ಶನಿವಾರ, ಜುಲೈ 24, 2021
28 °C

ಚುರುಮುರಿ | ಆಪ್ತ ಸಲಹೆ

ಎಸ್.ರಾಮಮೂರ್ತಿ Updated:

ಅಕ್ಷರ ಗಾತ್ರ : | |

Prajavani

‘ಪದ್ದೀ, ಲಾಕ್‌ಡೌನ್ ಆದಮೇಲೆ ಮನೆಗಳಲ್ಲಿ ಗಲಾಟೆಗಳು, ಕೌಟುಂಬಿಕ ಹಿಂಸೆಗಳು ಜಾಸ್ತಿ ಆಗ್ತಾ ಇವೆ. ಅತ್ತೆ-ಸೊಸೆ, ಗಂಡ-ಹೆಂಡತಿ, ಅಪ್ಪ-ಅಮ್ಮ-ಮಕ್ಕಳು ಇತ್ಯಾದಿ’.

‘ಅದಕ್ಕೇನೀಗ?’

‘ಪುರುಷ ಆಯೋಗಕ್ಕೆ ಒಂದು ದೂರು ಬಂದಿದೆ, ನೋಡಿಲ್ಲಿ’.

‘ಅದು ಯಾವ್ದೂರೀ ಪುರುಷ ಆಯೋಗ?’

‘ಮಹಿಳಾ ಆಯೋಗ ಇದೆಯಲ್ಲ ಹಾಗೇ, ಇದು ಪುರುಷ ಆಯೋಗ. ಅದಕ್ಕೆ ನೀನೇ ಅಧ್ಯಕ್ಷೆ. ಈಗ ನಾನೇ ದೂರುದಾರ. ಅಂದರೆ ನಾನಲ್ಲ, ದೂರುದಾರನ ಪರವಾಗಿ ನಾನು ಅಷ್ಟೇ. ನಾನೇ ಸಂತ್ರಸ್ತ ಅಲ್ಲ, ಸಂತ್ರಸ್ತನ ಪರವಾಗಿ ನಾನು’.

‘ಮುಂದಕ್ಕೆ ಹೇಳಿ’.

‘ನನ್ನ ಸಮಸ್ಯೆ ಏನೂಂದ್ರೆ, ಕೆಲಸಕ್ಕೆ ಹೋಗ್ತಿದ್ದಾಗ ಎಲ್ಲ ಕೆಲಸಾನೂ ನನ್ನ ಹೆಂಡತೀನೇ ಮಾಡ್ತಿದ್ಲು. ಲಾಕ್‌ಡೌನ್ ಶುರುವಾದ ಮೇಲೆ, ಹುರುಳಿಕಾಯಿ ನಾರು ಬಿಡಿಸಿಕೊಡಿ, ತರಕಾರಿ ಹೆಚ್ಚಿಕೊಡಿ, ಕಾಫಿ ಕುಡಿದ ಲೋಟಾನ ತೊಳೆದಿಟ್ಟುಬಿಡಿ, ಬಟ್ಟೆ ಒಣಗಿಹಾಕಿಬಿಡಿ, ಮೂಟೇಲಿರೋ ಅಕ್ಕೀನ ಡಬ್ಬಕ್ಕೆ ಹಾಕಿಕೊಡಿ ಅಂತ ಬೆಳಗಿನಿಂದ ರಾತ್ರಿವರೆಗೂ ಏನಾದರೊಂದು ಕೆಲಸ ಹೇಳ್ತಾನೇ ಇರ್ತಾಳೆ. ಇದು ನನ್ನ ಹೆಂಡತಿ ನನಗೆ ಕೊಡುತ್ತಿರುವ ಚಿತ್ರಹಿಂಸೆ. ಇದು ಕೌಟುಂಬಿಕ ಹಿಂಸೆಯ
ಲೆಕ್ಕಕ್ಕೆ ಬರುತ್ತೆ. ದಯವಿಟ್ಟು ನನ್ನ ಹೆಂಡತಿಯ ಕಿವಿ ಹಿಂಡಿ ಕಿವಿಮಾತು ಹೇಳಿ ಈ ಕೆಲಸಗಳಿಂದ ನನ್ನನ್ನು ಬಿಡುಗಡೆಗೊಳಿಸಬೇಕೆಂದು
ಪ್ರಾರ್ಥಿಸುತ್ತೇನೆ. ಇಂತಿ ತಮ್ಮ ವಿಶ್ವಾಸಿ ಡ್ಯಾಷ್ ಡ್ಯಾಷ್ ಡ್ಯಾಷ್’.

‘ಹ್ಞೂಂ, ಪ್ರಿಯ ಸಂತ್ರಸ್ತರೇ, ಕಿವಿಮಾತು ಹೇಳಬೇಕಾಗಿರೋದು ಆಕೆಗಲ್ಲ, ನಿಮಗೆ. ನೀವು ಮಾಡೋ ಈ ಚಿಲ್ಲರೆ ಕೆಲಸಗಳನ್ನ ಇಷ್ಟು ವರ್ಷಗಳಿಂದ ಮಾಡ್ತಾ ಇದಾರಲ್ಲ, ಅವರಿಗೆ ಎಷ್ಟು ಹಿಂಸೆ ಆಗಿರಬೇಕು ನೀವೇ ಲೆಕ್ಕ ಹಾಕಿ. ನಮ್ಮ ದೃಷ್ಟಿಯಲ್ಲಿ ಇದು ಕೆಲಸವೇ ಅಲ್ಲ. ಸೋ, ನಿಮ್ಮ ಹೆಂಡತಿ ಹೇಳಿದ್ದನ್ನೆಲ್ಲಾ ಗೊಣಗದೆ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇನ್ನೊಂದು ಸಲ ಇಂಥ ದೂರು ಬಂದರೆ ನಿಮ್ಮ ಮೇಲೆ ಉಗ್ರ ಕ್ರಮ ಕೈಗೊಳ್ಳಲಾಗುವುದು, ಎಚ್ಚರಿಕೆ’.

‘ಬಂದೆ ಒಂದ್ನಿಮಿಷ. ಸಂಡಿಗೇನ ಬಿಸಿಲಲ್ಲಿ ಇಟ್ಟುಬರ್ತೀನಿ ಇರು’.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು