ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಒಳ್ಳೆಯ ಗಂಡ!

Last Updated 13 ಸೆಪ್ಟೆಂಬರ್ 2022, 19:31 IST
ಅಕ್ಷರ ಗಾತ್ರ

ಅಡುಗೆ ಮನೆಯಲ್ಲಿ ಪಾತ್ರೆಗಳ ಶಬ್ದ ಎಂದಿಗಿಂತ ಜೋರಾಗಿತ್ತು. ಒಂದು ವಾರದಿಂದ ಗುಡುಗು–ಸಿಡಿಲುಗಳ ಶಬ್ದ ಕೇಳಿ ಕೇಳಿ ಅಭ್ಯಾಸವಾಗಿದ್ದ ನಾನು ತಲೆಕೆಡಿಸಿಕೊಳ್ಳದೆ, ಸೋಫಾದಿಂದ ಟೀಪಾಯಿಯವರೆಗೆ ಕಾಲು ಚಾಚಿ ಕುಳಿತು ಟಿ.ವಿ. ನೋಡುತ್ತಿದ್ದೆ.

‘ನಿಮ್ಮಂಥ ಬೇಜವಾಬ್ದಾರಿ ಮನುಷ್ಯನನ್ನ ನಾನು ನೋಡೇ ಇಲ್ಲ ಬಿಡಿ...’ ಸಿಟ್ಟು ಹೊರಹಾಕಿದಳು ಹೆಂಡತಿ.

‘ಇದೊಳ್ಳೆ ಆಯ್ತಲ್ಲ, ನಾನೇನ್ ಮಾಡಿದೆ...’

‘ಏನೂ ಮಾಡ್ತಿಲ್ಲ ಅಂತಾನೇ ನಾನೂ ಹೇಳ್ತಿರೋದು. ಅಕ್ಕ–ಪಕ್ಕದವರನ್ನ ನೋಡಿ ಕಲೀರಿ. ಎಲ್ಲರೂ ಕಾರ್‌ನಲ್ಲಿ ಓಡಾಡ್ತಿದ್ದಾರೆ, ಹೊಸ ಮನೆ ತಗೊಂಡಿದ್ದಾರೆ. ವರ್ಷದಿಂದ ವರ್ಷಕ್ಕೆ ಬೆಳೀತಾನೇ ಇದ್ದಾರೆ...’

‘ಒಂದು ವಯಸ್ಸು ಆದ್ಮೇಲೆ ಮುಗೀತು ಕಣೆ. ಆಮೇಲೆ ಯಾರೂ ಎತ್ತರ ಆಗಲ್ಲ...’ ನಗುತ್ತಾ ಹೇಳ್ದೆ, ಹೆಂಡತಿ ಮುಖ ಮತ್ತಷ್ಟು ಬಿರುಸಾಯಿತು.

‘ಮಗನಿಗೊಂದು ಒಳ್ಳೆಯ ಕೆಲಸ ಕೊಡಿಸೋಕಾಗ್ತಿಲ್ಲ ನಿಮಗೆ. ಮಗಳಿಗೆ ಒಂದೊಳ್ಳೆ ಎಜುಕೇಷನ್‌ ಕೂಡ ಕೊಡಿಸಲಿಲ್ಲ...’ ಮಂಗಳಾರತಿ ಮುಂದುವರಿಯಿತು.

‘ಹಿತ್ತಲ ಗಿಡ ಮದ್ದಲ್ಲ ಅನ್ನೋ ಹಾಗೆ ಆಗಿದೆ ನಿನಗೆ. ಮೊನ್ನೆ ಬಡಾವಣೆ ಫಂಕ್ಷನ್‌ನಲ್ಲಿ ನಾನೆಷ್ಟು ಚೆಂದ ಮಾತಾಡಿದೆ ಅನ್ನೋದು ನೋಡಲಿಲ್ವ ನೀನು. ಎಂತಹ ಧಮ್ ಇತ್ತು, ಎಷ್ಟು ತಾಕತ್ತಿತ್ತು. ಅಕ್ಕ–ಪಕ್ಕದ ಮನೆಯ ಹೆಣ್ಮಕ್ಕಳೆಲ್ಲ ಹೊಗಳ್ತಿದ್ರು, ನೀನು ಮಾತ್ರ ಬೈತೀಯ...’

‘ಬರೀ ಭಾಷಣ ತಗೊಂಡು ಏನ್ರೀ ಮಾಡ್ತೀರಾ? ಮಳೆ ಬಂದು ಮನೆ ಸೋರ್ತಿದೆ, ಮನೆ ಮುಂದಿನ ಗಿಡಗಳೆಲ್ಲ ಕೊಚ್ಕೊಂಡು ಹೋಗಿವೆ, ನೀವು ನೋಡಿದ್ರೆ ಫಂಕ್ಷನ್‌ನಲ್ಲಿ ಎಕ್ರಪೆಕ್ರನಂಗೆ ಡ್ಯಾನ್ಸ್‌ ಮಾಡ್ತಾ ಕೂತಿದ್ದಿರಿ, ನಾಚಿಕೆ ಆಗಲ್ವ ನಿಮಗೆ’.

‘ನಿನ್ನ ಹತ್ತಿರ ಬೈಸ್ಕೊಂಡು ಸಾಕಾಯ್ತು ನನಗೆ. ನನ್ನ ಹೆಸರನ್ನೇ ಚೇಂಜ್ ಮಾಡ್ಕೊಂಡು ಬಿಡ್ತೀನಿ ನಾನು’.

‘ಏನಂತ?’

‘ಒಳ್ಳೆಯ ಗಂಡ ಅಂತ!’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT