ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿಲ್ಲಿ ದೊರೆಸಾನಿ!

Last Updated 10 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

‘ನೋಡಿ ಸಾ, ಯಡುರಪ್ಪಾರು ಮಕ್ಕಳ ಬಜೆಟ್ ಮಾಡಾರಂತೆ ಈ ವರ್ಸ. ಮಕ್ಕಳ ಬಜೆಟ್ ಅಂದ್ರೇನ್ಸಾ’ ಅಂದೆ.

‘ನೋಡ್ಲಾ ಯಡುರಪ್ಪಾರ ಇಜಯಣ್ಣ ರಾಜಕೀಯದ ಒಳಪಟ್ಟುಗಳ ಕಲಿತು ಪೈಲ್ವಾನ ಆಗ್ಯವುನಂತೆ. ಹಂಗೀಯೇ ಎಲ್ಲಾ ಮಕ್ಕಳೂ ಆಗಲಿ ಅಂತ ಮಕ್ಕಳ ಪುನರ್ವಸತಿಗೆ ಮಾಡೋ ಏರ್ಪಾಡು ಕನೋ ಇದು. ದೇವಜ್ಜ, ಕುಮಾರಣ್ಣ ಮಾಡಲಿಲ್ವೇ’ ಅಂದ್ರು. ನನಗೊಂದು ಅನುಮಾನ ಬಂತು. ಅದುನ್ನ ಕೇಳಿದೆ-

‘ಹಿಂದೆ ರೈತ ಬಜೆಟ್ ಮಾಡಿದ್ರಲ್ಲ ಸಾ. ಸರ್ಕಾರಕ್ಕೆ ತುಪ್ಪ, ರೈತರಿಗೆ ಬವನಾಸಿ ಸಿಕ್ತಲ್ಲಾ! ಮುಂದ್ಲೊರ್ಸಕ್ಕೆ ಮುದುಕರ ಬಜೆಟ್ಟು, ಹೆಣ್ಣೈಕ್ಳ ಬಜೆಟ್ಟು, ಖಾತೆರಹಿತ ಮಂತ್ರಿಗಳ ಬಜೆಟ್ಟು, ಆಪರೇಷನ್ ಕಮಲ ಬಜೆಟ್ಟು ಹಿಂಗೆ ಸುಮಾರಾಯ್ತವೇನೋ?’ ಅಂದೆ.

‘ಆಗಬೌದು ಕನೋ ಬಡ್ಡಿಹೈದ್ನೆ. ನನಗೊಂದು ಆಸೆ ಅದೆ ಕಲಾ’ ಅಂದ್ರು ತುರೇಮಣೆ.

‘ಅದೇನು ಹೇಳುವಂಥವರಾಗಿ ಪಿತಾಮಹಾ’ ಅಂತ ಪ್ರೋತ್ಸಾಹಿಸಿದೆ.

‘ಮುಂದ್ಲ ಜಲುಮದಲ್ಲಾದ್ರೂ ನಾನು ಶಾಸಕನಾಗಬೇಕು ಅಂತ ಆಸೆ ಆಗದೆ!’ ಅಂತ ಬಾಯಿಬಿಟ್ಟರು. ನನಗೆ ಆಶ್ಚರ್ಯ ಆಯ್ತು.

‘ಅಲ್ಲಾ ಸಾ, ರಾಜೀನಾಮೆ ಕೊಟ್ಟ 10 ಜನ ತಾರಾತಿಕಡಿ ಬಾರಾಬಂಕಿ ಬಿದ್ದು ಮಂತ್ರಿಯಾಗವೆ! ಹಕ್ಕಿ ಕತೆ ಏನಾಯ್ತು ನೋಡಿ, ನಿಗಮ, ಮಂಡಲಿ ಬ್ಯಾಡವಂತೆ! ಮೂಲ ಬಿಜೆಪಿಗಳಿಗೆ ಸ್ಥಾನ-ಮಾನ ಇಲ್ಲ! ನಿಮಗ್ಯಾಕೆ ಈ ನರಿಷಡ್ವರ್ಗ?’ ಅಂತಂದೆ.

‘ಜಲ-ಮಲ ಖಾತೆ ಸಿಕ್ತದೆ ಬುಡು! ಪುಗಸಟ್ಟೆ ದೇಸದೇಸ ನೋಡಬೌದಲ್ಲೋ ಹೈವಾನ್’ ಅಂದ್ರು. ಸರಿ ಈವಯ್ಯ ಎಕ್ಕುಟ್ಟೋದ ಅಂತ ವಿಷಯ ಬದಲಾಯಿಸಿದೆ.

‘ಅಲ್ಲಾ ಕಣ್ಸಾ, ಡೆಲ್ಲಿ ರಾಜಕೀಯದಲ್ಲಿ ಕ್ರೇಜಿವಾಲ್, ಮೋದಿ– ಶಾಣಾಕ್ಯರಿಗೆ ಆಪ್ ಇಟ್ಟು ಸಿಮ್ಮಾಸನ ಕಬ್ಜಾ ಮಾಡಿಕ್ಯತಾವನಂತೆ? ಮೋದಿ ಸುಮ್ಮನಿರದು ಹೆಚ್ಚಲ್ವಾ?’ ಅಂದೆ.

‘ಡೆಲ್ಲಿ ಆಳಿದೋರು ಯಾರು ಬರ್ಕತ್ತಾಗವರೋ. ಅದಕ್ಕೇ ದಿಲ್ಲಿ ದೊರೆಸಾನಿ ಅಂತರೆ. ದೊರೆಸಾನಿ ಸವಾಸಕ್ಕೆ ಬಿದ್ದು ಕಾಂಗ್ರೇಸಿನೋರು ನಿರ್ವಾಕಿಲ್ಲದಂಗಾದ್ರಲ್ಲೋ. ಮೋದಿ ಅಖಂಡ ಬ್ರಹ್ಮಚಾರಿ ಅಲ್ಲವುಲಾ. ದೊರೆಸಾನಿ ಸವಾಸ ಬ್ರಹ್ಮಚಾರಿಗ್ಯಾಕೆ ಬೇಕು ಅಂತ ಕೈಬುಟ್ಟವ್ರೆ ಅಷ್ಟೀಯೆ!’ ಅಂದ್ರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT