ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ನಾರಿಶಕ್ತಿಗೆ ನಮಸ್ಕಾರ!

Last Updated 27 ನವೆಂಬರ್ 2020, 19:47 IST
ಅಕ್ಷರ ಗಾತ್ರ

‘ಸತ್ಯಮೇವ ಜಯತೆ’ ಎಂದ ಮಡದಿ ಒಗಟಾಗಿ ವಿಕ್ಟರಿ ಸನ್ನೆ ತೋರಿಸಿದಳು. ಅರ್ಥವಾಗದೆ ಪ್ರಶ್ನಾರ್ಥಕ ಮುಖ ಮಾಡಿದೆ.

‘ಬಿದ್ರೂ ಮೀಸೆ ಮಣ್ಣಾಗಿಲ್ಲ ಅಂತಿದ್ದ ಟ್ರಂಪ್ ತಣ್ಣಗಾಗಿ, ಬೈಡನ್‌ ಅವರಿಗೆ ಕುರ್ಚಿ ಬಿಡೋಕೆ ಒಪ್ಕೊಂಡ್ರಲ್ಲ!’ ಎಂದಳು. ‘ಏನು ಚಮತ್ಕಾರ ನಡೀತೋ?’ ಎಂದೆ.

‘ನಾರಿ ಶಕ್ತಿರೀ...! ಪರಿಸರ ಕಾರ್ಯಕರ್ತೆ ಗ್ರೇಟಾ ಥನ್‌ಬರ್ಗ್ ‘ಚಿಲ್ ಟ್ರಂಪ್, ಚಿಲ್’ ಅಂದ್ರು. ಹೆಂಡ್ತಿ, ಮಾಜಿ ಹೆಂಡ್ತಿ ಕುರ್ಚಿ ಖಾಲಿ ಮಾಡೀಂದ್ರು. ನಟಿ ಮಲ್ಲಿಕಾ ಶೆರಾವತ್ ಭವಿಷ್ಯ ನುಡಿದಂತೆ, ನಮ್ಮ ದೇಶದ ಹೆಣ್ಣುಮಗಳ ಪುತ್ರಿಯಾದ ಕಮಲಾ ಹ್ಯಾರಿಸ್ ಅಲ್ಲಿನ ಚುನಾವಣೇಲಿ ಗೆದ್ದು ಉಪಾಧ್ಯಕ್ಷರಾಗಿದ್ದಾರೆ. ಅಧ್ಯಕ್ಷರ ಕೋವಿಡ್ ಕಾರ್ಯಪಡೆಗೆ ತಮಿಳುನಾಡು ಮೂಲದ ಸೆಲೈನ್ ಗೌಂಡರ್ ಮೇಡಂ ಸದಸ್ಯರು, ಕುಂದಾಪುರ ಮೂಲದ ಮಾಲಾ ಅಡಿಗ ಅವರು ಬೈಡನ್‌ರ ಪತ್ನಿ ಜಿಲ್ ಅವರ ನೀತಿ ನಿರ್ದೇಶಕಿ. ಇವರೆಲ್ರಿಗೂ ವೈಟ್ ಹೌಸ್ ಮುಂದೆ ಟ್ರಂಪ್ ವಿರುದ್ಧ ಉಪವಾಸ ಸತ್ಯಾಗ್ರಹ ಮಾಡೋಕೆ ಸಲಹೆ ಕೊಡೋಣಾಂತಿದ್ದೆ‌. ಅಷ್ಟರಲ್ಲಿ ಟ್ರಂಪ್ ಅಧಿಕಾರಿಣಿ ಎಮಿಲಿ ಮರ್ಫಿ ಅಧಿಕಾರ ಬಿಟ್ಟುಕೊಡೋ ಕೆಲ್ಸ ಪ್ರಾರಂಭಿಸಿದ್ರು, ಎಲ್ಲಾ ಸ್ತ್ರೀ ಶಕ್ತಿ!’

‘ಸತ್ಯಾಗ್ರಹ ಮಾಡೋಕೆ ಅದು ಇಂಡಿಯಾ ಅಂದುಕೊಂಡ್ಯಾ?’

‘ನಾವು ಮನಸ್ಸು ಮಾಡಿದ್ರೆ ಯಾವುದು ಅಸಾಧ್ಯ? ಬಿಹಾರ, ಕರ್ನಾಟಕ ಸೇರಿದಂತೆ ದೇಶದಾದ್ಯಂತ ನಡೆದ ಈಚಿನ ಚುನಾವಣೆಗಳಲ್ಲಿ ಕಮಲ ಪಕ್ಷ ಅರಳಲು ಮೌನ ಮತದಾರರಾದ ಮಹಿಳೆಯರೇ ಕಾರಣಾಂತ ನಮೋ ಸಾಹೇಬ್ರೇ ನಮ್ಗೆ ನಮೋ ನಮಃ ಅಂದಿದಾರಲ್ಲ?’

‘ನಿಮ್ಮ ಮೂಗಿಗೆ ತುಪ್ಪ ಹಚ್ಚೋಕೆ...! ಕಮಲಾ ಹ್ಯಾರಿಸ್ ಜೊತೆಗಿದ್ದು ಅವರಿಗೆ ನೆರವಾಗಲು ಪತಿ ಲಾಭದಾಯಕ ಹುದ್ದೆ
ಬಿಡ್ತಿದಾರಂತಲ್ಲ!’

‘ಹೌದ್ರೀ, ನೀವು ಈಗಲಾದರೂ ನಂಗೆ ಮನೇಲಿ ಸಹಾಯ ಮಾಡ್ಬೇಕು. ಸದ್ಯದಲ್ಲೇ ನೀವು ಆಫೀಸ್ ಕೆಲ್ಸಾನ ವರ್ಕ್ ಫ್ರಮ್ ಎನಿವೇರ್ ಮಾಡಬಹುದಂತಲ್ಲ. ನಮ್ಮ ವಾಷಿಂಗ್ ಮಷೀನ್, ಡಿಷ್ ವಾಷರ್ ಅನ್ನು ತಗೊಂಡು ಹೋಗೋಕೆ ರೀಸೇಲ್‌ನವನಿಗೆ ಹೇಳಿದೀನಿ’.

ನಾನು ಕುಸಿದು ಕುಳಿತೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT