರುವುದು ಸಾಮಾನ್ಯ ಸಂಗತಿ. ಕೆಲವರು ಇಂಥ ಪರಿಸ್ಥಿತಿಯನ್ನು ಎದುರಿಸಲಾಗದೆ ಆತ್ಮಹತ್ಯೆಗೆ ಶರಣಾಗುತ್ತಾರೆ.

ಕೃಷಿ ಮೂಲದಿಂದ ಬರುವ ಆದಾಯ ಅತ್ಯಲ್ಪವಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಜೀವನ ನಿರ್ವಹಣೆ ಕಷ್ಟವಾಗಿರುವುದೇ ಈ ಎಲ್ಲ ಸಮಸ್ಯೆಗಳಿಗೆ ಮೂಲ ಕಾರಣ. ಕೃಷಿ ಮೂಲದಿಂದ ಬರುವ ಉತ್ಪಾದನೆಗೆ ಸೂಕ್ತ ಬೆಲೆ ದೊರೆಯದೆ ನಷ್ಟ ಅನುಭವಿಸುವುದರ ಜೊತೆಗೆ ಸಾಲ ಮತ್ತು ಬಡ್ಡಿಯ ಹೊರೆ ಹೆಚ್ಚಾಗಿ ಗೌರವಯುತವಾದ ನೆಮ್ಮದಿಯ ಜೀವನ ನಡೆಸುವುದು ದುಸ್ತರವಾಗಿದೆ. ಇದರ ಜೊತೆಗೆ ಇತ್ತೀಚಿನ ಕೆಲವು ವರ್ಷಗಳಿಂದ ಕೃಷಿಕರು ತಮ್ಮ ಸಣ್ಣ ಹಿಡುವಳಿಯಲ್ಲಿ ಹೆಚ್ಚು ಕೆಲಸ ಇಲ್ಲದೆ ಅರೆ ಉದ್ಯೋಗಿಗಳಾಗಿ, ಪರ್ಯಾಯ ಉದ್ಯೋಗವೂ ಇಲ್ಲದೆ ಸಮಯ ಕಳೆಯಬೇಕಾದ ಅನಿವಾರ್ಯ ಸ್ಥಿತಿ ಉಂಟಾಗಿದೆ. ಇಂಥ ಸಂದರ್ಭಗಳಲ್ಲಿ ಸಂಕಷ್ಟ ಮತ್ತು ಹತಾಶೆಯಿಂದ ಅವರ ಮನಸ್ಥೈರ್ಯ ಕುಸಿದು ಕೆಟ್ಟ ಚಟಗಳಿಗೆ ಮೊರೆಹೋಗುತ್ತಿದ್ದಾರೆ.

ನಾನು ಚಿಕ್ಕವನಿದ್ದಾಗ ನಮ್ಮ ಹಳ್ಳಿಯಲ್ಲಿ ಸಾರಾಯಿ ಕುಡಿಯುವವರು ಅಪರೂಪವಾಗಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿ ಮದ್ಯಪಾನ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದಲೂ ರೈತರ ಕುಟುಂಬದಲ್ಲಿ ಸಾಲದ ಹೊರೆ ಅಧಿಕವಾಗುತ್ತಿದೆ. ಇಂತಹ ಪರಿಸ್ಥಿತಿಯನ್ನು ಗಮನಿಸಿ  ರಾಷ್ಟ್ರಕವಿ ಕುವೆಂಪು ‘ಮಂತ್ರಮಾಂಗಲ್ಯ’ ಎಂಬ ಸರಳ ವಿವಾಹ ಸೂತ್ರವನ್ನು ಪ್ರಚಲಿತಗೊಳಿಸಿದರು. ಆದರೂ ನಮ್ಮ ಅಲ್ಪ ಆದಾಯದ ಗ್ರಾಮೀಣ ಕೃಷಿಕರು ಸಾಲ ಮಾಡಿ ಅದ್ಧೂರಿಯಾಗಿ ಮಕ್ಕಳ ಮದುವೆ ಮಾಡುವುದನ್ನು ಇನ್ನೂ ಮುಂದುವರಿಸಿಕೊಂಡು ಬರುತ್ತಿದ್ದಾರೆ.

ಹಳ್ಳಿಗಳಲ್ಲಿ ಹಬ್ಬ-ಹರಿದಿನಗಳು ಸಹ ಖರ್ಚುವೆಚ್ಚದ ಮಾರ್ಗಗಳಾಗಿವೆ. ಸಾಮಾನ್ಯ ಬಡ ಕುಟುಂಬದ ಕೃಷಿಕರು ಮತ್ತು ಕೃಷಿ ಕಾರ್ಮಿಕರು

ಪೂರ್ವಿಕರಿಂದ ನಡೆದುಬಂದ  ಸಂಪ್ರದಾಯ, ನಂಬಿಕೆಯನ್ನು ಬಿಟ್ಟುಕೊಡದೆ ಹಿಂದಿನಂತೆಯೇ ಖರ್ಚು  ಮಾಡುವುದು ಸಹ ಈ ದುಬಾರಿ ಕಾಲದಲ್ಲಿ ಹೆಚ್ಚಿನ ಸಾಲದ ಹೊರೆಗೆ ಕಾರಣವಾಗುತ್ತಿದೆ. ಕೃಷಿ ನಮ್ಮಲ್ಲಿ ಲಾಭದಾಯಕ ಕಸುಬಾಗಿಲ್ಲ. ಕಬ್ಬು, ಭತ್ತ, ರಾಗಿ, ಜೋಳ, ಹತ್ತಿ, ತೊಗರಿ, ತೋಟಗಾರಿಕೆ ಬೆಳೆಗಳನ್ನು ರಾಜ್ಯದ ವಿವಿಧ ಭಾಗಗಳಲ್ಲಿ ರೈತರು ಬೆಳೆಯುತ್ತಿದ್ದಾರೆ. ಕಬ್ಬು 12ರಿಂದ 14 ತಿಂಗಳ ಅವಧಿಯ ಬೆಳೆ. ಇದಕ್ಕೆ ಹೆಚ್ಚಿನ ಖರ್ಚು ವೆಚ್ಚದ ಜೊತೆಗೆ ನೀರಿನ ಸೌಲಭ್ಯವೂ ಅತ್ಯವಶ್ಯಕ. ಇದು ಒಂದು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದರಿಂದ ರೈತರು ಹೆಚ್ಚಿನ ಆದಾಯವನ್ನು ನಿರೀಕ್ಷಿಸುತ್ತಾರೆ. ಆದರೆ ರಾಜ್ಯದಲ್ಲಿರುವ ಸಕ್ಕರೆ ಕಾರ್ಖಾನೆಗಳಿಗೆ ರೈತರು ಬೆಳೆದ ಎಲ್ಲ ಕಬ್ಬಿನ ಬೆಳೆಯನ್ನೂ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ.

 ಉಳಿಯುವ ಹೆಚ್ಚುವರಿ ಕಬ್ಬನ್ನು  ರೈತರು ಬೆಲ್ಲ ಅಥವಾ ಖಂಡಸಾರಿ ಸಕ್ಕರೆ ತಯಾರಿಸಲು ಖಾಸಗಿಯವರಿಗೆ ಮಾರಾಟ ಮಾಡುತ್ತಾರೆ. ಎಷ್ಟೋ ವೇಳೆ ಹೀಗೆ ಖಾಸಗಿಯವರಿಗೆ ಒದಗಿಸುವ ಕಬ್ಬಿನ ಬೆಲೆಯು ಬಹಳ ಕಡಿಮೆ ಇರುತ್ತದೆ. ಬೆಳೆಗಾಗಿ ಖರ್ಚು ಮಾಡಿದ ಹಣವೂ ಪೂರ್ಣ ಪ್ರಮಾಣದಲ್ಲಿ ಸಿಗುವುದಿಲ್ಲ. ‌ಇತ್ತೀಚಿನ ವರ್ಷಗಳಲ್ಲಿ ಬೆಲ್ಲದ ದರ ಸಹ ಕಡಿಮೆಯಾಗಿದೆ. ಒಂದು ಟನ್ ಕಬ್ಬಿಗೆ ₨ 600ರಿಂದ ₨ 800ಕ್ಕೆ ಮಾರಾಟ ಮಾಡಿ ರೈತರು ಅಪಾರ ನಷ್ಟ ಅನುಭವಿಸಿದ ನಿದರ್ಶನಗಳಿವೆ. ಅನೇಕ ವೇಳೆ ಕಬ್ಬಿನ ಬೆಳೆಗಾಗಿ ಖರ್ಚು ಮಾಡಿದ ಹಣದಲ್ಲಿ ಅರ್ಧದಷ್ಟೂ ಅದನ್ನು ಮಾರಾಟ ಮಾಡಿದಾಗ ದೊರಕದಿದ್ದಾಗ ಮತ್ತು ನೀರು ಸರಬರಾಜಿನ ವ್ಯತ್ಯಯದಿಂದ ಬೆಳೆ ಒಣಗಿದಾಗ ರೈತರು ಅದಕ್ಕೆ ಬೆಂಕಿಯಿಟ್ಟ ಉದಾಹರಣೆಗಳಿವೆ.

ರೈತರು ತಮ್ಮ ಪ್ರದೇಶದ ಸಕ್ಕರೆ ಕಾರ್ಖಾನೆಗಳು ತೆಗೆದುಕೊಳ್ಳುವುದಕ್ಕಿಂತ ಹೆಚ್ಚು ಪ್ರಮಾಣದ ಕಬ್ಬನ್ನು ಬೆಳೆಯುವುದು ಸಾಮಾನ್ಯ. ಇಂತಹ ಸಂದರ್ಭಗಳಲ್ಲಿ ಹೆಚ್ಚುವರಿ  ಕಬ್ಬು ಸೂಕ್ತ ಬೆಲೆಗೆ ಮಾರಾಟವಾಗುವುದಿಲ್ಲ. ಕಾರ್ಖಾನೆಗಳು ಅವು ಅರೆಯಬಹುದಾದ ಸಾಮರ್ಥ್ಯಕ್ಕಿಂತ ಹೆಚ್ಚಿನ ಪ್ರಮಾಣದ ಕಬ್ಬನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ.  ಕಬ್ಬನ್ನು ಅರೆದು ಸಕ್ಕರೆ ತಯಾರಿಸಿ ಮಾರಾಟ ಮಾಡು ವುದು ಕಾರ್ಖಾನೆಗಳಿಗೂ ಇತ್ತೀಚಿನ ವರ್ಷಗಳಲ್ಲಿ ಲಾಭದಾಯಕ ಆಗಿಲ್ಲ ಎಂದು ಹೇಳಲಾಗುತ್ತಿದೆ. ಸಕ್ಕರೆ ಕಾರ್ಖಾನೆಯನ್ನು ನಡೆಸಲು ಬೇಕಾದ ಖರ್ಚು-ವೆಚ್ಚವನ್ನು ಗಮನಿಸಿದಲ್ಲಿ, ಸಕ್ಕರೆ ಉತ್ತಮ ಬೆಲೆಗೆ ಮಾರಾಟವಾಗದಿದ್ದರೆ ಕಾರ್ಖಾನೆಗಳು ನಷ್ಟ ಅನುಭವಿಸಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ನಷ್ಟ ಹೊಂದಿದ ಕಾರ್ಖಾನೆಗಳು ಮುಚ್ಚಿದರೆ ರೈತರು ಇನ್ನಷ್ಟು ತೊಂದರೆಗೆ ಒಳಗಾಗುತ್ತಾರೆ. ಕೆಲವು ವೇಳೆ ಮಾರುಕಟ್ಟೆಯಲ್ಲಿ ಸಕ್ಕರೆ ಮಾರಾಟವಾಗದೆ ಕಾರ್ಖಾನೆಗಳ ಮಾಲೀಕರು ತಮ್ಮಲ್ಲಿರುವ ದಾಸ್ತಾನಿನ ಮೇಲೆ ಬ್ಯಾಂಕಿನಿಂದ ತರುವ ಸಾಲವೂ ಹೊರೆಯಾಗುತ್ತದೆ.

ಇಂತಹ ಪರಿಸ್ಥಿತಿ ಇಂದು ರಾಜ್ಯದಾದ್ಯಂತ ವ್ಯಾಪಕವಾಗಿ ಕಂಡು ಬಂದಿದೆ. ಸಕ್ಕರೆ ಕಾರ್ಖಾನೆಗಳು ರೈತರಿಂದ ತೆಗೆದುಕೊಂಡ ಕಬ್ಬಿಗೆ ವರ್ಷಾನುಗಟ್ಟಲೆ ಹಣ ಕೊಡಲಾಗದೇ ಬಾಕಿ ಉಳಿಸಿಕೊಂಡಿವೆ. ಸರ್ಕಾರ ನಿಗದಿಪಡಿಸಿದ ಕಬ್ಬಿನ ಬೆಲೆಯನ್ನು ಕೊಡಲು ತಮಗೆ ಸಾಧ್ಯವಿಲ್ಲ ಎಂದು ಕಾರ್ಖಾನೆಗಳ ಮಾಲೀಕರು ಹೇಳುತ್ತಾರೆ. ಹೀಗೆ ಅನೇಕ ಕಾರಣಗಳಿಂದ ಕಬ್ಬಿನ ಬೆಲೆಯ ಪಾವತಿಯನ್ನು ಮುಂದೂಡುತ್ತಾ ಬರುವುದು ರೈತರನ್ನು ಸಂಕಷ್ಟಕ್ಕೆ ಈಡುಮಾಡುತ್ತದೆ. ನಮ್ಮ ರೈತರು ಸಹ ಹೆಚ್ಚಿನ ಪ್ರಮಾಣದ ಕಬ್ಬಿನ ಬೆಳೆಯನ್ನು ಬೆಳೆಯುವ ಬದಲು ಇತರ ಪರ್ಯಾಯ ಬೆಳೆಗಳನ್ನು ಬೆಳೆಯಲು ಪ್ರಯತ್ನಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರ ರೈತರಿಗೆ ಸಮಯೋಚಿತವಾದ ಸಲಹೆ ಮತ್ತು ಸೂಚನೆಗಳ ಮೂಲಕ ಪರ್ಯಾಯ ಬೆಳೆಗಳ  ಉತ್ತೇಜನೆಗೆ ಕ್ರಮ ಕೈಗೊಳ್ಳಬೇಕು.

ಆದರೆ ಈ ಬೆಳೆಗಳನ್ನು ಸಹ ಬೇಡಿಕೆಗಿಂತ ಹೆಚ್ಚಾಗಿ ಅಪಾರ ಪ್ರಮಾಣದಲ್ಲಿ ಅನಿಯಮಿತವಾಗಿ ಬೆಳೆದರೆ, ಮಾರುಕಟ್ಟೆಗೆ ಬರುವ ವೇಳೆಗೆ ಅವುಗಳ ಬೆಲೆಯೂ ಕುಸಿಯುತ್ತದೆ. ಆಗ ಈ ಬೆಳೆಗಳ ಉತ್ಪಾದನಾ ವೆಚ್ಚವೂ ರೈತರಿಗೆ ಗಿಟ್ಟದೆ ನಷ್ಟ ಎದುರಿಸುವ  ಸಂದರ್ಭ ಬರಬಹುದು. ತೋಟಗಾರಿಕಾ ಬೆಳೆಗಳಾದ ಹಣ್ಣು ಮತ್ತು ತರಕಾರಿ ಬೇಗ ಕೆಟ್ಟು ಹೋಗುವುದರಿಂದ  ಅವುಗಳನ್ನು ಸಂರಕ್ಷಿಸಲಾಗದೆ ಕಡಿಮೆ ಬೆಲೆಗೆ ಮಾರಾಟ ಮಾಡುವುದರಿಂದಲೂ ರೈತರು ಅಪಾರ ನಷ್ಟ ಅನುಭವಿಸುತ್ತಾರೆ. ಇಂತಹ ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳನ್ನು ಸಂಸ್ಕರಿಸಿ ಸಂಗ್ರಹಿಸಿ, ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಬಂದಾಗ ಮಾರಾಟ ಮಾಡುವುದು ಉತ್ತಮವಾದ ಕ್ರಮ. ಸರ್ಕಾರ ಹಾಲು ಉತ್ಪಾದಕರ ಮಹಾಮಂಡಳಿಯ ಕಾರ್ಯನಿರ್ವಹಣೆ ರೀತಿಯಲ್ಲಿ, ರೈತರು ಬೆಳೆದ ತೋಟಗಾರಿಕಾ ಬೆಳೆಗಳನ್ನು ಸಹ ಆಯಾ ಪ್ರದೇಶಕ್ಕೆ ಹೋಗಿ ಸಂಗ್ರಹಿಸಿ, ಸಂಸ್ಕರಿಸಿ ಮೌಲ್ಯವರ್ಧನೆ ಮಾಡಿ ಸೂಕ್ತ ಬೆಲೆಗೆ ಮಾರಾಟ ಮಾಡಬೇಕು.

ಇತ್ತೀಚೆಗೆ ರೇಷ್ಮೆ ಬೆಳೆಗಾರರು ಸಹ ನಷ್ಟವನ್ನು ಅನುಭವಿಸುತ್ತಿದ್ದಾರೆ. ಕೇಂದ್ರ ಸರ್ಕಾರ ರೇಷ್ಮೆ ಆಮದು ಸುಂಕವನ್ನು ಕಡಿಮೆ ಮಾಡಿರುವುದರಿಂದ ಹೆಚ್ಚಿನ ರೇಷ್ಮೆಯು ಹೊರದೇಶಗಳಿಂದ ಆಮದಾಗಿ, ಸ್ಥಳೀಯವಾಗಿ ಬೆಳೆದ ರೇಷ್ಮೆಗೆ ಬೆಲೆ ಕಡಿಮೆಯಾಗಿದೆ.
ಇಂತಹ ಹಲವು ಕಾರಣಗಳಿಂದ ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳ ಬೆಲೆ ಏರಿಳಿತವಾಗಿ ರೈತರು ತಮ್ಮ ಉತ್ಪನ್ನಗಳಿಗೆ ಸಕಾಲದಲ್ಲಿ ನಿರ್ದಿಷ್ಟ ಬೆಲೆ ಪಡೆಯಲು  ಸಾಧ್ಯವಾಗುತ್ತಿಲ್ಲ. ಕೈಗಾರಿಕಾ ವಸ್ತುಗಳಿಗೆ ಬೆಲೆ ನಿಗದಿ ಮಾಡುವ ಮಾದರಿಯಲ್ಲಿ ಕೃಷಿ ಉತ್ಪನ್ನಗಳ ಉತ್ಪಾದನಾ ವೆಚ್ಚಕ್ಕೆ ಶೇ 50ರಷ್ಟನ್ನು ಸೇರಿಸಿ ಬೆಲೆ ನಿಗದಿ ಮಾಡಬೇಕೆಂದು ಕೃಷಿ ತಜ್ಞ ಡಾ. ಸ್ವಾಮಿನಾಥನ್ ಶಿಫಾರಸು ಮಾಡಿದ್ದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು  ಕೃಷಿ ಬೆಲೆ ಆಯೋಗವನ್ನು ರಚಿಸುವುದು ಮತ್ತು ಅವು ವಿವಿಧ ಪ್ರದೇಶಗಳಲ್ಲಿ ಬೆಳೆಯುವ ಬೆಳೆಗಳ ಖರ್ಚು ವೆಚ್ಚದ ಅಧ್ಯಯನ ಮಾಡಿ ಕಾಲಕಾಲಕ್ಕೆ ಸೂಕ್ತ ಬೆಲೆ ನಿಗದಿ ಮಾಡುವುದು ಅತ್ಯವಶ್ಯಕ.

ಇದರ ಜೊತೆಗೆ ರೈತರ ಉತ್ಪನ್ನಗಳಿಗೆ ವ್ಯವಸ್ಥಿತ ಸಂಸ್ಥೆಗಳ ಮೂಲಕ ಮಾರುಕಟ್ಟೆ ಸೌಲಭ್ಯ ಒದಗಿಸಿ ಮಧ್ಯವರ್ತಿಗಳ ಹಾವಳಿ ತಪ್ಪಿಸಬೇಕು. ರೈತರಿಗೆ ಬೇಕಾದ ಬೀಜ, ಗೊಬ್ಬರ, ಕ್ರಿಮಿನಾಶಕ, ಉಪಕರಣ ಮುಂತಾದವನ್ನು ಕಡಿಮೆ ಬೆಲೆಗೆ ಸಕಾಲದಲ್ಲಿ ಒದಗಿಸುವ ವ್ಯವಸ್ಥೆ ಆಗಬೇಕು.ಯಾವಾಗಲೂ ಬೆಳೆ ಹಾನಿ ನಷ್ಟವನ್ನು ಸರ್ಕಾರ ತುಂಬಿಕೊಡಲು ಸಾಧ್ಯವಾಗದು. ವ್ಯಕ್ತಿ ಮತ್ತು ವಾಹನಗಳಿಗೆ ವಿಮಾ ಕಂಪೆನಿಗಳು ವಿಮೆ ಒದಗಿಸುವಂತೆ ಬೆಳೆಗಳಿಗೂ ರೈತರಿಗೆ ಹೆಚ್ಚಿನ ಹೊರೆಯಾಗದಂತಹ ಸರಳ ವಿಮಾ ಯೋಜನೆಯನ್ನು ಜಾರಿಗೊಳಿಸಿ, ಬೆಳೆ ನಷ್ಟ ತುಂಬಿಕೊಡಬೇಕು.

ಸಣ್ಣ ಮತ್ತು ಅತಿಸಣ್ಣ ರೈತರ ಕುಟುಂಬಕ್ಕೆ ಕಡ್ಡಾಯವಾಗಿ ಆರೋಗ್ಯ ವಿಮೆ ಜಾರಿಗೊಳಿಸಬೇಕು. ಅದೇ ರೀತಿ ಹಬ್ಬ-ಹರಿದಿನ ಮುಂತಾದವುಗಳಿಗೆ ಅನವಶ್ಯಕವಾಗಿ ವೆಚ್ಚ ಮಾಡದಂತೆ, ಸರಳವಾಗಿ ವಿವಾಹ ಆಗುವಂತೆ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಬೇಕು. ಇದಕ್ಕೆ ಪೂರಕವಾಗುವಂತಹ ಪ್ರೋತ್ಸಾಹದಾಯಕ ವಿಧಾನಗಳನ್ನು ಕೈಗೊಳ್ಳಬೇಕು. ಇವೆಲ್ಲದರ ಜೊತೆಗೆ ರೈತರ ಮಕ್ಕಳಿಗೆ ಉಚಿತ ವಿದ್ಯಾಭ್ಯಾಸ ಮತ್ತು ಪ್ರೋತ್ಸಾಹದಾಯಕ ಶೈಕ್ಷಣಿಕ ಯೋಜನೆಗಳನ್ನು ಜಾರಿಗೊಳಿಸಬೇಕಾದುದು ಅವಶ್ಯಕ. ಗ್ರಾಮೀಣ ಭಾಗಗಳಲ್ಲಿ ಸಾಂಕ್ರಾಮಿಕ ಪಿಡುಗಿನಂತೆ ಹಬ್ಬಿರುವ ಕುಡಿತದ ಚಟ ಬಿಡಿಸಲು ಜಾಗೃತಿ ಮೂಡಿಸಬೇಕಾದುದು ಬಹು ಮುಖ್ಯವಾದ ಕಾರ್ಯ.

ಒಟ್ಟಾರೆ ರೈತರ ನಿರಂತರ ಆತ್ಮಹತ್ಯೆಯನ್ನು ತಡೆಯಲು, ಅವರನ್ನು ಸಾಲದ ಸಂಕೋಲೆಯಿಂದ ಬಿಡಿಸಲು ಸುಲಭ ಹಾಗೂ ಸಕಾಲಿಕ ಸಾಲ ಸೌಲಭ್ಯ, ವೈದ್ಯಕೀಯ ಸೌಲಭ್ಯ, ರಿಯಾಯಿತಿ ದರದಲ್ಲಿ ಬೀಜ, ಗೊಬ್ಬರ ಪೂರೈಕೆ, ಪರ್ಯಾಯ ಉಪ ಕಸುಬುಗಳು, ಪಶುಸಂಗೋಪನೆ, ತೋಟಗಾರಿಕೆ ಜೊತೆಗೆ ಉದ್ಯೋಗ ನೀಡುವ ಸಣ್ಣ ಮತ್ತು ಮಧ್ಯಮ ಪ್ರಮಾಣದ ಗೃಹ ಕೈಗಾರಿಕೆಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಬೇಕು. ಸಂಘ - ಸಂಸ್ಥೆಗಳು ಮತ್ತು ಸಹಕಾರಿ ಸಂಘಗಳ ಮೂಲಕ ಗ್ರಾಮೀಣ ಭಾಗಗಳಲ್ಲಿ ರೈತರಿಗೆ ಉದ್ಯೋಗ ಒದಗಿಸುವುದು ಅತ್ಯವಶ್ಯಕ. ಇದರಿಂದ ರೈತರು ಪಟ್ಟಣಗಳಿಗೆ ವಲಸೆ ಬರುವುದು ಕಡಿಮೆಯಾಗುತ್ತದೆ. ಸಣ್ಣ ಹಿಡುವಳಿದಾರರ ಸಂಕಷ್ಟಗಳನ್ನು ಅರಿತು ಶಾಶ್ವತ ಪರಿಹಾರ ಒದಗಿಸಲು ಇಂತಹ ತುರ್ತು ಕ್ರಮಗಳು ಅನಿವಾರ್ಯ.
ಲೇಖಕ ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ  ಹಾಗೂ ನಿವೃತ್ತ ಐಎಎಸ್ ಅಧಿಕಾರಿ
editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT