ಮಂತ್ರಿಗಿರಿ ಸುರಕ್ಸಾ ಯೋಜನೆ

7

ಮಂತ್ರಿಗಿರಿ ಸುರಕ್ಸಾ ಯೋಜನೆ

Published:
Updated:
Prajavani

ನಮ್ಮೂರ ಗಾಬರಿಗೌಡನ ಮಗ ಬೆಂಗಳೂರಿಗೆ ಬಂದು ಯಂಗೆಂಗೋ ಆಗೋದ. ನನಗೂ ಸಿಕ್ಕಿರಲಿಲ್ಲ ಅವನು. ಇತ್ತೀಚೆಗೆ ಲೀಲಾಪ್ಯಾಲೇಸ್ ಮುಂದುಗಡೆ ನಡಕಾಹೋಯ್ತಿದ್ದಾಗ ‘ಅಣೈ ಅಣೈ’ ಅಂತ ಕೂಗಿದಂಗಾಯ್ತು. ಯಾರೋ ಅಂತಾ ನನ್ನ ಪಾಡಿಗೆ ನಾನು ನಡದಿದ್ದೆ. ಹಿಂದುಗಡಿಂದ ಬೆನ್ನ ಮೇಲೆ ದಪ್ಪನ್ನ ಕೈಯೊಂದು ಬಿದ್ದಿತ್ತು. ತಿರುಗಿ ನೋಡಿದರೆ ಕರೀ ಮುಖದಲ್ಲಿ ಬಿಳಿ ಹಲ್ಲುಗಳು ಕಾಣುತ್ತಿದ್ದೋ. ‘ಅದ್ಯಾಕಣೈ ಕರೀತಿದ್ರೂ ಹಂಗೆ ಓಡೋದೈ. ನಾನು ಚಿಕ್ಕಗಾಬರಿ!’ ಅಂದ.

‘ಎಲಾ ಚಿಕ್ಕಗಾಬರಿ. ಇದೇನ್ಲಾ ಬಡ್ಡೆತ್ತುದೇ ಹಿಂಗಾಗಿದೈ!’ ಅಂದೆ ಆಶ್ಚರ್ಯದಲ್ಲಿ.

‘ಯಣ್ಣಾ ಪ್ರವೀಟು ಇನ್ಸುರನ್ಸ್ ಮಾಡಿಕೊಂಡಿವ್ನಿ. ಒಳ್ಳೆ ಚನ್ನಾಗದೆ ಬಿಜಿನೆಸ್ಸು’ ಅಂದ. ಎಲಾ ಇವನ ಡಬ್ಲ್ಯೂ ಅನ್ನಕೆ ಬರದೇ ಗೊಬ್ಲ್ಯೂ ಅಂತಿದ್ದ ಈ ಸರಸ್ವತೀ ಪುತ್ರ ಬಿಜಿನೆಸ್ ಮ್ಯಾನ್ ಆದದ್ದು ಹ್ಯಂಗೆ? ಅದುನ್ನೇ ಕೇಳಿದೆ.

‘ಯಣ್ಣಾ, ನೀನೇ ನೋಡ್ತಾ ಅದೀಯ ಈವತ್ತಿದ್ದ ಮಂತ್ರಿ ನಾಳಿಕೆ ಮಾಜಿ. ಏನೇನೋ ಆಸೆ ಮಡಿಕಂಡು ದುಡ್ಡಾಕಿ ಬಂದಿರತರೆ. ಮಂತ್ರಿಗಿರಿ ನಿಕಾಲಾದ್ರೆ ಯಂಗೆ? ಲಾಸಲ್ಲುವ್ರಾ?’

‘ಅದುಕ್ಕೇ ನಾನು ಮಂತ್ರಿಗಳಿಗೇ ಅಂತಲೇ ಮಂತ್ರಿ ಸುರಕ್ಸಾ ಯೋಜನೆ ಅಂತ ಒಂದು ಪ್ರವೀಟು ಇನ್ಸುರನ್ಸ್ ಪಾಲಿಸಿ ಮಾಡಿವ್ನಿ. ಮಿನಿಸ್ಟ್ರು ಆದೇಟಿಗೆ ನಮ್ಮ ಪಾಲಿಸಿ ತಗಂಡು ತಿಂಗಳಿಗೆ 10 ಲಕ್ಸ ಪ್ರೀಮಿಯಂ ಕಟ್ಟಬೇಕು. ಐದು ವರ್ಸ ಮುಗಿಯದರಾಗೆ ಮಿನಿಸ್ಟರ್ ಪದವಿ ಎಕ್ಕುಟ್ಟೋದ್ರೆ ನಾವು 6 ಕೋಟಿ ಇನ್ಸುರನ್ಸ್ ಅಮೌಂಟ್ ಕೊಡ್ತೀವಿ. ಐದು ವರ್ಸಾದ ಮ್ಯಾಲೆ ಕಟ್ಟಿದ್ದ ದುಡ್ಡು ವಾಪಸ್. ಹ್ಯಂಗೆ’ ಅಂದ.

‘ಅಲ್ಲಾ ಕಲಾ ನೀನು ದುಡ್ಡ ಹ್ಯಂಗೆ ಉಪಯೋಗಿಸ್ಕತೀಯ?’ ಅಂದೆ.

‘ಏ ಬುಡಣ್ಣಾ... ಅದೇ ಮಂತ್ರಿಗಳಿಗೆ ಸಾಲ ಕೊಟ್ಟಿವ್ನಿ. ಮೊದಲೇ ಅವರತಾವು ಖಾಲಿ ಚಕ್ಕು ತಂಗಂಡಿರತೀವಲ್ಲಾ ಅಲ್ಲಿಗಲ್ಲಿಗೆ ವಜಾ ಆಯ್ತದೆ’ ಅಂದ. ಅಷ್ಟರಲ್ಲಿ ಅವನ ಆಫೀಸಿಂದ ಫೋನು. ‘ಸಾ ಅಪ್ಲಿಕೇಶನ್ ಖಾಲಿಯಾಗೋಗದೆ ಮುಕ್ಯಮಂತ್ರಿಗಳ ಆಪೀಸಿಂದ ಬಂದು ಅಪ್ಲಿಕೇಸನ್ ಕೇಳ್ತಾವ್ರೆ ಏನು ಮಾಡ್ಲಿ’ ಅಂತ. ‘ಜರಾಕ್ಸು ಮಾಡಿ ಹಂಚು’ ಅಂತ ಇವ ಆದೇಶ ಕೊಡ್ತಿದ್ದ. ಇವನ ಕಥೆ ನೋಡಿ ನಾನು ಅಲ್ಲೇ ಕುಸಿದು ಕೂತೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !