ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಘುವಂಶ ಕೋವಿಡರು!

Last Updated 9 ಮಾರ್ಚ್ 2020, 19:45 IST
ಅಕ್ಷರ ಗಾತ್ರ

‘ಅಲ್ಲಾ ಸಾ, ಅಜ್ಜಯ್ಯನ್ನ ಕೋವಿಡ್ ವೈರಸ್ ಥರಾ ದೊರೆಸಾಮಿ ಯಾಕೆ ಕಾಡ್ತಾವರೆ!’ ಅಂದೆ. ‘ಅಜ್ಜಯ್ಯ ಹಳೇ ಕಥೆ ಗ್ಯಪ್ತಿಗೆ ತಗಂಡು ಟೈಂಬಾಂಬ್ ಹಾಕ್ಯದೆ. ಅಮೇಲೇನಾತು ಅಂತ ನಂಗೊತ್ತು!’ ಅಂದ್ರು ತುರೇಮಣೆ ಗುಮ್ಮನೆ.

‘ನೀವೇನು ಅವಾಗ ಕಲ್ಲೆಸೆಯಕ್ಕೆ ಹೋಗಿದ್ರಾ ಸಾ?’ ಅಂತ ಅನುಮಾನಪಟ್ಟೆ. ‘ಲೋ ಹೈವಾನ್ ಕೇಳು. ಸಮಾರಂಬ ನಡೆದುತ್ತಲ್ಲಾ ನಾಯಕರೆಲ್ಲಾ ವಾಪಸೋಗುವಾಗ ‘ನಾಗರಿಕರೇ, ದೇಸಪ್ರೇಮಿಗಳೇ ಎಲ್ಲಾರು ಊರಿಗೋಗಿ ಕ್ಯಾಮೆ ನೋಡ್ಕಳಿ ಅಂತ ಹೇಳಿ ಹೊಂಟೋದ್ರು’ ಅಂದ ತುರೇಮಣೆ ಮಾತಿಗೆ ತಲೆ ಆಡಿಸಿದೆ.

ಕಥೆ ಮುಂದುವರೀತು- ‘ಆಗ ಬ್ರಮ್ಮರಾಕ್ಸಸ ಸೈಟು ನೋಡಮು ಅಂತ ಬೆಂಗಳೂರಿಗೆ ಬಂದುದ್ದ. ಊರಾಚೆ ಇದ್ದ ಒಂದಷ್ಟು ಜನ ಬ್ರಮ್ಮರಾಕ್ಸಸನ ಜರ್ಬು ನೋಡಿ, ಯಾರೋ ದೊಡ್ಡೋರು ಬಂದವುರೆ ಅಂತ ಕಡದುಬಂದ್ರು. ಬ್ರಮ್ಮರಾಕ್ಸಸ, ಅಲಾ ಬಡ್ಡಿಹೈಕ್ಳಾ, ಊರಾಚೆ ಏನು ಕಿಸೀತಾ ಕೂತುದ್ದರಿ? ಅಂತಂದ. ಜನ ಅದುಕ್ಕೆ, ಅಣೈ ನಾವು ಜೇಬು ಕತ್ತರಿಸಿ, ತಲೆ ಹೊಡೆದು ಬದುಕೋ ಲೋಫರುಗಳು! ನಮ್ಮ ಕ್ಯಾಮೆ ಮಾಡನ ಅಂತ ಬಂದುದ್ದೋ. ಸಭೆ ಆದಮ್ಯಾಲೆ ನಾಗರಿಕರಾ, ದೇಸಪ್ರೇಮಿಗಳಾ ಊರಿಗೋಗಿ ಅಂದ್ರಾ, ನಮಗೆ ದೇಸಪ್ರೇಮ, ಊರು-ಕೇರಿ ಯಾವುದೂ ಇಲ್ಲ ಕನಾ ಬುದ್ಧಿ. ನಮ್ಮುನ್ನ ಊರೊಳಿಕ್ಕೆ ಯಾರೂ ಬುಟ್ಕದಿಲ್ಲ. ರಾತ್ರಿವತ್ತು ಇಕ್ಕಡಿಕ್ಕೆ ಬಂದೋರ ತಲೆ ಹೊಡೆದು ಬದುಕು ಮಾಡಿಕ್ಯಂಡಿದ್ದೀವಿ ಅಂದ್ರಂತೆ’.

ನನಗೆ ತಲೆ ಚಕ್ಕರ್ ಬಂದ್ರೂ ತುರೇಮಣೆ ಮುಂದುವರಿಸಿದರು- ಇಂತಾ ಖರಾಬ್ ನನ ಮಕ್ಕಳುನ್ನ ನಮ್ಮ ಸಮಾಜಕ್ಕೆ ಸೇರಿಸಿಕಳಮು ಅಂದ ಬ್ರಮ್ಮರಾಕ್ಸಸ ‘ಸಬ್ಬಾಸ್ ಬಡ್ಡಿಹೈಕ್ಳಾ, ಇನ್ನು ನೀವು ನಿಸೂರಾಗಿ ಜನದ ಮಧ್ಯೆ ಹೋಗಿ ಬ್ಯಾಳೆ ಮಾತಾಡಿಕ್ಯಂಡು ಹಗಲೊತ್ತೇ ತಲೆ ಹೊಡದು, ಕುತ್ತಿಗೆ ಕೂದು, ದೇಸಕ್ಕೆ ಧೋಕಾ ಹಾಕಿ ಬದಿಕ್ಕಳಿ. ನಿಮ್ಮ ನೋಡಿದೋರು ಬ್ರಮ್ಮರಾಕ್ಸಸನ ಸಂತಾನ ಕಯ್ಯಾ ಇವನು ಅನ್ನಬೇಕು ಹಂಗೆ ಬಾಳಿ’ ಅಂದನಂತೆ. ಬ್ರಮ್ಮರಾಕ್ಸಸರ ಸಂತಾನ ಭ್ರಷ್ಟರಾಗಿ, ದೇಶದ್ರೋಹಿಗಳಾಗಿ, ವ್ಯವಸ್ಥೆಗೆ ವೈರಸ್ಸುಗಳಾಗಿ ಸುಖವಾಗವರೆ ಕನೋ’ ಅಂತ ಹೇಳಿ ಮಾತು ಮುಗಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT